ಕರ್ನಾಟಕ ಕರಾವಳಿಯಲ್ಲಿ ಮರಳುಗಾರಿಕೆ ಬಹುದೊಡ್ಡ ಮರುಳು (ಮರ್ಲ್) ಆಗಿತ್ತು. ಹೊಸ ಸರಕಾರ ಬರುವುದರೊಂದಿಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳುಗಾರಿಕೆ ಗ್ರಾಹಕ ಪರವಾದ ವ್ಯವಸ್ಥೆಗೆ ಮರಳುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ.
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳಿನ ಕೊರತೆ ಮತ್ತು ಕೃತಕ ದರ ಏರಿಕೆ ತಡೆಯಲು ಜಿಲ್ಲಾಡಳಿತಗಳು ಆನ್‌ಲೈನ್ ಮೂಲಕ ಮರಳು ಮಾರಾಟ ಮಾಡುವ ವ್ಯವಸ್ಥೆಗೆ ಚಾಲನೆ ನೀಡಿವೆ. ಆಯಾಯ ಜಿಲ್ಲೆಯಲ್ಲಿ ದೊರಕುವ ಮರಳನ್ನು ಆಯಾ ಜಿಲ್ಲೆಯಲ್ಲಿ ಅತ್ಯಂತ ಪಾರದರ್ಶಕವಾಗಿ ಗ್ರಾಹಕರಿಗೆ ವಿಲೇವಾರಿ ಮಾಡುವ ವ್ಯವಸ್ಥೆ ಕೊನೆಗೂ ಜಾರಿಗೆ ಬಂದಿದೆ.
ಕರಾವಳಿ ಜಿಲ್ಲೆಯಲ್ಲಿ ಹೇರಳವಾಗಿ ಮರಳು ಇದ್ದರೂ ಜನರು ಮರಳು ಪಡೆಯಲು ಪರದಾಡುವ ಪರಿಸ್ಥಿತಿ ಕಳೆದ ದಶಕಗಳಿಂದ ಇತ್ತು. ಈ ಪರದಾಟವನ್ನು ತಪ್ಪಿಸಲು ಜಿಲ್ಲಾ ಮರಳು ಉಸ್ತುವಾರಿ ಸಮಿತಿ ನೇತೃತ್ವದಲ್ಲಿ ಈ ಹೊಸ ಯೋಜನೆ ಜಾರಿಗೆ ತರಲಾಗಿದೆ. ಆನ್‌ಲೈನ್ ಮೂಲಕ ಮರಳು ಮಾರಾಟ ಆರಂಭವಾಗಿದ್ದು, ನಿತ್ಯವೂ 35ರಿಂದ 40 ಲೋಡ್‌ಗಳಷ್ಟು ಮರಳು ಮಾರಾಟ ಆಗುತ್ತಿದೆ.
ಮರಳು ಮಾರಾಟಕ್ಕಾಗಿಯೇ ಜಿಲ್ಲಾ ಮರಳು ಉಸ್ತುವಾರಿ ಸಮಿತಿ dksandbazaar.com ವೆಬ್‌ಸೈಟ್ ಆರಂಭಿಸಿದೆ. ಕರಾವಳಿ ನಿಯಂತ್ರಣ ವಲಯದಲ್ಲಿ ಸಾಂಪ್ರದಾಯಿಕವಾಗಿ ಮರಳು ತೆಗೆಯಲು ಪರವಾನಗಿ ಹೊಂದಿರುವವರು ಮತ್ತು ಮರಳು ಸಾಗಣೆಗಾಗಿ ನೋಂದಣಿ ಮಾಡಿಕೊಂಡಿರುವ ಲಾರಿ ಮಾಲೀಕರಿಗಾಗಿ ಪ್ರತ್ಯೇಕ ಮೊಬೈಲ್ ಅಪ್ಲಿಕೇಷನ್‌ಗಳನ್ನು ಸಿದ್ಧಪಡಿಸಲಾಗಿದೆ.
ಮರಳು ಬೇಕಾದವರು dksandbazaar.comಗೆ ಲಾಗಿನ್ ಆಗಿ BOOK YOUR SAND ಮೇಲೆ ಕ್ಲಿಕ್ ಮಾಡುವ ಮೂಲಕ ವ್ಯವಹಾರ ಆರಂಭಿಸಬೇಕು. ಹಣ ಪಾವತಿ ಕೂಡ ಆನ್‌ಲೈನ್ ಮೂಲಕವೇ ಆಗಬೇಕು. ತದನಂತರ ಸ್ವಯಂಚಾಲಿತವಾಗಿ ಮರಳು ಪರವಾನಗಿದಾರರಿಗೆ ಖರೀದಿ ಸಂದೇಶ ರವಾನೆ ಆಗುತ್ತದೆ. ವಾಹನ ಮಾಲೀಕರಿಗೆ ಕೂಡ ಸಂದೇಶ ಹೋಗುತ್ತದೆ. ವ್ಯವಹಾರದ ಬಗ್ಗೆ ಖರೀದಿದಾರರಿಗೆ ಒಟಿಪಿ ಸಂಖ್ಯೆ ರವಾನೆ ಆಗುತ್ತದೆ.
ಲಾರಿ ಚಾಲಕ ಮತ್ತು ಧಕ್ಕೆಯ ಮಾಲೀಕ ಇಬ್ಬರಿಗೂ ಕೂಡ ಒಟಿಪಿ ಸಂಖ್ಯೆ ರವಾನೆ ಆಗಿರುತ್ತದೆ. ಆ ಸಂದೇಶ ಆಧರಿಸಿ ಲಾರಿಯು ನಿಗದಿಪಡಿಸಿದ ಧಕ್ಕೆಗೆ ತೆರಳಬೇಕು. ಅಲ್ಲಿ ಲಾರಿ ಚಾಲಕನು ಒಟಿಪಿಯನ್ನು ಧಕ್ಕೆ ಮಾಲೀಕರಿಗೆ ನೀಡಬೇಕು. ಹೊಂದಾಣಿಕೆ ಆದಲ್ಲಿ ಅವರು ಮರಳು ತುಂಬಿಸುತ್ತಾರೆ. ನಂತರ ಗ್ರಾಹಕರು ಸೂಚಿಸಿದ ಸ್ಥಳಕ್ಕೆ ತಲುಪಬೇಕು. ಅಲ್ಲಿ ಖರೀದಿದಾರರು ನೀಡಿದ ಒಟಿಪಿಯನ್ನು ತಾಳೆ ಮಾಡಿ, ಮರಳನ್ನು ಖಾಲಿ ಮಾಡಬೇಕು.
ಮರಳು ಖರೀದಿ ಪ್ರಕ್ರಿಯೆ ಸಂಪೂರ್ಣವಾಗಿ ಜಿಪಿಎಸ್ ವ್ಯವಸ್ಥೆಯ ಮೂಲಕ ಅವಲೋಕನದಲ್ಲಿ ಇರುತ್ತದೆ. ಲಾರಿಯು ಧಕ್ಕೆಗೆ ಬರುವುದು, ಮರಳು ತುಂಬಿಸಿಕೊಂಡು ಹೊರಡುವುದು ಮತ್ತು ಗ್ರಾಹಕರನ್ನು ತಲುಪುವ ಕ್ಷಣಕ್ಷಣದ ಮಾಹಿತಿ ಮರಳು ಉಸ್ತುವಾರಿ ಸಮಿತಿ ಕಾರ್ಯಾಲಯಕ್ಕೆ ತಲುಪುತ್ತಿರುತ್ತದೆ.ಇದಕ್ಕೆ ಜಿಯೋ ಫೆನ್ಸಿಂಗ್ ಮಾಡಲಾಗಿರುತ್ತದೆ.
ಜನರಿಗೆ ಕಡಿಮೆ ದರದಲ್ಲಿ ಮರಳು ಒದಗಿಸುವುದು, ಮರಳಿನ ಲಭ್ಯತೆಯ ನಿಖರ ಮಾಹಿತಿ ನೀಡುವುದು ಮತ್ತು ಮರಳಿನ ಅಕ್ರಮ ಸಾಗಣೆ ತಡೆಯಲು ಅಂದಿನ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಈ ವ್ಯವಸ್ಥೆ ಜಾರಿಗೊಳಿಸಿದ್ದರು. ಇದಕ್ಕಿಂತ ಎಂಟು ವರ್ಷಗಳ ಹಿಂದೆಯೇ ಪೊನ್ನುರಾಜ್ ಎಂಬ ಐಎಎಸ್ ಅಧಿಕಾರಿ ಮರಳು ಸಾಗಾಣಿಕೆಯ ಎಲ್ಲ ಲಾರಿಗಳಿಗೆ ಜಿಪಿಎಸ್ ಅಳವಡಿಕೆ ಮಾಡಿಸಲು ಕ್ರಮ ಕೈಗೊಂಡಿದ್ದರು. ಅಕ್ರಮ ಮರಳುಗಾರಿಕೆಯ ಶಕ್ತಿ ಕೇಂದ್ರ ಬಂಟ್ವಾಳದಲ್ಲಿ ಅಕ್ರಮ ಮರಳುಗಾರಿಕೆ ವಿರುದ್ಧ ದಾಳಿ ಮಾಡಿದ ಸ್ಥಳೀಯ ಉಪ ತಹಸೀಲ್ದಾರನ್ನು ಕೊಲೆ ಮಾಡಲು ಯತ್ನಿಸಿದ ಘಟನೆ ನಡೆದ ಮೇಲೆ ಸರಕಾರಿ ಅಧಿಕಾರಿಗಳು ಎಚ್ಚೆತ್ತುಕೊಂಡರು. ಜಿಲ್ಲಾಧಿಕಾರಿ ಆಗಿದ್ದ ಪೊನ್ನುರಾಜ್ ನಿಯಂತ್ರಣ ಕ್ರಮ ಕೈಗೊಂಡರು. ಅದು ರಾಜ್ಯದ ಇತರ ಜಿಲ್ಲೆಗಳಲ್ಲಿ ಕೂಡ ಅನುಷ್ಠಾನ ಆಗತೊಡಗಿತು.
ಆದರೆ, ಅಂದಿನ ಕಾಂಗ್ರೆಸ್ ಸರಕಾರದ ಸಚಿವರುಗಳು ಕ್ರಮೇಣ ಮರಳು ಮಾಫಿಯದ ಪರವಾಗಿ ನಿಂತು ಸ್ಥಳೀಯ ಸ್ವಂತ ಮನೆ ಕಟ್ಟುವ ಮರಳು ಗ್ರಾಹಕರನ್ನು ಕಡೆಗಣಿಸಿ ಮರಳುಗಾರಿಕೆಯನ್ನು ಒಂದು ಅಕ್ರಮ ದಂಧೆಯಾಗಿ ಪರಿವರ್ತಿಸಿದರು. ಈ ಮರಳು ದಂಧೆಯಲ್ಲಿ ಎರಡೂ ಪಕ್ಷಗಳ ಬೆಂಬಲಿಗರು ಸಮಾನ ಪಾಲುದಾರರು. ಅಧಿಕಾರದ ಮದದಲ್ಲಿ ಮೆರೆಯುತ್ತಿದ್ದ ಕಾಂಗ್ರೆಸ್ಸಿಗರು ಜನರನ್ನು, ಪರಿಸರವನ್ನು, ಕಾನೂನನ್ನು ಮತ್ತು ಬಹುಮುಖ್ಯವಾಗಿ ತಮ್ಮ ಪಕ್ಷದ ಮೂಲ ಉದ್ದೇಶವನ್ನೇ ಮರೆತು ಮರಳು ಮಾಫಿಯಾದ ಕೈಗೊಂಬೆಯಾಗಿ ಹೆಸರು ಕೆಡಿಸಿಕೊಂಡಿರುವುದು ಈಗ ಇತಿಹಾಸ.
ಮರಳುಗಾರಿಕೆ ಪರಿಸ್ಥಿತಿ ಎಲ್ಲಿಯವರೆಗೆ ಬಂತೆಂದರೆ ಅಕ್ರಮ ಮರಳು ಸಾಗಾಟ ನಡೆಸುತ್ತಿದ್ದವರು ವಿಧಾನಸಭೆ, ಲೋಕಸಭೆ ಚುನಾವಣೆ ಟಿಕೇಟ್ ಕೇಳುವ ಹಂತಕ್ಕೆ ತಲುಪಿದರು. ಅಷ್ಟರ ಹೊತ್ತಿಗೆ ದಕ್ಷಿಣ ಕನ್ನಡ ರಾಜಕೀಯದಲ್ಲಿ ಕೂಡ ಸ್ಥಾನ ಪಲ್ಲಟ ಆಗಿದ್ದು, ಮರಳು ಮಾಫಿಯಾಕ್ಕೆ ಸ್ವತಃ ಕಾಂಗ್ರೆಸ್ ಮುಖಂಡರೇ ಅಡ್ಡಗಾಲು ಹಾಕುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣ ಆಯಿತು.
ಉಡುಪಿ ಜಿಲ್ಲೆಯಲ್ಲಿ ಕೈಲಾಗದ ಜನಪ್ರತಿನಿಧಿಗಳ ಮುಂದೆ ಅಧಿಕಾರಿಗಳ ಕೈ ಮೇಲಾಯಿತು. ಮರಳು ಮಾಫಿಯಕ್ಕೆ ಆದಾಯ ಇಲ್ಲದಂತಾಗಿತ್ತು. ಹೊಸದಾಗಿ ಬಿಜೆಪಿ ಸರಕಾರ ಬರುವ ಮುನ್ನವೇ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಶಾಸಕರು ಗೆದ್ದಿರುವುದರಿಂದ ಜನಪರವಾದ ಮರಳು ನೀತಿಗೆ ಆ ಪಕ್ಷ ಒಲವು ಹೊಂದಿತ್ತು. ಕರಾವಳಿಯಿಂದ ಮರಳು ತೆಗೆದು ಹೊರ ಜಿಲ್ಲೆ, ಹೊರ ರಾಜ್ಯಗಳಿಗೆ ಮಾರಾಟ ಮಾಡುವುದಕ್ಕೆ ಅವಕಾಶ ನೀಡುವುದಕ್ಕಿಂತ ಸ್ಥಳೀಯ ಮರಳು ಗ್ರಾಹಕರ ಹಿತರಕ್ಷಣೆ ಮಾಡುವುದಕ್ಕೆ ಬಿಜೆಪಿ ಮುಖಂಡರು ಒಲವು ತೋರಿಸಿದರು. ಆಗ ಚುರುಕುಗೊಂಡದ್ದೆ ಈ ಆನ್ ಲೈನ್ ಮರಳು ಮಾರಾಟ ವ್ಯವಸ್ಥೆ.
ಕರಾವಳಿ ಕರ್ನಾಟಕದಲ್ಲಿ ಕಾಂಗ್ರೆಸ್ ನಿರ್ನಾಮ ಆಗಲು ಕಾರಣವಾದ ಹಲವು ಸ್ವಯಂಕೃತ ಅಪರಾಧಗಳಲ್ಲಿ ಮರಳು ಮಾಫಿಯ ಪರವಾಗಿ ನಿಂತಿರುವುದು ಪ್ರಮುಖವಾದುದು. ಜನಪರವಾಗಿ ನಿಲ್ಲದ ಕಾಂಗ್ರೆಸ್ ನಾಯಕತ್ವ ಮರಳು ಮಾಫಿಯಾದ ಹಿತಾಸಕ್ತಿಗೆ ಪೂರಕವಾಗಿ ಕೆಲಸ ಮಾಡಿ ತಮ್ಮ ಗೋರಿಯನ್ನು ತಾವೇ ತೋಡಿಕೊಂಡಿದ್ದಾರೆ. ಮರಳಿನಿಂದ ಕಾಂಗ್ರೆಸ್ ಪಕ್ಷಕ್ಕಾಗಲಿ, ಮುಖಂಡರಿಗಾಗಲಿ, ಇಲ್ಲಿನ ಜನರಿಗಾಗಲಿ ಕಿಂಚಿತ್ತು ಪ್ರಯೋಜನ ಆಗಿದೆ ಎಂದು ಯಾರೂ ಹೇಳಿಕೊಂಡಿಲ್ಲ.
ಕರ್ನಾಟಕ ರಾಜ್ಯದಲ್ಲಿ ಮೊದಲ ಮರಳು ನೀತಿ ತಂದಿದ್ದೇ ಸಿದ್ದರಾಮಯ್ಯ ಸರಕಾರದಲ್ಲಿ ಲೋಕೋಪಯೋಗಿ ಸಚಿವರಾಗಿದ್ದ ಡಾ.ಎಚ್.ಸಿ.ಮಹದೇವಪ್ಪ. ತಮಿಳುನಾಡಿನ ಮಾದರಿಯಲ್ಲಿ ಆಗ ಪಿಡಬ್ಯುಡಿ ನೋಡಲ್ ಇಲಾಖೆ ಆಗಿತ್ತು. ಆಗಲೇ ಈಗ ನಡೆದಿರುವ ಜಿಯೋ ಫೆನ್ಸಿಂಗ್, ಜಿಪಿಎಸ್ ವ್ಯವಸ್ಥೆ ಜಾರಿಗೆ ಬಂದಿತ್ತು. ಮಾತ್ರವಲ್ಲದೆ, ಕರಾವಳಿಯ ನದಿ ಪ್ರದೇಶದಲ್ಲಿ ಮರಳುಗಾರಿಕೆ ಸಂಬಂಧಿಸಿ ಸಿಆರ್ ಝೆಡ್ (Coastal Regulation Zone) ನಿಯಮಗಳನ್ನು ಅಳವಡಿಸಲಾಗಿತ್ತು. ಅನಂತರ ಇದು ಕಾನೂನು ಆಗಿ ಜಾರಿ ಆಯ್ತು.
ರಾಜ್ಯದಲ್ಲಿ ಮರಳು ಕೊರತೆ ಉಂಟಾದಾಗ ಮಲೇಷ್ಯಾದಿಂದ ನವಮಂಗಳೂರು ಬಂದರು ಮೂಲಕ ಮರಳು ಆಮದು ಮಾಡಲಾಯಿತು. ಮೂರು ಹಡಗು ಲೋಡ್ ಮರಳು ಆರಂಭದಲ್ಲಿ ಯಾವುದೇ ಕ್ಲಿಯರೆನ್ಸ್ ಇಲ್ಲದ ಕಾರಣ ರಾಶಿ ಬಿದ್ದಿತ್ತು. ರಾಜ್ಯದಲ್ಲಿ ಮರಳಿನ ಕೊರತೆ ಹಿನ್ನೆಲೆಯಲ್ಲಿ ಮಲೇಷ್ಯಾದಿಂದ ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ MSIL ಆಮದು ಮಾಡಿಕೊಂಡು ಕಡಿಮೆ ದರಕ್ಕೆ ಮಾರಾಟ ಮಾಡುತ್ತಿದೆ.
ಕರಾವಳಿಯ ಪರಿಸರಕ್ಕೆ ಹಾನಿ ಆಗದಂತೆ ಯಂತ್ರೋಪಕರಣಗಳನ್ನು ಬಳಸದೆ ಮರಳುಗಾರಿಕೆ ಮಾಡಬೇಕು ಮತ್ತು ಮಳೆಗಾಲದಲ್ಲಿ ಮರಳುಗಾರಿಕೆ ಮಾಡಬಾರದು ಎಂಬಿತ್ಯಾದಿ ಪರಿಸರ ಪರವಾದ ನಿಯಮಗಳ ಉಲ್ಲಂಘನೆ ಆಗುತ್ತಿರುವುದು ಕಳವಳ ಸಂಗತಿಯಾಗಿದೆ. ಇನ್ನೊಂದೆಡೆ ಮರಳುಗಾರಿಕೆ ಒಂದು ಮಾಫಿಯವಾಗಿ ಬೆಳೆದಿರುವುದು ಪ್ರಜಾಪ್ರಭುತ್ವ ವಿರೋಧಿಯಾಗಿದೆ ಎಂಬುದನ್ನು ಎಲ್ಲರೂ ಮನಗಾಣಬೇಕಾಗಿದೆ.