ಕೇಂದ್ರ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಇಂದು ಪ್ರಧಾನಿ ಮೋದಿಯನ್ನು ಭೇಟಿಯಾಗಿದ್ದಾರೆ. ಪ್ರಧಾನಿ ಮತ್ತು ಹಣಕಾಸು ಸಚಿವರ ಭೇಟಿ ಬಹಳ ಮಹತ್ವ ಪಡೆದುಕೊಂಡಿದೆ. ಕುತೂಹಲವನ್ನೂ ಹುಟ್ಟಿಸಿದೆ. ಎರಡನೇ ಹಂತದ ಲಾಕ್‌ಡೌನ್ ನಿರ್ವಹಣೆಗೆ ವಿಶೇಷ ಪ್ಯಾಕೇಜ್ ಘೋಷಿಸಬಹುದೆಂಬ ನಿರೀಕ್ಷೆಗಳೂ ಇವೆ. ಮೊದಲ ಹಂತದ ಲಾಕ್‌ಡೌನ್ ಘೋಷಣೆ ಬಳಿಕ 1.70 ಕೋಟಿ ರೂಪಾಯಿ ಮೌಲ್ಯದ ವಿಶೇಷ ಪ್ಯಾಕೇಜ್ ನೀಡಲಾಗಿತ್ತು. ಹಾಗಾಗಿ ಈಗಲೂ ಇನ್ನೊಂದು ಪ್ಯಾಕೇಜ್ ನೀಡಬಹುದೆಂಬ ನಿರೀಕ್ಷೆಗಳಿವೆ.
ಪ್ರಧಾನ ಮಂತ್ರಿ ಮೋದಿ ಎರಡನೇ ಹಂತದ ಲಾಕ್‌ಡೌನ್ ಘೋಷಣೆ ಮಾಡುವ ಸಂದರ್ಭದಲ್ಲಿ ‘ಇದರಿಂದ ಬಹಳಷ್ಟು ಜನಕ್ಕೆ ತೊಂದರೆ ಆಗಲಿದೆ. ನಮ್ಮ ನಡುವಿನ ಬಡವರು ಹಸಿವಿನಿಂದ ಸಾಯುವಂತಾಗಬಾರದು. ಹಾಗೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಅವರಿಗೆ ನೆರವು ನೀಡಿ’ ಎಂದು ಮನವಿ ಮಾಡಿಕೊಂಡಿದ್ದರು. ಜೊತೆಗೆ ಪ್ರಧಾನ ಮಂತ್ರಿಗಳ ಗರೀಬ್ ಕಲ್ಯಾಣ್ ಯೋಜನೆಯಿಂದ ಬಡವರಿಗೆ ನೆರವು ನೀಡಲಾಗುವುದು ಎಂಬ ಭರವಸೆ ನೀಡಿದ್ದರು. ಮೊದಲ ಹಂತದಲ್ಲಿ ಘೋಷಣೆ ಮಾಡಿದ ಪ್ಯಾಕೇಜ್ ಕೂಡ ಪ್ರಧಾನ ಮಂತ್ರಿಗಳ ಗರೀಬ್ ಕಲ್ಯಾಣ್ ಯೋಜನೆಯಡಿಯಲ್ಲೇ ಬರಲಿದೆ. ಆದುದರಿಂದ ಈಗಲೂ ಇದೇ ಯೋಜನೆಯಡಿ ಇನ್ನೊಂದು ಪ್ಯಾಕೇಜ್ ನಿರೀಕ್ಷೆ ಮಾಡಲಾಗಿದೆ.
ಮೊದಲ ಪ್ಯಾಕೇಜ್ ವ್ಯಾಪ್ತಿ ಕಿರಿದಾಗಿತ್ತು. ಮೊದಲ ಪ್ಯಾಕ್‌ಜ್‌ನಲ್ಲಿ ದಿಢೀರನೇ ಲಾಕ್‌ಡೌನ್ ಘೋಷಿಸಿದ್ದರಿಂದ ತತ್‌ಕ್ಷಣಕ್ಕೆ ತೊಂದರೆಗೊಳಗಾದ ಬಡವರು, ಮಧ್ಯಮ ವರ್ಗದವರು ಮತ್ತು ಕಾರ್ಮಿಕರ ಬಗ್ಗೆ ಮಾತ್ರ ಗಮನಹರಿಸಲಾಗಿತ್ತು. ಬಡವರಿಗೆ ಪ್ರೋತ್ಸಾಹಧನ ನೀಡಲು ನಿಶ್ಚಯಿಸಲಾಗಿತ್ತು. ರೈತರಿಗೆ ಫಸಲ್ ಭೀಮಾ ಯೋಜನೆಯ ವಾರ್ಷಿಕ ಹಣವನ್ನು ಸ್ವಲ್ಪ ಹೆಚ್ಚು ಮಾಡಿ ತ್ವರಿತವಾಗಿ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗಿತ್ತು. ಕಾರ್ಮಿಕರ ಪ್ರಾವಿಡೆಂಟ್ ಫಂಡ್ ಅನ್ನು ಸರ್ಕಾರವೇ ತುಂಬಿತ್ತು. ಬಿಪಿಎಲ್ ಕಾರ್ಡ್‌ದಾರರಿಗೆ ತಕ್ಷಣವೇ ಆಹಾರ ಸಾಮಗ್ರಿಗಳನ್ನು ನೀಡಲಾಗಿತ್ತು. ಮಧ್ಯಮ ವರ್ಗದವರಿಗೆ ಗ್ಯಾಸ್ ಸಿಲಿಂಡರ್ ನೀಡಲು ಆದೇಶಿಸಲಾಗಿತ್ತು. ಹಿರಿಯ ನಾಗರಿಕರು, ವಿಧವೆಯರು, ಒಂಟಿ ಮಹಿಳೆಯರು ಮತ್ತು ಅಂಗವಿಕಲರಿಗೆ ಮಾಸಾಶನ ಬಿಡುಗಡೆ ಮಾಡಲಾಗಿತ್ತು. ಆದರೆ ಈ ಬಾರಿಯ ಪ್ಯಾಕೇಜ್ ವ್ಯಾಪ್ತಿ ದೊಡ್ಡದಾಗಬೇಕಿದೆ.
ಹೇಗೆಂದರೆ, ಲಾಕ್‌ಡೌನ್‌ನಿಂದ ತೀವ್ರ ತೊಂದರೆ ಅನುಭವಿಸುತ್ತಿರುವ ವಲಸಿಗರು, ದಿನಗೂಲಿ ನೌಕರರು, ರಸ್ತೆಬದಿ ಮಾರಾಟಗಾರರು, ರೈತರೂ ಸೇರಿದಂತೆ ಎಲ್ಲಾ ರೀತಿಯ ಬಡವರಿಗೆ ಇನ್ನೂ ಒಂದು ಸಲ ಪ್ರೋತ್ಸಾಹಧನ ಕೊಡುವ ಮೂಲಕ ನೆರವು ನೀಡಬೇಕು. ಹಣ ಕೊಡುವುದು ಮಾತ್ರವಲ್ಲದೆ ‘ಅವತ್ತಿನ ಅನ್ನವನ್ನು ಅವತ್ತೇ ದುಡಿದು ತಿನ್ನುತ್ತಿದ್ದ’ ಈ ವರ್ಗಕ್ಕೆ ಉದ್ಯೋಗವಕಾಶಗಳನ್ನೂ ತೆರದಿಡಬೇಕು. ಏಪ್ರಿಲ್ 20ರ ಬಳಿಕ ಹಂತಹಂತವಾಗಿ ಲಾಕ್‌ಡೌನ್ ನಿಯಮಾವಳಿಗಳನ್ನು ಸಡಿಲಿಸಿದಾಗ ಈ ವರ್ಗಕ್ಕೆ ದುಡಿಯಲು ಅವಕಾಶ ನೀಡಬೇಕು. ಇದಕ್ಕೆ ಪೂರಕವಾಗಿ ಪ್ಯಾಕೇಜ್ ರೂಪಿಸಬೇಕು. ಈ ಹಿನ್ನೆಲೆಯಲ್ಲಿ ಅತಿಸಣ್ಣ, ಸಣ್ಣ, ಮಧ್ಯಮ ಮಟ್ಟದ ಕೈಗಾರಿಕೆಗಳೆಲ್ಲವೂ ಕಾರ್ಯಾರಂಭವಾಗುವಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ಮೊದಲ ಹಂತದ ಲಾಕ್‌ಡೌನ್ ವೇಳೆ ಉತ್ಪಾದನೆ ಇಲ್ಲದೆ ಕಂಗೆಟ್ಟಿರುವ ಈ ಕೈಗಾರಿಕಾ ಘಟಕಗಳಿಗೆ ಎರಡನೇ ಹಂತದ ವೇಳೆ (ನೀತಿ-ನಿಯಮಗಳಲ್ಲಿ ರಿಯಾಯಿತಿ, ವ್ಯಾಪಾರ ವಹಿವಾಟಿಗೆ ವಿನಾಯಿತಿ, ಸಾಲ ಸೌಲಭ್ಯ, ಗ್ಯಾರಂಟಿ ನೀಡುವ ಮುಖಾಂತರ) ಹುರಿದುಂಬಿಸುವ ಕೆಲಸ ಆಗಬೇಕು.

ಲಾಕ್‌ಡೌನ್ ಸಮಯ ಬಹಳ ಸಂಕಷ್ಟದಿಂದ ಕೂಡಿರುವುದರಿಂದ ಕಂಪನಿಗಳು ಕಾರ್ಮಿಕರನ್ನು ಕೆಲಸದಿಂದ ತೆಗೆಯಬಾರದೆಂದು ಮತ್ತು ವೇತನ ಕಡಿತಗೊಳಿಸಬಾರದೆಂದು ಪ್ರಧಾನಿ ಮೋದಿ ಮತ್ತು ಕೇಂದ್ರ ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಇಬ್ಬರೂ ಸ್ಪಷ್ಟಪಡಿಸಿದ್ದಾರೆ. ಕಾರ್ಮಿಕರ ಹಿತದೃಷ್ಟಿಯಿಂದ ಇದು ಬಹಳ ಒಳ್ಳೆಯ ಮತ್ತು ಸೂಕ್ತವಾದ ನಿರ್ಣಯ. ಆದರೆ ನೋಟು ಅಮಾನ್ಯೀಕರಣ ಮತ್ತು ಜಿಎಸ್‌ಟಿ ಪದ್ಧತಿ ಜಾರಿಗೆ ಬಂದಮೇಲೆ ನಿರೀಕ್ಷಿತ ವ್ಯವಹಾರ ಇಲ್ಲದೆ ಕಂಗೆಟ್ಟಿರುವ ಕೈಗಾರಿಕೆಗಳಿಗೆ ಇದು ಭರಿಸಲಾರದ ಹೊರೆಯಾಗಿದೆ. ಕರೋನಾ ಪರಿಸ್ಥಿತಿಯ ಹೊರತಾಗಿಯೂ ವೆಚ್ಛ ತಗ್ಗಿಸುವ ಕೆಲಸಕ್ಕೆ ಕೈಗಾರಿಕೆಗಳು ಕೈಹಾಕಿದ್ದವು. ಆದರೀಗ ಕೇಂದ್ರ ಸರ್ಕಾರದ ಆದೇಶದಿಂದಾಗಿ ಕಾರ್ಮಿಕರನ್ನು ಕೆಲಸದಿಂದ ತೆಗೆಯಲೂ ಆಗದ, ಅವರಿಗೆ ಸಂಬಳ ಕೊಡಲೂ ಆಗದ ಸ್ಥಿತಿ ತಲುಪಿವೆ. ಈ ಸಂಕೀರ್ಣ ಸಮಸ್ಯೆಗೆ ಕೇಂದ್ರ ಸರ್ಕಾರವೇ ಪರಿಹಾರ ಹುಡುಕಬೇಕಾಗಿದೆ. ಹೊಸದಾಗಿ ಘೋಷಿಸುವ ಪ್ಯಾಕೇಜ್‌ನಲ್ಲಿ ಕೈಗಾರಿಕೆಗಳಿಗೆ ಪೂರಕವಾದ ಕ್ರಮಗಳನ್ನು ಕೈಗೊಂಡರೆ ಇದು ಕಾರ್ಮಿಕರಿಗೂ ಅನುಕೂಲವಾಗಲಿದೆ.
ಲಾಕ್‌ಡೌನ್‌ನಿಂದಾಗಿ ದೇಶದ ಒಟ್ಟೂ ಉತ್ಪಾದನೆಯ ಶೇಕಡ 80ರಷ್ಟು ಸ್ಥಗಿತಗೊಂಡಿದೆ ಎಂದು ಹೇಳಲಾಗುತ್ತಿದೆ. ಸದ್ಯದ ಈ ನಿರುತ್ಪಾದನೆಯು ಭವಿಷ್ಯದಲ್ಲಿ ಆರ್ಥಿಕತೆ ಮೇಲೆ ಸುಧಾರಿಸಿಕೊಳ್ಳಲಾರದಂತಹ ಪೆಟ್ಟು ನೀಡಲಿದೆ. ಈಗಾಗಲೇ ದೇಶ 22 ದಿನ ನಿರುತ್ಪಾದನಾ ಸ್ಥಿತಿಯಲ್ಲೇ ಸಾಗಿದೆ. ಏಪ್ರಿಲ್ 20ರವರೆಗೂ ಹೀಗೆ ಸಾಗಲಿದೆ. ಏಪ್ರಿಲ್ 20ರ ಬಳಿಕವಾದರೂ ಉತ್ಪಾದನಾ ವಲಯ ಸಕ್ರೀಯಗೊಳ್ಳಬೇಕಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಿರುವುದರಿಂದ ಮತ್ತು ಲಾಕ್‌ಡೌನ್ ನಿಯಮಗಳು ಇರುವುದರಿಂದ ಏಪ್ರಿಲ್ 20ರ ಬಳಿಕವೂ ಏಕಾಏಕಿ ಉತ್ಪಾದನೆಯ ಪ್ರಮಾಣ ಮೊದಲಿನಷ್ಟು ಆಗಲು ಸಾಧ್ಯವಿಲ್ಲ. ಕನಿಷ್ಟ ಶೇಕಡಾ 50ರಷ್ಟು ಆಗುವಂತೆ ನೋಡಿಕೊಳ್ಳಬೇಕು ಎಂದು ಕೈಗಾರಿಕಾ ಮತ್ತು ಉತ್ಪದನಾ ವಲಯ ಯೋಚಿಸುತ್ತಿದೆ. ಇದು ಕೂಡ ಕೇಂದ್ರ ಸರ್ಕಾರ ನೀಡುವ ನೆರವನ್ನು ಆಧರಿಸಿರುತ್ತದೆ.
ಇದೇ ಮಾದರಿಯಲ್ಲಿ ಕೃಷಿ ಕ್ಷೇತ್ರವನ್ನೂ ಗಂಭೀರವಾಗಿ ಪರಿಗಣಿಸಬೇಕಾಗಿದೆ. ರೈತರೀಗ ಎರಡು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಒಂದು, ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲಾಗದೆ, ಮಾರುಕಟ್ಟೆಗೆ ಕೊಂಡೊಯ್ದರೂ ಸೂಕ್ತ ಬೆಲೆ ಇಲ್ಲದೆ. ಇನ್ನೊಂದು, ಹೊಸದಾಗಿ ಬಿತ್ತನೆ ಕಾರ್ಯ ಮಾಡಲು ಬೀಜ, ರಸಗೊಬ್ಬರ ಮತ್ತು ಔಷಧಿಗಳು ಸಿಗದೆ. ಉತ್ತರ ಪ್ರದೇಶ ಸರ್ಕಾರ ಬಾಯಿಮಾತಿಗೆ ‘ರೈತರ ಎಲ್ಲಾ ಬೆಳೆಗಳನ್ನು ಕನಿಷ್ಟ ಬೆಂಬಲ ಬೆಲೆ ಕೊಟ್ಟು ಸರ್ಕಾರವೇ ಖರೀದಿಸಲಿದೆ’ ಎಂದು ಹೇಳಿದೆ. ಆದರೆ ಅದು ವಾಸ್ತವದಲ್ಲಿ ಸಾಧ್ಯವಾಗುತ್ತಿಲ್ಲ. ಬೇರೆ ರಾಜ್ಯಗಳಲ್ಲಿ ಇಂತಹ ಮಹತ್ವದ ನಿರ್ಧಾರ ಬಾಯಿಮಾತಿಗೂ ಸಾಧ್ಯವಾಗಿಲ್ಲ. ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದಗೌಡ ‘ಇಡೀ ದೇಶದಲ್ಲಿ ರಸಗೊಬ್ಬರದ ಸಮಸ್ಯೆ ಇಲ್ಲ’ ಎಂದು ನಗುನಗುತ್ತಾ ಹೇಳಿದ್ದಾರೆ. ಆದರದು ಸರ್ಕಾರಿ ಉಗ್ರಾಣದಿಂದ ರೈತರ ಜಮೀನಿಗೆ ತಲುಪಲು ನೂರಾರು ರೀತಿಯ ಅಡ್ಡಿ ಆತಂಕಗಳಿವೆ. ಜೊತೆಗೆ ರೈತರಿಗೆ ಬೀಜ, ರಸಗೊಬ್ಬರ, ಔಷಧಿಗಳನ್ನು ಕೊಳ್ಳಲು ಹಣದ ಸಹಯ ಬೇಕಾಗಿದೆ. ಮೊದಲೆಲ್ಲಾ ಸಹಕಾರಿ ಬ್ಯಾಂಕುಗಳಿಂದ ಸಿಗುತ್ತಿದ್ದ ಸಾಲದ ಪ್ರಮಾಣ ನೋಟು ಅಮಾನ್ಯೀಕರಣದ ಬಳಿಕ ಕಡಿಮೆ ಆಗಿದೆ. ಜನರಲ್ಲೂ ಹಣದ ಲಿಕ್ವಿಡಿಟಿ ಇಲ್ಲವಾಗಿದೆ. ಆದುದರಿಂದ ಕೃಷಿ ವಲಯ ಕೂಡ ಸರ್ಕಾರಗಳು ಸಹಾಯಕ್ಕೆ ಧಾವಿಸಬಹುದು ಎಂಬ ನಿರೀಕ್ಷೆ ಇಟ್ಟುಕೊಂಡಿವೆ. ಕೇಂದ್ರ ಸರ್ಕಾರ ತಮಗೆ ಪೂರಕವಾದ ಇನ್ನೊಂದು ಪ್ಯಾಕೇಜ್ ಘೋಷಿಸಬಹುದೆಂದ ನಿರೀಕ್ಷೆಯನ್ನು ಹೊಂದಿದೆ.

ಕೃಷಿ ವಲಯದ ಬಿಕ್ಕಟ್ಟು ಮುಂದುವರೆದರೆ ಮುಂದೆ ದೇಶದಲ್ಲಿ ಆಹಾರದ ಕೊರತೆಯೂ ನಿರ್ಮಾಣವಾಗಲಿದೆ. ಈ ಕೃಷಿ ಬಿಕ್ಕಟ್ಟಿನ ಬಗ್ಗೆ, ಕೈಗಾರಿಕಾ ವಲಯದ ಉತ್ಪಾದನೆ ಕುಸಿಯುತ್ತಿರುವ ಬಗ್ಗೆ ಮತ್ತು ಉತ್ಪಾದನೆ ಕುಸಿಯುತ್ತಿರುವುದರಿಂದ ಆರ್ಥಿಕತೆಯೂ ಕುಸಿಯುತ್ತಿರುವ ಬಗ್ಗೆ ನಿರ್ಮಲಾ ಸೀತಾರಾಮನ್ ಪ್ರಧಾನಿ ಜೊತೆ ಚರ್ಚಿಸಿದ್ದಾರೆ. ಎಲ್ಲಾ ಕಷ್ಟಗಳ ನಡುವೆಯೂ ಉತ್ಪಾದನಾ ವಲಯಕ್ಕೆ ಆದ್ಯತೆ ನೀಡಲೇಬೇಕಾದ ಅನಿವಾರ್ಯವಿದೆ ಎಂಬ ಬಗ್ಗೆ ಪ್ರಧಾನಿಗೆ ಮಾಹಿತಿ ನೀಡಿದ್ದಾರೆ ಎಂದು ಕೇಂದ್ರ ಹಣಕಾಸು ಇಲಾಖೆಯ ಮೂಲಗಳು ತಿಳಿಸುತ್ತಿವೆ. ಒಟ್ಟಿನಲ್ಲಿ ಕೃಷಿ, ಕೈಗಾರಿಕೆ ಸೇರಿದಂತೆ ಅದಕ್ಕೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಂಬಂಧಿಸಿದ ಎಲ್ಲರೂ, ವಿಶೇಷವಾಗಿ ಬಡವರು ಮತ್ತು ಮಧ್ಯಮ ವರ್ಗ ಇನ್ನೊಂದು ಪ್ಯಾಕೇಜ್ ನಿರೀಕ್ಷೆಯಲ್ಲಿದೆ. ಜೊತೆಗೆ ಮೊದಲಿಗಿಂತಲೂ ಪರಿಣಾಮಕಾರಿಯಾದ ಪ್ಯಾಕೇಜ್ ನಿರೀಕ್ಷೆಯಲ್ಲಿದೆ.