ದೇಶದ ಆರ್ಥಿಕತೆಯು ಮಂದಗತಿ ಬೆಳವಣಿಗೆಯಿಂದ ಹಿಂಜರಿತದತ್ತ ದಾಪುಗಾಲು ಹಾಕುತ್ತಿರುವ ಹೊತ್ತಿನಲ್ಲಿ ಆಟೋಮೊಬೈಲ್ ಉದ್ಯಮ ಮತ್ತು ಬ್ಯಾಂಕು ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಮುಂದೆ ಹೊಸದೊಂದು ಸವಾಲು ಎದುರಾಗಿದೆ. ಇದು ವಾಹನಗಳ ಮಾರಾಟ ಆಗದೇ ಇರುವುದರಿಂದ ಎದುರಾಗಿರುವ ಸವಾಲಲ್ಲಾ, ಬದಲಾಗಿ ಮಾರಾಟ ಆಗಿರುವ ವಾಹನಗಳಿಂದ ಉದ್ಭವಿಸಿರುವ ದೊಡ್ಡ ಸವಾಲು!
ಅದೇನೆಂದರೆ- ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ವಾಹನಗಳನ್ನು ನಿರ್ವಹಿಸಲು ಸಾಧ್ಯವಾಗದ ದುಸ್ಥಿತಿಗೆ ತಲುಪಿರುವ ವಾಹನ ಮಾಲೀಕರು ತಮ್ಮ ವಾಹನಗಳಿಗಾಗಿ ಮಾಡಿದ ಸಾಲ ಮರುಪಾವತಿ ಮಾಡಲಾಗದ ಸ್ಥಿತಿ ತಲುಪಿದ್ದಾರೆ. ತತ್ಪರಿಣಾಮ ಇದುವರೆಗೆ ಸುಮಾರು 50,000 ವಾಹನಗಳನ್ನು ಸಾಲ ನೀಡಿದ ಬ್ಯಾಂಕುಗಳು ಮತ್ತು ಬ್ಯಾಂಕೇತರ ಸಂಸ್ಥೆಗಳು ಮರುವಶಪಡಿಸಿಕೊಂಡಿವೆ. ವಶಪಡಿಸಿಕೊಳ್ಳಲಾದ ವಾಣಿಜ್ಯ ಬಳಕೆ ವಾಹನಗಳ ಪ್ರಾಂಗಣವು ತುಂಬಿ ತುಳುಕುತ್ತಿತ್ತು, ಹೊಸ ಹೊಸ ಪ್ರಾಂಗಣಗಳನ್ನು ಹುಡುಕುವಂತೆ ಮಾಡಿದೆ. ದೆಹಲಿ ಮೂಲದ ಇಂಡಿಯನ್ ಫೌಂಡೇಷನ್ ಆಪ್ ಟ್ರಾನ್ಸ್ಪೋರ್ಟ್ ರೀಸರ್ಚ್ ಅಂಡ್ ಟ್ರೈನಿಂಗ್ (ಐಎಫ್ಟಿಆರ್ಟಿ) ಅಧ್ಯಯನದ ಪ್ರಕಾರ, ದೇಶದಲ್ಲಿ ಮರುವಶಪಡಿಸಿಕೊಳ್ಳಲಾದ 150 ಪ್ರಾಂಗಣಗಳು ಭರ್ತಿಯಾಗಿ ತುಂಬಿತುಳುಕುತ್ತಿವೆ.
ಸಮಸ್ಯೆ ಏನೆಂದರೆ 50,000 ಮರುವಶಕ್ಕೆ ಪಡೆದ ವಾಹನಗಳ ಪೈಕಿ ಶೇ.40ರಷ್ಟು ವಾಹನಗಳು ಒಂದು ವರ್ಷಕ್ಕಿಂತಲೂ ಕಡಮೆ ಅವಧಿಯಲ್ಲಿ ಖರೀದಿ ಮಾಡಿದಂತಹವು. ಮೇಲ್ನೋಟಕ್ಕೆ ಇದು ವಾಹನ ಖರೀದಿ ಮಾಡಿದವರ ಸಮಸ್ಯೆ ಎಂದೆನಿಸಿದರೂ ದೇಶದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟು ಹಿಂಜರಿತದತ್ತ ದಾಪುಗಾಲು ಹಾಕಿರುವುದನ್ನು ಪ್ರತಿಬಿಂಬಿಸುತ್ತದೆ. ಸಾಲ ಮಾಡಿ ವಾಹನ ಖರೀದಿಸಿದವರು ಕೆಲಸವಿಲ್ಲದೇ ದಿಕ್ಕೆಟ್ಟಿದ್ದಾರೆ. ವಾಹನಕ್ಕಾಗಿ ಮಾಡಿದ ಸಾಲದ ಮೇಲಿನ ತಿಂಗಳ ಸಮಾನ ಕಂತು (ಇಎಂಐ) ಪಾವತಿಸಲಾಗದೇ ಸುಸ್ತಿಯಾಗಿದ್ದಾರೆ. ಸಾಮಾನ್ಯವಾಗಿ ವಾಹನ ಸಾಲವು 70 ದಿನಗಳವರೆಗೆ ಸುಸ್ತಿಯಾದರೆ ಸಾಲ ನೀಡಿದ ಬ್ಯಾಂಕು, ಬ್ಯಾಂಕೇತರ ಹಣಕಾಸು ಸಂಸ್ಥೆಗಳು ವಾಹನವನ್ನು ಮರುವಶಕ್ಕೆ ಪಡೆದು ಅದಕ್ಕಾಗಿ ಮೀಸಲಾದ ಪ್ರಾಂಗಣದಲ್ಲಿ ತಂದಿಡುತ್ತವೆ.
ಪರಿಸ್ಥಿತಿ ಎಷ್ಟು ಬಿಗಡಾಯಿಸಿದೆ ಎಂದರೆ, ‘ಬ್ಯುಸಿನೆಸ್ ಸ್ಟ್ಯಾಂಡರ್ಡ್’ ವರದಿ ಪ್ರಕಾರ, ಸಾಲ ಪಡೆದು ವಾಹನ ಖರೀದಿಸಿದ ಮಾಲೀಕರೆ, ಅವುಗಳನ್ನು ನಿರ್ವಹಣೆ ಮಾಡಲಾಗದೆ, ತಾವಾಗಿಯೇ ವಾಹನಗಳನ್ನು ಸಾಲ ನೀಡಿದ ಸಂಸ್ಥೆಗಳಿಗೆ ಹಿಂದಿರುಗಿಸುತ್ತಿದ್ದಾರೆ. ಅದಕ್ಕೆ ಕಾರಣ ಒಂದು- ವಾಹನಗಳಿಗೆ ಬೇಡಿಕೆ ಇಲ್ಲದಿರುವುದು ಮತ್ತೊಂದು- ಬೇಡಿಕೆ ಇಲ್ಲದೇ ಸಂಪಾದನೆಯೇ ಇಲ್ಲದೆ ಅವುಗಳನ್ನು ನಿರ್ವಹಿಸಲಾಗದ ಸ್ಥಿತಿಗೆ ತಲುಪಿರುವುದು.
ವಾಣಿಜ್ಯ ವಾಹನಗಳಿಗೆ ಬೇಡಿಕೆ ಕುಸಿದಿದೆ. ಹೀಗಾಗಿ ವಾಹನ ಮಾಲೀಕರಿಗೆ ಕೆಲಸ ಇಲ್ಲದಂತಾಗಿದೆ. ಆದರೆ, ಡೀಸೆಲ್, ಟೈರ್, ಟೋಲ್ ಮತ್ತಿತರ ವೆಚ್ಚಗಳ್ಯಾವುವೂ ಇಳಿದಿಲ್ಲ. ಬದಲಿಗೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಸಾಲಕೊಟ್ಟು ತಂದ ವಾಹನಗಳೀಗ ‘ಬಿಳಿ ಆನೆ’ಗಳಾಗಿ ಪರಿವರ್ತನೆಯಾಗಿವೆ. ಹೀಗಾಗಿ ವಾಹನಗಳ ಖರೀದಿಸಿದವರೇ ಸ್ವಯಂ ಪ್ರೇರಿತರಾಗಿ ವಾಹನಗಳನ್ನು ವಾಪಾಸು ಮಾಡುತ್ತಿದ್ದಾರೆ. ಇದು ಸಾಲ ನೀಡಿದ ಬ್ಯಾಂಕುಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ತಲೆನೋವಾಗಿ ಪರಿಣಮಿಸಿದೆ.
ಒಂದು ಕಡೆ ನೀಡಿದ ಸಾಲ ಮರುಪಾವತಿಯಾಗುತ್ತಿಲ್ಲ. ಸುಸ್ತಿ ಪ್ರಮಾಣ ಜಾಸ್ತಿಯಾಗುತ್ತಿದೆ. ಸುಸ್ತಿಗೆ ಹೆದರಿ ವಾಹನ ಮಾಲೀಕರೇ ವಾಹನ ತಂದೊಪ್ಪಿಸುತ್ತಿದ್ದಾರೆ. ವಾಹನ ಒಂದು ವರ್ಷದಷ್ಟು ಮಾತ್ರ ಹಳೆಯದಾದರೂ ಹರಾಜು ಹಾಕಿದರೆ ಖರೀದಿ ಮಾಡುವವರಿಲ್ಲ. ಹೀಗಾಗಿ ವಾಹನ ಮಾಲೀಕರು ತಂದೊಪ್ಪಿಸಿದ ವಾಹನಗಳನ್ನು ಹರಾಜು ಹಾಕಿದರೂ ನೀಡಿದ ಸಾಲದ ಪೂರ್ಣಮೊತ್ತವನ್ನು ವಸೂಲು ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮೊದಲು ಬಾಕಿ ಚುಕ್ತಾ ಮಾಡುವಂತೆ ಬ್ಯಾಂಕುಗಳು ವಾಹನ ಮಾಲೀಕರನ್ನು ಒತ್ತಾಯಿಸುತ್ತಿವೆ.
ವಾಣಿಜ್ಯ ವಹಿವಾಟುಗಳಿಲ್ಲದ ಕಾರಣ ಬೇಡಿಕೆ ಇಲ್ಲದ ಕಾರಣ ವಾಹನ ಮಾಲೀಕರು ಮಾತ್ರವೇ ಸಂಕಷ್ಟಕ್ಕೆ ಸಿಲುಕಿಲ್ಲ. ಈ ವಾಹನಗಳ ಖರೀದಿಗೆ ಸಾಲ ನೀಡಿದ ಹಣಕಾಸು ಸಂಸ್ಥೆಗಳೂ ಸಂಕಷ್ಟಕ್ಕೆ ಸಿಲುಕಿವೆ. ಈ ಸಂಕಷ್ಟದಿಂದ ಪಾರಾಗಲೂ ಬೇರೆ ಮಾರ್ಗಗಳೇ ಇಲ್ಲ. ಆರ್ಥಿಕತೆಗೆ ಚೇತರಿಕೆ ಬರಬೇಕು ಮತ್ತು ವಾಣಿಜ್ಯ ವಹಿವಾಟುಗಳು ಹೆಚ್ಚಾಗಿ ವಾಣಿಜ್ಯ ವಾಹನಗಳಿಗೆ ಬೇಡಿಕೆ ಬಂದರೆ ಮಾತ್ರ ಈ ಸಮಸ್ಯೆಗೆ ಪರಿಹಾರ ದೊರೆಯಬಹುದು. ಈಗಾಗಲೇ ಹೊಸ ವಾಹನಗಳ ಮಾರಾಟವು ಸರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿರುವುದರಿಂದ ಈ ಬೆಳವಣಿಗೆಯು ಹೊಸ ಸಮಸ್ಯೆಯನ್ನು ತಂದೊಡ್ಡಿದೆ. ಅಂದರೆ, ಹೊಸ ವಾಣಿಜ್ಯ ವಾಹನಗಳ ಮಾರಾಟ ಚೇತರಿಸಿಕೊಳ್ಳುವ ಸಾಧ್ಯತೆಯು ಮತ್ತಷ್ಟು ಕ್ಷೀಣಿಸಿದೆ.
ಭಾರಿ ವಾಣಿಜ್ಯ ವಾಹನಗಳಿಗೆ ಹಣಕಾಸು ಸಂಸ್ಥೆಗಳು ಸುಮಾರು 20-30 ಲಕ್ಷ ರುಪಾಯಿಗಳಷ್ಟು ಸಾಲ ನೀಡಿವೆ. ಈಗ 50,000 ವಾಹನಗಳ ಪ್ರಾಂಗಣದಲ್ಲಿ ಧೂಳುಹಿಡಿಯುತ್ತಿವೆ. ಇತ್ತ ವಾಹನಗಳನ್ನು ಹರಾಜು ಹಾಕಲೂ ಸಾಧ್ಯವಾಗುತ್ತಿಲ್ಲ. ಅತ್ತ ನೀಡಿದ ಸಾಲದ ಮರುವಸೂಲಾತಿಯೂ ಸಾಧ್ಯವಾಗುತ್ತಿಲ್ಲವಾದ್ದರಿಂದ ಈಗಾಗಲೇ ನಗದು ಕೊರತೆ ಎದುರಿಸುತ್ತಿರುವ ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಹೊಸ ಸಮಸ್ಯೆ ಎದುರಿಸುತ್ತಿವೆ. ಸುಮಾರು 10,000 ಕೋಟಿ ರುಪಾಯಿಗಿಂತಲೂ ಹೆಚ್ಚು ಮೊತ್ತವು ಈ ವರ್ತುಲದಲ್ಲಿ ಸಿಕ್ಕಿಬಿದ್ದಿದೆ.
ಈ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಕಂಡುಕೊಳ್ಳಲು ಮುಂದಾಗಿರುವ ವಾಹನಗಳಿಗೆ ಸಾಲ ನೀಡಿರುವ ಹಣಕಾಸು ಸಂಸ್ಥೆಗಳು ಇದುವರೆಗೆ ಇದ್ದ ಸುಸ್ತಿ ಅವಧಿಯನ್ನು 70 ದಿನಗಳಿಂದ 120 ದಿನಗಳವರೆಗೆ ವಿಸ್ತರಿಸಿವೆ. ಅಂದರೆ, ಸಾಲ ಮರುಪಾವತಿಯು 70 ದಿನಗಳವರೆಗೆ ಆಗದಿದ್ದಾಗ ಸುಸ್ತಿ ಎಂದು ಘೋಷಿಸಿ ವಾಹನ ಮರುವಶಕ್ಕೆ ಪಡೆಯುವ ಬದಲು, ವಾಹನ ಮಾಲೀಕರಿಗೆ ಸಾಲ ಮರುಪಾವತಿಗೆ 120 ದಿನಗಳವರೆಗೆ ಕಾಲಾವಕಾಶ ನೀಡಲಾಗುತ್ತಿದೆ. ಆದರೆ, ಇದರಿಂದ ಹೆಚ್ಚಿನ ಉಪಯೋಗವೇನೂ ಆಗುತ್ತಿಲ್ಲ. ವಾಹನ ಮಾಲೀಕರೇ ಖುದ್ದಾಗಿ ಬಂದು ವಾಹನಗಳನ್ನು ಒಪ್ಪಿಸುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆ. ಇದು 2008-09 ಮತ್ತು 2012-13ರಲ್ಲಿ ಇದ್ದ ಹಿಂಜರಿತದ ದಿನಗಳನ್ನು ನೆನಪಿಸುತ್ತಿದೆ.
ಸಾಲ ಪಡೆದು ವಾಹನ ಖರೀದಿಸಿದವರು, ಸಾಲದ ಶೂಲದಿಂದ ಪಾರಾಗುವುದು ಹೇಗೆಂದು ಚಿಂತಿಸುತ್ತಿದ್ದರೆ, ಸಾಲ ನೀಡಿದ ಹಣಕಾಸು ಸಂಸ್ಥೆಗಳು ಸಾಲದ ವಸೂಲಾತಿ ಮಾಡುವುದು ಹೇಗೆಂಬ ಲೆಕ್ಕಾಚಾರದಲ್ಲಿವೆ. ಆರ್ಥಿಕತೆ ಚೇತರಿಸಿಕೊಳ್ಳದ ಹೊರತು ಈ ಸಮಸ್ಯೆ ಬಗೆಹರಿಯುವುದಿಲ್ಲ. ಜನರ ಖರೀದಿ ಶಕ್ತಿ ವೃದ್ಧಿಸಿ, ಆರ್ಥಿಕ ಚಟುವಟಿಕೆಗಳು ಗರಿಗೆದರಿರುವಂತೆ ಮಾಡುವ ಯೋಜನೆಗಳನ್ನು ಕೇಂದ್ರ ಸರ್ಕಾರ ಘೋಷಿಸಬೇಕಿದೆ. ದುರಾದೃಷ್ಟವಶಾತ್ ಕಾರ್ಪೊರೆಟ್ ವಲಯಕ್ಕೆ 1.40 ಲಕ್ಷ ಕೋಟಿ ರುಪಾಯಿ ತೆರಿಗೆ ರಿಯಾಯ್ತಿ ನೀಡಿರುವ ಕೇಂದ್ರ ಸರ್ಕಾರವು ಈಗ ಸರಕು ಮತ್ತು ಸೇವಾತೆರಿಗೆಯನ್ನು ಹೆಚ್ಚಿಸುವ ಉತ್ಸಾಹದಲ್ಲಿದೆ. ತೆರಿಗೆ ಹೆಚ್ಚಳವಾದರೆ ಮತ್ತಷ್ಟು ಸಂಕಷ್ಟಗಳು ಎದುರಾಗಲಿವೆ.