ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎಂಬ ಮಾತಿದೆ. ಸದ್ಯಕ್ಕೆ ಈ ಕರೋನಾ ಎಂಬ ಮಹಾಮಾರಿಯನ್ನು ತಡೆಯಲು ವಿವಿಧ ದೇಶಗಳು, ಅಲ್ಲಿನ ಸರ್ಕಾರಗಳು, ಪೊಲೀಸರು ಹಾಗು ವೈದ್ಯರು ಅವಿರತ ಶ್ರಮಿಸುತ್ತಿದ್ದಾರೆ. ಪರಿಹಾರ ಕಂಡುಕೊಳ್ಳಲು ಸಕಲ ಪ್ರಯತ್ನಗಳೂ ನಡೆಯುತ್ತಿವೆ. ಆದರೆ ಈ ಸಂದರ್ಭದಲ್ಲಿ ಜನಸಾಮಾನ್ಯರ ಸಹಕಾರ ಸೂಕ್ತವಾಗಿ ದೊರಕದಿದ್ದರೆ ಮೇಲಿನ ಗಾದೆಯಂತೆಯೇ ಎಲ್ಲಾ ಪ್ರಯತ್ನಗಳೂ ಕ್ಷಣಾರ್ಧದಲ್ಲಿ ಸೋಲು ಕಾಣುವಂತಾಗುವ ಸಾಧ್ಯತೆ ಹೆಚ್ಚು.
ವಿಶ್ವ ಆರೋಗ್ಯ ಸಂಸ್ಥೆಯು ಮಾನಸಿಕ ಆರೋಗ್ಯ ಮತ್ತು ಸಾಮಾಜಿಕ ಕಳಕಳಿ ಎಂಬ ವಿಷಯದ ಬಗ್ಗೆ ಲೇಖನವನ್ನು ಪ್ರಕಟಿಸಿದಾಗ, ಜನರ ಆರೋಗ್ಯಕರ ಮನಸ್ಥಿತಿಗೋಸ್ಕರ ಹಲವಾರು ಸಂದೇಶಗಳನ್ನು ರವಾನಿಸಿದ್ದರು. ನಾವು ಈಗಿನ ಕಠಿಣ ಪರಿಸ್ಥಿತಿಯಲ್ಲಿ ಮನೆಯೊಳಗೆ ಇರಲೇಬೇಕಾಗಿರುವುದರಿಂದ ಬಹಳಷ್ಟು ಮಾನಸಿಕ ಒತ್ತಡ ಉಂಟಾಗಬಹುದು. ನಾಲ್ಕು ಗೋಡೆಗಳ ಮಧ್ಯ ಇದ್ದು ಕೆಲಸ ಮಾಡುವುದು ಅಥವಾ ದಿನಗಳನ್ನು ಕಳೆಯುವುದು ಸುಲಭದ ಮಾತೇನಲ್ಲ. ನಮ್ಮೊಳಗೆ ಒತ್ತಡ, ಮಾನಸಿಕ ಕಿರಿಕಿರಿ ಉಲ್ಬಣಿಸಿ ಮನೆಯವರ ಮೇಲೆ ಕೂಗಾಡುವಂತಾದರೂ ಅಚ್ಚರಿಯೇನಲ್ಲ.
“Man is a social animal” ಎಂಬ ಮಾತು ಎಷ್ಟು ಸತ್ಯ ಎಂದು ನಿಯಮಗಳನ್ನು ಉಲ್ಲಂಘಿಸಿ ಹೊರಗಡೆ ಸುತ್ತಾಡಿದವರನ್ನು ನೋಡಿ ಅರ್ಥೈಸಿಕೊಳ್ಳಬಹುದು ನೋಡಿ! “ಅಬ್ಬಾ, ಸ್ವಲ್ಪ ಸಮಯವಾದರೂ ಹೊರಗೆ ಹೋಗಿ ಬಂದಿದ್ದು ಮನಸ್ಸಿಗೆ ಎಷ್ಟೋ ನೆಮ್ಮದಿ ಎನ್ನಿಸಿತು” ಎಂದು ಮನಸ್ಸಿಗೆ ಎನ್ನಿಸುವುದು ಅದೇ ಕಾರಣಕ್ಕಾಗಿ. ಆದರೆ, ಈ ಸಂದರ್ಭದಲ್ಲಿ ಇಂತಹ ನಡೆಗಳು ಜೀವಕ್ಕೆ ಅಪಾಯ ತಂದೊಡ್ಡುವ ಸಾಧ್ಯತೆ ಹೆಚ್ಚಿರುವುದರಿಂದ ನಾವು ಒಬ್ಬಂಟಿಗರಂತೆಯೇ ಬದುಕುವ ಅನಿವಾರ್ಯತೆ ಇದೆ.
ಪರಿಸ್ಥಿತಿ ಹೀಗಿರುವಾಗ ಎಲ್ಲಾ ಕ್ಷೇತ್ರಗಳ ಉದ್ಯೋಗಿಗಳಿಗೂ ಕೆಲಸ ಕಾರ್ಯದ ವಿಚಾರದಲ್ಲಿ ಬಹುದೊಡ್ಡ ಅಡೆತಡೆ ಉಂಟಾಗಿದೆ. ಮನೆಯಲ್ಲಿಯೇ ಕೂತು ಕೆಲಸ ಮಾಡುವ ಅವಕಾಶ ಇದೆಯಾದರೂ ಅದು ಎಷ್ಟೋ ಜನರಿಗೆ ಅನಾವಶ್ಯಕವಾಗಿ ಅಧಿಕ ಒತ್ತಡ ಉಂಟು ಮಾಡುವಂತಾಗಿದೆ. ಇಂತಹ ಸ್ಥಿತಿಯಲ್ಲಿ ಪ್ರತಿಯೊಬ್ಬರೂ ತಮ್ಮ ಮಾನಸಿಕ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಲೇಬೇಕಿದೆ. ಕೆಲಸದ ಮಧ್ಯೆ ವಿರಾಮ ಪಡೆದು ಆ ಸಮಯದಲ್ಲಿ ಮನೆಯವರೊಡನೆ ಮಾತನಾಡುವುದು, ಹಾಡು ಕೇಳುವುದು, ಇಷ್ಟವಾದ ಕೆಲಸ ಮಾಡುವುದು ಹೀಗೆ ಮನಸ್ಸಿಗೆ ಮುದ ನೀಡುವ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ನಮ್ಮ ಮನಸ್ಸಿಗೆ ನಾವೇ ಸಹಾಯ ಮಾಡಿಕೊಳ್ಳಬಹುದು.
ಇನ್ನೊಂದೆಡೆ ಅನಿರ್ಧಿಷ್ಟಾವಧಿ ರಜೆಯಲ್ಲಿರುವ ಮಕ್ಕಳನ್ನು ನಿಭಾಯಿಸುವ ಅಮ್ಮಂದಿರು ಕೂಡ ಮಾನಸಿಕ ಒತ್ತಡವನ್ನು ಎದುರಿಸುತ್ತಿರಬಹುದು. ಮಕ್ಕಳನ್ನು ಇಡೀ ದಿನ ಮನೆಯಲ್ಲಿ ಹಿಡಿದಿಟ್ಟುಕೊಳ್ಳುವುದೇ ಹಲವರಿಗೆ ಸವಾಲಾಗಿರಬಹುದು. ಅಂತಹ ಸಂದರ್ಭದಲ್ಲಿ ಮಕ್ಕಳಿಗೆ ಶಿಕ್ಷಿಸುವ ಅಥವಾ ಕೆಲಸ ಕೊಡುವ ಬದಲು, ಅವರ ಜೊತೆ ತೊಡಗಿಸಿಕೊಳ್ಳುವುದು ಅಗತ್ಯ. ಆ ಮೂಲಕ ಕಳೆದು ಹೋದ ಬಾಲ್ಯದ ದಿನಗಳನ್ನು ಮತ್ತೆ ಹುಡುಕುವ ಪ್ರಯತ್ನವನ್ನೂ ಮಾಡಬಹುದು. ಆ ಮುಖಾಂತರ ಮಕ್ಕಳ ಎಳೆ ಮನಸ್ಸಿಗೆ ಖುಷಿ ನೀಡಿ, ಪೋಷಕರೂ ಖುಷಿ ಪಡೆಯಲು ಸಾಧ್ಯ.
ಮಾನಸಿಕ ಖಿನ್ನತೆಯನ್ನು ತಡೆಗಟ್ಟುವಲ್ಲಿ ನೀರಿನ ಪಾತ್ರ ದೊಡ್ಡದಿದೆ. ದೇಹದಲ್ಲಿ ದ್ರವ ಪ್ರಮಾಣ ಇಳಿಮುಖವಾದಲ್ಲಿ ಸೆರೋಟೋನಿನ್ ಎಂಬ ರಾಸಾಯನಿಕ ಅಂಶ ಕಮ್ಮಿ ಆಗುತ್ತದೆ. ಈ ದ್ರವ ಕಡಿಮೆಯಾದಾಗ ಖಿನ್ನತೆ ಉಂಟಾಗುತ್ತದೆ. ಹಾಗಾಗಿ ಕೆಲಸದ ಮಧ್ಯೆ ನೀರನ್ನು ಕುಡಿಯುವುದು ಮನಸ್ಸನ್ನು ಉಲ್ಲಸಿತವಾಗಿಡುವಲ್ಲಿ ಸಹಕಾರಿಯಾಗುತ್ತದೆ. ಇನ್ನು ಕೆಲವು ಮನೆಗಳಲ್ಲಿ ವೃದ್ಧರು ಮನೆಯಲ್ಲಿಯೇ ಇದ್ದು ಬೇಸರಗೊಳ್ಳುವ ಕಾರಣ ಅವರ ವರ್ತನೆಯಲ್ಲಿ ಬದಲಾವಣೆ ಆಗಬಹುದು. ಮನೆಯಲ್ಲಿ ಚೀರಾಡುವುದು, ಅತಿಯಾಗಿ ತಿನ್ನುವುದು ಅಥವಾ ಕೊರುಗತ್ತಲೇ ಇರವುದು ಹೀಗೆ ಅಸಹಜವೆನ್ನಿಸುವಂತೆ ವರ್ತಿಸಬಹುದು. ಈ ಸಮಯದಲ್ಲಿ ಮನೆಯ ಇತರ ಸದಸ್ಯರು ಅವರೊಡನೆ ಹೇಗೆ ವರ್ತಿಸುತ್ತಾರೆಂಬುದು ಮುಖ್ಯವಾಗುತ್ತದೆ.
ಅವರೊಂದಿಗೆ ಮಾತನಾಡುವ ಮೂಲಕ, ಕೆಲಸಗಳಲ್ಲಿ ಅಥವಾ ಮಕ್ಕಳ ಜೊತೆ ತೊಡಗಿಸುಕೊಳ್ಳುವಂತೆ ಮಾಡುವ ಮೂಲಕ ಅವರಿಗೆ ಒಂಟಿತನ ಕಾಡದಂತೆ ನೋಡಿಕೊಳ್ಳಬಹುದು. ಲಾಕ್ಡೌನ್ ಇರುವ ಕಾರಣ ಔಷಧಿಗಳು ಸಕಾಲಕ್ಕೆ ದೊರೆಯದೆ ಇದ್ದರೆ ಅವರೊಟ್ಟಿಗೆ ನೀವೂ ಭಯ ಪಡಬೇಡಿ, ಭಯ ಆವರಿಸಿದಲ್ಲಿ ತೊಂದರೆಯ ತೀವ್ರತೆ ಇನ್ನಷ್ಟು ಹೆಚ್ಚಾಗಬಹುದು. ಸುದ್ದಿ ಮಾಧ್ಯಮಗಳಲ್ಲಿ ಮಕ್ಕಳಿಗೆ ಹಾಗು ವೃದ್ಧರಿಗೆ ಹೆಚ್ಚಾಗಿ ಸೋಂಕು ತಗುಲುವ ಸಾಧ್ಯತೆ ಎಂದು ಜಾಗ್ರತೆ ಹೇಳಿದ್ದನ್ನೂ ಗಂಭೀರವಾಗಿ ಪರಿಗಣಿಸಿ ಭಯ ಪಟ್ಟು ರಕ್ತದೊತ್ತಡ ಹೆಚ್ಚಿಸಿಕೊಳ್ಳುವವರಿರುತ್ತಾರೆ. ಅಂತಹವರಿಗೆ ಉಸಿರಾಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಧ್ಯಾನ ಬಹಳ ಮುಖ್ಯ.
ಒಬ್ಬರೇ ಮನೆಯಲ್ಲಿದ್ದಾಗ ಒಂಟಿತನ ಕಾಡುವುದು ಸಹಜ. ಈಗಿನ ಕಾಲದ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ತೊಡಗಿಸಿಕೊಂಡರೆ, ಕೆಲವರು ಓದು, ಹಾಡು-ಹಸೆ, ತೋಟಗಾರಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಇವೆಲ್ಲವೂ ಒತ್ತಡ ನಿಯಂತ್ರಿಸಲು ಅತ್ಯುತ್ತಮ ಮಾರ್ಗಗಳು.
ಈ ಎಲ್ಲ ಒತ್ತಡಗಳು ಮನೆಯ ಒಳಗೆ ಇರುವವರು ಎದುರಿಸುವುದಾದರೆ, ಮನೆಯ ಹೊರಗೆ ಅಂದರೆ ಇಡೀ ವ್ಯವಸ್ಥೆಯನ್ನು ನಿಭಾಯಿಸುತ್ತಿರುವ ವೈದ್ಯರು, ನರ್ಸ್‌ಗಳು, ಆಡಳಿತ ವರ್ಗ ಇನ್ನೊಂದು ಬಗೆಯ ಒತ್ತಡದಲ್ಲಿರುತ್ತದೆ. ಹಾಗಾಗಿ ಅನಿವಾರ್ಯ ಕಾರಣಗಳಲ್ಲಿ ಮನೆಯಿಂದ ಹೊರಬಂದರೂ ಪೊಲೀಸರೊಡನೆ ಅಥವಾ ಆಡಳಿತ ವರ್ಗದ ಇತರ ವ್ಯಕ್ತಿಗಳೊಟ್ಟಿಗೆ ಸಾವಧಾನದಿಂದ ವರ್ತಿಸುವುದು ಈ ಕ್ಷಣದಲ್ಲಿ ಪ್ರಮುಖವಾಗುತ್ತದೆ.
ಇಷ್ಟೆಲ್ಲಾ ಇದ್ದಾಗ ಭಾವನೆಗಳನ್ನು ನಿಭಾಯಿಸುವುದು ಒಂದು ಕಡೆಯಾದರೆ, ಚಟಗಳನ್ನು ಬಿಡುವುದು ಇನ್ನೊಂದು ಕಡೆ. ಸಾರಾಯಿ, ಬೀಡಿ, ಸಿಗರೇಟು, ಜೂಜು ಎನ್ನುತ್ತಿದವರಿಗೆ ಅದಿಲ್ಲದೇ ಏನನ್ನೋ ಕಳೆದುಕೊಂಡಂತೆ ಅನ್ನಿಸಬಹುದು. ಯಾವುದನ್ನಾದರೂ ಚಟವಾಗಿಸಿಕೊಂಡವರಿಗೆ ಬೇಕಾದ ವಸ್ತುಗಳು ಒಮ್ಮೆಲೇ ಸಿಗದೇ ಹೋದಾಗ ತುಂಬಾ ಕಿರಿಕಿರಿ ಉಂಟಾಗುವುದು ಸಹಜ. ಅಂತಹವರಲ್ಲಿ ಎಷ್ಟೋ ಜನ ಖಿನ್ನತೆಗೆ ಒಳಗಾಗುತ್ತಾರೆ. ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳೂ ಇವೆ. ಮನಸ್ಸು ಅವರ ಮಾತನ್ನೇ ಕೇಳದಿರುವ ಪರಿಣಾಮ ಅವರು ಸ್ಥಿಮಿತ ಕಳೆದುಕೊಳ್ಳುವ ಸಾಧ್ಯತೆ ಅಧಿಕ. ಅಂತಹವರು ಸುತ್ತಮುತ್ತಲಿನಲ್ಲಿ ಇದ್ದರೆ ತಿಳುವಳಿಕೆಯುಳ್ಳವರು ಅವರೆಡೆಗೆ ಕಾಳಜಿ ತೋರುವ ಮೂಲಕ ದೊಡ್ಡ ಮಟ್ಟದ ಅಪಾಯವನ್ನು ತಪ್ಪಿಸಲು ಪ್ರಯತ್ನಿಸಬಹುದು.
ಯಾವುದೇ ರೋಗವಾಗಲಿ ನಮ್ಮ ದೇಹಕ್ಕಿಂತ ಹೆಚ್ಚು ಮನಸ್ಸನ್ನು ಕಾಡಲು ಶುರುಮಾಡಿದರೆ ಅದರಿಂದ ಹೊರಬರುವ ದಾರಿ ಕ್ಲಿಷ್ಟವಾಗುತ್ತಾ ಹೋಗುತ್ತದೆ. ಆದ್ದರಿಂದ ಎಂತಹ ಸಂದರ್ಭದಲ್ಲೂ ಪರಿಸ್ಥಿತಿಯನ್ನು ನಿಭಾಯಿಸಬಲ್ಲೆ ಎಂಬ ಆತ್ಮಸ್ಥೈರ್ಯವೊಂದಿದ್ದರೆ ಯಾವುದೇ ರೋಗವನ್ನಾದರೂ ಒದ್ದೋಡಿಸಬಹುದು.
ಲೇಖಕರು: ಮನೋವಿಜ್ಞಾನ ವಿಭಾಗದ ವಿದ್ಯಾರ್ಥಿನಿ, ಎಸ್‌ಡಿಎಂ ಕಾಲೇಜು ಉಜಿರೆ.