
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ರಾಜಕಾರಣದಲ್ಲಿ ಎಲ್ಲರಿಗೂ ಪಾಠ ಮಾಡುವ ನಾಯಕನಾರು ಎಂದರೆ ಎಲ್ಲರೂ ಹೇಳುವ ಒಂದೇ ಉತ್ತರ ಅದು ಮಾಜಿ ಸಿಎಂ ಹಾಗೂ ಹಾಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ. ವಿಧಾನಸಭೆಯಲ್ಲಿ ಕನ್ನಡ ವ್ಯಾಕರಣದಿಂದ ಹಿಡಿದು ಗಣಿತವನ್ನೂ ಹೇಳಿಕೊಡುತ್ತಿರುತ್ತಾರೆ. ಶಾಲೆಯಲ್ಲಿ ಮಕ್ಕಳಿಗೆ ಮೇಷ್ಟ್ರು ಪಾಠ ಹೇಳಿಕೊಟ್ಟ ಮೇಲೆ ಪ್ರಶ್ನೆಯನ್ನು ಕೇಳುವ ಹಾಗೆ ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಪ್ರಶ್ನೆ ಕೇಳಿದ್ದಾರೆ. ವಿಧಾನಸಭೆಯಲ್ಲಿ ಪಾಠ ಹೇಳಿಕೊಟ್ಟವರನ್ನೇ ಪ್ರಶ್ನೆ ಕೇಳಿದ್ದಾರೆ. ಆದರೆ ಈ ಬಾರಿ ಹೇಳಿಕೊಟ್ಟ ಪಾಠವನ್ನು ಮಾತ್ರ ಕೇಳದೆ ಬೇರೆ ಪ್ರಶ್ನೆಗಳನ್ನು ಕೇಳಲಾಗಿದೆ.
ಸರ್ಕಾರ ಹಾಗೂ ಮಂತ್ರಿಗಳಿಗೆ ಮೇಷ್ಟ್ರ ಪ್ರಶ್ನೆ..!
ಕರೋನಾ ಸೋಂಕಿಗೆ ತುತ್ತಾಗಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಆಸ್ಪತ್ರೆಯಿಂದ ರಾಜ್ಯ ಸರ್ಕಾರದ ಬಗ್ಗೆ ಕಾಳಜಿ ಹೊರ ಹಾಕಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧವಾಗಿ ಸರಣಿ ಟ್ವೀಟ್‌ಗಳನ್ನು ಮಾಡಿರುವ ಸಿದ್ದರಾಮಯ್ಯ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಳೆದ ವರ್ಷದ ಇದೇ ಸಮಯದಲ್ಲಿ ಪ್ರವಾಹ ಎದುರಾಗಿತ್ತು. ಆಗ ಆಗಿದ್ದ ಅತಿವೃಷ್ಟಿಗೆ ಪರಿಹಾರ ಎಲ್ಲಿ..? ಎಂದು ಪ್ರಶ್ನಿಸಿರುವ ಸಿದ್ದರಾಮಯ್ಯ ಪರಿಹಾರ ಕಲ್ಪಿಸಲು ಸರ್ಕಾರ ವಿಫಲವಾಗಿದೆ ಎಂದು ಟೀಕಿಸಿದ್ದಾರೆ. ಮಳೆ ಬಗ್ಗೆ ಕಳೆದ ತಿಂಗಳೇ ಸರ್ಕಾರಕ್ಕೆ ಪತ್ರ ಬರೆದು ಎಚ್ಚರಿಸಿದ್ದೆ. ಆದರೆ ಎಂದಿನಂತೆ ರಾಜ್ಯ ಸರ್ಕಾರದಿಂದ ಉತ್ತರ ಬರಲಿಲ್ಲ. ಈಗ ಎದುರಾಗಿರುವ ಅತಿವೃಷ್ಟಿಗೆ ಸರ್ಕಾರ ಕಣ್ಣುಕಣ್ಣು ಬಿಡ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.
The failure of State govt to provide relief to last year's flood damage has aggravated the condition of this year's flood.
I had warned the ministers a month back about the same, but as usual, there was no response.
— Siddaramaiah (@siddaramaiah) August 9, 2020
ಹಳ್ಳಿಕಡೆ ಹೇಳುವಂತೆ ಬೆಂಕಿ ಬಿದ್ದ ಮೇಲೆ ಬಾವಿ ತೋಡಲು ಹೊರಟಂತೆ, ಪ್ರವಾಹ ಬಂದ ಬಳಿಕ ರಾಜ್ಯ ಸರ್ಕಾರ ರಕ್ಷಣಾ ಕಾರ್ಯಾಚರಣೆಗೆ ಇಳಿದಿದೆ ಎಂದಿರುವ ಸಿದ್ದರಾಮಯ್ಯ, ಕಳೆದ ವರ್ಷ ಪ್ರವಾಹದಿಂದ ಹಾನಿಯಾದ ಬಳಿಕ ಏನೇನು ಮಾಡಿರಿವಿರೋ ಲೆಕ್ಕ ಕೊಡಿ ಎಂದು ಆಗ್ರಹ ಮಾಡಿದ್ದಾರೆ. ಕಳೆದ ವರ್ಷ ಹಾನಿಗೊಳಗಾದ ರಸ್ತೆ, ಸೇತುವೆ, ಸರ್ಕಾರಿ ಕಟ್ಟಡಗಳು ಎಷ್ಟು..? ಅವುಗಳಲ್ಲಿ ಎಷ್ಟನ್ನು ಪೂರ್ಣವಾಗಿ ದುರಸ್ತಿಗೊಳಿಸಲಾಗಿದೆ..? ಅದಕ್ಕಾಗಿ ಖರ್ಚಾಗಿರುವ ಹಣವೆಷ್ಟು..? ಇನ್ನೂ ಪೂರ್ಣವಾಗದೆ ಉಳಿದ ಕಾಮಗಾರಿಗಳು ಎಷ್ಟು..? ಈಗಲಾದರೂ ಅವುಗಳ ವಿವರ ನೀಡುವಿರಾ..? ಎಂದು ಸ್ವತಃ ಲೋಕೋಪಯೋಗಿ ಸಚಿವರೂ ಆಗಿರುವ ಡಿಸಿಎಂ ಗೋವಿಂದ ಕಾರಜೋಳ ಅವರನ್ನು ಪ್ರಶ್ನೆ ಮಾಡಿದ್ದಾರೆ.
ಕಳೆದ ವರ್ಷ ಸುರಿದಿದ್ದ ವರ್ಷಧಾರೆಯಲ್ಲಿ ಕುಸಿದುಬಿದ್ದಿದ್ದ ಮನೆಗಳಿಗೆ ನೀಡಿದ ಪರಿಹಾರ ಎಷ್ಟು..? ಇಲ್ಲಿವರೆಗೂ ಕಟ್ಟಿರುವ ಹೊಸ ಮನೆಗಳೆಷ್ಟು..? ಪ್ರತಿಬಾರಿ ನೆರೆ ನೀರಲ್ಲಿ ಮುಳುಗುವ ಮನೆಗಳೆಷ್ಟು..? ರಾಜ್ಯದಲ್ಲಿ ಎಷ್ಟು ಕುಟುಂಬಗಳು ಇನ್ನೂ ಕೂಡ ಶೆಡ್‌ನಲ್ಲಿವೆ..? ಎಷ್ಟು ಕುಟುಂಬಗಳು ಬಾಡಿಗೆ ಮನೆಯಲ್ಲಿ ವಾಸಮಾಡುತ್ತಿವೆ..? ಈಬಗ್ಗೆ ಮಾಹಿತಿ ನೀಡುವಿರಾ..? ಸೋಮಣ್ಣ ಎಂದು ವಸತಿ ಸಚಿವ ಸೋಮಣ್ಣ ಅವರಿಗೆ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.
ಕಳೆದ ವರ್ಷದ ಅತಿವೃಷ್ಟಿಯಿಂದ ಹಾನಿಯಾದ ಅಂಗನವಾಡಿ ಕಟ್ಟಡಗಳೆಷ್ಟು..? ಅದರಲ್ಲಿ ದುರಸ್ತಿ ಆಗಿರುವುದು ಎಷ್ಟು ಕಟ್ಟಡಗಳು..? ಪುನರ್ ನಿರ್ಮಾಣ ಎಷ್ಟಾಗಿದೆ..? ದುರಸ್ತಿ-ಪುನರ್ ನಿರ್ಮಾಣಕ್ಕೆ ಖರ್ಚು ಮಾಡಲಾಗಿರುವ ಹಣ ಎಷ್ಟು..? ದಯವಿಟ್ಟು ವಿವರ ನೀಡುವಿರಾ..? ಸಚಿವೆ ಶಶಿಕಲಾ ಜೋಲ್ಲೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಿಗೆ ಪ್ರಶ್ನೆ ಮಾಡಿದ್ದಾರೆ ಸಿದ್ದರಾಮಯ್ಯ.
ಕಳೆದ ವರ್ಷದ ಅತಿವೃಷ್ಟಿಯಿಂದ ಹಾನಿಯಾಗಿದ್ದ ಸರ್ಕಾರಿ ಶಾಲಾ ಕಟ್ಟಡಗಳೆಷ್ಟು..? ಅವುಗಳಲ್ಲಿ ಎಷ್ಟು ಕಟ್ಟಡಗಳನ್ನು ದುರಸ್ತಿ ಮಾಡಲಾಗಿದೆ..? ಅವುಗಳಲ್ಲಿ ಎಷ್ಟು ಶಾಲಾ ಕಟ್ಟಡಗಳನ್ನು ಪುನರ್ ನಿರ್ಮಿಸಿಕೊಳ್ಳಲಾಗಿದೆ..? ಇನ್ನೂ ಕೂಡ ದುರಸ್ತಿಗೆ ಬಾಕಿ ಉಳಿದಿರುವ ಕಟ್ಟಡಗಳು ಎಷ್ಟು..? ಶಾಲಾ ಕಟ್ಟಡ ನಿರ್ಮಾಣಕ್ಕಾಗಿ ಖರ್ಚಾದ ಹಣ ಎಷ್ಟು..? ಈ ಬಗ್ಗೆ ವಿವರ ನೀಡಬಹುದೇ ಸಚಿವ ಸುರೇಶ್ ಕುಮಾರ್..? ಎಂದು ಶಿಕ್ಷಣ ಸಚಿವ ಸುರೇಶ್‌ಕುಮಾರ್‌ಗೆ ಆಗ್ರಹ ಮಾಡಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನೆ ಎತ್ತಿದ್ದಾರೆ ಎಂದರೆ ಅದರಲ್ಲಿ ಸೂಕ್ತ ಲೆಕ್ಕಾಚಾರವೇ ಇದ್ದಿರುತ್ತದೆ ಎನ್ನುವುದು ಸರ್ವತಾ ಒಪ್ಪುವಂತಹ ಮಾತು. ಏಕೆಂದರೆ, ಸುಖಾಸುಮ್ಮನೆ ಪ್ರಶ್ನೆಗಳನ್ನು ಕೇಳಿ ತನ್ನ ಕೆಲಸ ಇಲ್ಲಗೆ ಮುಗಿಯಿತು ಎಂದು ಕೈಕೊಟ್ಟಿ ಕುಳಿತುಕೊಳ್ಳುವವರಲ್ಲ ಸಿದ್ದರಾಮಯ್ಯ. ಕಳೆದ ಬಾರಿ ಅತಿವೃಷ್ಠಿ ಆಗಿದ್ದ ವೇಳೆ ಸಾಕಷ್ಟು ಸಮಸ್ಯೆಗಳು ಉದ್ಬವ ಆಗಿದ್ದವು. ಅವುಗಳನ್ನು ವರ್ಷ ಕಳೆಯುವುದರೊಳಗಾಗಿ ಸರ್ಕಾರ ನಿವಾರಣೆ ಮಾಡಿದ್ದರೆ, ಈ ಮುಂಗಾರಿನ ವರ್ಷಾಧಾರೆಗೆ ಭಯಪಡುವ ಅವಶ್ಯಕತೆ ಇರುತ್ತಿರಲಿಲ್ಲ. ಒಮ್ಮೆ ಮಾಡಿದ ತಪ್ಪನ್ನೇ ಪದೇ ಪದೇ ಮಾಡಬಾರದು ಎನ್ನುವ ಮಾತೊಂದಿದೆ. ಆದರೆ ಪ್ರತಿವರ್ಷವೂ ಮಳೆಯ ಅಬ್ಬರದಿಂದಾಗಿ ಸಾಯುತ್ತಲೇ ಇದ್ದಾರೆ ಎಂದರೆ ಸರ್ಕಾರ ತಪ್ಪನ್ನು ತಿದ್ದಿಕೊಂಡಿಲ್ಲ ಎನ್ನುವುದೇ ಆಗಿದೆ. ಸರ್ಕಾರಕ್ಕೆ ತಪ್ಪನ್ನು ತಿದ್ದಿಕೊಳ್ಳಲು ಸಮಯಾವಕಾಶ ಇಲ್ಲ ಎಂದರ್ಥವೋ..? ಅಥವಾ ಸರ್ಕಾರಕ್ಕೆ ಜನರನ್ನು ಸಮಸ್ಯೆಯಿಂದ ಮುಕ್ತಿಗೊಳಿಸಲು ಇಚ್ಛೆಯಿಲ್ಲವೆಂದೋ..? ಎನ್ನುವುದನ್ನು ಜನರೇ ಅರ್ಥ ಮಾಡಿಕೊಳ್ಳಬೇಕಿದೆ.
ಸರ್ಕಾರ ಹಾಗೂ ಮಂತ್ರಿಗಳು ಉತ್ತರ ಕೊಡಬೇಕಲ್ಲವೇ
ಇದೀಗ ಸಿದ್ದರಾಮಯ್ಯ ಕೇಳಿರುವ ಪ್ರಶ್ನೆಗಳು ಸೂಕ್ತವಾಗಿವೆ. ರಾಜ್ಯ ಸರ್ಕಾರ ಕೂಡ ಕಳೆದ ವರ್ಷದ ಪ್ರವಾಹದಿಂದ ಆಗಿದ್ದ ಅನಾಹುತ ಹಾಗೂ ಆ ಬಳಿಕ ಸರ್ಕಾರ ಕೈಗೊಂಡ ಕಾರ್ಯಗಳು ಮತ್ತು ಇನ್ನೂ ಆಗಬೇಕಿರುವ ಕಾರ್ಯಗಳನ್ನು ಸಾರ್ವಜನಿಕವಾಗಿ ಬಹಿರಂಗ ಮಾಡಬೇಕಿದೆ. ಅದಕ್ಕಾಗಿ ಆಗಿರುವ ವೆಚ್ಚವನ್ನು ಕೂಡ ಜನರ ಮುಂದಿಟ್ಟರೆ ಸರ್ಕಾರ ಏನು ಮಾಡಿದೆ..? ಎನ್ನುವುದು ರಾಜ್ಯದ ಜನತೆಗೆ ತಿಳಿಯುತ್ತದೆ ಅಲ್ಲವೇ..? ಆಗಿದ್ದರೆ ಉತ್ತರ ಕೊಡುತ್ತಾ ರಾಜ್ಯ ಸರ್ಕಾರ..? ಗೊತ್ತಿಲ್ಲ. ತಪ್ಪುಗಳನ್ನು ಒಪ್ಪಿಕೊಂಡು ಮೌನವಾಗಿದ್ದರೆ ತಪ್ಪು ಮಾಡಿದೆ ಎಂದೇ ಭಾಸವಾಗುತ್ತದೆ.
