ರಾಷ್ಟ್ರೀಯ ಬಿಜೆಪಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜೋಡಿ ಇದ್ದಂತೆ ರಾಜ್ಯ ಘಟಕಗಳಲ್ಲೂ ಈ ರೀತಿಯ ಜೋಡಿ ನಾಯಕರನ್ನು ಹುಟ್ಟುಹಾಕಲು ಪಕ್ಷದ ರಾಷ್ಟ್ರೀಯ ಘಟಕ ಮುಂದಾಗಿದೆ. ಈಗಾಗಲೇ ಕೆಲವು ರಾಜ್ಯಗಳಲ್ಲಿ ಈ ಪ್ರಕ್ರಿಯೆ ಆರಂಭಿಸಿರುವ ರಾಷ್ಟ್ರೀಯ ನಾಯಕರು, ಕರ್ನಾಟಕದಲ್ಲೂ ಅದನ್ನು ಜಾರಿಗೊಳಿಸಲು ಮುಂದಾಗಿದ್ದಾರೆ. ಅದಕ್ಕಾಗಿ ಕರ್ನಾಟಕ ರಾಜ್ಯ ಘಟಕದಲ್ಲೂ ಸಂಘಟನಾ ನಾಯಕ ಮತ್ತು ರಾಜಕೀಯ ನಾಯಕ ಎಂಬ ಎರಡು ಶಕ್ತಿ ಕೇಂದ್ರಗಳನ್ನು ಸ್ಥಾಪಿಸಲು ವರಿಷ್ಠರು ನಿರ್ಧರಿಸಿದ್ದು, ಈಗಾಗಲೇ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.
ಪ್ರಸ್ತುತ ರಾಜ್ಯ ಬಿಜೆಪಿ ಘಟಕದಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ರಾಜಕೀಯ ನಾಯಕರಾದರೆ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಂಘಟನಾ ನಾಯಕರಾಗಿದ್ದಾರೆ. ವಯಸ್ಸಿನ ಕಾರಣದಿಂದಾಗಿ ಭವಿಷ್ಯದಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ರಾಜಕೀಯ ನಾಯಕ ಸ್ಥಾನದಲ್ಲಿ ಮುಂದುವರಿಯುವುದು ಕಷ್ಟಸಾಧ್ಯವಾಗಿದ್ದರಿಂದ ಮತ್ತು ಸಂಘಟನಾ ನಾಯಕತ್ವದೊಂದಿಗೆ ಅವರ ಸಂಬಂಧ ಅಷ್ಟೊಂದು ಚೆನ್ನಾಗಿಲ್ಲ ಎಂಬ ಕಾರಣಕ್ಕಾಗಿ ಮೂರನೇ ವ್ಯಕ್ತಿಯೊಬ್ಬನನ್ನು ರಾಜಕೀಯ ನಾಯಕನಾಗಿ ಪರಿಗಣಿಸಬೇಕು ಎಂದು ಯೋಚಿಸಲಾಗಿದೆ. ಅದಕ್ಕಾಗಿ ಯಡಿಯೂರಪ್ಪ ಅವರ ನಂತರ ಯಾರು ಎಂಬ ಬಗ್ಗೆ ಕೆಲವು ನಾಯಕರ ಬೆನ್ನು ಬಿದ್ದಿದ್ದಾರೆ. ಇದರ ಪರಿಣಾಮ ಯಡಿಯೂರಪ್ಪ ನಂತರದ ಸ್ಥಾನಕ್ಕಾಗಿ ಸರ್ಕಾರದಲ್ಲಿ ಸಚಿವರಾಗಿರುವವರು ಪೈಪೋಟಿಗೆ ಬಿದ್ದಿದ್ದು ವರಿಷ್ಠರ ಕಣ್ಣಿಗೆ ಬೀಳಲು ನಾನಾ ರೀತಿಯ ಕಸರತ್ತುಗಳನ್ನೂ ಆರಂಭಿಸಿದ್ದಾರೆ.
2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಷ್ಟ್ರ ಮಟ್ಟದಲ್ಲಿ ಪಕ್ಷ ಯಶಸ್ಸು ಸಾಧಿಸಲು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ನಡುವಿನ ಹೊಂದಾಣಿಕೆಯೇ ಪ್ರಮುಖ ಕಾರಣ. ಪಕ್ಷ ಮತ್ತು ಸರ್ಕಾರದಲ್ಲಿ ಯಾವುದೇ ಪ್ರಮುಖ ನಿರ್ಧಾರ ಕೈಗೊಳ್ಳುವುದಿದ್ದರೂ ಪರಸ್ಪರ ಚರ್ಚಿಸಿಯೇ ಕೈಗೊಳ್ಳುತ್ತಿದ್ದಾರೆ. ಇದೇ ಮಾದರಿಯಲ್ಲಿ ರಾಜ್ಯ ಘಟಕಗಳೂ ಸಿದ್ಧವಾಗಬೇಕು. ಆಗ ಅಧಿಕಾರ ಮತ್ತು ಸಂಘಟನೆ ಒಟ್ಟಿಗೆ ಸಾಗುತ್ತದೆ ಮತ್ತು ಸಂಘಟನೆ ಪ್ರಬಲವಾಗಿ ಬೆಳೆಯಲು ಸಹಕಾರಿಯಾಗುತ್ತದೆ.
ಸಂಘಟನಾ ನಾಯಕನನ್ನು ಪಕ್ಷ ನಿರ್ಧಾರ ಮಾಡುತ್ತದೆ. ಆದರೆ, ರಾಜಕೀಯ ನಾಯಕನನ್ನು ಜನ ನಿರ್ಧರಿಸಬೇಕು. ಆದರೆ, ಬಿಜೆಪಿಯ ಹೊಸ ಯೋಚನೆ ಪ್ರಕಾರ ಎರಡೂ ನಾಯಕತ್ವವನ್ನು ಇನ್ನು ಪಕ್ಷವೇ ಅಂದರೆ ರಾಷ್ಟ್ರೀಯ ಘಟಕವೇ ನಿರ್ಧರಿಸುತ್ತದೆ. ಅದಕ್ಕಾಗಿ ಯಡಿಯೂರಪ್ಪ ಅವರ ನಂತರ ರಾಜಕೀಯ ನಾಯಕ ಯಾರಾಗಬೇಕು ಎಂಬ ಬಗ್ಗೆ ನಿರ್ಧರಿಸಲು ಈಗಿನಿಂದಲೇ ತಯಾರಿ ನಡೆಸುತ್ತಿರುವ ರಾಷ್ಟ್ರೀಯ ನಾಯಕರು, ಅದಕ್ಕಾಗಿ ಕೆಲವು ಸಚಿವರ ಕಾರ್ಯವೈಖರಿ ಬಗ್ಗೆ ಕಣ್ಣಿಟ್ಟಿದ್ದಾರೆ.
ಯಡಿಯೂರಪ್ಪ ಅವರ ಬಳಿಕ ಲಿಂಗಾಯತ ನಾಯಕರೊಬ್ಬರನ್ನು ಹುಟ್ಟುಹಾಕಲು ಲಕ್ಷ್ಮಣ ಸವದಿ ಅವರಿಗೆ ಉಪಮುಖ್ಯಮಂತ್ರಿ ಸ್ಥಾನವನ್ನು ವರಿಷ್ಠರೇ ದಯಪಾಲಿಸಿದ್ದರು. ಚುನಾವಣೆಯಲ್ಲಿ ಸೋತರೂ, ಬಿಜೆಪಿ ಶಾಸಕರಲ್ಲಿ ವಿರೋಧ ವ್ಯಕ್ತವಾದರೂ ಅದನ್ನು ಪರಿಗಣಿಸದೆ ನಾಯಕನೊಬ್ಬನನ್ನು ಬೆಳೆಸುವ ಪ್ರಕ್ರಿಯೆಗೆ ನಾಂದಿ ಹಾಡಿದ್ದರು. ಇವರ ಜತೆಗೆ ಒಕ್ಕಲಿಗ ಸಮುದಾಯದಿಂದ ಡಾ. ಸಿ. ಎನ್. ಅಶ್ವತ್ಥನಾರಾಯಣ ಅವರ ಬಗ್ಗೆಯೂ ಕಣ್ಣಿಟ್ಟಿದ್ದಾರೆ. ಅಲ್ಲದೆ, ಸಂಘಟನೆಯಲ್ಲಿ ಸಾಕಷ್ಟು ಕೆಲಸ ಮಾಡಿದ ಅದೇ ಸಮುದಾಯಕ್ಕೆ ಸೇರಿದ ಸಚಿವ ಸಿ. ಟಿ. ರವಿ ಮತ್ತು ಪರಿಶಿಷ್ಟ ಪಂಗಡದ ವಾಲ್ಮೀಕಿ ನಾಯಕ ಸಮುದಾಯದ ಬಿ. ಶ್ರೀರಾಮುಲು ಅವರ ಮೇಲೂ ವರಿಷ್ಠರು ಗಮನಹರಿಸಿದ್ದಾರೆ. ಈ ನಾಲ್ವರ ಪೈಕಿ ಯಾರನ್ನು ಆಯ್ಕೆ ಮಾಡಬೇಕು ಎಂಬುದನ್ನು ಮುಂದಿನ ದಿನಗಳಲ್ಲಿ ಅವರ ಕಾರ್ಯವೈಖರಿ ನೋಡಿ ನಿರ್ಧರಿಸಲಿದ್ದಾರೆ.
ವರಿಷ್ಠರು ಅನುಸರಿಸಲಿರುವ ಮಾನದಂಡಗಳೇನು
ರಾಜಕೀಯ ನಾಯಕತ್ವಕ್ಕೆ ವರಿಷ್ಠರು ಕೆಲವು ಮಾನದಂಡಗಳನ್ನು ನಿಗದಿಪಡಿಸಿದ್ದಾರೆ. ಆಡಳಿತಾತ್ಮಕವಾಗಿ ಆತನ ಕಾರ್ಯವೈಖರಿ ಸಮಾಧಾನಕರವಾಗಿರಬೇಕು. ನೀತಿ-ನಿರ್ಧಾರಗಳನ್ನು ಕೈಗೊಳ್ಳುವ ಸಂದರ್ಭದಲ್ಲಿ ಪಕ್ಷದ ನಾಯಕತ್ವವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ವ್ಯಕ್ತಿತ್ವ ಹೊಂದಿರಬೇಕು. ಈ ಗುಣಗಳನ್ನು ಹೊಂದಿರುವ ವ್ಯಕ್ತಿ ಜನನಾಯಕ (ಮಾಸ್ ಲೀಡರ್) ಆಗಿದ್ದರೆ ಸೂಕ್ತ. ಇಲ್ಲದೇ ಇದ್ದರೆ ಜನರನ್ನು ಅದರಲ್ಲೂ ಮುಖ್ಯವಾಗಿ ಕಾರ್ಯಕರ್ತರನ್ನು ಒಟ್ಟಿಗೆ ಕರೆದೊಯ್ಯುವ ಛಾತಿ ಇರಬೇಕು. ಭ್ರಷ್ಟಾಚಾರ ವಿಚಾರದಲ್ಲಿ ಕಠಿಣ ನಿಲುವು ಹೊಂದಿರಬೇಕು. ಕುಟುಂಬ ಸದಸ್ಯರು, ಆಪ್ತ ವರ್ಗದವರು ಆಡಳಿತದಲ್ಲಿ ಮೂಗು ತೂರಿಸದಂತೆ ನೋಡಿಕೊಳ್ಳಬೇಕು. ಅಂತಹ ನಾಯಕತ್ವಕ್ಕೆ ಮಣೆ ಹಾಕಬೇಕು ಎಂಬುದು ವರಿಷ್ಠರ ಯೋಚನೆ.
ಈ ವಿಚಾರದಲ್ಲಿ ಸಚಿವರ ಕಾರ್ಯವೈಖರಿ ಬಗ್ಗೆ ಕಣ್ಣಿಡಲು ವರಿಷ್ಠರು ಖಾಸಗಿ ಏಜನ್ಸಿ ಮೂಲಕ ತಂಡವೊಂದನ್ನು ರಚಿಸಿದ್ದಾರೆ. ಈ ತಂಡದ ಸದಸ್ಯರು ಸಚಿವರ ಪ್ರತಿನಿತ್ಯದ ಕಾರ್ಯವೈಖರಿ ಬಗ್ಗೆ ಗಮನಹರಿಸಿದ್ದಾರೆ. ಅಲ್ಲದೆ, ಈ ಕುರಿತು ವರದಿಗಳನ್ನೂ ವರಿಷ್ಠರಿಗೆ ಕಳುಹಿಸಿಕೊಡುತ್ತಿದ್ದಾರೆ. ಹೀಗಾಗಿ ಭವಿಷ್ಯದ ರಾಜಕೀಯ ನಾಯಕತ್ವಕ್ಕಾಗಿ ಪಕ್ಷದಲ್ಲಿ ಪೈಪೋಟಿ ಶುರುವಾಗಿದೆ.
ಉಪ ಚುನಾವಣೆ ಬಳಿಕ ಮತ್ತೊಮ್ಮೆ ಅವಲೋಕನ
ಶೀಘ್ರದಲ್ಲೇ ವಿಧಾನಸಭೆಯ 15 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದ್ದು, ಇಲ್ಲಿ ಸಚಿವರ ಕಾರ್ಯಕ್ಷಮತೆ ಒರೆಗೆ ಹಚ್ಚಲಾಗುತ್ತದೆ. ಬಿಜೆಪಿ ಅಭ್ಯರ್ಥಿಗಳು ಎಷ್ಟು ಕ್ಷೇತ್ರಗಳಲ್ಲಿ ಗೆಲ್ಲುತ್ತಾರೆ ಈ ಗೆಲುವಿನಲ್ಲಿ ಸಚಿವರ ಪಾತ್ರ ಏನಾದರೂ ಇದೆಯೇ, ಯಾವ ಸಚಿವರು ಸಕ್ರಿಯವಾಗಿ ಚುನಾವಣಾ ಪ್ರಚಾರ ಮತ್ತು ನಿರ್ವಹಣೆಯಲ್ಲಿ ತೊಡಗಿಕೊಂಡಿದ್ದಾರೆ ಎಂಬಿತ್ಯಾದಿ ವಿಚಾರಗಳ ಬಗ್ಗೆ ಮತ್ತೊಮ್ಮೆ ಅವಲೋಕನ ನಡೆಯಲಿದೆ. ಈ ವೇಳೆ ಈಗಾಗಲೇ ಗುರುತಿಸಿರುವ ನಾಲ್ವರು ಸಚಿವರ ಬದಲಾಗಿ ಬೇರೆಯವರು ಹೆಚ್ಚು ಕ್ರಿಯಾಶೀಲವಾಗಿ ಚುನಾವಣಾ ನಿರ್ವಹಣೆಯಲ್ಲಿ ತೊಡಗಿಕೊಂಡಿದ್ದರೆ ಅವರನ್ನೂ ಈ ಪಟ್ಟಿಯಲ್ಲಿ ಸೇರಿಸಲಾಗುತ್ತದೆ. ಸುಮಾರು ಆರು ತಿಂಗಳು ಅವರನ್ನು ಹತ್ತಿರದಿಂದ ಗಮನಿಸಿ ಅವರ ಕಾರ್ಯವೈಖರಿ ಸುಧಾರಣೆಯಾದರೆ ಯಾರನ್ನು ಆಯ್ಕೆ ಮಾಡಬೇಕು ಎಂಬುದನ್ನು ವರಿಷ್ಠರು ನಿರ್ಧರಿಸುತ್ತಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ರಾಜಕೀಯ ನಾಯಕತ್ವವನ್ನು ಆಯ್ಕೆ ಮಾಡುವಾಗ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೂ ವರಿಷ್ಠರು ಮಣೆ ಹಾಕಲಿದ್ದಾರೆ. ಏಕೆಂದರೆ, ಯಡಿಯೂರಪ್ಪ ಅವರನ್ನು ದೂರವಿಟ್ಟರೆ ಪಕ್ಷಕ್ಕೆ ಹಿನ್ನಡೆಯಾಗುತ್ತದೆ. ಹೀಗಾಗಿ ಅವರಿಗೆ ಒಪ್ಪುವ ವ್ಯಕ್ತಿಯನ್ನು ಆಯ್ಕೆ ಮಾಡಿದರೆ ಬೆಂಬಲ ಸಿಗುತ್ತದೆ ಎಂಬುದು ವರಿಷ್ಠರ ಯೋಚನೆ. ಹೀಗಾಗಿ ನಾಯಕತ್ವದ ಸ್ಪರ್ಧೆಯಲ್ಲಿರುವ ಸಚಿವರು ಯಡಿಯೂರಪ್ಪ ಅವರ ಬೆಂಬಲಕ್ಕಾಗಿಯೂ ಪೈಪೋಟಿ ನಡೆಸುತ್ತಿದ್ದಾರೆ. ಸಾಧ್ಯವಾದಷ್ಟು ಮಟ್ಟಿಗೆ ಅವರ ವಿಶ್ವಾಸ ಗಳಿಸಲು ಪ್ರಯತ್ನಿಸುತ್ತಿದ್ದಾರೆ. ಇಲ್ಲಿ ಯಡಿಯೂರಪ್ಪ ಅವರ ಕೃಪಾಕಟಾಕ್ಷ ಯಾರಿಗೆ ಸಿಗುತ್ತದೆಯೋ ಅವರಿಗೆ ರಾಜಕೀಯ ನಾಯಕತ್ವದ ಚುಕ್ಕಾಣಿ ಸಿಗುವ ಸಾಧ್ಯತೆಗಳು ಹೆಚ್ಚಾಗಿವೆ ಎಂಬುದು ಪಕ್ಷದ ವಲಯದಲ್ಲಿ ಕೇಳಿಬರುತ್ತಿರುವ ಮಾತು.