ಕೋಲಾರದಲ್ಲಿ ಕೆಸಿ ವ್ಯಾಲಿ ಯೋಜನೆ ವೀಕ್ಷಣೆಗೆ ಹೋಗಿದ್ಧ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ. ಕೆರೆ ಬಳಿ ಸಾಕಷ್ಟು ಭೂಮಿ ಒತ್ತುವರಿ ಆಗಿದೆ ಸಾರ್, ಇದನ್ನು ತೆರವು ಮಾಡಿಸಬೇಕು ಎಂದು ರೈತಸಂಘದ ಅಧ್ಯಕ್ಷೆ ನಳಿನಿಗೌಡ ಮಾಧುಸ್ವಾಮಿ ಅವರನ್ನು ಕೇಳಿದ್ದರು. ಇದಕ್ಕೆ ಕುಪಿತಗೊಂಡಿದ್ದ ಸಚಿವ ಮಾಧುಸ್ವಾಮಿ, ‘ನಾನು ತುಂಬಾ ಕೆಟ್ಟ ಮನುಷ್ಯ ಇದ್ದೀನಿ, ಏಯ್ ರಾಸ್ಕಲ್ ಮುಚ್ಚು ಬಾಯ್’ ಎನ್ನುವ ಮೂಲಕ ಮಹಿಳೆ ಎಂಬುದನ್ನೂ ನೋಡದೆ ತನ್ನ ಅಧಿಕಾರ ದರ್ಪ ಮೆರೆದಿದ್ದರು. ಈ ವಿಡಿಯೋ ಎಲ್ಲಾ ಕಡೆಗಳಲ್ಲೂ ವೈರಲ್ ಆಗಿತ್ತು. ಸಚಿವರ ನಡತೆ ಬಗ್ಗೆ ಎಲ್ಲರೂ ಅಸಹ್ಯಪಟ್ಟುಕೊಳ್ಳುವಂತಿತ್ತು.

ಸಚಿವ ಮಾಧುಸ್ವಾಮಿ ಅವರ ನಡವಳಿಕೆ ಬಗ್ಗೆ ಕಾಂಗ್ರೆಸ್‌ನ ಕಿಸಾನ್ ಘಟಕ ಕೂಡ ಖಂಡನೆ ವ್ಯಕ್ತಪಡಿಸಿ ಕೂಡಲೇ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿತ್ತು. ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಮಾಜಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕೂಡ ಆಕ್ರೋಶ ಹೊರ ಹಾಕಿದ್ದರು. ಕೂಡಲೇ ಸಚಿವ ಮಾಧುಸ್ವಾಮಿ ಅವರಿಂದ ರಾಜೀನಾಮೆ ಪಡೆಯಬೇಕು ಎಂದು ಒತ್ತಾಯ ಮಾಡಿದ್ದರು. ಕೋಲಾರ, ಚಾಮರಾಜನಗರ ಸೇರಿದಂತೆ ರಾಜ್ಯದ ಹಲವಾರು ಕಡೆಗಳಲ್ಲಿ ಪ್ರತಿಭಟನೆಗಳೂ ನಡೆದಿದ್ದು. ಬೆಂಗಳೂರಿನ ರಾಜಾಜಿ ನಗರದಲ್ಲಿ ವ್ಯಕ್ತಿಯೊಬ್ಬನಿಗೆ ಸ್ತ್ರೀ ವೇಷ ಹಾಕಿ, ಮಾಧುಸ್ವಾಮಿ ಮುಖವಾಡ ಧರಿಸಿ ಛೀಮಾರಿ ಕೂಡ ಹಾಕಲಾಯ್ತು.
ಇನ್ನು ಇದೇ ಸಂದರ್ಭ ಮಹಿಳೆ ಎಂದೂ ನೋಡದೆ ಕೈ ಹಿಡಿದು ಎಳೆದೊಯ್ದ ಪೊಲೀಸ್ ಅಧಿಕಾರಿಯ ವಿರುದ್ಧ ಕ್ರಮಕ್ಕೂ ವ್ಯಾಪಕ ಒತ್ತಾಯ ಕೇಳಿ ಬಂದಿದೆ. ಕಾಂಗ್ರೆಸ್ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಪೊಲೀಸ್ ಅಧಿಕಾರಿ ವರ್ತನೆಗೆ ಟ್ವೀಟ್ ಮೂಲಕ ಆತಂಕ ತೋಡಿಕೊಂಡಿದ್ದು, ದೈಹಿಕವಾಗಿ ದೌರ್ಜನ್ಯಗೈದ ಪೊಲೀಸ್ ಅಧಿಕಾರಿಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡು, ಕ್ರಮಕ್ಕಾಗಿ ಡಿಜಿಪಿ ಅವರನ್ನ ಟ್ವೀಟ್ ಮೂಲಕ ಒತ್ತಾಯಿಸಿದ್ದಾರೆ.
This is very sorry state of affairs.
Voice of a woman is suppressed by Verbal abuse by Hon Minister & Physical Abuse by Police Inspector by outraging the modesty of woman. She was plainly talking to Minister.
Request @DgpKarnataka to book criminal case & suspend the inspector. pic.twitter.com/cGdvcgiQKG
— Dr. Anjali Nimbalkar (@DrAnjaliTai) May 20, 2020
ಸಂಜೆ ಬಳಿಕ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಸಿಎಂ ಬಿಎಸ್ ಯಡಿಯೂರಪ್ಪ, ಮಾಧುಸ್ವಾಮಿ ಅವರ ಹೇಳಿಕೆಯನ್ನು ಗಮನಿಸಿದ್ದೇನೆ. ಒಬ್ಬ ಸಚಿವನಾಗಿ ಮಾತನಾಡಿದ್ದು ಅಕ್ಷಮ್ಯ ಎಂದಿದ್ದರು. ಜೊತೆಗೆ ಮಾಧುಸ್ವಾಮಿ ಜೊತೆಗೆ ಈ ಬಗ್ಗೆ ಮಾತನಾಡಿ ಬುದ್ಧಿಹೇಳುತ್ತೇನೆ. ಸಚಿವ ಮಾಧುಸ್ವಾಮಿಗೆ ಆ ಮಾತುಗಳು ಶೋಭೆ ತರಲ್ಲ. ಸಚಿವರಾಗಿ ಮಹಿಳೆ ಜೊತೆಗೆ ಈ ರೀತಿ ಮಾತಾಡಿರೋದು ತಪ್ಪು. ಇದನ್ನು ಸಹಿಸಿಕೊಳ್ಳೊಕೆ ಆಗಲ್ಲ. ನೊಂದ ಮಹಿಳೆಯನ್ನು ಕರೆದು ಮಾತನಾಡುತ್ತೇನೆ ಎಂದಿದ್ದಾರೆ. ತನ್ನ ಹೇಳಿಕೆಯಿಂದ ಎಷ್ಟೆಲ್ಲಾ ರಾಮಾಯಣಗಳು ನಡೆಯುತ್ತಿದ್ದರೂ ಸಚಿವ ಮಾಧುಸ್ವಾಮಿ ಮಾತ್ರ ತನ್ನ ಎಂದಿನ ಭಂಡಾಟವನ್ನು ಬಿಡುವ ಮನಸ್ಸು ಮಾಡಲೇ ಇಲ್ಲ. ತುಮಕೂರಿನಲ್ಲಿ ಈ ಬಗ್ಗೆ ಮಾತನಾಡಿದ ಸಚಿವ ಮಾಧುಸ್ವಾಮಿ, ಚಿಂತಾಮಣಿಯಲ್ಲಿ ಕೆರೆಗೆ ನೀರು ಬಿಡುವ ವಿಚಾರಕ್ಕೆ ಪರಿಶೀಲನೆಗಾಗಿ ತೆರಳಿದ್ದೆ. ಅವರು ರೈತ ಸಂಘದವರೆಂದು ಗೊತ್ತಿರಲಿಲ್ಲ ಎಂದಿದ್ದಾರೆ.
‘ಏನಮ್ಮ ಈ ಪ್ರಶ್ನೆ ನನ್ನ ಬಳಿ ಕೇಳ್ತಿಯಾ ಅಂತ ನಾನು ಕೇಳ್ದೆ. ಏನ್ರಿ ಮಾಡ್ತಿದಿರಿ ಅಂತ ನನ್ನನ್ನೇ ಕೇಳಿದ್ರು. ನನಗೂ ಸ್ವಾಭಿಮಾನವಿದೆ. ಆದೇಶ ಕೊಡಲಿಕ್ಕೆ ಬರಬೇಡ ರಿಕ್ವೆಸ್ಟ್ ಮಾಡು ಎಂದೆ. ಆ ಊರಿಗೆ ಹೋಗಿ ಬಾಯಿಗೆ ಬಂದಹಾಗೆ ಬೈಸಿಕೊಳ್ಳಲಿಕ್ಕೆ ನಾವು ಹೋಗಿದ್ದೇವಾ..? ಅವರು ಏರುದ್ವನಿಯಲ್ಲಿ ಮಾತನಾಡಿದರು. ಪ್ರತಿ ಬಾರಿಯೂ ಈ ಯಮ್ಮನದು ಅದೇ ಕೆಲಸವಂತೆ. ಈ ಗಲಾಟೆ ನಡೆಯಬಾರದಿತ್ತು. ಆಯಮ್ಮ ಅದೇ ರೀತಿ ನಡೆದುಕೊಂಡು ಬಂದಿದ್ದಾರೆ ಎಂದು ಸ್ಥಳೀಯರು ಹೇಳಿದರು. ಕೆರೆ ಒತ್ತುವರಿಯಾಗಿದೆ ಅಂದರೆ ನಾನು ಏನು ಮಾಡೋಕೆ ಆಗುತ್ತೆ. ಒಂದು ಹೆಣ್ಣುಮಗಳಿಗೆ ನೋವಾಗಿದ್ದರೆ ತಪ್ಪು. ಟೆಮ್ಟ್ ಮಾಡಿದರೆ ನಾನೇನು ಮಾಡಲಿ. ನಾನೇನು ಹೆಣ್ಣು ಮಗಳನ್ನ ಬೈಯ್ಯೋಕೆ ಪ್ರಿಪೇರ್ ಆಗಿ ಹೋಗಿದ್ನಾ.? ಸಿಚುಯೇಶನ್ ಕ್ರಿಯೇಟ್ ಮಾಡಿ ತಪ್ಪು ಹೊರಿಸಿದ್ರೆ ಹೇಗೆ..? ತಾಳ್ಮೆ ಕಳೆದುಕೊಳ್ಳುವಂತೆ ನನ್ನನ್ನ ಮಾಡಿದ್ರು, ಅದಕ್ಕೆ ನಾನು ಹಾಗೆ ಹೇಳಬೇಕಾಯ್ತು ಎಂದು ತನ್ನದೇ ರೀತಿಯಲ್ಲಿ ತಪ್ಪನ್ನೂ ಸರಿ ಮಾಡಿಕೊಳ್ಳುವ ಯತ್ನ ಮಾಡಿದ್ದಾರೆ. ಜೊತೆಗೆ ಸಿದ್ದರಾಮಯ್ಯ ರಾಜೀನಾಮೆ ಕೇಳಿದ್ದಕೂ ಕೋಪಗೊಂಡಿರುವ ಸಚಿವ ಮಾಧುಸ್ವಾಮಿ, ನನ್ನನ್ನ ಯಾರೂ ತಬ್ಬಿಕೊಂಡು ಮುತ್ತು ಕೊಟ್ಟಿಲ್ಲ. ನನ್ನ ನಾಯಕರು ಕರೆದು ರಾಜೀನಾಮೆ ಕೇಳಿದ್ರೆ ಒಂದು ಕ್ಷಣವೂ ಸುಮ್ಮನಿರೋದಿಲ್ಲ. ಎನ್ನುವ ಮೂಲಕ ಸಿದ್ದರಾಮಯ್ಯ ಕೇಳಿದ್ದ ರಾಜೀನಾಮೆ ಮಾತಿಗೆ ತಿರುಗೇಟು ನೀಡಿದ್ದಾರೆ.
ಮಾಧುಸ್ವಾಮಿ ಅಸಲಿ ಪುರಾಣ ಏನು ಗೊತ್ತಾ..?
ಮಾಧುಸ್ವಾಮಿ ಸಚಿವರಾಗಿ ಅಧಿಕಾರ ಸ್ವೀಕರಿಸಿ ತಿಂಗಳಾಗುತ್ತಿದ್ದ ಹಾಗೆ ವಿವಾದವೊಂದನ್ನು ಕಾಲು ಕೆರೆದು ಮೈ ಮೇಲೆ ಎಳೆದುಕೊಂಡಿದ್ದರು. ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯ ಹುಳಿಯಾರಿನ ವೃತ್ತವೊಂದಕ್ಕೆ ಇದ್ದ ಕನಕ ಸರ್ಕಲ್ ಎಂಬ ಹೆಸರನ್ನು ತೆಗೆದು ಶಿವಕುಮಾರ ಸ್ವಾಮೀಜಿ ಹೆಸರು ನಾಮಕರಣಕ್ಕೆ ಮುಂದಾಗಿದ್ದರು. ಇದನ್ನು ಕುರುಬ ಸಮುದಾಯದ ಮುಖಂಡರು, ಸ್ವಾಮೀಜಿಗಳು ಖಂಡಿಸಿದ್ದರು. ಆ ಬಳಿಕ ಜಿಲ್ಲಾಡಳಿತ ಪರ ವಿರೋಧವಿದ್ದ ಗುಂಪುಗಳನ್ನು ಒಟ್ಟಿಗೆ ಕೂರಿಸಿ ಶಾಂತಿ ಸಭೆ ಮಾಡಲು ಮುಂದಾಗಿತ್ತು. ಈ ವೇಳೆ ಹುಳಿಯಾರಿನಲ್ಲಿ ಕನಕ ವೃತ್ತವೇ ಇರಲಿಲ್ಲ ಎಂದು ಸಚಿವರು ತಿಳಿಸಿದ್ದರು. ಈ ವೇಳೆ ಹೊಸದುರ್ಗ ಕನಕ ಗುರುಪೀಠದ ಶ್ರೀಈಶ್ವರಾನಂದಪುರಿ ಸ್ವಾಮೀಜಿಗೆ ಕನಕ ವೃತ್ತ ಹಾಗೂ ಅದರ ಇತಿಹಾಸದ ಬಗ್ಗೆ ಸಚಿವರಿಗೆ ಮನವರಿಕೆ ಮಾಡಿಕೊಡಲು ಮುಂದಾಗಿದ್ದಾಗ ‘ನಿಮ್ಮ ಮಾತು ಕೇಳಲು ನಾನು ಇಲ್ಲಿಗೆ ಬಂದಿಲ್ಲ. ನಾನು ನಿಜ ಹೇಳುತ್ತೇನೋ..? ಸುಳ್ಳು ಹೇಳುತ್ತೇನೋ ಅದನ್ನು ನೀವು ಕೇಳಬೇಕು’ ಎಂದು ಏರು ಧ್ವನಿಯಲ್ಲಿ ಮಾತನಾಡಿದ್ದರು. ಕೂಡಲೇ ಶ್ರೀಗಳೂ ಸೇರಿದಂತೆ ಕನಕ ವೃತ್ತದ ಪರವಾಗಿದ್ದವರು ಸಭೆ ಬಹಿಷ್ಕರಿಸಿ ತೆರಳಿದ್ದರು. ಬಳಿಕ ಕಾಗಿನೆಲೆ ಪೀಠಾಧ್ಯಕ್ಷರ ಸಮ್ಮುಖದಲ್ಲಿ ಸಂಧಾನ ನಡೆದ ಬಳಿಕ ಸ್ವಾಮೀಜಿ ಕ್ಷಮೆ ಕೇಳಿದ ಸಚಿವ ಮಾಧುಸ್ವಾಮಿ ವಿವಾದದಿಂದ ಹೊರ ಬಂದಿದ್ದರು.
ಉತ್ತರ ಕರ್ನಾಟಕ ಭಾಗದಲ್ಲಿ ಕಳೆದ ವರ್ಷ ಭಾರೀ ನೆರೆ ಉಂಟಾಗಿತ್ತು. ಈ ವೇಳೆ ಸುಮಾರು 40 ರಿಂದ 50 ಸಾವಿರ ಮನೆಗಳು ಕುಸಿದು ಬಿದ್ದಿವೆ ಎನ್ನುವ ವರದಿಗಳು ಬಂದಿದ್ದರು. ರಾಜ್ಯ ಸರ್ಕಾರ ತಾತ್ಕಾಲಿಕವಾಗಿ 10 ಸಾವಿರ ಮಾತ್ರ ಹಾಕಿತ್ತು. ಆ ಬಳಿಕ ಅರ್ಧ ಕುಸಿದ ಮನೆಗಳಿಗೆ 50 ಸಾವಿರ ಹಾಗೂ ಸಂಪೂರ್ಣ ಕುಸಿತಗೊಂಡ ಮನೆಗಳಿಗೆ 1 ಲಕ್ಷ ರೂಪಾಯಿ ಕೊಡುತ್ತಿದ್ದೇವೆ. ಆದರೆ ಜನರೇ ಮುಂದೆ ಬಂದು ಹಣ ಪಡೆಯುತ್ತಿಲ್ಲ. ನಾವೇನು ಮಾಡೋಕಾಗುತ್ತೆ. ಸರ್ಕಾರ ಎಲ್ಲೂ ಕೂಡ ವಿಫಲವಾಗಿಲ್ಲ ಎಂದು ಸರ್ಕಾರವನ್ನು ಸಮರ್ಥನೆ ಮಾಡಿಕೊಂಡಿದ್ದು ಕೂಡ ವಿವಾದವಾಗಿತ್ತು. ಇದೀಗ ರೈತ ಮಹಿಳೆಯನ್ನು ಬಾಯಿಗೆ ಬಂದಂತೆ ಮಾತನಾಡಿದ್ದನ್ನು ಸಮರ್ಥಿಸಿಕೊಳ್ಳುವ ಬರದಲ್ಲಿ ಇನ್ನೊಂದು ವಿವಾದ ಮಾಡಿಕೊಂಡಿದ್ದಾರೆ. “ಸಿದ್ದರಾಮಯ್ಯಗೆ ತಬ್ಬಿಕೊಂಡು ಮುತ್ತು ಕೊಟ್ಟಿದ್ದಾರೆ ಎಂದು ನನಗೇನು ಯಾರೂ ತಬ್ಬಿಕೊಂಡು ಮುತ್ತು ಕೊಟ್ಟಿಲ್ಲ” ಎಂದು ಮಾಜಿ ಸಿಎಂ ಸಿದ್ದರಾಮಯ್ಯಗೆ ಮಾರ್ಮಿಕವಾಗಿ ವ್ಯಂಗ್ಯವಾಗಿ ಹೇಳಿದ್ದಾರೆ.
ನಿಜ, ಯಾರಾದರೂ ಒಬ್ಬ ವ್ಯಕ್ತಿ ತನ್ನ ಕಷ್ಟದಲ್ಲಿ ಸಹಾಯ ಮಾಡುತ್ತಾನೆ. ಬಡವರ ಹಿತ ಕಾಯುವ ಕೆಲಸ ಮಾಡುತ್ತಾನೆ ಎಂದಾಗ ಅಲ್ಲವೇ ಯಾರಾದರೂ ಮೆಚ್ಚಿಕೊಳ್ಳುವುದು. ಕರ್ನಾಟಕ ಪ್ರದೇಶ ಕುರುಬರ ಸಂಘವು ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಸಿದ್ದರಾಮಯ್ಯ ಅವರಿಗೆ ತರೀಕೆರೆ ತಾಲೂಕ ಪಂಚಾಯಿತಿ ಸದಸ್ಯೆ ಗಿರಿಜಾ ಶ್ರೀನಿವಾಸ್ ಅಭಿನಂದನೆ ಸ್ವೀಕರಿಸಿ ಅಂದಿನ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಕೆನ್ನೆಗೆ ಸಿಹಿ ಮುತ್ತು ನೀಡಿದ್ದರು. “ನಾನು ಚಿಕ್ಕಂದಿನಿಂದಲೂ ಸಿದ್ದರಾಮಯ್ಯ ಅಭಿಮಾನಿ. ನನಗೆ ಅವರೇ ಸ್ಫೂರ್ತಿ” ಎಂದಿದ್ದರು. ಆ ಬಳಿಕ ಕಲಬುರಗಿಯಲ್ಲಿ ನಡೆದ ಚುನಾವಣಾ ಸಮಾವೇಶದಲ್ಲೂ ಯುವಕನೊಬ್ಬ ಮುತ್ತು ಕೊಟ್ಟಿದ್ದು ಭಾರೀ ಸುದ್ದಿಯಾಗಿತ್ತು. ಸಿದ್ದರಾಮಯ್ಯ ಅದನ್ನೂ ಸಹಿಸಿಕೊಂಡಿದ್ದರು.
ಆದರೆ ಸಚಿವ ಮಾಧುಸ್ವಾಮಿ ಜನರ ನೋವುಗಳಿಗೆ ಸ್ಪಂದಿಸುವ ತಾಳ್ಮೆಯನ್ನೇ ಕಲಿತಿಲ್ಲ. ಏನು ಕೇಳಿದರೂ ನನನ್ನೂ ಏನು ಕೇಳ್ತೀರಿ ಎಂದು ಗುಡುಗಿದರೆ ಯಾವ ಪುರುಷಾರ್ಥಕ್ಕಾಗಿ ಸಚಿವರಾಗಿ ಇರಬೇಕು. ಯಾವ ಮಿನಿಸ್ಟರ್..? ಯಾವ ಕೆಲಸಕ್ಕೆ ಬಂದಿದ್ದಾರೆ ಎಂದು ನೋಡಿಕೊಂಡು ಪ್ರಶ್ನೆಗಳನ್ನು ಕೇಳಲು ಜನಸಾಮಾನ್ಯರೇನು ವಕೀಲಿಕೆ ಮಾಡಲು ಬಂದಿಲ್ಲ ಎನ್ನುವುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಸಚಿವನಾದ ಬಳಿಕ ತಾಳ್ಮೆಯನ್ನೂ ಮೈಗೂಡಿಸಿಕೊಂಡು ಕಷ್ಟದಲ್ಲಿ ಬಂದವರ ನೋವಿಗೆ ಕಿವಿಯಾಗುವುದನ್ನು ಕಲಿತರೆ ಮುತ್ತು ಕೊಡ್ತಾರೆ, ಸನ್ಮಾನವನ್ನೂ ಮಾಡ್ತಾರೆ. ಇಲ್ಲದೆ ಇದೇ ರೀತಿ ಗೂಂಡಾ ವರ್ತನೆ ತೋರುತ್ತಿದ್ದರೆ ಮುಂದಿನ ಬಾರಿ ಸಿಕ್ಕಾಗ ಕಲ್ಲು ಎಸೆದರೂ ಅಚ್ಚರಿಯಿಲ್ಲ. ಇನ್ನಾದರೂ ಭಂಡತನವನ್ನು ಬಿಟ್ಟು ಬದುಕಬೇಕಿದೆ ಮಿನಿಸ್ಟರ್ ಮಾಧುಸ್ವಾಮಿ.