ಹೆಸರಿಗೆ ಮಾತ್ರ ಮಡಿಕೇರಿ ಮಂಜಿನ ನಗರಿ, ಸುಂದರ ಗಿರಿ – ಕಂದರಗಳ ನಡುವೆ ಕಂಗೊಳಿಸುವ ಮನಮೋಹಕ ಪಟ್ಟಣವೆಂಬ ಗರಿ..! ಸುತ್ತಲೂ ಕಣ್ಣು ಹಾಯಿಸಿದರೆ ಗಿರಿ-ಕಂದರಗಳ ಮೇಲೆ ಶಿಲೀಂಧ್ರಗಳು ಹುಟ್ಟಿಕೊಂಡಂತೆ ಕಾಣುವ ಮನೆಗಳು, ಗುಂಡಿಬಿದ್ದ ರಸ್ತೆಗಳು, ಗಬ್ಬೆದ್ದು ನಾರುತ್ತಿರುವ ಚರಂಡಿ, ತೋಡುಗಳು, ನಡೆದಾಡಲೂ ಕೂಡ ಸಾಧ್ಯವಾಗದಂತೆ ವಾಹನಗಳ ಭರಾಟೆ..! ಇದರೊಂದಿಗೆ ಎಲ್ಲಕ್ಕಿಂತ ಮುಖ್ಯವಾಗಿ ಕಣ್ಣಿಗೆ ರಾಚುವದು ಅಶುಚಿತ್ವದ ಕುರುಹುಗಳು.
ಕಸದ ತೊಟ್ಟಿ ಮುಕ್ತ ನಗರವನ್ನಾಗಿಸುವ ಭರದಲ್ಲಿ ಕಸದ ತೊಟ್ಟಿಗಳನ್ನು ತೆರವುಗೊಳಿಸಿದ ಬಳಿಕ ಎಲ್ಲೆಂದರಲ್ಲಿ ಕಸದ ರಾಶಿಗಳೇ ಕಾಣಬರುತ್ತಿವೆ. ಈ ಕಸಗಳನ್ನೆಲ್ಲ ಹೆಕ್ಕಿ ಒಂದೆಡೆ ಹರಿದ್ವರ್ಣದಿಂದ ಕೂಡಿದ್ದ ಬೆಟ್ಟದಲ್ಲಿ ರಾಶಿ ಹಾಕಲಾಗುತ್ತಿದೆ. ಅಲ್ಪಪ್ರಮಾಣದಲ್ಲಿದ್ದ ಕಸದ ರಾಶಿ ಬೆಳೆಯುತ್ತಾ ಇದೀಗ ಮಡಿಕೇರಿಯಲ್ಲಿಯೇ ಅತಿ ಎತ್ತರದ ‘ಕಸದ ಗುಡ್ಡ’ವಾಗಿ ತಲೆ ಎತ್ತಿ ನಿಂತಿದೆ. ಈ ಕಸದ ಗುಡ್ಡದಿಂದಾಗಿ ಆಸು-ಪಾಸಿನ ಜನವಸತಿ ಪ್ರದೇಶಗಳಿಗೆ ತೊಂದರೆಯಾಗುತ್ತಿದ್ದು, ಕಳೆದ ಆರೇಳು ವರ್ಷಗಳಿಂದ ಕಸದ ಗುಡ್ಡವನ್ನು ತೆರವುಗೊಳಿಸಬೇಕೆಂದು ಹೋರಾಟಗಳು ನಡೆಯುತ್ತಿದ್ದು, ಸಮಸ್ಯೆಗೆ ಪರಿಹಾರ ಕಾಣದ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿಗಳು ಉಚ್ಚನ್ಯಾಯಾಲಯದ ಮೊರೆ ಹೋಗಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ನ್ಯಾಯಾಲಯ ಸಂಬಂಧಿಸಿದ ನಗರಸಭೆ, ಮಾಲಿನ್ಯ ನಿಯಂತ್ರಣ ಮಂಡಳಿಗೆ ಸಮಸ್ಯೆಗೆ ಮುಕ್ತಿ ಕಾಣಿಸುವಂತೆ ಸೂಚನೆ ನೀಡಿದ್ದರೂ ಪೌರಾಡಳಿತ ನಿರ್ದೇಶನಾಲಯ ನ್ಯಾಯಾಲಯ ಹಾಗೂ ಸರಕಾರಕ್ಕೆ ಸುಳ್ಳು ಮಾಹಿತಿ ನೀಡಿ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದೆ. ಇತ್ತ ಮಾಲಿನ್ಯ ನಿಯಂತ್ರಣ ಮಂಡಳಿ ನಾಮಮಾತ್ರಕ್ಕೆ ನಗರಸಭೆ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಿ ಸುಮ್ಮನಾಗಿದೆ. ಆದರೆ ಕಸದ ಸಮಸ್ಯೆ ಮತ್ತಷ್ಟು ಬಿಗಡಾಯಿಸುತ್ತಿದ್ದು, ಮಡಿಕೇರಿ ಜನತೆ ಪರಿತಪಿಸುವಂತಾಗಿದೆ.!
ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಕಸ – ತ್ಯಾಜ್ಯಗಳನ್ನು ಕರ್ಣಂಗೇರಿ ಗ್ರಾಮದ ಸ್ಟೋನ್ಹಿಲ್ ಬಳಿ ಇರುವ ಸ.ನಂ. 471/1ಪಿ16ರ 6 ಎಕರೆ ವಿಸ್ತೀರ್ಣ ಜಾಗದಲ್ಲಿ ಸುರಿಯಲಾಗುತ್ತಿದೆ. 2005ರಿಂದಲೇ ಇಲ್ಲಿ ಕಸ ಸುರಿಯಲಾಗುತ್ತಿದ್ದು, ಅಂದಿನ ಜನಸಂಖ್ಯೆಗನುಗುಣವಾಗಿ ಕಸದ ಪ್ರಮಾಣ ಕಡಿಮೆ ಇದ್ದುದ ರಿಂದ ಯಾವದೇ ಸಮಸ್ಯೆ ತಲೆ ದೋರಿರಲಿಲ್ಲ. ನಂತರದಲ್ಲಿ ಕಸದ ರಾಶಿ ಬೆಳೆಯುತ್ತಿದ್ದಂತೆ ಒಣ ಕಸ – ಹಸಿ ಕಸಗಳನ್ನು ಬೇರ್ಪಡಿಸಿ ಗೊಬ್ಬರ ತಯಾರು ಮಾಡಿ ವಿಲೇವಾರಿ ಮಾಡುವ ಯಂತ್ರವನ್ನು ಅಳವಡಿಸ ಲಾಯಿತು. ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿ ಪಡೆದು ಈ ಕಾರ್ಯ ನಡೆಸಲಾಗುತ್ತಿತ್ತು. ಆದರೆ ಇದರ ಅವಧಿ 2016 ಕ್ಕೆ ಮುಕ್ತಾಯ ಗೊಂಡಿದ್ದು, ನಂತರದಲ್ಲಿ ನವೀಕರಣ ಮಾಡದೇ ಇದ್ದುದರಿಂದ ಕಸದ ರಾಶಿ ಬೆಳೆಯಲಾರಂಭಿಸಿ ಅಲ್ಲಿಂದ ಕಸದ ಸಮಸ್ಯೆ ಸೃಷ್ಟಿಯಾಯಿತು.
ಕಸದ ರಾಶಿ ಬೆಳೆಯುತ್ತಾ, ಕೊಳೆತು ನಾರುತ್ತಾ ನೊಣ, ಹುಳ, ಉಪ್ಪಟೆಗಳು ಉತ್ಪತ್ತಿಯಾಗಿ ಕಸದ ಗುಡ್ಡದ ಕೆಳಭಾಗದಲ್ಲಿರುವ ನಿವಾಸಿಗಳು ತೊಂದರೆ ಅನುಭವಿಸುವಂತಾಯಿತು. ಕಸವನ್ನು ತೆರವುಗೊಳಿಸಿ, ಕಸ ಸಂಗ್ರಹ ಜಾಗವನ್ನು ಬೇರೆಡೆಗೆ ಸ್ಥಳಾಂತರಿಸು ವಂತೆ ಅಲ್ಲಿನ ನಿವಾಸಿಗಳು ಹೋರಾಟ ಆರಂಭಿಸಿದರು. ಸಂಬಂಧಿಸಿದ ಇಲಾಖೆ, ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಜಿಲ್ಲಾ ನ್ಯಾಯಾಲಯದಲ್ಲಿ ದಾವೆ ಹೂಡಿದರು. ಆದರೂ ಯಾವದೇ ಪ್ರತಿಫಲ ದೊರಕಲಿಲ್ಲ. ಬದಲಿಗೆ ಸಮಸ್ಯೆ ಕೂಡ ಬೆಟ್ಟದಂತೆ ಬೆಳೆಯಲಾರಂಭಿಸಿತು. ಕೊನೆಗೆ ಬೇಸತ್ತ ಸುಬ್ರಹ್ಮಣ್ಯನಗರ, ರೈಫಲ್ ರೇಂಜ್, ಕನ್ನಿಕಾ ಬಡಾವಣೆ ಹಾಗೂ ವಿದ್ಯಾನಗರ ನಿವಾಸಿಗಳು ‘ಎಸ್ಆರ್ವಿಕೆ’ ಎಂಬ ಹೆಸರಿನಲ್ಲಿ ಸಂಘ ರಚನೆ ಮಾಡಿ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದರು. ಅರ್ಜಿಯನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ ಈ ಸಂಬಂಧ ಕ್ರಮ ವಹಿಸುವಂತೆ ಮಾಲಿನ್ಯ ನಿಯಂತ್ರಣ ಮಂಡಳಿ ಕೈ ಗೊಂಡಿರುವ ಕ್ರಮ ಹಾಗೂ ನಗರಸಭೆ ಅನಧಿಕೃತವಾಗಿ ಬೆಟ್ಟ ಪ್ರದೇಶದಲ್ಲಿ ಕಸ ವಿಲೇವಾರಿ ಮಾಡುತ್ತಿದ್ದು, ಕಸ ಹಾಕುವದನ್ನು ನಿಲ್ಲಿಸುವ ಬಗ್ಗೆ, ಪರ್ಯಾಯ ಜಾಗದ ವ್ಯವಸ್ಥೆ ಮಾಡಿರುವ ಬಗ್ಗೆ ಅಫಿಡಾವಿಟ್ ಸಲ್ಲಿಸುವಂತೆ ಸೂಚನೆ ನೀಡಿತ್ತು.
ಇತ್ತ ಪೌರಾಡಳಿತ ನಿರ್ದೇಶನಾಲಯ ಸರಕಾರಕ್ಕೆ ಹಾಗೂ ನ್ಯಾಯಾಲಯಕ್ಕೆ ಸಂಪೂರ್ಣ ತಪ್ಪು ಮಾಹಿತಿ ನೀಡಿದೆ. ನಗರಸಭೆ ಹಾಗೂ ಜಿಲ್ಲಾಡಳಿತ ಮಾಹಿತಿಯಾನುಸಾರ ಕಸ ವಿಲೇವಾರಿಯಲ್ಲಿ ಯಾವದೇ ಸಮಸ್ಯೆಗಳಿಲ್ಲ. ಸಮರ್ಪಕವಾಗಿ ವಿಲೇವಾರಿ ಮಾಡಲಾಗುತ್ತಿದೆ. ಅಲ್ಲದೆ, ಕಸ ಹಾಕಲು ಪರ್ಯಾಯ ಜಾಗ ಇರುವದಿಲ್ಲ.ಜಾಗ ಗುರುತಿಸಲು ಸಾರ್ವಜನಿಕರಿಂದ ಅಡ್ಡಿ ಉಂಟಾಗುತ್ತಿದೆ ಎಂಬಿತ್ಯಾದಿ ಮಾಹಿತಿಯನ್ನು ಸಲ್ಲಿಸಿದೆ.ಸಮಸ್ಯೆ ವಿಚಾರ ನ್ಯಾಯಾಲಯಲ್ಲಿದ್ದರೂ ಮಾಲಿನ್ಯ ನಿಯಂತ್ರಣ ಮಂಡಳಿ ಕಸ ವಿಂಗಡಣೆಗೆ ಅನುಮತಿ ನೀಡಿದೆ. ನ್ಯಾಯಾಲಯ ನಗರಸಭೆ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಸೂಚನೆ ನೀಡಿದ್ದರೂ, ಜಿಲ್ಲಾ ನ್ಯಾಯಾಲಯದಲ್ಲಿ ಸಂಬಂಧಿಸಿದ ಅಧಿಕಾರಿಗಳ ಮೇಲೆ ದಾವೆ ಹೂಡದೆ ನಗರಸಭೆ ಮೇಲೆ ದಾವೆ ಹೂಡಿ ಸುಮ್ಮನಾಗಿದೆ. ಇದೀಗ ಮಾಲಿನ್ಯ ನಿಯಂತ್ರಣ ಮಂಡಳಿ ನವೀಕರಣ ಮಾಡಿರುವದರಿಂದ ಪೌರಾಡಳಿತ ನಿರ್ದೇಶನಾಲಯ ನ್ಯಾಯಾಲಯದಲ್ಲಿರುವ ದಾವೆಯನ್ನು ಮುಕ್ತಾಯಗೊಳಿಸಲು ಪ್ರಯತ್ನಿಸುತ್ತಿರುವ ಬಗ್ಗೆ ತಿಳಿದು ಬಂದಿದೆ.
ಸರಕಾರ ಹಾಗೂ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡುವದರೊಂದಿಗೆ ವಾಸ್ತವವನ್ನು ಮರೆಮಾಚುವ ಯತ್ನ ನಡೆಯುತ್ತಿದೆ. ಸರಕಾರಕ್ಕೆ ನೀಡಿದ ಮಾಹಿತಿಯಲ್ಲಿ ಹಸಿ ತ್ಯಾಜ್ಯವನ್ನು ಸಂಸ್ಕರಿಸಿ ಗೊಬ್ಬರ ಮಾಡಿ ನಗರಸಭೆಯ ಉದ್ಯಾನಗಳಿಗೆ ವಿತರಿಸಲಾಗುತ್ತಿದೆ. ಸಂಸ್ಕರಣಾ ಘಟಕದ ಸುತ್ತಲೂ ಮರ – ಗಿಡ ಬೆಳೆಸಲಾಗಿದೆ; ಕೀಟನಾಶಕ ಸಿಂಪಡಿಸಿ, ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಣೆ ಮಾಡಲಾಗುತ್ತಿದೆ ಎಂದು ತಿಳಿಸಲಾಗಿದೆ. ಆದರೆ, ಕಸದ ಗುಡ್ಡದಲ್ಲಿ ಕಾಣಬರುವ ವಾಸ್ತವತೆಯೇ ಬೇರೆ ಆಗಿದೆ. ಕಸ ಸಂಸ್ಕರಣಾ ಘಟಕದಲ್ಲಿರುವ ಕಸ ವಿಂಗಡಣೆ ಯಂತ್ರ ಚಾಲನೆಯಾಗದೇ ವರ್ಷಗಳೇ ಕಳೆದಿವೆ. ಗೊಬ್ಬರ ತಯಾರಿಸುವ ತೊಟ್ಟಿಯಲ್ಲಿ ಪ್ಲಾಸ್ಟಿಕ್, ಬಾಟಲಿ ಸೇರಿದಂತೆ ಎಲ್ಲವನ್ನೂ ಸುರಿದಿರುವದು ಕಂಡುಬರುತ್ತಿದೆ. ಅದೂ ಕೂಡ ಸುರಿದು ವರ್ಷಗಳಾದಂತೆ ಇದೆ. ಕೇವಲ ಓರ್ವ ಸಿಬ್ಬಂದಿ ಮಾತ್ರ ಯಾವಾಗಲೋ ತಯಾರಿಸಿದ ಒಂದಿಷ್ಟು ಚೀಲ ಗೊಬ್ಬರಗಳನ್ನು ಕೊಠಡಿಯಲ್ಲಿ ಇರಿಸಿರುವದು ಕಂಡು ಬರುತ್ತದೆ. ಮತ್ತೊಂದು ಕಡೆ ಪ್ಲಾಸ್ಟಿಕ್ ವಸ್ತುಗಳನ್ನು ಚೀಲದಲ್ಲಿ ಇರಿಸಿರುವುದು ಕಂಡು ಬರುತ್ತಿದೆ.
ಅದೂ ಅಲ್ಲದೆ ಕಸ ಸಂಗ್ರಹ ಮಾಡುತ್ತಿರುವ ಪ್ರದೇಶದ ಅನತಿ ದೂರದಲ್ಲಿ ಮಡಿಕೇರಿ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಸಂಗ್ರಹಾಗಾರವಿದ್ದು, ಈ ಕಸದಲ್ಲಿ ಕುಳಿತ ನೊಣ, ಪಕ್ಷಿಗಳೂ ಅಲ್ಲಿಗೂ ಹಾರಿ ಅಪಾಯ ತಂದೊಡ್ಡುವ ಭೀತಿಯೂ ಎದುರಾಗಿದೆ.! ಕಸದ ಸಮಸ್ಯೆ ಸದ್ಯಕ್ಕೆ ನ್ಯಾಯಾಲಯದಲ್ಲಿದ್ದು, ಈ ಕುರಿತಾಗಿನ ವಿಚಾರಣೆಯನ್ನು ಮುಂದಿನ ತಾ. 25 ರಂದು ಕೈಗೆತ್ತಿಕೊಳ್ಳಲಿದೆ. ಈ ಬಾರಿ ನ್ಯಾಯಾಲಯವು ಕಸದ ಸಮಸ್ಯೆಯಿಂದ ಮುಕ್ತಿ ಕೊಡಿಸುವ ಆಶಾಭಾವನೆಯಲ್ಲಿ ನಾಗರಿಕರು ಕಾದು ನಿಂತಿದ್ದಾರೆ.