ಕರೋನಾ ಸೋಂಕು ಪ್ರಧಾನಿ ನರೇಂದ್ರ ಮೋದಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಸಿದ್ರು. ಕರೋನಾ ಸೋಂಕು ಕಾಣಿಸಿಕೊಂಡ ಬಳಿಕ ಪ್ರಧಾನಿ ನರೇಂದ್ರ ಮೋದಿ 5ನೇ ಬಾರಿ ಸಿಎಂಗಳ ಸಭೆ ನಡೆಸಿದ್ದು, ಸಾಕಷ್ಟು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಕರೋನಾ ಸೋಂಕು ಹಳ್ಳಿಗಳನ್ನು ತಲುಪದಂತೆ ತಡೆಯುವುದು ಸದ್ಯಕ್ಕೆ ಇರುವ ಸವಾಲು ಎಂದು ರಾಜ್ಯಗಳನ್ನು ಪ್ರಧಾನಿ ಮೋದಿ ಎಚ್ಚರಿಸಿದ್ದಾರೆ. ಇನ್ನೂ ಆರ್ಥಿಕ ಸಂಕಷ್ಟದಿಂದ ಹೊರ ಬರುವುದಕ್ಕೆ ನಿಮ್ಮಲ್ಲಿ ಸಲಹೆಗಳಿದ್ದರೆ ತಿಳಿಸಿ, ಆರ್ಥಿಕ ಸಂಕಷ್ಟದಿಂದ ಹೊರ ಬರುವುದಕ್ಕೆ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಿ ಎಂದು ಮುಖ್ಯಮಂತ್ರಿಗಳ ಸಭೆಯಲ್ಲಿ ತಿಳಿಸಿದ್ದಾರೆ. ಇನ್ನೂ ದೇಶದ ಜನರ ಉತ್ಸಾಹದಿಂದಾಗಿಯೇ ನಾವು ಕರೋನಾ ವಿರುದ್ಧದ ಹೋರಾಟವನ್ನು ಗೆಲ್ಲುತ್ತೇವೆ. ನಿಮ್ಮಲ್ಲಿ ಇನ್ನೂ ಏನಾದರೂ ಸಲಹೆಗಳು ಇದ್ದರೆ ಮೇ 15 ರೊಳಗೆ ನಮಗೆ ಕಳುಹಿಸಿಕೊಡಿ ಎಂದು ರಾಜ್ಯ ಸರ್ಕಾರಗಳಿಗೆ ಸೂಚಿಸಿದ್ದಾರೆ.

ಮೇ 17ರ ಬಳಿಕ ಹೆಚ್ಚಿನ ಆರ್ಥಿಕ ಚಟುವಟಿಕೆ ಆರಂಭಿಸುವ ಬಗ್ಗೆ ಯೋಚಿಸುತ್ತೇವೆ ಎನ್ನುವ ಮೂಲಕ ಲಾಕ್ಡೌನ್ ವಿಸ್ತರಣೆ ಮಾಡುವ ಸಂಭವ ಇಲ್ಲ ಎನ್ನುವುದನ್ನು ಸೂಚ್ಯವಾಗಿ ತಿಳಿಸಿದ್ದಾರೆ. ಜೊತೆಗೆ ಕರೋನಾದ ನಂತರ ಹೊಸ ಜೀವನಶೈಲಿ ಬೆಳೆಯುತ್ತದೆ. ದೇಶದಲ್ಲಿ ಪ್ರವಾಸೋದ್ಯಮಕ್ಕೆ ಅಪಾರ ಸಾಮರ್ಥ್ಯವಿದೆ. ತಂತ್ರಜ್ಞಾನ ಬಳಸಿಕೊಂಡು ಹೊಸ ಶಿಕ್ಷಣ ಮಾದರಿ ಅಭಿವೃದ್ಧಿಪಡಿಸಬೇಕಾಗಿದೆ ಎಂದು ದೇಶದ ಮುಂದಿನ ದಾರಿ ಬಗ್ಗೆಯೂ ಮೋದಿ ಮಾತನಾಡಿದ್ದಾರೆ.
ದೇಶದ ಬೇರೆ ಬೇರೆ ರಾಜ್ಯಗಳ ಸಿಎಂಗಳು ಪ್ರಧಾನಿ ನರೇಂದ್ರ ಮೋದಿ ಕೇಳಿದ್ದಕ್ಕೆ ಉತ್ತರಿಸುತ್ತಾ, ಪ್ರಧಾನಿ ನರೇಂದ್ರ ಮೋದಿ ಹೇಳಿದ್ದನ್ನು ಆಲಿಸುತ್ತಿದ್ದರೆ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮಾತ್ರ ನರೇಂದ್ರ ಮೋದಿ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ. ಇದು ರಾಜಕೀಯ ಮಾಡುವ ಸಮಯ ಅಲ್ಲ. ಕರೋನಾ ವಿಚಾರದಲ್ಲಿ ಕೇಂದ್ರ ಸರ್ಕಾರ ಪಶ್ಚಿಮ ಬಂಗಾಳ ರಾಜ್ಯವನ್ನು ಟಾರ್ಗೆಟ್ ಮಾಡಲಾಗ್ತಿದೆ ಎಂದು ಗುಡುಗಿದ್ದಾರೆ.
ಕರೋನಾ ಸೋಂಕಿನ ವಿರುದ್ಧ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಂಟಿಯಾಗಿ ಹೋರಾಟ ನಡೆಸಬೇಕಾದ ಅನಿವಾರ್ಯತೆ ಇದೆ. ಆದರೆ ಕೇಂದ್ರ ಸರ್ಕಾರ ಮಾತ್ರ ತನಗೆ ತೋಚಿದಂತೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಕೇಂದ್ರ ಸರ್ಕಾರದ ನಿರ್ಧಾರವನ್ನು ರಾಜ್ಯ ಸರ್ಕಾರಗಳ ಮೇಲೆ ಹೇರಿಕೆ ಮಾಡಲಾಗ್ತಿದೆ. ಇದು ಭಾರತದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುತ್ತದೆ ಎಂದು ಕೇಂದ್ರ ಸರ್ಕಾರವನ್ನು ಎಚ್ಚರಿಸಿದ್ದಾರೆ. ನಮ್ಮ ರಾಜ್ಯ ಅಂತಾರಾಷ್ಟ್ರೀಯ ಗಡಿಯನ್ನು ಹೊಂದಿದೆ. ಅದೂ ಅಲ್ಲದೆ ನಮ್ಮದು ದೊಡ್ಡ ರಾಜ್ಯವಾಗಿದೆ. ನಾವೂ ಕೂಡ ಕೋವಿಡ್-19 ನಿಯಂತ್ರಣಕ್ಕೆ ಶಕ್ತಿ ಮೀರಿ ಪ್ರಯತ್ನ ಮಾಡುತ್ತಿದ್ದೇವೆ. ಕೇಂದ್ರ ಸರ್ಕಾರ ರಾಜಕಾರಣ ಮಾಡುವುದು ಬೇಡ ಎಂದು ಪ್ರಧಾನಿ ನರೇಂದ್ರ ಮೋದಿಗೆ ನೇರವಾಗಿ ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಒಂದು ಕಡೆ ಲಾಕ್ಡೌನ್ ಪಾಲಿಸಲು ಸೂಚನೆ ಕೊಡುತ್ತದೆ. ಇನ್ನೊಂದು ಕಡೆ ಅದೇ ಕೇಂದ್ರ ಸರ್ಕಾರ ರೈಲುಗಳ ಸಂಚಾರ ಆರಂಭ ಮಾಡುವ ಮೂಲಕ ಗೊಂದಲ ಮೂಡಿಸುವ ನಿರ್ಧಾರ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ. ಜೊತೆಗೆ ಮೇ 17ರ ನಂತರವೂ ಲಾಕ್ಡೌನ್ ವಿಸ್ತರಣೆ ಅಗತ್ಯವಿದೆ ಎಂದು ಮೋದಿ ಎದುರು ಮಮತಾ ಪ್ರತಿಪಾದಿಸಿದ್ದಾರೆ. ಜೊತೆಗೆ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳನ್ನು ಒಂದೇ ರೀತಿ ನೋಡಬೇಕು. ಕೋವಿಡ್ – 19 ವಿರುದ್ಧ ಟೀಂ ಇಂಡಿಯಾ ಆಗಿ ಕೆಲಸ ಮಾಡಬೇಕಿದೆ ಎಂದಿದ್ದಾರೆ.
ಇತ್ತೀಚಿಗಷ್ಟೇ ಕೇಂದ್ರ ಸರ್ಕಾರ ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿತ್ತು. ತುಂಬಾ ಕಡಿಮೆ ಪ್ರಮಾಣದ ಟೆಸ್ಟಿಂಗ್ ನಡೆಯುತ್ತಿದೆ. ಜನಸಾಂದ್ರತೆಗೆ ತಕ್ಕಂತೆ ಪರೀಕ್ಷೆ ನಡೆಯುತ್ತಿಲ್ಲ. ಜೊತೆಗೆ ಇಡೀ ದೇಶದಲ್ಲೇ ಸಾವಿನ ಪ್ರಮಾಣದಲ್ಲಿ ಪಶ್ಚಿಮ ಬಂಗಾಳ ರಾಜ್ಯ ಮುಂದಿದ್ದು, ಶೇಕಡವಾರು ಸಾವಿನ ಪ್ರಮಾಣ 13.2ರಷ್ಟಿದೆ ಎಂದು ಪತ್ರ ಬರೆದು ತರಾಟೆಗೆ ತೆಗೆದುಕೊಂಡಿತ್ತು. ಜೊತೆಗೆ ಬಾಂಗ್ಲಾದೇಶದ ಜೊತೆಗೆ ಅಗತ್ಯ ಸರಕುಗಳ ಸಂಚಾರಕ್ಕೆ ಅವಕಾಶ ನೀಡದ ಕಾರಣ ಕೇಂದ್ರ ಸರ್ಕಾರವು ಮಮತಾ ಬ್ಯಾನರ್ಜಿ ಸರ್ಕಾರದ ಮೇಲೆ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿತ್ತು.

ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ರಾಜೀವ ಸಿನ್ಹಾಗೆ ಕಠಿಣ ಭಾಷೆಯಲ್ಲಿ ಪತ್ರ ಬರೆದಿದ್ದ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ರಾಜ್ಯ ಸರ್ಕಾರದ ನಿರ್ಧಾರಗಳನ್ನು ಖಂಡಿಸಿದ್ದರು. ಪಶ್ಚಿಮ ಬಂಗಾಳ ಸರ್ಕಾರವು ವಿಪತ್ತು ನಿರ್ವಹಣಾ ಕಾಯ್ದೆಯಡಿ ಗೃಹ ವ್ಯವಹಾರಗಳ ಸಚಿವಾಲಯದ ಆದೇಶಗಳನ್ನು ಉಲ್ಲಂಘಿಸುತ್ತಿದೆ. ಮೇ 1 ರಂದು ಹೊರಡಿಸಿದ್ದ ಲಾಕ್‌ಡೌನ್ ಕ್ರಮಗಳನ್ನು ಮತ್ತೊಮ್ಮೆ ನೋಡುವಂತೆ ಸೂಚಿಸಿದ್ದರು. ಆ ಬಳಿಕ ರಾಜ್ಯ ಬಿಜೆಪಿ ಕೂಡ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿತ್ತು.
ರಾಜ್ಯದಲ್ಲಿ ಕರೋನಾ ಸೋಂಕಿತರ ಅಂಕಿಸಂಖ್ಯೆಯನ್ನು ಮುಚ್ಚಿಡುವ ಮೂಲಕ ಇಡೀ ರಾಜ್ಯದ ಜನರನ್ನು ವಂಚಿಸುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿತ್ತು. ಬಂಗಾಳಕ್ಕೆ ಕೋವಿಡ್ – 19 ಬಂದಾಗ ನೀವು ಎಲ್ಲಿ ಅಡಗಿದ್ದಿರಿ ಮಮತಾ ಜೀ..? ಏನು ಮಾಡುತ್ತಿದ್ದಿರಿ ಎಂದು ದೀದಿಯನ್ನು ಟೀಕಿಸಿತ್ತು. ದೇಶದ ಇತರ ಭಾಗದಲ್ಲಿ ಇರುವ ರಾಜ್ಯದ ಜನರನ್ನು ನಿಮ್ಮ ಸಹಾಯವನ್ನು ನಿರೀಕ್ಷೆ ಮಾಡುತ್ತಿದ್ದಾರೆ ಎಂದು ಟೀಕೆಗಳ ಮಳೆ ಸುರಿಸಿತ್ತು. ಎಲ್ಲಾ ಮಾತುಗಳನ್ನು ಸಹಿಸಿಕೊಂಡಿದ್ದ ಮಮತಾ ಬ್ಯಾನರ್ಜಿ ಮೋದಿ ಸಭೆಯಲ್ಲಿ ಸಿಡಿದೆದ್ದಿದ್ದಾರೆ. ಇದು ರಾಜಕೀಯ ಮಾಡುವ ಸಮಯವಲ್ಲ ಎಂದು ಮೋದಿ ವಿರುದ್ಧ ಸಿಡಿದಿದ್ದಾರೆ.








