ಸರಿಯಾಗಿ ಒಂದೂವರೆ ತಿಂಗಳ ಹಿಂದೆ ಚೀನಾದ ವುಹಾನ್ ಪಟ್ಟಣದಲ್ಲಿ ಕಾಣಿಸಿಕೊಂಡಿದ್ದ ಕೊರೋನ ಎಂಬ ಮಾರಣಾಂತಿಕ ವೈರಸ್ ಇದೀಗ ಇಡೀ ಜಗತ್ತನ್ನೇ ಬೆದರಿಸುತ್ತಿದೆ. ವುಹಾನ್ ಪಟ್ಟಣದಲ್ಲಿ ಮಾತ್ರ ಸುಮಾರು 20 ಸಾವಿರಕ್ಕೂ ಅಧಿಕ ಜನರಲ್ಲಿ ಈ ವೈರಸ್ ಕಾಣಿಸಿಕೊಂಡಿದೆ. ಈಗಾಗಲೇ ಸಾವಿನ ಸಂಖ್ಯೆ 2650ನ್ನೂ ಮೀರಿದೆ. ಹೀಗಾಗಿ ಈ ವೈರಸ್ ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಮನೆಯಿಂದ ಯಾರೂ ಹೊರಗಡೆ ಬಾರದಂತೆ ಚೀನಾ ಸರ್ಕಾರ ಅಧಿಕೃತ ಘೋಷಣೆ ಹೊರಡಿಸಿದೆ. ಪರಿಣಾಮ 4 ಮಿಲಿಯನ್ ಜನ ವಾಸಿಸುವ ವುಹಾನ್ ಪಟ್ಟಣ ಅಕ್ಷರಶಃ ಜನರಿಲ್ಲದೆ ಸ್ಮಶಾನದಂತೆ ಬಣಗುಡುತ್ತಿದೆ.
ಚೀನಾ ದೇಶದ ಪ್ರಯಾಣಿಕರು ಯಾವುದೇ ದೇಶಕ್ಕೆ ತೆರಳಿದರೂ ಅವರನ್ನು ಸಂಪೂರ್ಣ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಭಾರತದಲ್ಲೂ ಕೆಲವರಿಗೆ ಈ ವೈರಸ್ ಹರಿಡಿರುವ ಶಂಕೆ ಇದೆ. ಉಸಿರಾಟದ ಮೂಲಕ ಒಬ್ಬರಿಂದ ಒಬ್ಬರಿಗೆ ಹರಡುವ ಈ ವೈರಸ್ ಒಮ್ಮೆ ರಕ್ತದ ಜೊತೆ ಬೆರೆತರೆ ಜ್ವರ ವಿಪರೀತಕ್ಕೆ ಏರುತ್ತದೆ. ಕೇವಲ ಮೂರು ದಿನದಲ್ಲಿ ಸಾವನ್ನೂ ತರಬರಲ್ಲದು ಈ ವೈರಸ್.
ಕಳೆದ ಒಂದು ಶತಮಾನದಿಂದ ಈ ಜಗತ್ತಿಗೆ ಹತ್ತಾರು ವೈರಸ್‌ಗಳು ಬೆದರಿಕೆ ಒಡ್ಡುತ್ತಲೇ ಇವೆ. ಅದರಲ್ಲೂ ಕಳೆದ ಒಂದು ದಶಕದಲ್ಲಿ ಕಾಣಿಸಿಕೊಂಡಿರುವ ಕೆಲವು ವೈರಸ್ಗಳು ಜಗತ್ತು ಕಂಡ ಮಾರಣಾಂತಿಕ ಹಾಗೂ ಅಷ್ಟೇ ಅಪಾಯಕಾರಿ ಎಂಬುದರಲ್ಲಿ ಎರಡು ಮಾತಿಲ್ಲ. ಕಳೆದ ವರ್ಷ ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡ ನೀಫಾ ವೈರಸ್ ಸಾವಿರಾರು ಜನರ ಪ್ರಾಣವನ್ನು ಕಸಿದಿತ್ತು. ಇನ್ನೂ ಇದಕ್ಕೂ ಮುನ್ನ ಚೀನಾದಲ್ಲೇ ಕಾಣಿಸಿಕೊಂಡಿದ್ದ ಸಾರ್ಸ್ ವೈರಸ್ ಸಹ ದೊಡ್ಡ ಮಟ್ಟದಲ್ಲಿ ಆತಂಕ ಸೃಷ್ಟಿಸಿತ್ತು. ಇದರ ಬೆನ್ನಿಗೆ ಕಾಣಿಸಿಕೊಂಡಿರುವ ಕೊರೋನಾ ವೈರಸ್ ಇದೀಗ ಮತ್ತಷ್ಟು ಸಾವಿಗೆ ಕಾರಣವಾಗಲಿದೆ ಎನ್ನಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಜಗತ್ತಿನ ಟಾಪ್ 05 ಮಾರಣಾಂತಿಕ ವೈರಸ್‌ಗಳು ಯಾವುವು? ಅವು ಮೊದಲು ಎಲ್ಲಿ ಕಾಣಿಸಿಕೊಂಡವು? ಈ ಅಪಾಯಕಾರಿ ವೈರಸ್ಗಳು ಹೇಗೆ ಸೃಷ್ಟಿಯಾದವು? ಮತ್ತು ಇವುಗಳಿಂದಾದ ಸಾವಿನ ಸಂಖ್ಯೆ ಎಷ್ಟು? ಇಲ್ಲಿದೆ ಸಂಪೂರ್ಣ ಮಾಹಿತಿ.
1. ಮಾರ್ಬರ್ಗ್ ವೈರಸ್:
ಜರ್ಮನ್ ದೇಶದಲ್ಲಿ 1967 ರಲ್ಲಿ ಕಾಣಿಸಿಕೊಂಡ ಈ ಮಾರಣಾಂತಿಕ ವೈರಸ್ ಮೂಲ ಮಂಗ. ಮಂಗನಿಂದ ಹರಡುವ ಈ ವೈರಸ್ ದೇಹದಲ್ಲಿ ಕಾಣಿಸಿಕೊಂಡರೆ ತೀವ್ರ ಜ್ವರ ಕಾಣಿಸಿಕೊಳ್ಳುತ್ತದೆ, ದೇಹದ ಚರ್ಮಗಳು ಲೋಳೆಯಂತೆ ಬದಲಾಗಿ ವಿಪರೀತ ರಕ್ತಸ್ರಾವವಾಗುತ್ತದೆ. ಕೊನೆಗೆ ರಕ್ತಸ್ರಾವ ಅಧಿಕವಾಗಿ ಕೇವಲ ಒಂದು ದಿನದಲ್ಲಿ ಸಾವು ಸಂಭವಿಸುತ್ತದೆ.
ಈ ವೈರಸ್ ಆ ಕಾಲದಲ್ಲಿ ಇಡೀ ಜಗತ್ತನ್ನೇ ಆತಂಕಕ್ಕೆ ದೂಡಿತ್ತು. ವಿಶ್ವವನ್ನು ಆತಂಕಕ್ಕೆ ದೂಡಿದ್ದ ಮೊದಲ ವೈರಸ್ ಎಂಬ ಕುಖ್ಯಾತಿ ಇದಕ್ಕಿದೆ. ಇದನ್ನು ಪತ್ತೆ ಹಚ್ಚುವುದು ವಿಜ್ಞಾನಿಗಳಿಗೆ ಸವಾಲಿನ ಕೆಲಸವಾಗಿತ್ತು. ಕೊನೆಗೂ ಇದಕ್ಕೆ ಔಷಧ ಕಂಡುಹಿಡಿಯುವಲ್ಲಿ ವಿಜ್ಞಾನಿಗಳು ಸಫಲವಾಗಿದ್ದರು. ಆದರೆ, ಅಷ್ಟೊತ್ತಿಗಾಗಲೆ ಈ ವೈರಸ್ 20 ದೇಶದಲ್ಲಿ ಸುಮಾರು 10 ಸಾವಿರ ಜನರನ್ನು ಸಾವಿನ ದವಡೆಗೆ ನೂಕಿತ್ತು. ಈ ವೈರಸ್ ಒಮ್ಮೆ ದೇಹದಲ್ಲಿ ಕಾಣಿಸಿಕೊಂಡರೆ ಸಾವಿನ ಸಾಧ್ಯತೆ ಶೇ.90 ರಷ್ಟು ಖಚಿತ.
2. ಎಬೋಲಾ ವೈರಸ್:
2017-18ರಲ್ಲಿ ಇಡೀ ಜಗತ್ತನ್ನೇ ಕೆಟ್ಟ ಕನಸಂತೆ ಕಾಡಿದ್ದ ಎಬೋಲಾ ವೈರಸ್ ಮೂಲ ದಕ್ಷಿಣ ಆಫ್ರಿಕಾ. ಈ ವೈರಸ್ನಲ್ಲಿ ಐದು ತಳಿಗಳಿವೆ. ಪ್ರತಿಯೊಂದು ತಳಿಗೂ ವಿಜ್ಞಾನಿಗಳು ಝೈರಾ, ಸೂಡಾನ್, ತೈ ಫಾರೆಸ್ಟ್, ಬುಂಡಿಬುಂಗ್ಯೋ ಮತ್ತು ರೆಸ್ಟೋನ್ ಎಂದು ಆಫ್ರಿಕಾ ದೇಶದ ಹೆಸರನ್ನೇ ಇಟ್ಟಿದ್ದಾರೆ.
ನರಿ ಮತ್ತು ಬಾವಲಿಗಳ ಮೂಲಕ ಹರಡುವ ಈ ವೈರಸ್ ಅನ್ನು 1976ರಲ್ಲೇ ಪತ್ತೆ ಹಚ್ಚಲಾಗಿತ್ತು. ಈ ವೈರಸ್ ಒಮ್ಮೆ ದೇಹದಲ್ಲಿ ಕಾಣಿಸಿಕೊಂಡರೆ ದೇಹದ ಒಳಗೆ ಮತ್ತು ಹೊರಗೆ ವಿಪರೀತ ರಕ್ತಸ್ರಾವವಾಗಿ ಆ ಮೂಲಕ ಸಾವು ಸಂಭವಿಸುತ್ತದೆ. ಈ ವೈರಸ್ ಕೂಡ ಶೇ.90 ರಷ್ಟು ಸಾವನ್ನು ತರಬಲ್ಲದು.
ವಿಶ್ವ ಆರೋಗ್ಯ ಸಂಸ್ಥೆ ನೀಡುವ ವರದಿಯ ಪ್ರಕಾರ 1976 ರಿಂದ 2016ರ ವರೆಗೆ ವಿಶ್ವದಾದ್ಯಂತ ಸುಮಾರು 28,646 ಜನರು ಈ ಸೋಂಕಿಗೆ ಒಳಗಾಗಿದ್ದಾರೆ. ಈ ಪೈಕಿ 11,323 ಜನ ಸಾವನ್ನಪ್ಪಿದ್ದಾರೆ. 2017-10ರಲ್ಲಿ ಮಾತ್ರ ಸುಮಾರು 1,590 ಜನ ಈ ವೈರಸ್ಗೆ ಬಲಿಯಾಗಿದ್ದಾರೆ. 2018ರಲ್ಲಿ ಕೇರಳದಲ್ಲೂ ಸಹ ಈ ವೈರಸ್ ಕಂಡು ಬಂದಿತ್ತು ಎಂಬುದು ಉಲ್ಲೇಖಾರ್ಹ.
3. ದಿ ಹಂಟಾ ವೈರಸ್ :
ಇಲಿಗಳಿಂದ ಹರಡುವ ಈ ವೈರಸ್ 1950ರಲ್ಲಿ ಕೊರಿಯನ್ ಯುದ್ಧದ ಸಂದರ್ಭದಲ್ಲಿ ಅಮೆರಿಕದ ಸೈನಿಕರಲ್ಲಿ ಮೊದಲು ಕಾಣಿಸಿಕೊಂಡಿತ್ತು. ನಂತರ ಸುಮಾರು 25 ದೇಶಗಳಿಗೆ ಹರಡಿದ ಈ ವೈರಸ್ ಕನಿಷ್ಟ 7 ಸಾವಿರ ಜನರ ಸಾವಿಗೆ ಕಾರಣವಾಗಿತ್ತು.
ಒಮ್ಮೆ ಈ ಸೋಂಕು ಕಾಣಿಸಿಕೊಂಡರೆ ಜ್ವರ, ಶ್ವಾಸಕೋಶದ ಖಾಯಿಲೆ ಕಾಣಿಸಿಕೊಳ್ಳುತ್ತದೆ. ಜ್ವರ ಸಂಭವಿಸಿದ ಕೇವಲ ಮೂರು ದಿನಕ್ಕೆ ಮೂತ್ರಪಿಂಡ ವೈಫಲ್ಯವಾಗಿ ಕೊನೆಗೆ ಸಾವು ಸಂಭವಿಸುತ್ತದೆ. ಈ ವೈರಸ್ ಸಹ ಶೇ.90 ರಷ್ಟು ಸಾವು ತರಬಲ್ಲವು.
4. ಹೆಚ್1ಎನ್1 ಹಂದಿ ಜ್ವರ:
21ನೇ ಶತಮಾನದ ಮೊದಲ ದಶಕದಲ್ಲೇ ಇಡೀ ಮನುಕುಲವನ್ನು ಭೂತದಂತೆ ಕಾಡಿದ ವೈರಸ್ ಹೆಚ್1ಎನ್1 ಹಂದಿ ಜ್ವರ. ಒಮ್ಮೆ ಈ ಸೋಂಕು ದೇಹದಲ್ಲಿ ಕಾಣಿಸಿಕೊಂಡರೆ ಸಾವು ಖಚಿತ ಎನ್ನಲಾಗುತ್ತದೆ. ವಿಪರೀತ ಜ್ವರಕ್ಕೆ ಕಾರಣವಾಗುವ ಈ ಸೋಂಕು ಉಸಿರಾಟಕ್ಕೂ ತೊಂದರೆ ನೀಡುವ ಮೂಲಕ ಕೊನೆಗೆ ಸಾವಿಗೂ ಕಾರಣವಾಗುತ್ತದೆ.
ಹಂದಿಗಳಿಂದ ಹರಡುವ ಈ ವೈರಸ್ 2009ರಲ್ಲಿ ಮೆಕ್ಸಿಕೋ ನಗರದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿತ್ತು. ನಂತರ ಇಡೀ ವಿಶ್ವದಾದ್ಯಂತ ಸಾಂಕ್ರಾಮಿಕ ರೋಗದಂತೆ ಹರಡಿದ ಈ ವೈರಸ್ ಕಳೆದ ಒಂದು ದಶಕದಲ್ಲಿ ಕನಿಷ್ಟ 5,75,400 ಜನರ ಸಾವಿಗೆ ಕಾರಣವಾಗಿದೆ.
2010ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಹೆಚ್1ಎನ್1 ವೈರಸ್ ಅನ್ನು ಮಾರಣಾಂತಿಕ ವೈರಸ್ ಎಂದು ಅಧಿಕೃತವಾಗಿ ಘೋಶಿಸಿದೆ. ಕೇವಲ ಈ ಒಂದು ವರ್ಷದಲ್ಲೇ ಈ ವೈರಸ್ ವಿಶ್ವದಾದ್ಯಂತ ತುರ್ತು ಪರಿಸ್ಥಿತಿಯನ್ನು ಸೃಷ್ಟಿಸಿತ್ತು. ಈ ವೈರಸ್ ತಡೆಗಟ್ಟುವುದು ವಿಶ್ವಸಂಸ್ಥೆಗೆ ಸವಾಲಿನ ಕೆಲಸವಾಗಿತ್ತು.
2010 ಮತ್ತು 2015ರಲ್ಲಿ ಈ ಸೋಂಕು ಭಾರತದಲ್ಲೂ ಕಾಣಿಸಿಕೊಂಡಿತ್ತು. 2010ರಲ್ಲಿ ದೇಶದ 44,987 ಜನರಲ್ಲಿ ಈ ಕಾಣಿಸಿಕೊಂಡು ಸುಮಾರು 2728ರನ್ನು ಬಲಿ ಪಡೆದಿತ್ತು, 2015ರಲ್ಲಿ 10,000 ಜನರಲ್ಲಿ ಕಾಣಿಸಿಕೊಂಡ ಸೋಂಕು ಸುಮಾರು 660 ಜನರನ್ನು ಬಲಿ ಪಡೆದಿತ್ತು. ಈ ಸೋಂಕು ಅಕಾಲಿಕವಾಗಿದ್ದು, ಮತ್ತೆ ಯಾವುದೇ ಸಂದರ್ಭದಲ್ಲಿ ಹರಡಬಹುದು ಎನ್ನಲಾಗುತ್ತದೆ. ಅಲ್ಲದೆ, ಮನುಕುದ ಇತಿಹಾಸದಲ್ಲೇ ಅತಿ ಹೆಚ್ಚು ಬಲಿ ಪಡೆದ ವೈರಸ್ ಎಂಬ ಕುಖ್ಯಾತಿಗೂ ಇದು ಪಾತ್ರವಾಗಿದೆ.
5. ಡೆಂಗ್ಯೂ ವೈರಸ್:
ಮೇಲೆ ನೋಡಿದ ವೈರಸ್‌ಗಳ ಬೆದರಿಕೆ ಒಂದು ಪ್ರಮಾಣದ್ದಾದರೆ ಡೆಂಗ್ಯೂ ವೈರಸ್ ಒಡ್ಡುವ ಬೆದರಿಕೆ ಮತ್ತೊಂದು ತೂಕದ್ದು. ಏಕೆಂದರೆ ಈ ಎಲ್ಲಾ ವೈರಸ್ ಕೆಲವೊಂದು ಋತುವಿನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತವೆ. ಆದರೆ, ಎಲ್ಲಾ ಋತುವಿನಲ್ಲೂ ಕಾಣಿಸಿಕೊಳ್ಳುವ ಏಕೈಕ ವೈರಸ್ ಡೆಂಗ್ಯೂ.
ಭಾರತ, ಥಾಯ್ಲೆಂಡ್‌ನಂತದ ದಕ್ಷಿಣಾ ಏಷ್ಯಾದ ಉಷ್ಣ ವಲಯ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುವ ಈ ವೈರಸ್ ಸೊಳ್ಳೆಗಳ ಮೂಲಕ ಹರಡುತ್ತದೆ. ವಿಶ್ವದ 2 ಬಿಲಿಯನ್ ಜನ ಡೆಂಗ್ಯೂ ಪೀಡಿತ ಪ್ರದೇಶದಲ್ಲಿ ಬದುಕುತ್ತಿದ್ದಾರೆ ಎಂದು 2019 ನವೆಂಬರ್ ನಲ್ಲಿ ವಿಶ್ವ ಆರೋಗ್ಯ ಸಂಸ್ಥೆ ವರದಿ ನೀಡಿದೆ. ಅಲ್ಲದೆ, ಇದೇ ವರದಿಯ ಪ್ರಕಾರ ವಿಶ್ವದಲ್ಲಿ ಪ್ರತಿವರ್ಷ ಸುಮಾರು 5,00,00 ಜನ ಈ ವೈರಸ್‌ಗೆ ತುತ್ತಾಗುತ್ತಿದ್ದಾರೆ. ಈ ಪೈಕಿ ಸುಮಾರು 90,000 ಜನ ಸಾವನ್ನಪ್ಪುತ್ತಿದ್ದಾರೆ.
ಇಡೀ ವಿಶ್ವದಲ್ಲೇ ಡೆಂಗ್ಯೂ ಜ್ವರಕ್ಕೆ ಅತಿಹೆಚ್ಚು ಜನ ಸಾವನ್ನಪ್ಪುವ ದೇಶ ಎಂಬ ಕುಖ್ಯಾತಿಗೆ ಭಾರತ ಪಾತ್ರವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ನೀಡುವ ವರದಿಯ ಪ್ರಕಾರ ಭಾರತದಲ್ಲಿ ಪ್ರತಿವರ್ಷ ಕನಿಷ್ಟ 10,000 ಜನ ಮಾರಣಾಂತಿಕ ಡೆಂಗ್ಯೂ ಖಾಯಿಲೆಗೆ ಬಲಿಯಾಗುತ್ತಿದ್ದಾರೆ.
ಇದು ಜಗತ್ತಿನಲ್ಲಿ ಅತಿಹೆಚ್ಚು ಜನರನ್ನು ಬಲಿ ಪಡೆಯುತ್ತಿರುವ ಟಾಪ್5 ವೈರಸ್‌ಗಳ ಪಟ್ಟಿ ಅಷ್ಟೇ. ಇನ್ನೂ ಕರೋನಾ ವೈರಸ್‌ನಂತೆ ಹಕ್ಕಿ ಜ್ವರ, ಸಾರ್ಸ್ ವೈರಸ್, ಮಚುಪೋ ವೈರಸ್, ಲಾಸ್ಸಾ ವೈರಸ್ ಎಂಬ ಹತ್ತಾರು ಮಾರಣಾಂತಿಕ ವೈರಸ್‌ಗಳು ಆಗಿಂದಾಗ್ಗೆ ವಿಶ್ವದ ಅಲ್ಲಲ್ಲಿ ಕಾಣಿಸಿಕೊಂಡು ಜನರನ್ನು ಬಲಿ ಪಡೆಯುತ್ತಲೇ ಇವೆ. ಇವುಗಳಿಗೆ ಬಲಿಯಾಗುವ ಸಾವಿನ ಸಂಖ್ಯೆಯೂ ಕಡಿಮೆ ಏನಲ್ಲ.