ಲಾಕ್ ಡೌನ್ ನಡುವೆ ಬಹುತೇಕ ಸುದ್ದಿಯೇ ಇಲ್ಲದಂತಿದ್ದ ಬಾಲಿವುಡ್ ಇದೀಗ ದಿನಕ್ಕೊಂದು ಸ್ಫೋಟಕ ಪ್ರಕರಣಗಳಿಂದಾಗಿ ಸುದ್ದಿಯಾಗುತ್ತಿದ್ದು, ಸುಶಾಂತ್ ಸಿಂಗ್ ರಜಪೂತ್ ಸಾವಿನಿಂದ ಆರಂಭವಾಗಿದ್ದ ಈ ಸರಣಿಗೆ ಇದೀಗ ಖ್ಯಾತ ಸಿನಿಮಾ ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧದ ಲೈಂಗಿಕ ಕಿರುಕುಳ ಆರೋಪ ಸೇರ್ಪಡೆಯಾಗಿದೆ.
ಕಳೆದ ಎರಡು ಮೂರು ದಿನಗಳಿಂದ ಬಾಲಿವುಡ್ ನಲ್ಲಿ ದೊಡ್ಡ ವಿವಾದದ ಬಿರುಗಾಳಿ ಎಬ್ಬಿಸಿರುವ ಈ ಪ್ರಕರಣದಲ್ಲಿ ಈಗಾಗಲೇ ಅನುರಾಗ್ ಕಶ್ಯಪ್ ವಿರುದ್ಧ ಅತ್ಯಾಚಾರ ಪ್ರಕರಣ ಕೂಡ ದಾಖಲಾಗಿದೆ. ಟ್ವಿಟರ್ ಜಾಲತಾಣದ ಮೂಲಕ ಆರಂಭವಾದ ಆರೋಪ-ಪ್ರತ್ಯಾರೋಪಗಳು ಇದೀಗ ಮುಂಬೈ ಪೊಲೀಸರೆದುರು ಅಧಿಕೃತ ದೂರು ದಾಖಲಾಗುವ ಮಟ್ಟಿಗೆ ಬೆಳೆದಿದ್ದು, ನಟಿ ನೀಡಿದ ದೂರು ಹಿನ್ನೆಲೆಯಲ್ಲಿ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಈ ನಡುವೆ ಕಶ್ಯಪ್ ನಟಿಯ ಆರೋಪಗಳನ್ನು ನಿರಾಕರಿಸಿದ್ದು, ಯಾವುದೇ ಆಧಾರರಹಿತ ಮತ್ತು ದುರುದ್ದೇಶದ ಆರೋಪಗಳು ಎಂದಿರುವ ಅವರ ಪರ, ಅವರ ಮಾಜಿ ಪತ್ನಿ ಕಲ್ಕಿ ಕೊಯಿಷ್ಲಿನ್ ಸೇರಿದಂತೆ ಹಲವು ಬಾಲಿವುಡ್ ನಟ-ನಟಿಯರು, ನಿರ್ದೇಶಕರು ಹೇಳಿಕೆಗಳನ್ನು ನೀಡಿದ್ದಾರೆ.
2013ರಲ್ಲಿ ಮುಂಬೈನ ಯಾರಿ ರಸ್ತೆಯ ನಿವಾಸದಲ್ಲಿ ಕಶ್ಯಪ್ ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂಬ ನಟಿಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ. ನಟಿಯ ವಕೀಲರು ನೀಡಿದ ದೂರಿನ ಹಿನ್ನೆಲೆಯಲ್ಲಿ ಅತ್ಯಾಚಾರ, ಅಕ್ರಮ ಬಂಧನ, ದಬ್ಬಾಳಿಕೆ, ಮಹಿಳೆಯ ಘನತೆಗೆ ಧಕ್ಕೆ ಮತ್ತಿತರ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಈ ಸಂಬಂಧ ಸದ್ಯದಲ್ಲೇ ಆರೋಪಿ ನಿರ್ದೇಶಕರನ್ನು ಕರೆದು ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ಹೇಳಿರುವುದಾಗಿ ವರದಿಯಾಗಿದೆ.
ಕಳೆದ ವಾರದಿಂದಲೇ ಈ ಪ್ರಕರಣ ಜಾಲತಾಣದಲ್ಲಿ ಸದ್ದುಮಾಡುತ್ತಿದ್ದು, ಕಳೆದ ಶನಿವಾರ ಆ ನಟಿ ತನ್ನ ಟ್ವೀಟ್ ನಲ್ಲಿ ಪ್ರಧಾನಿ ಕಚೇರಿಯನ್ನು ಟ್ಯಾಗ್ ಮಾಡಿ ಕಶ್ಯಪ್ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ತನಗೆ ನ್ಯಾಯ ಕೊಡಿಸಬೇಕು ಎಂದು ಹೇಳಿದ್ದರು. ಆ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಪ್ರಕರಣದ ಕುರಿತ ವಿವರ ನೀಡುವಂತೆ ನಟಿಗೆ ಪ್ರತಿಕ್ರಿಯಿಸಿತ್ತು.
ಈ ನಡುವೆ, ನಟಿಯ ಆರೋಪಗಳ ಬಗ್ಗೆ ಸರಣಿ ಟ್ವೀಟ್ ಮಾಡಿದ್ದ ನಿರ್ಮಾಪಕ ಮತ್ತು ನಿರ್ದೇಶಕ ಅನುರಾಗ್ ಕಶ್ಯಪ್, ದೇಶದ ಜ್ವಲಂತ ಸಮಸ್ಯೆಗಳ ಬಗ್ಗೆ ಪ್ರಶ್ನೆ ಎತ್ತುತ್ತಿರುವ ಮತ್ತು ಆಡಳಿತ ಪಕ್ಷ ಮತ್ತು ಪ್ರಧಾನಿ ಮೋದಿಯವರನ್ನು ಪ್ರಶ್ನಿಸುತ್ತಿರುವ ಹಿನ್ನೆಲೆಯಲ್ಲಿ ಬಾಯಿ ಮುಚ್ಚಿಸಲು ನಡೆಸಿದ ತಂತ್ರ ಇದು ಎಂದು ಹೇಳಿದ್ದರು. ಜೊತೆಗೆ, ಇಂತಹ ಸುಳ್ಳು ಆಪಾದನೆಗಳಿಂದ ನೊಂದಿರುವುದಾಗಿ ಹೇಳಿದ್ದ ಅವರು, ಇಂತಹ ಹಸೀಸುಳ್ಳು ಮತ್ತು ದುರುದ್ದೇಶದ ಆಪಾದನೆಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳುವುದಾಗಿ ಹೇಳಿದ್ದರು.
ಈ ನಡುವೆ, ಜಾಲತಾಣದ ಆರೋಪ- ಪ್ರತ್ಯಾರೋಪದಲ್ಲಿ ಕಳೆದ ಎರಡು ವರ್ಷಗಳಿಂದ ಸಾಕಷ್ಟು ಚರ್ಚೆಯಾಗುತ್ತಿರುವ ಬಾಲಿವುಡ್ ಅಂಗಳದ ‘ಮಿಟೂ’ ಅಭಿಯಾನದ ಬಗ್ಗೆಯೂ ಪ್ರಸ್ತಾಪವಾಗಿತ್ತು. ಇಂತಹ ಸುಳ್ಳು ಆರೋಪಗಳಿಂದಾಗಿ ಬಾಲಿವುಡ್ ಮಹಿಳೆಯರಿಗೆ ಹೊಸ ಆತ್ಮವಿಶ್ವಾಸ ಮತ್ತು ಭರವಸೆ ತಂದುಕೊಟ್ಟಿದ್ದ ಮೀಟೂ ಚಳವಳಿಗೂ ಕಳಂಕ ಬಂದಿದೆ ಎಂದು ಸ್ವತಃ ಕಶ್ಯಪ್ ಟ್ವೀಟ್ ಮಾಡಿದ್ದರು.
ಈ ನಡುವೆ ಅತ್ಯಾಚಾರದ ಆರೋಪ ಮಾಡಿರುವ ನಟಿ, ಅನುರಾಗ್ ಕಶ್ಯಪ್ ಮತ್ತು ಇತರ ಕೆಲವು ನಟಿಯರ ನಡುವಿನ ಸಂಬಂಧದ ಬಗ್ಗೆಯೂ ಜಾಲತಾಣದಲ್ಲಿ ಪ್ರಸ್ತಾಪ ಮಾಡಿರುವುದು ವಿವಾದಕ್ಕೆ ಮತ್ತೊಂದು ತಿರುವು ನೀಡಿದೆ. ನಟಿಯು ತಮ್ಮ ಹೆಸರು ಪ್ರಸ್ತಾಪಮಾಡುವ ಮೂಲಕ ತಮ್ಮ ಘನತೆಗೆ ಧಕ್ಕೆ ತಂದಿದ್ದಾರೆ ಎಂದಿರುವ ನಟಿಯರಾದ ರಿಚಾ ಛಡ್ಡಾ, ಹುಮಾ ಖುರೇಷಿ ಮತ್ತು ಮಾಹಿ ಗಿಲ್ ಕೂಡ ನಟಿಯ ವಿರುದ್ಧ ತಿರುಗಿಬಿದ್ದಿದ್ದಾರೆ. ಈಗಾಗಲೇ ರಿಚಾ ಆ ನಟಿಗೆ ಲೀಗಲ್ ನೋಟೀಸ್ ಜಾರಿ ಮಾಡಿದ್ದಾರೆ. ಹುಮಾ ಖುರೇಷಿ ಕೂಡ ನಟಿಯ ಮಾತುಗಳು ಘಾಸಿಗೊಳಿಸಿವೆ ಎಂದಿದ್ದು, ಅನುರಾಗ್ ಕಶ್ಯಪ್ ಎಂದೂ ತಮ್ಮೊಂದಿಗೆ ಅಸಭ್ಯವಾಗಿ ನಡೆದುಕೊಂಡಿಲ್ಲ. ಅವರು ಅಂತಹ ವ್ಯಕ್ತಿಯೂ ಅಲ್ಲ ಎಂದು ಹೇಳಿದ್ದಾರೆ. ಈ ನಡುವೆ ಕಶ್ಯಪ್ ಅವರ ಪರವಾಗಿ ಅವರ ಇಬ್ಬರು ಮಾಜಿ ಪತ್ನಿಯರು ಕೂಡ ಹೇಳಿಕೆ ನೀಡಿದ್ದು, ಕಲ್ಕಿ ಮತ್ತು ಆರತಿ ಬಜಾಜ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಕಶ್ಯಪ್ ಪರ ಪೋಸ್ಟ್ ಹಂಚಿಕೊಂಡಿದ್ದಾರೆ.
ಈ ನಡುವೆ ಸದಾ ವಿವಾದಗಳಿಂದಲೇ ಸುದ್ದಿಯಲ್ಲಿರುವ, ಬಿಜೆಪಿ ಮತ್ತು ಪ್ರಧಾನಿ ಮೋದಿ ಪರ ಬಹಿರಂಗ ಹೇಳಿಕೆಗಳ ಮೂಲಕ ಸದ್ದು ಮಾಡುತ್ತಿರುವ ನಟಿ ಕಂಗನಾ ರನಾವತ್ ಮಾತ್ರ ನಟಿಯ ಪರ ನಿಂತಿದ್ದು, “ಕಶ್ಯಪ್ ಲೈಂಗಿಕ ದೌರ್ಜನ್ಯ ಎಸಗುವ ಮಟ್ಟಿಗೆ ಪ್ರಭಾವಿ” ಎಂದು ಹೇಳಿಕೆ ನೀಡಿದ್ದಾರೆ.
ಈ ಮೂಲಕ ಇಡೀ ಪ್ರಕರಣ; ಅನುರಾಗ್ ಕಶ್ಯಪ್ ಅವರ ಹೇಳಿಕೆಯಂತೆ; ರಾಜಕೀಯ ಆಯಾಮ ಪಡೆದುಕೊಳ್ಳುವ ಹಾದಿಯಲ್ಲಿದ್ದು, ಪ್ರಧಾನಿ ಮೋದಿ ಮತ್ತು ಅವರ ಆಡಳಿತದ ವಿರುದ್ದ ಮತ್ತು ದೇಶದ ಬಡವರು, ಕೂಲಿಕಾರ್ಮಿಕರು, ಜನಸಾಮಾನ್ಯರ ಪರ ಕಳೆದ ಕೆಲವು ವರ್ಷಗಳಿಂದ ನಿರಂತರ ಬಹಿರಂಗ ಹೇಳಿಕೆಗಳನ್ನು ನೀಡುತ್ತಿದ್ದ ಅವರನ್ನು ಹಣಿಯಲೆಂದೇ ಈ ಪ್ರಕರಣ ಹೆಣೆಯಲಾಗಿದೆ ಎಂಬ ಅನುಮಾನ ದಟ್ಟವಾಗುತ್ತಿದೆ. ಆದರೆ, ಅಂತಿಮವಾಗಿ ಸತ್ಯಾಸತ್ಯತೆ ಏನು ಎಂಬುದು ಮುಂಬೈ ಪೊಲೀಸರ ಪ್ರಾಮಾಣಿಕ ತನಿಖೆಯಿಂದಷ್ಟೇ ಹೊರಬರಬೇಕಿದೆ.