– ನ್ಯಾಯಾಲಯಕ್ಕೆ ಸಿಬಿಐನಿಂದ ಬಿ ರಿಪೋರ್ಟ್ ಸಲ್ಲಿಕೆ
– ಈ ಇಬ್ಬರು ಅಧಿಕಾರಿಗಳಿಗೆ ಕ್ಲೀನ್ ಚಿಟ್ ನೀಡಿದ ಸಿಬಿಐ
– ಇವರ ವಿರುದ್ಧ ಗಣಪತಿ ಮಾಡಿರುವ ಆರೋಪಗಳೆಲ್ಲಾ ನಿರಾಧಾರ
– ಕಿರುಕುಳ ನೀಡಿರುವ ಬಗ್ಗೆ ಒಂದೇ ಒಂದು ನಿದರ್ಶನವೂ ಸಿಕ್ಕಿಲ್ಲ
– ಪ್ರತಿಧ್ವನಿ ಬಳಿ ಇದೆ ಸಿಬಿಐ ಸಲ್ಲಿಸಿದ ಬಿ ರಿಪೋರ್ಟ್
ಡಿವೈಎಸ್ ಪಿ ಗಣಪತಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಮಡಿಕೇರಿಯ ಸುದ್ದಿ ಚಾನೆಲ್ ವೊಂದಕ್ಕೆ ನೀಡಿದ್ದ ಸಂದರ್ಶನ ಬಿತ್ತರವಾಗುತ್ತಿದ್ದಂತೆಯೇ ರಾಜ್ಯಾದ್ಯಂತ ತೀವ್ರ ಸಂಚಲನ ಉಂಟಾಗಿತ್ತು. ಆಗ ಪ್ರತಿಪಕ್ಷದ ಸ್ಥಾನದಲ್ಲಿದ್ದ ಬಿಜೆಪಿ ಗಣಪತಿ ಸಾವಿಗೆ ಸರ್ಕಾರ, ಗೃಹ ಸಚಿವ ಕೆ.ಜೆ.ಜಾರ್ಜ್, ಇಬ್ಬರು ಪೊಲೀಸ್ ಅಧಿಕಾರಿಗಳೇ ನೇರ ಹೊಣೆ ಎಂದು ಆರೋಪಿಸುತ್ತಾ ಇದರ ರಾಜಕೀಯ ಲಾಭ ಪಡೆಯಲು ಹವಣಿಸಿತ್ತು.
ಆದರೆ, ಈ ಬಗ್ಗೆ ಸಿಬಿಐ ತನಿಖೆಯನ್ನು ನಡೆಸಿ ಮಡಿಕೇರಿಯ ನ್ಯಾಯಾಲಯಕ್ಕೆ ತನ್ನ ವರದಿಯನ್ನು ನೀಡಿದೆ. ಅದರಲ್ಲಿ, ಗಣಪತಿ ಆತ್ಮಹತ್ಯೆ ಪ್ರಕರಣಕ್ಕೂ ಇಬ್ಬರು ಐಪಿಎಸ್ ಅಧಿಕಾರಿಗಳಾದ ಮೊಹಾಂತಿ ಮತ್ತು ಪ್ರಸಾದ್ ಅವರಿಗೂ ಯಾವುದೇ ಸಂಬಂಧವಿಲ್ಲ. ಗಣಪತಿಯವರು ಈ ಇಬ್ಬರು ಅಧಿಕಾರಿಗಳ ವಿರುದ್ಧ ವಿನಾ ಕಾರಣ ಆರೋಪಗಳನ್ನು ಮಾಡಿದ್ದಾರೆ. ಈ ಆರೋಪಗಳ ಬಗ್ಗೆ ಕೂಲಂಕುಶವಾಗಿ ತನಿಖೆ ನಡೆಸಿದ್ದು, ಈ ಆರೋಪಗಳೆಲ್ಲಾ ಸುಳ್ಳು ಎಂಬುದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ರದ್ದು ಮಾಡಬೇಕೆಂದು ಸಿಬಿಐ ತನ್ನ ವರದಿಯಲ್ಲಿ ನ್ಯಾಯಾಲಯಕ್ಕೆ ಮನವಿ ಮಾಡಿದೆ.
ಪ್ರಕರಣದಲ್ಲಿ ಮೊದಲ ಆರೋಪಿಯಾಗಿ ಎಫ್ಐಆರ್ ದಾಖಲು ಮಾಡುತ್ತಿದ್ದಂತೆ ಜಾರ್ಜ್ ಗೃಹ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ಹಲವು ಹೋರಾಟಗಳು ನಡೆದು ಗಣಪತಿ ಕುಟುಂಬದ ಸದಸ್ಯರು ನ್ಯಾಯಕ್ಕಾಗಿ ಮಡಿಕೇರಿ ನ್ಯಾಯಾಲಯ, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಬಾಗಿಲು ತಟ್ಟಿದ್ದರು.
ಸಿಐಡಿ ಪೊಲೀಸರು ತನಿಖೆ ನಡೆಸಿ ಬಿ ರಿಪೋರ್ಟ್ ಹಾಕಿದ್ದರು. ಆದರೆ, ಗಣಪತಿ ಅವರ ತಂದೆ ಮತ್ತು ಸೋದರ ಸುಪ್ರೀಂಕೋರ್ಟ್ ಮೊರೆ ಹೋಗಿ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಮಾಡಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದ ಸಿಬಿಐ ತನ್ನ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ. ನಿರೀಕ್ಷೆಯಂತೆಯೇ ಮಾಜಿ ಗೃಹ ಸಚಿವ ಕೆ.ಜೆ.ಜಾರ್ಜ್ ಮತ್ತು ಇಬ್ಬರು ಹಿರಿಯ ಐಪಿಎಸ್ ಅಧಿಕಾರಿಗಳಾದ ಪ್ರಣಬ್ ಮೊಹಾಂತಿ ಹಾಗೂ ಪ್ರಸಾದ್ ಅವರು ಈ ಪ್ರಕರಣದಲ್ಲಿ ಯಾವುದೇ ವಿಧದಲ್ಲೂ ತಪ್ಪಿತಸ್ಥರಲ್ಲ ಎಂದು ಷರಾ ಬರೆದಿದೆ.
ಗಣಪತಿ ಅವರು ನನಗೆ ಜಾರ್ಜ್ ಮತ್ತು ಹಿರಿಯ ಐಪಿಎಸ್ ಅಧಿಕಾರಿಗಳಾದ ಮೊಹಾಂತಿ ಮತ್ತು ಪ್ರಸಾದ್ ಅವರು ಕಿರುಕುಳ ನೀಡುತ್ತಿದ್ದಾರೆ, ನಾನು ಮಾನಸಿಕವಾಗಿ ಜರ್ಝರಿತನಾಗಿದ್ದೇನೆ. ಒಂದು ವೇಳೆ ನನ್ನ ಸಾವಾದರೆ ಅದಕ್ಕೆ ಆ ಮೂವರೇ ಕಾರಣ ಎಂದು ಮಡಿಕೇರಿಯ ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡಿ ಲಾಡ್ಜ್ ವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಸಿಬಿಐ ಮಡಿಕೇರಿಯ ನ್ಯಾಯಾಲಯಕ್ಕೆ ಸಲ್ಲಿಸಿರುವ ತನ್ನ ತನಿಖೆಯ ಅಂತಿಮ ವರದಿಯ ಪ್ರತಿ `ಪ್ರತಿಧ್ವನಿ’ಗೆ ಲಭ್ಯವಿದ್ದು, ಅದರ ಸಂಪೂರ್ಣ ವಿವರ ಇಲ್ಲಿದೆ.
ಪ್ರಣಬ್ ಮೊಹಾಂತಿ ವಿರುದ್ಧ ಗಣಪತಿ ಮಾಡಿದ್ದ ಆರೋಪಗಳು:
ನಾನು ಬೆಂಗಳೂರಿನ ಮಡಿವಾಳ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದ ವೇಳೆ ಮೊಹಾಂತಿಯವರು ಹೆಚ್ಚು ಹಣ ನೀಡುವಂತೆ ಒತ್ತಡ ಹೇರುತ್ತಿದ್ದರು. ಅಲ್ಲದೇ, ಮೊಹಾಂತಿಯವರು ನನ್ನ ಗೌರವ ಮತ್ತು ವೃತ್ತಿಗೆ ಧಕ್ಕೆ ತರುವ ರೀತಿಯಲ್ಲಿ ಮಾಧ್ಯಮವೊಂದರಲ್ಲಿ ನನ್ನ ವಿರುದ್ಧ ಸುದ್ದಿ ಪ್ರಕಟವಾಗುವಂತೆ ನೋಡಿಕೊಂಡಿದ್ದರು. ಮೊಹಾಂತಿಯವರು ಅಂದಿನ ಗೃಹಮಂತ್ರಿಯಾಗಿದ್ದ ಕೆ.ಜೆ.ಜಾರ್ಜ್ ಅವರಿಗೆ ಆಪ್ತರಾಗಿದ್ದರು. ಇದೇ ಜಾರ್ಜ್ ಅವರ ಪ್ರಭಾವದಿಂದ ಲೋಕಾಯುಕ್ತಕ್ಕೆ ವರ್ಗಾ ಮಾಡಿಸಿಕೊಂಡರು. ಅಲ್ಲಿ ಇಬ್ಬರೂ ಸೇರಿ ಪ್ರಕರಣಗಳನ್ನು ಅಡ್ಜಸ್ಟ್ ಮಾಡಿಕೊಳ್ಳುತ್ತಿದ್ದರು ಮತ್ತು ನನ್ನಂತಹ ಹಲವಾರು ಉತ್ತಮ ಅಧಿಕಾರಿಗಳಿಗೆ ಕಿರುಕುಳ ನೀಡುತ್ತಿದ್ದರು. ಹೀಗಾಗಿ ಅವರ ವಿರುದ್ಧ ಕ್ರಮ ಜರುಗಿಸಬೇಕು.
ಸಿಬಿಐ ತನಿಖಾ ವರದಿ ಹೇಳುವುದೇನು?
ಗಣಪತಿಯವರು 2013 ರಲ್ಲಿ ಮಡಿವಾಳ ಠಾಣೆಯಲ್ಲಿ ಇನ್ಸ್ ಪೆಕ್ಟರ್ ಆಗಿರುತ್ತಾರೆ. ಎ2 ಆಗಿರುವ ಪ್ರಣಬ್ ಮೊಹಾಂತಿ ಅವರು ಕ್ರೈಂ ಬ್ರ್ಯಾಂಚಿನ ಜಂಟಿ ಆಯುಕ್ತರಾಗಿರುತ್ತಾರೆ. ಆದರೆ, ಗಣಪತಿಯವರು ಮೂರು ವರ್ಷಗಳ ನಂತರ ಹಣಕ್ಕಾಗಿ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿದ್ದಾರೆ. ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಗಣಪತಿ ಅವರು ಮೊಹಾಂತಿ ಅವರ ಕಾರ್ಯವ್ಯಾಪ್ತಿಯಡಿ ಕರ್ತವ್ಯವನ್ನೇ ನಿಭಾಯಿಸಿಲ್ಲ. ಅಲ್ಲದೇ, ಗಣಪತಿಯವರು ಮೊಹಾಂತಿ ಯಾವ ಉದ್ದೇಶಕ್ಕಾಗಿ ಹಣಕ್ಕೆ ಬೇಡಿಕೆ ಇಟ್ಟಿದ್ದರೆಂಬುದನ್ನು ಸ್ಪಷ್ಟಪಡಿಸಿಲ್ಲ. ಮಾಧ್ಯಮದಲ್ಲಿ ಗಣಪತಿ ವಿರುದ್ಧ ವರದಿ ಪ್ರಸಾರವಾಗಲು ಮೊಹಾಂತಿ ಕಾರಣರು ಎಂಬ ದೂರಿನಲ್ಲಿ ಯಾವುದೇ ಹುರುಳಿಲ್ಲ ಮತ್ತು ಈ ಆರೋಪ ಆಧಾರ ರಹಿತವಾಗಿದೆ. ಗಣಪತಿ ಅವರಿಗೆ ಡಿವೈಎಸ್ ಪಿ ಹುದ್ದೆಗೆ ಬಡ್ತಿಯ ಸಂದರ್ಭದಲ್ಲಿ ಲೋಕಾಯುಕ್ತ ಐಜಿಪಿಯಾಗಿದ್ದ ಮೊಹಾಂತಿ ಯಾವುದೇ ಹಸ್ತಕ್ಷೇಪ ಅಥವಾ ಬಡ್ತಿಗೆ ವಿರೋಧ ವ್ಯಕ್ತಪಡಿಸಿಲ್ಲ.
ಈ ಹಿನ್ನೆಲೆಯಲ್ಲಿ ಗಣಪತಿಯವರು ಮೊಹಾಂತಿ ವಿರುದ್ಧ ಮಾಡಿರುವ ಆರೋಪಗಳೆಲ್ಲವೂ ಸತ್ಯಕ್ಕೆ ದೂರವಾದುವು ಮತ್ತು ಗಣಪತಿಯವರು ಖಿನ್ನತೆಗೆ ಒಳಗಾಗಿ ಕಲ್ಪಿಸಿಕೊಂಡು ಈ ಆರೋಪಗಳನ್ನು ಮಾಡಿದ್ದಾರೆ.
Also Read: ಗಣಪತಿ ಆತ್ಮಹತ್ಯೆಗೆ ಜಾರ್ಜ್ ಕಾರಣರಲ್ಲ, ಡಿಪ್ರೆಶನ್ ಕಾರಣ: ಸಿಬಿಐ ರಿಪೋರ್ಟ್
ಪ್ರಸಾದ್ ವಿರುದ್ಧ ಗಣಪತಿ ಮಾಡಿದ್ದ ಆರೋಪಗಳು
ಪ್ರಸಾದ್ ಅವರು ಮಂಗಳೂರಿನಲ್ಲಿ ಐಜಿ ಆಗಿದ್ದ ವೇಳೆ ವಾರಾಂತ್ಯದಲ್ಲಿ ಉಡುಪಿಯಲ್ಲಿ ಓದುತ್ತಿದ್ದ ತಮ್ಮ ಮಗನನ್ನು ಕರೆ ತರಲು ವಾಹನವನ್ನು ಕಳುಹಿಸುವಂತೆ ನನಗೆ ಆದೇಶ ನೀಡುತ್ತಿದ್ದರು. ಆದರೆ, ನಾನು ಇದಕ್ಕೆ ನಿರಾಕರಿಸಿದ ಹಿನ್ನೆಲೆಯಲ್ಲಿ ಪ್ರಸಾದ್ ಅವರು ನನಗೆ ಕಿರುಕುಳ ನೀಡಲು ಆರಂಭಿಸಿದರು. ಅಲ್ಲದೇ, ಪೊಲೀಸ್ ಠಾಣೆಯಲ್ಲಿ ಅಕ್ರಮವಾಗಿ ಬಂಧನದಲ್ಲಿಟ್ಟ ಪ್ರಕರಣಗಳ ಪರಿಶೀಲನೆಗೆ ಮಾನವ ಹಕ್ಕುಗಳ ಆಯೋಗದ ಜನರನ್ನು ಕಳುಹಿಸಿ ಕಿರುಕುಳ ನೀಡುತ್ತಿದ್ದರು.
ಪ್ರಸಾದ್ ಮತ್ತು ಮೊಹಾಂತಿ ಅವರು ಕೆ.ಜೆ.ಜಾರ್ಜ್ ಅವರಿಗೆ ಆಪ್ತರಾಗಿದ್ದರು. ಈ ಮೂವರೂ ಸೇರಿ ನನ್ನಂತಹ ಉತ್ತಮ ಅಧಿಕಾರಿಗಳಿಗೆ ಕಿರುಕುಳ ನೀಡಿದ್ದಾರೆ.
ಸಿಬಿಐ ನೀಡಿರುವ ವಿವರಣೆ
ಈ ಆರೋಪಗಳಿಗೆ ಸಂಬಂಧಿಸಿದಂತೆ ಪ್ರಸಾದ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಪ್ರಸಾದ್ ಅವರ ಮಗ ಮಣಿಪಾಲದ ಎಂಐಟಿಯಲ್ಲಿ 2006-10 ರಲ್ಲಿ ಇಂಜಿನಿಯರಿಂಗ್ ಪದವಿ ಓದುತ್ತಿದ್ದರು. ಅವರು ಕಾಲೇಜಿನ ಹಾಸ್ಟೆಲ್ ನಲ್ಲಿ ವಾಸ್ಯವ್ಯವಿದ್ದರು. ಈ ಹಿನ್ನೆಲೆಯಲ್ಲಿ ಪ್ರಸಾದ್ ಅವರು ತಮ್ಮ ಮಗನನ್ನು ಕರೆ ತರಲು ವಾಹನ ಕಳುಹಿಸುವಂತೆ ಗಣಪತಿಯವರಿಗೆ ಆದೇಶ ನೀಡುತ್ತಿದ್ದರು ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ.
ಅಷ್ಟಕ್ಕೂ ಪ್ರಸಾದ್ ಅವರ ಮಗ 2010 ರಲ್ಲಿ ವ್ಯಾಸಂಗ ಪೂರ್ಣಗೊಳಿಸಿದ್ದಾರೆ. ಆದರೆ, ಗಣಪತಿಯವರು 6 ವರ್ಷಗಳ ನಂತರ ಈ ಬಗ್ಗೆ ಆರೋಪ ಮಾಡಿದ್ದಾರೆ. ಪ್ರಸಾದ್ ಅವರು ಐಜಿಯಾಗಿ ಕಾರ್ಯನಿರ್ವಹಿಸುವಾಗ ಅವರ ಕೈಕೆಳಗೆ ಹಲವಾರು ಮಂದಿ ಡಿವೈಎಸ್ಪಿಗಳು ಕೆಲಸ ಮಾಡುತ್ತಿದ್ದರು. ಅವರೆಲ್ಲರನ್ನೂ ಬಿಟ್ಟು ಗಣಪತಿಯವರಿಗೆ ಮಾತ್ರ ವಾಹನ ಕಳುಹಿಸುವಂತೆ ಆದೇಶ ನೀಡುವುದಾದರೂ ಹೇಗೆ?
ಪ್ರಸಾದ್ ಅವರು ಐಜಿ ಆಗಿದ್ದ ಸಂದರ್ಭದಲ್ಲಿ ಗಣಪತಿ ವಿರುದ್ಧ ಕೆಲವು ಇಲಾಖಾ ವಿಚಾರಣೆಗಳು ನಡೆದಿವೆ. ಇದನ್ನೇ ಆಧಾರವಾಗಿಟ್ಟುಕೊಂಡು ಗಣಪತಿಯವರು ನಾನು ವಾಹನ ಕಳಿಸದಿದ್ದಕ್ಕೆ ನನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇದಲ್ಲದೇ, ಗುಪ್ತಚರ ಇಲಾಖೆ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ರಾಜ್ಯದ ಕಾನೂನು ಪರಿಸ್ಥಿತಿಗಳ ಆಗುಹೋಗುಗಳ ಬಗ್ಗೆ ಗೃಹ ಸಚಿವರಾದವರಿಗೆ ಮಾಹಿತಿ ನೀಡುವುದು ಜವಾಬ್ದಾರಿಯಾಗಿರುತ್ತದೆ. ಜಾರ್ಜ್ ಅವರೂ ಸಹ ಗೃಹಮಂತ್ರಿಗಳಾಗಿದ್ದರಿಂದ ಅವರೊಂದಿಗೆ ಪ್ರಸಾದ್ ಅವರು ಸಂಪರ್ಕದಲ್ಲಿದ್ದರು. ಇದರಲ್ಲಿ ಯಾವುದೇ ತಪ್ಪು ಕಂಡುಬರುವುದಿಲ್ಲ.
ಹೀಗಾಗಿ ಗಣಪತಿಯವರು ಮಾಡಿರುವ ಆರೋಪಗಳು ನಿರಾಧಾರವಾಗಿವೆ.
ಇನ್ನು ತಮ್ಮ ವಿರುದ್ಧ ಮಾನವ ಹಕ್ಕುಗಳ ಇಲಾಖೆಯವರನ್ನು ಬಿಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಗಣಪತಿಯವರು ಡಿವೈಎಸ್ಪಿಯಾಗಿ ಬಡ್ತಿ ಹೊಂದಿದ ನಂತರ ಜಾರ್ಜ್, ಮೊಹಾಂತಿ ಮತ್ತು ಪ್ರಸಾದ್ ಅವರಿಂದ ಯಾವುದೇ ನಕಾರಾತ್ಮಕ ವರದಿ ಹೋಗಿಲ್ಲ. 2010 ರಿಂದ ಗಣಪತಿಯವರ ಇಲಾಖಾ ಗೌಪ್ಯತೆ ಪುಸ್ತಕವನ್ನು ಪರಿಶೀಲನೆ ಮಾಡಿದ್ದು, ಅದರಲ್ಲಿ ಗಣಪತಿಯವರ ವಿರುದ್ಧವಾಗಿ ಯಾವುದೇ ಟಿಪ್ಪಣಿಗಳು ದಾಖಲಾಗಿಲ್ಲ.
ಗಣಪತಿಯವರು ಮಾಡಿರುವ ಆರೋಪಗಳೆಲ್ಲವೂ ಸತ್ಯಕ್ಕೆ ದೂರವಾಗಿವೆ ಮತ್ತು ಅವರು ಮಾನಸಿಕ ಖಿನ್ನತೆಗೆ ಒಳಗಾಗಿ ಇಂತಹ ಆರೋಪಗಳನ್ನು ಮಾಡಿದ್ದಾರೆ. ಹೀಗಾಗಿ ಪ್ರಸಾದ್ ಮತ್ತು ಮೊಹಾಂತಿ ಅವರಿಗೂ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ.
ಕೌಟುಂಬಿಕ ಸಮಸ್ಯೆಯಿಂದ ಬಳಲುತ್ತಿದ್ದ ಗಣಪತಿ
ಇನ್ನೂ ಮುಂದುವರಿದು ತನಿಖೆ ನಡೆಸಿರುವ ಸಿಬಿಐ ಗಣಪತಿಯವರು ಕೌಟುಂಬಿಕ ಸಮಸ್ಯೆಯಿಂದ ಬಳಲುತ್ತಿದ್ದರು ಎಂಬ ಅಂಶವನ್ನು ಪತ್ತೆ ಮಾಡಿದೆ. ಈ ಖಿನ್ನತೆ ನಿವಾರಣೆಗಾಗಿ ಅವರು ಔಷಧಿಯನ್ನೂ ತೆಗೆದುಕೊಳ್ಳುತ್ತಿದ್ದರು ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ.
13-06-2016 ರಂದು ಗಣಪತಿಯವರು ತಮ್ಮ ಸಹೋದರಿಗೆ ಒಂದು ಎಸ್ಎಂಎಸ್ ಸಂದೇಶವನ್ನು ಕಳುಹಿಸುತ್ತಾರೆ. ಅದರಲ್ಲಿ, “ನೋಡು ಪಾವನ ನನಗೆ ನಿನ್ನೆ ಎಸ್ಎಂಎಸ್ ಕಳಿಸಿದ್ದು, ಡೈವೋರ್ಸ್ ನೀಡುವಂತೆ ಕೇಳಿದ್ದಾರೆ. ನನಗೆ ಮತ್ತು ನನ್ನ ಮಕ್ಕಳಿಗೆ ಕಿರುಕುಳ ನೀಡುತ್ತಿರುವ ವ್ಯಕ್ತಿಯಿಂದ ನನಗೆ ವಿಚ್ಛೇದನ ಬೇಕು ಎಂದು ಕೇಳಿದ್ದಾಳೆ’’ ಎಂದು ತಿಳಿಸಿದ್ದರು.
ಇದರಿಂದ ಗಣಪತಿ ತೀವ್ರರೀತಿಯ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಇದಾದ ಒಂದೇ ತಿಂಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಿಬಿಐ ತನ್ನ ವರದಿಯಲ್ಲಿ ತಿಳಿಸಿದೆ.