ಮಂಡ್ಯ ಎಂದರೆ ಹಳ್ಳಿಯಿಂದ ದಿಲ್ಲಿಯ ತನಕ ಯಾರನ್ನು ಕೇಳಿದರೂ ಥಟ್‌ಎಂದು ಉತ್ತರ ಬರುತ್ತದೆ. ಹೌದು ಇದೊಂದು ಕರ್ನಾಟಕದಲ್ಲಿರುವ ಜಿಲ್ಲೆಯ ಹೆಸರು, ಇಲ್ಲಿ ಕೆಆರ್‌ಎಸ್ ಡ್ಯಾಂ ಇದೆ. ಸಕ್ಕರೆ ತಯಾರು ಮಾಡ್ತಾರೆ ಮತ್ತು ಇಲ್ಲಿನ ಜನರ ಭಾಷೆ ಕೇಳಲು ಸೊಗಸು ಎನ್ನುತ್ತಾರೆ. ಅದೇ ರೀತಿ ಕನ್ನಡ ಸಿನಿಮಾ ರಂಗದಲ್ಲಿ ಇಲ್ಲಿನ ಭಾಷೆಯನ್ನೇ ಬಳಸಿಕೊಂಡು ಶೇಕಡ 80 ರಷ್ಟು ಸಿನಿಮಾಗಳು ಚಿತ್ರೀಕರಣಗೊಂಡು ರಾಜ್ಯದ ಚಿತ್ರರಸಿಕರ ಮನಸೂರೆಗೊಂಡಿದೆ. ಸಾಕಷ್ಟು ಚಿತ್ರಗಳು ಮಂಡ್ಯ ನೆಲದಲ್ಲೇ ಚಿತ್ರೀಕರಣ ಆಗಿವೆ. ಇದೀಗ ಮಂಡ್ಯದಲ್ಲಿ ನಡೆಯುತ್ತಿರುವ ಘಟನೆಗಳೂ ಸಹ ಸಿನಿಮಾಗಳಲ್ಲಿ ತೆಗೆದುಕೊಳ್ಳುವ ಅನಿರೀಕ್ಷಿತ ತಿರುವಿನಂತೆ ಒಂದೊಂದೇ ಘಟನೆಗಳು ತಿರುವು ಪಡೆಯುತ್ತಲೇ ಇವೆ.
ಕಳೆದ ವರ್ಷ ಮಂಡ್ಯ ಜಿಲ್ಲೆಯ ಒಂದು ವಿಚಾರ ಇಡೀ ಕರ್ನಾಟಕದ ಗಮನ ಸೆಳೆದಿತ್ತು. ಕೇವಲ 30 ಸಾವಿರದಿಂದ 1 ಲಕ್ಷದ ತನಕ ಹಣ ಸಂದಾಯ ಮಾಡಿ ತಮಿಳುನಾಡು ಮೂಲದ ಖಾಸಗಿ ವಿಶ್ವವಿದ್ಯಾಲಯದಿಂದ ʻಗೌರವ ಡಾಕ್ಟರೇಟ್ʼ ಪದವಿ ಪಡೆದಿದ್ದರು. ರಾಜಕಾರಣಿಗಳು, ಕಲ್ಲು ಗಣಿಗಾರಿಕೆ, ಪೆಟ್ರೋಲ್ ಬಂಕ್ ಮಾಲೀಕರು, ಗುತ್ತಿಗೆದಾರರು, ಉದ್ಯಮಿಗಳು, ಕಲಾವಿದರು, ಶಿಕ್ಷಕರು, ಪತ್ರಕರ್ತರು ಸೇರಿದಂತೆ ಮಂಡ್ಯ ಜಿಲ್ಲೆಯಲ್ಲಿ ಅತ್ಯಧಿಕ ಪದವಿ ಪಡೆದುಕೊಂಡಿದ್ದರು. ಕಳೆದ ವರ್ಷ ಜುಲೈ 25ರಂದು ಬೆಂಗಳೂರಿನಲ್ಲಿ 130 ಮಂದಿಗೆ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗಿತ್ತು. ಅದರಲ್ಲಿ 32 ಮಂದಿ ಮಂಡ್ಯದವರಾಗಿದ್ದು, ಅದರಲ್ಲೂ 12 ಮಂದಿ ಮಳವಳ್ಳಿಯವರೇ ಆಗಿದ್ದು ಸಾಕಷ್ಟು ಅನುಮಾನ ಹುಟ್ಟುಹಾಕಿತ್ತು.
ಆ ಸುದ್ದಿಯ ನಡುವೆ ಚಿಕ್ಕದಾಗಿ ಕಿಡಿ ಹೊತ್ತಿಸಿದ್ದು ಯುವ ವಿಜ್ಞಾನಿ ಪ್ರತಾಪ್. ಮಳವಳ್ಳಿಯ ನೆಟ್ಕಲ್ ಗ್ರಾಮದ ಯುವಕ ಪ್ರತಾಪ್, ಖಾಸಗಿ ವಾಹಿನಯ ಕಾರ್ಯಕ್ರಮದಲ್ಲಿ ಚಿತ್ರನಟರೊಬ್ಬರು ಈತ ಡ್ರೋಣ್ ಸಂಶೋಧನೆಯಲ್ಲಿ ತೊಡಗಿದ್ದಾನೆ ಎಂದು ಘೋಷಣೆ ಮಾಡಿಬಿಟ್ಟರು. ಯಾವುದೆಲ್ಲಾ ದಾಖಲೆಗಳನ್ನು ಪರೀಶಿಲಿಸಿ ಘೋಷಣೆ ಮಾಡಿದರೋ..? ಸುಖಾಸುಮ್ಮನೆ ಜನರ ಮುಂದೆ ಸುಳ್ಳು ಹೇಳಿದರೋ ಎನ್ನುವುದನ್ನು ಅರಿಯದ ಮಾಧ್ಯಮಗಳ ಆತನನ್ನು ಕೂರಿಸಿಕೊಂಡು ಗಂಟೆಗಟ್ಟಲೆ ಕಾರ್ಯಕ್ರಮ ಮಾಡಿದರು. ಸಂಘ ಸಂಸ್ಥೆಗಳು ಆತನನ್ನು ಕರೆದು ಸನ್ಮಾನ ಮಾಡಿ ಪುರಸ್ಕಾರಗಳನ್ನು ಕೊಡಲು ಶುರು ಮಾಡಿದರು. ಇದೀಗ ಆತ ಏನನ್ನೂ ಸಾಧಿಸಿಲ್ಲ, ಆತ ಹೇಳಿರುವುದೆಲ್ಲವೂ ಸುಳ್ಳು ಎಂದು ಆತನ ವಿರುದ್ಧ ಸಾಮಾಜಿಕ ಜಾಲ ತಾಣದಲ್ಲಿ ಪುಂಕಾನುಪುಂಕವಾಗಿ ಬರೆಯುತ್ತಿದ್ದಾರೆ. ಆತನ ಮಾತುಗಳಿಗೆ ಚಪ್ಪಾಳೆ ತಟ್ಟಿ ಹಾರ ಹಾಕಿದ ಜನರೇ ಆತನ ಮಾತುಗಳಲ್ಲಿ ತಪ್ಪಿನ ಭಾವ ಮೂಡಿಸುತ್ತಿದ್ದಾರೆ.
ಹಣ ಕೊಟ್ಟು ಗೌರವ ಡಾಕ್ಟರೇಟ್ ಪಡೆದಿದ್ದಾಯ್ತು. ನಟನ ಮೂಲಕ ಯುವ ವಿಜ್ಞಾನಿಯ ಅರ್ಪಣೆ ಆಯ್ತು. ಇದೆಲ್ಲದರ ನಡುವೆ ಈ ಜಗತ್ತಿಗೆ ಗೊತ್ತಾಗಿದ್ದು, 16 ಕೆರೆಗಳನ್ನು ನಿರ್ಮಾಣ ಮಾಡಿದ ಆಧುನಿಕ ಭಗೀರಥನ ಬಗ್ಗೆ. ಇದನ್ನು ಸ್ವತಃ ನಮ್ಮ ದೇಶದ ಪ್ರಧಾನಿ ಸೇವಕರೇ ಲೋಕಾರ್ಪಣೆ ಮಾಡಿದ್ದು. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ದಾಸನದೊಡ್ಡಿ ಗ್ರಾಮದ ನಿವಾಸಿ ಕಾಮೇಗೌಡ 16 ಕೆರೆಗಳನ್ನು ನಿರ್ಮಾಣ ಮಾಡಿದ್ದಾರೆ ಎಂದು ಘೋಷಣೆ ಮಾಡಿದ್ದರು. ಆ ಬಳಿಕ ಕರ್ನಾಟಕ ರಾಜ್ಯ ಸರ್ಕಾರ ಕೂಡ ಜೀವಮಾನ ಸಂಚಾರಕ್ಕೆ ಅನುಕೂಲ ಆಗುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಪಾಸ್ ಸೌಲಭ್ಯ ಕೊಡಲಾಗಿತ್ತು. ಇಷ್ಟೆಲ್ಲಾ ಸಾಧನೆ ಮಾಡಿದ್ದಾರೆ ಎನ್ನುವುದು ಮಾಧ್ಯಮಗಳಲ್ಲಿ ಬರುತ್ತಿದ್ದ ಹಾಗೆ ಇಡೀ ಗ್ರಾಮಸ್ಥರೇ ಬೆಚ್ಚಿಬೆದ್ದಿದ್ದಾರೆ. ಯಾವ ಕೆರೆಯೂ ಇಲ್ಲ, ಮರಳು ದಂಧೆಯನ್ನು ಮಾಡಲು ಗುಂಡಿ ಮಾಡಿದ್ದನ್ನೇ ಕೆರೆಗಳು ಎಂದು ತಿಳಿಯುವುದು ಮೂರ್ಖತನ ಅಲ್ಲವೇ ಎಂದು ಪ್ರಶ್ನಿಸುತ್ತಿದ್ದಾರೆ.
ಇದೆಲ್ಲವನ್ನು ಸಮಾಜದ ಎದುರು ತಾವೇ ಸ್ವತಃ ಇವರೇನು ಹೇಳಿಕೊಂಡಿಲ್ಲ. ಸಮಾಜದಲ್ಲಿ ಕೆಲವು ಜನರು ಇವರನ್ನು ಉನ್ನತ ಸ್ಥಾನಕ್ಕೆ ಕರೆದುಕೊಂಡು ಹೋಗಲು ಯತ್ನಿಸಿದ್ದಾರೆ. ಇವರಿಂದ ಅವರಿಗೆ ಆಗುವ ಲಾಭವೇನು ಎನ್ನುವುದು ತಿಳಿಯದ ವಿಚಾರ. ಆದರೂ ಎಲ್ಲೋ ತಮ್ಮ ಪಾಡಿಗೆ ತಾವು ಇದ್ದವರನ್ನು ಜನರ ಮುಂದೆ ಹೀರೋ ಮಾಡಿದರು. ಹೀರೋ ಮಾಡಿದ ಬಳಿಕ ಏಣಿ ಹತ್ತಿಕೊಂಡು ಉತ್ತುಂಗಕ್ಕೆ ಹೋಗುವಾಗ ಅದೇ ಏಣಿಯ ಕಾಲು ಮುರಿದು ಕೆಳಕ್ಕೆ ಬೀಳಿಸಿದರು.
ಒಬ್ಬ ವ್ಯಕ್ತಿಯ ಬಗ್ಗೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಸಾರ್ವಜನಿಕವಾಗಿ ಹೇಳುವಾಗ ಏನನ್ನೂ ಪರಿಶೀಲನೆ ಮಾಡದೆ ಸಮಾಜದ ಎದುರು ಕರೆದುಕೊಂಡು ಬಂದವರದ್ದು ತಪ್ಪಾಗಿದೆಯೋ..? ಅಥವಾ ಅವರು ಹೇಳಿದ್ದಕ್ಕೆ ದನಿಗೂಡಿಸಿಕೊಂಡು ಸಮಾಜದ ಎದುರು ಸುಳ್ಳನ್ನೇ ಸತ್ಯವೆಂದು ನಂಬಿಸುವ ಭ್ರಮೆಯಲ್ಲಿ ಇದ್ದವರದ್ದು ತಪ್ಪಾಗಿದೆಯೋ ಅಥವಾ ಯಾವುದೋ ಒಬ್ಬ ಉನ್ನತ ಸ್ಥಾನದಲ್ಲಿರುವ ವ್ಯಕ್ತಿ ದೇಶದ ಎದುರು ಒಬ್ಬ ವ್ಯಕ್ತಿಯ ಬಗ್ಗೆ ಘೋಷಣೆ ಮಾಡಿದ ಕಾರಣಕ್ಕೆ ಪೂರ್ವಾಪರ ವಿಚಾರಣೆ ಮಾಡುವ ವಿವೇಚನೆ ಇಲ್ಲದೆ ನಂಬಿಕೊಳ್ಳುವ ಜನರದ್ದೇ ತಪ್ಪಾಗಿದೆಯೋ ಎನ್ನುವುದನ್ನು ತಮಗೆ ತಾವೇ ಅರ್ಥ ಮಾಡಿಕೊಳ್ಳಬೇಕಿದೆ. ಒಟ್ಟಾರೆ, ಒಂದಂತೂ ಸತ್ಯ. ಇವರಿಂದ ಸಾರ್ಜನಿಕವಾಗಿ ಅಷ್ಟೊಂದು ಪ್ರಮಾಣದಲ್ಲಿ ಮೋಸವಾಗಿಲ್ಲ. ಆದರೆ ಸಮಾಜಕ್ಕೆ ವಂಚನೆಯಾಗಿದೆ. ನಂಬಿದವರೆಲ್ಲರೂ ಮೂರ್ಖರಾಗಿದ್ದಾರೆ. ಮಂಡ್ಯ ಎಂದರೆ ವಿಶ್ವದ ಯಾವುದೇ ಮೂಲೆಯಲ್ಲೂ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದವರಿಗೆ ಮುಜುಗರ ಉಂಟು ಮಾಡುವ ಪರಿಸ್ಥಿತಿ ಎದುರಾಗಿದೆ.