ಕರೋನಾ ವೈರಸ್ ಬರುತ್ತಿದ್ದಂತೆ ದೇಶಾದ್ಯಂತ 21 ದಿನಗಳ ಕಾಲ ಲಾಕ್‌ಡೌನ್ ಮಾಡಿ ಸರ್ಕಾರ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರೇ ಕರೋನಾ ವೈರಸ್ ಗೆ ಮೆಡಿಸಿನ್ ಇಲ್ಲ ಎಂದು ಘೋಷಿಸಿದ್ದಾರೆ. ಆದರೆ ದೇಶಾದ್ಯಂತ ವಾಟ್ಸಾಪ್, ಫೇಸ್‌ಬುಕ್ ನಲ್ಲಿ ಔಷಧಿಗಳ ಮಹಾಪೂರವೇ ಹರಿದು ಬರುತ್ತಿದೆ. ಕರೋನಾ ವೈರಸ್
ಬಂದರೆ ತಡೆಯುವುದಕ್ಕೆ ಶುಂಠಿ ಕಷಾಯ ಸೇವಿಸಿ, ನೀರಿಗೆ ಜೀರಿಗೆ ಹಾಕಿ ನೆನೆಸಿ ಕುಡಿಯಿರಿ. ಬಿಸಿನೀರಿಗೆ ಉಪ್ಪು ಹಾಕಿ ಮುಕ್ಕಳಿಸಿ ಉಗಿದರೆ ವೈರಸ್ ಸತ್ತು ಹೋಗುತ್ತದೆ. ದೇಹಕ್ಕೆ ಬಂದ ವೈರಸ್ ಕೂಡ ನಾಶ ಆಗುತ್ತೆ ಎನ್ನುವ ಸಂದೇಶಗಳು ಹರಿದಾಡುತ್ತಿವೆ. ತುಳಸಿ, ಶುಂಠಿ, ಜೀರಿಗೆ, ಮೆಣಸು ತಿಂದರೆ ಕರೋನಾ ಹೋಗುತ್ತಾ ಎನ್ನುವ ವದಂತಿಗಳನ್ನು ವೈದ್ಯಕೀಯ ಶಾಸ್ತ್ರ ಸುಳ್ಳು ಎನ್ನುತ್ತದೆ. ಆದರೆ ಇಷ್ಟೂ ಸಾಂಬಾರ ಪಾದಾರ್ಥಗಳನ್ನು ಸೇವಿಸುವುದರಿಂದ ಯಾವುದೇ ಅಪಾಯವಂತೂ ಇಲ್ಲ. ಸಾಮಾನ್ಯವಾಗಿ ದೇಹದ ಉಷ್ಣಾಂಶವನ್ನು ಹೆಚ್ಚಳ ಮಾಡುವುದರಿಂದ ಸಾಮಾನ್ಯ ಶೀತ, ನೆಗಡಿ ಆಗುವುದಿಲ್ಲ ಎನ್ನುತ್ತಾರೆ ತಜ್ಞರು.
ಇನ್ನು ಗಂಜಲ, ಸಗಣಿಯಿಂದಲೂ ಕರೋನಾ ಸೋಂಕು ಬಾರದಂತೆ ತಡೆಯಬಹುದು. ಒಂದು ವೇಳೆ ಕರೋನಾ ಸೋಂಕು ಬಂದಿದ್ದರೂ ವೈರಸ್ ನಿರ್ಮೂಲನೆ ಮಾಡಬಹುದು ಎಂದು ವದಂತಿ ಹಬ್ಬಿಸಲಾಗಿದ್ದು, ಕರೋನಾ ಸೋಂಕು ಹರಡುವುದನ್ನು ತಡೆಯುವುದಕ್ಕೆ ಇರುವ ಏಕಥಕ ಮಾರ್ಗ ಸೋಷಿಯಲ್ ಡಿಸ್ಟೆನ್ಸ್. ಅದನ್ನು ಹೊರತುಪಡಿಸಿ ಕರೋನಾ ವೈಸರ್ ಒಮ್ಮೆ ದಾಳಿ ಮಾಡಿದರೆ ಅದನ್ನು ನಿಮ್ಮ ದೇಹದ ರೋಗನಿರೋಧಕ ಶಕ್ತಿಯೇ ನಾಶ ಮಾಡಬೇಕೇ ಹೊರತು ಬೇರಾವ ಟ್ರೀಟ್
ಮೆಂಟ್ ಇಲ್ಲ ಎನ್ನುತ್ತಾರೆ ವೈದ್ಯರು. ಆದರೆ ಮದ್ಯಪಾನ ಕರೋನಾ ತಡೆಯುತ್ತಾ ಎನ್ನುವ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ.
ಮದ್ಯಪಾನ ಕರೋನಾ ವೈರಸ್ ತಡೆಯುತ್ತೆ ಎನ್ನುವ ಮಾತು ಶುರುವಾಗಿದೆ. ಇಲ್ಲೀವರೆಗೂ ಮದ್ಯಪಾನ ಮಾಡದವರೇ ಕರೋನಾ ಸೋಂಕಿನಿಂದ ತಪ್ಪಿಸಿಕೊಳ್ಳಲು ಮದ್ಯಪಾನದ ಮೊರೆ ಹೋಗುವ ಪರಿಸ್ಥಿತಿ ಉದ್ಬವವಾಗಿದೆ. ರಾಜ್ಯದಲ್ಲಿ ಮದ್ಯದ ಅಂಗಡಿಗಳೂ ಸಹ ಲಾಕ್ ಡೌನ್ ಆಗಿದ್ದು, ಕೆಲವು ಕಡೆ ಬ್ಲಾಕ್ ನಲ್ಲಿ ಅಂದರೆ ಅಕ್ರಮವಾಗಿ ಮದ್ಯವನ್ನು ದುಬಾರಿ ದರಕ್ಕೆ ಮಾರಲಾಗುತ್ತಿದೆ. ಮದ್ಯಪಾನದಿಂದ ಕರೋನಾ ಬರಲ್ಲ ಎನ್ನುವ ಸುಳ್ಳು ಸುದ್ಧಿ ಅಕ್ರಮ ಮದ್ಯ ಮಾರಾಟಗಾರರ ಖಜಾನೆ ಭರ್ತಿ ಮಾಡುತ್ತಿದೆ. ಕರೋನಾದಿಂದ ತಪ್ಪಿಸಿಕೊಳ್ಳಲು ಸ್ಯಾನಿಟೈಸರ್ ಬಳಸಲಾಗುತ್ತದೆ. ಅದರಲ್ಲೂ ಆಲ್ಕೋಹಾಲ್ ನಿಂದ ತಯಾರಿಸಿದ ಸ್ಯಾನಿಟೈಸರ್ ಬಳಸಲಾಗುತ್ತದೆ. ಹಾಗಂದ ಮಾತ್ರಕ್ಕೆ ಮದ್ಯಪಾನ ಮಾಡಿದರೆ ಕರೋನಾ ವೈರಾಣು ನಾಶ ಆಗುತ್ತದೆ ಎಂದರ್ಥವಲ್ಲ. ಸ್ಯಾನಿಟೈಸರ್ ಬಳಕೆ ಮಾಡುವುದು ಕೇವಲ ಕೈ ಮೇಲಿರುವ ವೈರಾಣು, ಬ್ಯಾಕ್ಟೀರಿಯಾ ಹೋಗಲಾಡಿಸುತ್ತದೆ ಮಾತ್ರ. ದೇಹದ ಒಳಕ್ಕೆ ಸೇರಿದ ವೈರಾಣುವನ್ನು ನಾಶ ಮಾಡಲು ಮದ್ಯದಿಂದ ಅಸಾಧ್ಯ ಎನ್ನುತ್ತಾರೆ ವೈದ್ಯರು.
ಮದ್ಯಪಾನದಿಂದ ಕರೋನಾ ತಡೆಯುತ್ತದೆಯೇ ಎನ್ನುವ ಪ್ರಶ್ನೆಗೆ ವಿಶ್ವ ಆರೋಗ್ಯ ಸಂಸ್ಥೆ ಕೂಡ ಸ್ಪಷ್ಟನೆ ಕೊಟ್ಟಿದ್ದು, ಆಲ್ಕೋಹಾಲ್ ಕರೋನಾ ವೈರಸ್
ತಡೆಯುವುದಿಲ್ಲ. ಕರೋನಾ ತಡೆಯುತ್ತೆ ಎನ್ನುವ ನಂಬಿಕೆಯಿಂದ ಕೆಲವರು ಕುಡಿತದ ಚಟ ಹತ್ತಿಸಿಕೊಳ್ಳುತ್ತಿದ್ದಾರೆ. ಇದು ಸರಿಯಲ್ಲ ಎಂದಿದೆ. ಒಂದು ವೇಳೆ ನಿಮ್ಮ ಕೈಗಳು ಸಾಕಷ್ಟು ಹೆಚ್ಚು ಗಲೀಜು ಆಗಿದ್ದರೆ, ಸೋಪ್ ನಿಂದ ಹರಿಯುವ ನೀರಿನಲ್ಲಿ ತೊಳಿಯಿರಿ. ಸಾಕಷ್ಟು ಕೊಳೆಯಾಗಿಲ್ಲ ಎಂದಾಗ ಮಾತ್ರ ಹ್ಯಾಂಡ್ ಸ್ಯಾನಿಟೈಸರ್, ಆಲ್ಕೋಹಾಲ್
ಬೇಸ್ಡ್ ಸ್ಯಾನಿಟೈಸರ್ ಬಳಕೆ ಮಾಡಬಹುದು ಎಂದಿದೆ. ಮದ್ಯದ ಬಗ್ಗೆ ಮಾತ್ರವಲ್ಲ ಸಾಕಷ್ಟು ವಿಚಾರಗಳಲ್ಲಿ ಇದೇ ರೀತಿಯ ಸುಳ್ಳು ಸುದ್ದಿಗಳನ್ನು ಹರಡುವ ಕೆಲಸ ಹೆಗ್ಗಿಲ್ಲದೆ ಸಾಗುತ್ತಿದೆ. ವೈದ್ಯರ ಹೆಸರಿನಲ್ಲೂ ಸುಳ್ಳು ವದಂತಿ ಹರಡುವ ಸಾಹಸಕ್ಕೆ ಕಿಡಿಗೇಡಿಗಳು ಹುಟ್ಟಿಕೊಂಡಿದ್ದಾರೆ.
ಬೆಂಗಳೂರಿನ ನಾರಾಯಣ ಹೃದಯಾಲಯದ ಖ್ಯಾತ ಹೃದ್ರೋಗ ತಜ್ಞ ಡಾ.ದೇವಿ ಶೆಟ್ಟಿ ಹೆಸರಿನಲ್ಲಿ ಕೆಲವೊಂದು ನಕಲಿ ಧ್ವನಿಗಳು ಜನರನ್ನು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿವೆ ಕಿಡಿಗೇಡಿ ಮನಸುಗಳು. ಅಂತಿಮವಾಗಿ ನಾರಾಯಣ ಹೃದಯಾಲಯದ ಡಾ. ದೇವಿ ಶೆಟ್ಟಿ ಅವರು ಅದು ನನ್ನ ಧ್ವನಿಯಲ್ಲ ಎಂದು ಟ್ವಿಟರ್
ನಲ್ಲಿ ಸ್ಪಷ್ಟನೆ ನೀಡಿದ್ದಾರೆ. ಇದರ ಜೊತೆಗೆ ಕೋವಿಡ್-19ಗೆ ಮನೆಮದ್ದು, ಆಯುರ್ವೇದ, ಹೋಮಿಯೋಪತಿ ಎಂದೆಲ್ಲಾ ಮಾಹಿತಿ ಕೊಡುತ್ತಿರುವುದೂ ಕೂಡ ಅಪ್ಪಟ ಸುಳ್ಳು. ಒಂದು ಔಷಧಿ ಮಾರುಕಟ್ಟೆಗೆ ಬರಬೇಕಿದ್ದರೆ ಸಾಕಷ್ಟು ಪ್ರಯೋಗಗಳು ಆಗಬೇಕು. ಎಲ್ಲಾ ವಿಧದ ಪ್ರಯೋಗದಲ್ಲಿ ಯಶಸ್ವಿಯಾದರೆ ಮಾತ್ರ ಆ ಚಿಕಿತ್ಸೆ ಮಾರುಕಟ್ಟೆಗೆ ಬಿಡುಗಡೆಯಾಗುತ್ತದೆ ಎನ್ನುತ್ತಾರೆ ವೈದ್ಯರು. ಸದ್ಯಕ್ಕೆ ವೈರಸ್ ತಗುಲದಂತೆ ಮುನ್ನೆಚ್ಚರಿಕೆ ವಹಿಸಲು ಇರುವ ಉತ್ತಮ ಮಾರ್ಗ ಮನೆಯೊಳಗೆ ಉಳಿಯುದು, ಕೈಗಳನ್ನು ಆಗಿದ್ದಾಗೆ ಸ್ವಚ್ಛತೆ ಮಾಡಿಕೊಳ್ಳುವುದು. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು.
ಅಂತಿಮವಾಗಿ ಮದ್ಯದಿಂದ ಕರೋನಾ ತಡೆಗಟ್ಟಲು ಸಾಧ್ಯವಿಲ್ಲ ಎನ್ನುವುದಕ್ಕೆ ಸೂಕ್ತ ಉದಾಹರಣೆ ಎಂದರೆ, ನಂಜನಗೂಡಿನ ಪ್ರಕರಣ. ಯಾಕಂದ್ರೆ ಕರ್ನಾಟಕದ ಪೇಷೆಂಟ್
ನಂಬರ್ 52 ಮಾಡಿದ ಎಡವಟ್ಟಿನಿಂದ ಸುಮಾರು 9 ಮಂದಿಗೆ ಕರೋನಾ ಸೋಂಕು ಹರಡಿದೆ. ಆ ವ್ಯಕ್ತಿಗೆ ಎಲ್ಲಿಂದ ಸೋಂಕು ಬಂದಿದೆ ಎನ್ನುವ ಮೂಲವನ್ನು ಬಿಟ್ಟುಕೊಡುತ್ತಿಲ್ಲ. ಆದರೆ ಕಂಪನಿಯ ಸಹೋದ್ಯೋಗಿಗಳ ಮಾಹಿತಿಯಂತೆ ಆ ಸೋಂಕಿತನ ಗೆಳೆಯ ಆಸ್ಟ್ರೇಲಿಯಾದಿಂದ ವಾಪಸ್ ಆಗಿದ್ದು, ವಿದೇಶದಿಂದ ವಾಪಸ್ ಆದ ಖುಷಿಗೆ ರಾತ್ರಿಪೂರ್ತಿ ಎಣ್ಣೆ ಪಾರ್ಟಿ ಮಾಡಿದ್ದರು ಎನ್ನಲಾಗ್ತಿದೆ. ಒಟ್ಟಾರೆ ಮದ್ಯಪಾನ ಮಾಡಿದರು ಕರೋನಾ ಸೋಂಕು ತಡೆಯುವುದು ಅಸಾಧ್ಯ ಎನ್ನುವುದು ಈ ಪ್ರಕರಣದಿಂದ ಸಾಬೀತಾದಂತೆ ಆಗಿದೆ. ಮನೆಯಲ್ಲೇ ಇರಿ. ಜೀವ ಉಳಿಸಿಕೊಳ್ಳಿ ಎನ್ನುವುದಷ್ಟೇ ಪ್ರತಿಧ್ವನಿಯ ಕಳಕಳಿ.