ಬೆಂಗಳೂರು ಗಲಭೆಗೆ ಕೋಮು ಬಣ್ಣ ಬಳಿದು ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನಗಳ ನಡುವೆಯೇ ಗುರುವಾರ ‘ಶೃಂಗೇರಿಯಲ್ಲಿ ಸ್ವಾಮೀಜಿಗಳ ಗೋಪುರಕ್ಕೆ ಎಸ್ಡಿಪಿಐ(SDPI) ಧ್ವಜ ಕಟ್ಟಿದ್ದಾರೆ’ ಎಂಬ ಸುದ್ದಿ ಮಾಧ್ಯಮಗಳ ಪಾಲಿಗೆ ಇನ್ನಷ್ಟು ಬೆಂಕಿ ಕಾರಲು ಇಂಧನವಾಯಿತು.
ಬಿಜೆಪಿ ಮತ್ತು ಸಂಘಪರಿವಾರದ ಮಂದಿಯಂತೂ ಯಾವ ಮಟ್ಟಕ್ಕೆ ಹೋದರೆಂದರೆ; ಘಟನೆಯ ಕುರಿತ ತನಿಖೆ, ವಿಚಾರಣೆಗೆ ಮುಂಚೆಯೇ ಸ್ವತಃ ಮಾಜಿ ಸಚಿವರೂ ಆದ ಬಿಜೆಪಿ ನಾಯಕ ಜಿ ಎನ್ ಜೀವರಾಜ್ ಅವರು ತಮ್ಮ ಬೆಂಬಲಿಗರ ಗುಂಪು ಕಟ್ಟಿಕೊಂಡು ಶೃಂಗೇರಿಯಲ್ಲಿ ಧರಣಿಯನ್ನೂ ನಡೆಸಿದರು. ಕೊನೆಗೆ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ, ಅಧಿಕಾರಿಗಳೊಂದಿಗೆ ಭಾರೀ ವಾಗ್ವಾದವನ್ನೂ ನಡೆಸಿದ ಅವರು, ಎಸ್ಡಿಪಿಐ ನವರೇ ಈ ಕೃತ್ಯ ಎಸಗಿದ್ದು ಕೂಡಲೇ ಆ ಕ್ಷಣವೇ ಬಂಧಿಸಬೇಕು ಎಂದೂ ಪಟ್ಟು ಹಿಡಿದರು. ಸಂಸದೆ ಶೋಭಾ ಕರಂದ್ಲಾಜೆ ಕೂಡ ಈ ಘಟನೆ ಎಸ್ಡಿಪಿಐ ಕೃತ್ಯವೇ ಎಂದು ಘೋಷಿಸಿ, ಕೂಡಲೇ ಸಂಘಟನೆಯನ್ನು ನಿಷೇಧಿಸಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಉಗ್ರ ಕ್ರಮಕೈಗೊಳ್ಳಬೇಕು ಎಂದು ಟ್ವೀಟ್ ಮಾಡಿದರು.
ಬೆಂಗಳೂರಿನ ಗಲಭೆ ಘಟನೆಯ ಹಿಂದೆ ಎಸ್ಡಿಪಿಐ ಸಂಘಟನೆಯ ಕೈವಾಡವಿದೆ ಎಂದು ಪ್ರಾಥಮಿಕ ತನಿಖೆ ವೇಳೆ ಪತ್ತೆಯಾಗಿದೆ ಎಂದು ಪೊಲೀಸರ ಹೇಳಿಕೆಯ ಹಿನ್ನೆಲೆಯಲ್ಲಿ, ಶೃಂಗೇರಿ ಘಟನೆಯನ್ನೂ ಅದೇ ಸಂಘಟನೆಯೊಂದಿಗೆ ತಳಕುಹಾಕಿ, ಮುಸ್ಲಿಂ ಸಮುದಾಯದ ಮೇಲಿನ ದ್ವೇಷ ಕಾರುವ ಮತ್ತೊಂದು ಅವಕಾಶವಾಗಿ ಬಹುತೇಕ ಬಿಜೆಪಿ ನಾಯಕರು ಮತ್ತು ಸಂಘಪರಿವಾರದ ಮಂದಿ ಪೈಪೋಟಿಗೆ ಬಿದ್ದರು.
ಆದರೆ, ಶುಕ್ರವಾರ ಬೆಳಗ್ಗೆ ಹೊತ್ತಿಗೆ ಶೃಂಗೇರಿ ಘಟನೆಯ ವಿವರಗಳು ಬಿಚ್ಚಿಕೊಳ್ಳುತ್ತಿದ್ದಂತೆ ಎಲ್ಲವೂ ತಿರುವುಮುರುವಾಯಿತು. ಪೊಲೀಸರ ತನಿಖೆ, ಪ್ರತ್ಯಕ್ಷದರ್ಶಿಗಳ ಹೇಳಿಕೆ, ಸಿಸಿಟಿವಿ ದೃಶ್ಯಾವಳಿಯ ವಿವರಗಳನ್ನು ಗಮನಿಸುವ ಮುನ್ನೇ ಧರ್ಮಯುದ್ಧ ಸಾರಿದ್ದ ಮಂದಿ ಅವಿವೇಕಿಗಳಾಗಿ, ಧರ್ಮಾಂಧ ರಕ್ತಪಿಪಾಸುಗಳಾಗಿ ಜನರ ಕಣ್ಣಲ್ಲಿ ಬದಲಾದರು. ತನಿಖೆಯಿಂದ ವಾಸ್ತವವಾಗಿ ಸ್ವಾಮೀಜಿಗಳ ಪ್ರತಿಮೆ ಬಳಿ ನೇತುಹಾಕಿದ್ದ ಆ ಬಟ್ಟೆ ಯಾವುದೇ ಪಕ್ಷದ ಅಥವಾ ಧರ್ಮದ ಧ್ವಜವಾಗಿರಲಿಲ್ಲ. ಬದಲಾಗಿ ಅದು ಕೇವಲ ಧಾರ್ಮಿಕ ಕಾರ್ಯಕ್ರಮದ ಬ್ಯಾನರ್ ಆಗಿತ್ತು ಮತ್ತು ಅದನ್ನು ಹಾಕಿದ್ದು ಕೂಡ ಬಿಜೆಪಿ ನಾಯಕರು ಕೋಮು ದಳ್ಳುರಿ ಸೃಷ್ಟಿಸುವ ಉದ್ದೇಶದಿಂದ ಹೇಳಿದಂತೆ ಮುಸ್ಲಿಮರಾಗಿರದೆ, ಮಿಲಿಂದ್ ಉರುಫ್ ಮನೋಹರ ಎಂಬ ಹಿಂದೂ ಯುವಕನೇ ಆಗಿದ್ದ. ಆತ ಕುಡಿದ ಮತ್ತಿನಲ್ಲಿ ರಾತ್ರಿ ಚಳಿ ತಡೆಯದೆ ಮಸೀದಿ ಆವರಣದಲ್ಲಿದ್ದ ಆ ಬ್ಯಾನರ್ ಹೊದ್ದುಕೊಂಡು ಬಂದಿದ್ದ. ಆದರೆ ಬಳಿಕ ಅದು ಮುಸ್ಲಿಂ ಧರ್ಮಕ್ಕೆ ಸಂಬಂಧಿಸಿದ್ದು ಎಂದುಕೊಂಡು ಸ್ವಾಮೀಜಿ ಪ್ರತಿಮೆ ಬಳಿ ಎಸೆದುಹೋಗಿದ್ದ ಎಂದು ಚಿಕ್ಕಮಗಳೂರು ಪೊಲೀಸರು ಸಿಸಿಟಿವಿ ದೃಶ್ಯಾವಳಿ ಸಹಿತ ಬಹಿರಂಗಪಡಿಸಿದರು.
ಆದರೆ, ಪೊಲೀಸರ ಈ ‘ಸತ್ಯಶೋಧನೆ’ ಮತ್ತು ಘಟನೆ ಮೊದಲು ವರದಿಯಾದ ಕ್ಷಣದ ನಡುವೆ ಈ ವಿಷಯದಲ್ಲಿ ಶೃಂಗೇರಿಯ ಬೀದಿಗಳಲ್ಲಿ ಮತ್ತು ಕನ್ನಡ ಸುದ್ದಿವಾಹಿನಿಗಳ ಸ್ಟುಡಿಯೋಗಳಲ್ಲಿ ಸಾಕಷ್ಟು ವಿಷ ಪ್ರವಾಹ ಹರಿದಿತ್ತು. ಘಟನೆಯ ಸತ್ಯಾಸತ್ಯತೆ, ವಾಸ್ತವಿಕ ವಿವರಗಳನ್ನು ಶೋಧಿಸುವ ಮುನ್ನವೇ ಬಹುತೇಕ ವಾಹಿನಿಗಳು ಇದು ಮುಸ್ಲಿಮರ ಕೃತ್ಯ, ಇದು ಎಸ್ಡಿಪಿಐ ಕೃತ್ಯ, ಕೋಮು ದ್ವೇಷದ ಕೃತ್ಯ ಎಂಬ ಹುಕುಂ ಹೊರಡಿಸಿ, ಆ ಸಮುದಾಯವನ್ನು ಗುರಿಯಾಗಿಸಿಕೊಂಡು ಬೆಂಕಿ ಕಾರಿದ್ದರು. ಮಾಧ್ಯಮಗಳೇ ಕೋಮು ಅಜೆಂಡಾವನ್ನು ಊದುತ್ತಿರುವಾಗ, ಕೋಮುವಾದವನ್ನೇ ಅಜೆಂಡಾ ಮಾಡಿಕೊಂಡ ನಾಯಕರು ಸುಮ್ಮನಿದ್ದಾರೆಯೇ? ಹಾಗಾಗಿ ಮಾಜಿ ಸಚಿವರು ಎಂಬ ಘನತೆಯನ್ನೂ ನೋಡದೆ ಜೀವರಾಜ್ ಬೀದಿ ಪುಡಾರಿಯ ವರಸೆಯಲ್ಲಿ ಗುಂಪು ಕಟ್ಟಿಕೊಂಡು ಪೊಲೀಸರೊಂದಿಗೆ ವಾಗ್ವಾದ ನಡೆಸಿ, “ಇಲ್ಲೇ ಓಡಾಡಿಕೊಂಡಿದ್ದಾನೆ ಅವನು, ಅವರ ವಿಷಯದಲ್ಲಿ ಮಾತ್ರ ನಿಮಗೆ ಸಮಯ ಬೇಕಾ? ಅದೇ ನಾವು ಯಾರಾದರೂ ಇಂತಹದ್ದನ್ನು ಮಾಡಿದ್ದರೆ ಕ್ಷಣಾರ್ಧದಲ್ಲಿ ಒಳಗೆ ಹಾಕುತ್ತಿದ್ದಿರಲ್ಲವಾ?” ಸ್ವತಃ ತಾವು ಕಣ್ಣಾರೆ ಘಟನೆಯನ್ನು ಕಂಡಿರುವಂತೆ, ತಾವೇ ಪ್ರತ್ಯಕ್ಷ ಸಾಕ್ಷಿ ಎಂಬಂತೆ ಪೊಲೀಸರಿಗೇ ಧಮಕಿ ಹಾಕಿದ್ದರು. ಇಂತಹ ಬೆಂಕಿ ಹಾಕುವ ಹೋರಾಟಕ್ಕೇ ಕುಖ್ಯಾತಿ ಗಳಿಸಿರುವ ಸಂಸದೆ ಶೋಭಾ ಕರಂದ್ಲಾಜೆ ಕೂಡ, ಸಿಎಂ ಯಡಿಯೂರಪ್ಪ ಅವರಿಗೆ ಕೂಡಲೇ ಎಸ್ಡಿಪಿಐ ನಿಷೇಧಿಸಬೇಕು ಎಂದು ಟ್ವೀಟ್ ಮೂಲಕ ಪಟ್ಟುಹಿಡಿದ್ದರು ಮತ್ತು ಶೃಂಗೇರಿಗೆ ಹೋಗಿ ದೊಡ್ಡಮಟ್ಟದಲ್ಲಿ ಈ ಪ್ರಕರಣವನ್ನು ಕಿಚ್ಚೆಬ್ಬಿಸುವುದಾಗಿಯೂ ಹೇಳಿದ್ದರು.
ಈ ಎಲ್ಲಾ ಹಿನ್ನೆಲೆಯಲ್ಲಿ ಸಹಜವಾಗೇ ಶೃಂಗೇರಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು ಮತ್ತು ಶೃಂಗೇರಿ ಸಾಹಿತ್ಯ ಸಮ್ಮೇಳನದಲ್ಲಿ ಪೆಟ್ರೋಲ್ ಬಾಂಬ್ ನಂತಹ ಪ್ರಯೋಗದ ಮೂಲಕ ಇಡೀ ಸಾಹಿತ್ಯ ಕಾರ್ಯಕ್ರಮಕ್ಕೆ ಬೆಂಕಿ ಹಾಕುವ ಪ್ರಯತ್ನ ಮಾಡಿದ್ದ ಮಂದಿ, ಈಗ ಮತ್ತೊಮ್ಮೆ ಅಂತಹದ್ದೇ ಉಗ್ರ ಪ್ರತಿಭಟನೆಗೆ ಮುಂದಾಗಬಹುದು ಎಂಬ ಲೆಕ್ಕಾಚಾರಗಳು ಆತಂಕ ರಾಜ್ಯದ ಉದ್ದಗಲಕ್ಕೂ ಆತಂಕ ಮೂಡಿಸಿದ್ದವು.
ಆದರೆ, ಸ್ವಾಮೀಜಿಗಳ ಪ್ರತಿಮೆ ಬಳಿ ಕಟ್ಟಿದ್ದು ಯಾವುದೇ ಪಕ್ಷ ಅಥವಾ ಧರ್ಮದ ಧ್ವಜ ಅಲ್ಲ. ಅದೊಂದು ಬ್ಯಾನರ್ ಅಷ್ಟೇ. ಅದನ್ನು ಕಟ್ಟಿದವ ಕೂಡ ಬಿಜೆಪಿ ಮತ್ತು ಸಂಘಪರಿವಾರದವರು ಊಹಿಸಿದಂತೆ ‘ಮುನ್ನಾ’ ಅಲ್ಲ; ಬದಲಾಗಿ ಮಿಲಿಂದ ಅಲಿಯಾಸ ಮನೋಹರ ಎನ್ನುವುದು ಬಹಿರಂಗವಾಗುತ್ತಲೇ ಉಗ್ರ ಹಿಂದೂ ಹೋರಾಟಗಾರರು, ಹಿಂದುತ್ವ ನಾಯಕರ ದನಿ ಉಡುಗಿಹೋಯಿತು. ಇದ್ದಕ್ಕಿಂತ ಜೀವರಾಜ್, ಶೋಭಾ ಸೇರಿದಂತೆ ವೀರಾವೇಶದ ಹೇಳಿಕೆ ನೀಡಿದ ಬಹುತೇಕರು ಸಾಮಾಜಿಕ ಜಾಲತಾಣಗಳಿಂದ, ತುತ್ತೂರಿ ಮಾಧ್ಯಮಗಳಿಂದ ಕಾಣೆಯಾದರು.
ಇನ್ನು ಚಿಕ್ಕಮಗಳೂರು ಪೊಲೀಸರು, ಹೇಳಿಕೆ ಕೂಡ ಎಷ್ಟು ನಾಟಕೀಯವಾಗಿತ್ತು ಎಂದರೆ; ಆತ ಮಿಲಿಂದ ಅಲಿಯಾಸ್ ಮನೋಹರ್. ಈಗಾಗಲೇ ಎರಡು ಕಳವು ಪ್ರಕರಣಗಳಲ್ಲಿ ಬಂಧಿತನಾಗಿ ನ್ಯಾಯಾಲಯದಲ್ಲಿ ಶಿಕ್ಷೆಯಾಗಿ ಜೈಲಿಗೆ ಹೋಗಿಬಂದಿದ್ದಾನೆ ಎಂದು ಹೇಳುವ ಎಸ್ಪಿ, ಸ್ವತಃ ಮಿಲಿಂದ್ ಅವರು ಎಂದು ಬಹುವಚನದಲ್ಲಿ ಆತನನ್ನು ಸಂಬೋಧಿಸಿ, ‘ಆತ ಕುಡಿದ ಮತ್ತಿನಲ್ಲಿ ಹೀಗೆ ಮಾಡಿದ್ದಾರೆ. ಮಸೀದಿ ಬಟ್ಟೆ ತಂದು ಹೊದ್ದುಕೊಂಡ ಬಳಿಕ ಅದು ಮುಸ್ಲಿಂ ಕಾರ್ಯಕ್ರಮದ ಬ್ಯಾನರ್ ಎಂದು ಗೊತ್ತಾಗಿದೆ. ಆಗ ಆತ ಒಂದು ದೇವರ ಬಟ್ಟೆ ಮತ್ತೊಂದು ದೇವರಿಗೆ ಇರಲಿ ಎಂದು ಸ್ವಾಮೀಜಿ ಪ್ರತಿಮೆ ಬಳಿ ಹಾಕಿಹೋಗಿದ್ದಾರೆ. ಇದನ್ನು ಅವರೇ ಸ್ವತಃ ಹೇಳಿದ್ದಾರೆ’ ಎಂದಿದ್ದಾರೆ.
ಪೊಲೀಸರ ಈ ಹೇಳಿಕೆ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟೀಕೆಗೆ ಗುರಿಯಾಗಿದೆ. ಆತ ಹಿಂದೂ ಎಂಬ ಕಾರಣಕ್ಕೆ ಆತನಿಗೆ ಬಹುವಚನ ಹಚ್ಚಲಾಗಿದೆ. ಆತ ಮಸೀದಿಗೆ ಹೋಗಿದ್ದು, ಅಲ್ಲಿಂದ ಬಟ್ಟೆ ತಂದದ್ದು, ಅದನ್ನು ಮತ್ತೊಂದು ದೇವರ ಬಳಿ ಇರಲಿ ಎಂದು ಪ್ರತಿಮೆ ಬಳಿ ಹಾಕಿದ್ದು ಎಂಬ ವಿವರಗಳು ಸಿನಿಮೀಯವಾಗಿವೆ. ಇದೆಲ್ಲಾ ಕಟ್ಟುಕತೆಯಂತೆ ತೋರುತ್ತಿದೆ. ಆತ ನಿಜವಾಗಿಯೂ ಭಜರಂಗದಳದ ಕಾರ್ಯಕರ್ತ. ಬೆಂಗಳೂರು ಗಲಭೆಯ ಬೆನ್ನಲ್ಲೇ ಮುಸ್ಲಿಮರೇ ಕೃತ್ಯ ಎಸಗಿದ್ದಾರೆ. ಎಸ್ಡಿಪಿಐ ಕಾರ್ಯಕರ್ತರ ಕೃತ್ಯವೆಂದು ಬಿಂಬಿಸಿ ಶೃಂಗೇರಿ ಸೇರಿದಂತೆ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಕೋಮು ದಳ್ಳುರಿ ಸೃಷ್ಟಿಸುವುದು ಕೆಲವರ ಉದ್ದೇಶವಾಗಿತ್ತು. ಆದರೆ, ಸಿಸಿಟಿವಿ ದೃಶ್ಯಾವಳಿಗಳು ಅಚಾನಕ್ಕಾಗಿ ತನಿಖೆ ವೇಳೆ ಸಿಕ್ಕಿದ್ದು ಸಾರ್ವಜನಿಕವಾಗಿಯೂ ಬಹಿರಂಗಗೊಂಡಿದ್ದರಿಂದ ಪ್ರಕರಣವನ್ನು ಮುಚ್ಚಿಹಾಕಿ ಭಜರಂಗದಳದ ಕಾರ್ಯಕರ್ತ ಮಿಲಿಂದನನ್ನು ರಕ್ಷಣೆ ಮಾಡುವ ಪ್ರಯತ್ನ ನಡೆಯುತ್ತಿದೆ ಎಂಬ ದಟ್ಟ ಅನುಮಾನಗಳು ವ್ಯಕ್ತವಾಗುತ್ತಿವೆ. ಚಿಕ್ಕಮಗಳೂರು ಪೊಲೀಸರ ಹೇಳಿಕೆ ಕೂಡ ತೀರಾ ನಾಟಕೀಯ ಘಟನೆಗಳಿಂದ ಕೂಡಿದ್ದು, ಇಂತಹ ಅನುಮಾನಗಳಿಗೆ ಪುಷ್ಟಿಕೊಡುವಂತಿದೆ ಎಂಬುದೇ ಆ ಬಗ್ಗೆ ಜಾಲತಾಣದಲ್ಲಿ ವ್ಯಾಪಕ ಟೀಕೆಗಳಿಗೆ ಕಾರಣವಾಗಿದೆ.
ಹಾಗೆ ನೋಡಿದರೆ, ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ, ಕೋಮು ಹಿಂಸೆ ಪ್ರಚೋದನೆ ಮತ್ತು ಭಯೋತ್ಪಾದಕ ಕೃತ್ಯಗಳ ವಿಷಯದಲ್ಲಿ ಪೊಲೀಸರು ಮತ್ತು ಬಿಜೆಪಿ ಸರ್ಕಾರ ಹಾಗೂ ಅದರ ನಾಯಕರು ಹೀಗೆ ಯೂಟರ್ನ್ ಹೊಡೆದ ಘಟನೆಗಳು ಸಾಕಷ್ಟಿವೆ. ಮಂಗಳೂರು ವಿಮಾನ ನಿಲ್ದಾಣದ ಬಾಂಬ್ ವಿಷಯದಲ್ಲಿ ಕೂಡ ಇಂತಹದ್ದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಬಾಂಬ್ ಇಟ್ಟಿರುವ ಮೊದಲ ವರದಿಗಳು ಬರುತ್ತಿದ್ದಂತೆ ಪ್ರತಿಕ್ರಿಯಿಸಿದ ಬಿಜೆಪಿಯ ಉಗ್ರ ಹಿಂದುತ್ವವಾದಿ ನಾಯಕರು, ಅದು ಮುಸ್ಲಿಮರದ್ದೇ ಕೃತ್ಯ. ಅದು ಸಿಎಎ- ಎನ್ಆರ್ಸಿ(CAA- NRC) ಹೋರಾಟದ ಭಾಗವಾಗಿ ಆ ಕೃತ್ಯ ನಡೆದಿದೆ. ಹೋರಾಟದ ಹಿಂದೆ ಐಸಿಸ್ ಮತ್ತು ಇತರ ಮುಸ್ಲಿಂ ಭಯೋತ್ಪಾದಕ ಸಂಘಟನೆಗಳ ಬೆಂಬಲವಿದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ ಎಂದೆಲ್ಲಾ ಹೇಳಿಕೆ ನೀಡಿದ್ದರು. ಸ್ವತಃ ಗೃಹ ಸಚಿವ ಬಸವರಾಜ ಬೊಮ್ಮಾಯಿ ಕೂಡ ಅದು ಮುಸ್ಲಿಂ ಭಯೋತ್ಪಾದಕ ಕೃತ್ಯವಾಗಿದ್ದು ಯಾರೇ ಆಗಲಿ ಕಠಿಣ ಕ್ರಮ ಜರುಗಿಸುತ್ತೇವೆ. ಭಯೋತ್ಪಾದನಾ ಕೃತ್ಯಗಳಿಗೆ ತಕ್ಕ ಪ್ರತ್ಯುತ್ತರ ನೀಡುತ್ತೇವೆ ಎಂದು ವೀರಾವೇಶದ ಹೇಳಿಕೆ ನೀಡಿದ್ದರು. ಮಂಗಳೂರು ಪೊಲೀಸ್ ಕಮೀಷನರ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಕೂಡ ತನಿಖೆಗೆ ಮುನ್ನವೇ ನಿರ್ಧಾರಕ್ಕೆ ಬಂದವರಂತೆ ಮುಸ್ಲಿಂ ಭಯೋತ್ಪಾದಕರ ಕೃತ್ಯ ಎಂದೇ ಷರಾ ಬರೆದಿದ್ದರು.
ಆದರೆ, ಆ ಬಳಿಕ ಬಾಂಬ್ ಇಟ್ಟವನು ತಾವು ಊಹಿಸಿದಂತೆ ‘ಅಕ್ಬರ್’ ಅಲ್ಲ; ಆದಿತ್ಯ ರಾವ್ ಎಂಬುದು ಗೊತ್ತಾಗುತ್ತಿದ್ದಂತೆ(ಆರೋಪಿ ಸ್ವತಃ ಬೆಂಗಳೂರು ಐಜಿ ಕಚೇರಿಯಲ್ಲಿ ಶರಣಾಗಿದ್ದ) ಬಿಜೆಪಿ ಮತ್ತು ಸಂಘಪರಿವಾರ ನಾಯಕರ ವರಸೆ ಬದಲಾಗಿತ್ತು. ಪೊಲೀಸರು ಕೂಡ ವೈದ್ಯಕೀಯ ಪರೀಕ್ಷೆಗೆ ಮುಂಚೆಯೇ ಆದಿತ್ಯ ರಾವ್ ಮಾನಸಿಕ ಅಸ್ವಸ್ಥ ಎಂಬ ಪ್ರಮಾಣಪತ್ರ ಕೊಟ್ಟಿದ್ದರು. ಆ ಮೂಲಕ ರಾವ್ ರಕ್ಷಣೆಗೆ ಇಡೀ ಸರ್ಕಾರ ನಿಂತಂತೆ ಕಂಡಿತ್ತು. ಸ್ವತಃ ಗೃಹ ಸಚಿವರು ಕೂಡ ಆರೋಪಿಯ ವೈದ್ಯಕೀಯ ಪರೀಕ್ಷೆಗೆ ಮುಂಚೆಯೇ ಆತ ಮಾನಸಿಕ ಅಸ್ವಸ್ಥ, ನಿರುದ್ಯೋಗದಿಂದ ಬೇಸತ್ತಿದ್ದ ಎಂಬ ಕನಿಕರದ ಮಾತುಗಳ ಮೂಲಕ ವಿಮಾನದಲ್ಲಿ ಬಾಂಬ್ ಇಟ್ಟಂತಹ ಘೋರ ಭಯೋತ್ಪಾದಕ ಕೃತ್ಯವನ್ನು ಕೇವಲ ಯಕಃಶ್ಚಿತ್ ತಪ್ಪು ಎಂಬಂತೆ ಬಿಂಬಿಸುವ ಪ್ರಯತ್ನ ಮಾಡಿದ್ದರು. ಆದಿತ್ಯ ರಾವ್ ಕುಟುಂಬ ಕೂಡ ಸಂಘಪರಿವಾರದ ಸಂಪರ್ಕ ಹೊಂದಿತ್ತು ಎಂಬ ವಿವರಗಳು ಕೂಡ ಬಹಿರಂಗವಾಗಿದ್ದವು!
ಇದೀಗ ಶೃಂಗೇರಿ ಘಟನೆಯಲ್ಲಿ ಕೂಡ ಅದೇ ವರಸೆ ಪುನರಾವರ್ತನೆಯಾಗಿದೆ. ಕೃತ್ಯ ಎಸಗಿದವರ ಪೂರ್ವಪರ ತಿಳಿಯುವ ಮುನ್ನ ಅದನ್ನು ಒಂದು ಸಮುದಾಯದ ತಲೆಗೆ ಕಟ್ಟಿ, ಇಡೀ ಸಮುದಾಯವನ್ನು ಭಯೋತ್ಪಾದಕರಂತೆ, ಕೋಮು ಹಿಂಸಾವಾದಿಗಳಂತೆ ಬಿಂಬಿಸುವುದು, ಆ ಮೂಲಕ ಸಮಾಜದಲ್ಲಿ ಹಿಂಸೆಗೆ, ಕೋಮು ದ್ವೇಷಕ್ಕೆ ತುಪ್ಪು ಸುರಿಯುವುದು, ಗಲಭೆ ಸೃಷ್ಟಿಗೆ ಯತ್ನಿಸುವುದು. ಒಂದು ವೇಳೆ ಅಂತಹ ಘಟನೆಯಲ್ಲಿ ಭಾಗಿಯಾದವರ ಅಸಲೀ ಬಣ್ಣ ಬಯಲಾದರೆ, ಅವರು ತಮ್ಮದೇ ಕೋಮಿಗೆ, ಸಂಘಟನೆಗೆ ಸೇರಿದವರು ಎಂದು ಬಹಿರಂಗವಾಗುತ್ತಲೇ ಅಪರಾಧಿಯ ಅಪರಾಧದ ಗಂಭೀರತೆ ಕಡಿಮೆ ಮಾಡುವ ನಿಟ್ಟಿನಲ್ಲಿ ಅವರಿಗೆ ಹುಚ್ಚ,ಅರೆಹುಚ್ಚ, ಮಾನಸಿಕ ಅಸ್ವಸ್ಥ, ಕುಡುಕ, ಭಿಕ್ಷುಕ, ಅನಾಥ ಎಂಬಂತೆ ಸಾಮಾಜಿಕ ಕನಿಕರದ, ಕ್ಷಮಾಪಣೆಗೆ ಅರ್ಹ ಎಂಬಂತಹ ಹಣೆಪಟ್ಟಿ ಹಚ್ಚುವುದು ಈಗ ಹೊಸ ಮಾದರಿಯಾಗಿದೆ.
ಒಂದು ಘೋರ ಸಮಾಜಘಾತುಕ ಕೃತ್ಯವನ್ನು, ಒಂದು ಶುದ್ಧ ಭಯೋತ್ಪಾದಕ ಕೃತ್ಯವನ್ನು ಅಪರಾಧಿಯ ಹೆಸರು, ಜಾತಿ, ಧರ್ಮವನ್ನು ನೋಡಿ, ಆತನ ಸಿದ್ಧಾಂತವನ್ನು ನೋಡಿ ವೈಭವೀಕರಿಸುವ ಅಥವಾ ಅದನ್ನು ಮುಚ್ಚಿಹಾಕುವ ಮಟ್ಟಿಗೆ ಒಂದು ಸಮಾಜವಾಗಿ ನಾವು ಅಧಃಪತನಹೊಂದಿದ್ದೇವೆ ಎಂದರೆ, ನಿಜಕ್ಕೂ ಮಾನಸಿಕ ಅಸ್ವಸ್ಥತೆ ಯಾರೋ ಒಬ್ಬರಿಗಲ್ಲ; ಇಡೀ ಸಮಾಜಕ್ಕೆ ಅಂಟುಜಾಡ್ಯವಾಗಿರಬಹುದೇ ಎಂಬ ಅನುಮಾನ ಮೂಡುತ್ತಿದೆ. ಏಕೆಂದರೆ; ಯಾವುದೇ ಸ್ವಸ್ಥ ಸಮಾಜ, ಒಂದು ಘೋರ ಅಪರಾಧಕ್ಕೆ ಜಾತಿ, ಧರ್ಮ, ಕುಲದ ಬಣ್ಣ ಹಚ್ಚುವುದಿಲ್ಲ. ಅಂತಹ ಬಣ್ಣದಲ್ಲಿ ಆ ಕೃತ್ಯವನ್ನು ಮುಳುಗಿಸುವ ಅಥವಾ ತೇಲಿಸುವ ಆತ್ಮಹತ್ಯಾ ನಡೆ ಅನುಸರಿಸುವುದಿಲ್ಲ. ಹಾಗಾಗಿ ನಿಜಕ್ಕೂ ಈಗ ಚಿಕಿತ್ಸೆ ಬೇಕಿರುವುದು ಅಸ್ವಸ್ಥ ಸಮಾಜಕ್ಕೇ! ಅಲ್ಲವಾ?