ಕರ್ನಾಟಕದ ಪಾಲಿಗೆ ಕಬ್ಬಿಣದ ಕಡಲೆಯಾಗಿದ್ದ ಅಂತಾರಾಜ್ಯ ನದಿ ನೀರು ಹಂಚಿಕೆ ವಿವಾದಗಳು ಒಂದೊಂದಾಗಿ ಬಗೆಹರಿಯುತ್ತಿದೆ. ಕೃಷ್ಣಾ ನದಿ ನೀರಿನ ಹಂಚಿಕೆ ಮತ್ತು ಕಾವೇರಿ ನದಿ ನೀರಿನ ಹಂಚಿಕೆ ವಿಚಾರಗಳಲ್ಲಿ ನೆರೆ ರಾಜ್ಯಗಳು ಸಾಕಷ್ಟು ತಕರಾರು ತೆಗೆದಿದ್ದರೂ ಅಂತಿಮವಾಗಿ ಕಾನೂನು ಕರ್ನಾಟಕದ ಪರ ನಿಂತಿತ್ತು. ಇದೀಗ ಮಹದಾಯಿ ವಿಚಾರದಲ್ಲೂ ಮೇಲ್ನೋಟಕ್ಕೆ ಕರ್ನಾಟಕಕ್ಕೆ ಅನುಕೂಲವಾಗುವ ಎಲ್ಲಾ ಲಕ್ಷಣಗಳೂ ಕಾಣಿಸುತ್ತಿವೆ. ಗೋವಾ ತಕರಾರು ಮಧ್ಯೆಯೂ ಮಹದಾಯಿ ನದಿ ನೀರಿನ ಹಂಚಿಕೆ ಕುರಿತು ಮಹದಾಯಿ ನ್ಯಾಯಾಧಿಕರಣ ನೀಡಿದ ಐ-ತೀರ್ಪಿನ ಕುರಿತು ಅಧಿಸೂಚನೆ ಹೊರಡಿಸುವಂತೆ ಕೇಂದ್ರ ಸರ್ಕಾರಕ್ಕೆ ಆದೇಶಿಸಿರುವ ಸುಪ್ರೀಂ ಕೋರ್ಟ್, ಜುಲೈ ತಿಂಗಳಲ್ಲಿ ಐ-ತೀರ್ಪು ಕುರಿತ ಮೇಲ್ಮನವಿಯ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ಹೇಳಿದೆ. ಒಂದೊಮ್ಮೆ ತೀರ್ಪಿನಲ್ಲಿ ವ್ಯತ್ಯಯ ಕಂಡುಬಂದಲ್ಲಿ ಅಧಿಸೂಚನೆಯಲ್ಲೂ ಮಾರ್ಪಾಟು ಮಾಡಬೇಕು ಎಂಬ ಸಂದೇಶದೊಂದಿಗೆ ಅಧಿಸೂಚನೆಗೆ ಸುಪ್ರೀಂ ಕೋರ್ಟ್ ಹಸಿರು ನಿಶಾನೆ ತೋರಿದೆ. ಸುಪ್ರೀಂ ಆದೇಶವನ್ನು ಅನುಷ್ಠಾನಗೊಳಿಸುವಂತೆ ಕೇಂದ್ರವನ್ನು ನಿಯೋಗದ ಮೂಲಕ ಕೋರಲು ಕರ್ನಾಟಕ ಮುಂದಾಗಿದೆ.
ಆದರೆ, ಗೋವಾ ಮಾತ್ರ ಈ ವಿಚಾರದಲ್ಲಿ ಕರ್ನಾಟಕಕ್ಕೆ ತೊಡರುಗಾಲು ಹಾಕುವ ತನ್ನ ಕೆಲಸವನ್ನು ಮುಂದುವರಿಸಿರುವುದರಿಂದ ಮತ್ತೆ ಸಮಸ್ಯೆ ಎದುರಾಗುವ ಆತಂಕ ಕಾಣಿಸಿಕೊಂಡಿದೆ. ನ್ಯಾಯಾಧಿಕರಣದ ತೀರ್ಪಿನ ಕುರಿತು ಗೋವಾ ಮತ್ತು ಮಹಾರಾಷ್ಟ್ರ ಸ್ಪಷ್ಟೀಕರಣ ಕೇಳಿರುವುದರಿಂದ ಕೇಂದ್ರ ಸರ್ಕಾರ ನ್ಯಾಯಾಧಿಕರಣದ ಅವಧಿಯನ್ನು 2020ರ ಆಗಸ್ಟ್ ತಿಂಗಳವರೆಗೆ ವಿಸ್ತರಿಸಿದೆ. ಸ್ಪಷ್ಟೀಕರಣ ಸಿಗುವವರೆಗೆ ಅಧಿಸೂಚನೆ ಹೊರಡಿಸಲು ಸಾಧ್ಯವಿಲ್ಲ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ. ಇದೇ ಮಾತನ್ನು ಗೋವಾ ಪರ ವಕೀಲರೂ ಈ ಹಿಂದೆ ಹೇಳಿದ್ದರು. ಇದರ ಮಧ್ಯೆಯೂ ಸುಪ್ರೀಂ ಕೋರ್ಟ್ ಅಧಿಸೂಚನೆ ಹೊರಡಿಸಲು ಆದೇಶಿಸಿದ್ದು, ಕೇಂದ್ರ ಸರ್ಕಾರ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬುದರ ಮೇಲೆ ಮುಂದಿನ ಬೆಳವಣಿಗೆಗಳು ಅವಲಂಬಿತವಾಗಿವೆ.
2018ರ ಆಗಸ್ಟ್‌ನಲ್ಲಿ ಮಹದಾಯಿ ನದಿ ನೀರು ಹಂಚಿಕೆ ತೀರ್ಪು ನೀಡಿದ್ದ ನ್ಯಾಯಾಧಿಕರಣ, ಕರ್ನಾಟಕಕ್ಕೆ ಒಟ್ಟು 13.5 ಟಿಎಂಸಿ ಅಡಿ ನೀರು ಹಂಚಿಕೆ ಮಾಡಿತ್ತು. ಇದರಲ್ಲಿ 5.5 ಟಿಎಂಸಿ ಅಡಿ ನೀರು ಮುಂಬೈ ಕರ್ನಾಟಕ ಭಾಗಕ್ಕೆ ಕುಡಿಯುವ ನೀರಿನ ಉದ್ದೇಶಕ್ಕೆ, 8.2 ಟಿಎಂಸಿ ಅಡಿ ನೀರು ವಿದ್ಯುತ್ ಉತ್ಪಾದನೆಗೆಂದು ನಿಗದಿ ಮಾಡಿತ್ತು. ಕಳಸಾದಿಂದ 1.12 ಟಿಎಂಸಿ ಅಡಿ, ಬಂಡೂರಿಯಿಂದ 2.18 ಟಿಎಂಸಿ ಅಡಿ ನೀರು ಬಳಕೆಗೆ ಅವಕಾಶ ನೀಡಲಾಗಿತ್ತು. ಗೋವಾಕ್ಕೆ 24 ಟಿಎಂಸಿ ಅಡಿ, ಮಹಾರಾಷ್ಟ್ರಕ್ಕೆ 1.33 ಟಿಎಂಸಿ ಅಡಿ ನೀರು ಹಂಚಿಕೆ ಮಾಡಲಾಗಿತ್ತು. ನ್ಯಾಯಾಧಿಕರಣದ ತೀರ್ಪಿನ ಬಳಿಕ ತನ್ನ ಪಾಲಿನ ನೀರನ್ನು ಬಳಸಿಕೊಳ್ಳಲು ಕರ್ನಾಟಕ ಸಾಕಷ್ಟು ಪ್ರಯತ್ನ ಮಾಡಿತ್ತು. ಇದರ ಪರಿಣಾಮ ಕರ್ನಾಟಕದ ಸುಮಾರು 814 ಕೋಟಿ ರೂ. ವೆಚ್ಚದ ಕುಡಿಯುವ ನೀರಿನ ಯೋಜನೆಗೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ಕಳೆದ ವರ್ಷಾಂತ್ಯದ ವೇಳೆ ಒಪ್ಪಿಗೆ ನೀಡಿತ್ತು. ಆದರೆ, ಗೋವಾ ಸರ್ಕಾರ ಮತ್ತು ಅಲ್ಲಿನ ಪ್ರತಿಪಕ್ಷ ಕಾಂಗ್ರೆಸ್ ಕೇಂದ್ರದ ಈ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ನಿಲುವು ಬದಲಿಸಿದ ಕೇಂದ್ರ ಸರ್ಕಾರ ಯೋಜನೆಗೆ ನೀಡಿದ್ದ ಒಪ್ಪಿಗೆಗೆ ತಡೆ ನೀಡಿತ್ತು.
ಈ ಮಧ್ಯೆ ಕಳೆದ ವಾರ ಸುಪ್ರೀಂ ಕೋರ್ಟ್ ನಲ್ಲಿ ಮಹದಾಯಿ ನ್ಯಾಯಾಧಿಕರಣದ ತೀರ್ಪು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ವೇಳೆ ಅಧಿಸೂಚನೆ ಹೊರಡಿಸಲು ಕೋರ್ಟ್ ಕೇಂದ್ರ ಸರ್ಕಾರಕ್ಕೆ ಆದೇಶಿಸಿದ್ದರಿಂದ ಇದು ಕರ್ನಾಟಕದ ಪಾಲಿನ ಗೆಲುವು ಎಂದು ಹೇಳಲಾಯಿತು. ಏಕೆಂದರೆ, ನ್ಯಾಯಾಧಿಕರಣದ ತೀರ್ಪಿನಂತೆ ಕರ್ನಾಟಕ ತನ್ನ ಪಾಲಿನ ನೀರು ಬಳಕೆಗೆ ಯೋಜನೆ ಅನುಷ್ಠಾನಗೊಳಿಸಬೇಕಾದರೆ ತೀರ್ಪಿನ ಕುರಿತು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಲೇ ಬೇಕು. ಸುಪ್ರೀಂ ಕೋರ್ಟ್ ಆದೇಶದಂತೆ ನ್ಯಾಯಾಧಿಕರಣ ತೀರ್ಪಿನ ಹಿನ್ನೆಲೆಯಲ್ಲಿ ಮಹದಾಯಿ ನದಿ ನೀರು ಬಳಕೆಗೆ ಅನುಕೂಲವಾಗುವಂತೆ ವಾರದೊಳಗಾಗಿ ಅಧಿಸೂಚನೆ ಹೊರಡಿಸಲು ಕೇಂದ್ರ ಸರ್ಕಾರ ಗಂಭೀರ ಚಿಂತನೆ ಆರಂಭಿಸಿತ್ತು. ಅದಕ್ಕೆ ಪೂರಕವಾಗಿ ಕರ್ನಾಟಕವನ್ನು ಪ್ರತಿನಿಧಿಸುವ ಕೇಂದ್ರದ ಸಚಿವರೂ ಒತ್ತಡ ಹೇರಿದ್ದಾರೆ.
ಗೋವಾಕ್ಕೆ ಭಯ ಏಕೆ?
ಆದರೆ, ಅಧಿಸೂಚನೆ ಹೊರಡಿಸಲು ಗೋವಾ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಅದಕ್ಕಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವುದರ ಜತೆ ಸುಪ್ರೀಂ ಕೋರ್ಟ್ ನಲ್ಲೂ ಈ ವಿಷಯ ಪ್ರಸ್ತಾಪಿಸಲು ಮುಂದಾಗಿದೆ. ಗೋವಾ ಸರ್ಕಾರಕ್ಕಿರುವ ಭಯ ಎಂದರೆ ಮಹದಾಯಿ ನದಿ ನೀರು ಬಳಕೆ ಕುರಿತು ಕರ್ನಾಟಕ ತಕ್ಷಣವೇ ಕಾರ್ಯಪ್ರವೃತ್ತವಾದರೆ ಅಂತಿಮ ತೀರ್ಪಿನಲ್ಲಿ ಮತ್ತೆ ಕರ್ನಾಟಕಕ್ಕೆ ಗೆಲುವಾಗುತ್ತದೆ. ಇದರಿಂದ ಗೋವಾ ರಾಜ್ಯಕ್ಕೆ ನೀರಿನ ವಿಚಾರದಲ್ಲಿ ಅನ್ಯಾಯ ಆಗದೇ ಇದ್ದರೂ ರಾಜಕೀಯವಾಗಿ ಆಡಳಿತ ಪಕ್ಷಕ್ಕೆ ಹಿನ್ನಡೆಯಾಗುತ್ತದೆ. ಈ ಕಾರಣಕ್ಕಾಗಿಯೇ ಮಹದಾಯಿ ವಿಚಾರದಲ್ಲಿ ಗೋವಾ ಹೆಜ್ಜೆ ಹೆಜ್ಜೆಗೂ ಕರ್ನಾಟಕವನ್ನು ವಿರೋಧಿಸುತ್ತಿದೆ.
ಮಹದಾಯಿ ನದಿಯಿಂದ ನೀರು ಪಡೆಯುವ ವಿಚಾರದಲ್ಲಿ ಅತ್ಯಂತ ಪ್ರಮುಖವಾಗಿರುವುದು ಕಳಸಾ-ಬಂಡೂರಿ ನಾಲಾ ಯೋಜನೆ. ಬೆಳಗಾವಿ, ಧಾರವಾಡ ಮತ್ತು ಗದಗ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆ ಇದಾಗಿದೆ. ಮಹಾದಾಯಿಯ ನದಿಯ ಉಪನದಿಗಳಾದ ಕಳಸ ಮತ್ತು ಬಂಡೂರಿಯ 7.56ಟಿಎಂಸಿ ನೀರನ್ನು ತಿರುಗಿಸಿ ,ಮಲಪ್ರಭಾ ನದಿಗೆ ಸೆರಿಸಲು ಕಳಸ ಮತ್ತು ಬಂಡೂರಿಗೆ ಅಡ್ಡಲಾಗಿ ಕಟ್ಟೆ ಕಟ್ಟುವ ಯೋಜನೆಯಿದು. ನ್ಯಾಯಾಧಿಕರಣ ರಚನೆಯಾಗುವ ಮುನ್ನವೇ 2002ರಲ್ಲಿ ಈ ಯೋಜನೆಗೆ ಕೇಂದ್ರ ಸರ್ಕಾರದಿಂದ ಅನುಮತಿ ಸಿಕ್ಕಿತ್ತು. ಆದರೆ, ಗೋವಾ ತಕರಾರಿನ ಬಳಿಕ ಇದಕ್ಕೆ ಕೇಂದ್ರ ಸರ್ಕಾರ ತಡೆ ನೀಡಿತ್ತು. ಇದರ ಮಧ್ಯೆಯೇ 2006-07ನೇ ಸಾಲಿನಲ್ಲಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರ 428 ಕೋಟಿ ರೂ. ವೆಚ್ಚದ ಕಳಸಾ-ಬಂಡೂರಿ ಯೋಜನೆಗೆ 125 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ಯೋಜನೆಗೆ ಚಾಲನೆ ನೀಡಲಾಯಿತು. ಮುಖ್ಯಮಂತ್ರಿಗಳು ಆಗಮಿಸದೇ ಇದ್ದರೂ ಜಲಸಂಪನ್ಮೂಲ ಸಚಿವರಾಗಿದ್ದ ಕೆ,ಎಸ್.ಈಶ್ವರಪ್ಪ ಅವರೇ ಮುಂದೆ ನಿಂತು ಯೋಜನೆಗೆ ಚಾಲನೆ ನೀಡಿ ಕಾಮಗಾರಿಯನ್ನೂ ಆರಂಭಿಸಿದ್ದರು. ಅಷ್ಟರಲ್ಲಿ ಸುಪ್ರೀಂ ಕೋರ್ಟ್ ಮೊರೆ ಹೋದ ಗೋವಾ ಸರ್ಕಾರ ಕಾಮಗಾರಿಗೆ ತಡೆಯಾಜ್ಞೆ ತಂದಿತ್ತು. ಇದರಿಂದ ಯೋಜನೆ ಅರ್ಧಕ್ಕೆ ಸ್ಥಗಿತಗೊಂಡಿತ್ತು.
ಮಹದಾಯಿ ನ್ಯಾಯಾಧಿಕರಣದ ತೀರ್ಪಿನ ಕುರಿತು ಅಧಿಸೂಚನೆ ಹೊರಡಿಸಲು ಗೋವಾ ಪ್ರಬಲ ವಿರೋಧ ವ್ಯಕ್ತಪಡಿಸುತ್ತಿರುವುದು ಇದೇ ಕಾರಣಕ್ಕೆ. ಯಾವುದೇ ಆದೇಶ ಇಲ್ಲದೇ ಇದ್ದಾಗಲೂ ಕರ್ನಾಟಕವು ಕಳಸಾ-ಬಂಡೂರಿ ನಾಲಾ ಯೋಜನೆಗೆ ಚಾಲನೆ ನೀಡಿತ್ತು. ಇದೀಗ ಅಧಿಸೂಚನೆ ಹೊರಡಿಸಿದರೆ ನ್ಯಾಯಾಧಿಕರಣದ ಆದೇಶದಂತೆ ಕಳಸಾದಿಂದ 1.12 ಟಿಎಂಸಿ ಅಡಿ, ಬಂಡೂರಿಯಿಂದ 2.18 ಟಿಎಂಸಿ ಅಡಿ ನೀರು ಬಳಸಿಕೊಳ್ಳಲು ಅಗತ್ಯವಿರುವ ಯೋಜನೆಯನ್ನು ಕರ್ನಾಟಕ ಆರಂಭಿಸಿ ಸುಪ್ರೀಂ ಕೋರ್ಟ್ ನಲ್ಲಿ ಅಂತಿಮ ತೀರ್ಪು ಬರುವುದರೊಳಗೆ ಮುಗಿಸಿದರೆ ಆಗ ಗೋವಾಕ್ಕೆ ಏನೂ ಮಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈಗಾಗಲೇ ಕರ್ನಾಟಕ ಸುಮಾರು 814 ಕೋಟಿ ರೂ. ವೆಚ್ಚದ ಕುಡಿಯುವ ನೀರಿನ ಯೋಜನೆ ಸಿದ್ಧಪಡಿಸಿದೆ. ಅಧಿಸೂಚನೆ ಹೊರಡಿಸಿದರೆ ಯೋಜನೆಗೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ನೀಡಿದ್ದ ತಡೆ ತೆರವುಗೊಳ್ಳುತ್ತದೆ. ಕಾಮಗಾರಿ ಆರಂಭಿಸಲು ಕರ್ನಾಟಕಕ್ಕೆ ಯಾವುದೇ ಅಡ್ಡಿ ಇರುವುದಿಲ್ಲ.
ಇದಕ್ಕಿಂತಲೂ ಮುಖ್ಯವಾಗಿ ಕರ್ನಾಟಕದ ಕಳಸಾ-ಬಂಡೂರಿ ಯೋಜನೆ ಕುಡಿಯುವ ನೀರಿನ ಯೋಜನೆಯಾಗಿದೆ. ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ಮುಕ್ತಾಯಗೊಳ್ಳುವ ಸಂದರ್ಭದಲ್ಲಿ ಕಾಮಗಾರಿ ನಡೆಯುತ್ತಿದ್ದರೆ ಅಥವಾ ಮುಕ್ತಾಯಗೊಂಡರೆ ಕುಡಿಯುವ ನೀರಿನ ಯೋಜನೆಗೆ ಕೋರ್ಟ್ ಅಡ್ಡಿ ಬರುವ ಸಾಧ್ಯತೆ ಇಲ್ಲ. ಇದು ಗೋವಾಕ್ಕೆ ಹಿನ್ನಡೆಯಾಗುತ್ತದೆ. ನೀರಿನ ವಿಚಾರದಲ್ಲಿ ಸಮಸ್ಯೆಯಾಗದಿದ್ದರೂ ರಾಜಕೀಯವಾಗಿ ಆಡಳಿತ ಪಕ್ಷಕ್ಕೆ ಪ್ರತೀಕೂಲ ಪರಿಸ್ಥಿತಿ ನಿರ್ಮಾಣವಾಗಿ ಪ್ರತಿಪಕ್ಷ ಕಾಂಗ್ರೆಸ್ ಇದರ ಅನುಕೂಲ ಪಡೆದುಕೊಳ್ಳುತ್ತದೆ. ಇದರಿಂದ ಗೋವಾದಲ್ಲಿ ಬಿಜೆಪಿ ಸರ್ಕಾರ ಅಧಿಕಾರ ಕಳೆದುಕೊಂಡರೂ ಅಚ್ಚರಿ ಇಲ್ಲ. ಈ ಕಾರಣಕ್ಕಾಗಿಯೇ ಗೋವಾ ಕ್ಯಾತೆ ತೆಗೆಯುತ್ತಿರುವುದು.
ಕರ್ನಾಟಕಕ್ಕೇಕೆ ಆತಂಕ?
ಅದಕ್ಕಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವುದರ ಜತೆ ಸುಪ್ರೀಂ ಕೋರ್ಟ್ ನಲ್ಲೂ ಈ ವಿಷಯ ಪ್ರಸ್ತಾಪಿಸಲು ಮುಂದಾಗಿದೆ. ಗೋವಾ ಸರ್ಕಾರಕ್ಕಿರುವ ಭಯ ಎಂದರೆ ಮಹದಾಯಿ ನದಿ ನೀರು ಬಳಕೆ ಕುರಿತು ಕರ್ನಾಟಕ ತಕ್ಷಣವೇ ಕಾರ್ಯಪ್ರವೃತ್ತವಾದರೆ ಅಂತಿಮ ತೀರ್ಪಿನಲ್ಲಿ ಮತ್ತೆ ಕರ್ನಾಟಕಕ್ಕೆ ಗೆಲುವಾಗುತ್ತದೆ. ಇದರಿಂದ ಗೋವಾ ರಾಜ್ಯಕ್ಕೆ ನೀರಿನ ವಿಚಾರದಲ್ಲಿ ಅನ್ಯಾಯ ಆಗದೇ ಇದ್ದರೂ ರಾಜಕೀಯವಾಗಿ ಆಡಳಿತ ಪಕ್ಷಕ್ಕೆ ಹಿನ್ನಡೆಯಾಗುತ್ತದೆ. ಈ ಕಾರಣಕ್ಕಾಗಿಯೇ ಮಹದಾಯಿ ವಿಚಾರದಲ್ಲಿ ಗೋವಾ ಹೆಜ್ಜೆ ಹೆಜ್ಜೆಗೂ ಕರ್ನಾಟಕವನ್ನು ವಿರೋಧಿಸುತ್ತಿದೆ.
ಮಹದಾಯಿ ನದಿಯಿಂದ ನೀರು ಪಡೆಯುವ ವಿಚಾರದಲ್ಲಿ ಅತ್ಯಂತ ಪ್ರಮುಖವಾಗಿರುವುದು ಕಳಸಾ-ಬಂಡೂರಿ ನಾಲಾ ಯೋಜನೆ. ಬೆಳಗಾವಿ, ಧಾರವಾಡ ಮತ್ತು ಗದಗ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆ ಇದಾಗಿದೆ. ಮಹಾದಾಯಿಯ ನದಿಯ ಉಪನದಿಗಳಾದ ಕಳಸ ಮತ್ತು ಬಂಡೂರಿಯ 7.56ಟಿಎಂಸಿ ನೀರನ್ನು ತಿರುಗಿಸಿ ,ಮಲಪ್ರಭಾ ನದಿಗೆ ಸೆರಿಸಲು ಕಳಸ ಮತ್ತು ಬಂಡೂರಿಗೆ ಅಡ್ಡಲಾಗಿ ಕಟ್ಟೆ ಕಟ್ಟುವ ಯೋಜನೆಯಿದು. ನ್ಯಾಯಾಧಿಕರಣ ರಚನೆಯಾಗುವ ಮುನ್ನವೇ 2002ರಲ್ಲಿ ಈ ಯೋಜನೆಗೆ ಕೇಂದ್ರ ಸರ್ಕಾರದಿಂದ ಅನುಮತಿ ಸಿಕ್ಕಿತ್ತು. ಆದರೆ, ಗೋವಾ ತಕರಾರಿನ ಬಳಿಕ ಇದಕ್ಕೆ ಕೇಂದ್ರ ಸರ್ಕಾರ ತಡೆ ನೀಡಿತ್ತು. ಇದರ ಮಧ್ಯೆಯೇ 2006-07ನೇ ಸಾಲಿನಲ್ಲಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರ 428 ಕೋಟಿ ರೂ. ವೆಚ್ಚದ ಕಳಸಾ-ಬಂಡೂರಿ ಯೋಜನೆಗೆ 125 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ಯೋಜನೆಗೆ ಚಾಲನೆ ನೀಡಲಾಯಿತು. ಮುಖ್ಯಮಂತ್ರಿಗಳು ಆಗಮಿಸದೇ ಇದ್ದರೂ ಜಲಸಂಪನ್ಮೂಲ ಸಚಿವರಾಗಿದ್ದ ಕೆ,ಎಸ್.ಈಶ್ವರಪ್ಪ ಅವರೇ ಮುಂದೆ ನಿಂತು ಯೋಜನೆಗೆ ಚಾಲನೆ ನೀಡಿ ಕಾಮಗಾರಿಯನ್ನೂ ಆರಂಭಿಸಿದ್ದರು. ಅಷ್ಟರಲ್ಲಿ ಸುಪ್ರೀಂ ಕೋರ್ಟ್ ಮೊರೆ ಹೋದ ಗೋವಾ ಸರ್ಕಾರ ಕಾಮಗಾರಿಗೆ ತಡೆಯಾಜ್ಞೆ ತಂದಿತ್ತು. ಇದರಿಂದ ಯೋಜನೆ ಅರ್ಧಕ್ಕೆ ಸ್ಥಗಿತಗೊಂಡಿತ್ತು.
ಮಹದಾಯಿ ನ್ಯಾಯಾಧಿಕರಣದ ತೀರ್ಪಿನ ಕುರಿತು ಅಧಿಸೂಚನೆ ಹೊರಡಿಸಲು ಗೋವಾ ಪ್ರಬಲ ವಿರೋಧ ವ್ಯಕ್ತಪಡಿಸುತ್ತಿರುವುದು ಇದೇ ಕಾರಣಕ್ಕೆ. ಯಾವುದೇ ಆದೇಶ ಇಲ್ಲದೇ ಇದ್ದಾಗಲೂ ಕರ್ನಾಟಕವು ಕಳಸಾ-ಬಂಡೂರಿ ನಾಲಾ ಯೋಜನೆಗೆ ಚಾಲನೆ ನೀಡಿತ್ತು. ಇದೀಗ ಅಧಿಸೂಚನೆ ಹೊರಡಿಸಿದರೆ ನ್ಯಾಯಾಧಿಕರಣದ ಆದೇಶದಂತೆ ಕಳಸಾದಿಂದ 1.12 ಟಿಎಂಸಿ ಅಡಿ, ಬಂಡೂರಿಯಿಂದ 2.18 ಟಿಎಂಸಿ ಅಡಿ ನೀರು ಬಳಸಿಕೊಳ್ಳಲು ಅಗತ್ಯವಿರುವ ಯೋಜನೆಯನ್ನು ಕರ್ನಾಟಕ ಆರಂಭಿಸಿ ಸುಪ್ರೀಂ ಕೋರ್ಟ್ ನಲ್ಲಿ ಅಂತಿಮ ತೀರ್ಪು ಬರುವುದರೊಳಗೆ ಮುಗಿಸಿದರೆ ಆಗ ಗೋವಾಕ್ಕೆ ಏನೂ ಮಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈಗಾಗಲೇ ಕರ್ನಾಟಕ ಸುಮಾರು 814 ಕೋಟಿ ರೂ. ವೆಚ್ಚದ ಕುಡಿಯುವ ನೀರಿನ ಯೋಜನೆ ಸಿದ್ಧಪಡಿಸಿದೆ. ಅಧಿಸೂಚನೆ ಹೊರಡಿಸಿದರೆ ಯೋಜನೆಗೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ನೀಡಿದ್ದ ತಡೆ ತೆರವುಗೊಳ್ಳುತ್ತದೆ. ಕಾಮಗಾರಿ ಆರಂಭಿಸಲು ಕರ್ನಾಟಕಕ್ಕೆ ಯಾವುದೇ ಅಡ್ಡಿ ಇರುವುದಿಲ್ಲ.
ಇದಕ್ಕಿಂತಲೂ ಮುಖ್ಯವಾಗಿ ಕರ್ನಾಟಕದ ಕಳಸಾ-ಬಂಡೂರಿ ಯೋಜನೆ ಕುಡಿಯುವ ನೀರಿನ ಯೋಜನೆಯಾಗಿದೆ. ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ಮುಕ್ತಾಯಗೊಳ್ಳುವ ಸಂದರ್ಭದಲ್ಲಿ ಕಾಮಗಾರಿ ನಡೆಯುತ್ತಿದ್ದರೆ ಅಥವಾ ಮುಕ್ತಾಯಗೊಂಡರೆ ಕುಡಿಯುವ ನೀರಿನ ಯೋಜನೆಗೆ ಕೋರ್ಟ್ ಅಡ್ಡಿ ಬರುವ ಸಾಧ್ಯತೆ ಇಲ್ಲ. ಇದು ಗೋವಾಕ್ಕೆ ಹಿನ್ನಡೆಯಾಗುತ್ತದೆ. ನೀರಿನ ವಿಚಾರದಲ್ಲಿ ಸಮಸ್ಯೆಯಾಗದಿದ್ದರೂ ರಾಜಕೀಯವಾಗಿ ಆಡಳಿತ ಪಕ್ಷಕ್ಕೆ ಪ್ರತೀಕೂಲ ಪರಿಸ್ಥಿತಿ ನಿರ್ಮಾಣವಾಗಿ ಪ್ರತಿಪಕ್ಷ ಕಾಂಗ್ರೆಸ್ ಇದರ ಅನುಕೂಲ ಪಡೆದುಕೊಳ್ಳುತ್ತದೆ. ಇದರಿಂದ ಗೋವಾದಲ್ಲಿ ಬಿಜೆಪಿ ಸರ್ಕಾರ ಅಧಿಕಾರ ಕಳೆದುಕೊಂಡರೂ ಅಚ್ಚರಿ ಇಲ್ಲ. ಈ ಕಾರಣಕ್ಕಾಗಿಯೇ ಗೋವಾ ಕ್ಯಾತೆ ತೆಗೆಯುತ್ತಿರುವುದು.
ಕರ್ನಾಟಕಕ್ಕೇಕೆ ಆತಂಕ?
ಮಹದಾಯಿ ವಿಚಾರದಲ್ಲಿ ಕೇಂದ್ರ ಸರ್ಕಾರ ಪ್ರತಿ ಸಂದರ್ಭದಲ್ಲೂ ಗೋವಾ ಪರ ನಿಲುವು ತಳೆದಿದೆ. 2002ರಲ್ಲಿ ಕಳಸಾ-ಬಂಡೂರಿ ಯೋಜನೆ ಆರಂಭಿಸಲು ಅನುಮತಿ ನೀಡಿ ಬಳಿಕ ಗೋವಾ ಆಕ್ಷೇಪ ಮುಂದಿಟ್ಟುಕೊಂಡು ಅದಕ್ಕೆ ತಡೆಯೊಡ್ಡಿತ್ತು. ನಂತರ 2006-07ನೇ ಸಾಲಿನಲ್ಲೂ ಕಳಸಾ-ಬಂಡೂರಿ ವಿಚಾರದಲ್ಲಿ ಗೋವಾ ಪರ ನಿಂತಿದ್ದರಿಂದ ಕರ್ನಾಟಕ ಆರಂಭಿಸಿದ ಯೋಜನೆಗೆ ಕೋರ್ಟ್ ತಡೆಯಾಜ್ಞೆ ನೀಡುವಂತಾಯಿತು. ಮಹದಾಯಿ ನ್ಯಾಯಾಧಿಕರಣದ ತೀರ್ಪು ಬಂದ ಬಳಿಕ ಕರ್ನಾಟಕ ರೂಪಿಸಿದ ಕುಡಿಯುವ ನೀರಿನ ಯೋಜನೆಗೆ ಆರಂಭದಲ್ಲಿ ಅನುಮತಿ ನೀಡಿ ನಂತರ ಗೋವಾ ತಕರಾರು ಕಾರಣದಿಂದ ಅನುಮತಿಯನ್ನು ತಡೆಹಿಡಿದಿತ್ತು.
ಹೀಗಾಗಿ ಈ ಬಾರಿಯೂ ಕೇಂದ್ರ ಸರ್ಕಾರ ಗೋವಾ ಪರ ನಿಲುವು ತಳೆಯುವುದೇ ಎಂಬ ಆತಂಕ ರಾಜ್ಯವನ್ನು ಕಾಡುತ್ತಿದೆ. ಮಹದಾಯಿ ನ್ಯಾಯಾಧಿಕರಣದ ಐ ತೀರ್ಪಿನ ಕುರಿತು ಅಧಿಸೂಚನೆ ಹೊರಡಿಸಲು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ ಏನೋ ನಿಜ. ಆದರೆ, ನ್ಯಾಯಾಧಿಕರಣದಲ್ಲಿ ನಾವು ಸ್ಪಷ್ಟೀಕರಣ ಕೇಳಿದ್ದು, ಆ ಕಾರಣಕ್ಕಾಗಿಯೇ ನ್ಯಾಯಾಧಿಕರಣದ ಅವಧಿ ಮತ್ತೆ ವಿಸ್ತರಿಸಲಾಗಿದೆ. ಹೀಗಾಗಿ ಸ್ಪಷ್ಟೀಕರಣ ಸಿಗುವವರೆಗೆ ಅಧಿಸೂಚನೆ ಹೊರಡಿಸುವಂತಿಲ್ಲ ಎಂಬ ಗೋವಾ ರಾಜ್ಯದ ವಾದವನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡು ಸುಪ್ರೀಂ ಕೋರ್ಟ್ ನಲ್ಲೂ ಅದೇ ವಿಚಾರವನ್ನು ಪ್ರಸ್ತಾಪಿಸಿದರೆ ಆಗ ಅಧಿಸೂಚನೆ ಹೊರಡಿಸುವಂತೆ ತಾನು ನೀಡಿದ್ದ ಆದೇಶವನ್ನು ಕೋರ್ಟ್ ವಾಪಸ್ ಪಡೆಯಬಹುದು. ಹೀಗಾದರೆ ಮತ್ತೆ ಕರ್ನಾಟಕಕ್ಕೆ ಹಿನ್ನಡೆಯಾಗುತ್ತದೆ. ಇದುವೇ ಕರ್ನಾಟಕಕ್ಕಿರುವ ಆತಂಕ. ಆದ್ದರಿಂದ ಕೇಂದ್ರ ಸರ್ಕಾರ ಈ ಬಾರಿಯೂ ಗೋವಾ ಪರ ಪಕ್ಷಪಾತಿಯಾಗಿ ನಿಲ್ಲುತ್ತದೆಯೇ ಅಥವಾ ಕರ್ನಾಟಕದ ಕುಡಿಯುವ ನೀರಿನ ಅಗತ್ಯವನ್ನು ಮನಗಂಡು ನಿರ್ಧಾರ ಕೈಗೊಳ್ಳುತ್ತದೆಯೇ ಎಂದು ಕಾದು ನೋಡಬೇಕು.