ಕೇವಲ ಪ್ರಾಥಮಿಕ/ಪ್ರೌಢ ಶಿಕ್ಷಣವಷ್ಟೆ ಅಲ್ಲದೇ ತಾಂತ್ರಿಕ ಹಾಗೂ ವೃತ್ತಿಪರ ಶಿಕ್ಷಣವೂ ಮಾತೃಭಾಷೆಯಲ್ಲೇ ಆಗಬೇಕು ಎಂಬುದು ಕನ್ನಡಿಗರ ಹಲವು ವರ್ಷಗಳ ಬೇಡಿಕೆ. ಕನ್ನಡದಲ್ಲೇ ಮೆಡಿಕಲ್, ಇಂಜಿನಿಯರಿಂಗ್ ಸೇರಿದಂತೆ ಮ್ಯಾನೇಜ್‌ಮೆಂಟ್ ಮತ್ತಿತರ ಕೋರ್ಸಿಗಳಿಗೆ ಸರ್ಕಾರ ಅವಕಾಶ ಮಾಡಿಕೊಡಬೇಕು. ಉನ್ನತ ಶಿಕ್ಷಣವನ್ನು ಮಾತೃಭಾಷೆಯಲ್ಲಿ ನೀಡಬೇಕು ಎಂದು ಕನ್ನಡಪರ ಹೋರಾಟಗಾರರು, ಸಾಹಿತಿಗಳು, ಪ್ರಗತಿಪರರು ಹಲವು ಹೋರಾಟ ಮಾಡುತ್ತಲೇ ಇದ್ದಾರೆ.
ಒಂದೆಡೆ ತಾಂತ್ರಿಕ ಹಾಗೂ ವೃತ್ತಿಪರ ಶಿಕ್ಷಣವೂ ಮಾತೃಭಾಷೆಯಲ್ಲೇ ಸಿಗಬೇಕು ಎಂದು ಹಲವರು ಒತ್ತಾಯಿಸುತ್ತಿದ್ದರೇ ಇನ್ನೊಂದೆಡೆ ಇದನ್ನು ಹೇಗೆ ಅರ್ಥಮಾಡಿಕೊಳ್ಳಬೇಕು ಎಂದು ಇನ್ನಲವರು ತಗಾದೆ ತೆಗೆಯುತ್ತಿದ್ದಾರೆ. ಪ್ರೌಢಶಾಲೆಯವರೆಗೆ ವಿಜ್ಞಾನ, ವಾಣಿಜ್ಯ, ಸಮಾಜ ಎಲ್ಲವನ್ನೂ ಮಾತೃಭಾಷೆಯಲ್ಲಿ ಕಲಿಯುವುದು ಸರಿ. ಆದರೆ ವೃತ್ತಿಪರ/ತಾಂತ್ರಿಕ ಕೋರ್ಸುಗಳೂ ಮಾತೃಭಾಷೆಯಲ್ಲೇ ಎನ್ನುವುದು ಕೊಂಚ ಅತಿಯಲ್ಲವೆ? ಭಾಷೆಯ ಕಾರಣದಿಂದ ನಮ್ಮನ್ನು ನಾವು ಕೆಲಸ, ಶಿಕ್ಷಣ ಎಲ್ಲಕ್ಕೂ ನಮ್ಮ ರಾಜ್ಯಕ್ಕೇ ಕಟ್ಟಿಹಾಕಿಕೊಂಡಂತಲ್ಲವೆ? ಎಂದು ಕಳವಳ ವ್ಯಕ್ತಪಡಿಸುತ್ತಲೇ ಇದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಅತ್ತ ತಾಂತ್ರಿಕ/ವೃತ್ತಿಪರ/ಉನ್ನತ ಶಿಕ್ಷಣವೂ ಮಾತೃಭಾಷೆಯಲ್ಲಿರಬೇಕೆನ್ನುವ ಹಲವರು ಇದ್ದರೆ; ಅತ್ತ ಪ್ರಾಥಮಿಕ ಹಂತದಿಂದಲೇ ಇಂಗ್ಲಿಷ್ ಅನ್ನೂ ಕಲಿಸಬೇಕೆಂದು ಒಂದು ಗುಂಪು ಒತ್ತಾಯಿಸುತ್ತಿದೆ. ಕನ್ನಡ ಶಾಲೆಗಳಲ್ಲಿ ಓದುತ್ತಿರುವವರಲ್ಲಿ ಬಹುತೇಕರು ದಲಿತ/ತಳ ಸಮುದಾಯದ ಹಾಗೂ ಬಡ ಮಕ್ಕಳು. ಗ್ರಾಮೀಣ ಭಾಗದ ಕನ್ನಡ ಶಾಲೆಗಳಲ್ಲಿ ಕಲಿತ ಮಕ್ಕಳು ಇಂಗ್ಲಿಷ್ ವಿಷಯದಲ್ಲಿ ಫೇಲಾಗುವುದು, ಇಂಗ್ಲಿಷ್ ಭಾಷೆ ಕಷ್ಟವಾದ ಕಾರಣಕ್ಕೇ ಕಾಲೇಜು, ಹೈಸ್ಕೂಲು ಬಿಡುವುದು ಜಾಸ್ತಿ. ಆದ್ದರಿಂದ ಪ್ರಾಥಮಿಕ ಹಂತದಿಂದ ಇಂಗ್ಲಿಷ್ ಕಲಿಕೆಯನ್ನು ಸರ್ಕಾರಿ ಶಾಲೆಗಳಲ್ಲಿ ತರಬೇಕೆಂಬ ಒತ್ತಾಯ ಕೇಳಿಬಂದು ಕರ್ನಾಟಕದಲ್ಲಿ ಒಂದನೇ ತರಗತಿಯಿಂದ ಇಂಗ್ಲಿಷ್ ಅನ್ನು ಸರ್ಕಾರಿ ಶಾಲೆಗಳಲ್ಲಿ ಕಲಿಸಲಾಗುತ್ತಿದೆ.
ಹೀಗಿರುವಾಗಲೇ ಇತ್ತೀಚೆಗೆ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಅವರು ಮಾತೃಭಾಷೆಯಲ್ಲಿ ತಾಂತ್ರಿಕ ಶಿಕ್ಷಣವನ್ನು ನೀಡುವ ಬಗ್ಗೆ ಮಾರ್ಗಸೂಚಿ ಸಿದ್ಧಪಡಿಸಲು ಕಾರ್ಯಪಡೆ ರಚಿಸಿದ್ದಾರೆ. ಉನ್ನತ ಶಿಕ್ಷಣ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸ್ಥಾಪಿಸಲಾದ ಕಾರ್ಯಪಡೆ ವಿವಿಧ ಮಧ್ಯಸ್ಥಗಾರರ ಸಲಹೆಗಳನ್ನು ಗಣನೆಗೆ ತೆಗೆದುಕೊಂಡು ಒಂದು ತಿಂಗಳಲ್ಲಿ ವರದಿ ಸಲ್ಲಿಸಬೇಕು ಎಂದು ಆದೇಶಿಸಿದ್ದಾರೆ. ಮಾತೃಭಾಷೆಯಲ್ಲಿ ತಾಂತ್ರಿಕ ಶಿಕ್ಷಣ ನೀಡುವ ಕುರಿತು ಇತ್ತೀಚೆಗೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಸಚಿವರು ಈ ನಿರ್ಧಾರ ಕೈಗೊಂಡಿದ್ದಾರೆ.
ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಉನ್ನತ ಶಿಕ್ಷಣ ಕಾರ್ಯದರ್ಶಿ ಅಮಿತ್ ಖರೆ, ಐಐಟಿ ನಿರ್ದೇಶಕರು, ಶಿಕ್ಷಣ ತಜ್ಞರು ಮತ್ತು ಸಚಿವಾಲಯದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಹೊಸ ಶಿಕ್ಷಣ ನೀತಿ 2020 ಅನುಷ್ಠಾನಗೊಳಿಸುವ ಸಂಬಂಧ ಚರ್ಚೆ ನಡೆಸುವ ಸಭೆ ಇದಾಗಿತ್ತು. ಈ ವೇಳೆ ಈ ವಿಚಾರವನ್ನು ಪರಿಗಣನೆಗೆ ತೆಗೆದುಕೊಂಡು ನಿರ್ಧಾರ ಮಾಡಲಾಗಿದೆ.
ಸಾವಿತ್ರಿಬಾಯಿ ಫುಲೆ, ಅಂಬೇಡ್ಕರ್ ಸೇರಿದಂತೆ ಹಲವು ಮಹಾನ್ ಚಿಂತಕರು, ಇಂಗ್ಲಿಷ್ ಭಾಷೆ ಕಲಿಕೆಯೇ ಶೋಷಿತನ ಹೊಸ ಅರಿವಿಗೆ ಮೊದಲ ಮೆಟ್ಟಿಲು ಎಂದು ಹೇಳಿದ್ದಾರೆ. ಚಂದ್ರಭಾನ್ ಪ್ರಸಾದ್ ಇಂಗ್ಲೀಷಮ್ಮನ ಗುಡಿಯೂ ಕಟ್ಟಿದ್ದಾರೆ. ಇಂಗ್ಲೀಷ್ ಭಾಷೆಯೂ ನಮ್ಮಲ್ಲಿ ಮನುಷ್ಯನ ಬಗ್ಗೆ ಕೀಳರಿಮೆ ಕಡಿಮೆ ಮಾಡುತ್ತದೆ ಎಂಬುದು ಇವರ ವಾದ.
ಮಾತೃಭಾಷಾ ಶಿಕ್ಷಣದ ಪರವಾಗಿರುವವರು ಮತ್ತು ಇಂಗ್ಲಿಷ್ ಕಲಿಕೆ ಬೇಕೆನ್ನುವವರು ಇಬ್ಬರೂ ಸಮಾನ ಅಂಶಗಳನ್ನು ಕಾರಣವಾಗಿ ಮುಂದೊಡ್ಡುತ್ತಾರೆ. ಆದರೀಗ ಮಾತೃಭಾಷೆಯಲ್ಲೇ ತಾಂತ್ರಿಕ ಶಿಕ್ಷಣ ಜಾರಿ ಮಾಡುವ ಸಂಬಂಧ ಯಾರ ಅಭಿಪ್ರಾಯಗಳನ್ನು ಸರ್ಕಾರ ಪರಿಗಣನೆಗೆ ತೆಗೆದುಕೊಳ್ಳಲಿದೆಯೋ ಕಾದು ನೋಡಬೇಕು.