ಶತಮಾನಗಳಷ್ಟು ಹಳೆಯದಾದ ಬಾಬರಿ ಮಸೀದಿ ಕಟ್ಟಿರುವುದು ಸಹಸ್ರಮಾನಗಳ ಹಿಂದಿನ ಶ್ರೀರಾಮನ ಜನ್ಮಭೂಮಿಯ ಮೇಲೆಯೆಂಬ ವಿವಾದಕ್ಕೆ 18 ನೇ ಶತಮಾನಕ್ಕಿಂತಲೂ ಹಿಂದಿನ ಇತಿಹಾಸವಿದೆ. ಶ್ರೀರಾಮ ಜನ್ಮಭೂಮಿ ವಿಚಾರದಲ್ಲಿ ಕೋಮು ಗಲಭೆ ನಡೆದಿದ್ದು 1853ರಲ್ಲಿ ಎಂದು ಕೆಲವು ಉಲ್ಲೇಖಗಳಿವೆ. ಅಯೋಧ್ಯೆಯಲ್ಲಿ 1853 ರಲ್ಲಿ ಹಿಂದೂ ಮುಸ್ಲಿಮರೊಳಗೆ ಕೋಮುಗಲಭೆ ನಡೆಯಲು ಕಾರಣವಾದ ಬಾಬರ್ ಮಸೀದಿಯನ್ನು ಬಾಬರ್ ಸೂಚನೆ ಮೇರೆಗೆ ಕಟ್ಟಿಸಿದ್ದು, ಆಗಿನ ಮೊಘಲ್ ದಂಡಾಧಿಕಾರಿ ಮೀರ್ ಬಖಿ.
ಈ ರಾಮಜನ್ಮಭೂಮಿ ವಿವಾದ, ಸುಮಾರು ಎರಡುವರೆ ಶತಮಾನಗಳ ಕಾಲ ಭಾರತದಲ್ಲಿ ಹಲವಾರು ಕೋಮುಗಲಭೆಗಳಿಗೆ ಕಾರಣೀಭೂತವಾಗಿದ್ದಲ್ಲದೆ, ಮುಖ್ಯವಾಗಿ ಬಿಜೆಪಿ ರಾಷ್ಟ್ರವ್ಯಾಪಿ ಹರಡಲು ಮುಖ್ಯ ಕಾರಣಗಳಲ್ಲೊಂದಾಯ್ತು. 1992 ರಲ್ಲಿ ಅಡ್ವಾಣಿ ನೇತೃತ್ವದಲ್ಲಿ ನಡೆದ ರಥಯಾತ್ರೆ, ಅದರ ಹಿನ್ನಲೆಯಲ್ಲಿ ನಡೆದ ಬಾಬರೀ ಮಸೀದಿ ಧ್ವಂಸ ಬಳಿಕವಂತೂ ದೇಶವಿಡೀ ಹೊತ್ತು ಉರಿಯಿತು. ಉಭಯ ಧರ್ಮೀಯರಲ್ಲಿ ಆಗಾಧವಾದ ಬಿರುಕಿಗೆ ಕಾರಣವಾಯಿತು.
ಧಾರ್ಮಿಕ ಪ್ರತಿಷ್ಟೆಯ ಹಾಗೂ ಅಸ್ತಿತ್ವದ ಪ್ರಶ್ನೆಯಾಗಿ ಉಳಿದು ಬಿಟ್ಟ ಬಾಬರಿ ಪ್ರಕರಣದಲ್ಲಿ ಬಹುಸಂಖ್ಯಾತರ ಧಾರ್ಮಿಕ ಭಾವನೆಗಳಿಗೆ ಹೆಚ್ಚಿನ ಒತ್ತು ನೀಡಿ ರಾಮಮಂದಿರ ಮಾಡಲು ಸುಪ್ರೀಂ ಕೋರ್ಟ್ ತೀರ್ಪು ಹೊರಡಿಸಿತು. ಅಲ್ಲಿ ರಾಮಮಂದಿರ ನಿರ್ಮಿಸಲು ಕೇಂದ್ರ ಹಾಗೂ ರಾಜ್ಯ ಎರಡೂ ಸರ್ಕಾರಗಳು ಉತ್ಸುಕತೆ ತೋರುತ್ತಿದೆ. ಆಗಸ್ಟ್ 5 ಕ್ಕೆ ಭೂಮಿ ಪೂಜೆಯೂ ನಡೆಯಲಿದೆ.
ಸದ್ಯಕ್ಕೆ ಸಾಕಷ್ಟು ಸುದ್ದಿಯಲ್ಲಿರುವಂತಹ ರಾಮ ಜನ್ಮಭೂಮಿಯನ್ನು ಪೂಜ್ಯ ಭಾವದಿಂದ ಕಾಣುವಂತಹ ಮುಸ್ಲಿಂ ವ್ಯಕ್ತಿಯೊಬ್ಬರಿದ್ದಾರೆ ಅವರು ಶ್ರೀರಾಮನ ಭಕ್ತ ಕೂಡಾ. ಹೆಸರು ಮಹಮದ್ ಫೈಝ್ ಖಾನ್. ಅವರೇ ಹೇಳುವಂತೆ ಅವರೊಬ್ಬ ಅಪ್ರತಿಮ ರಾಮಭಕ್ತ. ಚಂಡೀಘಡ್ ಚಾಂಧ್‌ಖುರಿಯಿಂದ (ಶ್ರೀರಾಮನ ತಾಯಿ ಕೌಸಲ್ಯೆ ಗ್ರಾಮ) ಮಣ್ಣನ್ನು ಅಯೋಧ್ಯೆಯ ರಾಮಮಂದಿರ ಭೂಮಿಪೂಜೆಗೆ ಭಕ್ತಿಯಿಂದ ಸಾಗಿಸುತ್ತಿದ್ದಾರೆ. ಅದೂ 800 ಕಿಮೀ. ಬರಿಗಾಲಿನಲ್ಲೇ ನಡೆದು.
ಶ್ರೀರಾಮನನ್ನು “ಇಮಾಮ್-ಎ-ಹಿಂದ್”(ಭಾರತದ ನಾಯಕ) ಎಂದು ಸಂಬೋಧಿಸಿದ ಅವಿಭಜಿತ ಭಾರತದ ಖ್ಯಾತ ಉರ್ದು ಕವಿ ಅಲ್ಲಾಮ ಇಕ್ಬಾಲ್‌ರ (ಪಾಕಿಸ್ತಾನದ ರಾಷ್ಟ್ರೀಯ ಕವಿ) ಕವಿತೆ ಸಾಲೊಂದನ್ನು ಉಲ್ಲೇಖಿಸಿ, ನಾವು ಮೂಲದಲ್ಲಿ ಹಿಂದೂಗಳು, ಶ್ರೀರಾಮ ನಮ್ಮ ಪೂರ್ವಜ ಎಂದು ತಾನು ನಂಬುವುದಾಗಿ ಫೈಝ್ ಖಾನ್ ANI ಸುದ್ದಿ ಸಂಸ್ಥೆಗೆ ಹೇಳಿದ್ದಾರೆ. ಅಲ್ಲದೆ 15,000 ಕಿಮೀ ನಡೆದು ಹಲವು ದೇವಸ್ಥಾನಗಳಿಗೆ ಭೇಟಿ ನೀಡಿರುವುದಾಗಿಯೂ, ಅಲ್ಲೇ ತಂಗಿರುವುದಾಗಿಯೂ ಎಲ್ಲೂ ತನ್ನ ಧರ್ಮದ ಕಾರಣದಿಂದ, ಹೆಸರಿನ ಕಾರಣದಿಂದ ವಿರೋಧ ಎದುರಿಸಿಲ್ಲ ಎಂದು ಹೇಳಿದ್ದಾರೆ.
ಫೈಝ್‌ರ ಶ್ರೀ ರಾಮನ ಮೇಲಿರುವ ಭಕ್ತಿಗೆ ಹಲವು ರಾಮಭಕ್ತರು ಅಭಿನಂದನೆ ಸಲ್ಲಿಸಿದ್ದಾರೆ, ಶ್ಲಾಘಿಸಿದ್ದಾರೆ. ಅಯೋಧ್ಯೆಗೆ ಸ್ವಾಗತಿಸಿದ್ದಾರೆ. ಹಲವು ರಾಷ್ಟ್ರೀಯ ಸುದ್ದಿಸಂಸ್ಥೆಗಳು ಇವರ ಕುರಿತು ವರದಿ ಕೂಡಾ ಪ್ರಸಾರ ಮಾಡಿವೆ. ಪೈಝ್‌ಖಾನ್‌ರಿಗೆ ನಿನ್ನೆಯವರೆಗೂ ದೊರೆಯುತ್ತಿದ್ದ ಅಭೂತಪೂರ್ವ ಬೆಂಬಲಗಳೆಲ್ಲವೂ ಏಕಾಏಕಿ ನಿಂತಿದೆ. ಇಂದು ಅವರ ಅಯೋಧ್ಯೆ ಭೇಟಿಯ ಬೆಂಬಲಕ್ಕಿಂತಲೂ ವಿರೋಧ ಹೆಚ್ಚಾಗುತ್ತಿದೆ.
ಫೈಝ್ ಖಾನ್ ರಾಮಮಂದಿರ ಭೂಮಿಪೂಜೆಗೆ ಬರಬಾರದೆಂದು ಟ್ವೀಟರಿನಲ್ಲಿ ಟ್ರೆಂಡ್ ಆಗುತ್ತಿದೆ. #GOBACKFAIZKHAN ಎಂಬ ಹ್ಯಾಷ್‌ಟ್ಯಾಗ್‌ನಡಿಯಲ್ಲಿ ಸುಮಾರು ಒಂದು ಲಕ್ಷ ಟ್ವೀಟ್‌ಗಳು ಟ್ವಿಟರಿನಲ್ಲಿ ಟ್ರೆಂಡ್ ಆಗಿವೆ. ಅಯೋಧ್ಯೆಗೆ ಫೈಝ್‌ಖಾನ್ ಬರಬಾರದೆಂದೂ, ಹಿಂತಿರುಗಿ ಹೋಗಬೇಕೆಂದೂ ಇವರು ಬಯಸುತ್ತಿದ್ದಾರೆ. ರಾಮಜನ್ಮಭೂಮಿಗೆ ರಾಮನ ತಾಯಿ ಕೌಸಲ್ಯೆ ತವರಿನ ಮಣ್ಣು ಹೊತ್ತುಕೊಂಡು ಅದಮ್ಯ ಉತ್ಸಾಹದೊಂದಿಗೆ 800 ಕಿಮೀ ಕಾಲ್ನಡಿಗೆ ಯಾತ್ರೆ ಆರಂಭಿಸಿದ ಫೈಝ್ ಖಾನ್ ರಾಮಮಂದಿರ ಭೂಮಿಪೂಜೆಯಲ್ಲಿ ಭಾಗಿಯಾಗುತ್ತಾರಾ? ವಿರೋಧಗಳಿಗೆ ಹೆದರಿ ಹಿಂತಿರುತ್ತಾರಾ? ಎಂಬುದನ್ನು ಕಾದು ನೋಡಬೇಕಿದೆ.