ಬಿಹಾರ ಚುನಾವಣೆಯಲ್ಲಿ ನಿಚ್ಛಳ ಬಹುಮತ ಪಡೆದಿರುವ ಬಿಜೆಪಿ-ಜೆಡಿಯು ಮೈತ್ರಿಯ ಎನ್ ಡಿಎ ಅಧಿಕಾರ ಹಿಡಿಯುವುದು ನಿಶ್ಚಿತವಾಗಿದೆ. ಹಾಗೇ ಮೈತ್ರಿ ಪಕ್ಷಗಳ ನಡುವೆ ಅತಿ ಹೆಚ್ಚು ಸ್ಥಾನಗಳಲ್ಲಿ ಕಣಕ್ಕಿಳಿದಿದ್ದ ಸಿಎಂ ನಿತೀಶ್ ಕುಮಾರ್ ಅವರ ಪಕ್ಷ, ದೊಡ್ಡ ಮಟ್ಟದ ಹಿನ್ನಡೆ ಕಂಡಿದ್ದರೂ, ಕೊಟ್ಟ ಮಾತಿನಂತೆ ಅವರನ್ನೇ ಮತ್ತೊಂದು ಅವಧಿಗೆ ಸಿಎಂ ಮಾಡುವುದಾಗಿ ಮೈತ್ರಿಯ ಅತಿದೊಡ್ಡ ಪಕ್ಷ ಬಿಜೆಪಿ ಸ್ಪಷ್ಟಪಡಿಸಿದೆ.
ಪ್ರಮುಖವಾಗಿ ಅತಿದೊಡ್ಡ ಮೈತ್ರಿಯಾಗಿ ಹೊರಹೊಮ್ಮಿರುವ ಎನ್ ಡಿಎ, ಚುನಾವಣಾ ಪೂರ್ವದಲ್ಲಿಯೇ ಮುಖ್ಯಮಂತ್ರಿ ಅಭ್ಯರ್ಥಿ ನಿತೀಶ್ ಅವರೇ ಎಂದು ಅಧಿಕೃತ ಘೋಷಣೆ ಮಾಡಿತ್ತು ಮತ್ತು ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಪದೇ ಪದೇ ನಿತೀಶ್ ಅವರೇ ಮುಂದಿನ ಮುಖ್ಯಮಂತ್ರಿ ಎನ್ನುವ ಮೂಲಕ ಆ ಕುರಿತು ಇದ್ದ ಊಹಾಪೋಹಳಿಗೆ ತೆರೆ ಎಳೆಯುವ ಯತ್ನ ಮಾಡಿದ್ದರು. ಆದರೆ, 122 ಕ್ಷೇತ್ರಗಳಲ್ಲಿ ಕಣಕ್ಕಿಳಿದಿದ್ದ ನಿತೀಶ್ ಕುಮಾರ್ ಅವರ ಜೆಡಿಯು, ಕೇವಲ 43 ಸ್ಥಾನಗಳನ್ನು ಮಾತ್ರ ಪಡೆದುಕೊಂಡು ಹೀನಾಯ ಸೋಲು ಕಂಡಿದೆ. ಇದು ಬಿಹಾರದ ಜನತೆ ನಿತೀಶ್ ಅವರ ಆಡಳಿತದ ವಿರುದ್ಧ ನೀಡಿದ ಜನಾದೇಶವೆಂದೇ ಹೇಳಲಾಗುತ್ತಿದೆ. ಅದೇ ಹೊತ್ತಿಗೆ 121 ಕ್ಷೇತ್ರಗಳಲ್ಲಿ ಕಣಕ್ಕಿಳಿದಿದ್ದ ಬಿಜೆಪಿ ಬರೋಬ್ಬರಿ 74 ಕ್ಷೇತ್ರಗಳಲ್ಲಿ ಗೆಲುವು ಪಡೆಯುವ ಮೂಲಕ ಮೈತ್ರಿಯ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆ ಹಿನ್ನೆಲೆಯಲ್ಲಿ ಚುನಾವಣಾಪೂರ್ವ ಘೋಷಣೆಯ ಹೊರತಾಗಿಯೂ ನಿತೀಶ್ ಅವರಿಗೆ ಬಿಜೆಪಿ ಮುಖ್ಯಮಂತ್ರಿ ಗಾದಿಯನ್ನು ಬಿಟ್ಟುಕೊಡುವುದೇ ? ಎಂಬ ಪ್ರಶ್ನೆ ಚರ್ಚೆಗೊಳಗಾಗಿತ್ತು.
ಇದೀಗ ಆ ಗೊಂದಲಕ್ಕೆ ಬಿಜೆಪಿ ತೆರೆ ಎಳೆದಿದೆ.
Also Read: ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಲಿದ್ದಾರೆ, ನಾವು ಬದ್ಧರಾಗಿದ್ದೇವೆ: ಬಿಜೆಪಿ
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಆದರೆ, ಬಿಹಾರ ರಾಜಕಾರಣದ ಮತ್ತೊಂದು ಬದಿಯಲ್ಲಿ; ಪ್ರತಿಪಕ್ಷ ಮೈತ್ರಿ ಮಹಾಘಟಬಂಧನದಲ್ಲಿ ಆರ್ ಜೆಡಿ ಮತ್ತು ಎಡಪಕ್ಷಗಳ ಉತ್ತಮ ಸ್ಥಾನಗಳಿಕೆಯ ಹೊರತಾಗಿಯೂ ಆ ಮಹಾಮೈತ್ರಿ ಸರಳ ಬಹುಮತಕ್ಕೆ ಬೇಕಾದ ಸ್ಥಾನ ಗಳಿಸುವಲ್ಲಿ ವಿಫಲಾಗಿದ್ದು ಯಾಕೆ? ಎಂಬ ಜಿಜ್ಞಾಸೆ ಶುರುವಾಗಿದೆ.
ಮಹಾಘಟಬಂಧನದ ಪ್ರಮುಖ ಪಕ್ಷ ಆರ್ ಜೆಡಿ 144 ಕ್ಷೇತ್ರಗಳಲ್ಲಿ ಕಣಕ್ಕಿಳಿದು, ಬರೋಬ್ಬರಿ 75 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದ್ದರೆ, 70 ಕ್ಷೇತ್ರಗಳಲ್ಲಿ ಕಣಕ್ಕಿಳಿದಿದ್ದ ಕಾಂಗ್ರೆಸ್ ಕೇವಲ 19 ಸ್ಥಾನಗಳನ್ನು ಪಡೆದಿದೆ. ಮೈತ್ರಿಯ ಅತಿ ಸಣ್ಣ ಪಾಲುದಾರರಾದ ಸಿಪಿಎಂ (4), ಸಿಪಿಐ(6) ಮತ್ತು ಸಿಪಿಐಎಂಎಲ್(19) ಪಕ್ಷಗಳು ಕೂಡ ಅನಿರೀಕ್ಷಿತ ಸ್ಥಾನ ಗಳಿಕೆ ಮಾಡಿದ್ದು, ಮೂರೂ ಎಡಪಕ್ಷಗಳು ಒಟ್ಟು 16 ಕ್ಷೇತ್ರಗಳನ್ನು ತಮ್ಮದಾಗಿಸಿಕೊಂಡಿವೆ. ಆ ಹಿನ್ನೆಲೆಯಲ್ಲಿ ಸರಾಸರಿ ಸ್ಥಾನಗಳಿಕೆಯವಾರು ಇಡೀ ಮೈತ್ರಿಕೂಟದ ಹಿನ್ನಡೆಗೆ ಕಾಂಗ್ರೆಸ್ ಕೊಡುಗೆ ದೊಡ್ಡದು. ಹಾಗಾಗಿ ಬಿಹಾರದಲ್ಲಿ ಈ ಬಾರಿ ತೇಜಸ್ವಿ ಯಾದವ್ ಗೆ ಅಧಿಕಾರ ಕೂದಲೆಳೆಯ ಅಂತರದಲ್ಲಿ ಕೈತಪ್ಪಲು ಕಾಂಗ್ರೆಸ್ ಪಾತ್ರ ದೊಡ್ಡದು ಎಂಬ ವಿಶ್ಲೇಷಣೆಗಳು ಕೇಳಿಬಂದಿವೆ.
Also Read: ನಿತೀಶ್ ಕುಮಾರ್ ಮತ್ತು ಬಿಜೆಪಿಗೆ ನಿರ್ಣಾಯಕವಾಗಿರುವ ಬಿಹಾರ ಗೆಲುವು!
ಕಾಂಗ್ರೆಸ್ ಸೋಲು ಕಂಡಿರುವ ಬಹುತೇಕ ಕಡೆ ಅದು ಬಿಜೆಪಿ ಅಭ್ಯರ್ಥಿಗಳಿಗೆ ಸ್ಥಾನ ಬಿಟ್ಟುಕೊಟ್ಟಿದೆ ಮತ್ತು ಗೆಲುವಿನ ಅಂತರ ಕೂಡ ಗಣನೀಯವಾಗಿದೆ ಎಂಬುದನ್ನೂ ವಿಶ್ಲೇಷಣೆಗಳು ಬೊಟ್ಟುಮಾಡಿವೆ. ಆ ಹಿನ್ನೆಲೆಯಲ್ಲಿ ಮೈತ್ರಿಕೂಟದ ಸ್ಥಾನ ಹಂಚಿಕೆಯಲ್ಲಿಯೇ ದೋಷವಿತ್ತು. ಇತ್ತೀಚಿಗೆ ದೇಶದ ವಿವಿಧೆಡೆಯಂತೆಯೇ ಬಿಹಾರ ರಾಜಕಾರಣದಲ್ಲಿ ಕೂಡ ಕಾಂಗ್ರೆಸ್ ಸಾಕಷ್ಟು ಬದಿಗೆ ಸರಿದಿದೆ. ಅದರಲ್ಲೂ ದಶಕಗಳಿಂದ ರಾಜ್ಯದಲ್ಲಿ ಆ ಪಕ್ಷ ರಾಜಕೀಯ ಕೇಂದ್ರಬಿಂದುವಿನ ಸಮೀಪಕ್ಕೂ ಸುಳಿದಿಲ್ಲ. ಹಾಗಿದ್ದರೂ ಅದಕ್ಕೆ ಬರೋಬ್ಬರಿ 70ರಷ್ಟು ಸ್ಥಾನಗಳನ್ನು ಬಿಟ್ಟುಕೊಟ್ಟಿದ್ದು ಸರಿಯಲ್ಲ. ಬದಲಾಗಿ, 50 ಸ್ಥಾನಗಳನ್ನು ನೀಡಿ, ಉಳಿದವನ್ನು ಗೆಲ್ಲುವ ಸಾಧ್ಯತೆ ಹೆಚ್ಚಿದ್ದ ಎಡಪಕ್ಷಗಳಿಗೆ ಅವುಗಳ ಪ್ರಾಬಲ್ಯಕ್ಕೆ ಅನುಸಾರ ಹಂಚಿದ್ದರೆ, ನಿಶ್ಚಿತವಾಗಿಯೂ ಮಹಾಘಟಬಂಧನ ಸರ್ಕಾರ ರಚಿಸುವ ಸಾಧ್ಯತೆ ಹೆಚ್ಚಿತ್ತು. 29 ಸ್ಥಾನಗಳಲ್ಲಿ ಸ್ಪರ್ಧಿಸಿ 19 ಸ್ಥಾನಗಳಲ್ಲಿ ಗೆಲವು ಸಾಧಿಸಿರುವ ಎಡಪಕ್ಷಗಳ ಸಾಧನೆಯ ಹಿನ್ನೆಲೆಯಲ್ಲಿ ನೋಡಿದರೆ, ಮಹಾಮೈತ್ರಿ, ಎಡಪಕ್ಷಗಳ ಸಾಮಾರ್ಥ್ಯವನ್ನು ಕೀಳಾಗಿ ಕಂಡಿದ್ದೇ ಅದರ ಅನಿರೀಕ್ಷಿತ ಸೋಲಿನ ಹಿಂದಿನ ರಹಸ್ಯ ಎನ್ನಲಾಗುತ್ತಿದೆ.
Also Read: ಬಿಹಾರದ ಗದ್ದುಗೆ ಹಿಡಿಯುವತ್ತ ಬಿಜೆಪಿ, ಮಹಾಘಟಬಂಧನಕ್ಕೆ ಅನಿರೀಕ್ಷಿತ ಹಿನ್ನಡೆ
ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಸಿಪಿಎಂಎಲ್ ಪ್ರಧಾನ ಕಾರ್ಯದರ್ಶಿ ದೀಪಂಕರ್ ಭಟ್ಟಾಚಾರ್ಯ, “ನಾವು ಈ ಮೈತ್ರಿಯನ್ನು ಇನ್ನಷ್ಟು ಮುಂಚಿತವಾಗಿ ಅಂತಿಮಗೊಳಿಸಿಕೊಂಡು, ಸ್ಥಾನ ಹಂಚಿಕೆಯನ್ನು ಇನ್ನಷ್ಟು ವಿವೇಕದಿಂದ ಮಾಡಿದ್ದರೆ, ನಾವು ಅಧಿಕಾರ ಹಿಡಿಯುವುದು ಖಂಡಿತವಾಗಿಯೂ ಸಾಧ್ಯವಿತ್ತು. 50 ಸ್ಥಾನಗಳನ್ನು ಎಡಪಕ್ಷಗಳಿಗೂ, 50 ಸ್ಥಾನಗಳನ್ನು ಕಾಂಗ್ರೆಸ್ಸಿಗೂ ಕೊಟ್ಟು, ಉಳಿದವನ್ನು ಆರ್ ಜೆಡಿಗೆ ಕೊಟ್ಟಿದ್ದರೆ ಹೆಚ್ಚು ವಿವೇಚನೆಯ ನಿರ್ಧಾರವಾಗುತ್ತಿತ್ತು. ಅಂತಿಮವಾಗಿ ಅಂತಹ ಸೂತ್ರ ಅಧಿಕಾರ ತಂದುಕೊಡುತ್ತಿತ್ತು” ಎಂದಿದ್ದಾರೆ.
ಆದರೆ, ಕಾಂಗ್ರೆಸ್ ಈ ವಾದವನ್ನು ಪುರಸ್ಕರಿಸಿಲ್ಲ. ಬದಲಾಗಿ, “ತಾನು ಕಣಕ್ಕಿಳಿದ ಬಹುತೇಕ ಕ್ಷೇತ್ರಗಳು ಸಾಂಪ್ರದಾಯಿಕವಾಗಿ ಎನ್ ಡಿಎ ಕ್ಷೇತ್ರಗಳು. ಅಲ್ಲಿ ಎನ್ ಡಿಎ ಪಕ್ಷಗಳ ಗೆಲುವಿನ ಸಾಧ್ಯತೆ ಶೇ.95ರಷ್ಟಿತ್ತು. ಅಂತಹ ಕಡೆ ಕಣಕ್ಕಿಳಿದು ಇಷ್ಟು ಸ್ಥಾನ ಗಳಿಸಿರುವುದು ಮೈತ್ರಿಯ ಹಿಂದಿನ ಸಾಧನೆಗಳಿಗೆ ಹೋಲಿಸಿದರೆ ದೊಡ್ಡದೇ. ಜಾತಿ ಸಮೀಕರಣದ ಕಾರಣಕ್ಕೆ ಜೆಡಿಯು ಮತ್ತು ಬಿಜೆಪಿ ಮೈತ್ರಿ ಯಾವಾಗಲೂ ಕಠಿಣ ಸವಾಲೇ. 2010ರ ಲೋಕಸಭಾ ಚುನಾವಣೆಯಲ್ಲಿ ಕೂಡ ಜೆಡಿಯು-ಬಿಜೆಪಿ ಮೈತ್ರಿ 70 ಸ್ಥಾನಗಳ ಪೈಕಿ 65 ಕಡೆ ಗೆಲುವ ಪಡೆದಿದ್ದವು. ಹಾಗೇ 2019ರ ಲೋಕಸಭಾ ಚುನಾವಣೆಯಲ್ಲಿ ಕೂಡ 70ರಲ್ಲಿ 67 ಸ್ಥಾನಗಳನ್ನು ಪಡೆದುಕೊಂಡಿದ್ದವು” ಎಂದು ಕಾಂಗ್ರೆಸ್ ನಾಯಕರು ಸಮರ್ಥಿಸಿಕೊಂಡಿದ್ದಾರೆ.
ಅಲ್ಲದೆ, “2015ರಲ್ಲಿ ಜೆಡಿಯು ಮೈತ್ರಿ ಇಲ್ಲದೆಯೂ ಬಿಜೆಪಿ, ಈ ಬಾರಿ ಕಾಂಗ್ರೆಸ್ ಕಣಕ್ಕಿಳಿದಿದ್ದ 70 ಕ್ಷೇತ್ರಗಳಲ್ಲಿ 25 ಕಡೆ ಜಯ ಗಳಿಸಿತ್ತು. ಅಂದರೆ, ಈ ಕ್ಷೇತ್ರಗಳಲ್ಲಿ ಎನ್ ಡಿಎ, ಅದರಲ್ಲು ಬಿಜೆಪಿ ಸಾಂಪ್ರದಾಯಿಕ ಪ್ರಬಲ ಪಕ್ಷ ಎಂಬುದು ಇದರಿಂದ ಗೊತ್ತಾಗುತ್ತದೆ. ಹಾಗಾಗಿ ಈ ಬಾರಿಯ ಕಾಂಗ್ರೆಸ್ ಸೋಲಿಗೆ ಕೇವಲ ಕಾಂಗ್ರೆಸ್ ಕಾರಣವೆಂದು ದೂಷಿಸುವುದು ಅಥವಾ ಮಹಾಮೈತ್ರಿಯ ಸೋಲಿಗೆ ಕಾಂಗ್ರೆಸ್ ಒಂದೇ ಕಾರಣವೆಂದು ಹಣೆಪಟ್ಟಿ ಹಚ್ಚುವುದು ಸರಿಯಲ್ಲ” ಎಂದೂ ಅವರು ವಿಶ್ಲೇಷಿಸಿದ್ದಾರೆ.
Also Read: ಇದು ಇವಿಎಂ ಮೇಲೆ ದೂಷ ಹೊರಿಸುವ ಕಾಲವಲ್ಲ – ಕಾರ್ತಿ ಚಿದಂಬರಂ
ಆದರೆ, ಇಂತಹ ಸಮರ್ಥನೆಗಳ ಹೊರತಾಗಿಯೂ ಕಾಂಗ್ರೆಸ್ ಚಿಂತೆ ಮಾಡಬೇಕಾದ ವಿಷಯ; ಅಲ್ಪಸಂಖ್ಯಾತರ ಬಾಹುಳ್ಯದ ಸೀಮಾಂಚಲ ಪ್ರದೇಶದಲ್ಲಿ ಪಕ್ಷದ ಹೀನಾಯ ಸಾಧನೆಯ ಬಗ್ಗೆ. ಆ ಪ್ರದೇಶದಲ್ಲಿ ಪಕ್ಷ ಕಣಕ್ಕಿಳಿದಿದ್ದ 11 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಕೇವಲ 5 ಸ್ಥಾನಗಳನ್ನು ಮಾತ್ರ ಪಡೆದುಕೊಂಡಿದೆ. ಈ ಭಾಗದಲ್ಲಿ ಒವೈಸಿ ಅವರ ಎಐಎಂಐಎಂ ಪಕ್ಷ ಕಾಂಗ್ರೆಸ್ ಗೆಲುವಿಗೆ ಅಡ್ಡಗಾಲಾಗಿದೆ. ಆ ಹಿನ್ನೆಲೆಯಲ್ಲೇ, ಎಐಎಂಐಎಂ ಕಾಂಗ್ರೆಸ್ ಮತ ಕಬಳಿಸುವ ಮೂಲಕ ಬಿಜೆಪಿ ಮತ್ತು ಎನ್ ಡಿಎಗೆ ಅನುಕೂಲ ಮಾಡಿಕೊಟ್ಟಿದೆ. ಆ ಅರ್ಥದಲ್ಲಿ ಅದು ಬಿಜೆಪಿಯ ಬಿ ಟೀಮ್ ಎಂಬ ವ್ಯಾಪಕ ಟೀಕೆಗಳಿಗೂ ಒವೈಸಿ ಅವರ ಪಕ್ಷ ಪಾತ್ರವಾಗಿದೆ.
ಹಾಗೆ ನೋಡಿದರೆ, ಕಳೆದ ಬಾರಿಯ ವಿಧಾನಸಭಾ ಚುನಾವಣೆಗೆ ಹೋಲಿಸಿದರೂ ಕಾಂಗ್ರೆಸ್ ಸಾಧನೆ ಈ ಬಾರಿ ಹೀನಾಯವಾಗಿದೆ. ಕಳೆದ ಬಾರಿ ಜೆಡಿಯುವನ್ನೂ ಒಳಗೊಂಡಿದ್ದ ಮಹಾಘಟಬಂಧನದ ಭಾಗವಾಗಿ ಕಾಂಗ್ರೆಸ್ 41 ಕ್ಷೇತ್ರಗಳಲ್ಲಿ ಕಣಕ್ಕಿಳಿದಿತ್ತು. ಆ ಪೈಕಿ 27 ಕ್ಷೇತ್ರಗಳಲ್ಲಿ ಜಯ ಗಳಿಸುವ ಮೂಲಕ ಮಹಾಮೈತ್ರಿಯ ಗೆಲುವಿಗೆ ಮತ್ತು ಅಧಿಕಾರದ ಗಾದಿಗೆ ಗಣನೀಯ ಕೊಡುಗೆ ನೀಡಿತ್ತು.
ಸ್ಥಾನ ಗಳಿಕೆಯ ವಿಷಯದಲ್ಲಿ ಈ ಬಾರಿ ಪಕ್ಷದ ಹೀನಾಯ ಸಾಧನೆಯ ಹೊರತಾಗಿಯೂ ಕಾಂಗ್ರೆಸ್ಸಿಗರ ಪಾಲಿಗೆ ಸಮಾಧಾನಕರ ಸಂಗತಿ ಎಂದರೆ, ಕಳೆದ ಚುನಾವಣೆಗೆ ಹೋಲಿಸಿದರೆ ಅದರ ಮತ ಗಳಿಕೆ ಪ್ರಮಾಣ ಗಣನೀಯ ಏರಿಕೆ ಕಂಡಿದೆ! ಕಳೆದ ಬಾರಿ ಒಟ್ಟಾರೆ ಕಾಂಗ್ರೆಸ್ ಪಡೆದ ಮತ ಶೇಕಡವಾರು ಪ್ರಮಾಣ 6.66 ಆಗಿತ್ತು. ಆದರೆ, ಈ ಬಾರಿ ಆ ಪ್ರಮಾಣ 9.5ಕ್ಕೆ ಏರಿದೆ. ಹಾಗಾಗಿ ಸ್ಥಾನ ಗಳಿಕೆಯಲ್ಲಿ ಕಳೆದ ಬಾರಿಗಿಂತ ಕೆಟ್ಟ ಪರಿಸ್ಥಿತಿಗೆ ತಲುಪಿದ್ದರೂ, ಒಟ್ಟಾರೆ ಶೇಕಡವಾರು ಮತಗಳಿಕೆಯಲ್ಲಿ ಸಾಧನೆ ತೋರಿದೆ ಎಂಬುದು ವಿಶೇಷ.