ಕರೋನಾ ಸಂಕಷ್ಟಕ್ಕೆ ಸಿಲುಕಿರುವ ಇಡೀ ಸಮಾಜ ವೈದ್ಯರನ್ನೇ ದೇವರು ಎಂದು ಅತಿಯಾಗಿ ನಂಬುವ ಕಾಲ ಇದಾಗಿದೆ. ಆದರೆ ವೈದ್ಯರು ಕಳೆದ ನಾಲ್ಕೈದು ತಿಂಗಳಿಂದ ಕೆಲಸ ನಿರಂತರವಾಗಿ ಕೆಲಸ ಮಾಡುತ್ತಿದ್ದು, ಸಾಕಷ್ಟು ಒತ್ತಡಕ್ಕೆ ಸಿಲುಕಿದ್ದಾರೆ. ಅದರ ನಡುವೆ ಹಿರಿಯ ಅಧಿಕಾರಿಗಳೂ ಹಾಗೂ ಐಎಎಸ್ ಅಧಿಕಾರಿಗಳ ಒತ್ತಡ ವೈದ್ಯರೊಬ್ಬರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾಗಿದೆ ಎಂಬ ಆರೋಪ ಕೇಳಿಬಂದಿದೆ.
ಮೈಸೂರಿನಲ್ಲಿ ನಂಜನಗೂಡು ತಾಲೂಕು ಆರೋಗ್ಯ ಅಧಿಕಾರಿ ಡಾ ನಾಗೇಂದ್ರ (Dr. Nagendra S R) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೈಸೂರಿನ ಜಿಲ್ಲಾ ವೈದ್ಯಾಧಿಕಾರಿ ಕಚೇರಿ ಬಳಿ ಮೃತ ವೈದ್ಯ ನಾಗೇಂದ್ರ ಶವವಿಟ್ಟು ಪ್ರತಿಭಟನೆ ನಡೆಸಿದ ವೈದ್ಯರು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್, ಜಿಲ್ಲಾ ಪಂಚಾಯಿತಿ ಸಿಇಒ ಪ್ರಶಾಂತ್ ಮಿಶ್ರಾ (CEO Prashanth Mishra) ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿರಿಯ ಅಧಿಕಾರಿಗಳ ಒತ್ತಡ ತಾಳಲಾರದೆ ಡಾ ನಾಗೇಂದ್ರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವುದು ಪ್ರತಿಭಟನಾಕಾರರ ಆರೋಪ.

ಪ್ರತಿಭಟನೆ ವೇಳೆ ವೈದ್ಯರ ಸಂಘ ಮಾಜಿ ಅಧ್ಯಕ್ಷ ಡಾ.ರವೀಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಶೇಕಡ 60ರಷ್ಟು ಹುದ್ದೆಗಳು ಖಾಲಿ ಇವೆ. ಹೀಗಿರುವಾಗ ನಾವು ಹೇಗೆ ಕೆಲಸ ಮಾಡಬೇಕು. ವೈದ್ಯರನ್ನು ಸವತಿ ಮಕ್ಕಳಂತೆ ನೋಡುತ್ತೀರಿ. ಆರು ತಿಂಗಳಿಂದ ಮನೆ ಬಿಟ್ಟು ಕೆಲಸ ಮಾಡಿದ್ದಾರೆ. ಆ್ಯಂಟಿಜನ್ ಕಿಟ್ ಟೆಸ್ಟಿಂಗ್ ಮಾಡುವಂತೆ ಟಾರ್ಗೆಟ್ ಕೊಟ್ಟಿದ್ದೀರಿ. ಡಾಕ್ಟರ್‌ಗಳಿಗೆ ಮಾನಸಿಕ ಹಿಂಸೆ ನೀಡುವ ಮೂಲಕ ಕೊಲೆ ಮಾಡಿದ್ದೀರಿ ಎಂದು ಏರುದನಿಯಲ್ಲಿ ಅಧಿಕಾರಿಗಳನ್ನು ಡಾ.ರವೀಂದ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಜಿಲ್ಲಾ ಪಂಚಾಯಿತಿ ಸಿಇಒ ಅವರನ್ನು ಸಸ್ಪೆಂಡ್ ಮಾಡಬೇಕು ಎಂದು ಡಿಎಚ್ಒ ಕಚೇರಿ ಎದುರು ಘೋಷಣೆ ಕೂಗಿ ವೈದ್ಯರು, ಆರೋಗ್ಯ ಇಲಾಖೆ ಸಿಬ್ಬಂದಿಗಳು ಆಕ್ರೋಶ ಹೊರ ಹಾಕಿದ್ದಾರೆ.

ನಿಮ್ಮ ಪರಿಹಾರ ಯಾರಿಗೆ ಬೇಕ್ರೀ..? ಕೊಂದುಬಿಟ್ರಲ್ಲ, ನಾಚಿಕೆ ಆಗ್ಬೇಕು..!
ಪ್ರತಿಭಟನೆ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್, ಮೃತ ತಾಲೂಕು ವೈದ್ಯಾಧಿಕಾರಿ ಡಾ ನಾಗೇಂದ್ರರ ಅಂತಿಮ ದರ್ಶನ ಪಡೆದರು. ಈ ವೇಳೆ ಮಾತನಾಡಿದ ಸಚಿವರು ಮೃತ ವೈದ್ಯರ ಪತ್ನಿ ಪಿಹೆಚ್‌ಡಿ ಮಾಡಿದ್ದು ಅವರಿಗೆ ಉನ್ನತ ಶಿಕ್ಷಣ ಇಲಾಖೆ ಅಡಿಯಲ್ಲಿ ಲೆಕ್ಚರರ್ ಪೋಸ್ಟ್ ಕೊಡಲಾಗುವುದು. ಇನ್ನೂ 30 ಲಕ್ಷ ಪರಿಹಾರ ಕೊಡಲಾಗುವುದು ಎಂದು ತಿಳಿಸಿದರು. ಈ ವೇಳೆ ಸಚಿವ ಸುಧಾಕರ್‌ಗೆ ಮಹಿಳಾ ವೈದ್ಯೆಯೊಬ್ಬರು ತರಾಟೆಗೆ ತೆಗೆದುಕೊಂಡಿದ್ದು, 30 ಲಕ್ಷ ಪರಿಹಾರ ಕೊಡ್ತೀರೇನ್ರಿ..? ನಾವು ವೈದ್ಯರು ನಮ್ಮ ಸಂಬಳ ಕೊಟ್ಟರೆ 10 ಕೋಟಿ ಆಗುತ್ತೆ. ನೀವು ನಾಗೇಂದ್ರ ಪ್ರಾಣ ಕೊಡೋಕಾದ್ರೆ ಕೊಡಿ, ಇಲ್ಲದಿದ್ರೆ ಮುಖ ತೋರಿಸಬೇಡಿ ಇಲ್ಲಿಂದ ಹೊರಟು ಹೋಗಿ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಮಹಿಳಾ ವೈದ್ಯೆ ತರಾಟೆಗೆ ಯಾವುದೇ ಪ್ರತಿಕ್ರಿಯೆ ನೀಡದ ವೈದ್ಯಕೀಯ ಶಿಕ್ಷಣ ಸಚಿವ ಡಾ ಸುಧಾಕರ್, ಮೂಕ ಪ್ರೇಕ್ಷಕರಾಗಿದ್ದಾರೆ. ನಮ್ಮನ್ನು ಐಎಎಸ್ ಅಧಿಕಾರಿಗಳ ಹಿಡಿತದಿಂದ ತಪ್ಪಿಸಿ. ಮೈಸೂರು ಜಿಲ್ಲಾ ಪಂಚಾಯತ್ ಸಿಐಓ ಪ್ರಶಾಂತ್ ಕುಮಾರ್ ಮಿಶ್ರಾ ಅವರ ಮೇಲೆ ಕ್ರಿಮಿನಲ್ ಮೊಕದಮ್ಮೆ ದಾಖಲಿಸಿ. ಅವರನ್ನು ಕೂಡಲೇ ಅಮಾನತು ಮಾಡಿ ಆದೇಶ ಹೊರಡಿಸಿ ಎಂದು ಒತ್ತಾಯಿಸಿದ್ದಾರೆ. ಅಮಾನತು ಮಾಡಿ ಪ್ರಕರಣ ದಾಖಲಿಸುವ ತನಕ ಕೆಲಸ ಮಾಡಲ್ಲ ಕೇವಲ ತುರ್ತು ಚಿಕಿತ್ಸೆ ಮಾತ್ರ ನೀಡುತ್ತೇವೆ ಎಂದು ಆರೋಗ್ಯ ಇಲಾಖೆ ವೈದ್ಯರು ಡಾ ಸುಧಾಕರ್‌ಗೆ ಎಚ್ಚರಿಕೆ ಕೊಟ್ಟಿದ್ದಾರೆ.

ಸಚಿವ ಡಾ.ಕೆ.ಸುಧಾಕರ್ ಮಾತನಾಡಿ, ಪ್ರಕರಣದ ಬಗ್ಗೆ ಪಾರದರ್ಶಕ ತನಿಖೆ ನಡೆಸಲಾಗುವುದು. ಯಾವ ರೀತಿ ತನಿಖೆ ನಡೆಸಬೇಕು ಅಂತ ನಿರ್ಧಾರ ಮಾಡುತ್ತೇವೆ ಎಂದಿದ್ದಾರೆ. ಇದು ಉದ್ದೇಶಪೂರ್ವಕವಾಗಿ ನಡೆದಿರುವ ಘಟನೆ ಅಲ್ಲ, ಈ ಸಂದರ್ಭದಲ್ಲಿ ಎಲ್ಲರಿಗೂ ಕೆಲಸದ ಒತ್ತಡ ಇರುತ್ತದೆ. ಕೆಲಸ ಒತ್ತಡ ಕಡಿಮೆ ಮಾಡುವ ಬಗ್ಗೆಯೂ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಪ್ರತಿಭಟನೆ ನಡೆಸಲು ವೈದ್ಯರು ತಯಾರಿ ಮಾಡಿಕೊಳ್ತಿದ್ದಾರೆ. ಮೈಸೂರು, ಮಂಡ್ಯ, ಕೊಡಗು, ಚಾಮರಾಜನಗರ ಜಿಲ್ಲೆಯ ಯಾವ ವೈದ್ಯರು ಕೆಲಸ ಮಾಡದೆ ಇರಲು ನಿರ್ಧಾರ ಮಾಡಿದ್ದಾರೆ.
ಕರೋನಾ ಪತ್ತೆಗೂ ಸರ್ಕಾರದಿಂದ ಟಾರ್ಗೆಟ್..!
ಮೈಸೂರು ಡಿಸಿ ಹಾಗೂ ನಾಗೇಂದ್ರ ಅವರ ಫೋನ್ ಸಂಭಾಷಣೆ ಎನ್ನಲಾದ ಆಡಿಯೋ ಬಹಿರಂಗವಾಗಿದ್ದು, ಹೇಳಿದಷ್ಟು ಕರೋನಾ ಸ್ವ್ಯಾಬ್ ಸಂಗ್ರಹಿಸಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ನೀನು ಹೇಗೆ ಸ್ವ್ಯಾಬ್ ಸಂಗ್ರಹ ಮಾಡ್ತೀಯ ಎನ್ನುವುದು ಮುಖ್ಯವಲ್ಲ ಬೀದಿಯಲ್ಲಿ ನಿಂತು ಸ್ವ್ಯಾಬ್ ಸಂಗ್ರಹ ಮಾಡು ಎಂದು ಡಾ ನಾಗೇಂದ್ರ ಅವರಿಗೆ ತಾಕೀತು ಮಾಡಿದ್ದಾರೆ. ಟಾರ್ಗೆಟ್ ರೀಚ್ ಆಗಿಲ್ಲ ಯಾಕೆ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಳ್ಳುವ ಆಡಿಯೋ ವೈರಲ್ ಆಗಿದೆ.
ಸಿಎಂ ಮೈಸೂರಿಗೂ ತೆರಳುವ ಮುನ್ನವೇ ಪರಿಹಾರ ಹೆಚ್ಚಳ..!
ನಂಜನಗೂಡಿನಲ್ಲಿ ವೈದ್ಯಾಧಿಕಾರಿ ಆತ್ಮಹತ್ಯೆ ಪ್ರಕರಣದಲ್ಲಿ ಮೃತ ಕುಟುಂಬಕ್ಕೆ 50 ಲಕ್ಷ ರೂಪಾಯಿ ಪರಿಹಾರ ಕೊಡಲಾಗುವುದು. ಜೊತೆಗೆ ಅನುಕಂಪದ ಆಧಾರದ ಮೇಲೆ ಕುಟುಂಬದ ಅವಲಂಬಿತರನ್ನು ಕೆಲಸಕ್ಕೆ ನೇಮಕಾತಿ ಮಾಡಿಕೊಳ್ಳಲಾಗುವುದು. ಘಟನೆ ಸಂಬಂಧ ತನಿಖೆ ನಡೆಸಿ 7 ದಿನಗಳ ಒಳಗೆ ವರದಿ ನೀಡುವಂತೆ ಮೈಸೂರು ಜಿಲ್ಲಾ ಪ್ರಾದೇಶಿಕ ಆಯುಕರಿಗೆ ಸೂಚನೆ ನೀಡಿದ್ದೇನೆ ಎಂದು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ಒಟ್ಟಾರೆ ಮೈಸೂರಿಗೆ ತೆರಳುವ ಮುನ್ನವೇ ಸಿಎಂ ಬಿ.ಎಸ್ ಯಡಿಯೂರಪ್ಪ ಪರಿಹಾರ ಮೊತ್ತ ಹೆಚ್ಚಳ ಮಾಡಿಕೊಂಡು ತೆರಳುತ್ತಿದ್ದಾರೆ.
