ಗೆದ್ದು ಶಾಸಕರಾಗಿ ಅಧಿಕಾರ ಸ್ವೀಕರಿಸಿದ ಮಾರನೇ ದಿನವೇ ಮಂತ್ರಿಗಳಾಗಿ ನೇಮಕಗೊಳ್ಳಲಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಂದ ಹೇಳಿಸಿಕೊಂಡಿದ್ದ, ಅನರ್ಹರಾಗಿ ಬಳಿಕ ಅರ್ಹತೆ ಗಳಿಸಿದ 11 ಶಾಸಕರಿಗೆ ಮೂರು ವಾರ ಕಳೆದರೂ ಸಚಿವರಾಗುವ ಯೋಗ ಕೂಡಿ ಬಂದಿಲ್ಲ. ಇದರ ಬೆನ್ನಲ್ಲೇ ಮಂತ್ರಿಗಳಾಗುವ ಕನಸು ಕಾಣುತ್ತಾ ದಿನ ಕಳೆಯುತ್ತಿದ್ದ ಬಿಜೆಪಿಯ ಕೆಲವು ಹಿರಿಯ ಶಾಸಕರಿಗೂ ಅದೃಷ್ಟ ಕೈಗೂಡುತ್ತಿಲ್ಲ. ಒಟ್ಟಿನಲ್ಲಿ ಸಚಿವರಾಗಲಿಲ್ಲ ಎಂಬ ನಿರಾಶೆಯೊಂದಿಗೆ ಆಕಾಂಕ್ಷಿಗಳು ಹೊಸ ಕ್ಯಾಲೆಂಡರ್ ವರ್ಷವನ್ನು ಸ್ವಾಗತಿಸುವಂತಾಗಿದೆ.
ಇದರಿಂದಾಗಿ ಧನುರ್ಮಾಸದ ನೆಪದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಂಪುಟ ವಿಸ್ತರಣೆಗೆ ವಿಳಂಬ ಮಾಡುತ್ತಿರುವುದು ಆಕಾಂಕ್ಷಿಗಳನ್ನು ಇರುಸು ಮುರುಸಿಗೆ ತಳ್ಳುತ್ತಿದೆ. ಇಷ್ಟರ ಮಧ್ಯೆಯೂ ಜನವರಿ 20ರಿಂದ ಆರಂಭವಾಗಬೇಕಿದ್ದ ವಿಧಾನ ಮಂಡಲ ಅಧಿವೇಶನವನ್ನು ಫೆಬ್ರವರಿ 17ರಿಂದ ಆರಂಭಿಸಲು ನಿರ್ಧರಿಸಿರುವುದು ಸಚಿವಾಕಾಂಕ್ಷಿ ಶಾಸಕರಲ್ಲಿ, ಅದರಲ್ಲೂ ಮುಖ್ಯವಾಗಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರ ಉರುಳಿಸಿ ನೂತನವಾಗಿ ಆಯ್ಕೆಯಾದ ಶಾಸಕರಲ್ಲಿ ನೆಮ್ಮದಿ ತಂದಿದೆ. ಇದಕ್ಕೆ ಕಾರಣ ವಿಧಾನಸಭೆಯಲ್ಲಿ ಕಾಂಗ್ರೆಸ್, ಜೆಡಿಎಸ್ ನಿಂದ ಆಗುತ್ತಿದ್ದ ಮುಖಭಂಗ ಅನುಭವಿಸುವುದು ತಪ್ಪಿದಂತಾಗಿದೆ.
ಏಕೆಂದರೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಈ ಶಾಸಕರು ಅನರ್ಹಗೊಂಡಿದ್ದು ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ. ಮೈತ್ರಿ ಸರ್ಕಾರ ಉರುಳಿಸಿ ಬಿಜೆಪಿ ಸೇರಿ ಶಾಸಕರಾದರೆ ಮಂತ್ರಿ ಸ್ಥಾನ ಸಿಗುತ್ತದೆ ಎಂದು ಅವರೆಲ್ಲರೂ ಮೈತ್ರಿ ಸರ್ಕಾರ ಉರುಳಿಸಿ ಬಿಜೆಪಿ ಸೇರಿ ಶಾಸಕರಾದರು. ಹೀಗಿರುವಾಗ ಮಂತ್ರಿಯಾಗದೆ ವಿಧಾನಸಭೆಯಲ್ಲಿ ಅವರು ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ಎದುರಿಸಲು ಸಾಧ್ಯವಾಗದ ಪರಿಸ್ಥಿತಿ ಇತ್ತು. ಈ ಕಾರಣಕ್ಕೆ ತಮ್ಮನ್ನು ಬೇಗ ಮಂತ್ರಿಗಳನ್ನಾಗಿ ಮಾಡಿ ಎಂದು ಮುಖ್ಯಮಂತ್ರಿಗಳಿಗೆ ದುಂಬಾಲು ಬಿದ್ದಿದ್ದರು.
ಆದರೆ, ಜಾರ್ಖಂಡ್ ವಿಧಾನಸಭೆ ಚುನಾವಣೆ ಕಾರಣದಿಂದ ಡಿಸೆಂಬರ್ 15ಕ್ಕೆ ಮುನ್ನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪಕ್ಷದ ವರಿಷ್ಠರನ್ನು ಭೇಟಿಯಾಗಿ ಸಂಪುಟ ವಿಸ್ತರಣೆ ಕುರಿತು ಚರ್ಚಿಸಲು ಸಾಧ್ಯವಾಗಲಿಲ್ಲ. ಇದರ ಬೆನ್ನಲ್ಲೇ ಪೌರತ್ವ ತಿದ್ದುಪಡಿ ಕಾಯ್ದೆ ಗದ್ದಲ ಶುರುವಾಗಿದ್ದರಿಂದ ಮತ್ತು ಧನುರ್ಮಾಸ ಕೂಡ ಬಂದಿದ್ದರಿಂದ ಸಂಪುಟ ವಿಸ್ತರಣೆ ಮುಂದಕ್ಕೆ ಹೋಗುವಂತಾಯಿತು. ಈ ಮಧ್ಯೆ ಜ. 20ರಿಂದ ವಿಧಾನಮಂಡಲ ಕಲಾಪ ಆರಂಭಿಸಲು ನಿರ್ಧರಿಸಲಾಗಿತ್ತು. ಹೀಗಾಗಿ ವಿಧಾನ ಮಂಡಲ ಕಲಾಪ ಆರಂಭವಾಗುವ ಮುನ್ನ ಹೇಗಾದರೂ ಮಾಡಿ ಮಂತ್ರಿಗಿರಿ ಗಿಟ್ಟಿಸಿಕೊಳ್ಳಲೇ ಬೇಕು ಎಂದು ನೂತನ ಶಾಸಕರು ಪಟ್ಟಿಹಿಡಿದಿದ್ದರು. ಅದಕ್ಕಾಗಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಒತ್ತಡ ಹೇರಲು ಡಿ. 31ರ ದಿನಾಂಕವನ್ನೂ ನಿಗದಿಪಡಿಸಿದ್ದರು. ಆದರೆ, ಅದಕ್ಕೆ ಒಂದು ದಿನ ಮುಂಚೆಯೇ ಅಧಿವೇಶನವನ್ನು ಜ. 20ರ ಬದಲು ಫೆ. 17ರಿಂದ ಆರಂಭಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿರುವುದು ನೂತನ ಶಾಸಕರಿಗೆ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ. ಆದರೆ, ಈ ವಿಳಂಬ ಬಿಜೆಪಿಯ ಹಿರಿಯ ಶಾಸಕರಲ್ಲಿ ಬೇಸರ ತಂದಿದೆ.
ಏತನ್ಮಧ್ಯೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸ್ವಿಟ್ಜರ್ ಲ್ಯಾಂಡ್ ನಲ್ಲಿ ನಡೆಯಲಿರುವ ವಿಶ್ವ ಆರ್ಥಿಕ ಸಮಾವೇಶದಲ್ಲಿ ಭಾಗವಹಿಸಲು ತೆರಳಲಿದ್ದು, ಅಲ್ಲಿಂದ ಯುರೋಪ್ ದೇಶಗಳಿಗೂ ತೆರಳುತ್ತಾರೆ. ಮೂಲಗಳ ಪ್ರಕಾರ ಯಡಿಯೂರಪ್ಪ ಅವರು ವಿದೇಶ ಪ್ರವಾಸದಿಂದ ಮರಳಿದ ಬಳಿಕವಷ್ಟೇ ಸಂಪುಟ ವಿಸ್ತರಣೆ ಆಗಲಿದೆ. ಈ ಕಾರಣಕ್ಕಾಗಿ ವಿದೇಶ ಪ್ರವಾಸಕ್ಕೆ ತೆರಳುವ ಮುನ್ನವೇ ಬಿಜೆಪಿ ವರಿಷ್ಠರೊಂದಿಗೆ ಚರ್ಚಿಸಿ ಸಂಪುಟ ವಿಸ್ತರಣೆ ಮಾಡಿ ಎಂದು ನೂತನ ಶಾಸಕರು ಸೇರಿದಂತೆ ಸಚಿವಾಕಾಂಕ್ಷಿಗಳು ಮುಖ್ಯಮಂತ್ರಿಗಳಿಗೆ ದುಂಬಾಲು ಬಿದ್ದಿದ್ದಾರೆ.
ನೂತನ ಶಾಸಕರ ಆತಂಕವೇನು?
ವಿಧಾನಮಂಡಲ ಅಧಿವೇಶನ ಆರಂಭವಾಗಲು ಸಾಕಷ್ಟು ದಿನಗಳಿರುವಾಗಲೇ ಸಚಿವರಾಗಿ ಪದಗ್ರಹಣ ಮಾಡಿ ಖಾತೆ ಹಂಚಿಕೆ ಮಾಡಬೇಕು ಎಂಬುದು ನೂತನ ಶಾಸಕರ ಬೇಡಿಕೆಯಾಗಿದೆ. ಅವರ ಈ ಬೇಡಿಕೆಗೆ ಕಾರಣಗಳೂ ಇಲ್ಲದಿಲ್ಲ. ಅಧಿವೇಶನದಲ್ಲಿ ಪ್ರತಿಪಕ್ಷ ಸ್ಥಾನಗಳಲ್ಲಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ಉರುಳಿಸಿದ ಸಿಟ್ಟು ತೀರಿಸಿಕೊಳ್ಳಲು ನೂತನ ಸಚಿವರನ್ನು ಗುರಿ ಮಾಡುವುದು ನಿಶ್ಚಿತ. ಅವರಿಗೆ ಹಂಚಿಕೆಯಾಗುವ ಖಾತೆಗಳಿಗೆ ಸಂಬಂಧಿಸಿದಂತೆ ಕ್ಯಾತೆ ತೆಗೆದು ಮುಜುಗರಕ್ಕೆ ತಳ್ಳಲು ಪ್ರಯತ್ನಿಸಬಹುದು. ಹೀಗಿರುವಾಗ ಅಧಿವೇಶನ ಆರಂಭವಾಗುವ ವೇಳೆ ಸಚಿವ ಸ್ಥಾನ ಮತ್ತು ಖಾತೆಗಳನ್ನು ಪಡೆದು ಪ್ರತಿಪಕ್ಷಗಳನ್ನು ಎದುರಿಸುವುದು ಕಷ್ಟಸಾಧ್ಯ. ಅದರ ಬದಲು ಅಧಿವೇಶನಕ್ಕೆ ಸಾಕಷ್ಟು ದಿನಗಳಿರುವಾಗಲೇ ಸಚಿವರಾದರೆ ಖಾತೆಗಳ ಬಗ್ಗೆ ಅಧ್ಯಯನ ನಡೆಸಿ, ಪ್ರತಿಪಕ್ಷಗಳ ಪ್ರಶ್ನೆಗಳನ್ನು ಎದುರಿಸಲು ಸಿದ್ಧತೆ ಮಾಡಿಕೊಳ್ಳಬಹುದು. ಇದರಿಂದ ಆಗಬಹುದಾದ ಮುಜುಗರ ತಪ್ಪುತ್ತದೆ ಎಂಬುದು ನೂತನ ಶಾಸಕರ ಅಭಿಪ್ರಾಯವಾಗಿದೆ. ತಮ್ಮ ಈ ಅಭಿಪ್ರಾಯವನ್ನು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಅವರು ಹೇಳಿಕೊಂಡಿದ್ದಾರೆ ಕೂಡ. ಇದಕ್ಕೆ ಮುಖ್ಯಮಂತ್ರಿಗಳೂ ಸ್ಪಂದಿಸಿದ್ದು, ಸಂಕ್ರಾಂತಿ ಕಳೆಯುತ್ತಿದ್ದಂತೆ ಮಂತ್ರಿಮಂಡಲ ವಿಸ್ತರಣೆ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಸೋತವರಿಗೂ ಸಚಿವ ಸ್ಥಾನ ಕೊಡಿಸಲು ಪ್ರಯತ್ನ ತಂದ ಇಕ್ಕಟ್ಟು
ಈ ಮಧ್ಯೆ ಕಾಂಗ್ರೆಸ್, ಜೆಡಿಎಸ್ ನಿಂದ ಬಂದು ಉಪ ಚುನಾವಣೆಯಲ್ಲಿ ಶಾಸಕರಾಗಿರುವ 11 ಮಂದಿ ಒಟ್ಟಾಗಿ ಸೋತ ತಮ್ಮ ಇಬ್ಬರು ಸಹೋದ್ಯೋಗಿಗಳಿಗೂ ಸಚಿವ ಸ್ಥಾನ ಕೊಡಿಸಲು ಪ್ರಯತ್ನ ಮಾಡುತ್ತಿದ್ದಾರೆ. ಉಪ ಚುನಾವಣೆಯಲ್ಲಿ ಸೋತಿರುವ ಎಚ್.ವಿಶ್ವನಾಥ್ ಮತ್ತು ಎಂ.ಟಿ.ಬಿ. ನಾಗರಾಜ್ ಅವರಿಗೂ ನಮ್ಮೊಂದಿಗೆ ಸಚಿವ ಸ್ಥಾನ ನೀಡಿ. ನಂತರ ಆರು ತಿಂಗಳೊಳಗೆ ಅವರನ್ನು ವಿಧಾನ ಪರಿಷತ್ತಿಗೆ ಆಯ್ಕೆಯಾಗುವಂತೆ ನೋಡಿಕೊಳ್ಳಿ ಎಂಬ ಬೇಡಿಕೆಯನ್ನು ಮುಖ್ಯಮಂತ್ರಿಗಳ ಮುಂದಿಟ್ಟಿದ್ದಾರೆ. ಆದರೆ, ಈ ಬೇಡಿಕೆ ಬಗ್ಗೆ ಮುಖ್ಯಮಂತ್ರಿಗಳಿಂದ, ಈ ಬಗ್ಗೆ ವರಿಷ್ಠರೊಂದಿಗೆ ಚರ್ಚಿಸಿದ ಬಳಿಕ ನಿರ್ಧರಿಸುತ್ತೇನೆ ಎಂಬ ಉತ್ತರ ಸಿಕ್ಕಿದೆಯೇ ಹೊರತು ಮಂತ್ರಿ ಮಾಡುವ ಸ್ಪಷ್ಟ ಭರವಸೆ ಸಿಕ್ಕಿಲ್ಲ. ಆದರೂ ಆ 11 ಮಂದಿ ಒಗ್ಗಟ್ಟಾಗಿಯೇ ಈ ಕುರಿತು ಪ್ರಯತ್ನ ಮುಂದುವರಿಸಿದ್ದಾರೆ.
ಇದು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಉಪ ಚುನಾವಣೆಯಲ್ಲಿ ರಾಣೆಬೆನ್ನೂರು ಕ್ಷೇತ್ರದ ಅನರ್ಹ ಶಾಸಕ ಶಂಕರ್ ಅವರ ಬದಲಾಗಿ ಅರುಣ್ ಕುಮಾರ್ ಅವರಿಗೆ ಟಿಕೆಟ್ ನೀಡಿದ್ದ ಬಿಜೆಪಿ, ಶಂಕರ್ ಅವರಿಗೆ ವಿಧಾನ ಪರಿಷತ್ ಸದಸ್ಯ ಸ್ಥಾನ ನೀಡಿ ಸಚಿವರಾಗಿ ಮಾಡುವ ಭರವಸೆ ಕೊಟ್ಟಿದೆ. ಅದೇ ರೀತಿ ಹಾಲಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಆ ಹುದ್ದೆಯಲ್ಲಿ ಮುಂದುವರಿಯಬೇಕಾದರೆ ಫೆಬ್ರವರಿಯೊಳಗೆ ವಿಧಾನ ಪರಿಷತ್ತಿಗೆ ಆಯ್ಕೆಯಾಗಲೇ ಬೇಕು. ಸದ್ಯ ವಿಧಾನ ಪರಿಷತ್ತಿನ ಯಾವುದೇ ಸ್ಥಾನಗಳು ಖಾಲಿ ಇಲ್ಲದ ಕಾರಣ ಶಂಕರ್ ಮತ್ತು ಲಕ್ಷ್ಮಣ ಸವದಿ ಅವರಿಗೇ ಅವಕಾಶ ಮಾಡಿಕೊಡಲು ಪರದಾಡುವಂತಾಗಿದೆ. ಇವರ ಜತೆಗೆ ಉಪ ಚುನಾವಣೆಯಲ್ಲಿ ಸೋತವರಿಗೂ ವಿಧಾನ ಪರಿಷತ್ ಸದಸ್ಯ ಸ್ಥಾನ ನೀಡಬೇಕಾದರೆ ಅದು ಪಕ್ಷದ ಮೇಲೆ ದುಷ್ಪರಿಣಾಮ ಬೀರುತ್ತದೆ. ಈ ಕಾರಣಕ್ಕಾಗಿಯೇ ಸೋತವರಿಗೆ ಸಚಿವ ಸ್ಥಾನ ನೀಡಲು ಮುಖ್ಯಮಂತ್ರಿ ಯಡಿಯೂರಪ್ಪ ಹಿಂದೇಟು ಹಾಕುತ್ತಿದ್ದಾರೆ.
ಆದರೆ, ಸಚಿವಾಕಾಂಕ್ಷಿಗಳಿಗೆ ಬಾಗಿಲು ಇನ್ನೂ ಮುಚ್ಚಿಲ್ಲ. ಉಪ ಚುನಾವಣೆಯ ಭರ್ಜರಿ ಗೆಲುವಿನಿಂದ ತಮ್ಮ ಶಕ್ತಿ ಹೆಚ್ಚಿಸಿಕೊಂಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಚಿವ ಸಂಪುಟ ವಿಸ್ತರಣೆ ಬದಲು ಪುನಾರಚನೆ ಮೂಲಕ ಕೆಲವು ಸಚಿವರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ಮಾಡಿಕೊಡಲು ಅವಕಾಶವಿದೆ. ಹೈಕಮಾಂಡ್ ಇದಕ್ಕೆ ಒಪ್ಪಿದರೆ ಅಥವಾ ಯಡಿಯೂರಪ್ಪ ಮನಸ್ಸು ಮಾಡಿದರೆ ಯಾವ ತೀರ್ಮಾನ ಬೇಕಾದರೂ ತೆಗೆದುಕೊಳ್ಳಬಹುದು ಎಂಬ ನಿರೀಕ್ಷೆ ಆಕಾಂಕ್ಷಿಗಳಲ್ಲಿದೆ.