ದೇಶದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಸಂವಿಧಾನದ ಕುರಿತು ಮಹತ್ವದ ಚರ್ಚೆ ನಡೆಸುವ ಮೂಲಕ ಒಂದು ಉತ್ತಮ ಸಂಪ್ರದಾಯ ಹಾಕಿಕೊಟ್ಟ ರಾಜ್ಯ ವಿಧಾನಸಭೆಯಲ್ಲಿ ಮಂಗಳವಾರ ಅದೇ ಸಂವಿಧಾನಕ್ಕೆ ಅಪಚಾರ ಎಸಗುವಂತಹ ಕೆಲಸವಾಗಿದೆ. ಕಳೆದ ಕೆಲ ದಿನಗಳಿಂದ ಸಂವಿಧಾನದ ಬಗ್ಗೆ ಮಹತ್ವಪೂರ್ಣ ಚರ್ಚೆ ನಡೆಸಿದ ಸದನದಲ್ಲಿ ಸಚಿವ ಡಾ.ಸುಧಾಕರ್ ಮತ್ತು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮಧ್ಯೆ ಮಾತಿನ ಜಟಾಪಟಿಯೇ ನಡೆದು ಅವಾಚ್ಯ ಶಬ್ಧ ಬಳಕೆಯೂ ಆಗಿದೆ. ಪರಸ್ಪರ ಏಕವಚನ ಬಳಕೆ ಮಾಡಿಕೊಂಡಿದ್ದಾರೆ. ಅದೂ ಕೂಡ ಮಾಜಿ ಸ್ಪೀಕರ್, ಸಭ್ಯ ರಾಜಕಾರಣಿ ಎಂದು ಕರೆಸಿಕೊಳ್ಳುತ್ತಿರುವ ರಮೇಶ್ ಕುಮಾರ್ ಅವರ ಬಾಯಿಯಿಂದಲೇ ಅವಾಚ್ಯ ಪದ ಬಂದಿದೆ.
ಹೌದು, ವಿಧಾನಸಭೆಯಲ್ಲಿ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಮಾಧ್ಯಮಗಳನ್ನು ನಿರ್ಬಂಧಿಸಿ ಸಂವಿಧಾನದ ಕುರಿತು ನಡೆಯುತ್ತಿರುವ ಚರ್ಚೆಯ ಬಗ್ಗೆಯೇ ಅಪಸ್ವರ ಕೇಳಿಬಂದಿತ್ತು. ಇದೀಗ ಅದೇ ಸಂವಿಧಾನ ಕುರಿತ ಚರ್ಚೆಯ ವೇಳೆ ಸದನದೊಳಗೆ ಸದಸ್ಯರ ಈ ರೀತಿಯ ನಡವಳಿಕೆ ವಿಧಾನಸಭೆಗೆ ಮಾತ್ರವಲ್ಲ, ಇದುವರೆಗೆ ನಡೆದ ಚರ್ಚೆಯ ಮೇಲೂ ಕಪ್ಪು ಚುಕ್ಕೆ ಬಿದ್ದಂತೆ ಆಗಿದೆ. ಸದನದೊಳಗೆ ಪರಸ್ಪರ ಬೈದಾಡಿಕೊಂಡವರೀಗ ಪರಸ್ಪರ ಹಕ್ಕುಚ್ಯುತಿ ನಿರ್ಣಯ ಮಂಡಿಸಲು ಕೂಡ ಮುಂದಾಗಿದ್ದಾರೆ. ಅಷ್ಟೇ ಅಲ್ಲ, ಸಚಿವ ಡಾ.ಸುಧಾಕರ್ ಅವರಿಗೆ ಅವಾಚ್ಯ ಶಬ್ಧ ಬಳಸಿದ ರಮೇಶ್ ಕುಮಾರ್ ಅವರು ಕ್ಷಮೆ ಕೇಳಬೇಕು ಎಂದು ಆಡಳಿತಾರೂಢ ಬಿಜೆಪಿ ಸದಸ್ಯರು ಪಟ್ಟು ಹಿಡಿದಿದ್ದಾರೆ. ಇದರಿಂದ ಮಂಗಳವಾರ ಬೆಳಗ್ಗಿನಿಂದ ಮಹತ್ವಪೂರ್ಣ ಚರ್ಚೆಗಳೊಂದಿಗೆ ಸುಸೂತ್ರವಾಗಿ ನಡೆದ ಕಲಾಪ ವಾಗ್ವಾದ, ಗದ್ದಲದಲ್ಲಿ ಅಂತ್ಯಗೊಂಡಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಕೇವಲವಾಗಿ ಮಾತನಾಡಿದ್ದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರ ಬಗ್ಗೆ ಅವಹೇಳನಕಾರಿಯಾಗಿ ಬಿಜೆಪಿ ಶಾಸಕರ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿದ್ದು ವಿವಾದವಾದಾಗ ಸಚಿವ ಎಸ್.ಸುರೇಶ್ ಕುಮಾರ್ ಅವರು, ಹೇಳಬಾರದ್ದನ್ನು ಹೇಳಿದರೆ ಕೇಳಬಾರದ್ದನ್ನು ಕೇಳಬೇಕಾಗುತ್ತದೆ ಎಂಬ ಉಕ್ತಿಯೊಂದನ್ನು ಹೇಳಿದ್ದರು. ಇದು ಸದನದಲ್ಲಿಯೂ ಸಾಬೀತಾಯಿತು. ನಾಲಿಗೆ ಹರಿಬಿಟ್ಟು ಅನಗತ್ಯ ಟೀಕೆಗಳನ್ನು ಮಾಡಿದರೆ ಏನೆಲ್ಲಾ ಆಗುತ್ತದೆ ಎಂಬುದಕ್ಕೆ ಈ ಪ್ರಕರಣ ಉದಾಹರಣೆಯೂ ಆಯಿತು.
ಹೇಳಬಾರದ್ದನ್ನು ಹೇಳಿದರೆ…..
ಸಂವಿಧಾನ ಕುರಿತ ಚರ್ಚೆಯಲ್ಲಿ ಭಾಗವಹಿಸಿದ್ದ ಸಚಿವ ಡಾ.ಸುಧಾಕರ್ ಅವರು ತುರ್ತು ಪರಿಸ್ಥಿತಿ ಉಲ್ಲೇಖಿಸಿ ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು. ಕಾಂಗ್ರೆಸ್ ಪಕ್ಷ ಸಂವಿಧಾನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು. ಇದು ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರ ಆಕ್ರೋಶಕ್ಕೆ ಕಾರಣವಾಗಿ ಸುಧಾಕರ್ ವಿರುದ್ಧ ತಿರುಗಿ ಬಿದ್ದರು. ಅಷ್ಟರಲ್ಲಿ ಎದ್ದುನಿಂತ ರಮೇಶ್ ಕುಮಾರ್, ನೀವು ಪಕ್ಷಾಂತರಿ (ಡಾ.ಸುಧಾಕರ್ ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಯಿಂದ ಗೆದ್ದು ಬಂದು ಸಚಿವರಾಗಿದ್ದಾರೆ) ನಿಮಗೆ ತುರ್ತುಪರಿಸ್ಥಿತಿಯ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಹೇಳಿದರು. ಅಲ್ಲದೆ, ತುರ್ತು ಪರಿಸ್ಥಿತಿ ಕುರಿತು ಮಾತನಾಡುವುದಾದರೆ ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡಲಿ. ನಿಮಗೇನು ನೈತಿಕತೆ ಇದೆ ಎಂದು ಪ್ರಶ್ನಿಸಿದರು. ಇದಕ್ಕೆ ತಿರುಗೇಟು ನೀಡಿದ ಸುಧಾಕರ್, ನನ್ನನ್ನು ಪಕ್ಷಾಂತರಿ ಎನ್ನುವ ನೀವು ಜನತಾ ದಳ ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಏಕೆ ಬಂದಿರಿ ಎಂದು ಮರು ಪ್ರಶ್ನೆ ಹಾಕಿದರು. ಈ ವಿಚಾರದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಮಧ್ಯೆ ಸ್ವಲ್ಪ ಹೊತ್ತು ವಾಗ್ವಾದ ನಡೆದು ನಂತರ ತಣ್ಣಗಾಯಿತು.

ಮತ್ತೆ ಮಾತು ಮುಂದುವರಿಸಿದ ಡಾ.ಸುಧಾಕರ್ ನಮಗೆ ವಿಧಾನಸಭೆಯಲ್ಲಿ ಸ್ಪೀಕರ್ ಪೀಠದಿಂದ ಅನ್ಯಾಯವಾಗಿದೆ ಎಂದು ಪರೋಕ್ಷವಾಗಿ ರಮೇಶ್ ಕುಮಾರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಸ್ಪೀಕರ್ ಅನರ್ಹಗೊಳಿಸಿದ ನಿರ್ಧಾರದ ಕುರಿತಾಗಿ ಸುಪ್ರೀಂ ಕೋರ್ಟ್ ನೀಡಿದ ಆದೇಶವನ್ನು ಪ್ರಸ್ತಾಪಿಸಿದ ಸುಧಾಕರ್, 17 ಜನರ ರಾಜಕೀಯ ಭವಿಷ್ಯ ಕೊನೆಗೊಳ್ಳುತ್ತಿತ್ತು ನಮ್ಮ ವಿರುದ್ಧ ಷಡ್ಯಂತ್ರ ಮಾಡಲಾಗಿದೆ ಎಂದರು. ಸುಧಾಕರ್ ಅವರ ಹೇಳಿಕೆಗೆ ಮತ್ತೆ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ, ನೀವು ಅಧಿಕಾರದ ದುರಾಸೆಯಿಂದ ಪಕ್ಷ ಬಿಟ್ಟು ಹೋಗಿದ್ದೀರಿ ಎಂದು ಕಿಡಿಕಾರಿದರು. ಸುಧಾಕರ್ ಮಾತಿನಿಂದ ಕೆರಳಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಎದ್ದು ನಿಂತು ವಿರೋಧ ವ್ಯಕ್ತಪಡಿಸಿದರು. ಅನರ್ಹತೆಯ ಕುರಿತಾಗಿ ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಸದನದಲ್ಲಿ ಚರ್ಚೆ ಮಾಡಲು ಕಾನೂನು ಸಚಿವರು ಒಪ್ಪುತ್ತೀರಾ ಎಂದು ಧ್ವನಿ ಏರಿಸಿ ಆಕ್ಷೇಪ ವ್ಯಕ್ತಪಡಿಸಿದರು. ಅಲ್ಲದೆ ಏಕಾಂಗಿಯಾಗಿ ಸದನದ ಬಾವಿಗಿಳಿದು ಸುಧಾಕರ್ ವಿರುದ್ಧ ಧರಣಿಗೆ ಮುಂದಾದರು. ಈ ವೇಳೆ ಆಡಳಿತ ಹಾಗೂ ವಿಪಕ್ಷಗಳ ನಡುವೆ ತೀವ್ರ ಜಟಾಪಟಿ ನಡೆಯಿತು.
ಆದರೂ ಸುಧಾಕರ್ ಅನರ್ಹತೆ ಕುರಿತಂತೆ ಮಾತು ಮುಂದುವರಿಸಲು ಯತ್ನಿಸಿದಾಗ ಮತ್ತಷ್ಟು ಕೆರಳಿದ ರಮೇಶ್ ಕುಮಾರ್ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದರು. ಮಧ್ಯಪ್ರವೇಶ ಮಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ರಮೇಶ್ ಕುಮಾರ್ ಅವರನ್ನು ಸಮಾಧಾನ ಪಡಿಸಲು ಯತ್ನಿಸಿದರು. ಗದ್ದಲ ತೀವ್ರಗೊಂಡ ಹಿನ್ನೆಲೆಯಲ್ಲಿ ಸಭಾಧ್ಯಕ್ಷರು ಸದನವನ್ನು ಮುಂದೂಡಿದರು. ಈ ವೇಳೆ ಸುಧಾಕರ್ ವಿರುದ್ಧ ರಮೇಶ್ ಕುಮಾರ್ ಕಿಡಿ ಕಾರುತ್ತಿದ್ದಾಗ ಅವರ ಬಾಯಿಯಿಂದ ಅವಾಚ್ಯ ಪದವೂ ಹೊರಬಂತು. ಇದು ಬಿಜೆಪಿ ಸದಸ್ಯರನ್ನು ಕೆರಳಿಸಿತು. ಅಷ್ಟರಲ್ಲಿ ಸ್ಪೀಕರ್ ಸದನ ಮುಂದೂಡಿದ್ದರಿಂದ ರಮೇಶ್ ಕುಮಾರ್ ಅವರನ್ನು ತಮ್ಮ ಕೊಠಡಿಗೆ ಕರೆದೊಯ್ದ ಸಿದ್ದರಾಮಯ್ಯ ಅವರು ಸಮಾಧಾನಪಡಿಸಿದರು. ಇತ್ತ ಸದನದೊಳಗೆ ಸುಧಾಕರ ಬಗ್ಗೆ ಅವಾಚ್ಯ ಪದ ಬಳಸಿದ ರಮೇಶ್ ಕುಮಾರ್ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಸದಸ್ಯರು ಒತ್ತಾಯಿಸಲಾರಂಭಿಸಿದರು.
ಈ ಪ್ರಕರಣದ ಬಳಿಕ ಸುಧಾಕರ್ ವಿರುದ್ಧ ಹಕ್ಕುಚ್ಯುತಿ ನೋಟಿಸ್ ನೀಡಲು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮುಂದಾದರೆ, ತಮ್ಮನ್ನು ಅವಾಚ್ಯವಾಗಿ ನಿಂದಿಸಲಾಗಿದೆ ಎಂದು ರಮೇಶ್ ಕುಮಾರ್ ವಿರುದ್ಧ ಹಕ್ಕುಚ್ಯುತಿ ನೋಟಿಸ್ ನೀಡಲು ಸುಧಾಕರ್ ಮುಂದಾಗಿದ್ದಾರೆ. ಅಲ್ಲಿಗೆ ಮಂಗಳವಾರದ ಕಲಾಪಕ್ಕೆ ತೆರೆ ಬಿದ್ದಿದೆ.
ಬುಧವಾರ ಈ ವಿಚಾರ ಮತ್ತಷ್ಟು ಗದ್ದಲಕ್ಕೆ ಕಾರಣವಾಗಬಹುದು. ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ಮಧ್ಯೆ ಮಾತಿನ ಚಕಮಕಿಯೂ ನಡೆಯಬಹುದು. ಇಲ್ಲವೇ ಎರಡೂ ಕಡೆಯವರು ಪರಸ್ಪರ ಕ್ಷಮೆ ಯಾಚಿಸಿ ಪ್ರಕರಣಕ್ಕೆ ಸುಖಾಂತ್ಯ ಕಾಣಿಸಬಹುದು. ಆದರೆ, ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು ಎನ್ನುವಂತೆ ಸಿಟ್ಟಿನ ಭರದಲ್ಲಿ ಆಡುವ ಮಾತುಗಳು ಗೌರವಕ್ಕೆ ಚ್ಯುತಿ ತಂದಿದ್ದು ಮಾತ್ರ ಸುಳ್ಳಲ್ಲ. ಸದನದಲ್ಲಿ, ಅದೂ ಸಂವಿಧಾನ ಕುರಿತ ಚರ್ಚೆಯ ವೇಳೆಗೆ ಸುಧಾಕರ್ ಮತ್ತು ರಮೇಶ್ ಕುಮಾರ್ ಅವರ ನಡುವೆ ನಡೆದ ಈ ಮಾತಿನ ಚಕಮಕಿ ಸದನದ ನಡವಳಿಕೆಗೆ ಕಪ್ಪುಚುಕ್ಕೆ ಮಾತ್ರವಲ್ಲ, ವಿಧಾನಸಭೆಯ ಪ್ರಾವಿತ್ರ್ಯತೆಗೂ ಧಕ್ಕೆ ತಂದಿದೆ.