ಭಾರತದ ಪಿತಾಮಹ ಎಂದು ಕರೆಸಿಕೊಳ್ಳುವ ಮಹಾತ್ಮ ಗಾಂಧಿ, ಕೇವಲ ಭಾರತದಲ್ಲಿ ಮಾತ್ರವಲ್ಲ ಇಡೀ ವಿಶ್ವವೇ ಶಾಂತಿಧೂತನೆಂದು ಒಪ್ಪಿಕೊಂಡಿರುವ ಮಹಾನ್ ಚೇತನ. ಮಹಾತ್ಮ ಗಾಂಧೀಜಿ ಅವರ ಕೆಲವೊಂದು ನಿರ್ಧಾರಗಳನ್ನು ಕೆಲವೊಂದಿಷ್ಟು ಜನರು ವಿರೋಧ ಮಾಡಬಹುದು, ಮಾಡುತ್ತಲೂ ಇರಬಹುದು. ಆದರೆ, ಮಹಾತ್ಮ ಗಾಂಧಿ ಅವರ ತ್ಯಾಗದ ಹೋರಾಟವನ್ನು ಸ್ಮರಿಸಲೇಬೇಕಾಗುತ್ತದೆ.
ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಮಹಾತ್ಮ ಗಾಂಧಿ ಅವರ ಹೋರಾಟವನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಈ ರೀತಿ ಹೋರಾಟದ ಮೂಲಕವೇ ಜಗತ್ತಿಗೆ ಚಿರಪರಿತವಾಗಿರುವ ಮಹಾತ್ಮ ಗಾಂಧಿ, ಅದೆಷ್ಟೋ ಮನಸ್ಸುಗಳಲ್ಲಿ ಮನೆ ಮಾಡಿದ್ದಾರೆ. ವಿಶ್ವದ ಅನೇಕ ಕಡೆಗಳಲ್ಲಿ ಮಹಾತ್ಮ ಗಾಂಧಿ ಅವರ ಪ್ರತಿಮೆಗಳಿಗೆ, ಮಹಾತ್ಮ ಗಾಂಧಿ ಅವರನ್ನು ಜನರು ಹೋರಾಟದ ಶಕ್ತಿಯಾಗಿ ಬಳಕೆ ಮಾಡಿಕೊಳ್ಳುತ್ತಾರೆ. ಆದರೆ ಅಮೆರಿಕದಲ್ಲಿ ಮಾತ್ರ ಅದೇ ಹೋರಾಟಗಾರನ ಕಾಲು ಮುರಿದು ಅವಮಾನ ಮಾಡಲಾಗಿದೆ.
ಹೊತ್ತಿ ಉರಿಯುತ್ತಿರುವ ಅಮೆರಿಕ!
ಮೇ 25ರಿಂದ ಆರಂಭವಾಗಿರುವ ಕಪ್ಪು ಜನಾಂಗದ ಹೋರಾಟ ಅಮೆರಿಕದ ಗಲ್ಲಿಗಲ್ಲಿಯ ಜನರು ಬೆಚ್ಚಿ ಬೀಳುವಂತೆ ಮಾಡಿದೆ. ಅಮೆರಿಕದಲ್ಲಿ ವರ್ಣಬೇಧ ನೀತಿ ಅಧಿಕವಾಗಿದ್ದು, ಕಪ್ಪು ಜನಾಂಗಕ್ಕೆ ಸೇರಿದ ವ್ಯಕ್ತಿಯೊಬ್ಬನ ಮೇಲೆ ದೂರು ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ಕೊಟ್ಟಿದ್ದ ಬಿಳಿಯ ಜನಾಂಗದ ಪೋಲಿಸ್ ಅಧಿಕಾರಿ ಬಂಧನ ಮಾಡಿ ಕಾನೂನು ರೀತಿಯ ಕ್ರಮಕೈಗೊಳ್ಳದೆ ತನ್ನ ಕಾಲನ್ನು ಕುತ್ತಿಗೆ ಮೇಲೆ ಇಟ್ಟು ಕೊಲ್ಲುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆ ಬಳಿಕ ಕಪ್ಪು ಜನರ ಮೇಲೆ ಡೊನಾಲ್ಡ್ ಟ್ರಂಪ್ ನೇತೃತ್ದ ಸರ್ಕಾರ ದಬ್ಬಾಳಿಕೆ ನಡೆಸುತ್ತಿದೆ.
ಜಾರ್ಜ್ ಫ್ಲಾಯ್ಡ್ ಸಾವಿಗೆ ನ್ಯಾಯ ಸಿಗಲೇ ಬೇಕು ಎಂದು ಆಗ್ರಹಿಸಿ ಬೃಹತ್ ಹೋರಾಟ ನಡೆಯುತ್ತಿದೆ. ಅಮೆರಿಕ ಸರ್ಕಾರ ಅಧಿಕಾರಿಯನ್ನು ಬಂಧಿಸಿದ್ದರೂ ಹೋರಾಟದ ಕಿಚ್ಚು ಆರಿಲ್ಲ. ಸಿಕ್ಕ ಸಿಕ್ಕ ಚರ್ಚ್‌ಗಳ ಮೇಲೆ ದಾಳಿ ಮಾಡುತ್ತಿರುವ ಪ್ರತಿಭಟನಾಕಾರರು ಧ್ವಂಸ ಮಾಡುತ್ತಿದ್ದಾರೆ. ಲಿಂಕನ್ ರಾಷ್ಟ್ರೀಯ ಸ್ಮಾರಕದ ಮೇಲೆ ದಾಳಿ ಮಾಡಿ ಪ್ರಮುಖ ವಸ್ತುಗಳನ್ನು ನಾಶ ಮಾಡಿದ್ದಾರೆ. ಸಿಕ್ಕ ಸಿಕ್ಕ ಮಾರಾಟ ಮಳಿಗೆಗಳ ಮೇಲೆ ದಾಳಿ ನಡೆಸಿ ಕಳ್ಳತನ ಮಾಡುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡಲು ಡೊನಾಲ್ಡ್ ಟ್ರಂಪ್ ಸರ್ಕಾರ ಹೋರಾಟವನ್ನೇ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಮುಂದಾಗಿದೆ ಎನ್ನಲಾಗ್ತಿದೆ.
ಗಾಂಧಿ ಪ್ರತಿಮೆ ಸ್ಥಾಪಿಸಿದ್ದು ಯಾವಾಗ..?
ವಾಷಿಂಗ್ಟನ್ ಡಿಸಿಯ ಭಾರತೀಯ ರಾಯಭಾರ ಕಚೇರಿ ಎದುರಲ್ಲಿ ಮಹಾತ್ಮ ಗಾಂಧಿ ಅವರ ಬೃಹತ್ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿದ್ದು, 2000, ಸೆಪ್ಟೆಂಬರ್ 16 ರಂದು ಅಂದಿನ ಭಾರತದ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಲೋಕಾರ್ಪಣೆ ಮಾಡಿದ್ದರು. ಅಂದಿನ ಅಮೆರಿಕ ಅಧ್ಯಕ್ಷ ಬಿಲ್ ಕ್ಲಿಂಟನ್ ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮಹಾತ್ಮ ಗಾಂಧಿ ಅವರ ಪ್ರತಿಮೆಯನ್ನು ಕಂಚಿನಲ್ಲಿ ನಿರ್ಮಾಣ ಮಾಡಿದ್ದು 8 ಅಡಿ 8 ಇಂಚು ಎತ್ತರ ನಿರ್ಮಾಣ ಮಾಡಲಾಗಿದೆ. 1930 ರಲ್ಲಿ ಉಪ್ಪಿನ ಮೇಲಿನ ತೆರಿಗೆ ವಿರೋಧಿಸಿ ಭಾರತದಲ್ಲಿ ನಡೆದ ದಂಡಿ ಉಪ್ಪಿನ ಸತ್ಯಾಗ್ರಹದ ಸಂದರ್ಭದ ಚಿತ್ರವನ್ನು ಒಳಗೊಂಡಿದೆ.
ಇದೀಗ 20 ವರ್ಷಗಳ ಬಳಿಕ ನಡೆಯುತ್ತಿರುವ ಹೋರಾಟದ ಕಿಚ್ಚು ಮಹಾತ್ಮ ಗಾಂಧಿ ಪ್ರತಿಮೆಯ ಎಡಗಾಲನ್ನು ಮುರಿಯುವಂತೆ ಮಾಡಿದೆ. ಅಮೆರಿಕ ರಾಯಭಾರ ಕಚೇರಿ ಕ್ಷಮಾಪಣೆ ಕೇಳಿದ್ದು, ಮತ್ತೆ ಮಹಾತ್ಮ ಗಾಂಧಿಯವರ ಪ್ರತಿಮೆಯನ್ನು ಇನ್ನೂ ಉತ್ತಮವಾಗಿ ಮರುನಿರ್ಮಾಣ ಮಾಡುತ್ತೇವೆ ಎಂದಿದ್ದಾರೆ. ಆದರೆ ಇದೇ ವರ್ಷಾಂತ್ಯಕ್ಕೆ ಅಮೆರಿಕದಲ್ಲಿ ಚುನಾವಣೆ ನಡೆಯಲಿದ್ದು, ರಾಜಕೀಯ ಕಾರಣಕ್ಕಾಗಿಯೇ ಮಹಾತ್ಮ ಗಾಂಧಿ ಪ್ರತಿಮೆಯನ್ನು ದುಷ್ಕರ್ಮಿಗಳು ವಿರೂಪ ಮಾಡಿದ್ದಾರೆ ಎನ್ನುವ ಆರೋಪವೂ ಕೇಳಿಬರುತ್ತಿದೆ.
ದೇಶಾದ್ಯಂತ ಪ್ರತಿಭಟನೆಗಳು ಮತ್ತು ಹಿಂಸಾಚಾರಗಳು ಮುಂದುವರೆದಂತೆ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ತಂಡವು ಕಾರ್ಯರೂಪಕ್ಕೆ ಬಂದಿದೆ. ಆದರೆ ರಾಷ್ಟ್ರವನ್ನು ಗುಣಪಡಿಸಲು ಅಥವಾ ಹೆಚ್ಚು ಅಗತ್ಯವಿರುವ ಸುಧಾರಣೆಗಳನ್ನು ಘೋಷಿಸಲು ಅಷ್ಟಿಷ್ಟಲ್ಲ. ಬದಲಾಗಿ, ರಾಜಕೀಯ ಲಾಭಕ್ಕಾಗಿ ಟ್ರಂಪ್ ಹತ್ಯಾಕಾಂಡವನ್ನು ಲಾಭ ಮಾಡಿಕೊಳ್ಳಲು ಮುಂದಾಗಿದ್ದಾರೆ.
ಪ್ರತಿಭಟನೆಗೂ ಡೊನಾಲ್ಡ್ ಟ್ರಂಪ್‌ಗೂ ಇದ್ಯಾ ಲಿಂಕ್..?
ಜಾರ್ಜ್ ಫ್ಲಾಯ್ಡ್ ಎಂಬ ಕಪ್ಪು ಜನಾಂಗದ ವ್ಯಕ್ತಿಯನ್ನು ಹತ್ಯೆ ಮಾಡಿದ ಬಳಿಕ ಅಮೆರಿಕದಲ್ಲಿ ಭಾರೀ ಪ್ರತಿಭಟನೆ ಶುರುವಾಯ್ತು. 9 ನಿಮಿಷಗಳ ಕಾಲ ಓರ್ವ ಅಧಿಕಾರಿ ಕುತ್ತಿಗೆ ಮೇಲೆ ಕಾಲಿಟ್ಟು ಹತ್ಯೆ ಮಾಡಿದ ಬಳಿಕ ಒಂದು ದೇಶದ ಅಧ್ಯಕ್ಷನಾಗಿರುವ ಡೊನಾಲ್ಡ್ ಟ್ರಂಪ್, ಮರುಕ ವ್ಯಕ್ತಪಡಿಸುವ ಮೂಲಕ ಜನರನ್ನು ಸಮಾಧಾನ ಮಾಡುವ ಪ್ರಯತ್ನ ಮಾಡಬೇಕಿತ್ತು. ಆದರೆ ಡೊನಾಲ್ಡ್ ಟ್ರಂಪ್ ಪ್ರಚೋದಿಸುವ ಮತ್ತು ತಮ್ಮ ರಾಜಕೀಯ ಏದುರಾಳಿಗಳನ್ನು ದೂಷಿಸುವ ಮೂಲಕ ರಾಜಕೀಯ ಆರಂಭಿಸಿದರು. ಶ್ವೇತಭವನದ ಬಳಿ ಶಾಂತಿಯುತ ಪ್ರತಿಭಟನೆ ನಡೆಯುತ್ತಿದ್ದಾಗ ಶಾಂತಿಯುತ ಹೋರಾಟಗಾರರ ಗುಂಪಿನ ಮೇಲೆ ಪೊಲೀಸರು ಅಶ್ರುವಾಯು ಸಿಡಿಸಿದ್ರು, ರಬ್ಬರ್ ಗುಂಡುಗಳನ್ನು ಹಾರಿಸಿದ್ರು.
ಶಾಂತಿಯುತ ಹೋರಾಟದ ಮೇಲಿನ ದಾಳಿ ಜನರನ್ನು ಕೆರಳಿಸಿತು.ಇದಕ್ಕೂ ಮೊದಲೂ ಪ್ರತಿಭಟನಾಕಾರರಿಗಿಂತಲೂ ಭದ್ರತಾ ಪಡೆಗಳು ಹೆಚ್ಚು ಆಕ್ರಮಣಕಾರಿಯಾಗಿ ಇರಬೇಕು. ಪ್ರತಿಭಟನಾಕಾರರನ್ನು ಗುರಿಯಾಗಿ ಹಿಂಸಾತ್ಮಕ ಕೃತ್ಯಗಳನ್ನು ತಡೆಯಬೇಕು ಎಂದು ಹೇಳಿದ್ದುರು. ಟ್ವಿಟರ್‌ನಲ್ಲೂ ಪೊಲೀಸರು ಕಠಿಣವಾಗಿ ಹೋರಾಟ ಮಾಡಬೇಕೆಂದು ಕರೆ ಕೊಟ್ಟಿದ್ದರು. ಶ್ವೇತಭವನದ ಬಳಿ ಪ್ರತಿಭಟನಾಕಾರರನ್ನು ತಡೆಯಲು ಕೆಟ್ಟ ನಾಯಿಗಳನ್ನು ಕಳುಹಿಸುವುದಾಗಿ ಬೆದರಿಕೆ ಹಾಕಿದ್ದರು. ಜೊತೆಗೆ ಪೊಲೀಸ್ ಪವರ್ ಬಳಸಿ ಸಾವಿರಾರು ಜನರನ್ನು ಬಂಧಿಸಿದರು. ಸಿನಿಮಾ ಕ್ಷೇತ್ರದಿಂದಲೇ ಬಂದಿರುವ ಡೊನಾಲ್ಡ್ ಟ್ರಂಪ್ ಸಿನಿಮಾ ಶೈಲಿಯಲ್ಲೇ ಡೈಲಾಗ್ ಹೊಡೆದಿದ್ದು, “ಲೂಟಿ ಪ್ರಾರಂಭವಾದಾಗ, ಶೂಟಿಂಗ್ ಪ್ರಾರಂಭವಾಗುತ್ತದೆ” ಎಂದು ಜನರಿಗೆ ಧಮ್ಕಿ ಹಾಕುವ ರೀತಿ ಮಾತನಾಡಿದ್ದರು.
ಡೊನಾಲ್ಡ್ ಟ್ರಂಪ್ ಆರೋಪ ಏನು..?
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಕಾರ, ಅಮೆರಿಕದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಡೆಮಾಕ್ರಟಿಕ್ ಅಧಿಕಾರಿಗಳು, ಎಡಪಂಥಿಯ ಚಳುವಳಿಯ ಆಂಟಿಫಾ ಮತ್ತು ಮಾಜಿ ಉಪಾಧ್ಯಕ್ಷ ಜೋ ಬಿಡನ್ ಕೂಡ ಕಾರಣ ಎಂದಿದ್ದಾರೆ. ಆದರೆ ಯಾವುದೇ ದೇಶದಲ್ಲಿ ಚುನಾವಣೆಗಳು ಸಮೀಪಿಸುತ್ತಿದ್ದ ಹಾಗೆ ರಾಜಕೀಯ ಪಕ್ಷಗಳು ತನ್ನ ಪರ ಕೆಲವೊಂದು ವರ್ಗವನ್ನು ತನ್ನತ್ತ ಸೆಳೆಯುವ ಕಸರತ್ತು ಮಾಡುತ್ತವೆ. ಅದಕ್ಕೆ ಬೇಕಾದ ಎಲ್ಲಾ ಪೋಷಣೆಯನ್ನೂ ನಿಭಾಯಿಸುತ್ತವೆ. ಅದೇ ರೀತಿ ಈಗ ಅಮೆರಿಕದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಪ್ರೇರೇಪಿಸುವುದು ಪೂರ್ವ ನಿರ್ಧರಿತ ಎನ್ನಲಾಗ್ತಿದೆ. ಎಲ್ಲವನ್ನೂ ತನ್ನ ನಿರೂಪಣೆಗೆ ಸರಿ ಹೊಂದುವ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಈ ಹೋರಾಟದ ಬಿಕ್ಕಟ್ಟು ತನ್ನ ರಾಜಕೀಯ ಲಾಭಕ್ಕೆ ಹೊಂದುವಂತೆ ಮಾಡುವ ಪ್ರಯತ್ನ ಎಗ್ಗಿಲ್ಲದೆ ಸಾಗಿದೆ ಎಂದು ವರದಿಗಳು ವಿಶ್ಲೇಷಿಸುತ್ತವೆ.
ಅಮೆರಿಕ ಚುನಾವಣೆಗೂ ಗಾಂಧಿ ಕಾಲಿಗೂ ಎಲ್ಲಿನ ನಂಟು..?
ಭಾರತದ ಪ್ರಧಾನಿ ನರೇಂದ್ರ ಮೋದಿ ಇತ್ತೀಚಿಗೆ ಅಮೆರಿಕ ಪ್ರವಾಸ ಕೈಗೊಂಡಿದ್ದರು. ಹೌಡಿ-ಮೋದಿ ಎನ್ನುವ ಬೃಹತ್ ಕಾರ್ಯಕ್ರಮ ಮಾಡಿದ್ದರು. 2019ರ ಸೆಪ್ಟೆಂಬರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತೀಯ ಮೂಲದ 50 ಸಾವಿರಕ್ಕೂ ಹೆಚ್ಚು ಭಾರತೀಯ ಅಮೆರಿಕನ್ನು ಭಾಗಿಯಾಗಿದ್ದರು. ಪ್ರಧಾನಿ ನರೇಂದ್ರ ಮೋದಿ, ಡೊನಾಲ್ಡ್ ಟ್ರಂಪ್ ಜಂಟಿಯಾಗಿ ವೇದಿಕೆ ಹಂಚಿಕೊಂಡಿದ್ದರು. ಅಮೆರಿಕದ ಜನಸಂಖ್ಯೆಯ 1.3 ಪರ್ಸೆಂಟ್ ಜನರು ಭಾರತೀಯರೇ ಇದ್ದಾರೆ.
ಈಗಾಗಲೇ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಜೊತೆಗೆ ವೇದಿಕೆ ಹಂಚಿಕೊಳ್ಳುವ ಮೂಲಕ ಭಾರತೀಯ ಮನಸ್ಸು ರಿಪಬ್ಲಿಕನ್ ಪಾರ್ಟಿ ಕಡೆ ವಾಲುವಂತೆ ಮಾಡಿದ್ದಾರೆ. ಇದೀಗ ಕಪ್ಪು ಜನಾಂಗದ ಹೋರಾಟದ ಸಮಯದಲ್ಲಿ ಅವರ ಮೇಲೆ ಆರೋಪ ಬರುವಂತೆ ಮಾಡಿದರೆ..! ಭಾರತೀಯರ ಆಕ್ರೋಶ ಕಪ್ಪು ಜನರ ಮೇಲೆ ತಿರುಗುತ್ತದೆ. ಈಗಾಗಲೇ ಹತ್ಯೆ, ಪ್ರತಿಭಟನೆ ಬಳಿಕ ಕಪ್ಪು ಜನ, ಬಿಳಿಯ ಜನರನ್ನು ಇಬ್ಭಾಗ ಮಾಡಿದ್ದಾಗಿದೆ. ಇದೀ ಕಪ್ಪು ಜನಾಂಗದ ವಿರುದ್ಧ ಭಾರತೀಯರನ್ನು ಎತ್ತಿಕಟ್ಟುವ ಕೆಲಸ ಮಾಡಿದರೆ ಅನುಕೂಲವೇ ಹೆಚ್ಚು ಎನ್ನುವ ಕಾರಣಕ್ಕೆ ಪ್ರತಿಮೆಯ ಕಾಲಿನ ರಾಜಕೀಯ ನಡೆಯುತ್ತಿದೆ ಎನ್ನಲಾಗಿದೆ.
Also Read: ಹೊತ್ತಿ ಉರಿಯುವ ಅಮೇರಿಕಾದಲ್ಲಿ ʼಹೀರೋʼ ಆದ ಭಾರತೀಯ