ಕಾಂಗ್ರೆಸ್‌ನ ಐವರು ಶಾಸಕರು ಪಕ್ಷ ತೊರೆದು ಬಿಜೆಪಿಗೆ ಸೇರಲಿದ್ದರೆ ಎಂದು ಸಿರಾ ಉಪಚುನಾವಣೆ ಪ್ರಚಾರದ ನಡುವೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್‌ಗೆ ಯಾವುದೇ ಭವಿಷ್ಯವಿಲ್ಲವೆಂದು ಅರಿತ ಅವರು ತಮ್ಮ ಪಕ್ಷ ತೊರೆಯುವ ಯೋಚನೆಯಲ್ಲಿದ್ದಾರೆ ಎಂದು ಸವದಿ ತಿಳಿಸಿದ್ದಾರೆ.
ಸಿರಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಸಿ ಎಂ ರಾಜೇಶ್ ಗೌಡ ಅವರ ಪರ ಪ್ರಚಾರ ನಡೆಸಿದ ಸವದಿ, ಆರ್ ಆರ್ ನಗರ ಹಾಗೂ ಸಿರಾ ಎರಡೂ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಭವಿಷ್ಯ ನುಡಿದರು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಟಿಕೆಟ್ ಹಂಚಿಕೆ ಸಂಬಂಧಿಸಿದಂತೆ ಮಾಜಿ ಶಾಸಕ ಕೆ ಎನ್ ರಾಜಣ್ಣ ಕಾಂಗ್ರೆಸ್‌ನೊಳಗೆ ಬಂಡಾಯ ಎದ್ದಿದ್ದಾರೆ ಎಂಬ ಗುಸುಗುಸು ರಾಜಕೀಯ ಪಡಸಾಲೆಯಲ್ಲಿ ಹರಿಯುತ್ತಿದ್ದಂತೆಯೇ ಎನ್ ರಾಜಣ್ಣ ಅವರೊಂದಿಗೆ ಉತ್ತಮ ಸಂಬಂಧವಿದೆ ಎಂದು ಸವದಿ ಹೇಳಿದ್ದು ತೀವ್ರ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
“ಪ್ರಧಾನಿ ನರೇಂದ್ರ ಮೋದಿಯವರ ಆಡಳಿತವನ್ನು ಮೆಚ್ಚಿ, ತುಮಕೂರು ಬಿಜೆಪಿ ಅಭ್ಯರ್ಥಿ ಜಿ ಎಸ್ ಬಸವರಾಜು ಅವರಿಗೆ ಲೋಕಸಭಾ ಚುನಾವಣೆಯಲ್ಲಿ ಎಚ್ ಡಿ ದೇವೇಗೌಡರ ವಿರುದ್ಧ ಗೆಲ್ಲಲು ಸಹಾಯ ಮಾಡಿದ್ದರು. ಆದರೆ ಈಗ ಸಿರಾದಲ್ಲಿ, ಸ್ವಲ್ಪ ಒತ್ತಡದಿಂದಾಗಿ ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ ”ಎಂದು ಸವದಿ ಹೇಳಿದ್ದಾರೆ.
ಈ ನಡುವೆ ಮಡಿಕೇರಿಯಲ್ಲಿ ನಡೆದ ಕೊಡಗು ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆಯನ್ನು ಉದ್ದೇಶಿಸಿ ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕಾಂಗ್ರೆಸ್ ನ ಹತ್ತು ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ. ಕಾಂಗ್ರೆಸ್‌ನೊಂದಿಗೆ ಭ್ರಮನಿರಸನಗೊಂಡು ಬಿಜೆಪಿಗೆ ಸೇರುವ ತವಕದಲ್ಲಿದ್ದಾರೆ ಎಂದು ಹೇಳಿದ್ದಾರೆ.
ಬಿಜೆಪಿ ಸೇರುವ ಕಾಂಗ್ರೆಸ್ ಶಾಸಕರ ವಿಚಾರದಲ್ಲಿ ಸವದಿ ʼಲಕ್ಷ್ಮಣʼ ಲೆಕ್ಕ ಹೇಳಿದರೆ ನಳಿನ್ ʼರಾಮʼ ಲೆಕ್ಕ ಹೇಳಿದ್ದಾರೆ. ಸವದಿ ಮುಖಾಂತರ ಬೇರೆಯೇ ಐವರು ಶಾಸಕರಿದ್ದಾರೆಯೇ ಅಥವಾ ನಳಿನ್ ಹೇಳಿರುವ ಹತ್ತು ಶಾಸಕರಲ್ಲಿ ಸವದಿ ಹೇಳಿದ ಐವರು ಶಾಸಕರು ಒಳಗೊಂಡಿದ್ದಾರೆಯೇ ಎಂಬುವುದು ಸ್ಪಷ್ಟವಾಗಿಲ್ಲ.