ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ಕಾರದ ಸಚಿವ ಸಂಪುಟ ವಿಸ್ತರಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಸಚಿವಾಕಾಂಕ್ಷಿಗಳ ಒತ್ತಡ ತಂತ್ರಗಳು ಮಿತಿಮೀರುತ್ತಿದೆ. ಇನ್ನೊಂದೆಡೆ ಸರ್ಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಚಿವ ಸಂಪುಟ ಸದಸ್ಯರಲ್ಲಿ ತ್ಯಾಗದ ಮಾತುಗಳೂ ಕೇಳಬರಲಾರಂಭಿಸಿದೆ. ಈ ವಾರಾಂತ್ಯದೊಳಗೆ ಸಂಪುಟ ವಿಸ್ತರಣೆ ಆಗಲಿದೆ ಎಂದು ಸ್ವತಃ ಯಡಿಯೂರಪ್ಪ ಅವರು ಹೇಳಿದ್ದಾರೆ. ಅಷ್ಟೇ ಅಲ್ಲ, ಇದುವರೆಗೆ ಆದಂತೆ ಈ ಬಾರಿ ಯಾವುದೇ ವಿಳಂಬವಾಗುವುದಿಲ್ಲ. ಉಪ ಚುನಾವಣೆಯಲ್ಲಿ ಗೆದ್ದವರಿಗೆ ಸಚಿವ ಸ್ಥಾನ ಕೊಟ್ಟೇ ತೀರುತ್ತೇವೆ ಎಂಬ ಮಾತು ಕೂಡ ಅವರಿಂದ ಬಂದಿದೆ.
ಉಪಮುಖ್ಯಮಂತ್ರಿ ಸ್ಥಾನ ವಿಚಾರದಲ್ಲಿ ಗೊಂದಲ ಇನ್ನೂ ಬಗೆಹರಿಯದ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆ ಕುರಿತಂತೆ ನಾನಾ ರೀತಿಯ ಊಹಾಪೋಹಗಳು ಕೇಳಿಬರುತ್ತಿದೆ. ಉಪಮುಖ್ಯಮಂತ್ರಿ ಹುದ್ದೆಗಳನ್ನೇ ರದ್ದುಗೊಳಿಸಲಾಗುತ್ತದೆ ಎಂದು ಒಂದು ಕಡೆಯಿಂದ ಹೇಳುತ್ತಿದ್ದರೆ, ಈಗಿರುವ ಮುರು ಉಪಮುಖ್ಯಮಂತ್ರಿ ಸ್ಥಾನಗಳನ್ನು ಮುಂದುವರಿಸಿ ಹೆಚ್ಚುವರಿ ಹುದ್ದೆಗಳನ್ನು ಸೃಷ್ಟಿಸುವುದಿಲ್ಲವಂತೆ ಎಂಬ ವಾದ ಮತ್ತೊಂದು ಕಡೆ ಇದೆ. ಇದರ ಮಧ್ಯೆ ಇನ್ನೂ ಒಂದು ಉಪಮುಖ್ಯಮಂತ್ರಿ ಸ್ಥಾನ ಸೃಷ್ಟಿಸಿ ಅದನ್ನು ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರಿಗೆ ನೀಡಲಾಗುತ್ತದೆ. ಉಪಮುಖ್ಯಮಂತ್ರಿ ಸ್ಥಾನದ ಮತ್ತೊಬ್ಬ ಆಕಾಂಕ್ಷಿ ರಮೇಶ್ ಜಾರಕಿಹೊಳಿ ಅವರಿಗೆ ಅವರು ಕೇಳಿದ ಖಾತೆ ನೀಡಿ ಸಮಾಧಾನಪಡಿಸಲಾಗುತ್ತದೆ. ಈ ಕುರಿತು ಈಗಾಗಲೇ ವಾಲ್ಮೀಕಿ ಸಮುದಾಯದ ಈಶ್ವರಾನಂದಪುರಿ ಸ್ವಾಮೀಜಿ ಅವರ ಮಧ್ಯಸ್ಥಿಕೆಯಲ್ಲಿ ತೀರ್ಮಾನವಾಗಿದೆ. ರಮೇಶ್ ಜಾರಕಿಹೊಳಿ ಅವರು ಇದಕ್ಕೆ ಒಪ್ಪಿಕೊಂಡಿದ್ದಾರೆ. ಉಪಮುಖ್ಯಮಂತ್ರಿ ಹುದ್ದೆಗಳ ಸಂಖ್ಯೆಯನ್ನು ಮೂರರಿಂದ ನಾಲ್ಕಕ್ಕೆ ಹೆಚ್ಚಿಸುವ ಬಗ್ಗೆ ಹೈಕಮಾಂಡ್ ಒಪ್ಪಿಗೆ ನೀಡುವುದೊಂದೇ ಬಾಕಿ ಎಂಬ ಮಾತುಗಳು ಕೇಳಿಬರುತ್ತಿವೆ.
ಮೂಲಗಳ ಪ್ರಕಾರ ಮೈತ್ರಿ ಸರ್ಕಾರ ಉರುಳಿಸಿ ಬಿಜೆಪಿಗೆ ಬಂದು ಉಪ ಚುನಾವಣೆಯಲ್ಲಿ ಗೆದ್ದಿರುವ ಎಂಟು ಅಥವಾ ಒಂಬತ್ತು ಮಂದಿಗೆ ಸಚಿವ ಸ್ಥಾನ ಸಿಗಬಹುದು. ಇದರೊಂದಿಗೆ ಬಿಜೆಪಿ ಶಾಸಕರ ಪೈಕಿ ಉಮೇಶ್ ಕತ್ತಿ, ಎಸ್.ಅಂಗಾರ ಅಥವಾ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಸಚಿವ ಸ್ಥಾನ ಪಕ್ಕಾ ಆಗಿದೆ. ಉಳಿದಂತೆ ಯಾರನ್ನೆಲ್ಲಾ ಸೇರಿಸಬೇಕು ಎಂಬ ಬಗ್ಗೆ ಯಡಿಯೂರಪ್ಪ ಅವರು ಕಳುಹಿಸಿಕೊಟ್ಟ ಪಟ್ಟಿಯನ್ನು ನೋಡಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ತೀರ್ಮಾನಿಸಲಿದ್ದಾರೆ. ಇನ್ನೆರಡು ದಿನಗಳಲ್ಲಿ ಎಲ್ಲವೂ ಅಂತಿಮವಾಗಲಿದ್ದು, ಶುಕ್ರವಾರದೊಳಗೆ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಸೋಮವಾರದ ವೇಳೆಗೆ ಖಾತೆಗಳ ಹಂಚಿಕೆಯೂ ನಡೆಯಲಿದೆ. ಉಪಮುಖ್ಯಮಂತ್ರಿ ಹುದ್ದೆ ಕುರಿತಂತೆಯೂ ನಡ್ಡಾ ಅವರಿಂದ ಸಂದೇಶ ಬಂದ ನಂತರವೇ ಸ್ಪಷ್ಟವಾಗಿ ಗೊತ್ತಾಗಲಿದೆ.
ಜಾಡು ಸಿಗದ ಯಡಿಯೂರಪ್ಪ ಮೀನಿನ ಹೆಜ್ಜೆ
ಸಂಪುಟ ವಿಸ್ತರಣೆ ಕುರಿತಂತೆ ಸಚಿವಾಕಾಂಕ್ಷಿಗಳ ಪಾಲಿಗೆ ಯಡಿಯೂರಪ್ಪ ಅವರ ನಡೆ ಮೀನಿನ ಹೆಜ್ಜೆಯಂತಾಗಿದೆ. ಯಡಿಯೂರಪ್ಪ ಅವರ ಮನಸ್ಸಿನಲ್ಲಿ ಏನಿದೆ ಯಾರನ್ನೆಲ್ಲಾ ಸಂಪುಟಕ್ಕೆ ಆಯ್ಕೆ ಸೇರಿಸಿಕೊಳ್ಳುತ್ತಾರೆ ಉಪಮುಖ್ಯಮಂತ್ರಿ ಹುದ್ದೆ ಕುರಿತಂತೆ ಅವರ ಸ್ಪಷ್ಟ ನಿಲುವೇನು ಈ ಬಗ್ಗೆ ಹೈಕಮಾಂಡ್ ಜತೆ ಯಾವ ರೀತಿಯ ಚರ್ಚೆ ಮಾಡಿದ್ದಾರೆ ಮತ್ತು ಮಾಡಲಿದ್ದಾರೆ ಉಪ ಚುನಾವಣೆಯಲ್ಲಿ ಸೋತವರ ಬಗ್ಗೆ ಅವರ ನಿಲುವೇನು ಹೀಗೆ ಹಲವಾರು ಪ್ರಶ್ನೆಗಳಿಗೆ ಇದುವರೆಗೆ ಉತ್ತರ ಸಿಕ್ಕಿಲ್ಲ. ಈ ಬಗ್ಗೆ ತಮ್ಮ ಆಪ್ತರೊಂದಿಗೂ ಯಡಿಯೂರಪ್ಪ ಅವರು ತಮ್ಮ ಮನಸ್ಸಿನಲ್ಲಿರುವುದನ್ನು ಹಂಚಿಕೊಂಡಿಲ್ಲ. ಹೀಗಾಗಿ ಪ್ರತಿನಿತ್ಯ ಯಡಿಯೂರಪ್ಪ ಅವರ ಸುತ್ತಮುತ್ತ ಓಡಾಡಿದರೂ ಅವರ ಮನಸ್ಸಿನಲ್ಲೇನಿದೆ ಎಂಬುದನ್ನು ತಿಳಿದುಕೊಳ್ಳಲು ಸಚಿವಾಕಾಂಕ್ಷಿಗಳಿಗೆ ಕಷ್ಟವಾಗಿದೆ.
ಹೀಗಾಗಿ ಕಳೆದ ಒಂದು ವಾರದಿಂದ ಯಡಿಯೂರಪ್ಪ ಅವರ ಸುತ್ತಲೇ ತಿರುಗುತ್ತಿದ್ದ ಹುಕ್ಕೇರಿ ಶಾಸಕ ಉಮೇಶ್ ಕತ್ತಿ ಅವರು ವರಿಷ್ಠರೊಂದಿಗೆ ಮಾತುಕತೆ ನಡೆಸಲು ದೆಹಲಿಗೆ ತೆರಳಿದ್ದಾರೆ. ಇನ್ನು ಕೆಲವರು ಯಡಿಯೂರಪ್ಪ ಅವರ ಆಪ್ತ ವಲಯದವರ ಗಂಟು ಬಿದ್ದು ಅವರ ಬಾಯಿ ಬಿಡಿಸಲು ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಅವರಿಗೂ ಸಂಪುಟ ವಿಸ್ತರಣೆ ವಿಚಾರದಲ್ಲಿ ಯಾವುದೇ ಮಾಹಿತಿ ಇಲ್ಲ.
ತ್ಯಾಗದ ಮಾತುಗಳ ಮೂಲಕ ಆಕಾಂಕ್ಷಿಗಳನ್ನು ಸುಮ್ಮನಾಗಿಸುವ ತಂತ್ರ
ಆದರೆ, ಇದರ ಮಧ್ಯೆಯೇ ಸರ್ಕಾರ ಉಳಿಸಿಕೊಳ್ಳಲು ಸಚಿವ ಸ್ಥಾನ ಅಥವಾ ಉಪಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಡಲು ಸಿದ್ಧ ಎಂಬ ತ್ಯಾಗದ ಮಾತುಗಳು ಕೇಳಿಬರಲಾರಂಭಿಸಿವೆ. ಸಂಪುಟ ವಿಸ್ತರಣೆ, ಉಪಮುಖ್ಯಮಂತ್ರಿ ಸ್ಥಾನಗಳ ಗೊಂದಲ ಕುರಿತಂತೆ ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ, ಈ ವಿಚಾರದಲ್ಲಿ ಮುಖ್ಯಮಂತ್ರಿಗಳ ನಿರ್ಧಾರಕ್ಕೆ ನಾವು ಬದ್ಧವಾಗಿದ್ದೇವೆ. ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ಅವಧಿ ಪೂರ್ಣಗೊಳಿಸಬೇಕು ಮತ್ತು ಉತ್ತಮ ಆಡಳಿತ ನೀಡಬೇಕೆಂಬುದಷ್ಟೇ ನಮ್ಮ ಉದ್ದೇಶ. ಸಚಿವ ಸ್ಥಾನ ಅಥವಾ ಉಪಮುಖ್ಯಮಂತ್ರಿ ಸ್ಥಾನ ದೊಡ್ಡದಲ್ಲ. ನಾವೆಲ್ಲರೂ ಪಕ್ಷದಿಂದ ಬೆಳೆದು ಬಂದವರು. ಪಕ್ಷ ಏನು ಹೇಳುತ್ತದೋ ಅದರಂತೆ ನಡೆದುಕೊಳ್ಳುತ್ತೇವೆ ಎಂದಿದ್ದಾರೆ.
ಇದಕ್ಕೂ ಮುನ್ನ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಅಗತ್ಯ ಬಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಬೇರೆಯವರಿಗೆ ಬಿಟ್ಟುಕೊಡಲು ಸಿದ್ಧ ಎಂದು ಹೇಳಿದ ಮಾರನೇ ದಿನವೇ ಯು ಟರ್ನ್ ಹೊಡೆದಿದ್ದು, ನಾನು ಹೇಳಿದ್ದು ಹಾಗಲ್ಲ, ಮಾಧ್ಯಮದವರು ನನ್ನ ಬಾಯಿಯಿಂದ ಅಂತಹ ಮಾತು ಬರುವಂತೆ ಮಾಡಿದರು. ನಾನೇಕೆ ರಾಜೀನಾಮೆ ನೀಡಲಿ ಎಂದು ಪ್ರಶ್ನಿಸಿದ್ದಾರೆ. ಆದರೆ, ಅಗತ್ಯ ಬಿದ್ದರೆ ಯಾವ ರೀತಿಯ ನಿರ್ಧಾರ ಕೈಗೊಳ್ಳಲು ನಾನು ಬದ್ಧನಾಗಿದ್ದೇನೆ. ಮುಖ್ಯಮಂತ್ರಿಗಳ ತೀರ್ಮಾನವನ್ನು ಗೌರವಿಸುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ವಿಶೇಷವೆಂದರೆ, ಸರ್ಕಾರ ಉಳಿಸಿಕೊಳ್ಳಲು ಅಧಿಕಾರ ತ್ಯಾಗಕ್ಕೆ ಸಿದ್ಧ ಎಂದು ಹೇಳಿದವರೆಲ್ಲರೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಆಪ್ತರು. ಅಷ್ಟೇ ಅಲ್ಲ, ಯಾವುದೇ ಕಾರಣಕ್ಕೂ ಮುಖ್ಯಮಂತ್ರಿಗಳು ತಮ್ಮನ್ನು ಸಂಪುಟದಿಂದ ಕೈಬಿಡುವುದಿಲ್ಲ ಎಂಬುದು ಸ್ಪಷ್ಟವಾಗಿ ಗೊತ್ತು. ಏಕೆಂದರೆ ಯಡಿಯೂರಪ್ಪ ಅವರು ಸರ್ಕಾರ ರಚನೆ ಮಾಡುವುದರಿಂದ ಹಿಡಿದು ಮಂತ್ರಿಮಂಡಲ ರಚನೆಯಲ್ಲಿ ಜತೆಗೆ ನಿಂತು ಕೆಲಸ ಮಾಡಿದವರು ಬಸವರಾಜ ಬೊಮ್ಮಾಯಿ ಮತ್ತು ಜೆ.ಸಿ.ಮಾಧುಸ್ವಾಮಿ. ಪ್ರತಿಪಕ್ಷಗಳು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರಯತ್ನಿಸುವ ಸಂದರ್ಭದಲ್ಲಿ ನೆರವಿಗೆ ನಿಲ್ಲುವವರು ಕೂಡ ಇವರೇ. ಹೀಗಾಗಿ ಇವರಿಬ್ಬರು ರಾಜೀನಾಮೆ ನೀಡಿದರೂ ಅದನ್ನು ಸ್ವೀಕರಿಸಿ ಪ್ರತಿಪಕ್ಷಗಳ ಕೈಗೆ ಹಗ್ಗ ಕೊಟ್ಟು ಸರ್ಕಾರದ ಕೈಕಟ್ಟಿಸಿಕೊಳ್ಳುವ ಅಪಾಯವನ್ನು ಯಡಿಯೂರಪ್ಪ ಅವರು ಮೈಮೇಲೆ ಎಳೆದುಕೊಳ್ಳುವುದಿಲ್ಲ.
ಇನ್ನು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಸರ್ಕಾರಕ್ಕೆ ಇದಕ್ಕಿಂತಲೂ ಪ್ರಮುಖ ವ್ಯಕ್ತಿ. ಒಂದೆಡೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಪ್ತರಲ್ಲಿ ಒಬ್ಬರಾಗಿರುವ ಇವರು ಯಡಿಯೂರಪ್ಪ ಪ್ರತಿಪಕ್ಷ ನಾಯಕರಾಗಿದ್ದಾಗ ಉಪನಾಯಕರಾಗಿ ಕೆಲಸ ಮಾಡಿದ್ದರು. ಇನ್ನೊಂದೆಡೆ ದಲಿತ ಸಮುದಾಯದ ನಾಯಕ. ವಯಸ್ಸು ಮತ್ತು ಅನುಭವದಲ್ಲಿ ಹಿರಿಯರೂ ಹೌದು. ಇವರನ್ನು ಕೈಬಿಟ್ಟರೆ ಪಕ್ಷದತ್ತ ವಾಲುತ್ತಿರುವ ದಲಿತ ಸಮುದಾಯದವರು ಮತ್ತೆ ದೂರವಾಗಬಹುದು. ಹೀಗಾಗಿ ಗೋವಿಂದ ಕಾರಜೋಳ ಅವರನ್ನೂ ಯಡಿಯೂರಪ್ಪ ಅವರು ಕೈಬಿಡುವ ಸಾಧ್ಯತೆಗಳಿಲ್ಲ.
ಆದರೆ, ಈ ಮೂವರ ತ್ಯಾಗದ ಹೇಳಿಕೆ ಹಿಂದೆ ಬೇರೆಯದ್ದೇ ಆದ ರಾಜಕೀಯ ಲೆಕ್ಕಾಚಾರವಿದೆ. ಸಚಿವ ಸ್ಥಾನಕ್ಕಾಗಿ ದುಂಬಾಲು ಬೀಳುತ್ತಿರುವ, ಸಾಕಷ್ಟು ಲಾಬಿಗಳನ್ನು ಮಾಡುತ್ತಿರುವ ಶಾಸಕರಿಗೆ ಸಂದೇಶವೊಂದನ್ನು ರವಾನಿಸುವ ಉದ್ದೇಶದಿಂದಲೇ ಈ ಮೂವರು ತ್ಯಾಗದ ಮಾತುಗಳನ್ನು ಆಡಿದ್ದಾರೆ. ಸರ್ಕಾರ ಉಳಿಸುವುದಕ್ಕಾಗಿ ಯಡಿಯೂರಪ್ಪ ಅವರಿಗೆ ಆಪ್ತರಾಗಿರುವ ಹಿರಿಯ ಸಚಿವರೇ ಅಧಿಕಾರ ತ್ಯಾಗಕ್ಕೆ ಮುಂದಾಗಿದ್ದಾರೆ ಎಂದರೆ ನಮ್ಮಂಥವರು ಕೂಡ ಅಧಿಕಾರಕ್ಕಾಗಿ ಪಟ್ಟುಹಿಡಿಯದೆ ಸರ್ಕಾರ ಸುಸೂತ್ರವಾಗಿ ಮುಂದುವರಿಯಲು ಅವಕಾಶ ಮಾಡಿಕೊಡಬೇಕು ಎಂಬ ಭಾವನೆ ಇತರೆ ಸಚಿವಾಕಾಂಕ್ಷಿಗಳಲ್ಲಿ ಬರಲಿ. ಮುಖ್ಯಮಂತ್ರಿಗಳ ಮೇಲೆ ಒತ್ತಡ ತರುವ ಕೆಲಸ ನಿಲ್ಲಿಸಲಿ ಎಂಬ ಉದ್ದೇಶದಿಂದ ಈ ಮಾತುಗಳನ್ನು ಆಡಿದ್ದಾರೆಯೇ ಹೊರತು ಸಚಿವ ಸ್ಥಾನ ತ್ಯಾಗ ಮಾಡುವ ಮನಸ್ಥಿತಿ ಇಲ್ಲ. ಯಡಿಯೂರಪ್ಪ ಅವರು ತಮ್ಮನ್ನು ಕೈಬಿಡುವುದಿಲ್ಲ ಎಂಬ ಖಚಿತತೆಯಿಂದಲೇ ಅವರು ತ್ಯಾಗದ ಪ್ರಸ್ತಾಪ ಮಾಡಿದ್ದಾರೆ ಅಷ್ಟೆ.