ಬೆಳಗಾವಿ ಗಡಿ ವಿವಾದ. ಇದು ಮಹಾರಾಷ್ಟ್ರ ರಾಜಕಾರಣಿಗಳ ಪಾಲಿಗೆ ಒಂದು ರೀತಿಯ ಟಾನಿಕ್ ಇದ್ದಂತೆ. ಏನಾದರೂ ಗೊಂದಲ, ಸಮಸ್ಯೆ ಉದ್ಭವವಾದಾಗ ಆ ಬಗ್ಗೆ ಗಮನಹರಿಸುವ ಬದಲು ಬೆಳಗಾವಿ ಗಡಿ ವಿವಾದವನ್ನು ಕೆದಕಿ ಜನರ ಮನಸ್ಸನ್ನು ಬೇರೆಡೆ ತಿರುಗಿಸುವುದು ಅಲ್ಲಿನ ರಾಜಕಾರಣಿಗಳಿಗೆ ಹವ್ಯಾಸವಾಗಿದೆ. ಅದರಲ್ಲೂ ಮಹಾರಾಷ್ಟ್ರ ಏಕೀಕರಣ ಸಮಿತಿಗಂತೂ ಬೆಳಗಾವಿ ವಿಚಾರದಲ್ಲಿ ಕ್ಯಾತೆ ತೆರೆಯದಿದ್ದಲ್ಲಿ ದಿನ ಕಳೆಯುವುದೇ ಇಲ್ಲ. ಆದರೆ, ಮಹಾರಾಷ್ಟ್ರ ಏಕೀಕರಣ ಸಮಿತಿ ಪದೇ ಪದೇ ಗಡಿ ವಿವಾದ ಕೆದಕಿ ಬೆಳಗಾವಿ ಭಾಗದಲ್ಲಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದ್ದಂತೆ ರಾಜಕೀಯ ಪಕ್ಷಗಳು ಸ್ವಲ್ಪ ಸುಮ್ಮನಾಗಿದ್ದವು. ಅದರಲ್ಲೂ ಇತ್ತೀಚಿನ ವರ್ಷಗಳಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿಗಳಾರೂ ಗಡಿ ವಿವಾದ ಕೆದಕಿದ ಉದಾಹರಣೆ ಕಡಿಮೆಯೇ.
ಇದೀಗ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರೇ ಬೆಳಗಾವಿ ಗಡಿ ವಿವಾದ ಕೆದಕಿದ್ದಾರೆ. ರಾಜ್ಯದ ನಿಪ್ಪಾಣಿ, ಬೆಳಗಾವಿ, ಕಾರವಾರವನ್ನು ಕರ್ನಾಟಕ ಆಕ್ರಮಿತ ಮಹಾರಾಷ್ಟ್ರ ಎಂದು ಕರೆಯುವ ಮೂಲಕ ಎರಡು ರಾಜ್ಯಗಳ ನಡುವೆ ಬೆಂಕಿ ಹಚ್ಚುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಆದರೆ, ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರದಲ್ಲಿ ದೇಶಾದ್ಯಂತ ಹಬ್ಬಿರುವ ಕಿಚ್ಚು ಕರ್ನಾಟಕಕ್ಕೂ ವ್ಯಾಪಿಸಿರುವುದರಿಂದ ಉದ್ಧವ್ ಠಾಕ್ರೆ ಅವರ ಹೇಳಿಕೆಗೆ ಒಂದಿಬ್ಬರು ರಾಜಕೀಯ ನಾಯಕರನ್ನು ಹೊರತುಪಡಿಸಿ ಬೇರೆ ಯಾರೂ ಪ್ರತಿಕ್ರಿಯೆ ನೀಡಲಿಲ್ಲ.
ಮಹಾರಾಷ್ಟ್ರದ ನಾಗ್ಪುರದಲ್ಲಿ ಚಳಿಗಾಲದ ಅಧಿವೇಶನದಲ್ಲಿ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೆ ಪ್ರತ್ಯುತ್ತರ ನೀಡುತ್ತಾ, ಕರ್ನಾಟಕದಲ್ಲಿ ಮರಾಠಿ ಭಾಷಿಕರ ಮೇಲೆ ಭಾಷಾ ಅತ್ಯಾಚಾರ ನಡೆಯುತ್ತಿದೆ. ಗಡಿಭಾಗದ ಮರಾಠಿಗರು ಮಹಾರಾಷ್ಟ್ರಕ್ಕೆ ನಮ್ಮನ್ನ ಸೇರಿಸಿ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ. ಕರ್ನಾಟಕದಲ್ಲೂ ನಿಮ್ಮದೇ (ಬಿಜೆಪಿ) ಸರ್ಕಾರವಿದೆ. ಯಡಿಯೂರಪ್ಪ ಅವರು ಬಹುಮತ ಸಾಬೀತುಪಡಿಸಿದ್ದಾರೆ. ಕರ್ನಾಟಕದಲ್ಲಿರುವ ಮರಾಠಿಗರು ಹಿಂದೂಗಳಲ್ಲವೇ ಗಡಿ ಭಾಗದ ಮರಾಠಿಗರ ಮೇಲೆ ಹೀಗೆಯೇ ದೊರ್ಜನ್ಯ ಮುಂದುವರಿದರೆ ನಿಪ್ಪಾಣಿ, ಬೆಳಗಾವಿ, ಕಾರವಾರಗಳನ್ನು ಕರ್ನಾಟಕ ಆಕ್ರಮಿತ ಮಹಾರಾಷ್ಟ್ರ ಎಂದು ಕರೆಯಬೇಕಾಗುತ್ತದೆ. ಕಾಶ್ಮೀರದ ಪಾಕ್ ಆಕ್ರಮಿತ ಕಾಶ್ಮೀರದ ರೀತಿ ಕರ್ನಾಟಕ ಆಕ್ರಮಿತ ಕಾಶ್ಮೀರವಾಗಿದೆ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.
ಪದೇ ಪದೇ ಗಡಿ ಕ್ಯಾತೆ ತೆಗೆದರೂ ಅದರಿಂದ ಹೆಚ್ಚಿನ ರಾಜಕೀಯ ಲಾಭವಾಗುವುದಿಲ್ಲ. ಮೇಲಾಗಿ ಮಹಾರಾಷ್ಟ್ರದಲ್ಲಿ ಕನ್ನಡಿಗರು ಸಾಕಷ್ಟು ಸಂಖ್ಯೆಯಲ್ಲಿದ್ದು, ಈ ವಿವಾದವನ್ನು ಕೆದಕಿದರೆ ಅವರು ದೂರ ಸರಿಯುತ್ತಾರೆ ಎಂಬುದು ಉದ್ಧವ್ ಠಾಕ್ರೆಗೆ ಗೊತ್ತಿಲ್ಲದ ಸಂಗತಿ ಏನೂ ಅಲ್ಲ. ಹಾಗೇನಾದರೂ ಲಾಭ ಸಿಗುತ್ತದೆ ಎಂದಾಗಿದ್ದರೆ ಇಷ್ಟು ದಿನ ಅವರು ಸುಮ್ಮನಿರುತ್ತಲೂ ಇರಲಿಲ್ಲ. ಅಷ್ಟೇ ಅಲ್ಲ, ಬೆಳಗಾವಿ ಗಡಿ ವಿಚಾರದಲ್ಲಿ ಹೋರಾಟಕ್ಕೆ ಬೆಂಬಲಿಸುವಂತೆ ಮಹಾರಾಷ್ಟ್ರ ಏಕೀಕರಣ ಸಮಿತಿ ಕೇಳಿಕೊಂಡಾಗ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಅದಕ್ಕೆ ಸ್ಪಂದಿಸಿರಲೂ ಇಲ್ಲ. ಅಂತಹ ಉದ್ಧವ್ ಠಾಕ್ರೆಗೆ ಈಗ ಗಡಿ ವಿವಾದ ಕೆದಕಲು ಕಾರಣ ಬೇರೆಯೇ ಇದೆ.
ಕೆರಳಿರುವ ಮರಾಠಿಗರನ್ನು ಸಮಾಧಾನಪಡಿಸುವುದಷ್ಟೇ ಉದ್ದೇಶ
ಹೌದು, ಮುಖ್ಯಮಂತ್ರಿ ಸ್ಥಾನದ ದುರಾಸೆಯಿಂದ ಬಿಜೆಪಿ ಜತೆಗಿನ ಚುನಾವಣಾ ಪೂರ್ವ ಮೈತ್ರಿಯನ್ನೇ ಕಡಿದುಕೊಂಡು ತಮ್ಮ ರಾಜಕೀಯ ಬದ್ಧ ವೈರಿಗಳಾದ ಎನ್ ಸಿಪಿ ಮತ್ತು ಕಾಂಗ್ರೆಸ್ ಜತೆ ಸೇರಿ ಸರ್ಕಾರ ರಚಿಸಿರುವ ಉದ್ಧವ್ ಠಾಕ್ರೆ ಇದೀಗ ಚಡಪಡಿಸುತ್ತಿದ್ದಾರೆ. ಸರ್ಕಾರ ಉಳಿಸಿಕೊಳ್ಳಬೇಕು ಎಂಬ ಏಕೈಕ ಕಾರಣದಿಂದ ಕಾಂಗ್ರೆಸ್ ಪಕ್ಷಕ್ಕೆ ಶರಣಾಗಿದ್ದಾರೆ. ಅಧಿಕಾರ ಉಳಿಸಿಕೊಳ್ಳಬೇಕಾದರೆ ಮೈತ್ರಿ ಕೆಡದಂತೆ ನೋಡಿಕೊಳ್ಳುವ ಅನಿವಾರ್ಯತೆ ಅವರಿಗಿದೆ. ಇಷ್ಟು ವರ್ಷ ಇದ್ದ ಹಿಂದುತ್ವ, ದೇಶದ ಸಮಗ್ರತೆ, ಮರಾಠಿಗರ ಮೇಲಿನ ಅಭಿಮಾನ ಮನಸ್ಸಿನಲ್ಲಿದ್ದರೂ ಬಹಿರಂಗವಾಗಿ ಹೇಳಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ಅವರದ್ದು.
ವೀರ್ ಸಾವರ್ಕರ್ ಕುರಿತು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ನೀಡಿದ ಹೇಳಿಕೆಯನ್ನೇ ತೆಗೆದುಕೊಳ್ಳೋಣ. ಮೇಕ್ ಇನ್ ಇಂಡಿಯಾ ಘೋಷಣೆಯನ್ನು ರೇಪ್ ಇನ್ ಇಂಡಿಯಾ ಎಂದು ಹೇಳಿದ್ದಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿ ಕ್ಷಮೆ ಕೇಳುವಂತೆ ಒತ್ತಾಯಿಸಿದಾಗ, ವೀರ್ ಸಾವರ್ಕರ್ ಅವರು ಬ್ರಿಟೀಷರ ಕ್ಷಮೆ ಕೇಳಿದ್ದನ್ನೇ ಉದಾಹರಣೆಯಾಗಿಟ್ಟುಕೊಂಡು, ಕ್ಷಮೆ ಕೇಳಲು ನಾನು ರಾಹುಲ್ ಸಾವರ್ಕರ್ ಅಲ್ಲ, ರಾಹುಲ್ ಗಾಂಧಿ ಎನ್ನುವ ಮೂಲಕ ಅವರು ವೀರ ಸಾವರ್ಕರ್ ಅವರಿಗೆ ಅವಮಾನ ಮಾಡಿದ್ದರು. ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಮುನ್ನ ಅಲ್ಲಿನ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಇದೇ ವೀರ್ ಸಾವರ್ಕರ್ ಅವರಿಗೆ ಭಾರತ ರತ್ನ ನೀಡಬೇಕು ಎಂದು ಹೇಳಿದಾಗ ಅದನ್ನು ಶಿವಸೇನಾ ಸಮರ್ಥಿಸಿಕೊಂಡಿತ್ತು. ಹೀಗಿದ್ದರೂ ರಾಹುಲ್ ಗಾಂಧಿ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ಶಿವಸೇನಾ ಕಡೆಯಿಂದ ಬರಲೇ ಇಲ್ಲ. ಶಿವಸೇನಾದ ಈ ನಿಲುವು ಮರಾಠಿಗರ ಆಕ್ರೋಶಕ್ಕೆ ಕಾರಣವಾಗಿತ್ತು.
ಇದಲ್ಲದೆ, ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರದಲ್ಲೂ ಉದ್ಧವ್ ಠಾಕ್ರೆ ಮತ್ತು ಶಿವಸೇನಾ ಸಾಕಷ್ಟು ಮುಜುಗರದ ಪರಿಸ್ಥಿತಿ ಎದುರಿಸುತ್ತಿದೆ. ಶಿವಸೇನಾ ಏನಾದರೂ ಬಿಜೆಪಿ ಜತೆ ಸೇರಿ ಸರ್ಕಾರ ರಚಿಸಿದ್ದರೆ ಇಷ್ಟುಹೊತ್ತಿಗೆ ಮಹಾರಾಷ್ಟ್ರದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಆಗ್ರಹಿಸಿ ಬೃಹತ್ ಹೋರಾಟ ಆರಂಭಿಸುತ್ತಿತ್ತು. ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುತ್ತಿತ್ತು. ಆದರೆ, ಮಿತ್ರಪಕ್ಷಗಳಾದ ಕಾಂಗ್ರೆಸ್ ಮತ್ತು ಎನ್ ಸಿಪಿ ಕಾಯ್ದೆಯನ್ನು ಸಾರಾ ಸಗಟಾಗಿ ವಿರೋಧಿಸುತ್ತಿರುವುದರಿಂದ ಶಿವಸೇನಾ ಮೌನವಾಗಿದೆ. ಲೋಕಸಭೆಯಲ್ಲಿ ಪೌರತ್ವ ತಿದ್ದುಪಡಿ ವಿಧೇಯಕವನ್ನು ಬೆಂಬಲಿಸಿದ್ದರೂ ರಾಜ್ಯಸಭೆಯಲ್ಲಿ ಸಬಾತ್ಯಾಗ ಮಾಡುವ ಮೂಲಕ ತನ್ನ ಆಕ್ಷೇಪ ವ್ಯಕ್ತಪಡಿಸಿ ಇಬ್ಬಗೆಯ ಧೋರಣೆ ತೋರಿಸಿತ್ತು.
ಇದು ಸಹಜವಾಗಿಯೇ ಮರಾಠಿಗರಲ್ಲಿ, ಅದರಲ್ಲೂ ಮುಖ್ಯವಾಗಿ ಶಿವಸೇನಾ ಕಾರ್ಯಕರ್ತರಲ್ಲಿ ಪಕ್ಷದ ಮುಖ್ಯಸ್ಥ ಬಾಳಾ ಠಾಕ್ರೆ ಮೇಲೆ ಆಕ್ರೋಶ ತಂದಿದೆ. ಏಕೆಂದರೆ, ಮರಾಠಿಗರು ಬಿಜೆಪಿಯವರಿಗಿಂತಲೂ ಕಟ್ಟರ್ ಹಿಂದುತ್ವವಾದಿಗಳು. ಅಷ್ಟೇ ಅಲ್ಲ, ಶಿವಸೇನಾ ಜನ್ಮತಾಳಿದ್ದೇ ಮರಾಠಿ ಭಾಷಿಕರಿಗೋಸ್ಕರ. ರಾಷ್ಟ್ರದ ಬೇರೆ ಬೇರೆ ಭಾಗಗಳಿಂದ ವಲಸೆ ಹೆಚ್ಚಾಗುತ್ತಿರುವ ಕಾರಣದಿಂದ ಮರಾಠಿ ಭಾಷೆಗೆ ಕುತ್ತಾಗುತ್ತದೆ. ಈ ವಲಸೆ ವಿರುದ್ಧ ಹೋರಾಟಕ್ಕಾಗಿಯೇ ಬಾಳ್ ಠಾಕ್ರೆ ಅವರು ಶಿವಸೇನಾ ಆರಂಭಿಸಿದ್ದರು. ಇದರ ಪರಿಣಾಮ ಸಾವಿರಾರು ಕುಟುಂಬಗಳು ಮಹಾರಾಷ್ಟ್ರ ತೊರೆಯುವಂತಾಯಿತು. ಅಂತಹ ಮಹಾರಾಷ್ಟ್ರದಲ್ಲಿ ಪಾಕಿಸ್ತಾನ, ಬಾಂಗ್ಲಾದೇಶದಿಂದ ಬಂದಿದ್ದ ಮುಸ್ಲಿಮರು ಈಗಲೂ ಇದ್ದಾರೆ. ಅವರ ವಿರುದ್ಧವೇ ಶಿವಸೇನಾ ಹೋರಾಡುತ್ತಿದೆ.
ಈ ರೀತಿ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಪ್ಘಾನಿಸ್ತಾನದಿಂದ ಬರುವ ಮುಸ್ಲಿಮೇತರರಿಗೆ ಮಾತ್ರ ಪೌರತ್ವ ನೀಡುವ ಕಾಯ್ದೆಯನ್ನು ಶಿವಸೇನಾ ನಾಯಕರು ವಿರೋಧಿಸಿದರೂ ಕಾರ್ಯಕರ್ತರು ಬೆಂಬಲಿಸುತ್ತಾರೆ. ಅದಕ್ಕೆ ಮುಖ್ಯ ಕಾರಣ ಹಿಂದುತ್ವ. ಜತೆಗೆ ಅನ್ಯ ರಾಜ್ಯದವರೇ ನಮ್ಮಲ್ಲಿ ಬರಬಾರದು ಎನ್ನುವವರು ಅನ್ಯ ರಾಷ್ಟ್ರದವರನ್ನು ಒಪ್ಪಿಕೊಳ್ಳಲು ಸಾಧ್ಯವೇ? ಪೌರತ್ವ ಕಾಯ್ದೆಯನ್ನು ಬೆಂಬಲಿಸಿದರೆ ಮತ್ತು ವೀರ್ ಸಾವರ್ಕರ್ ಅವರನ್ನು ಅವಹೇಳನ ಮಾಡಿದ ರಾಹುಲ್ ಗಾಂಧಿ ಅವರನ್ನು ಹೆಚ್ಚು ವಿರೋಧಿಸಿದರೆ ಅಧಿಕಾರದಿಂದ ಕೆಳಗಿಳಿಯುವ ಪರಿಸ್ಥಿತಿ ಬರಬಹುದು.
ಈ ಅಂಶವೇ ಉದ್ಧವ್ ಠಾಕ್ರೆ ಅವರಿಗೆ ಮರಾಠಿಗರ ಬಗ್ಗೆ ಭಯ ಉಂಟಾಗುವಂತೆ ಮಾಡಿದೆ. ಹೇಗಾದರೂ ಮಾಡಿ ಬಹಬುಸಂಖ್ಯಾತ ಮರಾಠಿಗರಲ್ಲಿ ತಮ್ಮ ಮೇಲಿರುವ ಆಕ್ರೋಶ ಕಡಿಮೆ ಮಾಡಬೇಕಾದ ಪರಿಸ್ಥಿತಿ ಉದ್ಭವವಾಗಿದೆ. ಆಗ ನೆನಪಾಗಿದ್ದೇ ಗಡಿ ವಿವಾದ. ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂಬುದು ಮರಾಠಿಗರ ಅನೇಕ ದಶಕಗಳ ಬೇಡಿಕೆ. ಈ ಬೇಡಿಕೆಗೆ ಬೆಂಬಲ ವ್ಯಕ್ತಪಡಿಸಿದರೆ ಮರಾಠಿಗರು ಸ್ವಲ್ಪ ಮಟ್ಟಿಗೆ ಸಮಾಧಾನಪಟ್ಟುಕೊಳ್ಳಬಹುದು ಎಂಬ ಕಾರಣಕ್ಕಾಗಿಯೇ ದೇವೇಂದ್ರ ಫಡ್ನವಿಸ್ ಅವರಿಗೆ ಉತ್ತರಿಸುವ ವೇಳೆ ಬೆಳಗಾವಿ, ನಿಪ್ಪಾಣಿ ಮತ್ತು ಕಾರವಾರಗಳನ್ನು ಕರ್ನಾಟಕ ಆಕ್ರಮಿತ ಮಹಾರಾಷ್ಟ್ರ ಎಂದು ಹೇಳಿದ್ದಾರೆ. ಇದನ್ನು ಹೊರತುಪಡಿಸಿ ಈ ಹೇಳಿಕೆ ಹಿಂದೆ ಬೇರೆ ಯಾವ ಉದ್ದೇಶವೂ ಇಲ್ಲ.