ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯ ಸಿಕ್ಕಿತು ಎನ್ನುವಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೆ (ಕೆಪಿಸಿಸಿ) ಅಧ್ಯಕ್ಷರ ನೇಮಕವಾಗಿದೆ. ನಿರೀಕ್ಷೆಯಂತೆ ಕಾಂಗ್ರೆಸ್ ಪಾಲಿನ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಅವರನ್ನು ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಅಲ್ಲದೆ, ಹಾಲಿ ಕಾರ್ಯಾಧ್ಯಕ್ಷರಾಗಿರುವ ಈಶ್ವರ್ ಖಂಡ್ರೆ ಅವರನ್ನು ಮುಂದುವರಿಸುವುದರ ಜತೆಗೆ ಸತೀಶ್ ಜಾರಕಿಹೊಳಿ ಮತ್ತು ಸಲೀಂ ಅಹಮ್ಮದ್ ಅವರನ್ನೂ ಕಾರ್ಯಾಧ್ಯಕ್ಷರಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಜತೆಗೆ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಸಿದ್ದರಾಮಯ್ಯ ನೀಡಿದ್ದ ರಾಜೀನಾಮೆಯನ್ನು ತಿರಸ್ಕರಿಸಿ ಪ್ರತಿಪಕ್ಷ ನಾಯಕ ಸ್ಥಾನದ ಜತೆಗೆ ಶಾಸಕಾಂಗ ಪಕ್ಷದ ನಾಯಕ ಸ್ಥಾನದಲ್ಲೂ ಅವರನ್ನು ಮುಂದುವರಿಸಲಾಗಿದೆ. ಇದರೊಂದಿಗೆ ಕೆಪಿಸಿಸಿ ಅಧ್ಯಕ್ಷರು ಮತ್ತು ಕಾರ್ಯಾಧ್ಯಕ್ಷರ ನೇಮಕ, ಶಾಸಕಾಂಗ ಪಕ್ಷ ಮತ್ತು ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಸಂಬಂಧಿಸಿದಂತೆ ಸರಿ ಸುಮಾರು ನಾಲ್ಕು ತಿಂಗಳ ಹಗ್ಗ ಜಗ್ಗಾಟಕ್ಕೆ ತೆರೆ ಬಿದ್ದಿದೆ.
ಎರಡು ಬಾರಿ ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಕೊನೇ ಕ್ಷಣದಲ್ಲಿ ವಂಚಿತರಾಗಿದ್ದ ಡಿ.ಕೆ.ಶಿವಕುಮಾರ್ ಅವರನ್ನು ಮೂರನೇ ಪ್ರಯತ್ನದಲ್ಲಿ ನೇಮಿಸುವ ಮೂಲಕ ಅವರ ಪಕ್ಷ ನಿಷ್ಠೆಗೆ ಸೂಕ್ತ ಉಡುಗೊರೆ ನೀಡಿದೆ. ಜತೆಗೆ ಪಕ್ಷದಲ್ಲಿ ಸಿದ್ದರಾಮಯ್ಯ ಅವರನ್ನು ಕಡೆಗಣಿಸಿದರೆ ಸಮಸ್ಯೆ ಎದುರಿಸಬೇಕಾಗಿದೆ ಎಂಬುದನ್ನು ಮನಗಂಡು ಅವರನ್ನು ಶಾಸಕಾಂಗ ಪಕ್ಷ ಮತ್ತು ಪ್ರತಿಪಕ್ಷದ ನಾಯಕ ಸ್ಥಾನದಲ್ಲಿ ಮುಂದುವರಿಸುವ ಮೂಲಕ ಪಕ್ಷಕ್ಕೆ ಹೆಚ್ಚಿನ ಹಾನಿಯಾಗದಂತೆ ನೋಡಿಕೊಳ್ಳುವಲ್ಲಿ ಹೈಕಮಾಂಡ್ ಯಶಸ್ವಿಯಾಗಿದೆ. ಅಷ್ಟೇ ಅಲ್ಲದೆ, ಪಕ್ಷದಲ್ಲಿ ಸಿದ್ದರಾಮಯ್ಯ ಬಣ, ಹಿರಿಯ ಕಾಂಗ್ರೆಸ್ಸಿಗರ ಬಣ ಸೇರಿದಂತೆ ಯಾವುದೇ ಗುಂಪುಗಾರಿಕೆಗೆ ಅವಕಾಶ ಇಲ್ಲ ಎಂಬ ಸ್ಪಷ್ಟ ಸಂದೇಶವನ್ನೂ ಸಾರಿದೆ.
ರಾಜ್ಯ ಕಾಂಗ್ರೆಸ್ಸಿನಲ್ಲಿ ಸಾಕಷ್ಟು ಗುಂಪುಗಳಿದ್ದರೂ ಶಕ್ತಿಕೇಂದ್ರಗಳಿಂತಿರುವುದು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್. ಸಿದ್ದರಾಮಯ್ಯ ಈಗಾಗಲೇ ತಮ್ಮ ಶಕ್ತಿಯನ್ನು ಸಾಬೀತುಪಡಿಸಿದರೆ, ಶಿವಕುಮಾರ್ ಅವರಿಗೆ ಸಾಮರ್ಥ್ಯವಿದ್ದರೂ ಅದನ್ನು ತೋರಿಸಲು ಅವಕಾಶ ಸಿಕ್ಕಿರಲಿಲ್ಲ. ಇದೀಗ ಆ ಸಾಮರ್ಥ್ಯ ಸಾಬೀತುಪಡಿಸಲು ವರಿಷ್ಠರು ಅವಕಾಶ ಮಾಡಿಕೊಟ್ಟಿದ್ದಾರೆ. ಅದಕ್ಕೆ ಪೂರಕವಾಗಿ ಕಾರ್ಯಾಧ್ಯಕ್ಷರನ್ನು ನೇಮಕ ಮಾಡುವ ಸಂದರ್ಭದಲ್ಲಿ ಈಶ್ವರ್ ಖಂಡ್ರೆ ಅವರ ಜತೆಗೆ ಸತೀಶ್ ಜಾರಕಿಹೊಳಿ ಮತ್ತು ಸಲೀಂ ಅಹಮ್ಮದ್ ಅವರನ್ನು ನೇಮಿಸುವ ಮೂಲಕ ಜಾತಿ ಸಮೀಕರಣದ ಲೆಕ್ಕಾಚಾರದಲ್ಲೂ ಅಗತ್ಯ ತೀರ್ಮಾನಗಳನ್ನು ಕೈಗೊಂಡಿದೆ.

ನೂತನ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಒಕ್ಕಲಿಗ ಸಮುದಾಯಕ್ಕೆ ಸೇರಿದ್ದರೆ, ಕಾರ್ಯಾಧ್ಯಕ್ಷರಾಗಿರುವ ಈಶ್ವರ್ ಖಂಡ್ರೆ ವೀರಶೈವ ಲಿಂಗಾಯತ ಸಮುದಾಯ, ಸತೀಶ್ ಜಾರಕಿಹೊಳಿ ಪರಿಶಿಷ್ಟ ಪಂಗಡದ ವಾಲ್ಮೀಕಿ ಸಮುದಾಯ ಮತ್ತು ಸಲೀಂ ಅಹಮ್ಮದ್ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು. ಅದೇ ರೀತಿ ಹಿಂದುಳಿದ ವರ್ಗದ ಪರವಾಗಿ ಕುರುಬ ಸಮುದಾಯದ ಸಿದ್ದರಾಮಯ್ಯ ಅವರನ್ನು ಪ್ರತಿಪಕ್ಷ ನಾಯಕ ಮತ್ತು ಶಾಸಕಾಂಗ ಪಕ್ಷದ ನಾಯಕರಾಗಿ ಮುಂದುವರಿಸಿರುವುದರಿಂದ ಮುಂದುವರಿದ, ಹಿಂದುಳಿದ, ಪರಿಶಿಷ್ಟ ಮತ್ತು ಅಲ್ಪಸಂಖ್ಯಾತ ಸಮುದಾಯಗಳನ್ನು ಓಲೈಸುವ ಕೆಲಸ ಮಾಡಲಾಗಿದೆ. ಇದರ ಜತೆಗೆ ಎಂ. ನಾರಾಯಣಸ್ವಾಮಿ ಅವರನ್ನು ವಿಧಾನ ಪರಿಷತ್ ಕಾಂಗ್ರೆಸ್ಸಿನ ಮುಖ್ಯ ಸಚೇತಕ ಮತ್ತು ಮಾಜಿ ಮುಖ್ಯಮಂತ್ರಿ ದಿವಂಗತ ಧರಂ ಸಿಂಗ್ ಅವರ ಪುತ್ರ ಅಜಯ್ ಸಿಂಗ್ ಅವರನ್ನು ವಿಧಾನಸಭೆಯಲ್ಲಿ ಕಾಂಗ್ರೆಸ್ಸಿನ ಮುಖ್ಯ ಸಚೇತಕರಾಗಿ ನೇಮಕ ಮಾಡುವ ಮೂಲಕ ಎಲ್ಲಾ ವಿಭಾಗಗಳಿಗೂ ಅವಕಾಶ ಮಾಡಿಕೊಡುವ ಪ್ರಯತ್ನ ಮಾಡಿದೆ.
ದುರ್ಗಮ ಹಾದಿ ಸವೆಸಿ ಬಂದಿರುವ ಡಿ.ಕೆ.ಶಿವಕುಮಾರ್
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಗರಡಿಯಲ್ಲಿ ಪಳಗಿರುವ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಲು ದುರ್ಗಮ ಹಾದಿಯನ್ನೇ ಸವೆಸಿ ಬಂದಿದ್ದಾರೆ. ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ದೊಡ್ಡಆಲಹಳ್ಳಿ ಗ್ರಾಮದ ಶ್ರೀ ಕೆಂಪೇಗೌಡ ಹಾಗೂ ಶ್ರೀಮತಿ ಗೌರಮ್ಮದಂಪತಿಯ ಪ್ರಥಮ ಪುತ್ರ ಡಿ.ಕೆ. ಶಿವಕುಮಾರ್ ತಮ್ಮ 18ನೇ ವಯಸ್ಸಿನಲ್ಲೇ ಕಾಂಗ್ರೆಸ್ ವಿದ್ಯಾರ್ಥಿ ಘಟಕದಲ್ಲಿ ತೊಡಗಿಸಿಕೊಳ್ಳುವ ಮೂಲಕ ರಾಜಕೀಯವಾಗಿ ಬೆಳೆಯಲಾರಂಭಿಸಿದರು. ಶಾಸಕರಾಗಿ ಆಯ್ಕೆಯಾದ ಮೇಲೆ ಎಸ್.ಎಂ.ಕೃಷ್ಣ ಸರ್ಕಾರದಲ್ಲಿ ಸಚಿವರಾಗಿ ಅಧಿಕಾರ ರಾಜಕಾರಣದಲ್ಲೂ ಕೈಯಾಡಿಸಿದರು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಅವರ ಕುಟುಂಬದ ವಿರುದ್ಧ ಸಮರ ಸಾರಿ ಯಶಸ್ವಿಯಾದ ಶಿವಕುಮಾರ್ ತಮ್ಮ ಪಕ್ಷ ನಿಷ್ಠೆಯಿಂದಾಗಿ ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಜೈಲು ಸೇರಿ ಹೊರಬಂದಿದ್ದೂ ಆಯಿತು. ಈ ಮಧ್ಯೆ ತಮ್ಮ ಸ್ವಕ್ಷೇತ್ರದಲ್ಲಿ ಗೋಮಾಳ ಜಮೀನಿನಲ್ಲಿ ಏಸು ಪ್ರತಿಮೆ ನಿರ್ಮಾಣಕ್ಕೆ ಮುಂದಾಗಿ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡರು.

ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಉರುಳಿದ ಬಳಿಕ ನಡೆದ ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿದ್ದರಿಂದ ನೈತಿಕ ಹೊಣೆ ಹೊತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಿದ್ದರಿಂದ ಆ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ಅವರ ಹೆಸರು ಕೇಳಿಬಂದಿತ್ತು. ಈ ಕುರಿತ ಪ್ರಕ್ರಿಯೆಗಳು ನಡೆದು ಇನ್ನೇನು ಶಿವಕುಮಾರ್ ಹೆಸರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಘೋಷಿಸಬೇಕು ಎನ್ನುವಷ್ಟರಲ್ಲಿ ಮತ್ತೆ ಗೊಂದಲ ಆರಂಭವಾಯಿತು. ಡಿ.ಕೆ.ಶಿವಕುಮಾರ್ ಅವರಿಗೆ ಹುದ್ದೆ ತಪ್ಪಿಸಲು ಸಾಕಷ್ಟು ಪ್ರಯತ್ನಗಳು ನಡೆದವು. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಸೇರಿರುವುದು ಮತ್ತು ಕಪಾಲ ಬೆಟ್ಟದ ಗೋಮಾಳದಲ್ಲಿ ಏಸು ಪ್ರತಿಮೆ ನಿರ್ಮಾಣ ವಿವಾದವನ್ನು ಮುಂದಿಟ್ಟುಕೊಂಡು ಪಕ್ಷದಲ್ಲೇ ಇರುವ ಅವರ ವಿರೋಧಿಗಳು ಹುದ್ದೆ ತಪ್ಪಿಸಲು ಹಸರಸಾಹಸ ಮಾಡಿದರು. ಆದರೆ, ಇದೆಲ್ಲವನ್ನೂ ಮೀರಿ ಡಿ.ಕೆ.ಶಿವಕುಮಾರ್ ಹೆಸರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಎಐಸಿಸಿ ಘೋಷಿಸಿದೆ.
ಈ ನೇಮಕಕ್ಕೆ ಮಧ್ಯಪ್ರದೇಶದ ವಿದ್ಯಮಾನ ಕಾರಣವಾಯಿತೇ?
ಕೆಪಿಸಿಸಿ ಅಧ್ಯಕ್ಷರು, ಕಾರ್ಯಾಧ್ಯಕ್ಷರ ನೇಮಕ, ಶಾಸಕಾಂಗ ಪಕ್ಷದ ನಾಯಕ ಮತ್ತು ಪ್ರತಿಪಕ್ಷ ನಾಯಕ ಸ್ಥಾನದ ನೇಮಕ ಕುರಿತಂತೆ ಕಳೆದ ನಾಲ್ಕು ತಿಂಗಳಿನಿಂದ ನಾನಾ ನೆಪಗಳನ್ನು ಹೇಳಿಕೊಂಡು ಮುಂದೂಡುತ್ತಾ ಬಂದಿದ್ದ ಎಐಸಿಸಿ ನಾಯಕರು ಏಕಾಏಕಿ ಈ ಹುದ್ದೆಗಳನ್ನು ಭರ್ತಿ ಮಾಡಿರುವುದಕ್ಕೆ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಗೊಂದಲದಿಂದಾಗಿ ಸರ್ಕಾರ ಉರುಳುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ಕಾರಣವಾಯಿತೇ ಎಂಬ ಪ್ರಶ್ನೆ ಎದುರಾಗಿದೆ.
ಏಕೆಂದರೆ, ಮಧ್ಯಪ್ರದೇಶ ಕಾಂಗ್ರೆಸ್ಸಿನಲ್ಲಿ ಭಿನ್ನಮತೀಯ ಚಟುವಟಿಕೆ ತಾರಕ್ಕೇರಲು ಕಾರಣವಾಗಿದ್ದು ಜ್ಯೋತಿರಾದಿತ್ಯ ಸಿಂಧಿಯಾ. 2018ರಲ್ಲಿ ನಡೆದ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಕಮಲ್ ನಾಥ್ ಜತೆಗೆ ಸಿಂಧಿಯಾ ಕೂಡ ಮುಖ್ಯಮಂತ್ರಿ ಆಕಾಂಕ್ಷಿಯಾಗಿದ್ದರು. ಆದರೆ, ಹಿರಿತನದ ಆಧಾರದ ಮೇಲೆ ಈ ಹುದ್ದೆ ಕಮಲ್ ನಾಥ್ ಪಾಲಾಯಿತು. ಇದಾದ ಬಳಿಕ ಸಿಂಧಿಯಾ ಅವರು ಮಧ್ಯಪ್ರದೇಶ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು. ಇದಕ್ಕಾಗಿ ಸಾಕಷ್ಟು ಕಸರತ್ತುಗಳನ್ನೂ ಮಾಡಿದರು. ಆದರೆ, ಅದಾವುದೂ ಫಲ ಕೊಡದ ಕಾರಣ ಸಿಂಧಿಯಾ ಕಾಂಗ್ರೆಸ್ ಪಕ್ಷದಿಂದ ಹೊರಬಂದು ಬಿಜೆಪಿ ಸೇರುತ್ತಿದ್ದಾರೆ. ಸಿಂಧಿಯಾ ಅವರೊಂದಿಗೆ ಕೆಲವು ಶಾಸಕರೂ ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿದ್ದು, ಇದರೊಂದಿಗೆ ಸರ್ಕಾರವೂ ಉರುಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಂದರೆ, ಇಲ್ಲಿ ಒತ್ತಡಗಳಿಗೆ ಮಣಿಯದೇ ಇರುವುದು ಮತ್ತು ನಿರ್ಧಾರ ಕೈಗೊಳ್ಳುವಲ್ಲಿ ವಿಳಂಬ ಮಾಡಿದ್ದು ಈ ಪರಿಸ್ಥಿತಿಗೆ ಕಾರಣ ಎಂಬುದು ಸ್ಪಷ್ಟ.
ಇದೇ ರೀತಿ ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ಬಲಾಢ್ಯವಾಗಿರುವ ಏಕೈಕ ರಾಜ್ಯವಾಗಿರುವ ಕರ್ನಾಟಕದ ವಿಚಾರದಲ್ಲೂ ವಿಳಂಬ ಧೋರಣೆ ತೋರಿದರೆ ಮತ್ತು ಒತ್ತಡಗಳನ್ನು ನಿರ್ಲಕ್ಷಿಸಿದರೆ ಪಕ್ಷಕ್ಕೆ ಸಮಸ್ಯೆಯಾಗಬಹುದು. ಸಂಘಟನೆ ಮೇಲೆ ಪ್ರತೀಕೂಲ ಪರಿಣಾಮ ಬೀರಬಹುದು ಎಂಬುದು ಪಕ್ಷದ ವರಿಷ್ಠರಿಗೆ ಮನವರಿಕೆ ಆಗಿರಬಹುದು. ಈ ಕಾರಣಕ್ಕೆ ಎಐಸಿಸಿಗೆ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ನೇಮಕದ ಬಳಿಕ ಕೆಪಿಸಿಸಿ ಬಗ್ಗೆ ತಲೆಕೆಡಿಸಿಕೊಂಡರಾಯಿತು ಎಂದುಕೊಂಡಿದ್ದ ವರಿಷ್ಠರು ಏಕಾಏಕಿ ಕೆಪಿಸಿಸಿ ಅಧ್ಯಕ್ಷರು, ಕಾರ್ಯಾಧ್ಯಕ್ಷರನ್ನು ನೇಮಕ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.