ಅನ್‌ಲಾಕ್ 5.0 ಮಾರ್ಗಸೂಚಿಗಳ ಪ್ರಕಾರ ಅಕ್ಟೋಬರ್ 15ರಿಂದ ಕರ್ನಾಟಕದಲ್ಲಿ ಶಾಲೆಗಳನ್ನು ತೆರೆಯಲು ಹಿನ್ನಡೆ ಉಂಟಾಗುವ ಸಾಧ್ಯತೆಯಿದೆ. ಏಕೆಂದರೆ, ಮೈಸೂರಿನಲ್ಲಿ ಶಿಕ್ಷಕರಿಗೆ ಹಾಗೂ ಶಿಕ್ಷಣಾಧಿಕಾರಿಗಳಿಗೆ ನಡೆಸಿದ ಕೋವಿಡ್ ಪರೀಕ್ಷೆಯಲ್ಲಿ 25ಕ್ಕೂ ಹೆಚ್ಚು ಶಿಕ್ಷಕರು ಹಾಗೂ ಶಿಕ್ಷಣಾಧಿಕಾರಿ ಕಚೇರಿಯ ಸಿಬ್ಬಂದಿಗಳಿಗೆ ಸೋಂಕು ಇರುವುದು ಪತ್ತೆಯಾಗಿದೆ.
ಮೈಸೂರಿನ ಡಿಡಿಪಿಐ ಪಾಂಡುರಂಗ ಸೇರಿದಂತೆ ಅವರ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ನಾಲ್ವರು ಸಿಬ್ಬಂದಿಗಳಿಗೆ ಸೋಂಕು ಇರುವುದು ಪತ್ತೆಯಾಗಿದೆ. ಸುಮಾರು 500 ಜನ ಶಿಕ್ಷಕರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿತ್ತು. ಅವರಲ್ಲಿ 25 ಜನರಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಇನ್ನು ಹುಣಸೂರಿನಿಂದ ʼನಲಿ-ಕಲಿʼ ಕಾರ್ಯಕ್ರಮದ ತರಬೇತಿಗೆಂದು ಮೈಸೂರಿಗೆ ಬಂದಿದ್ದ ಇಬ್ಬರು ಶಿಕ್ಷಕರ ಕೋವಿಡ್ ಪರೀಕ್ಷೆಯ ವರದಿಯು ಪಾಸಿಟಿವ್ ಎಂದು ಬಂದಿದೆ. ಡಿಡಿಪಿಐ ಕಚೇರಿಯಲ್ಲಿ ಸಾಮಾಜಿಕ ಅಂತರ ಕಾಪಾಡದೇ ಕೆಲಸ ನಿರ್ವಹಿಸುತ್ತಿದ್ದರಿಂದ ಈ ರೀತಿಯ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಲಾಗಿದೆ.
Also Read: ಮೈಸೂರು- ಕರೋನಾ ವಾರಿಯರ್ಸ್ ಹೋರಾಟ: ಸರ್ಕಾರಕ್ಕೆ ಸಂಕಷ್ಟ !
ಈ ಘಟನೆಯಿಂದಾಗಿ ಸರ್ಕಾರದ ಮಹತ್ವದ ವಿದ್ಯಾಗಮ ಯೋಜನೆಯೂ ನಿಂತು ಹೋಗುವ ಆತಂಕ ನಿರ್ಮಾಣವಾಗಿದೆ. ವಿದ್ಯಾಗಮ ಯೋಜನೆಯಡಿಯಲ್ಲಿ ಶಿಕ್ಷಕರು ಮಕ್ಕಳ ಮನೆ ಮನೆಗೆ ತೆರಳಿ ಪಾಠ ಹೇಳುತ್ತಿದ್ದರು. ಈಗ ಕೋವಿಡ್ ಸೋಂಕು ಶಿಕ್ಷಕರಿಗೆ ಬಾಧಿಸಿರುವುದರಿಂದ ಈ ಯೋಜನೆಯೂ ಹಾದಿ ತಪ್ಪುವ ಸಾಧ್ಯತೆಗಳಿವೆ.
25 ಶಿಕ್ಷಕರಿಗೆ ಒಂದೇ ಬಾರಿಗೆ ಕೋವಿಡ್ ಪಾಸಿಟಿವ್ ಬಂದಿರುವುದರಿಂದ ಸದ್ಯಕ್ಕೆ ಮೈಸೂರಿನ ಶಿಕ್ಷಕರಿಗೆ ರ್ಯಾಪಿಡ್ ಆಂಟಿಜನ್ ಟೆಸ್ಟ್ ಮಾಡುವುದನ್ನು ನಿಲ್ಲಿಸಲಾಗಿದೆ ಎಂದು ಸೋಂಕು ನಿಯಂತ್ರಣ ಅಧಿಕಾರಿಯಾಧ ಎಸ್ ಚಿದಂಬರ್ ಅವರು ಮಾಧ್ಯಮಗಳಿಗೆ ಹೇಳಿದ್ದಾರೆ.





