ಮೆಟ್ರೋ ರೈಲು ಕಾರ್ ಶೆಡ್ ನಿರ್ಮಾಣಕ್ಕೆಂದು ಮುಂಬಯಿಯ ಆರೆ ಮಿಲ್ಕ್ ಕಾಲನಿಯ ಮರಗಳನ್ನು ಕಡಿಯುವುದನ್ನು ಆ ಮಹಾನಗರದ ಪರಿಸರಪ್ರೇಮಿಗಳು ತೀವ್ರವಾಗಿ ವಿರೋಧಿಸಿದ್ದಾರೆ. ಚಿಪ್ಕೋ ಮಾದರಿಯ ಚಳವಳಿಯೂ ನಡೆಯಿತು. ರಾತ್ರೋ ರಾತ್ರಿ ಮರ ಕಡಿದ ಕುರಿತು ಆಕ್ರೋಶ ಪ್ರತಿಭಟನೆ ವ್ಯಕ್ತವಾಯಿತು. ಪ್ರತಿಭಟಿಸಿದ 29 ಮಂದಿ ಹೋರಾಟಗಾರರನ್ನು ಪೊಲೀಸರು ಬಂಧಿಸಿದರು. ಮರ ಕಡಿಯುವ ಸಂಬಂಧದಲ್ಲಿ ಮುಂದಿನ ವಿಚಾರಣೆಯ ದಿನಾಂಕದ ತನಕ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ಸುಪ್ರೀಂ ಕೋರ್ಟಿನ ವಿಶೇಷ ನ್ಯಾಯಪೀಠ ಕಳೆದ ಸೋಮವಾರ ಆದೇಶ ನೀಡಿತು. ವಿಚಾರಣೆಯನ್ನು ಅಕ್ಟೋಬರ್ 21ಕ್ಕೆ ಮುಂದೂಡಲಾಗಿದೆ.
ಮುಂಬಯಿ ಮೆಟ್ರೋ ರೈಲು ಸಂಸ್ಥೆ ಆರೆ ಕಾಲನಿಯ ಕಾರ್ ಶೆಡ್ ಪ್ರದೇಶದಲ್ಲಿ ಇನ್ನಷ್ಟು ಮರಗಳನ್ನು ಕಡಿಯುವಂತಿಲ್ಲ. ಯೋಜನೆಯ ನಿರ್ಮಾಣವನ್ನು ಮುಂದುವರೆಸಬಹುದು ಎಂದು ಈ ಆದೇಶದಲ್ಲಿ ಸೂಚಿಸಲಾಗಿದೆ. ಈ ನಡುವೆ ಬಂಧಿಸಲಾಗಿದ್ದ ಹೋರಾಟಗಾರರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಕಾರ್ ಶೆಡ್ ನಿರ್ಮಾಣಕ್ಕೆ ಅಗತ್ಯವಿದ್ದಷ್ಟು ಮರಗಳನ್ನು ಈಗಾಗಲೆ ಕಡಿಯಲಾಗಿದೆ. ಹೆಚ್ಚುವರಿ ಮರಗಳನ್ನು ಕಡಿಯುವ ಅಗತ್ಯವೇ ಇಲ್ಲ ಎಂದು ಮಹಾರಾಷ್ಟ್ರ ಸರ್ಕಾರ ನ್ಯಾಯಾಲಯಕ್ಕೆ ಅರಿಕೆ ಮಾಡಿಕೊಂಡಿದೆ. 2,185 ಮರಗಳನ್ನು ಕಡಿಯಲು ಮುಂಬಯಿ ಮೆಟ್ರೋ ರೈಲು ಸಂಸ್ಥೆಗೆ ಬೃಹನ್ಮುಂಬಯಿ ನಗರಪಾಲಿಕೆಯ ವೃಕ್ಷ ಪ್ರಾಧಿಕಾರವು ಅನುಮತಿ ನೀಡಿತ್ತು.
ಕಾರ್ ಶೆಡ್ ನಿರ್ಮಿಸಲು ಉದ್ದೇಶಿಸಲಾಗಿರುವ ಈ ಪ್ರದೇಶವು ಮಿಠ್ಠಿ ನದಿಯ ದಂಡೆಯಲ್ಲಿದೆ. ಹಲವು ಉಪನದಿಗಳು ಕಾಲುವೆಗಳು ಈ ನದಿಯನ್ನು ಸೇರುವ ಜಾಗವಿದು. ಮಾಲಿನ್ಯಗೊಳಿಸುವ ಉದ್ಯಮದ ನಿರ್ಮಾಣದಿಂದ ಮಳೆಗಾಲದಲ್ಲಿ ಮುಂಬಯಿ ಜಲಾವೃತಗೊಳ್ಳುವ ಸ್ಥಿತಿ ಇನ್ನಷ್ಟು ಉಲ್ಬಣಗೊಳ್ಳಲಿದೆ. ಈ ಯೋಜನೆಯನ್ನು ನಿಲ್ಲಿಸಬೇಕೆಂದು ಕೋರಿ ದೆಹಲಿಯ ಹೊರವಲಯದ ಗ್ರೇಟರ್ ನೋಯ್ಡಾ ನಿವಾಸಿ 21 ವರ್ಷದ ರಿಶವ್ ರಂಜನ್ ಎಂಬ ಯುವಕ ಸುಪ್ರೀಮ್ ಕೋರ್ಟಿನ ಮುಖ್ಯ ನ್ಯಾಯಮೂರ್ತಿಯವರಿಗೆ ಪತ್ರ ಬರೆದಿದ್ದ. ನ್ಯಾಯಾಲಯ ಈ ಪತ್ರವನ್ನು ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಎಂದು ಪರಿಗಣಿಸಿ ವಿಚಾರಣೆಗೆ ಅಂಗೀಕರಿಸಿದೆ.
ಈ ಮೆಟ್ರೋ ಶೆಡ್ ನಿರ್ಮಾಣ ಕುರಿತು ಪರಿಸರ ಹೋರಾಟಗಾರರು ಮತ್ತು ರಾಜ್ಯ ಸರ್ಕಾರದ ನಡುವಣ ಜಟಾಪಟಿ 2014ರಿಂದ ಜರುಗಿದೆ. ಆರೆ ಕಾಲನಿಯಲ್ಲಿ ಮರಗಳನ್ನು ಕಡಿಯಬಾರದೆಂಬ ಒಟ್ಟು ನಾಲ್ಕು ಅರ್ಜಿಗಳನ್ನು ಬಾಂಬೆ ಹೈಕೋರ್ಟ್ ವಜಾ ಮಾಡಿದೆ
ಆರೆ ಕಾಲನಿಯ ತಾಣ ಶೆಡ್ ನಿರ್ಮಾಣಕ್ಕೆ ಅತ್ಯಂತ ಅನುಕೂಲಕರ ಎಂಬುದು ಸರ್ಕಾರ ಮತ್ತು ಮುಂಬಯಿ ಮೆಟ್ರೋ ಸಂಸ್ಥೆ ಹೇಳುತ್ತವೆ. ಆರೆ ಕಾಲನಿ ಸಾಂತಾಕ್ರೂಜ್ ಎಲೆಕ್ಕ್ರಾನಿಕ್ಸ್ ರಫ್ತು ಸಂಸ್ಕರಣ ವಲಯದಿಂದ ಕೇವಲ 800 ಮೀಟರುಗಳಷ್ಟು ದೂರದಲ್ಲಿದೆ. ಗಾಡಿಗಳ ನಿರ್ವಹಣೆಯ ಸೌಲಭ್ಯ ಹತ್ತಿರದಲ್ಲಿದ್ದಷ್ಟೂ ಒಳ್ಳೆಯದು. ತುರ್ತು ಸಂದರ್ಭಗಳಲ್ಲಿ ಡಿಪೋವನ್ನು ಸುಲಭವಾಗಿ ತಲುಪುವಂತಿರಬೇಕು. ಆರೆ ಕಾಲನಿಯ ಜಾಗ ರಾಜ್ಯ ಸರ್ಕಾರಕ್ಕೆ ಸೇರಿದ್ದು. ಹೀಗಾಗಿ ಭೂಸ್ವಾಧೀನದ ಸುದೀರ್ಘ ರಗಳೆ ಇರುವುದಿಲ್ಲ. ಸಾರ್ವಜನಿಕರ ಮೇಲೆ ಹೆಚ್ಚಿನ ಹೊರೆಯೂ ಬೀಳುವುದಿಲ್ಲ ಎಂಬುದು ಅವುಗಳ ವಾದ.
ಸಾಂತಾಕ್ರೂಜ್ ಎಲೆಕ್ಕ್ರಾನಿಕ್ಸ್ ರಫ್ತು ಸಂಸ್ಕರಣ ವಲಯದಿಂದ ಹತ್ತು ಕಿ.ಮೀ.ದೂರದಲ್ಲಿರುವ ಕಂಜೂರ್ಮಾರ್ಗ್ ನಲ್ಲಿ ಡಿಪೋ ನಿರ್ಮಿಸಬೇಕೆಂಬುದು ಹೋರಾಟಗಾರರ ಆಗ್ರಹ. ಹೋರಾಟಗಾರರ ಈ ವಾದವನ್ನು ಬಾಂಬೆ ಹೈಕೋರ್ಟ್ ತಳ್ಳಿ ಹಾಕಿದೆ. ಈ ಪ್ರದೇಶದಲ್ಲಿ ಭೂಸ್ವಾಧೀನ ದುಬಾರಿ. ಮೆಟ್ರೋದ ಮೇಲೆ ಐದು ಸಾವಿರ ಕೋಟಿ ರುಪಾಯಿಗಳ ಹೆಚ್ಚುವರಿ ಹೊರೆ ಬೀಳಲಿದೆ. ವೆಚ್ಚ ಹೆಚ್ಚುವುದಲ್ಲದೆ ಯೋಜನೆಯೂ ವಿಳಂಬವಾಗಲಿದೆ ಎಂಬುದು ಮೆಟ್ರೋ ವಿವರಣೆ. ಕಂಜೂರ್ಮಾರ್ಗ್ ಪ್ರದೇಶ ಕಾನೂನು ವ್ಯಾಜ್ಯದಲ್ಲಿದೆ ಎಂದು ಸರ್ಕಾರ ಈ ಹಿಂದೆ ಹೇಳಿತ್ತು. ಆದರೆ ಈ ಪ್ರದೇಶವನ್ನು ಬೇರೊಂದು ಮೆಟ್ರೋ ಮಾರ್ಗಕ್ಕೆ ಡಿಪೋವನ್ನಾಗಿ ಬಳಸಿಕೊಳ್ಳುವುದಾಗಿ ಬಾಂಬೆ ಹೈಕೋರ್ಟ್ ಮುಂದೆ ನಿವೇದಿಸಿಕೊಂಡಿದೆ.
ಉದ್ದೇಶಿತ ಕಾರ್ ಶೆಡ್ ನಲ್ಲಿ ಮೆಟ್ರೋ ರೈಲುಗಳನ್ನು ತೊಳೆಯುವ, ನಿರ್ವಹಣೆ ಮಾಡುವ, ದುರಸ್ತಿ ಮಾಡುವ ಸೌಲಭ್ಯಗಳಿರುತ್ತವೆ. ರೇಲ್ವೆ ಕಾರ್ ಶೆಡ್ ಎಂಬುದು ‘ಕೆಂಪು ವರ್ಗ’ಕ್ಕೆ ಸೇರಿದ ಕೈಗಾರಿಕೆ. ಅರ್ಥಾತ್ ಅತಿ ಹೆಚ್ಚು ಪರಿಸರ ಮಾಲಿನ್ಯ ಉಂಟು ಮಾಡುತ್ತದೆ. ಎಣ್ಣೆ, ಗ್ರೀಸ್ ಹಾಗೂ ಎಲೆಕ್ಟ್ರಿಕಲ್ ಕಸವಲ್ಲದೆ ಆಮ್ಲ ಮತ್ತು ಪೇಯಿಂಟ್ ಕಸವೂ ಇಲ್ಲಿ ಉತ್ಪನ್ನವಾಗುತ್ತದೆ. ತ್ಯಾಜ್ಯಗಳನ್ನು ಮಿಠ್ಠಿ ನದಿಯಲ್ಲಿ ಯಲ್ಲಿ ವಿಸರ್ಜಿಸಲಾಗುತ್ತದೆ. ಅಂತರ್ಜಲ ಮಲಿನಗೊಳ್ಳುತ್ತದೆ. ಡಿಪೋ ನಿರ್ಮಿಸುವುದರಿಂದ ಅಂತರ್ಜಲದ ಮಿತಿಮೀರಿದ ಬಳಕೆಗೂ ದಾರಿಯಾಗಲಿದೆ ಎಂದು ದೂರಲಾಗಿದೆ.
ಜೀಶನ್ ಮಿರ್ಜಾ ಮತ್ತು ರಾಜೇಶ್ ಸನಪ್ ಎಂಬುವರು ಆರೆ ಮಿಲ್ಕ್ ಕಾಲನಿ ಮತ್ತು ಫಿಲ್ಮ್ ಸಿಟಿಯ ಜೀವ ವೈವಿಧ್ಯ ಕುರಿತು ತಯಾರಿಸಿರುವ ವರದಿಯ ಪ್ರಕಾರ ಈ ಪ್ರದೇಶ 86 ಪಾತರಗಿತ್ತಿ ಪ್ರಭೇದಗಳು, 90 ಜೇಡ ಪ್ರಭೇದಗಳು, 46 ಉರಗ ಪ್ರಭೇದಗಳು, 34 ಕಾಡು ಹೂವು ಹಾಗೂ ಒಂಬತ್ತು ಚಿರತೆ ಪ್ರಭೇದಗಳ ತವರು.
ಬಾಂಬೆ ಮೆಟ್ರೋಪಾಲಿಟನ್ ಕಾರ್ಪೊರೇಷನ್ ನ ಮರಗಣತಿಯ ಪ್ರಕಾರ ಆರೆ ಕಾಲನಿ ಪ್ರದೇಶದಲ್ಲಿ ನಾಲ್ಕೂವರೆ ಲಕ್ಷ ಮರಗಳಿವೆ. ಮುಂಬಯಿಯ ಹಸಿರು ಶ್ವಾಸಕೋಶ ಎಂದು ಈ ಪ್ರದೇಶವನ್ನು ಬಣ್ಣಿಸಲಾಗುತ್ತದೆ. ಆರೆ ಡಿಪೋ ನಿರ್ಮಿಸಲು ಉದ್ದೇಶಿಸಿರುವ ಜಾಗವು ಮಿಠ್ಠಿ ನದಿಯ ಅಳಿದುಳಿದ ಏಕೈಕ ನೈಸರ್ಗಿಕ ಪ್ರವಾಹ ಬಯಲು. ಈ ಬಯಲನ್ನು ಮರಗಳನ್ನು ಕೆಡವಿ ನಿರ್ಮಾಣ ಚಟುವಟಿಕೆಗೆ ಬಳಸಿದರೆ ಮಳೆಗಾಲದಲ್ಲಿ ಮುಳುಗಡೆ ಸಮಸ್ಯೆ ಉಲ್ಬಣಗೊಳ್ಳಲಿದೆ.
ಮೆಟ್ರೋ ಕಾರ್ ಶೆಡ್ಡನ್ನು ಕೇವಲ 33 ಹೆಕ್ಟೇರುಗಳಲ್ಲಿ ನಿರ್ಮಿಸಲಾಗುವುದು. ಇದು 1,278 ಹೆಕ್ಟೇರುಗಳಷ್ಟು ವಿಸ್ತೀರ್ಣದ ಹಸಿರುಪಟ್ಟಿಯ ಕೇವಲ ಶೇ.ಎರಡರಷ್ಟಾಗುತ್ತದೆ ಇದು. ಈ 33 ಹೆಕ್ಟೇರ್ ವಿನಾ ಆರೆಯ ಉಳಿದೆಲ್ಲ ಪ್ರದೇಶ ಹಿಂದಿನಂತೆಯೇ ಉಳಿಯಲಿದೆ ಎಂಬುದು ಮೆಟ್ರೋ ಸಂಸ್ಥೆಯ ಭರವಸೆ.
ಕಾರ್ ಶೆಡ್ ಗೆ ಮೀಸಲಿಡಲಾದ ಒಟ್ಟು ಜಮೀನಿನ ಶೇ17ರಷ್ಟು ಜಮೀನಿನ ಮೇಲೆ ನಿಂತಿದ್ದ ಮರಗಳನ್ನು ಮಾತ್ರವೇ ಮೊನ್ನೆ ವಾರಾಂತ್ಯದಲ್ಲಿ ಕಡಿದು ಕೆಡವಲಾಗಿದೆ. ಈ ಪೈಕಿ ಶೇ.60ರಷ್ಟು ಮರಗಳು ದೇಸೀ ಅಲ್ಲ. ಇವುಗಳ ಜಾಗದಲ್ಲಿ ದೇಸೀ ಮರಗಳನ್ನು ನೆಡಲು ಬರುತ್ತದೆ ಎಂಬುದು ಮುಂಬಯಿ ಮೆಟ್ರೋ ಸಂಸ್ಥೆ ನೀಡುವ ಸಮಾಧಾನ.
ಮೆಟ್ರೋ ರೈಲು ಸಂಚಾರದಿಂದಾಗಿ ವಾತಾವರಣಕ್ಕೆ ಇಂಗಾಲಾಮ್ಲ ಬಿಡುಗಡೆ ಮಾಡುವ ಚಟುವಟಿಕೆಗಳು ದೊಡ್ಡ ಪ್ರಮಾಣದಲ್ಲಿ ಕುಗ್ಗಲಿದ್ದು, ಪರಿಸರಕ್ಕೆ ಅಪಾರ ಪ್ರಯೋಜನ ಆಗಲಿದೆ. . 2,700 ಮರಗಳು ಒಂದು ವರ್ಷ ಕಾಲ ಹೀರಿಕೊಳ್ಳುವಷ್ಟು ಪ್ರಮಾಣದ ಇಂಗಾಲಾಮ್ಲವನ್ನು ಏಳೇ ದಿನಗಳ ಮೆಟ್ರೋ ಸಂಚಾರವು ತಗ್ಗಿಸಲಿದೆ ಎಂದು ಮುಂಬಯಿ ಮೆಟ್ರೋ ಸಂಸ್ಥೆಯ ಸಮರ್ಥನೆ.
ಆರೆ ಕಾಲನಿಯನ್ನು ಅರಣ್ಯವೆಂದು ಘೋಷಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ವನಶಕ್ತಿ ಎಂಬ ಸ್ವಯಂಸೇವಾ ಸಂಸ್ಥೆ 2015ರಲ್ಲಿ ರಾಷ್ಟ್ರೀಯ ಹಸಿರು ನ್ಯಾಯಪೀಠಕ್ಕೆ ಅರ್ಜಿ ಸಲ್ಲಿಸಿತು. ಒಂದು ವರ್ಷದ ಹಿಂದೆ ಈ ಅರ್ಜಿಯನ್ನು ವಜಾ ಮಾಡಲಾಯಿತು.