ಸಚಿವಾಕಾಂಕ್ಷಿಗಳ ನಡುವಿನ ಪೈಪೋಟಿ, ಆಂತರಿಕ ಕಚ್ಚಾಟದಿಂದಾಗಿ ಅಪೂರ್ಣಗೊಂಡಿರುವ ಸಚಿವ ಸಂಪುಟ ವಿಸ್ತರಣೆಯನ್ನು ಬಜೆಟ್ ಅಧಿವೇಶನ ಆರಂಭವಾಗುವುದರೊಳಗೆ (ಮಾರ್ಚ್ 2) ಪೂರ್ಣಗೊಳಿಸುವ ನಿಟ್ಟಿನಲ್ಲಿ ಬಿಜೆಪಿ ವಲಯದಲ್ಲಿ ಭಾರೀ ಪ್ರಯತ್ನಗಳು ಆರಂಭವಾಗಿವೆ. ವಿಧಾನಸಭೆಯಲ್ಲಿ ಸೋತಿದ್ದರು ಎಂಬ ಕಾರಣಕ್ಕೆ ಸಿ.ಪಿ.ಯೋಗೇಶ್ವರ್ ಅವರನ್ನು ಮಂತ್ರಿ ಮಾಡಲು ಮೂಲ ಬಿಜೆಪಿ ಶಾಸಕರು ಆಕ್ಷೇಪ ವ್ಯಕ್ತಪಡಿಸಿದ ಕಾರಣ ಫೆ. 10ರಂದು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲು ಉಮೇಶ್ ಕತ್ತಿ ಮತ್ತು ಅರವಿಂದ ಲಿಂಬಾವಳಿ ಅವರಿಗೆ ಅವಕಾಶ ಸಿಕ್ಕಿರಲಿಲ್ಲ. ಹೇಗಾದರೂ ಮಾಡಿ ಅವರನ್ನು ಸಂಪುಟಕ್ಕೆ ಸೇರಿಸಲೇ ಬೇಕು. ಸಾಧ್ಯವಾದರೆ ಅವರೊಂದಿಗೆ ಇನ್ನೂ ಒಬ್ಬರು ಅಥವಾ ಇಬ್ಬರಿಗೆ ಸಚಿವ ಸ್ಥಾನ ಕೊಡಿಸಬೇಕು ಎಂದು ಬಿಜೆಪಿಯ ಒಂದು ಬಣ ಪ್ರಯತ್ನ ಆರಂಭಿಸಿದೆ. ಈ ನಿಟ್ಟಿನಲ್ಲಿ ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ನೀಡಲು ಆಕ್ಷೇಪ ವ್ಯಕ್ತಪಡಿಸಿದ್ದ ಶಾಸಕರ ಗುಂಪಿನೊಂದಿಗೆ ಸಂಧಾನ ಪ್ರಕ್ರಿಯೆಗಳು ತೀವ್ರಗೊಳ್ಳುತ್ತಿವೆ.
ಸಚಿವ ಸ್ಥಾನಕ್ಕೆ ಯೋಗೇಶ್ವರ್ ಅವರ ಹೆಸರನ್ನು ಮುನ್ನಲೆಗೆ ತಂದಿದ್ದು ಯಡಿಯೂರಪ್ಪ ಅವರಿಗಿಂತಲೂ ಮುಖ್ಯವಾಗಿ ಬಿಜೆಪಿ ಹೈಕಮಾಂಡ್ ನಾಯಕರು. ಮೈತ್ರಿ ಸರ್ಕಾರ ಉರುಳಿಸಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣವಾದ ಆಪರೇಷನ್ ಕಮಲದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಯೋಗೇಶ್ವರ್ ಅವರನ್ನು ಸಚಿವರನ್ನಾಗಿ ಮಾಡಬೇಕು ಎಂದು ವರಿಷ್ಠರು ಯಡಿಯೂರಪ್ಪ ಅವರಿಗೆ ಹೇಳಿದ್ದರು. ಅದಕ್ಕೆ ಯಡಿಯೂರಪ್ಪ ಒಪ್ಪುಕೊಂಡಿದ್ದರು. ಆದರೆ, ಅದಕ್ಕೆ ಬಿಜೆಪಿ ಶಾಸಕರ ಒಂದು ಗುಂಪು ಆಕ್ಷೇಪ ವ್ಯಕ್ತಪಡಿಸಿತ್ತು. ಇದರಿಂದಾಗಿ ಫೆ. 10ರಂದು ಮೂವರು ಮೂಲ ಬಿಜೆಪಿ ಶಾಸಕರನ್ನು ಹೊರತುಪಡಿಸಿ ನೂತನವಾಗಿ ಆಯ್ಕೆಯಾದ ಹತ್ತು ಶಾಸಕರು ಮಾತ3 ಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸುವಂತಾಗಿತ್ತು.
ನಂತರದಲ್ಲಿ ಮತ್ತೊಂದು ಸುತ್ತಿನ ಸಂಪುಟ ವಿಸ್ತರಣೆ ಮಾಡಬೇಕು ಎಂಬ ಒತ್ತಾಯ ಕೇಳಿಬಂದಾಗ ಯಡಿಯೂರಪ್ಪ ಅವರು ಕೈತೋರಿಸಿದ್ದು ಯೋಗೇಶ್ವರ್ ಅವರನ್ನು ಸಚಿವರನ್ನಾಗಿ ಮಾಡಲು ಆಕ್ಷೇಪಿಸಿ ಸಂಪುಟ ವಿಸ್ತರಣೆ ಅಪೂರ್ಣಗೊಳ್ಳಲು ಕಾರಣರಾದ ಶಾಸಕರ ಕಡೆ. ಯಾವ ಸಂದರ್ಭದಲ್ಲಿ ಬೇಕಾದರೂ ಸಂಪುಟ ವಿಸ್ತರಿಸಲು ನಾನು ಸಿದ್ಧ. ಆದರೆ, ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ನೀಡಲು ಆಕ್ಷೇಪ ಎತ್ತಿದ್ದಾರೆ. ಅವರು ಆಪ್ತರೇ ಆಗಿದ್ದರೂ ನನ್ನ ಮಾತು ಕೇಳುತ್ತಿಲ್ಲ. ಯೋಗೇಶ್ವರ್ ವಿಚಾರ ಇತ್ಯರ್ಥವಾಗದೆ ಮತ್ತೊಂದು ಸುತ್ತಿನ ಸಂಪುಟ ವಿಸ್ತರಣೆಗೆ ವರಿಷ್ಠರು ಹಸಿರು ನಿಶಾನೆ ತೋರಿಸುವುದು ಕಷ್ಟ. ಆದ್ದರಿಂದ ಮೊದಲು ಈ ವಿವಾದ ಬಗೆಹರಿಸಿಕೊಳ್ಳಿ. ನಂತರ ಒಂದೇ ದಿನದಲ್ಲಿ ಸಂಪುಟ ವಿಸ್ತರಣೆ ಮಾಡುತ್ತೇನೆ ಎಂದು ಈ ವಿಚಾರದಲ್ಲಿ ತಮ್ಮ ಮೇಲೆ ಒತ್ತಡ ಹೇರಿದವರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಈ ಕಾರಣದಿಂದಲೇ ಸಂಧಾನ ಪ್ರಕ್ರಿಯೆ ಆರಂಭವಾಗಿದೆ.
ಕಳೆದ ಸೋಮವಾರ ಜಗದೀಶ್ ಶೆಟ್ಟರ್ ಅವರ ಮನೆಯಲ್ಲಿ ನಡೆದ ಸಭೆ ಈ ಸಂಧಾನ ಪ್ರಕ್ರಿಯೆಗೆ ಚಾಲನೆ ನೀಡಿದೆ. ಆದರೆ, ಅಂದು ಶಾಸಕರು ಒಟ್ಟು ಸೇರಿರುವ ವಿಚಾರ ಗೊತ್ತಾಗಿ ದೃಶ್ಯ ಮಾಧ್ಯಮದವರು ಸ್ಥಳಕ್ಕೆ ಆಗಮಿಸಿದ್ದರಿಂದ ಮಾತುಕತೆ ಆರಂಭಿಸಿ ಅಲ್ಲಿಗೆ ನಿಲ್ಲಿಸಿದ್ದಾರೆ ಎಂದು ಪಕ್ಷದ ಮೂಲಗಳು ಹೇಳುತ್ತವೆ. ಸಭೆಯಲ್ಲಿ ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ಬಸನಗೌಡ ಪಾಟೀಲ ಯತ್ನಾಳ, ಶಿವನಗೌಡ ನಾಯಕ, ರಾಜೂಗೌಡ, ಶಂಕರ ಪಾಟೀಲ ಮುನೇನಕೊಪ್ಪ, ಎ.ಎಸ್ ಪಾಟೀಲ ನಡಹಳ್ಳಿ, ರುದ್ರಪ್ಪ ಲಮಾಣಿ, ಮುರುಗೇಶ್ ನಿರಾಣಿ ಜತೆಗೆ ಉಮೇಶ್ ಕತ್ತಿ ಮತ್ತು ಸಿ.ಪಿ ಯೋಗೇಶ್ವರ್ ಅವರು ಇದ್ದುದು. ಸಭೆಯಲ್ಲಿದ್ದ ಬಹುತೇಕರು ಆಕ್ಷೇಪ ಎತ್ತಿದ್ದೇ ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ನೀಡಲು ಮುಂದಾಗಿದ್ದಕ್ಕೆ. ಇನ್ನು ಉಮೇಶ್ ಕತ್ತಿ ಅವರಿಗೆ ಸಚಿವ ಸ್ಥಾನ ಈಗಾಗಲೇ ಖಾತರಿಯಾಗಿದೆ. ಹೀಗಿರುವಾಗ ಅಸಮಾಧಾನಿತ ಶಾಸಕರ ಸಭೆಗೆ ಯೋಗೇಶ್ವರ್ ಮತ್ತು ಉಮೇಶ್ ಕತ್ತಿ ಹೋಗುವ ಅಗತ್ಯವಾದರೂ ಏನಿತ್ತು? ಎಂಬ ಪ್ರಶ್ನೆಯನ್ನು ಆ ಮೂಲಗಳು ಮುಂದಿಡುತ್ತವೆ.
ಜಗದೀಶ್ ಶೆಟ್ಟರ್ ಮನೆ ಆಯ್ಕೆ ಹಿಂದೆಯೂ ಇದೆ ತಂತ್ರಗಾರಿಕೆ
ಈ ಸಭೆಗೆ ಜಗದೀಶ್ ಶೆಟ್ಟರ್ ಅವರ ಮನೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂಬುದಕ್ಕಿಂತ ಜಗದೀಶ್ ಶೆಟ್ಟರ್ ಅವರೇ ಅವರೆಲ್ಲರನ್ನು ಕರೆಸಿ ಸಂಧಾನಕ್ಕೆ ಪ್ರಯತ್ನಿಸಿದ್ದಾರೆ. ವಿವಾದಕ್ಕೆ ತೆರೆ ಎಳೆಯುವ ಮೂಲಕ ಪಕ್ಷ ಮತ್ತು ಸರ್ಕಾರದಲ್ಲಿ ತಮ್ಮ ಸ್ಥಾನಮಾನವನ್ನು ಒಂದಷ್ಟು ಹೆಚ್ಚಿಸಿಕೊಳ್ಳಲು ಅವರು ಪ್ರಯತ್ನಿಸಿದ್ದಾರೆ ಎನ್ನಲಾಗುತ್ತಿದೆ. ಪ್ರಸ್ತುತ ವಾಣಿಜ್ಯ ಮತ್ತು ಕೈಗಾರಿಕೆಯಂತಹ ಪ್ರಮುಖ ಖಾತೆ ಜಗದೀಶ್ ಶೆಟ್ಟರ್ ಅವರ ಬಳಿ ಇದೆಯಾದರೂ ಮೂವರು ಉಪಮುಖ್ಯಮಂತ್ರಿಗಳ ನಡುವೆ ಸರ್ಕಾರ ಮತ್ತು ಪಕ್ಷದಲ್ಲಿ ಅವರಿಗೆ ಹೆಚ್ಚಿನ ಪ್ರಾಮುಖ್ಯತೆ ಸಿಗುತ್ತಿಲ್ಲ. ಇನ್ನೊಂದೆಡೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಚುನಾವಣಾ ರಾಜಕಾರಣಕ್ಕೆ ನಿವೃತ್ತಿ ಹೇಳಲು ಯೋಚಿಸುತ್ತಿದ್ದು, ಅವರ ನಂತರ ಯಾರು ಎಂಬ ಪ್ರಶ್ನೆಯೂ ಬಿಜೆಪಿಯಲ್ಲಿ ಎದುರಾಗಿದೆ. ಪರಿಸ್ಥಿತಿ ಹೀಗಿರುವಾಗ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಉರುಳಿದರೆ ಅದರಿಂದ ಲಾಭವಾಗುತ್ತದೆ ಎಂಬ ಉದ್ದೇಶದಿಂದಲೇ ಜಗದೀಶ್ ಶೆಟ್ಟರ್ ಅವರು ಸಂಧಾನ ಪ್ರಕ್ರಿಯೆ ತಮ್ಮ ಮೂಗಿನ ಕೆಳಗೆ ನಡೆಯುವಂತೆ ನೋಡಿಕೊಳ್ಳಲು ಪ್ರಯತ್ನಿಸಿದ್ದಾರೆ.
ಈ ಹಿಂದೆ (2011) ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ ತಮ್ಮ ವಿರುದ್ಧ ಡಿ.ವಿ.ಸದಾನಂದಗೌಡ ಅವರನ್ನು ಎತ್ತಿಕಟ್ಟಿ ಅವರನ್ನು ಮುಖ್ಯಮಂತ್ರಿ ಮಾಡಲಾಗಿತ್ತು. ಅದರಲ್ಲಿ ಯಡಿಯೂರಪ್ಪ ಅವರ ಪಾತ್ರ ಪ್ರಮುಖವಾಗಿತ್ತು. ನಂತರ ಸದಾನಂದಗೌಡ ಅವರು ತಿರುಗಿ ಬಿದ್ದರು ಎಂಬ ಕಾರಣಕ್ಕೆ ಇದೇ ಯಡಿಯೂರಪ್ಪ ಜಗದೀಶ್ ಶೆಟ್ಟರ್ ಮೇಲೆ ವಿಶ್ವಾಸವಿಟ್ಟು ಮುಖ್ಯಮಂತ್ರಿ ಮಾಡಿದ್ದರು. ಹೀಗಿರುವಾಗ ಯಡಿಯೂರಪ್ಪ ಅವರ ವಿಶ್ವಾಸ ಗಳಿಸಿದರೆ ತಮ್ಮ ನಂತರ ನನಗೆ ಅವಕಾಶ ಕೊಡಿಸಬಹುದು. ಅದಕ್ಕಾಗಿ ಗೊಂದಲ ಬಗೆಹರಿಸಿ ಯಡಿಯೂರಪ್ಪ ಅವರಿಗೆ ಮತ್ತೊಂದು ಸಚಿವ ಸಂಪುಟ ವಿಸ್ತರಣೆಯನ್ನು ಸುಸೂತ್ರವಾಗಿ ಮಾಡುವಂತಹ ವಾತಾವರಣ ನಿರ್ಮಿಸಿದರೆ ಅವರ ವಿಶ್ವಾಸ ಗಳಿಸಬಹುದು. ಇನ್ನೊಂದೆಡೆ ಗೊಂದಲ ಬಗೆಹರಿಸಿದರು ಎಂಬ ಕಾರಣಕ್ಕೆ ಪಕ್ಷದ ವರಿಷ್ಠರು ಕೂಡ ತಮ್ಮತ್ತ ಗಮನಹರಿಸಬಹುದು ಎಂಬ ಲೆಕ್ಕಾಚಾರದಲ್ಲಿ ಜಗದೀಶ್ ಶೆಟ್ಟರ್ ಅವರು ಈ ಕೆಲಸ ಮಾಡಿದ್ದಾರೆ ಎಂಬ ಮಾತುಗಳು ಪಕ್ಷದಲ್ಲಿ ಕೇಳಿಬರುತ್ತಿದೆ.
ಸಂಧಾನ ಯಶಸ್ವಿಯಾದರೆ ಮಾ. 5ರೊಳಗೆ ಮತ್ತೊಂದು ಸುತ್ತಿನ ಸಂಪುಟ ವಿಸ್ತರಣೆ
ಜಗದೀಶ್ ಶೆಟ್ಟರ್ ನಿವಾಸದಲ್ಲಿ ನಡೆದ ಸಭೆ ಅಪೂರ್ಣವಾದರೂ ಸಂಧಾನ ಪ್ರಕ್ರಿಯೆಗಲು ಮುಂದುವರಿದಿವೆ. ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಉಮೇಶ್ ಕತ್ತಿ ಅವರನ್ನು ಕರೆಸಿ ಮಾತುಕತೆ ನಡೆಸಿದ್ದಾರೆ. ಮತ್ತೊಂದೆಡೆ ಬೇರೆ ಬೇರೆ ರೀತಿಯಲ್ಲಿ ಶಾಸಕರನ್ನು ಪ್ರತ್ಯೇಕವಾಗಿ ಮಾತನಾಡಿ ಮತ್ತೊಂದು ಸುತ್ತಿನ ಸಂಪುಟ ವಿಸ್ತರಣೆ ಸುಸೂತ್ರವಾಗಿ ನಡೆಸಲು ಅನುಕೂಲವಾಗುವಂತಹ ವಾತಾವರಣ ನಿರ್ಮಾಣ ಮಾಡಲು ಪ್ರಯತ್ನಗಳು ಮುಂದುವರಿದಿವೆ. ಜಗದೀಶ್ ಶೆಟ್ಟರ್ ಅವರೂ ಈ ನಿಟ್ಟಿನಲ್ಲಿ ತಮ್ಮದೇ ಆದ ರೀತಿಯಲ್ಲಿ ಕೆಲಸಗಳನ್ನು ಮಾಡುತ್ತಿದ್ದಾರೆ. ಒಂದೊಮ್ಮೆ ಸಂಧಾನ ಯಶಸ್ವಿಯಾಗಿ ಪರಿಸ್ಥಿತಿ ತಿಳಿಗೊಂಡರೆ ಮಾರ್ಚ್ 5ರಂದು ಮತ್ತೊಂದು ಸುತ್ತಿನ ಸಂಪುಟ ವಿಸ್ತರಣೆಯಾಗಿ ಬಿಜೆಪಿಯ ಮೂವರು ಅಥವಾ ನಾಲ್ಕು ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.