ಕರೋನಾ ಸೋಂಕು ತಡೆಯ ಕ್ರಮವಾಗಿ ಹೇರಲಾಗಿರುವ ಲಾಕ್ ಡೌನ್ ಮುಂದುವರಿಸುವುದಾಗಿ ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ ಘೋಷಿಸಿದ್ದಾರೆ. ಆ ಮೂಲಕ ಈಗಾಗಲೇ 21 ದಿನಗಳ ಮೊದಲ ಹಂತದ ಲಾಕ್ ಡೌನ್ ಪೂರೈಸಿರುವ ಭಾರತ, ಮೇ 3ರವರೆಗೆ ಮತ್ತೆ 19 ದಿನಗಳ ಲಾಕ್ ಡೌನ್ ಗೆ ಒಡ್ಡಿಕೊಂಡಿದೆ. ಅಂದರೆ ಸದ್ಯಕ್ಕೆ ಒಟ್ಟು 40 ದಿನಗಳ ಲಾಕ್ ಡೌನ್ ಗೆ ದೇಶ ಒಳಗಾದಂತಾಗಿದೆ.
ಮೊದಲ ಹಂತದ ಲಾಕ್ ಡೌನ್ ಮಂಗಳವಾರ ಸಂಜೆಗೆ ಮುಕ್ತಾಯವಾಗುವ ಹಿನ್ನೆಲೆಯಲ್ಲಿ, ಪ್ರಧಾನಿ ಮೋದಿಯವರು ದೇಶದ ಜನರನ್ನುದ್ದೇಶಿಸಿ ಮಾತನಾಡಲಿದ್ದು, ಲಾಕ್ ಡೌನ್ ಮುಂದುವರಿಸುವ ಅಥವಾ ಸಡಿಲಿಸುವ ಬಗ್ಗೆ ಜನತೆಗೆ ಮಾಹಿತಿ ನೀಡಲಿದ್ದಾರೆ ಎಂಬ ನಿರೀಕ್ಷೆ ಇತ್ತು. ಅಂತೆಯೇ ಸೋಮವಾರವೇ ಈ ಬಗ್ಗೆ ಪ್ರಕಟಣೆ ಹೊರಬಿದ್ದಿತ್ತು. ಆದರೆ, ಕರೋನಾ ಸೋಂಕು ದೇಶದಲ್ಲಿ ಕಾಣಿಸಿಕೊಂಡ ಬಳಿಕ ಈಗಾಗಲೇ ಮೂರು ಬಾರಿ ದೇಶವನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿಗಳು, ಕರೋನಾದ ನಿಯಂತ್ರಣದ ನಿಟ್ಟಿನಲ್ಲಿ ಮೊದಲ ಪ್ರಯೋಗವಾದ ಜನತಾ ಕರ್ಫ್ಯೂ ಪಾಲಿಸಲು ಮತ್ತು ಬಳಿಕ ಲಾಕ್ ಡೌನ್ ಪಾಲಿಸಲು ಜನರಿಗೆ ಕರೆ ಕೊಟ್ಟಿದ್ದರು. ಹಾಗೇ ಚಪ್ಪಾಳೆ ತಟ್ಟಲು ಮತ್ತು ದೀಪ ಹಚ್ಚಲು ಕೂಡ ಕರೆ ನೀಡಿದ್ದರು. ಆದರೆ, ಒಂದು ಕಡೆ ಜೀವಕಂಟಕ ರೋಗ ಭೀತಿ, ಮತ್ತೊಂದು ಕಡೆ ಲಾಕ್ ಡೌನ್ ನಿಂದಾಗಿ ದುಡಿಮೆ ಇಲ್ಲದೆ ಬದುಕು ನಡೆಸುವ ಸವಾಲಿನ ನಡುವೆ ಸಿಲುಕಿದ ದೇಶದ ಜನಸಾಮಾನ್ಯರಿಗೆ ವಿಶ್ವಾಸ ತುಂಬುವ, ಭರವಸೆ ಹುಟ್ಟಿಸುವ ನಿಟ್ಟಿನಲ್ಲಿ ಅವರ ನೆರವಿಗೆ ಸರ್ಕಾರ ಯಾವೆಲ್ಲಾ ಕ್ರಮಕೈಗೊಳ್ಳಲಿದೆ ಎಂಬ ಬಗ್ಗೆಯಾಗಲೀ, ರೋಗದ ವಿರುದ್ಧ ಮುಂಚೂಣಿ ಹೋರಾಟ ನಡೆಸುತ್ತಿರುವ ವೈದ್ಯಕೀಯ ಮತ್ತು ಪೊಲೀಸ್ ಸಿಬ್ಬಂದಿಯ ಸಾಹಸದ ಬಗ್ಗೆಯಾಗಲೀ ಪ್ರಧಾನಿ ಪ್ರಸ್ತಾಪಿಸಿರಲಿಲ್ಲ.
ಕನಿಷ್ಠ ಈ ಬಾರಿಯಾದರೂ ಪ್ರಧಾನಮಂತ್ರಿಗಳು ಲಾಕ್ ಡೌನ್ ನಿಂದಾಗಿ ಕೆಲಸ ಕಳೆದುಕೊಂಡು ಬೀದಿಪಾಲಾದ ದಿನಗೂಲಿಗಳು, ವಲಸೆ ಕಾರ್ಮಿಕರು, ಕೃಷಿ ಕಾರ್ಮಿಕರ ಬದುಕಿನ ಬವಣೆ ನೀಗಿಸಲು ಸರ್ಕಾರದ ಮುಂದೆ ಯಾವೆಲ್ಲಾ ಯೋಜನೆಗಳಿವೆ ಎಂಬ ಬಗ್ಗೆಯಾಗಲೀ, ರೋಗ ನಿಯಂತ್ರಣದ ಬಗ್ಗೆ ಸರ್ಕಾರ ಲಾಕ್ ಡೌನ್ ಹೊರತುಪಡಿಸಿ ಯಾವೆಲ್ಲಾ ಕ್ರಮಗಳನ್ನು ಕೈಗೊಂಡಿದೆ ಮತ್ತು ಕೈಗೊಳ್ಳಲಿದೆ ಎಂಬ ಬಗ್ಗೆಯಾಗಲೀ ಸ್ಪಷ್ಟ ಮಾಹಿತಿ ನೀಡಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ದೇಶದ ಕರೋನಾ ಚಿಕಿತ್ಸೆ ಆಸ್ಪತ್ರೆ ಮತ್ತು ಹಾಸಿಗೆ ಸಾಮರ್ಥ್ದ ಬಗ್ಗೆ ಪ್ರಸ್ತಾಪಿಸಿದ್ದನ್ನು ಹೊರತುಪಡಿಸಿ ಅವರು ಬೇರೆ ವಿಷಯಗಳ ಬಗ್ಗೆ ಪ್ರಸ್ತಾಪಿಸಲೇ ಇಲ್ಲ.
ಒಂದು ಕಡೆ ಕರ್ನಾಟಕವೂ ಸೇರಿದಂತೆ ಬಹುತೇಕ ಎಲ್ಲಾ ರಾಜ್ಯ ಸರ್ಕಾರಗಳು ಲಾಕ್ ಡೌನ್ ನಿಂದಾಗಿ ಹಿಂದೆಂದೂ ಕಂಡರಿಯದ ಪ್ರಮಾಣದ ಆರ್ಥಿಕ ನಷ್ಟಕ್ಕೆ ತುತ್ತಾಗಿವೆ, ತೆರಿಗೆ ಆದಾಯ ಖೋತಾ ಆಗಿದೆ. ಆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕೂಡಲೇ ಆರ್ಥಿಕ ನೆರವು ನೀಡಬೇಕು. ಇಲ್ಲವಾದಲ್ಲಿ ಒಂದು ಕಡೆ ಸೋಂಕು ನಿಯಂತ್ರಣ ಮತ್ತು ಚಿಕಿತ್ಸೆಗಾಗಿ ವೈದ್ಯಕೀಯ ಮತ್ತು ಆರೋಗ್ಯ ವ್ಯವಸ್ಥೆಯನ್ನು ಸಜ್ಜುಗೊಳಿಸುವುದು, ಮತ್ತೊಂದು ಕಡೆ ಲಾಕ್ ಡೌನ್ ನಿಂದಾಗಿ ಭೀಕರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ದುರ್ಬಲ ವರ್ಗಗಳಿಗೆ ಕನಿಷ್ಠ ಆಹಾರ ಮತ್ತು ಆರೋಗ್ಯ ಖಾತರಿಪಡಿಸುವುದು ಸೇರಿದಂತೆ ಎರಡೆರಡು ಸವಾಲು ಎದುರಿಸುವುದು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿಯವರೊಂದಿಗಿನ ಸಂವಾದದ ವೇಳೆ ಸೋಮವಾರ ಸ್ಪಷ್ಟಪಡಿಸಿದ್ದವು.
ಅದರಲ್ಲೂ ಕರ್ನಾಟಕದಂತಹ ತೆರಿಗೆ ಸಂಗ್ರಹದಲ್ಲಿ ದೇಶದಲ್ಲೇ ಪ್ರಮುಖ ಸ್ಥಾನದಲ್ಲಿರುವ ರಾಜ್ಯದಲ್ಲಿಯೇ ಪರಿಸ್ಥಿತಿ ತೀರಾ ಬಿಗಡಾಯಿಸಿದ್ದು, ಸರ್ಕಾರದ ಸಾಮಾನ್ಯ ವೆಚ್ಚಗಳನ್ನು ಕೂಡ ಭರಿಸಲು ಹಣಕಾಸಿನ ತೀವ್ರ ಮುಗ್ಗಟ್ಟು ತಲೆದೋರಿದೆ. ಸರ್ಕಾರಿ ನೌಕರರ ವೇತನ ಕೂಡ ನೀಡಲಾಗುತ್ತಿಲ್ಲ. ಆ ಹಿನ್ನೆಲೆಯಲ್ಲಿ ಸರ್ಕಾರಿ ನಿವೇಶನಗಳ ಹರಾಜಿಗೆ ಮುಂದಾಗಿರುವ ಸರ್ಕಾರ, ಆ ಮೂಲಕ ಒಂದಿಷ್ಟು ಆದಾಯ ಕ್ರೋಡೀಕರಣದ ನಿರೀಕ್ಷೆಯಲ್ಲಿದೆ. ಆದರೆ, ಇಂತಹ ಸಂಕಷ್ಟದ ಹೊತ್ತಿನಲ್ಲೂ ಸರಿಸುಮಾರು 30 ಸಾವಿರ ಕೋಟಿ ರೂ. ಮೊತ್ತದ ಜಿಎಸ್ ಟಿ ಪಾಲು ಸೇರಿದಂತೆ ವಿವಿಧ ಬಾಕಿ ಉಳಿಸಿಕೊಂಡಿರುವ ಕೇಂದ್ರ ಸರ್ಕಾರ, ರಾಜ್ಯದ ನೆರವಿಗೆ ಬರುತ್ತಿಲ್ಲ! ಆ ಹಿನ್ನೆಲೆಯಲ್ಲಿ ಪ್ರಮುಖವಾಗಿ ಮೋದಿಯವರ ಮಾತುಗಳ ಬಗ್ಗೆ ಕರ್ನಾಟಕ ವಿಶೇಷ ನಿರೀಕ್ಷೆ ಹೊಂದಿತ್ತು. ಆದರೆ, ಆ ನಿರೀಕ್ಷೆ ಹುಸಿಯಾಗಿದೆ.
ಮಾರ್ಚ್ 24ರಂದು ಜಾರಿಗೆ ಬಂದ ದಿಢೀರ್ ಲಾಕ್ ಡೌನ್ ನಿಂದಾಗಿ ದೇಶಾದ್ಯಂತ ಸುಮಾರು ಹತ್ತು ಲಕ್ಷಕ್ಕೂ ಅಧಿಕ ವಲಸೆ ಕಾರ್ಮಿಕರು ಅತಂತ್ರರಾದರು. ಅಕ್ಷರಶಃ ಬೀದಿಯಲ್ಲೇ ದಿನ ಕಳೆಯುವಂತಾಯಿತು. ಹೊತ್ತಿನ ಊಟ, ಕನಿಷ್ಠ ಸೂರಿಗೂ ಗತಿಯಿಲ್ಲದೆ ಅವರುಗಳು ಅತ್ತ ಸ್ವಂತ ಊರು ಸೇರಲಾರದೆ, ಇತ್ತ ವಲಸೆ ಬಂದ ನಗರಗಳಲ್ಲೂ ನೆಲೆಯಿಲ್ಲದೆ ಪರಿತಪಿಸುತ್ತಿದ್ಧಾರೆ. ಹಾಗೆಯೇ ಕೋಟ್ಯಂತರ ಮಂದಿ ಅಸಂಘಟಿತ ವಲಯದ ಕಾರ್ಮಿಕರು, ಕೃಷಿ ಕೂಲಿಗಳು ದುಡಿಮೆ ಇಲ್ಲದೆ, ಹಸಿವಿನ ವಿರುದ್ಧದ ಹೋರಾಡುತ್ತಿದ್ದಾರೆ. ಅಂಥವರ ಪಾಲಿಗೆ ಸರ್ಕಾರದ ನೆರವು ತಲುಪಿದ್ದು ವಿರಳವೇ. ಪಡಿತರ ಧಾನ್ಯ ಕೂಡ ಸಕಾಲಕ್ಕೆ ತಲುಪದ ಹಲವು ನಿರ್ದಶನಗಳಿವೆ. ದೇಶದ ದುಡಿಯುವ ಜನರ ಆ ಬವಣೆಯ ಬಗ್ಗೆಯೂ ಪ್ರಧಾನಮಂತ್ರಿಗಳು ಚಕಾರವೆತ್ತಲಿಲ್ಲ. ದೇಶದ ಸರ್ಕಾರಿ ಗೋದಾಮುಗಳಲ್ಲಿ ಇಡೀ ದೇಶಕ್ಕೆ ಮಿಕ್ಕಿ ಮೂರು ಪಟ್ಟು ಆಹಾರ ಧಾನ್ಯ ಕೊಳೆಯುತ್ತಿದ್ದರೂ ಅದರನ್ನು ವ್ಯವಸ್ಥಿತವಾಗಿ ಸಕಾಲದಲ್ಲಿ ಹಸಿದವರಿಗೆ ತಲುಪಿಸುವ ಬಗ್ಗೆ ಸರ್ಕಾರ ಈವರೆಗೆ ಗಂಭೀರ ಪ್ರಯತ್ನವನ್ನೇ ಮಾಡಿಲ್ಲ! ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ ಬಗ್ಗೆ ಪ್ರಸ್ತಾಪಿಸಿದರೂ ಕಟ್ಟಕಡೆಯ ವ್ಯಕ್ತಿಗೆ ಅದರ ಪ್ರಯೋಜನ ತಲುಪಿಸಲು ಯಾವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂಬುದನ್ನು ಸ್ಪಷ್ಟಪಡಿಸಲಿಲ್ಲ. ಈ ನಡುವೆ ದಿನದಿಂದ ದಿನಕ್ಕೆ ಹಸಿವಿನಿಂದ ಸಾಯುತ್ತಿರುವವ ಕುರಿತ ವರದಿಗಳು ಹೆಚ್ಚುತ್ತಲೆ ಇವೆ!
ಇನ್ನು ಬೇಸಿಗೆ ಬೆಳೆಯ ಕೊಯ್ಲು ಮತ್ತು ಮುಂಗಾರು ಬೆಳೆಯ ಬಿತ್ತನೆ ಅಡಕತ್ತರಿಯಲ್ಲಿ ಸಿಲುಕಿರುವ ದೇಶದ ಅನ್ನದಾತರ ಸಂಕಷ್ಟ ಹೀಗೆ ಮುಂದುವರಿದರೆ ಇನ್ನಾರು ತಿಂಗಳಲ್ಲಿ ದೇಶ ಮಣ್ಣು ತಿನ್ನಬೇಕಾದ ದುಃಸ್ಥಿತಿ ಎದುರಾಗಬಹುದು. ಕೊಯ್ಲು ಮತ್ತು ಬಿತ್ತನೆ, ಬಿತ್ತನೆ ಪೂರ್ವ ಕೆಲಸ ಕಾರ್ಯಗಳಿಗೆ ರೈತರಿಗೆ ಕೂಲಿಗಳು ಸಿಗುತ್ತಿಲ್ಲ. ಬೆಳೆದ ಬೆಳೆಗೆ ಮಾರುಕಟ್ಟೆ ಇಲ್ಲ. ಮಾರುಕಟ್ಟೆಗೆ ಸಾಗಣೆ ಮಾಡಲು ನಿರ್ಬಂಧದ ಅಡ್ಡಗಾಲು,.. ಹೀಗೆ ಹತ್ತಾರು ಸಮಸ್ಯೆಗಳು ರೈತ ಸಮುದಾಯವನ್ನು ಕಾಡುತ್ತಿವೆ. ಕರ್ನಾಟಕವೂ ಸೇರಿದಂತೆ ಹಲವು ಕಡೆ ಕೃಷಿ ಉತ್ಪನ್ನ(ಹಣ್ಣು- ತರಕಾರಿ ಮಾತ್ರ) ಸಾಗಣೆಗೆ ಲಾಕ್ ಡೌನ್ ನಿಂದ ವಿನಾಯ್ತಿ ನೀಡಿದ್ದರೂ ತಳಮಟ್ಟದಲ್ಲಿ ಪೊಲೀಸರು ಈಗಲೂ ಅಡ್ಡಗಾಲಾಗಿದ್ದಾರೆ ಎಂಬುದು ವಾಸ್ತವ. ಜೊತೆಗೆ ವ್ಯವಹಾರಸ್ಥರಿಗೆ ಹಣಕಾಸಿನ ಮುಗ್ಗಟ್ಟು ತಲೆದೋರಿರುವುದರಿಂದ ಮಾರುಕಟ್ಟೆಗೆ ಬೆಳೆ ಬಂದರೂ ಕೊಳ್ಳುವವರಿಲ್ಲ. ಪೆಟ್ರೋಲ್ ಬಂಕ್(ಭಾಗಶಃ), ಪಂಚರ್ ಶಾಪ್, ಹೋಟೆಲುಗಳು ಮುಚ್ಚಿರುವ ಹಿನ್ನೆಲೆಯಲ್ಲಿ ಸರಕು ಸಾಗಣೆ ವಾಹನಗಳು ಕೂಡ ರಸ್ತೆಗಿಳಿಯುತ್ತಿಲ್ಲ. ಜೊತೆಗೆ ಮುಂಗಾರು ಬೆಳೆ ಬಿತ್ತನೆಗೆ ಕಾಲ ಮೀರತೊಡಗಿದೆ. ಆದರೆ, ರೈತರ ಈ ಸಂಕಷ್ಟದ ಬಗ್ಗೆಯೂ ಮೋದಿಯವರು ಪ್ರಸ್ತಾಪಿಸಲಿಲ್ಲ.
ಇನ್ನು ಲಾಕ್ ಡೌನ್ ನಿಂದಾಗಿ ದೇಶದಾದ್ಯಂತ ಮಾರಕ ಕಾಯಿಲೆಗಳಾದ ಹೃದ್ರೋಗ, ಮಧುಮೇಹ, ಮೂತ್ರಕೋಶ ಸಮಸ್ಯೆ ಮುಂತಾದವಕ್ಕೆ ನಿಯಮಿತವಾಗಿ ತೆಗೆದುಕೊಳ್ಳಲೇಬೇಕಾದ ಮಾತ್ರೆ ಮತ್ತು ಔಷಧಿಗಳ ಕೊರತೆ ಎದುರಾಗಿದೆ. ಹಲವು ಔಷಧಿ ಅಂಗಡಿಗಳಲ್ಲಿ ದಾಸ್ತಾನು ಖಾಲಿಯಾಗಿದೆ. ಸರಬರಾಜು ಇಲ್ಲ ಎಂದು ಹೇಳಲಾಗುತ್ತಿದೆ. ಲಾಕ್ ಡೌನ್ ನಿಂದ ಔಷಧ ತಯಾರಿಕಾ ಘಟಕಗಳಿಗೆ ವಿನಾಯ್ತಿ ನೀಡಿದ್ದರೂ ಅವುಗಳಿಗೆ ಅಗತ್ಯವಾಗಿ ಬೇಕಿರುವ ಕಚ್ಛಾ ಸಾಮಗ್ರಿ, ಪ್ಯಾಕಿಂಗ್ ಸಾಮಗ್ರಿ ಪೂರೈಕೆ ಪೂರಕ ಕೈಗಾರಿಕೆಗಳು ಸ್ಥಗಿತಗೊಂಡಿವೆ. ಸರಕು ಸಾಗಣೆ ಮತ್ತು ಕೊರಿಯರ್ ಸೇವೆ ನಿಂತಿದೆ. ಹಾಗಾಗಿ ಸಕಾಲಕ್ಕೆ ಔಷಧ ಸಿಗದೆ ರೋಗಿಗಳು ಸಾವು ಕಾಣುವ ಭೀಕರ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಸ್ವತಃ ಕೇಂದ್ರ ಫಾರ್ಮಸ್ಯೂಟಿಕಲ್ಸ್ ಇಲಾಖೆ ಈ ಬಗ್ಗೆ ಕೇಂದ್ರ ಗೃಹ ಇಲಾಖೆಕ್ಕೆ ಎಚ್ಚರಿಸಿ ವಾರ ಕಳೆದರೂ ಯಾವ ಪ್ರತಿಕ್ರಿಯೆ ಇಲ್ಲ. ಆ ಬಗ್ಗೆ ಕೂಡ ಮೋದಿಯವರು ತುಟಿಬಿಚ್ಚಲೇ ಇಲ್ಲ!
ಇದೆಲ್ಲಾ ನಾಗರಿಕರ ಕರ್ಮ. ಅನುಭವಿಸಬೇಕು ಎಂಬ ಧೋರಣೆ ಸರ್ಕಾರದ್ದಿರಬಹುದು. ಆದರೆ, ಇಂತಹ ಹೊತ್ತಲ್ಲಿ ಸಾಂಕ್ರಾಮಿಕದಿಂದ ಜನರ ಜೀವ ರಕ್ಷಣೆ ಮಾಡುವುದರ ಜೊತೆಗೆ, ಹಸಿವಿನಿಂದ, ಆರ್ಥಿಕ ದಿವಾಳಿಯಿಂದ, ತುರ್ತು ಔಷಧ ಸಿಗದೆ ಜನ ಜೀವ ಕಳೆದುಕೊಳ್ಳದಂತೆ ಅವರ ಬದುಕಿಗೆ ಕನಿಷ್ಠ ಸುರಕ್ಷತೆ ಖಾತರಿಪಡಿಸುವುದು ಕೂಡ ಸರ್ಕಾರದ ಮತ್ತು ಸರ್ಕಾರದ ಚುಕ್ಕಾಣಿ ಹಿಡಿದವರ ಪ್ರಾಥಮಿಕ ಕರ್ತವ್ಯವಲ್ಲವೆ?
ಇನ್ನು ಕರೋನಾದ ವಿರುದ್ಧ ಹೋರಾಟದ ವಿಷಯದಲ್ಲಾದರೂ ಮೋದಿಯವರು ಸ್ಪಷ್ಟವಾಗಿ ಏನಾದರೂ ಹೇಳಿದರಾ? ಎಂದರೆ ಅದೂ ಕೂಡ ಇಲ್ಲ. ದೇಶದಲ್ಲಿ ಕರೋನಾ ಚಿಕಿತ್ಸೆಯಾಗಿ ಹೆಚ್ಚುವರಿ ಆಸ್ಪತ್ರೆಗಳನ್ನು ಸಜ್ಜುಮಾಡಲಾಗಿದೆ ಎಂಬ ಒಂದು ಮಾತನ್ನು ಹೊರತುಪಡಿಸಿ, ವೈದ್ಯಕೀಯ ಸಿಬ್ಬಂದಿಗೆ ಜೀವರಕ್ಷಕ ಸಾಧನ(ಪಿಪಿಇ), ಅಗತ್ಯ ಪ್ರಮಾಣದ ಪರೀಕ್ಷಾ ಕಿಟ್, ಔಷಧಿ ಮುಂತಾದ ವಿಷಯದಲ್ಲಿ ಸರ್ಕಾರ ಯಾವೆಲ್ಲಾ ಕ್ರಮಕೈಗೊಂಡಿದೆ. ಸದ್ಯ ಈಗಿನ ಬೇಡಿಕೆ ಮತ್ತು ಪೂರೈಕೆಯ ಸ್ಥಿತಿ ಹೇಗಿದೆ. ಸಾವಿನ ಸಂಖ್ಯೆ ಏರುತ್ತಿರುವ ಹಿನ್ನೆಲೆಯಲ್ಲಿ ಸೋಂಕು ಈಗಾಗಲೇ ಸಾಮೂಹಿಕ ಸೋಂಕಾಗಿ ಪರಿವರ್ತನೆಯಾಗಿದೆ ಎಂದು ಹಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಪರೀಕ್ಷೆ ಮಾಡದೇ ಹೋದರೆ ಸೋಂಕಿತರ ನಿಜವಾದ ಪ್ರಮಾಣ ತಿಳಿಯುವುದಿಲ್ಲ. ದೇಶದ ಒಟ್ಟಾರೆ ಜನಸಂಖ್ಯೆಗೆ ಹೋಲಿಸಿದರೆ ಈಗ ನಡೆಸುತ್ತಿರುವ ಪರೀಕ್ಷೆಗಳ ಪ್ರಮಾಣ ತೀರಾ ನಗಣ್ಯ. ಹಾಗಾಗಿ ವ್ಯಾಪಕ ಪರೀಕ್ಷೆಗಳನ್ನು ನಡೆಸುವ ಸಂದರ್ಭ ಇದು ಎಂದು ಅವರು ಹೇಳಿದ್ದಾರೆ. ಆದರೆ, ಅಂತಹ ವ್ಯಾಪಕ ಪರೀಕ್ಷೆಗಳನ್ನು ನಡೆಸಲು ಸರ್ಕಾರ ತಯಾರಾಗಿದೆಯೇ? ಎಂಬ ಬಗ್ಗೆಯೂ ಮೋದಿಯವರು ಜನತೆಗೆ ಯಾವ ಭರವಸೆಯ ಮಾತನ್ನೂ ಹೇಳಲಿಲ್ಲ.
ಇಷ್ಟೆಲ್ಲಾ ನಿರಾಶೆಯ, ಹತಾಶೆಯ ಚಿತ್ರಣದ ನಡುವೆ ಒಂದು ಭರವಸೆ ಎಂದರೆ; ಲಾಕ್ ಡೌನನ್ನು ಮುಂದಿನ 19 ದಿನಗಳವರೆಗೆ ನಿಭಾಯಿಸುವ ಕುರಿತು ಇನ್ನು ಒಂದೆರಡು ದಿನಗಳಲ್ಲಿ ಸ್ಪಷ್ಟ ನೀತಿ-ನಿರ್ದೇಶನ ನೀಡುವುದಾಗಿಯೂ ಪ್ರಧಾನಿ ಹೇಳಿದ್ದಾರೆ. ಹಾಗಾಗಿ ಆ ವೇಳೆಯಾದರೂ ಕನಿಷ್ಠ ಈ ಸಂಕಷ್ಟಗಳ ಬಗ್ಗೆ, ಅವುಗಳನ್ನು ನೀಗುವ ಬಗ್ಗೆ ಸ್ಪಷ್ಟ ಯೋಜನೆ ಮತ್ತು ಕಾಳಜಿ ಕಾಣಬಹುದೇ ಎಂಬ ಸಣ್ಣ ನಿರೀಕ್ಷೆ ಇದೆ. ಆಗಲೂ, ಈ ಮೊದಲು ಬಜೆಟ್ ಘೋಷಣೆಯ ಯೋಜನೆಗಳನ್ನೇ ಕರೋನಾ ಲಾಕ್ ಡೌನ್ ಪರಿಹಾರ ಪ್ಯಾಕೇಜ್ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದಂತೆ ಮಾಡಿದರೆ; ಅಲ್ಲಿಗೆ ದೇಶದ ಬಡವರು, ರೈತರು, ಕೂಲಿಕಾರ್ಮಿಕರು ಅಕ್ಷರಶಃ ಶಂಖ- ಜಾಗಟೆ ಬಾರಿಸಿ ಬಾಯಿಬಾಯಿ ಬಡಿದುಕೊಳ್ಳಬೇಕಾಗಬಹುದು.
ಸದ್ಯಕ್ಕಂತೂ ಮೋದಿಯವರ ಈ ಬಾರಿಯ ಭಾಷಣ ಕೂಡ, ಬರಿ ಮಾತಿನ ಬಾಯುಪಚಾರದ ಬಡಿವಾರವೇ ಆಯಿತೇ ವಿನಃ, ಸಂಕಷ್ಟದಲ್ಲಿರುವವರ ಪಾಲಿನ ಭರವಸೆಯಾಗಲಿಲ್ಲ!