ದೆಹಲಿಯ ಏಮ್ಸ್ ಆಸ್ಪತ್ರೆಯ ವೈದ್ಯರು ಹೊಸ ಅಧ್ಯಯನವೊಂದನ್ನು ಮಾಡಲಿದ್ದಾರೆ. ಕರೋನಾ ವೈರಸ್ ಮೃತ ಶರೀರದಲ್ಲಿ ಎಷ್ಟು ದಿನಗಳ ಕಾಲ ಬದುಕಲಿದೆ ಮತ್ತು ಮೃತ ಶರೀರದಿಂದ ಸೋಂಕು ಹರಡಲು ಸಾಧ್ಯವಿದೆಯೇ? ಎಂಬುದನ್ನು ಪತ್ತೆ ಹಚ್ಚಲು ಮುಂದಾಗಿದ್ದಾರೆ. ಇದಕ್ಕಾಗಿ ಕೋವಿಡ್ 19ನಿಂದ ಮೃತ ಪಟ್ಟ ಶರೀರವೊಂದನ್ನು ಸಂಬಂಧ ಪಟ್ಟವರ ಬಳಿಯಿಂದ ಪಡೆದುಕೊಳ್ಳಲಾಗಿದೆ ಹಾಗೂ ವೈರಾಣು ಹೇಗೆ ಅಂಗಾಂಗಳ ಮೇಲೆ ಪರಿಣಾಮ ಬೀರಲಿದೆ ಎಂಬುವುದನ್ನು ಕಂಡುಹಿಡಿಯಲು ಈ ಅಧ್ಯಯನ ಸಹಾಯವಾಗಲಿದೆ ಎಂದು ಏಮ್ಸ್ ಮುಖ್ಯ ವೈದ್ಯ ಡಾ. ಸುಧೀರ್ ಗುಪ್ತ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಗುಪ್ತಾ, ಇದಕ್ಕಾಗಿ ಸತ್ತವರ ಸಂಬಂಧಿಕರ ಬಳಿಯಿಂದ ಸಮ್ಮತಿ ಪತ್ರವನ್ನು ಪಡೆಯಲಾಗಿದೆ. ಈ ಅಧ್ಯಯನದಲ್ಲಿ ರೋಗಶಾಸ್ತ್ರ ಮತ್ತು ಸೂಕ್ಷ್ಮ ಜೀವವಿಜ್ಞಾನದಂತಹ ಅನೇಕ ವಿಭಾಗಗಳು ಈ ಆಧ್ಯಯನಲ್ಲಿ ಭಾಗಿಯಾಗಲಿದ್ದಾರೆ. ಇದು ಚೊಚ್ಚಲ ಪ್ರಯತ್ನವಾಗಿದೆ. ಈ ಕರೋನಾ ವೈರಾಣು ಮೃತ ಶರೀರದಲ್ಲಿ ಹೇಗೆ ವರ್ತಿಸುತ್ತದೆ, ಹೇಗೆ ಪರಿಣಾಮ ಬೀರುತ್ತದೆ ಮತ್ತು ಶರೀರದಲ್ಲಿ ಎಷ್ಟು ದಿನಗಳ ಕಾಲ ಈ ವೈರಾಣು ಬದುಕಬಲ್ಲದು ಎಂಬುವುದನ್ನು ಕಲೆಹಾಕಲು ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ.
Also Read: 100 ಕೋವಿಡ್-19 ಬಾಧಿತ ಮಹಿಳೆಯರ ಹೆರಿಗೆಗೆ ಸಾಕ್ಷಿಯಾದ ನಾಯರ್ ಆಸ್ಪತ್ರೆ.!
ಮೇ 20ರಂದು ಐಸಿಎಂಆರ್ ಈ ಕೋವಿಡ್-19 ವೈರಾಣುವು ಉಸಿರಾಟದದಿಂದ ಮತ್ತು ಮುಖ್ಯವಾಗಿ ಮೂಗಿನ ಮೂಲಕ ಹರಡುತ್ತದೆ ಎಂದು ಹೇಳಿದ್ದರು. ಈವರೆಗೆ ಲಭ್ಯವಿರುವ ವೈಜ್ಞಾನಿಕ ಮಾಹಿತಿಯ ಪ್ರಕಾರ ಮೃತ ದೇಹದಲ್ಲಿನ ವೈರಸ್ ಕ್ರಮೇಣವಾಗಿ ಸಾಯತೊಡಗುತ್ತದೆ. ಹೆಚ್ಚಿನ ಸಮಯದ ಕಾಲ ಅಲ್ಲಿ ಬದುಕುವುದಿಲ್ಲ. ಆದರೆ, ದೇಹ ಸೋಂಕಿತವಲ್ಲ ಎಂದು ಹೇಳಲು ಸಾಧ್ಯವಿಲ್ಲ. ಆದ್ದರಿಂದ ಮುನ್ನೆಚ್ಚರಿಕಾ ಕ್ರಮಗಳಿಂದ ಹಾಗೂ ಸೂಕ್ತ ಪರೀಕ್ಷೆಗಳಿಂದ ಇದರಿಂದ ಪಾರಾಗಬಹುದು ಎಂದು ಹಿರಿಯ ವೈದ್ಯರು ತಿಳಿಸಿದ್ದಾರೆ.
ಕರೋನಾ ವೈರಾಣುವಿನಿಂದ ಮೃತವಾದ ಶರೀರವನ್ನು ಪರೀಕ್ಷೆಗೆ ಒಳಪಡಿಸುವುದು ಬಹಳ ಅಪಾಯಕಾರಿ ಕೆಲಸ ಎಂಬುವುದನ್ನು ಗಮನದಲ್ಲಿಟ್ಟುಕೊಳ್ಳಬೇಕಿದೆ. ಶವಪರೀಕ್ಷೆಯ ವೇಳೆ, ಶವಗಾರ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ, ವೈದ್ಯರು ಹಾಗೂ ಮೇಲ್ಮೈಗಳ ಮಾಲಿನ್ಯಕ್ಕೆ ಸೋಂಕು ಹರಡದಂತೆ ಎಚ್ಚರಿಕೆ ವಹಿಸಿಲು ಐಸಿಎಂಆರ್ ಮಾರ್ಗಸೂಚಿಯಲ್ಲಿ ಸೂಚಿಸಲಾಗಿದೆ. ಈವರೆಗೆ, ಕೋವಿಡ್ 19ನಿಂದ ಸಾವನ್ನಪ್ಪಿದ ರೋಗಿಗಳ ಮರಣೋತ್ತರ ಮಾದರಿಗಳ ಬಗ್ಗೆ ಸೀಮಿತ ಅಧ್ಯಯನಗಳು ನಡೆದಿವೆ. ಇವುಗಳಲ್ಲಿ ರೋಗಶಾಸ್ತ್ರೀಯ ಅಧ್ಯಯನಗಳು ಹೆಚ್ಚಿನವು. ಆದರೆ ಈ ರೋಗವು ಹೃದಯ, ಯಕೃತ್, ಮೂತ್ರಪಿಂಡ, ಮೆದುಳು, ರಕ್ತನಾಳಗಳು ಮತ್ತು ಇತರೆ ಅಂಗಾಗಳಿಗೆ ಹಾನಿ ಉಂಟುಮಾಡುತ್ತವೆ ಎಂದು ಭಾರತೀಯ ವೈದ್ಯಕೀಯ ಸಂಶೋಧಾನ ಮಂಡಳಿ ತಿಳಿಸಿದೆ.
ಇದೀಗ ಏಮ್ಸ್ ಈ ಬಗ್ಗೆ ಸವಿಸ್ತಾರವಾಗಿ ಅಧ್ಯಯನ ನಡೆಸಲು ಮುಂದಾಗಿದೆ. ಈ ಅಧ್ಯಯನಕ್ಕೆ ಸಮಯದ ಚೌಕಟ್ಟು ಹಾಕಿಕೊಂಡಿಲ್ಲ. ಎಲ್ಲಾ ಸೂಕ್ಷ್ಮಾತಿ ಸೂಕ್ಷ್ಮ ವಿಚಾರಗಳನ್ನು ಪತ್ತೆ ಹಚ್ಚುವ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಹಿರಿಯ ವೈದ್ಯರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
Also Read: ಜಿಂಕೆ ಮಾಂಸ ಸಾಗಾಟಕ್ಕೆ ಸರ್ಕಾರಿ ಕೋವಿಡ್-19 ವಿಶೇಷ ಆಂಬುಲೆನ್ಸ್ ಬಳಕೆ.!