ಕೆಲವೇ ದಿನಗಳಲ್ಲಿ ದೇಶದ ಮುಖ್ಯ ಚುನಾವಣಾ ಆಯುಕ್ತರಾಗಿ ಬಡ್ತಿ ಹೊಂದಲಿದ್ದ ಚುನಾವಣಾ ಆಯುಕ್ತ ಅಶೋಕ ಲಾವಸ ಅವರು ಮಂಗಳವಾರ ದಿಢೀರ್ ರಾಜೀನಾಮೆ ನೀಡಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯ ವೇಳೆ, ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ವಿರುದ್ಧ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ವಿಷಯದಲ್ಲಿ ದಿಟ್ಟ ನಿಲುವು ಕೈಗೊಂಡ ಹಿನ್ನೆಲೆಯಲ್ಲಿ ಅವರ ಈ ದಿಢೀರ್ ರಾಜೀನಾಮೆ ಮಹತ್ವ ಪಡೆದುಕೊಂಡಿದೆ. ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ ಆಡಳಿತ ಪಕ್ಷದ ಪ್ರಮುಖರಿಬ್ಬರಿಗೆ ಕ್ಲೀನ್ ಚಿಟ್ ನೀಡಿದ ಆಯೋಗದ ಕ್ರಮವನ್ನು ಸ್ವತಃ ಚುನಾವಣಾ ಆಯೋಗದ ಎರಡನೇ ಪ್ರಮುಖ ಅಧಿಕಾರಿಯಾಗಿ ಅವರು ಬಲವಾಗಿ ವಿರೋಧಿಸಿದ್ದರು.
ಅದೇ ಹಿನ್ನೆಲೆಯಲ್ಲಿ; ಚುನಾವಣಾ ಬಳಿಕ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಲೇ ಲಾವಾಸ ಅವರ ಪತ್ನಿಯೂ ಸೇರಿದಂತೆ ಕುಟುಂಬದವರ ಮೇಲೆ ಆದಾಯ ತೆರಿಗೆ ದಾಳಿ ನಡೆದಿತ್ತು. ಆದಾಯ ಮೀರಿದ ಆಸ್ತಿ ಮತ್ತು ಆದಾಯ ಘೋಷಣೆ ಮಾಡದೇ ಇರುವ ಹಿನ್ನೆಲೆಯಲ್ಲಿ ಆ ದಾಳಿ ನಡೆಸಲಾಗಿತ್ತು ಎಂದು ಇಲಾಖೆ ಹೇಳಿದ್ದರೂ, ಪತ್ನಿ, ಪುತ್ರ ಮತ್ತು ಸಹೋದರಿಯ ವಿರುದ್ಧದ ತೆರಿಗೆ ಇಲಾಖೆಯ ಆ ಕ್ರಮವನ್ನು ಸೇಡಿನ ಕ್ರಮವೆಂದೇ ವ್ಯಾಖ್ಯಾನಿಸಲಾಗಿತ್ತು ಮತ್ತು ಕುಟಂಬವರ್ಗದವರು ಕೂಡ, ಇಲಾಖೆಯ ಆರೋಪಗಳನ್ನು ಸಾರಾಸಗಟಾಗಿ ತಳ್ಳಿಹಾಕಿ, ಕಾನೂನು ರೀತಿಯ ಎಲ್ಲಾ ಪ್ರಕ್ರಿಯೆಗಳನ್ನು ಚಾಚೂತಪ್ಪದೆ ನಿರ್ವಹಿಸಿದ್ದರೂ ಇಲಾಖೆ ತಮ್ಮ ವಿರುದ್ಧ ಈ ಕ್ರಮ ಜರುಗಿದೆ ಎಂದು ಪ್ರತ್ಯಾರೋಪ ಮಾಡಿದ್ದರು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಹರ್ಯಾಣ ಕೇಡರ್ ಐಎಎಸ್ ಅಧಿಕಾರಿಯಾಗಿ ಹಣಕಾಸು ಕಾರ್ಯದರ್ಶಿ, ಪರಿಸರ ಮತ್ತು ನಾಗರಿಕ ವಿಮಾನ ಯಾನ ಇಲಾಖಾ ಕಾರ್ಯದರ್ಶಿ ಸೇರಿದಂತೆ ಭಾರತ ಸರ್ಕಾರದಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದ ಅಶೋಕ ಲಾವಾಸ ಅವರು ತಮ್ಮ ನಿವೃತ್ತಿಯ ಬಳಿಕ, 2018ರ ಜನವರಿಯಲ್ಲಿ ಚುನಾವಣಾ ಆಯುಕ್ತರಾಗಿ ನೇಮಕಗೊಂಡಿದ್ದರು. 2022ರ ಅಕ್ಟೋಬರ್ ಅವರಿಗೆ ಸೇವಾ ಅವಧಿ ಹೊಂದಿದ್ದ ಅವರು, ಹಾಲಿ ಮುಖ್ಯ ಚುನಾವಣಾ ಆಯುಕ್ತರ ನಿವೃತ್ತಿಯ ಬಳಿಕ ಸೇವಾ ಹಿರಿತನದ ಆಧಾರದ ಮೇಲೆ ಭಾರತೀಯ ಚುನಾವಣಾ ಸಂಸ್ಥೆಯ ಚುಕ್ಕಾಣಿ ಹಿಡಿಯಲಿದ್ದರು. ಜೊತೆಗೆ ಸಿಇಸಿಯಾಗಿ ಮುಂಬರುವ ಉತ್ತರಪ್ರದೇಶ, ಪಶ್ಚಿಮಬಂಗಾಳ, ಉತ್ತರಾಖಂಡ, ಪಂಜಾಬ್, ಮಣಿಪುರ ಮತ್ತು ಗೋವಾ ಸೇರಿದಂತೆ ಬಿಜೆಪಿಯ ಪಾಲಿನ ನಿರ್ಣಾಯಕ ರಾಜ್ಯಗಳ ವಿಧಾನಸಭಾ ಚುನಾವಣೆಗಳನ್ನು ನಡೆಸುವ ಅವಕಾಶ ಅವರಿಗಿತ್ತು.
ಆದರೆ, ಅವಧಿಗೆ ಮುನ್ನವೇ ಅವರು ತಮ್ಮ ಸ್ಥಾನದಿಂದ ನಿರ್ಗಮಿಸಿರುವುದರಿಂದ ಮುಂದಿನ ಮುಖ್ಯ ಚುನಾವಣಾ ಆಯುಕ್ತರಾಗುವ ಅವಕಾಶ, ಅವರ ನಂತರದ ಸ್ಥಾನದಲ್ಲಿರುವ ಮತ್ತೊಬ್ಬ ಚುನಾವಣಾ ಆಯುಕ್ತರಾದ ಸುಶೀಲ್ ಚಂದ್ರ ಅವರಿಗೆ ಒದಗಿಬಂದಿದೆ.
ಲಾವಸ ಅವರು ತಮ್ಮ ರಾಜೀನಾಮೆ ಪತ್ರವನ್ನು ರಾಷ್ಟ್ರಪತಿಗಳಿಗೆ ಸಲ್ಲಿಸಿದ್ದು, ಆಗಸ್ಟ್ 31ರಂದು ತಮ್ಮನ್ನು ಸೇವೆಯಿಂದ ಬಿಡುಗಡೆಗೊಳಿಸುವಂತೆ ಕೋರಿದ್ದಾರೆ. ಈ ನಡುವೆ, ಅವರು ಫಿಲಿಪೈನ್ಸ್ ಮೂಲದ ಏಷ್ಯಾ ಅಭಿವೃದ್ಧಿ ಬ್ಯಾಂಕ್(ಎಡಿಬಿ) ಉಪಾಧ್ಯಕ್ಷರಾಗಿ ಮುಂದಿನ ತಿಂಗಳು ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎನ್ನಲಾಗಿದ್ದು, ಈಗಾಗಲೇ ಎಡಿಬಿ ಅವರ ನೇಮಕಾತಿಯನ್ನು ಘೋಷಿಸಿದೆ.

