ಬಹುಮತದ ಆತ್ಮವಿಶ್ವಾಸದಿಂದ ಬೀಗುತ್ತಿರುವ ಪ್ರಧಾನಿ ನರೇಂದ್ರಮೋದಿ ಸರ್ಕಾರದ ವಿರುದ್ಧ ಮಾತನಾಡಲು ಸಾರ್ವಜನಿಕರಿಗಿರಲಿ, ಉದ್ಯಮಿಗಳಿಗೂ ಭಯವೇ? ಜಿಡಿಪಿ ಶೇ.4.5ಕ್ಕೆ ಕುಸಿದ ಬಗ್ಗೆ ಕಾರ್ಪೊರೆಟ್ ವಲಯದಿಂದಾಗಲೀ, ಉದ್ಯಮವಲಯದಿಂದಾಗಲೀ ಯಾವುದೇ ಪ್ರತಿಕ್ರಿಯೆ ಬಾರದೇ ಇರುವುದಕ್ಕೆ ಇದೂ ಒಂದು ಕಾರಣ ಇರಬೇಕು. ಹಿಂದೆ ನರೇಂದ್ರ ಮೋದಿ ಸರ್ಕಾರದ ಎಲ್ಲಾ ಸಕಾರಾತ್ಮಕ ಕ್ರಮಗಳನ್ನೂ ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದ ಉದ್ಯಮಿಗಳೇಕೆ ದೇಶದ ಆರ್ಥಿಕತೆ ಹಿಂಜರಿತದತ್ತ ಸಾಗಿದ್ದರೂ ಮೌನವಾಗಿದ್ದಾರೆ ಎಂಬ ಸಾರ್ವಜನಿಕವಾಗಿ ಎದ್ದಿರುವ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.
ಮೋದಿ ಸರ್ಕರದ ವಿರುದ್ಧ ದನಿ ಎತ್ತಲೂ ಉದ್ಯಮಿಗಳು ಹೆದರುತ್ತಿದ್ದಾರೆ. ಮನಮೋಹನ್ ಸಿಂಗ್ ಅವರ ನೇತೃತ್ವದ ಸರ್ಕಾರ ಇದ್ದಾಗ ರಸ್ತೆ ಸರಿಯಿಲ್ಲ ಎಂದರೂ, ನೀರು ಸರಿಯಾಗಿ ಬರುತ್ತಿಲ್ಲ ಎಂದರೂ ದೂರವಾಣಿ ಸಂಪರ್ಕ ಸಿಗುತ್ತಿಲ್ಲ ಎಂದರೂ ಆಗಿನ ಕೇಂದ್ರ ಸರ್ಕಾರದಲ್ಲಿನ ಸಚಿವರ ವಿರುದ್ಧ ಅಷ್ಟೇ ಏಕೆ ಪ್ರಧಾನಿ ಮನಮೋಹನ್ ಸಿಂಗ್ ವಿರುದ್ಧವೇ ಟೀಕೆ ಮಾಡುತ್ತಿದ್ದ ಉದ್ಯಮಿಗಳೂ ಈಗೇಕೆ ಮೌನವಾಗಿದ್ದಾರೆ ಎಂಬುದಕ್ಕೆ ಉತ್ತರ ಇಲ್ಲಿದೆ. ಮೋದಿ ಸರ್ಕಾರದ ವಿರುದ್ಧ ದನಿ ಎತ್ತಲು ಎಲ್ಲರೂ ಭಯಪಡುತ್ತಾರೆ. ಹೌದು. ಉದ್ಯಮಿಗಳೂ ನರೇಂದ್ರಮೋದಿ ಸರ್ಕಾರದ ವಿರುದ್ಧ ಮಾತನಾಡಲು ಭಯಪಡುತ್ತಾರಂತೆ!
ಹಾಗಂತ ಉದ್ಯಮ ವಲಯದ ನೈತಿಕಪ್ರಜ್ಞೆಯಾಗಿರುವ ಹಿರಿಯ ಉದ್ಯಮಿ ರಾಹುಲ್ ಬಜಾಜ್ ಹೇಳಿದ್ದಾರೆ. ಈ ಮಾತನ್ನು ಅವರು ನೇರವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ಹೇಳಿದ್ದಾರೆ. ಈ ಮಾತು ಹೇಳುವ ಹೊತ್ತಿಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ರೈಲ್ವೆ ಸಚಿವ ಪಿಯುಷ್ ಗೋಯಲ್ ಸಹ ಇದ್ದರು.
ಬಜಾಜ್ ಹೇಳಿದ ಮಾತೇನು ಗೊತ್ತೆ? ‘ಭಾರತದಲ್ಲಿ ಜನರು ಇಂದು ನರೇಂದ್ರ ಮೋದಿ ಸರ್ಕಾರದ ವಿರುದ್ಧ ಮಾತನಾಡಲು ಭಯ ಪಡುತ್ತಿದ್ದಾರೆ, ಸರ್ಕಾರವು ಟೀಕೆಗಳನ್ನು ಸರಿಯಾದ ಮನೋಭಾವದಿಂದ ಸ್ವೀಕರಿಸಬಹುದೇ ಎಂದು ಖಚಿತವಾಗಿಲ್ಲ’ ಎಂದು ಹೇಳಿದ್ದಾರೆ. ಮುಂಬೈನಲ್ಲಿ ನಡೆದ ದಿ ಎಕನಾಮಿಕ್ ಟೈಮ್ಸ್ ಇಟಿ ಅವಾರ್ಡ್ಸ್-2019 ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಾಹುಲ್ ಬಜಾಜ್ ಅವರು, ನಡುಗುವ ಮತ್ತು ಆತಂಕದ ದನಿಯಲ್ಲಿ ‘ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಸರ್ಕಾರದಲ್ಲಿದ್ದ ಯಾರನ್ನೂ ನಿಂದಿಸುವ ಸ್ವಾತಂತ್ರ್ಯವಿತ್ತು, ಆದರೆ ಪ್ರಸ್ತುತ ಸಮಯದಲ್ಲಿ, ಕೈಗಾರಿಕೋದ್ಯಮಿಗಳು ಮೋದಿ ಸರ್ಕಾರವನ್ನು ಬಹಿರಂಗವಾಗಿ ಟೀಕಿಸಲು ಸಾಧ್ಯವಿಲ್ಲ’ ಎಂದು ಹೇಳಿದರು. ವೇದಿಕೆಯಲ್ಲಿದ್ದ ಗೃಹ ಸಚಿವ ಅಮಿತ್ ಷಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ರೈಲ್ವೆ ಸಚಿವ ಪಿಯುಷ್ ಗೋಯಲ್ ಅವರನ್ನೇ ಪ್ರಶ್ನಿಸಿಸಿದಂತಿತ್ತು ರಾಹುಲ್ ಬಜಾಜ್ ಅವರ ಮಾತುಗಳು.
“ಯುಪಿಎ-2 ರ ಅಧಿಕಾರದ ಅವಧಿಯಲ್ಲಿ, ನಾವು ಯಾರನ್ನೂ ಬೇಕಾದರೂ ಟೀಕಿಸಬಹುದಿತ್ತು. ನೀವು ಒಳ್ಳೆಯ ಕೆಲಸ ಮಾಡುತ್ತಿದ್ದೀರಿ, ಆದರೆ ನಾವು ನಿಮ್ಮನ್ನು ಬಹಿರಂಗವಾಗಿ ಟೀಕಿಸಲು ಬಯಸಿದರೆ, ನೀವು ಅದನ್ನು ಪ್ರಶಂಸಿಸುವ ವಿಶ್ವಾಸವಿಲ್ಲ. ನಾನು ತಪ್ಪಾಗಿ ಭಾವಿಸಿರಬಬಹುದು ಆದರೆ ಎಲ್ಲರೂ ಹಾಗೆಯೇ ಭಾವಿಸುತ್ತಿದ್ದಾರೆ ”ಎಂದು ರಾಹುಲ್ ಬಜಾಜ್ ಹೇಳಿದರು. ಭೂಪಾಲ್ ಸಂಸದೆ ಪ್ರಜ್ಞಾ ಠಾಕೂರ್ ಅವರು ಮಹಾತ್ಮಗಾಂಧಿಯನ್ನು ಹತ್ಯೆ ಮಾಡಿದ್ದ ನಾಥೂರಾಮ್ ಗೂಡ್ಸೆಯನ್ನು ದೇಶಪ್ರೇಮಿ ಎಂದು ಬಣ್ಣಿಸಿದ್ದನ್ನು ಪ್ರಸ್ತಾಪಿಸಿದ ರಾಹುಲ್ ಬಜಾಜ್ ಅವರು, ಈಕೆಯು ಆಡಳಿತಾರೂಢ ಭಾರತೀಯ ಜನತಾಪಕ್ಷದಿಂದ ಗೆದ್ದು ಬಂದಿದ್ದಾರೆ, ‘ಮಹಾತ್ಮಗಾಂಧಿ ಅವರನ್ನು ಯಾರು ಗುಂಡಿಟ್ಟು ಕೊಂದಿದ್ದಾರೆ ಎಂಬ ಬಗ್ಗೆ ಅನುಮಾನವಿದೆಯೇ…. ನನಗೆ ಗೊತ್ತಿಲ್ಲ’ ಎಂದು ಮಾರ್ಮಿಕವಾಗಿ ಹೇಳಿದರು.
ಮೇ ತಿಂಗಳಲ್ಲಿ, ಗೂಡ್ಸೆಯನ್ನು ದೇಶಭಕ್ತ ಎಂದು ಪ್ರಜ್ಞಾ ಠಾಕೂರ್ ಹೇಳಿದ್ದಾಗ, ಪ್ರಧಾನಿ ನರೇಂದ್ರಮೋದಿ ಅವರು ಪ್ರತಿಕ್ರಿಯಿಸಿ ‘ಅವಳನ್ನು (ಪ್ರಜ್ಞಾ ಠಾಕೂರ್) ಕ್ಷಮಿಸುವುದು ತುಂಬಾ ಕಷ್ಟ’ ಎಂದು ಹೇಳಿದ್ದರು. “ಆದರೆ ನಂತರ ಆಕೆಯನ್ನು ರಕ್ಷಣಾ ಇಲಾಖೆ ಸಲಹಾ ಸಮಿತಿಗೇ ನೇಮಕ ಮಾಡಲಾಯಿತು ”ಎಂದರು.
ದೇಶದಲ್ಲಿ ಭಯ ಮತ್ತು ಕಿರುಕುಳದ ವಾತಾವರಣವಿದ್ದು, ಅದು ಆರ್ಥಿಕ ಚಟುವಟಿಕೆಗಳನ್ನು ನಿಗ್ರಹಿಸುತ್ತಿದೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ ಒಂದು ದಿನದ ನಂತರ ರಾಹುಲ್ ಬಜಾಜ್ ತಮ್ಮ ಅಂತರಾಳದ ಮಾತುಗಳನ್ನು ಹೊರ ಹಾಕಿದ್ದಾರೆ.
ಅಮಿತ್ ಷಾ ಅವರು ರಾಹುಲ್ ಬಜಾಜ್ ಅವರ ಆತಂಕಗಳಿಗೆ ಪ್ರತಿಕ್ರಿಯಿಸಿ, “ನಾನು ಇದನ್ನು ಸ್ಪಷ್ಟವಾಗಿ ಹೇಳುತ್ತೇನೆ, ಯಾರೂ ಭಯಪಡಬೇಕಾಗಿಲ್ಲ.” ಎಂದರು. “ಪ್ರಜ್ಞಾ ಠಾಕೂರ್ ಹೇಳಿದ್ದನ್ನು ನಾವು ಖಂಡಿಸುತ್ತೇವೆ” ಎಂದೂ ಶಾ ಹೇಳಿದರು. “2004 ಮತ್ತು 2014 ರ ನಡುವೆ, ಕೆಲವು ಘಟನೆಗಳು ಸಂಭವಿಸಿವೆ. ನೀವು ಬ್ಯಾಂಕಿಂಗ್ ಕ್ಷೇತ್ರದ ಹಣಕಾಸು ಅಂಕಿಅಂಶಗಳನ್ನು ನೋಡಿದರೆ ಅದು ನಿಮಗೆ ಸ್ಪಷ್ಟವಾಗುತ್ತದೆ ”ಎಂದೂ ಷಾ ಈ ಸಂದರ್ಭದಲ್ಲಿ ಹೇಳಿದರು.
ಇದುವರೆಗೆ ಮೋದಿ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳ ಆಯ್ದ ಕೆಲವು ನಾಯಕರಷ್ಟೇ ದನಿ ಎತ್ತಿದ್ದರು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಪ್ರಮುಖವಾಗಿ ಆರ್ಥಿಕ ನೀತಿಗಳ ಕುರಿತಂತೆ ಟೀಕಿಸುತ್ತಿದ್ದರು. ಆದರೆ, ಅವರೆಂದೂ ಸರ್ಕಾರದ ಅಸಹಿಷ್ಣತೆ ಧೋರಣೆ ಕುರಿತಂತೆ ಮಾತನಾಡಿರಲಿಲ್ಲ. ಆದರೆ, ಜಿಡಿಪಿ ಶೇ.4.5ಕ್ಕೆ ಕುಸಿದಿರುವ ಅಂಕಿ ಅಂಶ ಪ್ರಕಟವಾದಗಷ್ಟೇ ಮನಮೋಹನ್ ಸಿಂಗ್ ಅವರು ‘ದೇಶದಲ್ಲಿ ಭಯ ಮತ್ತು ಕಿರುಕುಳದ ವಾತಾವರಣವಿದ್ದು, ಅದು ಆರ್ಥಿಕ ಚಟುವಟಿಕೆಗಳನ್ನು ನಿಗ್ರಹಿಸುತ್ತಿದೆ’ ಎಂದು ಹೇಳುವ ಮೂಲಕ ಮೋದಿ ಸರ್ಕಾರದಲ್ಲಿ ಅಂತರ್ಗತವಾಗಿ ಪ್ರವಹಿಸುತ್ತಿದ್ದ ಅಸಹಿಷ್ಣತೆಯ ಬಗ್ಗೆ ಪ್ರಸ್ತಾಪಿಸಿದರು. ಈಗ ಉದ್ಯಮ ವಲಯದ ನೈತಿಕ ದನಿಯಾಗಿರುವ ರಾಹುಲ್ ಬಜಾಜ್ ಅವರ ಒಟ್ಟು ಮಾತಿನ ಸಾರಾಂಶವೂ ಮೋದಿ ಸರ್ಕಾರದಲ್ಲಿನ ಅಸಹಿಷ್ಣತೆಯನ್ನು ಎತ್ತಿಹೇಳುವುದೇ ಆಗಿದೆ.
ನರೇಂದ್ರಮೋದಿ 2014ರಲ್ಲಿ ಅಧಿಕಾರಕ್ಕೆ ಬಂದ ಹೊಸದರಲ್ಲಿ ಸಾಂಸ್ಕೃತಿಕ ಮತ್ತು ಸಾಮಾಜಿಕ ಅಸಹಿಷ್ಣತೆಗಾಗಿ ವ್ಯಾಪಕವಾಗಿ ಟೀಕೆಗೆ ಒಳಗಾಗಿತ್ತು. ಪ್ರಶಸ್ತಿ ವಾಪಸಿ ಚಳವಳಿಯೇ ನಡೆದಿತ್ತು. ಅಂದಿನ ಆರ್ಬಿಐ ಗವರ್ನರ್ ರಘುರಾಮ್ ರಾಜನ್ ಅವರು ಕೇಂದ್ರ ಸರ್ಕಾರದ ಅಸಹಿಷ್ಣುತೆ ಹೇಗೆ ಆರ್ಥಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂಬುದನ್ನು ಸಾರ್ವಜನಿಕವಾಗಿಯೇ ಟೀಕಿಸಿದ್ದರು. ಹಲವು ತಿಂಗಳ ಕಾಲ ಅಸಹಿಷ್ಣತಾ ಚಳವಳಿ ನಡೆದಿತ್ತು. ಈಗ ಮೋದಿ ಸರ್ಕಾರ ಆರ್ಥಿಕ ಅಸಹಿಷ್ಣತೆಯನ್ನು ತಳೆದಂತಿದೆ. ಅಂದರೆ, ಮೋದಿ ಸರ್ಕಾರದ ಆರ್ಥಿಕ ನೀತಿಗಳನ್ನು ಟೀಕಿಸಬಾರದು, ಆರ್ಥಿಕತೆ ಕುಸಿದರೂ ಅದನ್ನು ಪ್ರಶ್ನಿಸಬಾರದು ಎಂಬಂತಾಗಿದೆ. ಪ್ರಶ್ನಿಸಿದರೆ, ಚರ್ಚಿಸಿದರೆ ನಿಮ್ಮ ವಿರುದ್ಧ ಇಡಿ, ಐಟಿ, ಸಿಬಿಐ ಮತ್ತಿತರ ಸಂಸ್ಥೆಗಳ ಮೂಲಕ ಮಟ್ಟ ಹಾಕಲಾಗುವುದು ಎಂಬುದನ್ನು ಪರೋಕ್ಷವಾಗಿ ಎಚ್ಚರಿಸುವಂತಿದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಉದ್ಯಮಿ ರಾಹುಲ್ ಬಜಾಬ್ ಅವರ ಮಾತುಗಳಲ್ಲಿ ಈ ಆತಂಕ ಮಾರ್ದನಿಸುತ್ತಿದೆ.