• Home
  • About Us
  • ಕರ್ನಾಟಕ
Saturday, November 22, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಮತ್ತೆ ಚಾಲ್ತಿಗೆ ಬಂತು ಒಂದು ದೇಶ ಒಂದು ಚುನಾವಣೆ ಎಂಬ ‘ಕಚಗುಳಿ ರಾಜಕೀಯ’ ಅಸ್ತ್ರ

by
November 27, 2020
in ದೇಶ
0
ಮತ್ತೆ ಚಾಲ್ತಿಗೆ ಬಂತು ಒಂದು ದೇಶ ಒಂದು ಚುನಾವಣೆ ಎಂಬ ‘ಕಚಗುಳಿ ರಾಜಕೀಯ’ ಅಸ್ತ್ರ
Share on WhatsAppShare on FacebookShare on Telegram

ಪ್ರಧಾನಿ ಮೋದಿ ಮತ್ತೊಮ್ಮೆ ‘ಒಂದು ದೇಶ, ಒಂದು ಚುನಾವಣೆ’ಯ ಬಗ್ಗೆ ಮಾತನಾಡಿದ್ದಾರೆ. ಚುನಾವಣಾಧಿಕಾರಿಗಳ ಸಮ್ಮೇಳನದಲ್ಲಿ ಮೋದಿ ಗುರುವಾರ ಈ ಬಗ್ಗೆ ಪ್ರಸ್ತಾಪಿಸಿ, ಒಂದು ದೇಶ, ಒಂದು ಚುನಾವಣೆ ಎಂಬುದು ಚರ್ಚೆಯ, ವಾಗ್ವಾದದ ಸಂಗತಿಯಲ್ಲ; ಅದು ದೇಶದ ಸದ್ಯದ ಅನಿವಾರ್ಯತೆ. ಪದೇ ಪದೇ ವರ್ಷದ ಬಹುತೇಕ ತಿಂಗಳು ಒಂದಲ್ಲಾ ಒಂದು ಚುನಾವಣೆ ಜಾರಿಯಲ್ಲಿರುವುದರಿಂದಾಗಿ ದೇಶದ ಅಭಿವೃದ್ಧಿಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ಆ ಹಿನ್ನೆಲೆಯಲ್ಲಿ ಒಂದು ದೇಶ ಒಂದು ಚುನಾವಣೆ ಬಗ್ಗೆ ಎಲ್ಲರೂ ರಾಜಕೀಯ ಬದಿಗಿಟ್ಟು ಯೋಚಿಸಬೇಕಿದೆ ಎಂದು ಹೇಳಿದ್ದಾರೆ.

ADVERTISEMENT

ಹಾಗೆ ನೋಡಿದರೆ, ಪ್ರಧಾನಿ ಮೋದಿ ಮತ್ತು ಅವರ ಬಿಜೆಪಿ ಪಕ್ಷ ಈ ಪರಿಕಲ್ಪನೆಯ ಬಗ್ಗೆ ಕಳೆದ ಐದಾರು ವರ್ಷಗಳಿಂದ ಮತ್ತೆ ಮತ್ತೆ ಪ್ರಸ್ತಾಪಿಸುತ್ತಲೇ ಬಂದಿದ್ದಾರೆ. ಭಾರೀ ಬಹುಮತದ ಮೂಲಕ ಎರಡನೇ ಅವಧಿಗೆ ದೇಶದ ಅಧಿಕಾರದ ಚುಕ್ಕಾಣಿ ಹಿಡಿದಾಗಲೇ ಕಳೆದ ವರ್ಷ, ನರೇಂದ್ರ ಮೋದಿ ಅವರ ನೇತೃತ್ವದ ಎನ್ ಡಿ ಎ ಸರ್ಕಾರ, ನೂತನ ಲೋಕಸಭೆಯ ಮೊಟ್ಟಮೊದಲ ಅಧಿವೇಶನಕ್ಕೆ ಮುನ್ನವೇ, ತನ್ನ ಮಹತ್ವಾಕಾಂಕ್ಷೆಯ ಈ ಪ್ರಸ್ತಾವನೆಯ ಕುರಿತ ಚರ್ಚೆಗೆ ಚಾಲನೆ ನೀಡಿತ್ತು. ದೇಶದ ಲೋಕಸಭೆ, ವಿವಿಧ ರಾಜ್ಯಗಳ ವಿಧಾನಸಭೆ ಹಾಗೂ ಪಂಚಾಯ್ತಿ ಚುನಾವಣೆಗಳನ್ನು ಏಕಕಾಲಕ್ಕೆ ನಡೆಸುವ ‘ಒಂದು ದೇಶ, ಒಂದು ಚುನಾವಣೆ’ ಪ್ರಸ್ತಾವನೆಯ ಕುರಿತು ಚರ್ಚಿಸಲು ಸರ್ವಪಕ್ಷ ಸಭೆ ಕೂಡ ನಡೆಸಿತ್ತು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಆ ಮೂಲಕ, ಬಿಜೆಪಿಯ ಕಳೆದ ಚುನಾವಣೆಯ ಪ್ರಣಾಳಿಕೆಯ ಪ್ರಮುಖ ಭರವಸೆಯಾದ ಒಂದು ದೇಶ, ಒಂದು ಚುನಾವಣೆ ಪದ್ಧತಿಯ ಅನುಷ್ಠಾನದ ಕುರಿತ ಪ್ರಯತ್ನಗಳನ್ನು ಪ್ರಸ್ತುತ ಲೋಕಸಭೆಯ ಮೊದಲ ಅಧಿವೇಶನದಿಂದಲೇ ಆರಂಭಿಸಿತ್ತು.

ಪ್ರಧಾನಿಯಾಗಿ ಮೋದಿಯವರ ಮೊದಲ ಅವಧಿಯಲ್ಲಿ ನೋಟು ಅಮಾನ್ಯೀಕರಣ, ಜಿಎಸ್ ಟಿ ಜಾರಿಯಂತಹ ಕ್ರಮಗಳ ಮೂಲಕ ದೇಶದ ಮತದಾರರಲ್ಲಿ ‘ಭಾರೀ ಬದಲಾವಣೆ’, ‘ಕ್ರಾಂತಿಕಾರಕ ಸುಧಾರಣೆ’ ಮುಂತಾದ ‘ಭ್ರಮಾ ರಾಜಕೀಯ’ ಕಚಗುಳಿ ಹುಟ್ಟಿಸಿ, ‘ಅಚ್ಛೇದಿನ’ದ ಭರವಸೆಗಳನ್ನು ಜೀವಂತವಾಗಿಟ್ಟಿದ್ದರು. ಇದೀಗ, ಅದೇ ‘ಕಚಗುಳಿ ರಾಜಕೀಯ’ದ ಮುಂದುವರಿದ ಭಾಗವಾಗಿ ‘ಒಂದು ದೇಶ, ಒಂದು ಚುನಾವಣೆ’ ಎಂಬ ಪ್ರಸ್ತಾವನೆ ಕುರಿತ ಚರ್ಚೆಗೆ ಮೋದಿ ಮತ್ತೆ ಚಾಲನೆ ನೀಡಿದ್ದಾರೆ.

ಬಿಜೆಪಿಯ ಚುನಾವಣಾ ದಿಗ್ವಿಜಯಗಳ ಗುಟ್ಟೇ ಇಂತಹ ಕಚಗುಳಿ ರಾಜಕೀಯ ಎಂಬುದು ಇತ್ತೀಚಿನ ವರ್ಷಗಳ ಅದರ ಚುನಾವಣಾ ಘೋಷಣೆಗಳು ಮತ್ತು ಅಧಿಕಾರಕ್ಕೆ ಬಂದ ಬಳಿಕದ ಅದರ ಪ್ರಮುಖ ನೀತಿ-ನಿರೂಪಣೆಗಳನ್ನು ಗಮನಿಸಿದರೆ ತಿಳಿಯದೇ ಇರದು. ಪ್ರಮುಖವಾಗಿ ಮತದಾರರೂ ಸೇರಿದಂತೆ ದೇಶದ ಜನಸಾಮಾನ್ಯರಲ್ಲಿ ಒಂದು ದಿಢೀರ್ ಅಚ್ಚರಿ ಹುಟ್ಟಿಸುವ, ಅಬ್ಬಾ ಎನಿಸುವಂತೆ ಮಾಡುವ ಮತ್ತು ‘ಇಂತಹದ್ದನ್ನು ಇನ್ಯಾರೂ ಮಾಡಲು ಸಾಧ್ಯವಿಲ್ಲ ಬಿಡಿ’ ಎಂಬ ಉಮೇದು ಹುಟ್ಟಿಸುವ ಮೂಲಕವೇ, ಜನರಲ್ಲಿ ‘ತಾವೇನೋ ಹೊಸ ದಿಕ್ಕಿಗೆ ದೇಶವನ್ನು ಕೊಂಡೊಯ್ಯುತ್ತೇವೆ’ ಎಂಬ ಭರವಸೆ ಹುಟ್ಟಿಸುವುದು ಬಿಜೆಪಿಗೆ ಕರಗತವಾಗಿಬಿಟ್ಟಿದೆ. ಹಾಗಾಗೇ, ಅದು ‘ಸಶಕ್ತ ಭಾರತ, ಸದೃಢ ಭಾರತ’, ‘ನವ ಭಾರತ, ಬಲಿಷ್ಠ ಭಾರತ’, ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ನಂತಹ ಘೋಷಣೆಗಳನ್ನು ಕೇವಲ ಘೋಷಣೆಯಾಗಿಟ್ಟುಕೊಂಡೇ ಸತತ ಎರಡು ಚುನಾವಣೆಗಳನ್ನು ಗೆಲ್ಲಲು ಸಾಧ್ಯವಾಗಿದೆ!

ಈಗ ಅಂತಹ ‘ಕಚಗುಳಿ ರಾಜಕೀಯ’ದ ಭಾಗವಾದ ‘ಒಂದು ದೇಶ, ಒಂದು ಚುನಾವಣೆ’ಯ ತಮ್ಮ ಘೋಷಣೆಯನ್ನು ಮುಂದಿನ ಲೋಕಸಭಾ ಚುನಾವಣೆಯವರೆಗೆ ಜೀವಂತವಿಡುವ ಯತ್ನಗಳನ್ನು ಪ್ರಧಾನಿ ಮೋದಿಯವರು ಮಾಡುತ್ತಿದ್ದಾರೆ. ಹಾಗೇ, ನೋಟು ಅಮಾನ್ಯೀಕರಣ, ಜಿಎಸ್ ಟಿ ಮತ್ತು ಕಪ್ಪು ಹಣ ವಾಪಸು ತರುವ ರಾಜಕೀಯ ವರಸೆಗಳಂತೆಯೇ, ಈ ‘ಒಂದು ದೇಶ, ಒಂದು ಚುನಾವಣೆ’ ಕೂಡ ಪ್ರಧಾನಿ ಮೋದಿಯವರನ್ನು ಸ್ವತಂತ್ರ ಭಾರತದ ‘ಐಕಾನ್’ ಆಗಿ ಕಟ್ಟುವ ವರ್ಚಸ್ಸು ವೃದ್ಧಿ ಸರ್ಕಸ್ಸಿನ ಭಾಗವೇ ಎಂಬುದು ಗುಟ್ಟೇನಲ್ಲ.

ಹಾಗೆ ನೋಡಿದರೆ, ‘ಏಕ ಕಾಲಕ್ಕೆ ಚುನಾವಣೆ’ ಎಂಬುದನ್ನು ಬಿಜೆಪಿ ಕಳೆದ ಐದಾರು ವರ್ಷಗಳಿಂದಲೂ ಸಾರ್ವಜನಿಕ ಚರ್ಚೆಯಲ್ಲಿ ಜೀವಂತವಾಗಿಡುತ್ತಲೆ ಬಂದಿದೆ. ಅದರಲ್ಲೂ, ದೇಶದ ಜನಸಾಮಾನ್ಯರನ್ನು ಗೋಳು ಹೊಯ್ದುಕೊಂಡ ನೋಟು ಅಮಾನ್ಯೀಕರಣದ ವ್ಯರ್ಥ ಕಸರತ್ತು ಮತ್ತು ಜಿಎಸ್ ಟಿಯ ಆರಂಭಿಕ ವೈಫಲ್ಯಗಳು ಸರ್ಕಾರ ಮತ್ತು ತಮ್ಮ ವರ್ಚಸ್ಸಿಗೆ ಹಿನ್ನಡೆ ತಂದ ಹೊತ್ತಲ್ಲಿ, ಮೋದಿಯವರಿಗೆ ಆಸರೆಯಾಗಿ ಸಿಕ್ಕಿದ್ದು ಈ ಅಸ್ತ್ರ. ಆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರ ಒತ್ತಾಸೆಯಂತೆ ಭಾರತೀಯ ಕಾನೂನು ಆಯೋಗ ಏಕ ಕಾಲಕ್ಕೆ ಚುನಾವಣೆ ನಡೆಸುವ ಕುರಿತು ರಾಜಕೀಯ ಪಕ್ಷಗಳ ಅಭಿಪ್ರಾಯ ಸಂಗ್ರಹ ಆರಂಭಿಸಿತ್ತು. ರಾಜಕೀಯ ಪಕ್ಷಗಳು ಮತ್ತು ಪರಿಣಿತರ ಅಭಿಪ್ರಾಯ ಆಧರಿಸಿ, ಕಾನೂನು ಆಯೋಗ ಕಾನೂನು ತಿದ್ದುಪಡಿಯ ಅಗತ್ಯ ಮತ್ತು ಕ್ರಮಗಳ ಕುರಿತ ತನ್ನ ಕರಡು ವರದಿಯನ್ನು 2019ರ ಆಗಸ್ಟ್ ನಲ್ಲಿಯೇ ಸಲ್ಲಿಸಿತ್ತು.

ಆದರೆ, ಬಿಜೆಪಿಯನ್ನು ಹೊರತುಪಡಿಸಿ ದೇಶದ ಉಳಿದ ಯಾವ ರಾಜಕೀಯ ಪಕ್ಷಗಳಿಗೂ ಈ ಏಕಕಾಲಕ್ಕೆ ಲೋಕಸಭೆ ಮತ್ತು ವಿಧಾನಸಭೆಗಳಿಗೆ ಚುನಾವಣೆ ನಡೆಸುವ ಪ್ರಸ್ತಾವನೆಯ ಬಗ್ಗೆ ಆಸಕ್ತಿ ಇಲ್ಲ. ಹಾಗಾಗಿಯೇ, ತನ್ನ ಕರಡು ವರದಿಗೆ ಮುನ್ನ ಕಾನೂನು ಆಯೋಗ ನಡೆಸಿದ ರಾಜಕೀಯ ಪಕ್ಷಗಳೊಂದಿಗಿನ ಸಮಾಲೋಚನಾ ಸಭೆಗಳಿಗೆ ಹಲವು ಪಕ್ಷಗಳು ಹಾಜರಾಗಲೇ ಇಲ್ಲ. ಸಭೆಗೆ ಹಾಜರಾದ ಪಕ್ಷಗಳ ಪೈಕಿ ಬಹುತೇಕ ಪಕ್ಷಗಳು ಆ ಪ್ರಸ್ತಾವನೆಯ ವಿರುದ್ಧ ನಿಲುವು ಪ್ರಕಟಿಸಿದ್ದವು. ಅಲ್ಲದೆ, ಪರ ನಿಲುವು ಹೊಂದಿರುವ ಬೆರಳೆಣಿಕೆಯ ಪಕ್ಷಗಳು ಕೂಡ, ಷರತ್ತಿನ ಮೇಲೆ ಅದಕ್ಕೆ ಒಪ್ಪಿಗೆ ಸೂಚಿಸಿದ್ದವು.

ಕಾಂಗ್ರೆಸ್, ಸಿಪಿಐ(ಎಂ), ಟಿಡಿಪಿ, ಎಐಎಂಐಎಂ, ಜೆಡಿಯು ಸೇರಿದಂತೆ ಕೆಲವು ಪಕ್ಷಗಳು, ಹಣಕಾಸು, ಸಿಬ್ಬಂದಿ ಹೊರೆಯಂತಹ ಸಂಗತಿಗಳನ್ನು ಹೊರತುಪಡಿಸಿ, ಏಕಕಾಲಕ್ಕೆ ಚುನಾವಣೆ ನಡೆಸುವುದು ಒಟ್ಟಾರೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಪೆಟ್ಟು ಕೊಡಲಿದೆ. ರಾಷ್ಟ್ರ ಮತ್ತು ರಾಜ್ಯಮಟ್ಟದ ಚುನಾವಣಾ ವಿಷಯಗಳು ಬೇರೆಬೇರೆ ಇರುತ್ತವೆ. ಮತದಾನ ಮತ್ತು ಮತದಾರರ ಆದ್ಯತೆಗಳೂ ಬೇರೆ ಇರುತ್ತವೆ. ಆದರೆ, ಏಕಕಾಲಕ್ಕೆ ಚುನಾವಣೆ ನಡೆಸಿದರೆ, ಮತದಾರನ ಅಂತಹ ಆಯ್ಕೆಗಳನ್ನು ಕಿತ್ತುಕೊಂಡಂತಾಗುತ್ತದೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷದ ಪ್ರಭಾವ ರಾಜ್ಯದ ಚುನಾವಣೆಗಳಲ್ಲೂ ಕೆಲಸ ಮಾಡಲು ಅವಕಾಶವಾಗುತ್ತದೆ ಮತ್ತು ಅದರಿಂದ ಮತದಾರರು ಪ್ರಭಾವಿತರಾಗುತ್ತಾರೆ. ಆ ಮೂಲಕ ರಾಜ್ಯದ ಚುನಾವಣೆಯನ್ನು ಸರ್ಕಾರಗಳು ಪ್ರಭಾವಿಸಲು ಅವಕಾಶವಾಗುತ್ತದೆ. ಮತದಾರರ ಮುಕ್ತ ಆಯ್ಕೆಯ ಹಕ್ಕನ್ನು ಪರೋಕ್ಷವಾಗಿ ಕಸಿದುಕೊಳ್ಳುವ ಈ ವ್ಯವಸ್ಥೆ ಒಟ್ಟಾರೆ ನಮ್ಮ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳಿಗೆ ಇರುವ ಸ್ವಾಯತ್ತತೆ ಮತ್ತು ರಾಜಕೀಯ ಸ್ವಾತಂತ್ರ್ಯಕ್ಕೆ, ಆ ಮೂಲಕ ಪ್ರಜಾಪ್ರಭುತ್ವದ ಆಶಯಕ್ಕೇ ವಿರುದ್ಧ ಎಂದು ಅಭಿಪ್ರಾಯಪಟ್ಟಿದ್ದವು.

ಆದರೆ, ಈ ಪ್ರಸ್ತಾವನೆಯನ್ನು ಬೆಂಬಲಿಸಿದ್ದ ನವೀನ್ ಪಟ್ನಾಯಕ್ ಅವರ ಬಿಜು ಜನತಾ ದಳ, ಎಐಎಡಿಎಂಕೆ, ಸಮಾಜವಾದಿ ಪಕ್ಷ ಮುಂತಾದ ಕೆಲವು ಪಕ್ಷಗಳು, ಪ್ರಮುಖವಾಗಿ ವರ್ಷವಿಡೀ ಒಂದಿಲ್ಲೊಂದು ಚುನಾವಣೆ ನಡೆಯುವುದರಿಂದ ಆಗುವ ನಷ್ಟ ಮತ್ತು ನೀತಿ ಸಂಹಿತೆ ಜಾರಿಯಿಂದಾಗಿ ಅಭಿವೃದ್ಧಿ ಕಾರ್ಯಗಳಿಗೆ ಆಗುವ ಹಿನ್ನಡೆಯನ್ನೇ ಪ್ರಮುಖವಾಗಿ ಪ್ರಸ್ತಾಪಿಸಿದ್ದವು. ಅಲ್ಲದೆ, ಚುನಾವಣಾ ವೆಚ್ಚದ ಹೊರೆ ಹಾಗೂ ಶಿಕ್ಷಕರು ಸೇರಿದಂತೆ ಸರ್ಕಾರಿ ಸಿಬ್ಬಂದಿಗೆ ಆಗುವ ಹೆಚ್ಚುವರಿ ಕರ್ತವ್ಯದ ಹೊರೆಯನ್ನೂ ಮುಂದಿಟ್ಟು, ಏಕಕಾಲಕ್ಕೆ ಚುನಾವಣೆ ನಡೆಸುವುದು ಒಟ್ಟಾರೆ ದೇಶದ ಪ್ರಗತಿಗೆ ಪೂರಕ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದವು.

ಆದರೆ, ಈ ವಿಷಯದಲ್ಲಿ ತಕ್ಷಣದ ರಾಜಕೀಯ ಲಾಭ ನಷ್ಟದ ಈ ಅಭಿಪ್ರಾಯಗಳು ಮತ್ತು ಆತಂಕಗಳನ್ನು ಮೀರಿಯೂ ಕೆಲವು ಸಂಗತಿಗಳು ಗಂಭೀರ ಚಿಂತನೆಗೆ ಹಚ್ಚುವಂತಹವು ಇವೆ. ಆ ಪೈಕಿ ಮೊದಲನೆಯದು; ಬಹುಪಕ್ಷ ಪದ್ಧತಿಯ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬೀಳಬಹುದಾದ ಪೆಟ್ಟು. ಸಾಮಾನ್ಯವಾಗಿ ನಮ್ಮಲ್ಲಿ ಪ್ರತಿ ರಾಜ್ಯದಲ್ಲಿಯೂ ತನ್ನದೇ ಪ್ರಭಾವ ಹೊಂದಿರುವ ಪ್ರಾದೇಶಿಕ ರಾಜಕೀಯ ಪಕ್ಷಗಳಿವೆ. ಅದರಲ್ಲೂ ಕೆಲವು ರಾಜ್ಯಗಳಲ್ಲಿ ರಾಷ್ಟ್ರೀಯ ಪಕ್ಷಗಳಿಗಿಂತ ಸ್ಥಳೀಯ, ಪ್ರಾದೇಶಿಕ ಪಕ್ಷಗಳೇ ಹೆಚ್ಚು ಪ್ರಬಲವಾಗಿವೆ. ಇಂತಹ ಪಕ್ಷಗಳ ರಾಜಕೀಯ ಪ್ರಾಬಲ್ಯಕ್ಕೆ ಕಾರಣವೇ ಆ ಪಕ್ಷಗಳು, ರಾಷ್ಟ್ರೀಯ ಸಂಗತಿಗಳ ಬದಲಾಗಿ, ಹೆಚ್ಚು ಜನಪರವಾದ ಸ್ಥಳೀಯ ವಿಷಯಗಳನ್ನು ಪಕ್ಷದ ರಾಜಕೀಯ ಪ್ರಣಾಳಿಕೆಯಾಗಿಸಿಕೊಂಡು ರಾಜಕಾರಣ ಮತ್ತು ಆಡಳಿತ ನೀತಿಗಳನ್ನು ನಿರ್ಧರಿಸುತ್ತವೆ ಎಂಬುದು. ಆದರೆ, ಒಂದು ವೇಳೆ ಏಕ ಕಾಲಕ್ಕೆ ಚುನಾವಣೆ ಎಂಬುದು ಜಾರಿಯಾದರೆ, ಇಂತಹ ಪಕ್ಷಗಳಿಗೆ ಬುನಾದಿಯಾದ ಪ್ರಾದೇಶಿಕ ರಾಜಕಾರಣವೇ ಅಪ್ರಸ್ತುತವಾಗಲಿದೆ. ದೇವರು, ಧರ್ಮ, ದೇಶದ ಗಡಿ, ನೆರೆರಾಷ್ಟ್ರ, ಭಯೋತ್ಪಾದನೆ ಮುಂತಾದವನ್ನೇ ಸರಕು ಮಾಡಿಕೊಂಡು ಹುಸಿ ರಾಷ್ಟ್ರೀಯತೆಯ ಮೇಲೆಯೇ ಪಂಚಾಯ್ತಿಯಿಂದ ಪಾರ್ಲಿಮೆಂಟ್ ವರೆಗೆ ಚುನಾವಣೆಗಳು ನಡೆಯತೊಡಗುತ್ತವೆ. ಅಂತಿಮವಾಗಿ ಅದು ಪ್ರಾದೇಶೀಕ ಮತ್ತು ಸ್ಥಳೀಯ ವಿಷಯಗಳು, ಪ್ರಾದೇಶಿಕ ರಾಜಕೀಯಕ್ಕೇ ಸಂಚಕಾರ ತರಲಿದೆ ಎಂಬುದು ಈಗ ಪ್ರಮುಖವಾಗಿ ಕೇಳಿಬರುತ್ತಿರುವ ಆತಂಕ.

ಇಡೀ ದೇಶದ್ಯಾಂತ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳನ್ನು ಸಂಪೂರ್ಣ ನೆಲಕಚ್ಚಿಸಿ, ಪ್ರತಿಪಕ್ಷ ಮುಕ್ತ, ಪ್ರತಿರೋಧ ಮುಕ್ತ ಭಾರತ ನಿರ್ಮಿಸುವ ಬಿಜೆಪಿಯ ಉದ್ದೇಶಕ್ಕೆ ಸದ್ಯಕ್ಕೆ ದೊಡ್ಡ ಸವಾಲಾಗಿರುವುದೇ ಈ ಪ್ರಾದೇಶಿಕ ಪಕ್ಷಗಳು. ಮೋದಿ ಅಲೆ, ಹಿಂದುತ್ವದ ಅಲೆ, ಹುಸಿ ದೇಶಭಕ್ತಿಯ ಅಲೆಗಳ ಹೊರತಾಗಿಯೂ ವಿವಿಧ ರಾಜ್ಯಗಳಲ್ಲಿ ಪ್ರಾಬಲ್ಯ ಉಳಿಸಿಕೊಂಡಿರುವ ಪ್ರಾದೇಶಿಕ ಪಕ್ಷಗಳು ಬಿಜೆಪಿಯ ಒಂದು ದೇಶ, ಒಂದು ಪಕ್ಷವೆಂಬ ಸರ್ವಾಧಿಕಾರಿ ವ್ಯವಸ್ಥೆ ಜಾರಿಗೆ ದೊಡ್ಡ ತೊಡಕಾಗಿವೆ. ಹಾಗಾಗಿಯೇ, ತನಗಿರುವ ಆ ಸವಾಲನ್ನು ಎದುರಿಸುವ ತಂತ್ರಗಾರಿಕೆಯಾಗಿಯೂ ಬಿಜೆಪಿ ‘ಒಂದು ದೇಶ, ಒಂದು ಚುನಾವಣೆ’ ಪ್ರಸ್ತಾವನೆಯನ್ನು ಮತ್ತೆ ಮತ್ತೆ ಮುನ್ನೆಲೆಗೆ ತರುತ್ತಿದೆ.

ರಾಜ್ಯಗಳ ರಾಜಕೀಯ ಸ್ವಾಯತ್ತತೆ ಕಾಯುವ ಪ್ರಶ್ನೆ, ಒಕ್ಕೂಟ ವ್ಯವಸ್ಥೆಯ ರಾಜಕೀಯ ಸ್ವಾತಂತ್ರ್ಯದ ಪ್ರಶ್ನೆ, ಪ್ರಾದೇಶಿಕ ಪಕ್ಷಗಳ ಹಿತ ಮತ್ತು ಗ್ರಾಮ ಪಂಚಾಯ್ತಿ ಮಟ್ಟದಿಂದ ಲೋಕಸಭೆವರೆಗಿನ ವಿವಿಧ ಹಂತಗಳ ಅಗಾಧ ಸಂಖ್ಯೆಯ ಚುನಾವಣೆಗಳನ್ನು ಏಕ ಅವಧಿಯ ಸ್ವರೂಪಕ್ಕೆ ತರುವ ಸವಾಲುಗಳ ಹೊರತಾಗಿಯೂ ಏಕ ಕಾಲಕ್ಕೆ ಚುನಾವಣೆ ನಡೆಸುವುದರಿಂದ ದೇಶದ ಸಾರ್ವಜನಿಕ ತೆರಿಗೆ ಹಣ ಮತ್ತು ಸಿಬ್ಬಂದಿ ಶ್ರಮ ಉಳಿತಾಯ ಹಾಗೂ ಅಭಿವೃದ್ಧಿ ಕಾರ್ಯಗಳ ವೇಗ ಮುಂತಾದ ಅನುಕೂಲಗಳಿವೆ. ಕಾನೂನು ಆಯೋಗ ಕೂಡ ತನ್ನ ಶಿಫಾರಸುಗಳಲ್ಲಿ ಇದೇ ಅಂಶಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿದೆ.

ಅದರಲ್ಲೂ ಮುಖ್ಯವಾಗಿ ದೇಶದ ಉದ್ದಗಲಕ್ಕೆ ವರ್ಷದ ಬಹುಪಾಲು ಒಂದಲ್ಲಾ ಒಂದು ಹಂತದ, ಒಂದಲ್ಲಾ ಒಂದು ಚುನಾವಣೆಯ ನೀತಿ ಸಂಹಿತೆ ಚಾಲ್ತಿಯಲ್ಲಿರುವ ಸ್ಥಿತಿ ಇದ್ದು, ಇದು ಗ್ರಾಮ ಮಟ್ಟದಿಂದ ಮೆಟ್ರೋ ಸಿಟಿ ಮಟ್ಟದವರೆಗಿನ ವಿವಿಧ ಕಾಮಗಾರಿಗಳಿಗೆ ದೊಡ್ಡ ಅಡ್ಡಿಯಾಗಿದೆ ಮತ್ತು ಚುನಾವಣೆಗಳಿಗಾಗಿ ಅಪಾರ ಪ್ರಮಾಣದ ಹಣಕಾಸು ಮತ್ತು ಸರ್ಕಾರಿ ಸಿಬ್ಬಂದಿಯ ಶ್ರಮ ವ್ಯಯವಾಗುತ್ತಿದೆ. ಅದನ್ನು ತಪ್ಪಿಸುವ ಮೂಲಕ ದೇಶದ ಪ್ರಗತಿಯ ಗತಿಯನ್ನು ಇನ್ನಷ್ಟು ಹೆಚ್ಚಿಸುವುದು ಅನಿವಾರ್ಯ. ಬದಲಾದ ಕಾಲಕ್ಕೆ ತಕ್ಕಂತೆ ನಮ್ಮ ಚುನಾವಣೆ ಪದ್ಧತಿ ಕೂಡ ಬದಲಾಗಬೇಕಿದೆ ಎಂಬುದು ಪ್ರಮುಖವಾಗಿ ಪ್ರಧಾನಿ ಮೋದಿಯವರ ವಾದ ಕೂಡ.

ಹಾಗೇ ನೋಡಿದರೆ, ಇದು ನಮಗೆ ಹೊಸದೇನಲ್ಲ. ದೇಶದ ಮೊದಲ ಚುನಾವಣೆಯಿಂದ (1952) ಆರಂಭವಾಗಿ 1967ರವರೆಗೆ ಮೊದಲ ನಾಲ್ಕು ಚುನಾವಣೆಗಳು ಇದೇ ಪದ್ಧತಿಯಲ್ಲೇ ನಡೆದಿದ್ದವು. ಆದರೆ ಅಂದು ಕೇವಲ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳು ಮಾತ್ರ ಏಕಕಾಲಕ್ಕೆ ನಡೆದಿದ್ದವು ಮತ್ತು ಪಂಚಾಯ್ತಿ ವ್ಯವಸ್ಥೆ ಆಗಿನ್ನೂ ಜಾರಿಗೆ ಬಂದಿರಲಿಲ್ಲ ಎಂಬುದು ಗಮನಾರ್ಹ. ಈಗಲೂ ಮತ್ತೆ ಆ ವ್ಯವಸ್ಥೆ ಜಾರಿಗೆ ತರಬೇಕೆಂದರೆ, ಪ್ರಮುಖವಾಗಿ ಸಂವಿಧಾನ ತಿದ್ದುಪಡಿ ಅನಿವಾರ್ಯ. ಅದಕ್ಕಾಗಿ ಲೋಕಸಭೆಯಲ್ಲಿ ಭಾರೀ ಬಹುಮತ ಹೊಂದಿರುವ ಬಿಜೆಪಿಗೆ, ಸಂವಿಧಾನ ತಿದ್ದುಪಡಿ ಮಸೂದೆ ರಾಜ್ಯಸಭೆಯಲ್ಲಿ ಅನುಮೋದನೆಯಾಗಲು ಪ್ರತಿಪಕ್ಷಗಳ ಎದುರು ಗೆಲ್ಲಲು ಕನಿಷ್ಠ ಎನ್ ಡಿಎಯೇತರ ಮಿತ್ರಪಕ್ಷಗಳ ಸಹಕಾರವೂ ಬೇಕು. ಆ ಹಿನ್ನೆಲೆಯಲ್ಲಿಯೇ ಇದೀಗ ಪ್ರಧಾನಿ ಮೋದಿ, ದೇಶದ ಭವಿಷ್ಯದ ಪ್ರಗತಿಯ ಮುಂದೆ ನಮ್ಮನಮ್ಮ ಹಿತಾಸಕ್ತಿಗಳನ್ನು ಬದಿಗೊತ್ತಿ ಒಳ್ಳೆಯ ನಿರ್ಧಾರಕ್ಕೆ ಬರಬೇಕಿದೆ ಎಂದಿದ್ದಾರೆ!

ಆ ಹಿನ್ನೆಲೆಯಲ್ಲಿ, ದೇಶಪ್ರೇಮ, ಮುಸ್ಲಿಂ ದ್ವೇಷ, ಅಚ್ಛೇದಿನ ಮುಂತಾದ ಭ್ರಮೆಗಳನ್ನೇ ಬಿತ್ತಿ, ಭಾವನಾತ್ಮಕ ಅಲೆಯ ಮೇಲೆ ಮತ ಫಸಲು ಕೊಯ್ಯುವ ಬಿಜೆಪಿಯ ರಾಷ್ಟ್ರೀಯ ಮುಖ್ಯವಾಹಿನಿಯ ಅಲೆಯನ್ನೇ ರಾಜ್ಯಗಳಿಗೂ ವಿಸ್ತರಿಸುವ, ಆ ಮೂಲಕ ಪಂಚಾಯ್ತಿ ಚುನಾವಣೆಯಿಂದ ಪಾರ್ಲಿಮೆಂಟ್ ಚುನಾವಣೆಯವರೆಗೆ ಮತದಾರರನ್ನು ಪ್ರಭಾವಿಸುವ ಉದ್ದೇಶವೇ ಅಜೆಂಡಾ ಆಗಿರುವ ‘ಒಂದು ದೇಶ, ಒಂದು ಚುನಾವಣೆ’ ಪ್ರಸ್ತಾವನೆ ಮತ್ತೆ ಮತ್ತೆ ಚಾಲ್ತಿಗೆ ಬರುತ್ತಿದೆ.

Tags: one nation one vote
Previous Post

ದೇಶದ ಆರ್ಥಿಕತೆ ಮಂದಗತಿ ಚೇತರಿಕೆ, ಲಾಕ್‌ಡೌನ್‌ ಪ್ಯಾಕೇಜ್ ಈಗಲಾದರೂ ಬಿಡುಗಡೆ ಮಾಡ್ತಾರಾ ಪ್ರಧಾನಿ ಮೋದಿ?

Next Post

ರೈತರನ್ನು ಗೌರವದಿಂದ ನೋಡಿಕೊಳ್ಳಿ: ಕೇಂದ್ರಕ್ಕೆ ಮಾಜಿ ಪ್ರಧಾನಿ ದೇವೇಗೌಡ ಸಲಹೆ

Related Posts

ದುಬೈನಲ್ಲಿ ಭಾರತದ ತೇಜಸ್ ಯುದ್ಧ ವಿಮಾನ ಪತನ
Top Story

ದುಬೈನಲ್ಲಿ ಭಾರತದ ತೇಜಸ್ ಯುದ್ಧ ವಿಮಾನ ಪತನ

by ಪ್ರತಿಧ್ವನಿ
November 21, 2025
0

ದುಬೈ ಏರ್​​ ಶೋ ಕಾರ್ಯಕ್ರಮದಲ್ಲಿ ಭಾರತದ ತೇಜಸ್ ಯುದ್ಧ ವಿಮಾನ ಅಪಘಾತಕ್ಕೀಡಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. https://youtu.be/_-ETZQKXvgY?si=HJdmeaIp6arDY5i5 ತೇಜಸ್ ಯುದ್ಧ ವಿಮಾನ ಏರೋಬ್ಯಾಟಿಕ್ಸ್ ಪ್ರದರ್ಶಿಸಿ ನಂತರ ಇದ್ದಕ್ಕಿದ್ದಂತೆ...

Read moreDetails

“ಜಾಗತಿಕ ಸೆಮಿಕಂಡಕ್ಟರ್ ಮಾರುಕಟ್ಟೆ ಮೂರು ವರ್ಷಗಳಲ್ಲಿ ರೂ 88 ಲಕ್ಷ ಕೋಟಿಗೆ ಏರಿಕೆ”

November 20, 2025

ಟೆಕ್ ಮೇಳದಲ್ಲಿ ಭವಿಷ್ಯದ ಇಂಧನ ಕ್ಷೇತ್ರ ಕುರಿತು ಸಂವಾದ ನಡೆಸಿದ ಸಚಿವ ಪ್ರಿಯಾಂಕ ಖರ್ಗೆ..!!

November 20, 2025

ವಿದ್ಯಾರ್ಥಿಗಳೊಂದಿಗೆ ಅಂತರಿಕ್ಷ ಯಾತ್ರಿಕ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲ ಅವರೊಂದಿಗೆ ಸಂವಾದ ಕಾರ್ಯಕ್ರಮ: ಸಚಿವ ಎನ್‌ ಎಸ್‌ ಭೋಸರಾಜು

November 20, 2025

Lakshmi Hebbalkar: ಅಧಿಕಾರ ಎಂಬುದು ಶಾಶ್ವತ ಅಲ್ಲ,‌ ಅದು ಅವಕಾಶ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

November 20, 2025
Next Post
ರೈತರನ್ನು ಗೌರವದಿಂದ ನೋಡಿಕೊಳ್ಳಿ: ಕೇಂದ್ರಕ್ಕೆ ಮಾಜಿ ಪ್ರಧಾನಿ ದೇವೇಗೌಡ ಸಲಹೆ

ರೈತರನ್ನು ಗೌರವದಿಂದ ನೋಡಿಕೊಳ್ಳಿ: ಕೇಂದ್ರಕ್ಕೆ ಮಾಜಿ ಪ್ರಧಾನಿ ದೇವೇಗೌಡ ಸಲಹೆ

Please login to join discussion

Recent News

ಜೈಲಿಗೆ ಭೇಟಿ ನೀಡಿ ವಿನಯ್ ಕುಲಕರ್ಣಿ, ವೀರೇಂದ್ರ ಪಪ್ಪಿಗೆ ಧೈರ್ಯ ತುಂಬಿದ ಡಿ.ಕೆ ಶಿವಕುಮಾರ್
Top Story

ಜೈಲಿಗೆ ಭೇಟಿ ನೀಡಿ ವಿನಯ್ ಕುಲಕರ್ಣಿ, ವೀರೇಂದ್ರ ಪಪ್ಪಿಗೆ ಧೈರ್ಯ ತುಂಬಿದ ಡಿ.ಕೆ ಶಿವಕುಮಾರ್

by ಪ್ರತಿಧ್ವನಿ
November 21, 2025
ʼಕಾಂಗ್ರೆಸ್ ಸರ್ಕಾರ ಹೋಳು.. ಜನರಿಗೆ ಗೋಳು.. ರೈತರಿಗೆ ಹೂಳುʼ: ಆರ್‌.ಅಶೋಕ್‌ ವ್ಯಂಗ್ಯ
Top Story

ʼಕಾಂಗ್ರೆಸ್ ಸರ್ಕಾರ ಹೋಳು.. ಜನರಿಗೆ ಗೋಳು.. ರೈತರಿಗೆ ಹೂಳುʼ: ಆರ್‌.ಅಶೋಕ್‌ ವ್ಯಂಗ್ಯ

by ಪ್ರತಿಧ್ವನಿ
November 21, 2025
ದುಬೈನಲ್ಲಿ ಭಾರತದ ತೇಜಸ್ ಯುದ್ಧ ವಿಮಾನ ಪತನ
Top Story

ದುಬೈನಲ್ಲಿ ಭಾರತದ ತೇಜಸ್ ಯುದ್ಧ ವಿಮಾನ ಪತನ

by ಪ್ರತಿಧ್ವನಿ
November 21, 2025
ಸಿಎಂ ಸಿದ್ದರಾಮಯ್ಯಗೆ ʼAll The Bestʼ ಹೇಳಿದ ಡಿ.ಕೆ ಶಿವಕುಮಾರ್‌
Top Story

ಸಿಎಂ ಸಿದ್ದರಾಮಯ್ಯಗೆ ʼAll The Bestʼ ಹೇಳಿದ ಡಿ.ಕೆ ಶಿವಕುಮಾರ್‌

by ಪ್ರತಿಧ್ವನಿ
November 21, 2025
ಪರಿಸರ ಸ್ನೇಹಿ ಕಡಲೇಕಾಯಿ ಪರಿಷೆ..ಹತ್ತು ಹಲವು ವಿಶೇಷತೆಗಳ ಶೇಂಗಾ ಜಾತ್ರೆ..!
Top Story

ಪರಿಸರ ಸ್ನೇಹಿ ಕಡಲೇಕಾಯಿ ಪರಿಷೆ..ಹತ್ತು ಹಲವು ವಿಶೇಷತೆಗಳ ಶೇಂಗಾ ಜಾತ್ರೆ..!

by ಪ್ರತಿಧ್ವನಿ
November 21, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಜೈಲಿಗೆ ಭೇಟಿ ನೀಡಿ ವಿನಯ್ ಕುಲಕರ್ಣಿ, ವೀರೇಂದ್ರ ಪಪ್ಪಿಗೆ ಧೈರ್ಯ ತುಂಬಿದ ಡಿ.ಕೆ ಶಿವಕುಮಾರ್

ಜೈಲಿಗೆ ಭೇಟಿ ನೀಡಿ ವಿನಯ್ ಕುಲಕರ್ಣಿ, ವೀರೇಂದ್ರ ಪಪ್ಪಿಗೆ ಧೈರ್ಯ ತುಂಬಿದ ಡಿ.ಕೆ ಶಿವಕುಮಾರ್

November 21, 2025
ʼಕಾಂಗ್ರೆಸ್ ಸರ್ಕಾರ ಹೋಳು.. ಜನರಿಗೆ ಗೋಳು.. ರೈತರಿಗೆ ಹೂಳುʼ: ಆರ್‌.ಅಶೋಕ್‌ ವ್ಯಂಗ್ಯ

ʼಕಾಂಗ್ರೆಸ್ ಸರ್ಕಾರ ಹೋಳು.. ಜನರಿಗೆ ಗೋಳು.. ರೈತರಿಗೆ ಹೂಳುʼ: ಆರ್‌.ಅಶೋಕ್‌ ವ್ಯಂಗ್ಯ

November 21, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada