ಮಂಡ್ಯ ಸಮೀಪದ ಕೀಲಾರ ಗ್ರಾಮದಲ್ಲಿ ರೈತ ಕುಟುಂಬವೊಂದು ನಿತ್ಯವೂ ಕಣ್ಣೀರಿನಿಂದ ಕೈ ತೊಳೆಯುವಂತಾಗಿದೆ. ಇದಕ್ಕೆ ಮುಖ್ಯ ಕಾರಣ ಈ ಕುಟುಂಬದ ಸಾವಿರಾರು ರೂಪಾಯಿ ಬೆಲೆ ಬಾಳುವ ಜಾನುವಾರುಗಳು ನಿಗೂಢ ಸಾವನ್ನಪ್ಪುತ್ತಿರುವುದು. ಗ್ರಾಮೀಣ ಭಾಗದಲ್ಲಿ ಇಂದಿಗೂ ಸಣ್ಣ ರೈತರ ಜೀವಾಳವೇ ರಾಸುಗಳು. ಅವಿಲ್ಲದೆ ಕೃಷಿ ಕಾರ್ಯ ಸಾಧ್ಯವೇ ಇಲ್ಲ. ಅಷ್ಟೇ ಅಲ್ಲ ಹೈನುಗಾರಿಕೆಯಿಂದಲೇ ಇಂದು ಸಾವಿರಾರು ಕುಟುಂಬಗಳು ಬದುಕುತ್ತಿವೆ. ಹೀಗಿರುವಾಗ ಈ ಗ್ರಾಮದ ದಿ.ಮಂಚೇಗೌಡರ ಕುಟುಂಬದ ಕೆ.ಎಂ.ಶಂಕರೇಗೌಡ, ಕೆ.ಎಂ.ಕೃಷ್ಣೇಗೌಡ, ಇ.ರಘು ಮತ್ತು ಕೆ.ಕೆ.ಶೃತಿ ಅವರ ಮನೆಯಲ್ಲಿ ಕಳೆದ ಒಂದೂವರೆ ವರ್ಷದಿಂದ 24 ರಾಸುಗಳು, ಸುಮಾರು ಅಷ್ಟೇ ಸಂಖ್ಯೆಯ ಕೋಳಿ, ಕುರಿಗಳು ಕೂಡ ನಿಗೂಢವಾಗಿ ಸಾವನ್ನಪ್ಪುತ್ತಿರುವ ಘಟನೆಯಿಂದ ಇಡೀ ಕುಟುಂಬವೇ ಅವ್ಯಕ್ತ ಭಯದಲ್ಲೇ ದಿನದೂಡುವಂತಾಗಿದೆ. ದಿನಬೆಳಗಾದರೆ ಇಂದು ಯಾವ ಪ್ರಾಣಿ ಸಾಯುತ್ತದೋ ಎಂಬ ಭಯ ಆರಂಭಗೊಂಡಿದೆ.

ಈ ಮನೆಯ ಒಂದೇ ಕಟ್ಟಡದಲ್ಲಿ ಮೂವರೂ ಪ್ರತ್ಯೇಕವಾಗಿ ವಾಸವಿದ್ದಾರೆ. ಇವರು ಕೊಂಡು ತಂದು ಕೊಟ್ಟಿಗೆಗೆ ಕಟ್ಟಿದ ಹಸು, ಎತ್ತುಗಳು, ಎಮ್ಮೆ, ಕುರಿ, ಮೇಕೆ, ಟಗರು, ಕೋಳಿಗಳು ಸೇರಿದಂತೆ ಯಾವುದೇ ರಾಸುಗಳು ಜೀವಂತವಾಗಿಲ್ಲ. ಎಲ್ಲವೂ ಕೆಲವು ದಿನ, ಕೆಲವೇ ಗಂಟೆಗಳಲ್ಲಿ, ಕೆಲವೇ ನಿಮಿಷಗಳಲ್ಲಿ ಸಾವನ್ನಪ್ಪುತ್ತಿರುವ ನಿಗೂಢವಿದು. ಕಾರಣ ಏನೆಂಬುದನ್ನು ಇಂದಿಗೂ ಪತ್ತೆ ಹಚ್ಚಲಾಗದಿರುವುದು ಪಶುವೈದ್ಯ ಕ್ಷೇತ್ರಕ್ಕೇ ಸವಾಲಾಗಿ ಪರಿಣಮಿಸಿದೆ.
ರೈತನಿಗೆ ರಾಸುಗಳೇ ಜೀವಾಳ. ಅದರಂತೆ ನಾವೂ ಎತ್ತುಗಳನ್ನು ಉಳುಮೆಗೆ ಬಳಸುತ್ತಿದ್ದೆವು. ಹಸುಗಳು ಸಹ ಹಾಲು ನೀಡುತ್ತಿದ್ದವು. ಈಗ್ಗೆ ಒಂದೂವರೆ ವರ್ಷದ ಹಿಂದೆ ಹಸು, ಎತ್ತುಗಳ ಸಾವಿನ ಸರಣಿ ಆರಂಭವಾಯಿತು. ನಮ್ಮ ಮನೆ ಆವರಣ, ಕೊಟ್ಟಿಗೆಯಲ್ಲಿ ನಿರಂತರವಾಗಿ ರಾಸುಗಳು ಸಾಯಲಾರಂಭಿಸಿದವು. ಮಾತ್ರವಲ್ಲ ಈ ಜಾಗ ತಪ್ಪಿಸೋಣ ಎಂದು ಆಲೆಮನೆ, ಜಮೀನಿನ ಬಳಿ, ಸಂಬಂಧಿಕರ ಮನೆಯಲ್ಲಿ ಇರಿಸಿದ್ದ ರಾಸುಗಳೂ ಕೂಡ ಸರಣಿಯಲ್ಲಿ ಸಾವನ್ನಪ್ಪಿವೆ. ಇದುವರೆಗೆ ನಾವು ಕಳೆದುಕೊಂಡಿರುವ ರಾಸುಗಳ ಒಟ್ಟು ಮೌಲ್ಯ ಸುಮಾರು 16 ಲಕ್ಷ ರೂ.ಗಳಾಗುತ್ತದೆ ಎಂದು ಹೇಳಿದ ಶಂಕರೇಗೌಡರ ಕಣ್ಣಲ್ಲಿ ನೀರು ಉರುಳುತಿತ್ತು.
ಈ ಗ್ರಾಮದಲ್ಲೇ ಇರುವ ಪಶು ಆಸ್ಪತ್ರೆಯ ಮುಖ್ಯ ಪಶು ವೈದ್ಯಾಧಿಕಾರಿ ಡಾ.ಎಚ್.ಡಿ.ರಮೇಶ್ ರಾಜು ಅವರಿಗೇ ಈ ಪ್ರಕರಣ ಬಿಡಿಸಲಾರದ ಕಗ್ಗಂಟಾಗಿದೆ. ಸ್ವತಃ ಅವರೇ ವೈಯಕ್ತಿಕ ಆಸಕ್ತಿ ತಳೆದು ಸತ್ತ ರಾಸುಗಳ ಮರಣೋತ್ತರ ಪರೀಕ್ಷೆ ನಡೆಸಿರುವುದಲ್ಲದೆ, ಇಲಾಖೆಯ ತಜ್ಞರನ್ನೂ ಕರೆಸಿ ತನಿಖೆ ನಡೆಸಿದ್ದಾರೆ. ಈ ರಾಸುಗಳು ತಿಂದಿದ್ದ ಜೋಳದ ಕಡ್ಡಿಯಿಂದ ʻಹೈಡ್ರೋಸಯನಿಕ್ʼ ಎಂಬ ವಿಷಕಾರಿ ಅಂಶವಿರುವುದು ಪತ್ತೆಯಾಗಿತ್ತು. ವಾಸ್ತವದಲ್ಲಿ ಇದು ಸಾವಿಗೆ ಕಾರಣವಲ್ಲ. ಏಕೆಂದರೆ ಇಂತಹ ಮೇವುಗಳನ್ನು ತಿನ್ನುತ್ತಿರುವ ಊರಿನ ಇತರೆಲ್ಲ ರಾಸುಗಳೂ ಆರೋಗ್ಯವಾಗೇ ಇವೆ. ಹಾಗಾಗಿ, ವಿಸ್ಮಯವನ್ನು ಭೇದಿಸಬೇಕೆಂಬ ನಿಟ್ಟಿನಲ್ಲಿ ಸಾಧ್ಯವಿರುವ ಎಲ್ಲ ಆಯಾಮಗಳಲ್ಲೂ ಸಂಶೋಧನೆ ಕೈಗೊಂಡಿದ್ದು, ಬೆಂಗಳೂರಿನ ಹೆಬ್ಬಾಳದಲ್ಲಿರುವ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯವರನ್ನೂ ಕರೆಸಿ ಎರಡು ಬಾರಿ ಪರೀಕ್ಷೆ ನಡೆಸಲಾಗಿದೆ. ಆ ವರದಿಯಲ್ಲಿ ಎಲ್ಲವೂ ನೆಗೆಟಿವ್ ಬಂದಿದೆ! ಮತ್ತೊಂದೆಡೆ ರಾಸುಗಳ ಹೃದಯ, ರಕ್ತ, ಟಿಶ್ಯೂ ಸೇರಿದಂತೆ ನಾಮಿನಲ್ ಸಂಗ್ರಹಗಳು ಮೈಸೂರಿನ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿದ್ದು, ವರದಿಗಾಗಿ ಕಾಯುತ್ತಿದ್ದೇವೆ ಎನ್ನುತ್ತಾರೆ ಡಾ.ರಮೇಶ್ ರಾಜು.
ದಿ.ಮಂಚೇಗೌಡರಿಗೆ ಐವರು ಗಂಡು ಮಕ್ಕಳು, ಇವರಲ್ಲಿ ಇಬ್ಬರು ನಿಧನರಾಗಿ ಮೂವರು ಉಳಿದಿದ್ದಾರೆ. ಈ ನಿಗೂಢ ಪ್ರಕರಣದಿಂದ ಕಂಗಾಲಾಗಿರುವ ಈ ಕುಟುಂಬದಲ್ಲೀಗ ಒಟ್ಟು 25 ಮಂದಿಯಿದ್ದಾರೆ. ಈ ಮೂವರಲ್ಲಿ ಹೆಚ್ಚು ನಷ್ಟಕ್ಕೊಳಗಾಗಿರುವ ಕೆ.ಎಂ.ಶಂಕರೇಗೌಡರಿಗೆ ಮನೆಯಿಂದ ಮೂರು ಕಿ.ಮೀ. ದೂರದಲ್ಲಿ 4.5 ಎಕರೆ ಜಮೀನಿದೆ. ಕಬ್ಬು ಭತ್ತ ಹಾಕಿದ್ದಾರೆ. ಮನೆಯಿಂದ ಎತ್ತಿನ ಗಾಡಿಯಲ್ಲಿ ಹೋಗಿ ಬರುತ್ತ ಕೃಷಿ ಮಾಡುತ್ತಿದ್ದ ಇವರಿಗೆ ಇದೀಗ ಗಾಡಿಕಟ್ಟುವ ಹಸುಗಳೂ ಇಲ್ಲದೆ ಹತಾಶರಾಗಿ ಕುಳಿತ್ತಿದ್ದಾರೆ. ಇಂತಹ ದುಸ್ಥಿತಿಯಲ್ಲಿರುವ ಈ ಕುಟುಂಬಕ್ಕೆ ಸರ್ಕಾರ ನೆರವಾಗಬೇಕೆಂದು ಶಾಸಕ ಎಂ.ಶ್ರೀನಿವಾಸ್ ಕೂಡ ಒತ್ತಾಯಿಸಿ ಪತ್ರ ಬರೆದಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡರಿಗೆ ಡಾ.ರಮೇಶ್‌ರಾಜು ಸೇರಿದಂತೆ ಸಂತ್ರಸ್ತ ಕುಟುಂಬದ ಸದಸ್ಯರೆಲ್ಲ ಮನವಿ ನೀಡಿ, ಸೂಕ್ತ ಪರಿಹಾರ ದೊರಕಿಸುವಂತೆ ಪರಿಪರಿಯಾಗಿ ಬೇಡಿಕೊಂಡಿದ್ದಾಗಿದೆ. ಆದರೂ ಪ್ರಯೋಜನವಾಗಿಲ್ಲ.





ಈ ಬೆಳವಣಿಗೆ ತಿಳಿದ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ತಹಸಿಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ರೈತ ಕುಟುಂಬದ ಅಳಲು ಆಲಿಸಿದರು. ಬಳಿಕ ಜಿಲ್ಲಾಧಿಕಾರಿಗಳೇ ನಿರ್ದೇಶಿಸಿದಂತೆ ಕೆರಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಅವರ ಮೂಲಕವೇ ಸತ್ತ ರಾಸುಗಳ ಟಿಶ್ಯೂ ಮಾದರಿಗಳನ್ನು ಫೊರೆನ್ಸಿಕ್ ಲ್ಯಾಬ್‌ಗೆ ಕಳುಹಿಸಲಾಗಿದೆ. ಅಲ್ಲದೆ ಈ ಕುಟುಂಬಕ್ಕೆ ಅಗತ್ಯ ಪರಿಹಾರ ದೊರಕಿಸುವ ಭರವಸೆ ನೀಡಿದ್ದ ಜಿಲ್ಲಾಧಿಕಾರಿ ಹಾಗೂ ತಹಸಿಲ್ದಾರರಿಂದ ಇದುವರೆಗೆ ಸತ್ತಿರುವ ರಾಸುಗಳಿಗೆ ಸರ್ಕಾರದಿಂದ ಒಂದೂ ರೂಪಾಯಿ ಕೂಡ ಪರಿಹಾರ ಬಂದಿಲ್ಲ ಎಂಬುದು ವ್ಯವಸ್ಥೆಯ ಅಣಕ!!
ಪಶು ಇಲಾಖೆಯ ವೈದ್ಯನಾಗಿ ಇಂತಹ ಪ್ರಕರಣವನ್ನು ನನ್ನ ಸರ್ವಿಸ್‌ನಲ್ಲೇ ಕಂಡಿಲ್ಲ. ಚಿಕಿತ್ಸೆ ನೀಡಲು ಆಸ್ಪದವೇ ಇಲ್ಲದಂತೆ ಹೋಗಿ ನೋಡುವಷ್ಟರಲ್ಲಿ ಉಸಿರು ಹೋಗಿರುತ್ತದೆ. ಒಮ್ಮೆ ಹತ್ತಿರ ಹೋಗಿ ನೋಡುವಷ್ಟರಲ್ಲಿ ಹಸು ವೈಬ್ರೇಟ್ ಆಗುತ್ತಿತ್ತು. ಚಿಕಿತ್ಸೆಗೆ ಮುಂದಾಗುವಷ್ಟರಲ್ಲಿ ಕೇವಲ ಹತ್ತೇ ನಿಮಿಷದಲ್ಲಿ ತೀರಿಕೊಂಡಿತು ಎಂದು ಪಶು ವೈದ್ಯಾಧಿಕಾರಿ ರಮೇಶ್ ಬಾಬು ಹೇಳುತ್ತಾರೆ.
ನಾನು ಸಾಕಷ್ಟು ಬಾರಿ ಈ ಸಂದರ್ಭಕ್ಕೆ ಸಾಕ್ಷಿಯಾಗಿದ್ದೇನೆ. ಹಾಗೆ ನಾನೂ ಕೂಡ ಹೋಗಿ ನೋಡಿದಾಗ ಹಸು ಭಯಾನಕ ದೃಶ್ಯ ಕಂಡಂತೆ ಮುಖಭಾವ, ತರತರ ನಡುಗುತ್ತದೆ. ಅಷ್ಟೇ, ಅದಾದ ನಾಲ್ಕೈದು ನಿಮಿಷದಲ್ಲೇ ಮರಣ ಹೊಂದುತ್ತದೆ. ಇದುವರೆಗೆ ನಾನು ಕಂಡ ದೃಶ್ಯ ಇದು. ಈ ಪ್ರಕರಣ ನನಗೆ ಭಯ ಉಂಟು ಮಾಡಿದೆ ಎಂದು ಗ್ರಾಮಸ್ಥ ಕೆ.ಎಸ್.ಮಹೇಂದ್ರಗೌಡರು ಹೇಳಿದರು. ಈಗ ನೋಡಿಹೋದ, ಆರೋಗ್ಯವಾಗಿದ್ದ ರಾಸುಗಳು ಸಂಜೆಯೊಳಗೇ ಸಾವನ್ನಪ್ಪುತ್ತಿದ್ದ ದೃಶ್ಯಗಳು ನನಗೀಗಲೂ ಕಳವಳ ಮೂಡಿಸುತ್ತದೆ. ಬಹುತೇಕ ಘಟನೆಗಳು ಮಧ್ಯಾಹ್ನ 2 ಗಂಟೆಯ ನಂತರವೇ ಸಂಭವಿಸಿರುವುದು ನನ್ನ ಗಮನಕ್ಕೆ ಬಂದಿದೆ. ವೈದ್ಯಕೀಯ ವಿಜ್ಞಾನಿಗಳು, ಜಿಕೆವಿಕೆಯ ವೈದ್ಯರೆಲ್ಲ ಬಂದು ಕಂಡು ಕೇಳಿ ಮಾಹಿತಿ ಪಡೆದು ಹೋಗಿದ್ದರೂ ಇಂದಿನ ಆಧುನಿಕ ವೈಜ್ಞಾನಿಕ ಯುಗದಲ್ಲೂ ಸಾವಿಗೆ ಕಾರಣ ಪತ್ತೆಯಾಗದಿರುವುದು ಆಶ್ಚರ್ಯ ಎಂದು ಗ್ರಾಮಸ್ಥರಾದ ನಂದೀಶ್ ತಿಳಿಸಿದರು.