ರಾಜ್ಯ ಸರ್ಕಾರ ಎಂದ ಮೇಲೆ ಮುಖ್ಯಮಂತ್ರಿ ಇರುತ್ತಾರೆ. ಒಂದು ವೇಳೆ ಮುಖ್ಯಮಂತ್ರಿ ಅನುಪಸ್ಥಿತಿಯಲ್ಲಿ ಕಾರ್ಯನಿರ್ವಹಿಸಲು ಉಪಮುಖ್ಯಮಂತ್ರಿ ಪಟ್ಟವನ್ನು ಹುಟ್ಟುಹಾಕಲಾಗಿದೆ. ಸಾಂವಿಧಾನಿಕವಾಗಿ ಉಪಮುಖ್ಯಮಂತ್ರಿ ಹುದ್ದೆಗೆ ಯಾವುದೇ ಸ್ಥಾನಮಾನ ಇಲ್ಲದೆ ಇದ್ದರೂ ಉಪಮುಖ್ಯಮಂತ್ರಿ ಪಟ್ಟಕ್ಕಾಗಿ ಪೈಪೋಟಿಯೂ ನಡೆಯುತ್ತದೆ. ಅದಕ್ಕೆ ಕಾರಣ ಮುಖ್ಯಮಂತ್ರಿ ಅನುಪಸ್ಥಿತಿಯಲ್ಲಿ ಮುಖ್ಯಮಂತ್ರಿಯ ಕಾರ್ಯಚಟುವಟಿಕೆಯ ಉಸ್ತುವಾರಿ ನೋಡಿಕೊಳ್ಳಬಹುದು ಎನ್ನುವುದರ ಜೊತೆಗೆ ಮುಖ್ಯಮಂತ್ರಿಯನ್ನು ಬಿಟ್ಟರೆ 2ನೇ ಹಂತದಲ್ಲಿ ನಾನೇ ಇರುವೆ ಎನ್ನುವ ಅಹಂಗಾಗಿ ಮಾತ್ರ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಮೊದಲನೇ ಬಾರಿ ಇಬ್ಬರು ಉಪಮುಖ್ಯಮಂತ್ರಿ ಹುದ್ದೆಯನ್ನು ಸೃಷ್ಟಿ ಮಾಡಲಾಯ್ತು. ಆ ಬಳಿಕ ಇದೀಗ ಆಪರೇಷನ್ ಕಮಲದ ಮೂಲಕ ಅಧಿಕಾರ ಹಿಡಿದ ಬಿ.ಎಸ್ ಯಡಿಯೂರಪ್ಪ ಸರ್ಕಾರದಲ್ಲಿ ಮೂವರು ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸಲಾಗಿದೆ. ಇದರಲ್ಲಿ ಮುಖ್ಯಮಂತ್ರಿ ನಂತರ ಯಾರಿಗೆ ಸ್ಥಾನ ಎನ್ನುವುದು ಇಲ್ಲೀವರೆಗೂ ಬಹಿರಂಗ ಆಗಿಲ್ಲ. ಆದರೆ ಇದೀಗ ಆ ಸಮಯ ಬಂದಾಗಿದೆ. ಮುಖ್ಯಮಂತ್ರಿ ಬಿ.ಎಸ್ಯಡಿಯೂರಪ್ಪ ಅವರನ್ನು ಬಿಟ್ಟರೆ ಬಿಜೆಪಿಯಲ್ಲಿ ಸದ್ಯದ ನಾಯಕತ್ವ ಯಾರಿಗೆ ವಹಿಸಲಾಗುತ್ತದೆ ಎನ್ನುವ ವಿಚಾರ ಬಹಿರಂಗ ಆಗಲಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಮುಖ್ಯಮಂತ್ರಿ ಬಿ.ಎಸ್ಯಡಿಯೂರಪ್ಪ ಕರೋನಾ ಸೋಂಕಿಗೆ ತುತ್ತಾಗಿರುವ ಕಾರಣ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆ ಪಡೆದು ವಾಪಸ್ಆದರೂ ಆಗಸ್ಟ್16ರ ತನಕ ಮನೆಯಲ್ಲಿಯೇ ಕ್ವಾರಂಟೈನ್ಆಗಬೇಕಾದ ಅನಿವಾರ್ಯತೆ ಇದೆ. ಹಾಗಾಗಿ ಈ ಬಾರಿಯ ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹಣ ಮಾಡುವುದು ಯಾರು ಎನ್ನುವ ಕುತೂಹಲ ಹೆಚ್ಚಾಗಿದೆ. ಮಾಣಿಕ ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣಕ್ಕೆ ಎಲ್ಲಾ ಸಿದ್ಧತೆಗಳು ನಡೆಯುತ್ತಿವೆ. ಮೂವರು ಉಪಮುಖ್ಯಮಂತ್ರಿಗಳಲ್ಲಿ ಒಬ್ಬರು ಧ್ವಜಾರೋಹಣ ಮಾಡುತ್ತಾರೆ ಎನ್ನಲಾಗಿದೆ. ಮೂವರಲ್ಲಿ ಒಬ್ಬರು ಯಾರು ಎನ್ನುವ ಪ್ರಶ್ನೆಗೆ ಉತ್ತರ ದೊರೆಯಬೇಕಿದೆ.
ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣದ ಬಗ್ಗೆ ಗೊಂದಲ ಉಂಟಾಗಿದೆ. ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹಣ ಮಾಡುವುದು ಯಾರು..? ಮುಖ್ಯಮಂತ್ರಿ ಹೊರತು ಪಕ್ಷದಲ್ಲಿ ಯಾರಿಗೆ ಸ್ಥಾನಮಾನ ಹೆಚ್ಚು ಎನ್ನುವ ಬಗ್ಗೆ ಬಿಜೆಪಿ ಪಕ್ಷದೊಳಗೇ ಲೆಕ್ಕಾಚಾರಗಳು ನಡೆಯುತ್ತಿವೆ. ಗೋವಿಂದ ಕಾರಜೋಳ ಹಾಗೂ ಅಶ್ವತ್ಥ ನಾರಾಯಣ ಕೂಡ ಮುಖ್ಯಮಂತ್ರಿ ಅವರ ಪ್ರಾಥಮಿಕ ಸಂಪರ್ಕಿತರಾಗಿರುವ ಕಾರಣ ಅವರೂ ಕೂಡ ಕ್ವಾರಂಟೈನ್ಆಗಿದ್ದಾರೆ. ಇದೀಗ ಉಳಿದವರು ಲಕ್ಷ್ಮಣ ಸವದಿ ಒಬ್ಬರೇ. ಸದ್ಯದ ತನಕ ಲಕ್ಷ್ಮಣ ಸವದಿ ಅವರೇ ಧ್ವಜಾರೋಹಣ ಮಾಡುವ ಸಾಧ್ಯತೆ ಹೆಚ್ಚಿದೆ.
ಸರ್ಕಾರ ರಚನೆ ವೇಳೆ ಸೋಲುಂಡು ಮನೆಯಲ್ಲಿದ್ದ ಲಕ್ಷ್ಮಣ ಸವದಿ ಅವರಿಗೆ ಉಪಮುಖ್ಯಮಂತ್ರಿ ಆಗುವ ಯೋಗ ಒಲಿದು ಬಂದಿತ್ತು. ಬಿ.ಎಸ್ಯಡಿಯೂರಪ್ಪ ಅವರಿಗೆ ಪರ್ಯಾಯವಾಗಿ ಲಿಂಗಾಯತ ಸಮುದಾಯದ ನಾಯಕನ್ನನ್ನು ಹುಟ್ಟುಹಾಕುವ ಯತ್ನವನ್ನು ಬಿಜೆಪಿ ಹೈಕಮಾಂಡ್ ಮಾಡುತ್ತಿದೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಇದೀಗ ಸಮಯ ಬದಲಾಗಿದೆ. ಸಿಎಂ ಬದಲಾವಣೆಯ ವಿಚಾರ ಚರ್ಚೆಗೆ ಬಂದಿದೆ. ಈ ವೇಳೆ ಅನಿವಾರ್ಯ ಕಾರಣಗಳಿಂದ ಲಕ್ಷ್ಮಣ ಸವದಿಗೆ ಅದೃಷ್ಟ ಖುಲಾಯಿಸಿದೆ.
ನಾಯಕತ್ವ ಬದಲಾವಣೆ ಆಗುತ್ತದೆಯೋ ಇಲ್ಲವೋ ಎನ್ನುವುದು ಇದೀಗ ಅಪ್ರಸ್ತುತ. ಆದರೆ ಲಕ್ಷ್ಮಣ ಸವದಿ ಇತ್ತೀಚಿನ ದಿನಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಇತ್ತೀಚಿಗಷ್ಟೇ ದೆಹಲಿಗೆ ತೆರಳಿ ಹೈಕಮಾಂಡ್ನಾಯಕರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದರು. ಆ ಬಳಿಕ ಬಿಜೆಪಿ ರಾಷ್ಟ್ರೀಯ ಪ್ರಧಾನ ಸಂಘಟನಾ ಕಾರ್ಯದರ್ಶಿ ಸಂತೋಷ್ ಅವರನ್ನೂ ಭೇಟಿಯಾಗಿದ್ದರು. ಬಿ.ಎಸ್ಯಡಿಯೂರಪ್ಪ ಅವರ ವಿರೋಧಿ ಬಣ ಸಂತೋಷ್ಅವರನ್ನೇ ನೆಚ್ಚಿಕೊಂಡಿದ್ದು, ಮುಂದಿನ ದಿನಗಳಲ್ಲಿ ಯಾವೆಲ್ಲಾ ತಿರುವುಗಳನ್ನು ಪಡೆಯುತ್ತದೆ ಹಾಗೂ ನಾಯಕತ್ವ ಬದಲಾವಣೆಗೆ ಏನೆಲ್ಲಾ ಸಂಚು ನಡೆಯುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.