ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (RCEP) ಮುಕ್ತ ವ್ಯಾಪಾರ ಒಪ್ಪಂದದಿಂದ ಭಾರತ ಹಿಂದೆ ಸರಿದಿದೆ. ಕೆಲವೊಂದು ಶರತ್ತುಗಳ ಹಿನ್ನೆಲೆಯಲ್ಲಿ Regional Comprehensive Economic Partnership (RCEP) ಒಪ್ಪಂದಕ್ಕೆ ಸಹಿ ಮಾಡಲು ಭಾರತ ಸದ್ಯಕ್ಕೆ ನಿರಾಕರಿಸಿದೆ. ಹಾಗಿದ್ದರೂ, RCEP ಒಪ್ಪಂದಕ್ಕೆ ಇನ್ನುಳಿದ 15 ದೇಶಗಳು ಸಹಿ ಮಾಡುವ ಮೂಲಕ ಹೊಸ ವ್ಯಾಪಾರ ವ್ಯವಸ್ಥೆ ಜಾರಿಗೆ ಬರಲಿದೆ.
ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್ ನಲ್ಲಿ ನಡೆಯುತ್ತಿರುವ ಅಸಿಯಾನ್ ರಾಷ್ಟ್ರಗಳ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡಿದ್ದರೂ, ಕೆಲವೊಂದು ತೆರಿಗೆ ವಿಚಾರದಲ್ಲಿ ಸ್ಪಷ್ಟತೆ ಇಲ್ಲದಿರುವುದರಿಂದ ಭಾರತ ಒಪ್ಪಂದದಿಂದ ಹಿಂಜರಿದಿದೆ. ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (RCEP) ಒಪ್ಪಂದ ಅದರ ಮೂಲಾಶಯವನ್ನು ಪ್ರತಿಫಲಿಸುತ್ತಿಲ್ಲ. ಈ ಒಪ್ಪಂದವು ನ್ಯಾಯಯುತವಾಗಿಲ್ಲ ಎಂದು ನರೇಂದ್ರ ಮೋದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
RCEP ಎಂಬುದು ವಿಶ್ವದ 16 ರಾಷ್ಟ್ರಗಳು ಸೇರಿ ಮಾಡಿಕೊಳ್ಳುತ್ತಿರುವ ವ್ಯಾಪಾರ ಒಪ್ಪಂದವಾಗಿದೆ. ಇದರಲ್ಲಿ ಬಹುಮುಖ್ಯವಾಗಿ ಭಾರತ ಸೇರಿದಂತೆ ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟದ (ASEAN) ಹತ್ತು ದೇಶಗಳು ಹಾಗೂ ಈ ದೇಶಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಂಡಿರುವ ಆಸ್ಟ್ರೇಲಿಯಾ, ಚೀನಾ, ದಕ್ಷಿಣ ಕೊರಿಯಾ, ಜಪಾನ್ ಮತ್ತು ನ್ಯೂಜಿಲೆಂಡ್ ಈ 6 ರಾಷ್ಟ್ರಗಳೂ ಇವೆ. ವಿಶ್ವ ಜಿಡಿಪಿಯ ಶೇಕಡ 30 ಈ ದೇಶಗಳ ಪಾಲಾಗಿದ್ದು, ವಿಶ್ವ ಜನಸಂಖ್ಯೆಯಲ್ಲಿ ಅರ್ಧದಷ್ಟು ಭಾಗವನ್ನು ಈ 16 ರಾಷ್ಟ್ರಗಳು ಹೊಂದಿವೆ. ಇದು 50 ಟ್ರಿಲಿಯನ್ ಡಾಲರ್ ಇಕಾನಮಿ. ಈ ಹಿನ್ನೆಲೆಯಲ್ಲಿ ಈ ವ್ಯಾಪಾರ ಒಪ್ಪಂದವು ಜಾಗತಿಕವಾಗಿ ಮಹತ್ವ ಪಡೆದಿದೆ.
ಹಲವು ವರ್ಷಗಳಿಂದ ಈ ನಿಟ್ಟಿನಲ್ಲಿ ಪ್ರಯತ್ನ ನಡೆದಿತ್ತು. RCEP ಒಪ್ಪಂದದ ಅಂತಿಮ ಘಟ್ಟದಲ್ಲಿ ಭಾರತ ಸಹಿ ಹಾಕಲು ಹಿಂದೇಟು ಹಾಕಲು ಕಾರಣಗಳಿವೆ. ಭಾರತವನ್ನು ಕಾಡುತ್ತಿರುವುದು ಚೀನಾ ಎಂಬ ವ್ಯಾಪಾರಿ ಪೆಂಡಭೂತ. RCEP ಒಪ್ಪಂದಕ್ಕೆ ಸಹಿ ಹಾಕಿದರೆ ಚೀನಾ ದೇಶದಿಂದ ಭಾರೀ ದೊಡ್ಡ ಪ್ರಮಾಣದಲ್ಲಿ ವಿವಿಧ ವಸ್ತುಗಳು ತೀರಾ ಕಡಿಮೆ ಬೆಲೆಯಲ್ಲಿ ಭಾರತೀಯ ಮಾರುಕಟ್ಟೆ ಲಗ್ಗೆ ಹಾಕುವ ಅಪಾಯವಿದೆ. ಹಾಗೇನಾದರೂ ಆದಲ್ಲಿ, ಭಾರತದ ಗುಡಿ ಕೈಗಾರಿಕೆ, ಸ್ಥಳೀಯ ಉದ್ಯಮ, ಕೃಷಿ ಮಾರುಕಟ್ಟೆ ಸಂಕಷ್ಟಕ್ಕೆ ಬೀಳುವ ಸಾಧ್ಯತೆ ನಿಚ್ಛಳವಾಗಿದೆ. ಈಗಾಗಲೇ ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಅತ್ಯಂತ ಕರಾಳವಾಗಿದೆ. ಇಂತಹ ಸಂದರ್ಭದಲ್ಲೇ ಕೇಂದ್ರ ಸರಕಾರ ಇಂತಹ ಒಪ್ಪಂದವೊಂದಕ್ಕೆ ಸಹಿ ಮಾಡಿದಲ್ಲಿ ಬಹುಸಂಖ್ಯೆಯಲ್ಲಿ ಇಂತಹ ಕ್ಷೇತ್ರಗಳನ್ನು ಅವಲಂಬಿಸಿರುವ ಮಂದಿ ಆಡಳಿತಾರೂಢ ರಾಜಕೀಯ ಪಾರ್ಟಿಯ ವಿರುದ್ಧ ನಿಲ್ಲುವುದು ಖಚಿತವಾಗಿದೆ.
ಇತ್ತ ಅಮೆರಿಕಾ ದೇಶದ ವಿರುದ್ಧ ಹಿಂದಿನಿಂದಲೂ ಹಾವು ಮುಂಗುಸಿ ಆಟ ಆಡುತ್ತಿರುವ ಚೀನಾ ದೇಶವು ಭಾರತದ ಹೊರತಾಗಿಯೂ ಮುಕ್ತ ವ್ಯಾಪಾರ ಒಪ್ಪಂದ ಅಂತಿಮಗೊಳಿಸುವಲ್ಲಿ ಸಫಲವಾಗಿದೆ. ಇಂತಹ ಒಪ್ಪಂದದಿಂದ ಬಹುದೊಡ್ಡ ಪ್ರಯೋಜನ ಚೀನಾ ದೇಶ ಪಡೆದುಕೊಳ್ಳಲಿದೆ. ಅಮೆರಿಕಾ ವಿರುದ್ಧ ವಾಣಿಜ್ಯ ಯುದ್ಧ ಸಾರಿರುವ ಚೀನಾ ತಾನೇ ದೊಡ್ಡಣ್ಣ ಎಂಬುದನ್ನು ತೋರಿಸಿಕೊಳ್ಳಬೇಕಾಗಿದೆ. ಈಗಾಗಲೇ ASEAN ದೇಶಗಳಾದ ಬ್ರೂನಿ, ಕಾಂಬೊಡಿಯ, ಇಂಡೋನೇಶಿಯ, ಲಾವೊಸ್, ಮಲೇಶಿಯ, ಮ್ಯಾನ್ಮರ್, ಫಿಲಿಪೈನ್ಸ್, ಸಿಂಗಾಪುರ, ಥೈಲೆಂಡ್, ವಿಯೆಟ್ನಾಂ, ದಕ್ಷಿಣ ಕೊರಿಯ ಹಾಗೂ ಜಪಾನ್ ದೇಶಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ ಹೊಂದಿರುವ ಭಾರತಕ್ಕೆ ವ್ಯಾವಹಾರಿಕವಾಗಿ ಕಹಿ ಅನುಭವ ಆಗಿದೆ. ಇದಕ್ಕೆಲ್ಲಕಿಂತಲೂ ಬಹುದೊಡ್ಡ ಸಮಸ್ಯೆಯೇ ಚೀನಾ ಎಂಬ ದೈತ್ಯ ವ್ಯಾಪಾರಿ ದೇಶ.
ಈಗಾಗಲೇ ಚೀನಾದೊಂದಿಗೆ ದೊಡ್ಡ ಪ್ರಮಾಣದ ವ್ಯವಹಾರ ಹೊಂದಿರುವ ಭಾರತ ಅಷ್ಟೇ ದೊಡ್ಡ ಮೊತ್ತದ ವ್ಯಾಪಾರ ಕೊರತೆಯನ್ನೂ ಹೊಂದಿದೆ. ಚೀನಾ ಮಾತ್ರವಲ್ಲದೆ, 15 ದೇಶಗಳ ಪೈಕಿ 11 ದೇಶಗಳೊಡನೆ ಕೂಡ ಭಾರತದ ವ್ಯವಹಾರ ಇದೇ ರೀತಿ ಇದೆ. ಭಾರತದ ಶೇಕಡ 34 ರಷ್ಟು ಆಮದು ಈ ಪ್ರದೇಶಗಳಿಂದ ಆಗುತ್ತದೆ. ಆದರೆ, ರಫ್ತು ಮಾತ್ರ ಶೇಕಡ 21 ಮಾತ್ರ. ಕೃಷಿ ಕ್ಷೇತ್ರದಲ್ಲಿ ಭಾರತ ಸದ್ಯ ತೀರ ಅಲ್ಪ ಪ್ರಮಾಣದ ಹಾಲು ಮತ್ತು ಡೈರಿ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಈಗ ಹಾಲಿನ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಕಡಿತ ಮಾಡಲು ಯಶಸ್ವಿಯಾದರೆ ಭಾರತಕ್ಕೆ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯ ದೇಶಗಳಿಂದ ರಫ್ತು ಪ್ರಮಾಣ ಬಹುದೊಡ್ಡ ಮೊತ್ತದಾಗಿರುತ್ತದೆ. ಇದು ನಮ್ಮ ದೇಶದ ರೈತರ ಮೊದಲ ಆತಂಕವಾಗಿದೆ.
ಚೀನಾ ಈಗಾಗಲೇ ಕಡಿಮೆ ಬೆಲೆಯ ಇಲೆಕ್ಟ್ರಾನಿಕ್ ಉಪಕರಣಗಳನ್ನು ರಫ್ತು ಮಾಡುತ್ತಿದೆ. ಒಪ್ಪಂದಕ್ಕೆ ಸಹಿ ಮಾಡಿದಾಗ ರಫ್ತು ಪ್ರಮಾಣ ಇನ್ನಷ್ಟು ಹೆಚ್ಚಳ ಆಗುವುದು ನಿಚ್ಛಳ. ಈ ಒಪ್ಪಂದದಿಂದ ಭಾರತದ ರಫ್ತುದಾರರಿಗೆ ಪ್ರಯೋಜನವೂ ಇದೆ. ಆದರೆ, ಅದಕ್ಕೂ ಮುನ್ನ ಭಾರತದ ನಿರ್ದಿಷ್ಟ ಕೈಗಾರಿಕಾ ಮತ್ತು ಕೃಷಿ ಕ್ಷೇತ್ರಗಳನ್ನು ಸಬಲೀಕರಣ ಮಾಡಬೇಕಾದ ಅಗತ್ಯವೂ ಇದೆ. ಭಾರತ ಸದ್ಯಕ್ಕೆ ಒಪ್ಪಂದಕ್ಕೆ ಸಹಿ ಮಾಡದಿದ್ದರೂ, ಮುಂದಿನ ದಿನಗಳಲ್ಲಿ ಆಲೋಚನೆ ಮಾಡಬೇಕಾದ ಅನಿವಾರ್ಯತೆ ಬರಬಹುದು.
ಭಾರತ ಈಗಾಗಲೇ ಇತರ ದೇಶಗಳೊಂದಿಗೆ ದ್ವಿಪಕ್ಷೀಯ ಒಪ್ಪಂದಗಳನ್ನು ಹೊಂದಿದ್ದು, RCEP ಒಪ್ಪಂದದ ಅನಂತರ ಚೀನಾ, ಆಸ್ಟ್ರೇಲಿಯ, ನ್ಯೂಜಿಲೆಂಡ್ ನಂತಹ ದೇಶಗಳ ವ್ಯಾಪಕ ಮಾರುಕಟ್ಟೆ ಅವಕಾಶವನ್ನು ಬಳಸಿಕೊಳ್ಳಬಹುದು. ಉದಾಹರಣೆಗೆ, ನಮ್ಮ ದೇಶದ ಔಷಧ ತಯಾರಕರು ಚೀನಾದ ಮಾರುಕಟ್ಟೆಯ ಲಾಭ ಪಡೆದುಕೊಳ್ಳಬಹುದು. ಅಮೆರಿಕಾ ದೇಶದ ಅನಂತರ ಬಹುದೊಡ್ಡ ಔಷಧ ಬಳಕೆ ಮಾಡುವ ದೇಶ ಚೀನಾ.
ಅದೇ ರೀತಿ ಹತ್ತಿ ಬಟ್ಟೆ ರಫ್ತು ಮಾಡುವ ದೇಶದ ವ್ಯಾಪಾರಿಗಳಿಗೆ ಇನ್ನಷ್ಟು ಉತ್ತೇಜನ ದೊರೆಯಲಿದೆ. ರಫ್ತುದಾರರ ಸಂಘಟನೆಗಳು ಹಿಂದಿನಂದಲೇ ಇಂತಹ ಒಪ್ಪಂದವೊಂದಕ್ಕೆ ಒತ್ತಾಯಿಸುತ್ತಲೇ ಬಂದಿದ್ದಾರೆ. RCEP ದೇಶಗಳ ಒಟ್ಟು ವ್ಯಾಪಾರ ವಹಿವಾಟು ಅಂದಾಜು ಮೂರು ಟ್ರಿಲಿಯನ್ ಡಾಲರ್ ಆಗಿದೆ. ಭಾರತ ಇಂತಹ ಒಪ್ಪಂದವೊಂದರ ಭಾಗವಾಗದಿದ್ದರೆ ಬಹುದೊಡ್ಡ ಮಾರುಕಟ್ಟೆಯಿಂದ ವಂಚಿತ ಆಗಲಿದೆ ಎನ್ನುತ್ತಾರೆ ರಫ್ತು ಸಂಘಟನೆಗಳ ಮುಖಂಡರು.
ಈಗಾಗಲೇ ಸಂಕಷ್ಟದಲ್ಲಿ ಇರುವ ಆಟೊಮೊಬೈಲ್, ಡೈರಿ ಉತ್ಪಾದಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುತ್ತಿದೆ Confederation of Indian Industry (CII). ಆದರೆ, ಬೀದಿಗಿಳಿದು ಹೋರಾಟ ಮಾಡಿರುವುದು ರೈತ ಸಮುದಾಯ ಮಾತ್ರ. ಸ್ವಯಂ ಸೇವಾ ಸಂಘದ ಸ್ವದೇಶಿ ಜಾಗರಣ ಮಂಚ್, RCEP ಒಪ್ಪಂದಕ್ಕೆ ವಿರೋಧ ವ್ಯಕ್ತಪಡಿಸಿದೆ. ಆದರೆ, ಪರಿವಾರದ ಇತರ ಕೆಲವು ಸಂಘಟನೆಗಳು ಇದರ ಪರವಾಗಿವೆ.