ಮಾಧ್ಯಮಗಳು ಪ್ರಜಾಪ್ರಭುತ್ವದ ನಾಲ್ಕನೇ ಅಂಗ, ಜನಸಾಮಾನ್ಯರ ಧ್ವನಿ, ವ್ಯವಸ್ಥೆಯ ಕಾವಲು ನಾಯಿ ಅಂತೆಲ್ಲಾ ಕರೆಸಿಕೊಂಡ ಕ್ಷೇತ್ರ. ಮಾಧ್ಯಮ ಧ್ವನಿ ಇಲ್ಲದವರ ಪಾಲಿಗೆ ಧ್ವನಿಯಾಗುತ್ತೆ ಅಂತಲೇ ನಂಬಿಕೊಂಡು ಬಂದ ಒಂದು ಜನಸಮೂಹವೇ ದೇಶದಲ್ಲಿದೆ. ಆದರೆ ಇತ್ತೀಚಿನ ವರುಷಗಳಲ್ಲಿ ಅದು ಬದಲಾಗಿದೆ, ಆಡಳಿತ ಪಕ್ಷ ಪರ, ಧರ್ಮದ ಆಧಾರದಲ್ಲಿ ಜನಸಾಮಾನ್ಯರ ಭಾವನೆ ಕೆರಳಿಸುವಲ್ಲಿ ಯಶಸ್ವಿಯಾಗಿದೆ. ಸೋಂಕಿಗೂ ಧರ್ಮದ ಹಣೆಪಟ್ಟಿ ಕಟ್ಟಿದ ಕುಖ್ಯಾತಿ ಇದ್ದರೂ ಅದು ಮಾಧ್ಯಮಗಳಿಗೆ ಸಲ್ಲಬೇಕು. ಇತ್ತೀಚಿನ ವರುಷಗಳಲ್ಲಿ ಮಾಧ್ಯಮ ಅನ್ನೋದು ಜನಸಾಮಾನ್ಯರ ಧ್ವನಿಯಾಗದೇ ಶ್ರೀಮಂತ ರಾಜಕಾರಣಿಗಳ, ಬಹುಕೋಟಿ ಉದ್ಯಮಿಗಳ, ಕಾರ್ಪೊರೇಟ್ ಕಂಪೆನಿಗಳ ಹಾಗೂ ಯಾವುದೋ ಜಾತಿ, ಧರ್ಮದ ಕೈ ಅಡಿ ಬಂಧಿಯಾಗಿ ತನ್ನ ತನವನ್ನೇ ಕಳೆದುಕೊಳ್ಳುತ್ತಿದೆ. ಅದಕ್ಕೂ ಜಾಸ್ತಿ, ಪ್ರಮುಖವಾಗಿ ರಾಷ್ಟ್ರೀಯ ಮಾಧ್ಯಮಗಳ ಟಿವಿ ಸ್ಟುಡಿಯೋ ಅನ್ನೋದು ಆಡಳಿತ ಪಕ್ಷದ ಹೊಗಳುಭಟರಿಗೆ ಇರೋ ವೇದಿಕೆಯಂತಾಗಿದೆ.
ರಾಷ್ಟ್ರೀಯ ಸುದ್ದಿವಾಹಿನಿಗಳ ಮುಖ್ಯಸ್ಥರಿಗೆ ಯಾವ ವಿಚಾರ ಪ್ರಸ್ತುತ, ಅಪ್ರಸ್ತುತ ಅನ್ನೋ ವಿಚಾರವೂ ತಿಳಿಯದಾಗಿದೆ. ತಮ್ಮ TRP ದಾಹಕ್ಕಾಗಿ ಕೋಮುಭಾವನೆ ಕೆರಳಿಸೋ, ಏಕಮುಖವಾದ ಸುದ್ದಿ ಬಿತ್ತರಿಸುವಿಕೆಗೆ ಹೆಚ್ಚಿನ ಆಸಕ್ತಿಯನ್ನ ಸುದ್ದಿ ಮಾಧ್ಯಮಗಳು ತೋರಿಸುತ್ತಿವೆ. ಕರೋನಾ, ಅಂಫಾನ್ ಚಂಡಮಾರುತ ನಡುವೆ ಸಿಕ್ಕಿ ಒದ್ದಾಡುತ್ತಿರುವ ಮನುಷ್ಯನಿಗೆ ಅತ್ತ ಮಸೀದಿ, ಮಂದಿರ, ಇಗರ್ಜಿಗಳಿಗೆ ಮುಖ ಮಾಡದೆ ತಿಂಗಳು ಎರಡಾಗುತ್ತಾ ಬಂದರೂ, ಟಿವಿ ಸ್ಟುಡಿಯೋದಲ್ಲಿ ಕುಳಿತ ಮಂದಿ ಮತ್ತೆ ಅದೇ ಧರ್ಮದ ವಿಚಾರ ಮುಂದಿಟ್ಟು ಭಾವನೆ ಕೆರಳಿಸೋ ಪ್ರಯತ್ನ ಮಾಡಿದ್ದಾರೆ.
ಮೇ 21 ರಂದು ಅಯೋಧ್ಯಾ ರಾಮಜನ್ಮಭೂಮಿಯಲ್ಲಿ ಪತ್ತೆಯಾದ ಶಿಲೆಗಳು, ವಿಗ್ರಹಗಳು ರಾಮ ಮಂದಿರದ ಕುರುಹು ಎಂದು ಮಾಧ್ಯಮಗಳು ಸುದ್ದಿ ಮಾಡಿದ್ದವು. ಆದರೆ ರಾಷ್ಟ್ರೀಯ ಮಾಧ್ಯಮಗಳು ಇದೇ ವಿಚಾರವನ್ನ ಮುಂದಿರಿಸಿ ಕಾಂಗ್ರೆಸ್ ಹಾಗೂ ಮುಸಲ್ಮಾನರ ವಿರುದ್ಧ ಹರಿಹಾಯುವ ಕೆಲಸ ಮಾಡಿತು.. ಆದರೆ ಅದೂ ಯಾವ ಸಮಯದಲ್ಲಿ? ಅತ್ತ ಕರೋನಾ, ಇತ್ತ ಅಂಫಾನ್ ಅಪ್ಪಳಿಸಿ ಜನ ವಿಲವಿಲನೆ ನಲುಗುತ್ತಿರುವ ಸಮಯದಲ್ಲಿ ಎನ್ನಬೇಕೆ..?
ಜನರಿಗೆ ರಾಮಮಂದಿರ, ಬಾಬರಿ ಮಸೀದಿಗಿಂತಲೂ ಬಹುಮುಖ್ಯವಾಗಿ ತಮ್ಮ ಬದುಕು ಕಟ್ಟಿಕೊಳ್ಳುವ ಇರಾದೆಯೇ ಜಾಸ್ತಿಯಾಗಿದೆ. ಆದರೆ ರಾಷ್ಟ್ರೀಯ ಸುದ್ದಿವಾಹಿನಿಗಳಿಗೆ ಅದೆಲ್ಲವೂ ನಗಣ್ಯ, ಏಕೆಂದರೆ ಅವರಿಗೆ TRP ಅಷ್ಟೇ ಮುಖ್ಯವಾಗಿದೆ. ಅದಕ್ಕಾಗಿ AC ರೂಂ ನಲ್ಲಿ ಕುಳಿತು ಪ್ರೈಂ ಟೈಮ್ ಡಿಸ್ಕಶನ್ ನಲ್ಲಿ ಅಂತಹ ವಿಚಾರಗಳನ್ನ ಎತ್ತಿಕೊಂಡಿದ್ದಾರೆ. ಅತ್ತ ಪಶ್ಚಿಮ ಬಂಗಾಳ, ಒಡಿಶಾ ರಾಜ್ಯಗಳಲ್ಲಿ ಅಪ್ಪಳಿಸಿದ ʼಅಂಫಾನ್ʼ ಚಂಡಮಾರುತ ಅದಾಗಲೇ 70 ರಷ್ಟು ಮಂದಿಯ ಪ್ರಾಣ ಬಲಿ ಪಡೆದುಕೊಂಡಿತ್ತು. ಪಶ್ಚಿಮ ಬಂಗಾಳ ರಾಜ್ಯವಂತೂ ಅಕ್ಷರಶಃ ನಲುಗಿ ಹೋಗಿದೆ. ಆದರೂ ಸುದ್ದಿ ವಾಹಿನಿಗಳಿಗೆ ಮಂದಿರ, ಮಸೀದಿ ಅಸ್ತಿತ್ವದ ಪ್ರಶ್ನೆಯೇ ಮುಖ್ಯವಾಯಿತೇ ಹೊರತು, ಮನುಷ್ಯ ಬದುಕಿನ ಪ್ರಶ್ನೆಗಳು ಎದುರಾಗಲಿಲ್ಲ ಅನ್ನೋದು ಶೋಚನೀಯ ಸಂಗತಿ.
ರಾತ್ರಿಯಿಡೀ ವಿಗ್ರಹಗಳ ಪತ್ತೆ ವಿಚಾರವಾಗಿ ಪ್ರೈಂ ಟೈಮ್ ಡಿಬೇಟ್ ಮಾಡೋ ಪತ್ರಕರ್ತರಿಗೆ ʼಅಂಫಾನ್ʼ ಅನ್ನೋದು ಕೇವಲ ಪಶ್ಚಿಮ ಬಂಗಾಳಕ್ಕೋ, ಒಡಿಶಾ ಅಥವಾ ಬಂಗಾಳ ಕೊಲ್ಲಿ ಭಾಗದ ರಾಜ್ಯ ಅಥವಾ ದೇಶಗಳಿಗಷ್ಟೇ ಸೀಮಿತ ಅನ್ನೋ ಭಾವನೆ ಇದೆ. ಆ ಕಾರಣಕ್ಕಾಗಿ ಯಾವ ವಿಚಾರ ಚರ್ಚೆಯಾಗಬೇಕಿತ್ತೋ, ಆ ವಿಚಾರಗಳು ಪ್ರಮುಖ ಸುದ್ದಿಯಾಗದೇ ಉಳಿದವು. ಆದರೆ ವೃತ್ತಿಪರತೆ ಅಳವಡಿಸಿಕೊಂಡಿರುವ ಮಾಧ್ಯಮಗಳ ಕ್ಯಾಮೆರಾಗಳು, ಪೆನ್‌ಗಳು, ಜಾಲತಾಣಗಳು ಇವುಗಳೆಲ್ಲವೂ ʼಅಂಫಾನ್ʼ ಆತಂಕದ ಬಗ್ಗೆ ವಿವರಿಸುವ ಪ್ರಯತ್ನಪಟ್ಟಿದ್ದನ್ನೂ ಅಲ್ಲಗಳೆಯುವಂತಿಲ್ಲ.
ಅಂತೆಯೇ ಜನಸಾಮಾನ್ಯರೂ ಇಂದು ಪ್ರಜ್ಞಾವಂತರಿದ್ದಾರೆ. ಕೇವಲ ಟಿವಿ ಮಾಧ್ಯಮಗಳಿಗಷ್ಟೇ ಸೀಮಿತವಾಗಿ ಉಳಿದಿಲ್ಲ. ಟಿವಿ ಚಾನೆಲ್‌ಗಳ TRP ಆಟವೂ ಅವರಿಗೆ ಚೆನ್ನಾಗಿ ತಿಳಿದಿದೆ. ಆ ಕಾರಣಕ್ಕಾಗಿಯೇ ಅವರು ಸ್ವತಂತ್ರ ಮಾಧ್ಯಮಗಳ ಮೊರೆ ಹೋಗುತ್ತಿದ್ದಾರೆ. ಮಾತ್ರವಲ್ಲದೇ ತಮ್ಮದೇ ಅಭಿಪ್ರಾಯಗಳನ್ನ ಮಂಡಿಸಲು ವೇದಿಕೆ ನಿರ್ಮಿಸಿಕೊಂಡಿದ್ದಾರೆ. ತಾವು ಆಕ್ರೋಶ ವ್ಯಕ್ತಪಡಿಸುವಂತಾಗಲು, ಚಾನೆಲ್ ಅಥವಾ ಸುದ್ದಿ ಮಾಧ್ಯಮಗಳ ಹೆಸರನ್ನ ಟ್ಯಾಗ್ ಮಾಡುವ ಮೂಲಕ ಟ್ವೀಟ್ ನಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಾರೆ. ಅಂತೆಯೇ, ಅಂಫಾನ್ ನಡುವೆಯೂ ಮಂದಿರ, ಮಸೀದಿ ಚರ್ಚೆ ಮುನ್ನೆಲೆ ತಂದು ಚರ್ಚಿಸಿದ ರಾಷ್ಟ್ರೀಯ ಆಂಗ್ಲ ಹಾಗೂ ಹಿಂದಿ ಸುದ್ದಿ ಮಾಧ್ಯಮಗಳ ನಿಲುವನ್ನ ಟ್ವಿಟ್ಟರ್ ನಲ್ಲಿ ಸಾರ್ಜನಿಕರು, ಸಾಮಾಜಿಕ ಪ್ರಮುಖರು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಹಿರಿಯ ನಾಯಕ, ವಕ್ತಾರ ಅಭಿಷೇಕ್ ಮನು ಸಿಂಘ್ವಿ ಟ್ವಿಟ್ಟರ್ ನಲ್ಲಿ ಈ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದು, ದೇಶಕ್ಕೆ ಬಹುದೊಡ್ಡದಾಗಿ ಅಪ್ಪಳಿಸಿದ ಚಂಡಮಾರುತ, ತೀವ್ರ ಆರ್ಥಿಕ ಕುಸಿತ ಹಾಗೂ ಕೋವಿಡ್-19 ಈ ಯಾವ ವಿಚಾರಗಳೂ ಪ್ರಮುಖವಾಗದೇ ಕೆಲವು ಮಾಧ್ಯಮಗಳಿಗೆ ರಾಮ ಮಂದಿರವಷ್ಟೇ ಪ್ರಮುಖವಾಯಿತು ಎಂದು ಟ್ವೀಟಿಸಿದ್ದರು.
ಇನ್ನೂ ಹಲವು ಮಂದಿ ಅಂಫಾನ್ ಚಂಡಮಾರುತಕ್ಕಿಂತಲೂ ರಾಮ ಮಂದಿರವೇ ಮುಖ್ಯವಾಗಿರೋದಕ್ಕೆ ಖೇದ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಸುದ್ದಿ ಮಾಧ್ಯಮಗಳಿಗೆ ಮಂದಿರ, ಮಸೀದಿಗಳೇ ಪ್ರಮುಖವಾಗಿರೋ ವಿಚಾರವಾಗಿ ಟ್ವಿಟ್ಟರ್ ನಲ್ಲಿ ಖಂಡಿಸಿದ್ದಾರೆ. 1990ರ ನಂತರ ಬಂಗಾಳ ಕೊಲ್ಲಿಯಲ್ಲಿ ಎದ್ದ ಭಯಾನಕ ಚಂಡಮಾರುತ ಇದಾಗಿತ್ತಾದರೂ, ರಾಷ್ಟ್ರೀಯ ಮಾಧ್ಯಮಗಳಿಗೆ ಅದರ ಪ್ರೈಂ ಟೈಮ್ ನಲ್ಲೂ ಈ ಕುರಿತು ಚರ್ಚೆ ಮಾಡೋದಕ್ಕೆ, ಸರಕಾರದ ಗಮನ ಸೆಳೆಯೋದಕ್ಕೆ ಯಾಕೆ ಸಾಧ್ಯವಾಗೋದಿಲ್ಲ ಅನ್ನೋ ಜಿಜ್ಞಾಸೆ ಮೂಡುತ್ತದೆ. ಇದಕ್ಕೆಲ್ಲ ಉತ್ತರವಾಗಿ ರಾಷ್ಟ್ರೀಯ ಸುದ್ದಿವಾಹಿನಿಗಳ TRP ಹಪಾಹಪಿಯೂ ಕಣ್ಣಿನೆದುರು ಬಂದು ನಿಲ್ಲುತ್ತವೆ.