ಕರೋನಾ ಮಹಾಮಾರಿ ಕ್ಷಣಕ್ಷಣಕ್ಕೂ ಎದೆಗಿರಿಯುವಂತಹ ಸುದ್ದಿಗಳನ್ನೇ ನೀಡುತ್ತಿರುವ ಸಂಕಟದ ಸಮಯವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಮರ್ಥವಾಗಿ ನಿಭಾಯಿಸುತ್ತಿಲ್ಲ ಎಂಬುದರಲ್ಲಿ ಎಳ್ಳಷ್ಟೂ ಅನುಮಾನಗಳಿಲ್ಲ. ಈ ಕಷ್ಟ ಕಾಲದಲ್ಲಿ ಮೋದಿ ತಮ್ಮೆಲ್ಲಾ ಬಿಂಕ-ಬಿಗುಮಾನಗಳನ್ನು ಬದಿಗಿಟ್ಟು ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎಂದು ತಾವೇ ಹೇಳುವಂತೆ ನಡೆದುಕೊಳ್ಳಬೇಕು. ಎಲ್ಲರನ್ನೂ ಸೇರಿಸಿಕೊಂಡು ಎಲ್ಲಾ ಸಮಸ್ಯೆಗಳನ್ನು ನಿವಾರಿಸಲು ಮುಂದಾಗಬೇಕು.
ಕರ್ನಾಟಕದಲ್ಲಿ ಕರೋನಾ ಪರಿಸ್ಥಿತಿ ಕೈ ಮೀರುತ್ತಿದೆ ಎಂದು ಗೊತ್ತಾಗಿದ್ದೇ ತಡ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸರ್ವಪಕ್ಷಗಳ ಸಭೆ ಕರೆದು (ಮಾ. 29) ಪ್ರತಿಪಕ್ಷಗಳ ನಾಯಕರ ಸಲಹೆಗೆ ಕಿವಿಗೊಟ್ಟರು. ಸಲಹೆಗಳನ್ನಾಧರಿಸಿ ಕ್ರಮ ಕೈಗೊಂಡರು. ಇದಲ್ಲದೆ ಲಾಕ್‌ಡೌನ್ ಕಾರಣದಿಂದ ರೈತರು ತಾವು ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲಾಗದೆ, ಮಾರುಕಟ್ಟೆಗೆ ಹೋದರೂ ಸರಿಯಾದ ಬೆಲೆ ಸಿಗದೆ ಪರಿತಪಿಸುತ್ತಿದ್ದಾಗ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಎಚ್.ಡಿ. ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡದ್ದೇ ತಡ ಸಂಬಂಧಪಟ್ಟ ಸಚಿವರು ಮತ್ತು ಹಿರಿಯ ಅಧಿಕಾರಿಗಳ ಸಭೆ ನಡೆಸಿದರು. ಕೃಷಿ, ಮಾರುಕಟ್ಟೆ, ಸಹಕಾರ, ಪಶುಸಂಗೋಪನೆ ಮತ್ತಿತರ ಇಲಾಖೆಯ ಅಧಿಕಾರಿಗಳಿಗೆ ಅನ್ನದಾತರ ತುತ್ತಿಗೆ ಕುತ್ತು ಬರದಂತೆ ನೋಡಿಕೊಳ್ಳಿ ಎಂದು ತಾಕೀತು ಮಾಡಿದರು. ಇದೇ ರೀತಿ ಮೋದಿ ಕೂಡ ರಾಷ್ಟ್ರ ಮಟ್ಟದಲ್ಲಿ ಸರ್ವಪಕ್ಷಗಳ ಸಭೆ ಕರೆದು ಸಮಸ್ಯೆಗೆ ಮದ್ದು ಹುಡುಕಬೇಕಾಗಿದೆ.
ನರೇಂದ್ರ ಮೋದಿ ಸರ್ವಪಕ್ಷಗಳ ಸಭೆ ಕರೆದು ಚರ್ಚಿಸಬೇಕಾದ ಅಗತ್ಯ ಹಿಂದೆಂದಿಗಿಂತ ಈಗ ಹೆಚ್ಚಾಗಿದೆ. ಕರೋನಾ ಸೋಂಕು ಹರಡಿರುವವರನ್ನು ಪತ್ತೆ ಮಾಡುವ, ಸೋಂಕು ಹರಡುವಿಕೆಯನ್ನು ತಡೆಯುವ, ಸೋಂಕು ತಗುಲಿರುವವರಿಗೆ ಚಿಕಿತ್ಸೆ ಕೊಡಿಸುವ ಗುರುತರ ಜವಾಬ್ದಾರಿ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರದು. ಅವರಿಗಿರುವ ಸಜ್ಜನ ಎಂಬ ವರ್ಚಸ್ಸು ಈ ನಿರ್ಣಾಯಕ ಸಮಯದಲ್ಲಿ ‘ಗುಡ್ ಫಾರ್ ನಥಿಂಗ್’ ಎಂಬಂತೆ ಭಾಸವಾಗುತ್ತಿದೆ. ಅವರು ಪರಿಣಾಮಕಾರಿಯಾಗಿ ಕೆಲಸ ಮಾಡಿರುವ ಕುರುಹುಗಳು ಕಾಣುತ್ತಿಲ್ಲ. ಇನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್. ಈಗಾಗಲೇ ಕಂಗೆಟ್ಟಿರುವ ದೇಶದ ಆರ್ಥಿಕ ಪರಿಸ್ಥಿತಿಯನ್ನು ಕರೋನಾ ಮತ್ತು ಲಾಕ್‌ಡೌನ್‌ಗಳು ಇನ್ನಷ್ಟು ಘಾಸಿಗೊಳಿಸಲಿವೆ. ಇಂಥ ಪರಿಸ್ಥಿತಿಯಲ್ಲಿ ಪಾತಾಳಮುಖಿಯಾಗಿರುವ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ನಿರ್ಮಲಾ ಸೀತಾರಾಮ್ ಎಷ್ಟು ಶ್ರಮವಹಿಸಿದರೂ ಸಾಲದು. ಆದರೆ ಸುದ್ದಿಗೋಷ್ಟಿಯಲ್ಲಿ ಮತ್ತು ಟಿವಿ ಚರ್ಚೆಗಳಲ್ಲಿ ಮಾತನಾಡುವಾಗ ಆಕ್ರಮಣಕಾರಿಯಾಗಿ ಕಾಣಿಸಿಕೊಳ್ಳುವ, ‘ಅಹಂಕಾರಿ’ ಎಂಬ ಹಣೆಪಟ್ಟಿಯನ್ನೂ ಅಂಟಿಸಿಕೊಂಡಿರುವ ನಿರ್ಮಲಾ ಸೀತಾರಾಮನ್ ಸದ್ಯ ತಮ್ಮ ಕೆಲಸದಲ್ಲಿ ಮಾತ್ರ ಆ ‘ಅಗ್ರೆಸಿವ್‌ನೆಸ್’ನ್ನು ತೋರುತ್ತಿಲ್ಲ. ಮುಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ. ಕರೋನಾ ಸೃಷ್ಟಿಸಿರುವುದು ರಾಷ್ಟ್ರೀಯ ವಿಪತ್ತನ್ನಾಗಿರುವುದರಿಂದ, ರಾಷ್ಟ್ರೀಯ ವಿಪತ್ತು ಗೃಹ ಇಲಾಖೆ ವ್ಯಾಪ್ತಿಗೆ ಬರುವುದರಿಂದ ಅಮಿತ್ ಶಾ ಪಾತ್ರ ಕೂಡ ನಿರ್ಣಯಕವಾದುದು. ಆದರೆ ದೇಶವಾಸಿಗಳ ದುರಾದೃಷ್ಟ ಏನೆಂದರೆ ಇಂಥ ದುರ್ದಿನದಲ್ಲಿ ಅಮಿತ್ ಶಾ ನಾಪತ್ತೆಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಮಿತ್ ಶಾ ಕಾಣೆಯಾಗಿದ್ದಾರೆ ಎಂಬುದು ಹಾಸ್ಯದ ಸರಕಾಗಿದೆ. ಅವರ ಬಗ್ಗೆ ‘ವರ್ಕೋಹಾಲಿಕ್’ ಎಂಬ ಮಾತಿದೆ. ಆದರೀಗ ಈ ಮಾತು ರಾಜಕೀಯ ತಂತ್ರ-ಕುತಂತ್ರ ಮಾಡಲು ಮಾತ್ರ ಸೀಮಿತ, ಇಲಾಖೆಯ ಜವಾಬ್ದಾರಿ ನಿಭಾಯಿಸುವುದರಲ್ಲಿ ಅಲ್ಲ ಎಂದು ಸಾಬೀತಾಗಿದೆ.
ಮೂವರು ಮಾತ್ರವಲ್ಲ, ಕೃಷಿ, ಆಹಾರ ಮತ್ತು ನಾಗರಿಕ ಪೂರೈಕೆ, ಕೈಗಾರಿಕೆ, ಸಾರಿಗೆ, ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ, ರೈಲ್ವೆ, ಕಾರ್ಮಿಕ, ಮಾನವ ಸಂಪನ್ಮೂಲ, ವಾರ್ತಾ ಮತ್ತು ಪ್ರಸಾರ, ವಸತಿ, ವ್ಯಾಪಾರ, ವಿದೇಶಾಂಗ ವ್ಯವಹಾರ ಸಚಿವರು ಕೂಡ ಇಂಥ ಧಾರುಣ ಪರಿಸ್ಥಿತಿಯಲ್ಲಿ ಹಗಲಿರುಳು ಶ್ರಮಿಸಬೇಕು. ಆದರೆ ಮೋದಿ ಸರ್ಕಾರದಲ್ಲಿ ಅವರನ್ನು ಹೊರತು ಇನ್ನೊಬ್ಬರ ಗುರುತು ಗೋಚರಿಸುತ್ತಿಲ್ಲ. ಎರಡು ರೀತಿಯ ಸಮಸ್ಯೆಗಳಿದ್ದಂತಿದೆ. ಬಿಜೆಪಿಯಲ್ಲಿ ಸಮರ್ಥರ ಕೊರತೆ ಒಂದಾದರೆ ಮೋದಿ, ‘ತಾವು ಕೆಲಸ ಮಾಡದೆ, ಮಾಡುವವರಿಗೂ ಬಿಡದಿರುವುದು’ ಇನ್ನೊಂದು. ಮೋದಿ 2014ರಲ್ಲಿ ಮೊದಲ ಬಾರಿ ಪ್ರಧಾನಿ ಆದಾಗಿನಿಂದಲೂ ಅವರ ಸರ್ಕಾರ ಮತ್ತು ಬಿಜೆಪಿ ಇದೇ ರೀತಿಯ ‘ಸಮರ್ಥರ ಕೊರತೆ’ಯನ್ನು ಎದುರಿಸುತ್ತಲೇ ಇದೆ. ಅದಕ್ಕಾಗಿಯೇ ಮೋದಿ ಪ್ರಧಾನಿ ಕಚೇರಿಯ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳು, ಜೈಶಂಕರ್, ಅಜಿತ್ ದೋವೆಲ್ ಅವರಂಥವರ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಸಾಮಾನ್ಯ ಸಂದರ್ಭದಲ್ಲಿ ಹೇಗೋ ನಡೆದುಹೋಗಿದೆ, ಆದರೆ ಈ ನಿರ್ಣಾಯಕ ಸಮಯದಲ್ಲಿ ಸಮರ್ಥರ, ಅನುಭವಿಗಳ, ಶ್ರಮವಹಿಸಿ ದುಡಿಯುವವರ ಅಗತ್ಯ ಹೆಚ್ಚಾಗಿದೆ.
ಹೆಸರಿಗೆ ಮಾತ್ರ ಇರುವವರು ಕೆಲಸ ಮಾಡುತ್ತಿಲ್ಲ ಎಂಬುದರ ಜೊತೆಗೆ ಮೋದಿಯ ‘ಆಟಿಟ್ಯೂಡ್’ ಕೂಡ ಸಮಸ್ಯೆ ಬಿಗಡಾಯಿಸಲು ಕೊಡುಗೆ ನೀಡುತ್ತಿದೆ. ಕರ್ನಾಟಕದಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಪರಿಸ್ಥಿತಿ ನಿಭಾಯಿಸಲಾರರು ಎಂದರಿತ ಮುಖ್ಯಮಂತ್ರಿ ಯಡಿಯೂರಪ್ಪ ಜವಾಬ್ದಾರಿಯನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್‌ಗೆ ವಹಿಸಿದರು. ಯಡಿಯೂರಪ್ಪ ನಿರ್ಧಾರ ಸಮಯೋಚಿತವಾದುದು ಎಂಬುದೀಗ ಸಾಬೀತಾದ ಸಂಗತಿ. ಇದೇ ರೀತಿ ಮೋದಿ ಸಂಕಷ್ಟದ ಸಮಯದಲ್ಲಿ ಕೆಲ ಬದಲಾವಣೆಯನ್ನು ಮಾಡಬಹುದಾಗಿದೆ. ಅಥವಾ ತಮ್ಮ ಸಚಿವರಿಗೆ ತಜ್ಞರ ಸಲಹೆ ಪಡೆದು ಕೆಲಸ ಮಾಡಲು ಪ್ರೇರಿಸಬಹುದಾಗಿದೆ.
ಬಿಜೆಪಿಯ ಯಡಿಯೂರಪ್ಪ ಅವರಿಂದ ಮಾತ್ರವಲ್ಲ, ಬಿಜೆಪಿಯೇತರ ಮುಖ್ಯಮಂತ್ರಿಗಳಾದ ಕೇರಳದ ಪಿಣಿರಾಯ್ ವಿಜಯನ್, ದೆಹಲಿಯ ಅರವಿಂದ ಕೇಜ್ರಿವಾಲ್, ಮಹಾರಾಷ್ಟçದ ಉದ್ಧವ್ ಠಾಕ್ರೆ, ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ, ರಾಜಸ್ಥಾನದ ಅಶೋಕ್ ಗೆಹ್ಲೋಟ್, ಪಂಜಾಬಿನ ಅಮರೀಂದರ್ ಸಿಂಗ್, ಒರಿಸ್ಸಾದ ನವೀನ್ ಪಟ್ನಾಯಕ್ ಅವರ ಕ್ರಮಗಳನ್ನು ನೋಡಿಯಾದರೂ ಒಂದಿಷ್ಟು ಎಚ್ಚೆತ್ತುಕೊಳ್ಳಬಹುದು. ಕಡೆಪಕ್ಷ ಅದೇ ಮಾದರಿಯನ್ನು ಬಿಜೆಪಿ ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲಿ ಅನುಷ್ಠಾನಗೊಳಿಸಿ ಪರಿಸ್ಥಿತಿಯನ್ನು ತೆಹಬದಿಗೆ ತರಬಹುದು. ಕರೋನ ಸಂಕಟ ಶುರುವಾದ ಮೇಲೆ ಮೋದಿ ಎರಡು ಬಾರಿ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮಾಡಿದ್ದಾರೆ. ಎರಡೂ ಸಂದರ್ಭದಲ್ಲಿ ‘ಏನೇನೂ ಮಾಡಬೇಕೆಂದು’ ತಾವು ಹೇಳಿದ್ದಾರೆಯೇ ವಿನಃ ಬೇರೆ ಬೇರೆ ರಾಜ್ಯಗಳ ಮುಖ್ಯಮಂತ್ರಿಗಳು ಯಾವ ರೀತಿ ಕೆಲಸ ಮಾಡುತ್ತಿದ್ದಾರೆ ಎಂದು ಕೇಳಿಲ್ಲ. ಅದರಲ್ಲೂ ಬಿಜೆಪಿಯೇತರ ಮುಖ್ಯಮಂತ್ರಿಗಳಿಂದ ಎಂಬುದನ್ನು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳೇ ಖಚಿತಪಡಿಸುತ್ತಾರೆ.
ಪ್ರಧಾನಿ ಪೀಠಾಸೀನಾರಾದವರಿಗೆ ಬಿಗುಮಾನದೊಂದಿಗೆ ಕೆಲಸ ಮಾಡುವ ಜಯಮಾನ ಇರಬಾರದು. ಮೋದಿ ವಿಪಕ್ಷಗಳ ದನಿಗೆ ಕಿವಿಗೊಡುವುದಿರಲಿ, ಕನಿಷ್ಟ ತಮ್ಮದೇ ಪಕ್ಷದ ಯಡಿಯೂರಪ್ಪ ಅವರ ರೀತಿಯಲ್ಲಾದರೂ ಸರ್ವಪಕ್ಷಗಳ ಸಭೆ ಕರೆದು ಎಲ್ಲರ ಸಲಹೆ ಪಡೆದು ದಿನದಿನಕ್ಕೂ ದುಪ್ಪಟ್ಟಾಗುತ್ತಿರುವ ಬಿಕ್ಕಟ್ಟನ್ನು ಬಗೆಹರಿಸಲು ಮುಂದಾಗಬೇಕು. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಇಂದು ಅವರ ಪಕ್ಷದ ಕಾರ್ಯಕಾರಿಣಿ ಸಭೆ ಉದ್ದೇಶಿಸಿ ಮಾತನಾಡುತ್ತಾ ‘ಕರೋನಾ ಪರಿಸ್ಥಿತಿ ನಿಭಾಯಿಸಲು ಲಾಕ್‌ಡೌನ್ ಜಾರಿಗೊಳಿಸದೆ ಬೇರೆ ದಾರಿ ಇರಲಿಲ್ಲ. ಆದರೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕಿತ್ತು’ ಎಂದು ಹೇಳಿ ಪ್ರಬುದ್ಧವಾಗಿ ವರ್ತಿಸಿದ್ದಾರೆ. ಸಮಸ್ಯೆ ಮತ್ತು ಸಹಕಾರ ಎರಡರ ಬಗ್ಗೆಯೂ ಹೇಳಿದ್ದಾರೆ. ಪ್ರತಿಪಕ್ಷಗಳು ಇಷ್ಟು ಮುಕ್ತವಾಗಿರುವಾಗ ಅಧಿಕಾರದಲ್ಲಿರುವವರು ಅಹಂಗೆ ಅಂಟಿಕೊಳ್ಳಬಾರದು. ಅದೂ ಇಂಥ ದುರ್ದಿನಗಳಲ್ಲಿ.