ರಾಜ್ಯ ಸರ್ಕಾರ ಅಂತರ ರಾಜ್ಯಗಳಿಂದ ಬಂದ ವಲಸೆ ಕಾರ್ಮಿಕರನ್ನು ‘ಕ್ವಾರಂಟೈನ್’ ಮಾಡಲು ಮುಂದಾಗುತ್ತಿದೆ. ಅಲ್ಲಿನ ಸೌಕರ್ಯಗಳನ್ನು ಮೊದಲು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತಿದ್ದ ರಾಜ್ಯ ಸರ್ಕಾರ ಇತ್ತೀಚಿಗೆ ತೀರ ನಿಷ್ಕೃಷ್ಟವಾಗಿ ಕಾಣಲು ಮುಂದಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಕ್ವಾರಂಟೈನ್ ಮಾಡಿದವರಿಗೆ ಪೌಷ್ಠಿಕಾಂಶಯುಕ್ತ ಆಹಾರ ಒದಗಿಸುತ್ತೇವೆ ಎನ್ನುವುದು ಸರ್ಕಾರದ ಭರವಸೆ. ಆದರೆ ತಿನ್ನಲು ಅನ್ನವನ್ನೇ ಕೊಡುತ್ತಿಲ್ಲ ಎನ್ನುವುದು ಕ್ವಾರಂಟೈನ್ ಕೇಂದ್ರದಲ್ಲಿ ಇರುವ ಜನರ ಆರೋಪ. ಮಂಡ್ಯ ಜಿಲ್ಲೆ ಕೆ.ಆರ್ ಪೇಟೆ ತಾಲೂಕಿಗೆ ಮಹಾರಾಷ್ಟ್ರದಿಂದ ನೂರಾರು ಜನರು ಬರುತ್ತಲೇ ಇದ್ದಾರೆ. ಇದೀಗ ದಿನನಿತ್ಯ ವಲಸೆ ಕಾರ್ಮಿಕರನ್ನು ಕ್ವಾರಂಟೈನ್ ಮಾಡಲಾಗ್ತಿದೆ. ಆದರೆ ಅವರಿಗೆ ಸೂಕ್ತ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗದೆ ಅಧಿಕಾರಿಗಳು ಪರದಾಡುತ್ತಿದ್ದಾರೆ. ಜನರ ಆಕ್ರೋಶಕ್ಕೆ ತುತ್ತಾಗುತ್ತಿದ್ದಾರೆ.

ಈಗಾಗಲೇ ‘ಸೇವಾಸಿಂಧು’ ಪೋರ್ಟಲ್ ಮೂಲಕ ಮಂಡ್ಯದ ಕೆ.ಆರ್ ಪೇಟೆ ತಾಲೂಕಿಗೆ ವಾಪಸ್ ಬರುವ ಉದ್ದೇಶದಿಂದ ಸುಮಾರು 5 ಸಾವಿರ ಜನರು ನೊಂದಣಿ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಅರ್ಜಿ ಸಲ್ಲಿಸಿದ್ದ 3200 ಜನರಿಗೆ ತಾಲೂಕಿಗೆ ವಾಪಸ್ ಬರಲು ಜಿಲ್ಲಾಡಳಿತ ಅನುಮತಿ ನೀಡಿದೆ. ವಲಸೆ ಬಂದವರನ್ನು ಕಡ್ಡಾಯವಾಗಿ ಕ್ವಾರೆಂಟೈನ್ ಕೂಡ ಮಾಡಲಾಗ್ತಿದೆ. ಆದರೆ ಸರ್ಕಾರಿ ಶಾಲೆಗಳಲ್ಲೂ ಕ್ವಾರೆಂಟೈನ್ ಕೇಂದ್ರ ಮಾಡಿರುವ ಜಿಲ್ಲಾಡಳಿತ ಮುಂಬೈನಿಂದ ಬಂದವರಿಗೆ ಯಾವುದೇ ಸೌಕರ್ಯ ಒದಗಿಸಿಲ್ಲ. ಆನೆಗೊಳದ ಸರ್ಕಾರಿ ಶಾಲೆಯಲ್ಲಿ ಕ್ವಾರೆಂಟೈನ್ ಆಗಿರುವ ಜನ ಆಹಾರ ಸೇರಿದಂತೆ ಮೂಲಭೂತ ಸೌಕರ್ಯ ಇಲ್ಲದೆ ಪರದಾಡುತ್ತಿದ್ದಾರೆ. ಸಣ್ಣ ಪುಟ್ಟ ಮಕ್ಕಳು ಹಸಿವಿನಿಂದ ಕಂಗೆಟ್ಟಿದ್ದು ಊಟ ಕೊಡಿ ಎಂದು ಅಳಲು ತೋಡಿಕೊಳ್ತಿದ್ದಾರೆ. ಕೆ.ಆರ್ ಪೇಟೆ ತಹಶೀಲ್ದಾರ್ ಶಿವಮೂರ್ತಿ ಆಹಾರ ಒದಗಿಸಲು ಹಣಕಾಸಿನ ನೆರವಿಗಾಗಿ ಜಿಲ್ಲಾಡಳಿತದ ನೆರವು ಕೇಳಿದ್ದಾರೆ. ಆದರೆ ಮಂಡ್ಯ ಜಿಲ್ಲಾಧಿಕಾರಿ ಡಾ. ವೆಂಕಟೇಶ್, ಹಣಕಾಸಿನ ನೆರವು ನೀಡಿಲ್ಲ ಎನ್ನುವ ಮಾಹಿತಿಗಳು ಹರಿದಾಡುತ್ತಿವೆ.
Also Read: ಲಾಕ್‌ಡೌನ್: 900 ಕಿ.ಮೀ ಪ್ರಯಾಣ ಮಾಡಿದ ಗರ್ಭಿಣಿ, ಆಸ್ಪತ್ರೆಗೆ ದಾಖಲಿಸಲು ವೈದ್ಯರಿಂದ ನಿರಾಕರಣೆ
ಮಂಡ್ಯದ ಕೆ.ಆರ್ ಪೇಟೆ, ನಾಗಮಂಗಲ, ಹಾಸನದ ಚೆನ್ನರಾಯಪಟ್ಟಣ ಭಾಗದ ಜನರು ಯಥೇಚ್ಚವಾಗಿ ಬಾಂಬೆಯಲ್ಲಿ ನೆಲೆಸಿದ್ದಾರೆ. ಇದೀಗ ಅಲ್ಲಿನ ಸಂಕಷ್ಟದಿಂದ ಪಾರಾಗಲು ವಾಪಸ್ ಆಗುತ್ತಿರುವುದು ಸರ್ವೇ ಸಾಮಾನ್ಯ. ಮುಂಬೈನಲ್ಲಿ ತನ್ನ ವ್ಯಾಪ್ತಿಯನ್ನು ವೃದ್ಧಿಸಿಕೊಂಡು ಇದೀಗ ಕರ್ನಾಟಕ ಸರ್ಕಾರದಲ್ಲಿ ಮಂತ್ರಿಯಾಗಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ನಾರಾಯಣಗೌಡ ಮಾತ್ರ ಸಮಸ್ಯೆ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಮಂಡ್ಯದಲ್ಲಿ ಸಾಕಷ್ಟು ಕ್ವಾರಂಟೈನ್ ಕೇಂದ್ರಗಳಲ್ಲಿ ಇದೇ ರೀತಿ ಸಮಸ್ಯೆ ಆಗುತ್ತಿದ್ದರೂ ನಾರಾಯಣಗೌಡರನ್ನು ಮುಂಬೈನಲ್ಲಿ ಬೆಳೆಸಿದ ಜನರ ಸಂಕಷ್ಟಕ್ಕೆ ದನಿಯಾಗುತ್ತಿಲ್ಲ. ಸರ್ಕಾರ ಹಣ ಕೊಡದಿದ್ದರೂ ಸ್ವತಃ ತಾವೇ ಮುಂದೆ ನಿಂತು ಆಹಾರ ಒದಗಿಸಲು ಆಗದಷ್ಟು ಅಸಮರ್ಥರೇ ನಮ್ಮ ನಾಯಕ ನಾರಾಯಣಗೌಡ ಎಂದು ಕೆ. ಆರ್ ಪೇಟೆ ಭಾಗದ ಜನರೇ ಪ್ರಶ್ನೆ ಎತ್ತುತ್ತಿದ್ದಾರೆ. ಅಷ್ಟೇ ಅಲ್ಲ ಚುನಾವಣೆ ಸಮಯದಲ್ಲಿ ಬಾಂಬೆಯಲ್ಲಿ ಕೆಲಸ ಮಾಡುವ ಜನರನ್ನು ಕರೆತಂದು ಮತ ಹಾಕಿಸಿಕೊಳ್ಳುವ ಇದೇ ನಾರಾಯಣಗೌಡರಿಗೆ ಇದೀಗ ಬಾಂಬೆ ಜನರೇ ಬೇಕಾಗಿಲ್ಲವೇ..? ಅಥವಾ ಬಿಜೆಪಿ ಸರ್ಕಾರದಿಂದ ಹಣ ತಂದು ಜನರ ಸಮಸ್ಯೆ ನೀಗಿಸುವಷ್ಟು ಶಕ್ತಿ ಇಲ್ಲವೇ ಎನ್ನುವ ಪ್ರಶ್ನೆ ಉದ್ಬವ ಆಗುತ್ತಿದೆ.

ಇದು ಕೇವಲ ಮಂಡ್ಯದ ಕೆ.ಆರ್ ಪೇಟೆ ಜನರ ಸಂಕಷ್ಟವಲ್ಲ. ಇತ್ತೀಚಿಗೆ ರಾಜ್ಯ ಸರ್ಕಾರದ ಹಲವಾರು ಹುಳುಕುಗಳು ಹೊರ ಬೀಳುತ್ತಿವೆ. ಕರೋನಾ ನಿಯಂತ್ರಣ ಕೈಬಿಟ್ಟು ಲಾಕ್‌ಡೌನ್ ಸಡಿಲಿಕೆ, ಹಣಕಾಸು ಕ್ರೂಢೀಕರಣದ ಕಡೆಗೆ ಗಮನ ಕೊಡುತ್ತಿರುವ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಹೆಸರಲ್ಲಿ ಪ್ರಚಾರ ಪಡೆಯುವ ಕೆಲಸ ಮಾಡುತ್ತಿದೆ ಅಷ್ಟೆ ಎನ್ನುವಂತಾಗಿದೆ. ಚಿತ್ರದುರ್ಗದಲ್ಲಿ ಕ್ವಾರಂಟೈನ್‌ಗೆ ಒಳಪಟ್ಟಿದ್ದ ಜನರೂ ಕೂಡ ಅನ್ನವನ್ನೂ ಸರಿಯಾಗಿ ಕೊಡ್ತಿಲ್ಲ ಎಂದು ಆರೋಪ ಮಾಡಿದ್ದರು. ಆ ಬಳಿಕ ಮಂಗಳೂರಿನಲ್ಲಿ ಸರ್ಕಾರ ಕೊಡುತ್ತಿರುವ ಆಹಾರ ಧಾನ್ಯಗಳು ಕಳೆಪೆಯಾಗಿದ್ದು, ಪ್ರಾಣಿಗಳು ತಿನ್ನಲು ಸಾಧ್ಯವಿಲ್ಲದಂತೆ ನೀಡಲಾಗಿದೆ ಎಂದು ವಿಡಿಯೋ ಮಾಡಿ ಟ್ವೀಟರ್ ಮೂಲಕ ಜನಾಕ್ರೋಶ ವ್ಯಕ್ತವಾಗಿತ್ತು. ಇನ್ನು ಉತ್ತರ ಕರ್ನಾಕಟದ ಯಾದಗಿರಿ ಸೇರಿದಂತೆ ಹಲವಾರು ಕಡೆಗಳಲ್ಲಿ ಕ್ವಾರಂಟೈನ್ ಕೇಂದ್ರದಲ್ಲಿ ಆಹಾರ ಕೊಡ್ತಿಲ್ಲ ಎನ್ನುವ ಕಾರಣಕ್ಕೆ ಸಂಬಂಧಿಕರೇ ಆಹಾರ ತಂದು ಕೊಡುತ್ತಿದ್ದಾರೆ ಎನ್ನುವ ವರದಿಗಳು ಬೆಚ್ಚಿ ಬೀಳಿಸುತ್ತಿದೆ. ಒಂದು ವೇಳೆ ಸರ್ಕಾರಕ್ಕೆ ಅನ್ನವನ್ನೂ ನೀಡಲು ಸಾಧ್ಯವಿಲ್ಲ ಎಂದ ಮೇಲೆ ಜನರನ್ನು ಕ್ವಾರಂಟೈನ್ ಮಾಡುವುದನ್ನೇ ನಿಲ್ಲಿಸಬೇಕು. ಅವರ ಮನೆಗಳಿಗೆ ತೆರಳಲು ಅವಕಾಶ ಕೊಟ್ಟು ಅವರ ಮನೆಯಲ್ಲೇ ಕ್ವಾರಂಟೈನ್ ಆಗುವಂತೆ ನೋಡಿಕೊಳ್ಳಬೇಕು. ಅದನ್ನು ಬಿಟ್ಟು ಕ್ವಾರಂಟೈನ್ ಮಾಡುವುದು, ಅನ್ನವನ್ನೂ ಕೊಡದೆ ಹಿಂಸೆ ಕೊಡುವುದು ಯಾವ ನ್ಯಾಯ ಅಲ್ಲವೇ..?