ಕರೋನಾ ಸೋಂಕು ವ್ಯಾಪಕವಾಗಿ ಹರಡಿ ಆಸ್ಪತ್ರೆಗಳಲ್ಲಿ ಸಮರ್ಪಕ ಹಾಸಿಗೆ, ಮತ್ತಿತರ ವ್ಯವಸ್ಥೆಗಳಿಲ್ಲದೇ ಸೋಂಕು ಪೀಡಿತರು ಬೀದಿ ಬೀದಿಗಳಲ್ಲಿ ಸಹಾಯ ಬೇಡುತ್ತಿದ್ದರೆ, ಇತ್ತ ಚಿನಿವಾರ ಪೇಟೆ ಮತ್ತು ಷೇರುಪೇಟೆಯಲ್ಲಿ ಹೊಸ ಹೊಸ ದಾಖಲೆಗಳಾಗುತ್ತಿವೆ. 24 ಕ್ಯಾರೆಟ್ಟಿನ ಹತ್ತು ಗ್ರಾಮ್ ಚಿನ್ನದ ಬೆಲೆಯು ಅರ್ಧ ಲಕ್ಷ ದಾಟಿ ಹೋಗಿದ್ದರೆ, ಪ್ರಧಾನಿ ಮೋದಿಯ ಪರಮಾಪ್ತ ಮುಖೇಶ್ ಅಂಬಾನಿಯ ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿಯು ಜಾಗತಿಕ ಮಟ್ಟದ ಅಗ್ರ ಐವತ್ತು ಕಂಪನಿಗಳ ಪಟ್ಟಿಗೆ ಸೇರ್ಪಡೆಯಾಗಿದೆ. ಅಷ್ಟೇ ಅಲ್ಲಾ ಕಂಪನಿಯ ಮಾರುಕಟ್ಟೆ ಬಂಡವಾಳವು 15 ಲಕ್ಷ ದಾಟುತ್ತಿದೆ.
ಕರೋನಾ ಸೋಂಕಿತರು ಬೀದಿಪಾಲಾಗುವುದಕ್ಕೂ, ಚಿನ್ನದ ಬೆಲೆ ಏರುವುದಕ್ಕೂ, ಅಂಬಾನಿ ಕಂಪನಿಯ ಮಾರುಕಟ್ಟೆ ಬಂಡವಾಳ ಮೌಲ್ಯ ಜಿಗಿಯುವುದಕ್ಕೂ ಏನೇನೂ ಸಂಬಂಧ ಇಲ್ಲ. ಆದರೆ, ಈ ಮೂರಕ್ಕೂ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತ್ಯಕ್ಷ ಹಾಗೂ ಪರೋಕ್ಷ ಕಾರಣರಾಗಿದ್ದಾರೆ.
ದೇಶದಲ್ಲಿ ಕರೋನಾ ಸೋಂಕು ಪೀಡಿತ ಸಂಖ್ಯೆ ಇನ್ನೂ ಸಾವಿರ ದಾಟುವ ಮುನ್ನವೇ ದೇಶವ್ಯಾಪಿ ಏಕಾಏಕಿ ಲಾಕ್ಡೌನ್ ಘೋಷಣೆ ಮಾಡಿದ ಪ್ರಧಾನಿ ಮೋದಿ, ಜನರಿಂದ ತಟ್ಟೆ ಲೋಟ ಬಾರಿಸಿದ್ದು, ಇದ್ದ ವಿದ್ಯುತ್ ದೀಪವನ್ನೂ ಆರಿಸಿ ಕತ್ತಲು ಮಾಡಿ, ದೀಪ ಬೆಳಗಿಸಿದ್ದನ್ನು ಬಿಟ್ಟರೆ ಬೇರೇನೂ ಮಾಡಲಿಲ್ಲ. ಮೋದಿ ಅವರ ದೂರದರ್ಶಿತ್ವದ ಕೊರತೆ, ಅಪಕ್ವ ಮತ್ತು ಅಪ್ರಬುದ್ಧ ನಿರ್ಧಾರಗಳ ಫಲವಾಗಿ ಈಗ ದೇಶದ ಸೋಂಕು ಪೀಡಿತರ ಸಂಖ್ಯೆಯು ಹದಿನೈದು ಲಕ್ಷ ದಾಟುವ ಹಂತದಲ್ಲಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಕಳೆದ ಹತ್ತು ದಿನಗಳ ಹಿಂದೆ ಹತ್ತು ಲಕ್ಷವನ್ನೂ ದಾಟಿರಲಿಲ್ಲ. ಈ ಹತ್ತು ದಿನಗಳಲ್ಲಿ ಸುಮಾರು ನಾಲ್ಕೈದು ಲಕ್ಷದಷ್ಟು ಸೋಂಕಿತರ ಸಂಖ್ಯೆ ಹೆಚ್ಚಿದೆ. ಮೋದಿ ಸರ್ಕಾರವು ಆರಂಭದಿಂದಲೂ ಪರೀಕ್ಷೆಗೆ ಹೆಚ್ಚಿನ ಒತ್ತು ನೀಡುತ್ತಿಲ್ಲ. ಈಗ ವ್ಯಾಪಕವಾಗಿ ಪರೀಕ್ಷೆ ನಡೆಸಿದರೆ, ಸೋಂಕು ಪೀಡಿತರ ಸಂಖ್ಯೆಯು ಈಗಿನ ಆರಂಕಿಯಿಂದ ಏಳಂಕಿಯನ್ನು ಮುಟ್ಟಿದರೂ ಅಚ್ಚರಿಯಿಲ್ಲ.
ಆರಂಭದಲ್ಲಿ ದೇಶದಲ್ಲಿ ಸೋಂಕಿತರ ಸಂಖ್ಯೆ 1000, 5000 ದಾಟುವ ಮುನ್ನವೇ ಪ್ರಧಾನಿ ಮೋದಿ ಅವರು ಪ್ರೈಮ್ ಟೈಮ್ ನಲ್ಲಿ ಬಂದು ದೇಶದ ಜನತೆಯನ್ನು ಉದ್ದೇಶಿಸಿ ಹಲವು ಬಾರಿ ಮಾತನಾಡಿದ್ದರು. ಪರಿಸ್ಥಿತಿ ಕೈಮೀರಿ ಹೋದಮೇಲೆ, ನಾವು ಕರೋನಾ ಜತೆಯಲ್ಲೇ ಬದುಕುವುದನ್ನು ಕಲಿಯಬೇಕು ಎಂದು ಹೇಳಿ ಕೈಚೆಲ್ಲಿಬಿಟ್ಟರು. ಆದರೆ, ಸೋಂಕು ಪೀಡಿತರ ಚಿಕಿತ್ಸೆಗೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ಸೃಷ್ಟಿಸುವತ್ತ ಗಮನ ಹರಿಸದ ಪ್ರಧಾನಿ ಮೋದಿ, ಈಗ ಖಾಸಗಿ ಆಸ್ಪತ್ರೆಗಳು ಕೋಟಿ ಕೋಟಿ ರುಪಾಯಿ ಲೂಟಿ ಮಾಡಲು ಅವಕಾಶ ಮಾಡಿಕೊಟ್ಟಂತಿದೆ.
ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಮೋದಿ ಆರಂಭಿಸಿದ “ಪಿಎಂ ಕೇರ್ಸ್” ಲೆಕ್ಕ ಕೊಡುವಂತೆ ದೇಶವ್ಯಾಪಿ ಬೇಡಿಕೆ ಬಂದಿತ್ತು. ಪ್ರಧಾನಿಯೊಬ್ಬರು ತಮ್ಮ ಹೆಸರಿನಲ್ಲಿ ನಿಧಿ ಸ್ಧಾಪಿಸಿ ಅದಕ್ಕೆ ಲೆಕ್ಕಕೊಡುವುದಿಲ್ಲ ಎಂದು ಹೇಳುವ ಭಂಡತನ ಪ್ರದರ್ಶಿಸಿದ್ದು ಇದೇ ಮೊದಲಿರಬೇಕು. ಅತ್ತ ಪಿಎಂ-ಕೇರ್ಸ್ ವಿವಾದ ಮುಗಿಯುವ ಹೊತ್ತಿಗೆ ಪ್ರಧಾನಿ ಮೋದಿ ಅವರು ಪ್ರತಿನಿಧಿಸುವ ಪಕ್ಷವೇ ಆಡಳಿತದಲ್ಲಿರುವ ಕರ್ನಾಟಕದಲ್ಲೂ ಕೂಡಾ ಕರೋನಾ ಸೋಂಕಿನಲ್ಲೂ ಕೋಟಿ ಕೋಟಿ ಲೂಟಿ ಮಾಡುವ ಪ್ರಯತ್ನ ನಡೆದಿದೆ ಎಂಬ ಆರೋಪವನ್ನು ಪ್ರತಿಪಕ್ಷ ಕಾಂಗ್ರೆಸ್ ಮಾಡಿದೆ. ಲೆಕ್ಕ ಕೊಡಿ ಎಂಬ ಅಭಿಯಾನವನ್ನೂ ಪ್ರಾರಂಭಿಸಿದೆ. ಲೆಕ್ಕವಿಲ್ಲದಷ್ಟು ಸಚಿವರು ಲೆಕ್ಕಕೊಡಲು ಹೋಗಿ ಲೆಕ್ಕ ತಪ್ಪಿ, ತಬ್ಬಿಬ್ಬಾಗಿದ್ದಾರೆ. ಅತ್ತ ಕೇಂದ್ರದಲ್ಲಿ ಇತ್ತ ರಾಜ್ಯದಲ್ಲಿ ಕರೋನಾ ಸೋಂಕು ಅಧಿಕಾರದಲ್ಲಿರುವವರಿಗೆ ಹಣ ಮಾಡುವ ಆಗಾಧ ಅವಕಾಶಗಳನ್ನು ಸೃಷ್ಟಿ ಮಾಡಿಕೊಟ್ಟಂತಿದೆ. ಬೀದಿ ಬೀದಿಯಲ್ಲಿ ಸಹಾಯ ಬೇಡುತ್ತಿರುವ ಸೋಂಕಿತರ ಆಕ್ರಂದನದಲ್ಲಿ ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅಮಾನವೀಯತೆ ಮತ್ತು ವೈಫಲ್ಯತೆಗಳು ಅನುರಣಿಸುತ್ತಿವೆ.
ಅಂಬಾನಿಯ ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿಯ ಮಾರುಕಟ್ಟೆ ಬಂಡವಾಳ ಜಿಗಿತ
ಪ್ರಧಾನಿ ಮೋದಿ ಆಪ್ತರಾದ ಮುಖೇಶ್ ಅಂಬಾನಿ ಅವರ ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿಯು ಹೇಗೆ ಮೋದಿ ಸರ್ಕಾರದ ನೆರವಿನಿಂದ ತ್ವರಿತವಾಗಿ ತನ್ನ ವಹಿವಾಟು ಹೆಚ್ಚಿಸಿಕೊಂಡಿತು, ಮೋದಿ ಸರ್ಕರವು ಬಿಎಸ್ಎನ್ಎಲ್ ಬಲಿಕೊಟ್ಟು ರಿಲಯನ್ಸ್ ಜಿಯೋ ಮೂರೇ ವರ್ಷದಲ್ಲಿ ‘ನಂಬರ್ ಒನ್’ ಸ್ಥಾನಕ್ಕೆ ಜಿಗಿಯಲು ಹೇಗೆ ನೆರವಾಯಿತು ಎಂಬುದರ ಕುರಿತಂತೆ “ಪ್ರತಿಧ್ವನಿ” ಕಾಲಕಾಲಕ್ಕೆ ವರದಿ ಪ್ರಕಟಿಸುತ್ತಲೇ ಬರುತ್ತಿದೆ. ಈಗ ಪ್ರಸ್ತುತ ಅಂಬಾನಿ ಕಂಪನಿಯ ಮಾರುಕಟ್ಟೆ ಮೌಲ್ಯವು ಹೆಚ್ಚು ಕಮ್ಮಿ 15 ಲಕ್ಷ ಕೋಟಿ ರುಪಾಯಿ ಮುಟ್ಟಿದೆ. ಈ ಪ್ರಮಾಣದ ಮಾರುಕಟ್ಟೆ ಮೌಲ್ಯ ಸಾಧಿಸಿರುವ ಏಕೈಕ ಕಂಪನಿ ಇದಾಗಿದೆ. ಒಂದು ಕಾಲದಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಈಗ ಎರಡನೇ ಸ್ಥಾನದಲ್ಲಿದ್ದರೂ, ಅಂತರ ದೊಡ್ಡ ಮಟ್ಟದಲ್ಲಿದೆ.
ಕಂಪನಿಯನಲ್ಲಿ ಶೇ.50.09ರಷ್ಟು ಪಾಲನ್ನು ಹೊಂದಿರುವ ಮುಖೇಶ್ ಅಂಬಾನಿ ಈಗ ಜಗತ್ತಿನ ಐದನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿಯು ಜಗತ್ತಿನ ಅಗ್ರ 50 ಕಂಪನಿಗಳ ಪಟ್ಟಿಗೆ ಸೇರಿದೆ. ಮೋದಿ ನೆರವಿನಿಂದ ತ್ವರಿತಗತಿಯಲ್ಲಿ ‘ನಂಬರ್ ಒನ್’ ಸ್ಥಾನಕ್ಕೆರಿರುವ ರಿಲಯನ್ಸ್ ಜಿಯೋ ಕಂಪನಿಯಲ್ಲಿ ಫೇಸ್ಬುಕ್, ಗೂಗಲ್ ಸೇರಿದಂತೆ ಜಾಗತಿಕ ಮಟ್ಟದ 14 ಹೂಡಿಕೆದಾರರು ಪಾಲು ಖರೀದಿಸಿದ್ದಾರೆ. ಹೀಗಾಗಿ ತ್ವರಿತಗತಿಯಲ್ಲಿ ರಿಲಯನ್ಸ್ ಕಂಪನಿ ಷೇರು ಜಿಗಿದಿದ್ದು, ಮಾರುಕಟ್ಟೆ ಬಂಡವಾಳವು 15 ಲಕ್ಷ ಕೋಟಿ ಮುಟ್ಟಿದೆ.
ಪ್ರಧಾನಿ ಮೋದಿ ಸಾರ್ವಜನಿಕ ವಲಯದ ಕಂಪನಿಗಳನ್ನು ನಷ್ಟಕ್ಕೆ ತಳ್ಳಿ, ನಂತರ ಮಾರಾಟ ಮಾಡಿ, ಕೇಂದ್ರ ಸರ್ಕಾರಕ್ಕೆ ನಷ್ಟ ಮಾಡಿರಬಹುದು, ಏರ್ ಇಂಡಿಯಾ ಮಾರಾಟಕ್ಕೆ ಇಟ್ಟಿರಬಹುದು. ಆದರೆ, ತಮ್ಮ ಆಪ್ತ ಮುಖೇಶ್ ಅಂಬಾನಿಗಾಗಿ ಬಿಎಸ್ಎನ್ಎಲ್ ಅನ್ನೇ ಬಲಿಕೊಟ್ಟು, ಜಿಯೋ ಶ್ರೇಯೋಭಿವೃದ್ಧಿಗೆ ನೆರವಾಗಿದ್ದಾರೆ. ಹೀಗಾಗಿ ಕರೋನಾ ಸೋಂಕಿತರ ಸಂಖ್ಯೆ 15 ಲಕ್ಷ ದಾಟುವ ಹೊತ್ತಿನಲ್ಲಿ ಮುಖೇಶ್ ಅಂಬಾನಿಯ ಕಂಪನಿಯ ಮಾರುಕಟ್ಟೆ ಬಂಡವಾಳವು 15 ಲಕ್ಷ ಕೋಟಿ ರುಪಾಯಿ ದಾಟುತ್ತಿರುವುದು ಕಾಕಾತಾಳೀಯವೇ ಆಗಿರಬಹುದು. ಹಾಗಂತ ಒಂದಕ್ಕೊಂದು ಸಂಬಂಧವಿಲ್ಲ ಅಂದುಕೊಳ್ಳುವಂತಿಲ್ಲ ಏಕೆಂದರೆ, ಎರಡರ ಹಿಂದೆಯೂ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಪ್ರಧಾನಿ ಮೋದಿ ಕೈವಾಡ ಇದ್ದೇ ಇದೆ!
ಅರ್ಧಲಕ್ಷ ದಾಟಿದ ಚಿನ್ನದ ಬೆಲೆ
ಕರೋನಾ ಸಂಕಷ್ಟ ನಡುವೆಯೇ ಚಿನಿವಾರ ಪೇಟೆಯಲ್ಲಿ ಚಿನ್ನದ ಹೊಳಪು ಪ್ರಖರಗೊಂಡಿದೆ. 24 ಕ್ಯಾರೆಟ್ಟಿನ 10 ಗ್ರಾಮ್ ಚಿನ್ನದ ಬೆಲೆಯು ಅರ್ಧ ಲಕ್ಷ ದಾಟಿದೆ. ಶುಕ್ರವಾರ ಚಿನಿವಾರ ಪೇಟೆ ಅಂತ್ಯಗೊಂಡಾಗ ಚಿನ್ನದ ಬೆಲೆಯು 51,010 ರುಪಾಯಿಗಳಷ್ಟಿತ್ತು. ಸಾಮಾನ್ಯವಾಗಿ ಅಪರಂಜಿ ಚಿನ್ನವನ್ನು ಹೂಡಿಕೆ ಉದ್ದೇಶಕ್ಕೆ ಬಳಸಲಾಗುತ್ತದೆ. ಆಭರಣಕ್ಕಾಗಿ 22 ಮತ್ತು 18 ಕ್ಯಾರೆಟ್ ಚಿನ್ನಗಳನ್ನು ಬಳಸಲಾಗುತ್ತದೆ. ಕ್ಯಾರೆಟ್ ಕಡಮೆ ಇದ್ದಷ್ಟು ಚಿನ್ನದ ದರ ಕಡಮೆ ಇರುತ್ತದೆ. ಆದರೆ, ಅಪರಂಜಿ ದರವು ಜಾಗತಿಕವಾಗಿ ಚಿನ್ನದ ದರದ ಮಾನದಂಡವಾಗಿರುತ್ತದೆ. ಕಳೆದ ಒಂದು ವರ್ಷದಲ್ಲಿ ಚಿನ್ನದ ದರವು ಶೇ.70 ರಷ್ಟು ಏರಿಕೆ ಕಂಡಿದೆ. ಜಾಗತಿಕ ಹೂಡಿಕೆದಾರರಿಗೆ ಚಿನ್ನ ಭಾರಿಪ್ರಮಾಣದಲ್ಲಿ ಲಾಭ ತಂದುಕೊಟ್ಟಿದೆ. ಕುಸಿಯುತ್ತಿರುವ ಕಚ್ಚಾ ತೈಲದರ, ಕಚ್ಚಾ ವಸ್ತುಗಳು, ಕರೋನಾ ಸೊಂಕಿನಿಂದಾಗಿ ಕುಸಿಯುತ್ತಿರುವ ಉತ್ಪಾದನೆ, ಆರ್ಥಿಕ ಹಿನ್ನಡೆಯ ಹಿನ್ನೆಲೆಯಲ್ಲಿ ಅಮೆರಿಕದ ಡಾಲರ್ ಸೇರಿದಂತೆ ಪ್ರಮುಖ ದೇಶಗಳ ಕರೆನ್ಸಿಗಳ ಬೇಡಿಕೆಯು ತಗ್ಗಿದ್ದು, ಪರ್ಯಾಯವಾಗಿರುವ ಚಿನ್ನದ ಬೆಲೆ ಏರುತ್ತಲೇ ಇದೆ. ಪ್ರಮುಖ ದೇಶಗಳು ತಮ್ಮ ಚಿನ್ನದ ಸಂಗ್ರಹವನ್ನು ಹೆಚ್ಚಿಸಿಕೊಳ್ಳುತ್ತಿವೆ.
ಮೋದಿ ಆಡಳಿತದ ಅವಧಿಯಲ್ಲಿ ರುಪಾಯಿ ಮೌಲ್ಯವು ಸತತ ಕುಸಿತ ದಾಖಲಿಸುತ್ತಾ ಬಂದಿದೆ. 2014 ಮೇ 19 ರಂದು ಡಾಲರ್ ವಿರುದ್ಧ ರುಪಾಯಿ ಮೌಲ್ಯವು 58.65 ರುಪಾಯಿ ಇದ್ದದ್ದು, ನಂತರ ಸತತವಾಗಿ ಕುಸಿಯುತ್ತಾ ಬಂದು 76 ರುಪಾಯಿಗೆ ಕುಸಿದಿದೆ. ಏಪ್ರಿಲ್ 21 ರಂದು 76.94ರ ಮಟ್ಟಕ್ಕೆ ಕುಸಿದು ಸರ್ವಕಾಲಿಕ ಕನಿಷ್ಠ ಮಟ್ಟ ದಾಖಲಿಸಿದೆ.
ಸಾಮಾನ್ಯವಾಗಿ ಒಂದು ದೇಶದ ಕರೆನ್ಸಿ ಮೌಲ್ಯ ಕುಸಿಯುತ್ತಿದೆ ಎಂದರೆ ಆ ದೇಶದ ಆರ್ಥಿಕ ನಿರ್ವಹಣೆ ಉತ್ತಮವಾಗಿಲ್ಲ ಎಂದೇ ಆರ್ಥ. ಮೋದಿ ಸರ್ಕಾರದ ಅವಧಿಯಲ್ಲಿ ಎಂದೂ ಭಾರತದ ರುಪಾಯಿ ಅಮೆರಿಕ ಡಾಲರ್ ವಿರುದ್ಧ ಏರಿಕೆ ದಾಖಲಿಸಲೇ ಇಲ್ಲಾ. ಸತತ ಕುಸಿಯುತ್ತಲೇ ಬರುತ್ತಿದೆ. ಪ್ರಸ್ತುತ ಪ್ರತಿ ಡಾಲರ್ ಗೆ 75 ರುಪಾಯಿ ಆಜುಬಾಜಿನಲ್ಲಿದೆ. ಕರೋನಾ ಸೋಂಕಿನಿಂದಾಗಿ ಅಮೆರಿಕಾ ಡಾಲರ್ ಮೇಲಿನ ಬೇಡಿಕೆಯೂ ಕುಸಿದ ಪರಿಣಾಮ ರುಪಾಯಿ 75ರ ಆಜುಬಾಜಿನಲ್ಲಿ ವಹಿವಾಟಾಗುತ್ತಿದೆ. ಮುಂದಿನ ವರ್ಷ 80 ಡಾಲರ್ ಮುಟ್ಟುವ ಅಥವಾ ದಾಟುವ ಅಂದಾಜು ಮಾರುಕಟ್ಟೆ ತಜ್ಞರದ್ದಾಗಿದೆ. ಚಿನ್ನದ ದರ ಏರಿತೆಂದು ಹಿಗ್ಗುವ ಹೊತ್ತಲ್ಲ, ಇದು ರುಪಾಯಿ ಮೌಲ್ಯ ಕುಸಿಯುತ್ತಿರುವ ಬಗ್ಗೆ ಚಿಂತಿಸುವ ಹೊತ್ತು!