ರಾಜ್ಯ ರಾಜಕಾರಣದಲ್ಲಿ ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಭಾರೀ ಬದಲಾವಣೆಗಳಾಗಲಿವೆ. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ದಟ್ಟವಾಗಿದೆ.
ಸೋಮವಾರ ದಿಢೀರನೇ ಇಂತಹದ್ದೊಂದು ವದಂತಿ ಹಬ್ಬಿದ ಬೆನ್ನಲ್ಲೇ ಮುಖ್ಯಮಂತ್ರಿಗಳು ದೀಢೀರನೇ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆ ಅಧಿಸೂಚನೆ ಹೊರಡಿಸಿದ್ದು, ಬರೋಬ್ಬರಿ ಐದು ನೂರು ಕೋಟಿ ರೂಪಾಯಿಗಳ ಬೃಹತ್ ಮೊತ್ತವನ್ನು ಬಿಡುಗಡೆ ಮಾಡಲಾಗುವುದು ಎಂದು ಘೋಷಿಸಿದ್ದಾರೆ.
ಹೈಕಮಾಂಡ್ ಮಟ್ಟದಲ್ಲಿ ತಮ್ಮ ಬದಲಾವಣೆಯ ಕುರಿತ ಪ್ರಯತ್ನಗಳು ಬಿರುಸುಗೊಂಡಿರುವ ಹಿನ್ನೆಲೆಯಲ್ಲಿಯೇ ಮುಖ್ಯಮಂತ್ರಿಗಳು ನಾಳೆ ಸಂದರ್ಭ ಬಂದಲ್ಲಿ ತಮ್ಮ ವೀರಶೈವ-ಲಿಂಗಾಯಿತ ಸಮುದಾಯದ ತಮ್ಮ ಪರ ನಿಲ್ಲಲಿ. ಈ ಹಿಂದಿನಂತೆಯೇ ಸಮುದಾಯದ ಮಠಾಧೀಶರ ನೇತೃತ್ವದಲ್ಲಿ ತಮ್ಮ ಪರವಾಗಿ ಬೀದಿಗಿಳಿದು ಬಲಪ್ರದರ್ಶನ ಮಾಡಬೇಕಾದ ಸಂದರ್ಭ ಬಂದಾಗ ಇಡೀ ಸಮುದಾಯದ ಒಕ್ಕೊರಲಿನಿಂದ ಜೊತೆ ನಿಲ್ಲಲಿ ಎಂಬ ಉದ್ದೇಶದಿಂದಲೇ ಇಷ್ಟೊಂದು ತರಾತುರಿಯಲ್ಲಿ ಭಾರೀ ಮೊತ್ತದ ಹಣ ಘೋಷಿಸಿ ಅಧಿಸೂಚನೆ ಹೊರಡಿಸಿದ್ದಾರೆ ಎಂದೇ ಮುಖ್ಯಮಂತ್ರಿಗಳ ಈ ಕಾರ್ಯವನ್ನು ವಿಶ್ಲೇಷಿಸಲಾಗುತ್ತಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ವಲಸಿಗ ಶಾಸಕರ ನಾಯಕ ರಮೇಶ್ ಜಾರಕಿಹೊಳಿ ಮತ್ತು ಮೂಲ ಬಿಜೆಪಿ ಬಣದ ಪ್ರಮುಖ ಸಿ ಟಿ ರವಿ ಜಂಟಿಯಾಗಿ ಕಳೆದ ವಾರ ದೆಹಲಿಗೆ ತೆರಳಿ ಪಕ್ಷದ ವರಿಷ್ಠರೊಂದಿಗೆ ಮಾತುಕತೆ ನಡೆಸಿದ ಬೆನ್ನಲ್ಲೇ ಸಿಎಂ ಯಡಿಯೂರಪ್ಪ ವಿರೋಧಿ ಅಲೆ ದೆಹಲಿ ಮಟ್ಟದಲ್ಲಿ ಬಿರುಸುಗೊಂಡಿದೆ. ಆ ಹಿನ್ನೆಲೆಯಲ್ಲಿ ಯಡಿಯೂರಪ್ಪ ಪುತ್ರ ಮತ್ತು ರಾಜ್ಯ ಬಿಜೆಪಿಯ ಉದಯೋನ್ಮುಖ ಪ್ರಭಾವಿ ನಾಯಕ ಬಿ ವೈ ವಿಜಯೇಂದ್ರ ಕೂಡ ತರಾತುರಿಯಲ್ಲಿ ದೆಹಲಿ ಭೇಟಿ ಕೈಗೊಂಡಿದ್ದರು. ಸಿ ಟಿ ರವಿ ಅವರು ದೆಹಲಿಯಿಂದ ವಾಪಸ್ಸಾಗುತ್ತಲೇ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮುಂದಿನ ಬದಲಾವಣೆಗಳ ಬಗ್ಗೆ ಚರ್ಚಿಸಿದ್ದರು. ಅದೇ ರೀತಿ ವಿಜಯೇಂದ್ರ ಕೂಡ ದೆಹಲಿಯಿಂದ ನೇರವಾಗಿ ತಮ್ಮ ತಂದೆಯನ್ನು ಭೇಟಿ ಮಾಡಿ ಚರ್ಚಿಸಿದ್ದರು.
Also Read: ಊಹಾಪೋಹಗಳಿಗೆ ಕಾರಣವಾದ ಸಿಎಂ ಮಾಧ್ಯಮ ಸಲಹೆಗಾರ ಮಹಾದೇವ ಪ್ರಕಾಶ್ ರಾಜೀನಾಮೆ
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣಕರ್ತರಾದ ತಮಗೆ ಈ ಹಿಂದೆ ಮಾತುಕೊಟ್ಟಂತೆ ಪ್ರಮುಖ ಸ್ಥಾನ ಕೊಡಬೇಕು. ಸದ್ಯ ಉಪ ಚುನಾವಣೆ ನಡೆಯಲಿರುವ ಬೆಳಗಾವಿ ಕ್ಷೇತ್ರದಲ್ಲಿ ಪಕ್ಷ ಗೆಲುವು ಪಡೆಯಲು ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ಅನಿವಾರ್ಯ ಎಂದು ಜಾರಕಿಹೊಳಿ ಪಟ್ಟು ಹಿಡಿದಿದ್ದಾರೆ. ಈಗಾಗಲೇ ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆಯಾಗಿದ್ದು, ಅವರ ಮತ್ತೊಂದು ಬೇಡಿಕೆ ಸರ್ಕಾರದಲ್ಲಿ ಪ್ರಮುಖ ಸ್ಥಾನದ ಕುರಿತು ಚರ್ಚಿಸಲೆಂದೇ ರಮೇಶ್ ಜಾರಕಿಹೊಳಿ ದೆಹಲಿಗೆ ತೆರಳಿದ್ದರು. ಆ ವೇಳೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರೊಂದಿಗೆ ಸಮಾಲೋಚನೆ ನಡೆಸಿ ಬಂದಿದ್ದಾರೆ.
ಈ ಎಲ್ಲಾ ಹಿನ್ನೆಲೆಯಲ್ಲಿ ಹೈಕಮಾಂಡ್ ಮುಂದೆ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆಯೋ, ಅಥವಾ ನಾಯಕತ್ವ ಬದಲಾವಣೆಯೋ ಎಂಬ ಆಯ್ಕೆಯ ಗೊಂದಲ ಏರ್ಪಟ್ಟಿತ್ತು. ಆ ಗೊಂದಲ ಪರಿಹಾರದ ನಿಟ್ಟಿನಲ್ಲಿ ವಿಜಯೇಂದ್ರ ಅವರನ್ನು ಕರೆಸಿಕೊಂಡು ವರಿಷ್ಠರು ಮಾತುಕತೆ ನಡೆಸಿದ್ದಾರೆ. ಜೊತೆಗೆ ವರಿಷ್ಠರ ಸೂಚನೆ ಮೇರೆಗೆ ಬಿ ಎಲ್ ಸಂತೋಷ್ ಅವರು ರಾಜ್ಯ ಬಿಜೆಪಿ ಕೇಂದ್ರ ಕಚೇರಿಗೆ ಭೇಟಿ ನೀಡಿ ತಮ್ಮ ಆಪ್ತ ರಾಜ್ಯ ನಾಯಕರೊಂದಿಗೆ ಚರ್ಚೆ ನಡೆಸಿದ್ದಾರೆ. ಕೆ ಎಸ್ ಈಶ್ವರಪ್ಪ, ನಳೀನ್ ಕುಮಾರ್ ಕಟೀಲ್, ಆರ್ ಅಶೋಕ್, ಲಕ್ಷ್ಮಣ ಸವದಿಯೊಂದಿಗೆ ಮಾತುಕತೆ ನಡೆಸಿದ್ದು, ಆ ಮಾತುಕತೆಯ ಬೆನ್ನಲ್ಲೇ ಮುಖ್ಯಮಂತ್ರಿ ಬದಲಾವಣೆಯ ವದಂತಿ ಭುಗಿಲೆದ್ದಿದೆ.
Also Read: ಸಿಎಂ ಕಚೇರಿ ಬದಲಾವಣೆ ಪರ್ವ: ಎನ್ ಆರ್ ಸಂತೋಷ್ ರಾಜೀನಾಮೆ ಕ್ಷಣಗಣನೆ?
ನಿರಂತರವಾಗಿ ಯಡಿಯೂರಪ್ಪ ಅವರನ್ನು ನಿರ್ಲಕ್ಷಿಸುವ ಮೂಲಕ ರಾಜ್ಯ ಬಿಜೆಪಿ ಮುಖಂಡರ ನಡುವೆ ಅವರ ಪ್ರಾಮುಖ್ಯತೆಯನ್ನು ತಗ್ಗಿಸುವ ಕಾರ್ಯತಂತ್ರವನ್ನು ಅನುಸರಿಸಿದ ಹೈಕಮಾಂಡ್ ನಿರೀಕ್ಷೆಯಂತೆ, ಬಹುತೇಕ ಬಿಜೆಪಿ ರಾಜ್ಯ ನಾಯಕರು ಯಡಿಯೂರಪ್ಪ ಅವರಿಂದ ದೂರ ಸರಿದಿದ್ದಾರೆ. ಇದೀಗ ಕೆಲವೇ ಮಂದಿ ಮುಖಂಡರನ್ನು ಹೊರತುಪಡಿಸಿದರೆ ಯಡಿಯೂರಪ್ಪ ಅವರ ಜೊತೆಗೆ ಇರುವ ಪ್ರಬಲ ಶಕ್ತಿ ಎಂದರೆ ಅದು ಅವರ ಪುತ್ರ ವಿಜಯೇಂದ್ರ ಮಾತ್ರ. ಹಾಗಾಗಿ, ಹೈಕಮಾಂಡ್ ವಿಜಯೇಂದ್ರ ಅವರನ್ನು ಕರೆಸಿಕೊಂಡು, ನಾಯಕತ್ವ ಬದಲಾವಣೆಯ ಕುರಿತು ರಾಜ್ಯ ನಾಯಕರಿಂದ ಬರುತ್ತಿರುವ ಒತ್ತಡದ ಬಗ್ಗೆ ಮನವರಿಕೆ ಮಾಡಿಕೊಟ್ಟಿದೆ. ಸಂದರ್ಭದ ಬಂದರೆ, ಸಂಪುಟದಲ್ಲಿ ಗುರುತರ ಹೊಣೆಗಾರಿಕೆಯೊಂದಿಗೆ ಪ್ರಮುಖ ಸ್ಥಾನ ಮಾನ ನೀಡಿ, ಭವಿಷ್ಯದ ರಾಜ್ಯ ನಾಯಕರಾಗಿ ನಿಮ್ಮನ್ನು ಪಕ್ಷ ಬೆಳೆಸುತ್ತದೆ. ಹಾಗಾಗಿ ಸಿಎಂ ಕುರ್ಚಿ ಕೈತಪ್ಪಿದರೂ ನಿಮ್ಮ ಕುಟುಂಬಕ್ಕೆ ರಾಜಕೀಯವಾಗಿ ಅನ್ಯಾಯವಾಗದಂತೆ ನೋಡಿಕೊಳ್ಳಲಾಗುವುದು ಎಂದು ವಾಗ್ದಾನ ನೀಡಿದ್ದಾರೆ ಎನ್ನಲಾಗಿದೆ.
Also Read: ಮುಖ್ಯಮಂತ್ರಿ ರೇಸ್ನಲ್ಲಿ ನಳಿನ್ ಕುಮಾರ್ ಕಟೀಲ್?
ಆ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿಯೇ ಇದೀಗ ಮುಖ್ಯಮಂತ್ರಿ ಬದಲಾವಣೆಯ ಕಾರ್ಯತಂತ್ರ ದೆಹಲಿ ಮಟ್ಟದಲ್ಲಿ ಬಿರುಸುಗೊಂಡಿದೆ. ಅದರ ಸುಳಿವರಿತ ಯಡಿಯೂರಪ್ಪ, ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಚುರುಕಾಗಿದ್ದು, ದೊಡ್ಡ ಮಟ್ಟದ ವಿರೋಧದ ನಡುವೆಯೂ ಮರಾಠ ಅಭಿವೃದ್ಧಿ ನಿಗಮ ಸ್ಥಾಪಿಸಿ, ಉಪಚುನಾವಣೆಗೆ ತಯಾರಿ ಮಾಡಿಕೊಂಡಿದ್ದಾರೆ. ಅದರ ಬೆನ್ನಲ್ಲೇ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪಿಸಿ ಬೃಹತ್ ಮೊತ್ತದ ಹಣವನ್ನು ಮೀಸಲಿಡುವ ಮೂಲಕ ತಮ್ಮ ಸಮುದಾಯವನ್ನು ತಮ್ಮ ಬೆನ್ನಿಗೆ ಇಟ್ಟುಕೊಳ್ಳುವ ತಂತ್ರಗಾರಿಕೆ ಹೂಡಿದ್ದಾರೆ. ಜೊತೆಗೆ ಈವರೆಗೆ ಖಾಲಿ ಬಿದ್ದಿದ್ದ ಹಿಂದುಳಿದ ವರ್ಗಗಳ ಆಯೋಗಕ್ಕೂ ಬಂಟ ಸಮುದಾಯದ ಪ್ರಮುಖ ನಾಯಕ ಜಯಪ್ರಕಾಶ್ ಹೆಗ್ಡೆ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸುವ ಮೂಲಕ ತಮ್ಮ ಬಣದ ಶಕ್ತಿವರ್ಧನೆಗೆ ಮುಂದಾಗಿದ್ಧಾರೆ.
Also Read: CM ಬದಲಾವಣೆ ಸರ್ಕಸಿನಲ್ಲಿ ರಾಜ್ಯದ ಆಡಳಿತ ದಿಕ್ಕಟ್ಟು ಹೋಗಿದೆ -ಸಿದ್ದರಾಮಯ್ಯ
ಆದರೆ, ಈ ಎಲ್ಲಾ ಪ್ರಯತ್ನಗಳ ಹೊರತಾಗಿಯೂ ಇನ್ನು ಮೂರ್ನಾಲ್ಕು ದಿನಗಳಲ್ಲಿ ರಾಜ್ಯ ನಾಯಕತ್ವ ಬದಲಾದರೂ ಅಚ್ಚರಿ ಇಲ್ಲ. ಆ ನಿಟ್ಟಿನಲ್ಲಿ ಬಿಜೆಪಿಯ ಪ್ರಬಲ ಬಣ ಅವಿರತ ಶ್ರಮಿಸುತ್ತಿದ್ದು, ಅದಕ್ಕೆ ಹೈಕಮಾಂಡ್ ಆಶೀರ್ವಾದವೂ ಇದೆ ಎನ್ನಲಾಗುತ್ತಿದೆ. ಆ ಹಿನ್ನೆಲೆಯಲ್ಲಿ ಮುಂದಿನ ಈ ವಾರದ ರಾಜಕೀಯ ಬೆಳವಣಿಗೆಗಳು ಕುತೂಹಲ ಕೆರಳಿಸಿವೆ!