ಭಾರತ ಲಾಕ್‌ಡೌನ್ ನಡುವೆಯೂ ಸರ್ಕಾರದ ಬೊಕ್ಕಸ ತುಂಬಿಸುವ ಅಬಕಾರಿ ಇಲಾಖೆಯನ್ನು ಸರ್ಕಾರ ವಿನಾಯಿತಿ ವ್ಯಾಪ್ತಿಗೆ ತಂದಿದೆ. ಇಂದು ರಾಜ್ಯದಾದ್ಯಂತ ಎಲ್ಲಿ ನೋಡಿದರೂ ಮದ್ಯವ್ಯಸನಿಗಳದ್ದೇ ಮಾತಾಗಿತ್ತು. ಅಲ್ಲಿ ಕುಡಿದು ಬಿದ್ದಿದ್ದ, ಇಲ್ಲಿ ಕುಡಿದು ರಸ್ತೆಯಲ್ಲಿ ವಾಲಾಡಿಕೊಂಡು ಹೋದ. ಇನ್ನು ರಾಜ್ಯ ಇತರೆ ಕಡೆಗಳಲ್ಲಿ ಮಾನ ಉಳಿಸಿಕೊಳ್ಳುವ ಉಮೇದಿನಲ್ಲಿ ಮಾಸ್ಕ್ ಹಾಕಿಕೊಂಡು ಸರತಿ ಸಾಲಿನಲ್ಲಿ ನಿಂತಿದ್ದ ಘಟನೆಯೂ ನಡೆಯಿದು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕೆಲವು ಕಡೆಗಳಲ್ಲಿ ಸಂಪೂರ್ಣ ಹೆಲ್ಮೆಟ್ ಧರಿಸಿದ್ದರು. ಕೆಲವು ಕಡೆ ಲಾಠಿ ಬೀಸಿದ ಪ್ರಕರಣಗಳು ನಡೆದರೆ, ಮತ್ತೆ ಕೆಲವು ಕಡೆ ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ ಎನ್ನು ಕಾರಣಕ್ಕೆ ಮದ್ಯದಂಗಡಿಗಳನ್ನು ಮುಚ್ಚಿಸಿದ ಘಟನೆಗಳೂ ಅಲ್ಲಲ್ಲಿ ಸದ್ದು ಮಾಡಿದವು.
ರಾತ್ರಿ 7 ಗಂಟೆ ತನಕ ಮದ್ಯದಂಗಡಿ ತೆರೆಯಲು ಅವಕಾಶವಿದ್ದರೂ ಪೊಲೀಸರ ಅರ್ಧಗಂಟೆ ಮುಂಚಿತವಾಗಿಯೇ ಬಾರ್‌ಗಳನ್ನು ಮುಚ್ಚಿಸಿದರು. ಕಾನೂನು ಸುವ್ಯಸ್ಥೆಗಾಗಿ ಪೊಲೀಸರು ಈ ಕ್ರಮ ವಹಿಸಿದ್ದರು. ಆದರೆ, ಬೆಳಗ್ಗೆ 9 ಗಂಟೆಗೆ ತೆರೆದ ಬಾರ್‌ಗಳು ಕ್ಷಣ ಮಾತ್ರವೂ ಬಿಡುವಿಲ್ಲದಂತೆ ತುಂಬಿ ತುಳುಕಿದವು. ಮದ್ಯ ಪ್ರಿಯರಂತೂ ಸುಡುವ ಬಿಸಿಲನ್ನೂ ಲೆಕ್ಕಿಸದೆ ಕಿಲೋ ಮೀಟರ್ ದೂರಕ್ಕೆ ಸರತಿ ಸಾಲಿನಲ್ಲಿ ನಿಂತು ಮದ್ಯ ಕೊಂಡು ಕೊಂಡರು. ಲಾಕ್‌ಡೌನ್ ಹಿನ್ನೆಲೆ ಸಂಜೆ 5 ಗಂಟೆ ತನಕ ಸುಮಾರು 45 ಕೋಟಿ ರುಪಾಯಿ ವ್ಯವಹಾರ ಆಗಿದೆ ಎಂದು ಅಬಕಾರಿ ಇಲಾಖೆ ಮಾಹಿತಿ ನೀಡಿದೆ. ಸಂಜೆ ಆರೂವರೆ ತನಕವೂ ಸೇರಿದರೆ ಅಂದಾಜು 50 ಕೋಟಿ ಗಡಿ ಮುಟ್ಟಿರಬಹುದು ಎನ್ನುವ ಲೆಕ್ಕಾಚಾರಗಳಿವೆ.

ರಾಜ್ಯಾದ್ಯಂತ ಸುಮಾರು 11 ಸಾವಿರ ಬಾರ್‌ಗಳು ಓಪನ್ ಆಗಿದ್ದವು. 3.9 ಲಕ್ಷ ಬಿಯರ್ ಮತ್ತು 8.5 ಲಕ್ಷ ಲೀಟರ್ ದೇಶಿಯ ಮದ್ಯ ಮಾರಾಟವಾಗಿದೆ. ಈ ನಡುವೆ ಏಪ್ರಿಲ್ 1 ರಿಂದ ಹೊಸ ದರ ಜಾರಿಗೆ ಬರಬೇಕಿತ್ತು. ಆದರೆ ಹಳೇ ಸ್ಟಾಕ್ ಬಾರ್‌ಗಳಲ್ಲಿ ಇದ್ದಿದ್ದರಿಂದ ಇಂದು ಹಳೇ ದರದಲ್ಲೇ ಮದ್ಯ ಮಾರಾಟ ಮಾಡಲಾಗಿದ್ದು, ನಾಳೆ ಬಾರ್ಗಗಳಿಗೆ ಹೊಸ ಸ್ಟಾಕ್ ಮದ್ಯ ಬರುತ್ತದೆ ಎಂದು ಅಬಕಾರಿ ಅಧಿಕಾರಿಗಳು ಮಾಹಿತಿ ಕೊಟ್ಟಿದ್ದಾರೆ. ಹಾಗಾಗಿ ಕಳೆದ ಬಜೆಟ್‌ನಲ್ಲಿ ಸಿಎಂ ಬಿ ಎಸ್ ಯಡಿಯೂರಪ್ಪ ಮದ್ಯದ ಮೇಲಿನ ಸೆಸ್ ಹೆಚ್ಚಳ ಮಾಡಿದ್ದಾರೆ. ಹಾಗಾಗಿ ಮದ್ಯದ ಮೇಲಿನ ದರ ನಾಳೆಯಿಂದೆ ಹೆಚ್ಚಳವಾಗಲಿದೆ.
ಇನ್ನೂ ಮಾಮೂಲಿ ಸಮಯದಂತೆ ಎಣ್ಣೆ ಅಂಗಡಿಗಳು ಓಪನ್ ಆಗಿದ್ದರೆ 50 ಕೋಟಿಗೂ ಹೆಚ್ಚು ಬ್ಯುಸಿನೆಸ್ ಆಗಿರುತ್ತಿತ್ತು. ಬೆಳಗ್ಗೆ 9 ರಿಂದ ರಾತ್ರಿ 11 ಗಂಟೆವರೆಗೆ ಓಪನ್ ಇದ್ದಿದ್ರೆ ಭಾರೀ ಪ್ರಮಾಣದ ವ್ಯಾಪಾರ ಆಗುತ್ತಿತ್ತು ಎಂದು ಅಬಕಾರಿ ಅಧಿಕಾರಿಗಳ ಲೆಕ್ಕಾಚಾರ. ಅದರ ಜೊತೆಗೆ ಮದ್ಯ ಮಾರಾಟಕ್ಕೆ ಅನುಮತಿ ಕೊಟ್ಟಿದ್ದು ಕೇವಲ 40 ಪಸೆಂಟ್ ಮದ್ಯದಂಗಡಿಗಳಿಗೆ ಮಾತ್ರ. ಉಳಿದ 60 ಪಸೆಂಟ್ ಬಾರ್ ಅಂಡ್ ರೆಸ್ಟೋರೆಂಟ್, ಮಾಲ್‌ಗಳು, ಪಬ್‌ಗಳು, ಕ್ಲಬ್‌ಗಳಲ್ಲಿ ಮಾರಾಟಕ್ಕೆ ಅನುಮತಿ ಸಿಕ್ಕಿಲ್ಲ. ಅಬಕಾರಿ ಇಲಾಖೆ ಮಾಹಿತಿಯಂತೆ ಪ್ರತಿದಿನ ಅಂಗಡಿಯಲ್ಲಿ ಸರಾಸರಿ ಮೂರು ಲಕ್ಷ ವ್ಯಾಪಾರವಾಗುತ್ತಿದ್ದು, 40 ದಿನಗಳ ಲಾಕ್‌ಡೌನ್ ಬಳಿಕ ಮದ್ಯದಂಗಡಿ ತೆರೆದಿರುವ ಕಾರಣ ಸುಮಾರು 7 ಲಕ್ಷ ರೂಪಾಯಿ ವ್ಯಾಪಾರ ಆಗಿರುವ ಮಾಹಿತಿ ಸಿಕ್ಕಿದೆ.
ಮದ್ಯದ ಅಮಲಿಗೆ ಜೀವ ಬಲಿ:
ಇನ್ನು ಮದ್ಯ ಮಾರಾಟ ಶುರುವಾದ ಮೊದಲೇ ದಿನವೇ ಬೆಂಗಳೂರಿನಲ್ಲಿ ರಕ್ತಪಾತ ಆಗಿದೆ. ಎಣ್ಣೆ ಮತ್ತಿನಲ್ಲಿ ಸ್ನೇಹಿತರಿಂದಲೇ ಯುವಕನ ಹತ್ಯೆ ನಡೆದಿದೆ. ಬಾಗಲಗುಂಟೆಯ ಸಿಡೆದಹಳ್ಳಿ ಬಳಿ ಕೊಲೆ ನಡೆದಿದೆ. ಕೊಲೆಯಾದ ಯುವಕ ಕರಣ್ ಸಿಂಗ್, ಬೆಳಗ್ಗೆ ಸ್ನೇಹಿತರ ಜೊತೆಗೂಡಿ ಪಾರ್ಟಿ ಮಾಡಿದ್ದ. 40 ದಿನಗಳ ಮತ್ತು ಒಂದೇ ದಿನ ಏರಿದ್ದರಿಂದ ಸ್ನೇಹಿತರ ಜೊತೆ ಗಲಾಟೆ ಶುರುವಾಗಿತ್ತು. ಕರಣ್ ಸಿಂಗ್ ಸ್ನೇಹಿತರೇ ಎದೆಗೆ ಚುಚ್ಚಿ ಕೊಲೆ ಮಾಡಿದ್ದಾರೆ. ಬಾಗಲಗುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಾಡಹಗಲೇ ನಡುರಸ್ತೆಯಲ್ಲೆ ಕೊಲೆಯಾದ ಕರಣ್ ಸಿಂಗ್ ರೌಡಿಶೀಟರ್ ಎಂದು ಪೊಲೀಸರು ತಿಳಿಸಿದ್ದಾರೆ.
40 ದಿನಗಳ ತಪಸ್ಸು ನಷ್ಟವಾಯಿತೇ?
ಭಾರತದಲ್ಲಿ ಕರೋನಾ ವೈರಸ್ ಸೋಂಕು 40 ಸಾವಿರ ಗಡಿ ದಾಟಿ ಮುನ್ನುಗ್ಗಿದೆ. ಒಟ್ಟು ಸೋಂಕಿತರ ಸಂಖ್ಯೆ 42,793 ಆಗಿದ್ದರೆ, ಅದರಲ್ಲಿ 11,835 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ. 1,396 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ. ದೇಶದಲ್ಲಿ 29,558 ಕೇಸ್‌ಗಳು ಮಾತ್ರ ಕರೋನಾ ಆ್ಯಕ್ಟೀವ್ ಆಗಿವೆ. ಕಳೆದ 48 ಗಂಟೆಗಳಲ್ಲಿ ಬರೋಬ್ಬರಿ 5 ಸಾವಿರ ಜನರಿಗೆ ಕರೋನಾ ಸೋಂಕು ಕಾಣಿಸಿಕೊಂಡಿದೆ. ಕೇಂದ್ರ ಆರೋಗ್ಯ ಇಲಾಖೆ ಮಾಹಿತಿಯಂತೆ ಭಾನುವಾರ ಒಂದೇ ದಿನ 2667 ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಸೋಷಿಯಲ್ ಡಿಸ್ಟೆನ್ಸ್ ಕರೋನಾಗೆ ಇರುವ ಶಕ್ತಿಶಾಲಿ ಅಸ್ತ್ರ ಎಂದು ಕರೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, ಇದೊಂದು ತಪ್ಪಸ್ಸು ಎಂದು ಭಾವಿಸಿ ಎಂದಿದ್ದರು. ಇದೀಗ ಮದ್ಯದಂಗಡಿಗಳನ್ನು ತೆರೆಲು ಅವಕಾಶ ಕೊಟ್ಟು ಅದರಿಂದಾಗುವ ಅನಾಹುತಗಳನ್ನು ಕಂಡು ಕಿಲಕಿಲನೇ ನಗುತ್ತಿರುವಂತೆ ಭಾಸವಾಗುತ್ತಿದೆ. ಈ ರೀತಿಯ ಲಾಕ್‌ಡೌನ್ ಮಾಡಿದ್ದು ಯಾಕೆ? ಇದೀಗ ಮದ್ಯದಂಗಡಿಯ ನೆಪದಲ್ಲಿ ಜನರನ್ನು ಬೀದಿಗೆ ಬಿಟ್ಟಿದ್ದು ಯಾಕೆ? ಎಂದು ಪ್ರಜ್ಞಾವಂತ ಜನರು ಪ್ರಶ್ನೆ ಮಾಡುವಂತೆ ಮಾಡಿದೆ.
ರಾಜ್ಯ ಸರ್ಕಾರ ಏನು ಮಾಡಬಹುದಿತ್ತು?
ರಾಜ್ಯದಲ್ಲಿ ಮದ್ಯ ಮಾರಾಟ ಮಾಡಲೇ ಬೇಕೆಂದು ಕೇಂದ್ರ ಸರ್ಕಾವೇನು ಒತ್ತಡ ಹಾಕಲ್ಲ. ಯಾಕಂದ್ರೆ ಮದ್ಯ ಮಾರಾಟದಿಂದ ಕೇಂದ್ರ ಸರ್ಕಾರಕ್ಕೆ ಹೇಳಿಕೊಳ್ಳುವಂತಹ ನೇರ ಲಾಭವೇನು ಇಲ್ಲ. ಆದರೆ ಕರೋನಾ ನಡುವೆ ರಾಜ್ಯ ಸರ್ಕಾರ ಮದ್ಯ ಮಾರಾಟಕ್ಕೆ ಅನುಮತಿ ಕೊಡುವ ಬದಲು ಕೇರಳದಲ್ಲಿ ಅನುಸರಿಸಿರುವ ನೀತಿಯನ್ನು ಜಾರಿಗೆ ತರುವ ಕೆಲಸ ಮಾಡಬಹುದಿತ್ತು. ಕೇರಳದಲ್ಲಿ ಮದ್ಯಪಾನ ನಿಷೇಧ ಆಗುವ ಮೊದಲ ಇಡೀ ದೇಶದಲ್ಲೇ ಅತಿ ಹೆಚ್ಚು ಮದ್ಯ ಮಾರಾಟ ಮಾಡುತ್ತಿದ್ದ ರಾಜ್ಯ ಎನ್ನು ಖ್ಯಾತಿ ಪಡೆದಿತ್ತು. ಪ್ರತಿ ವ್ಯಕ್ತಿ ವಾರ್ಷಿಕ ಸರಾಸರಿ 5.7 ಲೀಟರ್ ಮದ್ಯ ಸೇವನೆ ಮಾಡುತ್ತಿದ್ದ. ಆದರೀಗ ಮದ್ಯಪಾನ ನಿಷೇಧ ಮಾಡಲಾಗಿದೆ. ಆದರೂ ಅಲ್ಲಿನ ಸರ್ಕಾರ ಕರ್ನಾಟಕಕ್ಕಿಂತಲೂ ಆರ್ಥಿಕತೆಯಲ್ಲಿ ಉತ್ತಮವಾಗಿದೆ. ನಮ್ಮ ರಾಜ್ಯ ಸರ್ಕಾರ ಕೋವಿಡ್ – 19 ವಿರುದ್ಧ ಹೋರಾಡಲು ಯಾವುದೇ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಿಲ್ಲ. ಆದರೆ ಕೇರಳ ಸಿಎಂ ಪಿಣರಾಯ್ ವಿಜಯನ್ 20 ಸಾವಿರ ಕೋಟಿ ರೂಪಾಯಿ ಪ್ಯಾಕೇಜ್ ಘೋಷಣೆ ಮಾಡಿದ್ದರು. ಅಲ್ಲಿ ಕೈಗೊಂಡ ಕ್ರಮಗಳನ್ನು ನಾವು ನಿಧಾನವಾಗಿ ಅನುಸರಿಸಲು ಶುರು ಮಾಡಿದೆವು. ಕೋವಿಡ್ 19 ವಿರುದ್ಧ ಹೋರಾಟ ಮಾಡಲು ಕೇರಳ ಮಾದರಿ ಕಾನೂನು ಜಾರಿ ಮಾಡಿದ ರಾಜ್ಯ ಸರ್ಕಾರ ಮದ್ಯದ ವಿಚಾರದಲ್ಲೂ ಕೇರಳ ಮಾದರಿಯನ್ನೇ ಅನುಸರಿಸಿದ್ದರೆ, ಕಾನೂನು ಸುವ್ಯವಸ್ಥೆ ಹದಗೆಡುತ್ತಿರಲಿಲ್ಲ. ಆದರೆ ಇದೀಗ ಕುಡಿದು ರಸ್ತೆಯಲ್ಲಿ ಬಿದ್ದವರನ್ನು ಟಿವಿಯಲ್ಲಿ ನೋಡುತ್ತ ನಗುವಂತೆ ಮಾಡಿದೆ.
ಇವತ್ತು ಒಂದೇ ದಿನ ಅಂದಾಜು 50 ಕೋಟಿ ಮದ್ಯದಿಂದ ಸರ್ಕಾರದ ಬೊಕ್ಕಸ ಸೇರಿದೆ. ಒಂದು ಕೊಲೆಯೂ ನಡೆದಿದೆ. ಇಂದು ಭರ್ಜರಿಯಾಗಿ ಎಣ್ಣೆ ಕುಡಿದವರು ನಾಳೆ ಎಣ್ಣೆ ಕೊಳ್ಳಲು ಹಣವಿಲ್ಲದಿದ್ದರೆ ಏನು ಮಾಡುತ್ತಾರೆ..? ಎನ್ನುವುದೇ ಕೌತುಕದ ಸಂಗತಿಯಾಗಿದೆ. ಯಾಕಂದ್ರೆ ಮೈಮೂಳೆ ಮುರಿದು ಸಂಪಾದನೆ ಮಾಡ್ತಾರೆ ಎನ್ನಲು ಮೇ 17 ರ ತನಕ ಲಾಕ್‌ಡೌನ್ ಇರುವ ಕಾರಣಕ್ಕೆ ಕೂಲಿ ಅಷ್ಟು ಸುಲಭವಾಗಿ ಸಿಗುವುದಿಲ್ಲ.





