ಮಣಿಪುರದಲ್ಲಿ ನಿನ್ನೆ ನಡೆದ ರಾಜಕೀಯ ಹೈಡ್ರಾಮದಲ್ಲಿ 3 ಮಂದಿ ಬಿಜೆಪಿ ಶಾಸಕರು ಕಾಂಗ್ರೆಸ್ ಪಕ್ಷ ಸೇರಿಕೊಂಡಿದ್ದಾರೆ. ಜೊತಗೆ ಸರ್ಕಾರಕ್ಕೆ ಬೆಂಬಲ ನೀಡಿದ್ದ 4 ಮಂದಿ ಎನ್‌ಪಿಪಿ ಶಾಸಕರು , ಟಿಎಮ್‌ಸಿ ಪಕ್ಷದ ಓರ್ವ ಶಾಸಕ ಹಾಗೂ ಸ್ವತಂತ್ರ ಅಭ್ಯರ್ಥಿಯೊಬ್ಬರು ಸೇರಿದಂತೆ 9 ಮಂದಿ ಶಾಸಕರು ಬಿಜೆಪಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂತೆಗೆದುಕೊಂಡಿದ್ದಾರೆ.
ಬಿಜೆಪಿ ಶಾಸಕರಾದ ಹೆಂಗ್ಲೆಪ್ ವಿಧಾನಸಭಾ ಕ್ಷೇತ್ರದ ಟಿ.ತಂಗ್ಜಲಂ ಹಾಕಿಪ್, ತಮೆಂಗ್ಲಾಂಗ್ ವಿಧಾನಸಭಾ ಕ್ಷೇತ್ರದ ಸ್ಯಾಮ್ಯುಯೆಲ್ ಜೆಂಡೈ ಮತ್ತು ನವೋರಿಯಾ ಪಖಂಗ್ಲಕ್ಪಾ ವಿಧಾನಸಭಾ ಕ್ಷೇತ್ರದ ಎಸ್ ಸುಬಾಷ್ಚಂದ್ರ ಬಿಜೆಪಿಗೆ ರಾಜಿನಾಮೆ ನೀಡಿ ಕಾಂಗ್ರೆಸ್ ಪಕ್ಷ ಸೇರಿಕೊಂಡಿದ್ದಾರೆ.
ಈತನ್ಮಧ್ಯೆ, ಎನ್‌ಪಿಪಿಯ ಎಲ್ಲಾ ನಾಲ್ಕು ಮಂತ್ರಿಗಳು (ವೈ ಜಾಯ್ಕುಮಾರ್ ಸಿಂಗ್, ಎಲ್ ಜಯ ಜಯಂತಕುಮಾರ್ ಸಿಂಗ್, ಎನ್ ಕಾಯಿಸಿ ಮತ್ತು ಲೆಟ್ಪಾವೊ ಹಾಕಿಪ್) ಎನ್ ಬಿರೆನ್ ಸಿಂಗ್ ನೇತೃತ್ವದ ಬಿಜೆಪಿ ಸರ್ಕಾರದಿಂದ ತಮ್ಮ ಬೆಂಬಲವನ್ನು ಹಿಂತೆಗೆದುಕೊಂಡಿದ್ದಾರೆ ಮತ್ತು ತಮ್ಮ ಸಚಿವ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ಟಿಎಂಸಿ ಶಾಸಕ ಟಿ ರೋಬಿಂದ್ರೊ ಸಿಂಗ್ ಮತ್ತು ಸ್ವತಂತ್ರ ಶಾಸಕ ಆಶಾಬುದ್ದೀನ್ ಕೂಡ ಬಿಜೆಪಿ ಸರ್ಕಾರದಿಂದ ಬೆಂಬಲ ಹಿಂತೆಗೆದುಕೊಂಡಿದ್ದಾರೆ.
ಮಣಿಪುರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 21 ಸ್ಥಾನಗಳನ್ನು ಪಡೆದಿದ್ದರು, ಕಾಂಗ್ರೆಸ್ 28, ಎನ್‌ಪಿಪಿ ಹಾಹೂ ಎನ್‌ಪಿಎಫ್ ತಲಾ 4 ಹಾಗೂ ಟಿಎಮ್‌ಸಿ ಮತ್ತು ಸ್ವತಂತ್ರ ಅಭ್ಯರ್ಥಿ ಒಂದು ಸ್ಥಾನವನ್ನು ಪಡೆದಿದ್ದರು. ಸರ್ಕಾರ ರಚಿಸಲು 31 ಸ್ಥಾನ ಬೇಕಿತ್ತು. ಬಿಜೆಪಿ ಉಳಿದ ಎಲ್ಲಾ ಪಕ್ಷಗಳ ಶಾಸಕರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಸರ್ಕಾರವನ್ನು ರಚಿಸಿದ್ದರು.