ಶಿವಮೊಗ್ಗ ಕ್ರಷರ್ ಸ್ಫೋಟ ಘಟನೆಯ ಆಘಾತದಿಂದ ಮಲೆನಾಡು ಚೇತರಿಸಿಕೊಳ್ಳುವ ಮುನ್ನವೇ ಅದೇ ಮಲೆನಾಡಿನ ಮಡಿಲ ಶೃಂಗೇರಿಯ ಕ್ರಷರ್ ಒಂದರಿಂದ ಮತ್ತೊಂದು ಬೆಚ್ಚಿಬೀಳಿಸುವ ಘಟನೆ ವರದಿಯಾಗಿದೆ.
ಶೃಂಗೇರಿ ತಾಲೂಕಿನ ಹಳ್ಳಿಯೊಂದರ ಕ್ರಷರ್ ನಲ್ಲಿ ಕೆಲಸ ಮಾಡುತ್ತಿದ್ದ ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಕಳೆದ ಐದು ತಿಂಗಳಿನಿಂದ 30ಕ್ಕೂ ಹೆಚ್ಚು ಜನ ನಿರಂತರ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೂಲತಃ ಬಯಲುಸೀಮೆಯೆ ಆ ಬಾಲಕಿ, ತಾಯಿಯನ್ನು ಕಳೆದುಕೊಂಡಿದ್ದಳು. ಬಳಿಕ ಆಕೆಯ ತಂದೆ ಬೇರೊಬ್ಬರನ್ನು ಮದುವೆಯಾಗಿದ್ದರಿಂದ, ಅಸಹಾಯಕಳಾದ ಆಕೆ ಮಲೆನಾಡಿನ ಹಳ್ಳಿಯ ತನ್ನ ಚಿಕ್ಕಮ್ಮನ ಮನೆಗೆ ಬಂದಿದ್ದಳು. ಹತ್ತನೇ ತರಗತಿ ಓದುತ್ತಿದ್ದ ಬಾಲಕಿ, ಕೋವಿಡ್ ಹಿನ್ನೆಲೆಯಲ್ಲಿ ಶಾಲೆ ಮುಚ್ಚಿದ್ದರಿಂದ ತನ್ನ ಚಿಕ್ಕಮ್ಮನೊಂದಿಗೆ ಕ್ರಷರ್ ಕೆಲಸಕ್ಕೆ ಹೋಗುತ್ತಿದ್ದಳು.
ಆ ವೇಳೆ, ಕ್ರಷರ್ ನಲ್ಲಿ ಕಿಕ್ರೆ ಸ್ಮಾಲ್ ಅಭಿ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿ ಹೇಯ ಕೃತ್ಯವನ್ನು ಮೊಬೈಲ್ ನಲ್ಲಿ ವೀಡಿಯೋ ಮಾಡಿಕೊಂಡು, ಆ ವಿಷಯವನ್ನು ಯಾರ ಬಳಿಯೂ ಬಾಯಿಬಿಡುವಂತಿಲ್ಲ ಮತ್ತು ನಿರಂತರವಾಗಿ ತಮಗೆ ಸಹಕರಿಸಬೇಕು ಎಂದು ಬಾಲಕಿಗೆ ಬೆದರಿಸಿ, ಬ್ಲ್ಯಾಕ್ ಮೇಲ್ ಮಾಡಿ ಕಳೆದ ಸೆಪ್ಟೆಂಬರಿನಿಂದ ಜನವರಿ 27ರವರೆಗೆ ನಿರಂತರ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಬಾಲಕಿಯ ಹೇಳಿಕೆ ಆಧರಿಸಿ ಚಿಕ್ಕಮಗಳೂರು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಅವರು ನೀಡಿರುವ ದೂರು ಆಧರಿಸಿ ಶೃಂಗೇರಿ ಪೊಲೀಸರು ಒಟ್ಟು 17 ಆರೋಪಿಗಳ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.
ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ದೂರಿನ ಪ್ರಕಾರ, ಸ್ಮಾಲ್ ಅಭಿ, ಗಿರೀಶ್ ಆನೆಗುಂದ, ಮಣಿಕಂಠ, ಸಂಪತ್ ನೆಮ್ಮಾರ್, ಹೊಳೆಕೊಪ್ಪದ ವಿಕಾಸ್, ಆನೆಗುಂದದ ರಾಜೇಶ್, ಅಮಿತ್, ಶೃಂಗೇರಿಯ ಅಶ್ವಥ್ ಗೌಡ, ಹೆಗ್ಗದ್ದೆಯ ದೀಕ್ಷಿತ್, ಹೆರೂರಿನ ಸಂತೋಷ್, ನಯನಗೌಡ, ಅಭಿಗೌಡ, ನಿರಂಜನ್ ಕಿಗ್ಗಾ, ಯೋಗೀಶ್ ಖಾಂಡ್ಯ ಸೇರಿದಂತೆ 30ಕ್ಕು ಹೆಚ್ಚು ಮಂದಿ ಐದು ತಿಂಗಳಿನಿಂದ ನಿರಂತರ ಅತ್ಯಾಚಾರ ಎಸಗಿದ್ದಾರೆ. ಆ ಕೃತ್ಯಕ್ಕೆ ಬಾಲಕಿಯ ಚಿಕ್ಕಮ್ಮಳ ಕುಮ್ಮಕ್ಕೂ ಇತ್ತು ಎಂಬ ಅಂಶವನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಸ್ಮಾಲ್ ಅಭಿ ಸೇರಿದಂತೆ ಆತನ 15 ಮಂದಿ ಸ್ನೇಹಿತರು, ಬಾಲಕಿಯ ಚಿಕ್ಕಮ್ಮ ಹಾಗೂ ಕ್ರಷರ್ ಮಾಲೀಕರ ವಿರುದ್ಧ ಎಫ್ ಐಆರ್ ದಾಖಲಾಗಿದ್ದು, ಇನ್ನುಳಿದವರ ಗುರುತು ಅಪ್ರಾಪ್ತ ಸಂತ್ರಸ್ತೆಗೆ ಇಲ್ಲ. ಹಾಗಾಗಿ ಪೊಲೀಸರು ಆ ಉಳಿದವರನ್ನು ಪತ್ತೆ ಮಾಡಿ ಕ್ರಮಕೈಗೊಳ್ಳಬೇಕು ಎಂದು ದೂರಿನಲ್ಲಿ ಹೇಳಲಾಗಿದೆ.ಅಪ್ರಾಪ್ತೆಯ ಸಾಮೂಹಿಕ ಅತ್ಯಾಚಾರಕ್ಕೆ ಅವಕಾಶ ನೀಡಿತೆ ಅಘೋಷಿತ ಕರ್ಫ್ಯೂ?
ಪೊಲೀಸರು ಈವರೆಗೆ ಕೃತ್ಯಕ್ಕೆ ಸಂಬಂಧಿಸಿದಂತೆ ಹಲವರನ್ನು ಬಂಧಿಸಿದ್ದು, ಇನ್ನುಳಿದವರ ಬಂಧನಕ್ಕೆ ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.
ಆದರೆ, ಅಪ್ರಾಪ್ತ ಬಾಲಕಿಯ ಮೇಲೆ ಐದು ತಿಂಗಳಿನಿಂದ ಮೂವತ್ತಕ್ಕೂ ಹೆಚ್ಚು ಮಂದಿ ನಿರಂತರವಾಗಿ ನಡೆಸಿರುವ ಸಾಮೂಹಿಕ ಅತ್ಯಾಚಾರ ಪ್ರಕರಣ ಇಡೀ ಮಲೆನಾಡನ್ನೇ ಬೆಚ್ಚಿಬೀಳಿಸಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಬಹುತೇಕರು ಬಿಜೆಪಿ ಮತ್ತು ಸಂಘಪರಿವಾರದ ನಂಟು ಹೊಂದಿದ್ದಾರೆ ಎಂಬ ಸಂಗತಿ ಕೂಡ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. ಸ್ಮಾಲ್ ಅಭಿ ಸಂಘಪರಿವಾರದ ಸಂಘಟನೆಗಳಲ್ಲಿ ಸಕ್ರಿಯನಾಗಿದ್ದಾನೆ. ಮತ್ತೊಬ್ಬ ಆರೋಪಿ ಮಣಿಕಂಠ ಯುವ ಮೋರ್ಚಾದ ಸದಸ್ಯ, ಹೊಳೆಕೊಪ್ಪದ ವಿಕಾಸ್ ಎಂಬಾತ ಬಿಜೆಪಿಯ ಜಿಲ್ಲಾ ಪಂಚಾಯ್ತಿ ಸದಸ್ಯರೊಬ್ಬರ ಹತ್ತಿರದ ಸಂಬಂಧಿ ಹಾಗೂ ಸಂಪತ್ ಎಂಬಾತ ಸಂಘಪರಿವಾರದ ಅಂಗಸಂಸ್ಥೆಯಾದ ಸನಾತನ ಸಂಸ್ಥೆಯ ಸಕ್ರಿಯ ಸದಸ್ಯ ಎನ್ನಲಾಗಿದೆ.
ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಆ ದೃಶ್ಯವನ್ನು ವೀಡಿಯೋ ಮಾಡಿ ಆಕೆಯನ್ನು ಬ್ಲ್ಯಾಕ್ ಮೇಲ್ ಮಾಡಿ ಈ ದುರುಳರ ಗುಂಪು ಇನ್ನಷ್ಟು ಕಾಮುಕರನ್ನು ಆಕೆಯ ಮೇಲೆ ಅತ್ಯಾಚಾರಕ್ಕೆ ಪುಸಲಾಯಿಸಿದೆ. ಇಂತಹ ಹೇಯ ಕೃತ್ಯ ಎಸಗಿರುವ ಬಹುತೇಕರು ವಿವಿಧ ಸಂಘಪರಿವಾರದ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿರುವವರೇ. ಕ್ರಷರ್ ನಲ್ಲಿ ಬಾಲ ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಳ್ಳಲಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಮಕ್ಕಳ ಕಲ್ಯಾಣ ಸಮಿತಿ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ನಡೆಸಿದ ದಾಳಿಯ ವೇಳೆ ಬಾಲಕಿ ಈ ಪೈಶಾಚಿಕ ಕೃತ್ಯವನ್ನು ಬಹಿರಂಗಪಡಿಸಿದ್ಧಾಳೆ. ಸದ್ಯ ಬಾಲಕಿಯನ್ನು ಸಾಂತ್ವಾನ ಕೇಂದ್ರದಲ್ಲಿ ಇರಿಸಲಾಗಿದೆ.ದಲಿತ ವಿದ್ಯಾರ್ಥಿನಿಯ ಅತ್ಯಾಚಾರ ಖಂಡಿಸಲು ಹಿಂಜರಿದ `ಧರ್ಮರಕ್ಷಕರು’
ಆರೋಪಿಗಳು ಆಡಳಿತ ಪಕ್ಷದ ಸ್ಥಳೀಯ ಪ್ರಭಾವಿಗಳ ಆಪ್ತರು ಮತ್ತು ಶ್ರೀರಾಮಸೇನೆ ಸೇರಿದಂತೆ ವಿವಿಧ ಸಂಘಪರಿವಾರದ ಸಂಘಟನೆಗಳ ಪ್ರಮುಖರೊಂದಿಗೆ ಕಾಣಿಸಿಕೊಂಡಿರುವ ಫೋಟೋ ಮತ್ತು ವೀಡಿಯೋಗಳು ಜಾಲತಾಣದಲ್ಲಿ ಹರಿದಾಡುತ್ತಿವೆ. ಆ ಹಿನ್ನೆಲೆಯಲ್ಲಿ ತಮ್ಮ ಈ ಪ್ರಭಾವ ಬಳಸಿ ಆರೋಪಿಗಳು ಪ್ರಕರಣವನ್ನು ಮುಚ್ಚಿಹಾಕಬಹುದು, ಪೊಲೀಸರ ಮೇಲೆ ಒತ್ತಡ ತಂದು ತನಿಖೆಯ ಹಾದಿ ತಪ್ಪಿಸಬಹುದು ಎಂಬ ಆತಂಕವನ್ನೂ ಹಲವು ವ್ಯಕ್ತಪಡಿಸಿದ್ದಾರೆ. ಆದರೆ, ಈ ಬಗ್ಗೆ ಮಾಧ್ಯಮಗಳಿಗೆ ಮಾತನಾಡಿರುವ ಕೊಪ್ಪ ಡಿವೈಎಸ್ ಪಿ, ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯ ಘಟನೆಗೆ ಸಂಬಂಧಿಸಿದಂತೆ ಈವರೆಗೆ 16 ಮಂದಿಯ ವಿರುದ್ಧ ಎಫ್ ಐಆರ್ ಆಗಿದೆ. ಕ್ರಷರ್ ಮಾಲೀಕರ ವಿರುದ್ಧವೂ ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗೆ ಕ್ರಮಕೈಗೊಳ್ಳಲಾಗಿದೆ ಎಂದಿದ್ದಾರೆ.
ಕಿಕ್ರೆ ಸ್ಮಾಲ್ ಅಭಿ
ಈ ನಡುವೆ, ಇಂತಹ ಘಟನೆಗಳು ನಡೆದಾಗ ಅವುಗಳನ್ನು ಅಪರಾಧ ಕೃತ್ಯವಾಗಿ, ಅಮಾನುಷ ಮೃಗೀಯ ಘಟನೆಯಾಗಿ ನೋಡದೆ, ಕೋಮು ರಾಜಕಾರಣಕ್ಕೆ ಬಳಸಿಕೊಳ್ಳುವ ಅವಕಾಶಕ್ಕಾಗಿ ಹೊಂಚುಹಾಕುವ ಜಿಲ್ಲೆಯ ಬಿಜೆಪಿ ನಾಯಕರು, ಈಗ ಮಾತ್ರ ಪ್ರಕರಣ ಬೆಳಕಿಗೆ ಬಂದು ದಿನಗಳು ಉರುಳಿದರೂ ಬಾಯಿ ಮುಚ್ಚಿ ಕೂತಿರುವುದು ಏಕೆ ಎಂಬ ಪ್ರಶ್ನೆಯೂ ಎದ್ದಿದೆ. ಅದರಲ್ಲೂ ಇಂತಹ ಘಟನೆಗಳು ನಡೆದಾಗ ಕರಾಳಿಗೆ, ಮಲೆನಾಡಿಗೆ ಬೆಂಕಿ ಹಚ್ಚುವ ಮಾತನಾಡುವ ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಸಚಿವ ಸಿ ಟಿ ರವಿಯಂಥ ನಾಯಕರು ಈಗ ತಮ್ಮದೇ ಸ್ವಕ್ಷೇತ್ರದಲ್ಲಿ, ಜಿಲ್ಲೆಯಲ್ಲಿ ತಮ್ಮ ಪಕ್ಷ ಮತ್ತು ಸಂಘಟನೆಗಳೊಂದಿಗೆ ನಂಟು ಹೊಂದಿರುವ ಪಡೆಯೇ ನಡೆಸಿರುವ ಈ ಹೇಯ ಕೃತ್ಯದ ಬಗ್ಗೆ ಯಾಕೆ ಮೌನವಾಗಿದ್ದಾರೆ ಎಂಬ ಪ್ರಶ್ನೆ ಕೂಡ ಜಾಲತಾಣದಲ್ಲಿ ಕೇಳಿಬಂದಿದೆ.
ಈವರೆಗೆ ಉತ್ತರಪ್ರದೇಶದಂತಹ ರಾಜ್ಯದಲ್ಲಿ ಹೆಣ್ಣುಮಕ್ಕಳಿಗೆ ಭದ್ರತೆ ಇಲ್ಲ; ದಿನಕ್ಕೊಂದು ಸಾಮೂಹಿಕ ಅತ್ಯಾಚಾರ, ದಲಿತರ ಕೊಲೆ- ಹಲ್ಲೆ ಘಟನೆಗಳು ನಡೆಯುತ್ತಿದ್ದವು. ಈಗ ಮಲೆನಾಡಿನಲ್ಲಿ, ಅದರಲ್ಲೂ ಸಂಘಪರಿವಾರದ ಪ್ರಭಾವದ ಪ್ರದೇಶದಲ್ಲಿ, ಅವರದೇ ಸಂಘಟನೆಗಳ ನಂಟಿನ ಮಂದಿಯೇ ಮೃಗೀಯ ಕೃತ್ಯ ನಡೆಸಿರುವುದು ಮಲೆನಾಡಿಗರನ್ನು ಬೆಚ್ಚಿಬೀಳಿಸಿದೆ. ಈ ಘಟನೆಯ ಬಗ್ಗೆ ಸರಿಯಾದ ತನಿಖೆ ನಡೆದು ತಪ್ಪಿಸ್ಥರಿಗೆ ತಕ್ಕ ಶಿಕ್ಷೆಯಾಗಬೇಕು ಮತ್ತು ಅಂಥ ನರರಕ್ಕಸರೊಂದಿಗೆ ನಿಕಟ ನಂಟು ಹೊಂದಿರುವ ಮಂದಿಯ ಅಸಲೀ ಬಣ್ಣವೂ ಬಯಲಾಗಬೇಕು ಎಂಬುದು ಮಲೆನಾಡಿಗರ ಆಗ್ರಹ.