ಬೆಂಗಳೂರಿನ ಮಾರತ್ತಹಳ್ಳಿ ಬಳಿ ಇರುವ ವಲಸಿಗ ಕಾರ್ಮಿಕರ ಗುಡಿಸಲುಗಳನ್ನು ತೆರವುಗೊಳಿಸುವ ಬಿಬಿಎಂಪಿಯ ಕಾರ್ಯಾಚರಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ವಲಸೆ ಬಂದು ಇಲ್ಲಿ ನೆಲೆಸಿರುವ ನಿವಾಸಿಗಳಿಗೆ ಸಂಬಂಧಿಸಿದಂತೆ ವಿವರವಾದ ವರದಿಯನ್ನು ನೀಡುವಂತೆ ನ್ಯಾಯಾಲಯ ಬಿಬಿಎಂಪಿಗೆ ನಿರ್ದೇಶನ ನೀಡಿದೆ.
ಇಲ್ಲಿನ ನಿವಾಸಿಗಳು ಬಾಂಗ್ಲಾದೇಶಿ ವಲಸಿಗರು ಎಂಬ ಅನುಮಾನದಿಂದ ಬಿಬಿಎಂಪಿ ನಗರ ಪೊಲೀಸರ ಭದ್ರತೆಯಲ್ಲಿ ಗುಡಿಸಲುಗಳನ್ನು ತೆರವುಗೊಳಿಸಲು ಮುಂದಾಗಿತ್ತು. ಬುಧವಾರ ಕೆಲವು ಗುಡಿಸಲುಗಳನ್ನು ತೆರವುಗೊಳಿಸಿತ್ತು. ಇದನ್ನು ಪ್ರಶ್ನಿಸಿ ನಿವಾಸಿಗಳು ನ್ಯಾಯಾಲಯದ ಮೆಟ್ಟಿಲೇರಿದ್ದರು.
ಅರ್ಜಿ ವಿಚಾರಣೆ ನಡೆಸಿದ ಮುಖ್ಯನ್ಯಾಯಾಧೀಶರಾದ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾ.ಹೇಮಂತ್ ಚಂದನಗೌಡರ್ ನೇತೃತ್ವದ ವಿಭಾಗೀಯ ಪೀಠವು, ನಿವಾಸಿಗಳು ಬಾಂಗ್ಲಾವಲಸಿಗರು ಎಂಬುದಕ್ಕೆ ನಿಮ್ಮ ಬಳಿ ಏನು ಆಧಾರವಿದೆ? ಎಂದು ಬಿಬಿಎಂಪಿಯನ್ನು ಪ್ರಶ್ನಿಸಿತು.
ಇಲ್ಲಿನ ಗುಡಿಸಲು ಮತ್ತು ಮನೆಗಳನ್ನು ಯಾವ ಆಧಾರದಲ್ಲಿ ತೆರವುಗೊಳಿಸಲು ಮುಂದಾಗಿದೆ ಎಂಬುದರ ಬಗ್ಗೆ ಸವಿವರವಾದ ವರದಿಯನ್ನು ನೀಡುವಂತೆ ಬಿಬಿಎಂಪಿ ಮತ್ತು ಪೊಲೀಸ್ ಇಲಾಖೆಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಈ ನೆಲಸಮ ಕಾರ್ಯಾಚರಣೆಯನ್ನು ಯಾವ ಏಜೆನ್ಸಿ ಕೈಗೊಳ್ಳುತ್ತಿದೆ ಎಂದು ಹೈಕೋರ್ಟ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಬಿಬಿಎಂಪಿ ಪರ ವಕೀಲರು, ಬಿಬಿಎಂಪಿ ಈ ಕಾರ್ಯಾಚರಣೆಯನ್ನು ನಡೆಸುತ್ತಿಲ್ಲ ಎಂದು ತಿಳಿಸಿದರು. ಈ ಹಿನ್ನೆಲೆಯಲ್ಲಿ ಯಾರು ನೆಲಸಮ ಕಾರ್ಯಾಚರಣೆ ನಡೆಸುತ್ತಿದ್ದಾರೆ, ಇದಕ್ಕೆ ಹೇಗೆ ಜವಾಬ್ದಾರರು ಎಂಬುದರ ಬಗ್ಗೆ ತನಿಖೆ ನಡೆಸಲು ಪೊಲೀಸ್ ಆಯುಕ್ತರಿಗೆ ಆದೇಶ ನೀಡಿತು.
ನಿವಾಸಿಗಳ ಪರವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (ಪಿಯುಸಿಎಲ್) ಇಲ್ಲಿ ವಾಸವಾಗಿರುವವರೆಲ್ಲಾ ಕಡುಬಡವರಾಗಿದ್ದಾರೆ. ಉದ್ಯೋಗವನ್ನು ಅರಸಿಕೊಂಡು ರಾಜ್ಯದ ವಿವಿಧ ಭಾಗಗಳಿಂದ ಬಂದು ಇಲ್ಲಿ ಕಳೆದ 5-10 ವರ್ಷಗಳಿಂದ ಜೀವನ ಸಾಗಿಸುತ್ತಿದ್ದಾರೆ ಎಂದು ನ್ಯಾಯಾಲಯದ ಗಮನಕ್ಕೆ ತಂದಿತು.
ಇಂತಹ ದೊಡ್ಡ ಮಟ್ಟದ ತೆರವು ಕಾರ್ಯಾಚರಣೆ ಮಾಡುತ್ತಿರುವುದರಿಂದ ಇಲ್ಲಿನ ನಿವಾಸಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಬಗ್ಗೆ ಬಿಬಿಎಂಪಿ ಯಾವುದೇ ಭರವಸೆ ನೀಡಿಲ್ಲ. ಆದರೆ, ನಿವಾಸಿಗಳು ಸ್ವಯಂಪ್ರೇರಣೆಯಿಂದ ಜಾಗವನ್ನು ತೆರವುಗೊಳಿಸಬೇಕು. ಇಲ್ಲವಾದರೆ ಬಲವಂತವಾಗಿ ತೆರವುಗೊಳಿಸಲಾಗುವುದು ಎಂದು ಎಚ್ಚರಿಕೆಯನ್ನು ನೀಡಿದೆ ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ತಿಳಿಸಿದರು.
ಈ ಬಗ್ಗೆ ವಿಚಾರಣೆ ನಡೆಸಿದ ವಿಭಾಗೀಯ ಪೀಠ ಮುಂದಿನ ಆದೇಶದವರೆಗೆ ತೆರವು ಕಾರ್ಯಾಚರಣೆ ನಡೆಸುವಂತಿಲ್ಲ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿ ವಿಚಾರಣೆಯನ್ನು ಮುಂದೂಡಿತು.