ದೇಶದಲ್ಲಿ ಮತ್ಸ್ಯೋದ್ಯಮವನ್ನು ಅಭಿವೃದ್ದಿ ಪಡಿಸುವ ದೃಷ್ಟಿಯಿಂದ ಹಾಗೂ ಮತ್ಸ್ಯೋತ್ಪನ್ನಗಳ ರಫ್ತು ಹೆಚ್ಚಿಸುವ ಉದ್ದೇಶದಿಂದ ರೂ. 20,050 ಕೋಟಿಗಳ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ (PMMSY)ಯನ್ನು ಪ್ರಧಾನಿ ನರೇಂದ್ರ ಮೋದಿಯವರು ಬಿಡುಗಡೆ ಮಾಡಿದ್ದಾರೆ. ಇದರಿಂದಾಗಿ ಮತ್ಸ್ಯೋದ್ಯಮಿಗಳು ಹೆಚ್ಚಿನ ವರಮಾನವನ್ನು ಪಡೆಯಲು ಸಹಕಾರಿಯಾಗಲಿದೆ ಎಂದು ಅವರು ಹೇಳಿದ್ದಾರೆ.
ಇನ್ನು ಬಿಹಾರದಲ್ಲಿ ಚುನಾವಣೆ ಹತ್ತಿರ ಬರುತ್ತಿರುವ ಕಾರಣಕ್ಕೆ, ಬಿಹಾರವನ್ನು ಕೇಂದ್ರೀಕರಿಸಿ ಪಶು ಸಂಗೋಪನೆ ಮತ್ತು ಮತ್ಸ್ಯೋದ್ಯಮಕ್ಕೆ ಸಂಬಂಧಪಟ್ಟ ಇತರ ಹಲವು ಯೋಜನೆಗಳನ್ನು ಕೂಡಾ ಪ್ರಧಾನಿಯವರು ಬಿಡುಗಡೆಗೊಳಿಸಿದ್ದಾರೆ. ಇದರೊಂದಿಗೆ ಜಾನುವಾರುಗಳ ಕುರಿತು ಮಾಹಿತಿ ನೀಡುವಂತಹ ಇ-ಗೋಪಾಲ ಎಂಬ ಮೊಬೈಲ್ ಆಪ್ ಕೂಡಾ ಬಿಡುಗಡೆಗೊಳಿಸಲಾಗಿದೆ.
PMMSYನಲ್ಲಿ ನೀಡಲಾಗುವ ರೂ. 20,050 ಕೋಟಿಗಳ ಅನುದಾನವನ್ನು 2020-21 ರಿಂದ 2024-25ರ ವರೆಗೆ ಮತ್ಸ್ಯೋದ್ಯಮದ ಅಭಿವೃದ್ದಿಗಾಗಿ ಬಳಸಲಾಗುವುದು. ಆತ್ಮನಿರ್ಭರ ಭಾರತ ಯೋಜನೆಯ ಅಡಿಯಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.
ರೂ. 20,050 ಕೋಟಿಗಳ ಅನುದಾನದಲ್ಲಿ ಸುಮಾರು ರೂ. 12,340 ಕೋಟಿಯನ್ನು ಸಮುದ್ರ ಮತ್ತು ಸಿಹಿ ನೀರಿನ ಮೀನುಗಾರಿಕೆಗೆ ಹಾಗೂ ಸುಮಾರು ರೂ. 7,710 ಕೋಟಿಯನ್ನು ಜಲಚರಗಳ ಸಾಕಣೆಗಾಗಿ ಬಳಲಾಗುವುದು ಎಂದು ವರದಿಯಾಗಿದೆ.