ವಿಶ್ವದಾದ್ಯಂತ ಕೋವಿಡ್ – 19 ತನ್ನ ಪರಾಕ್ರಮ ಮೆರೆಯುತ್ತಿದೆ. ಮಂಡ್ಯದಲ್ಲೂ ಶನಿವಾರದ ವೇಳೆ 16 ಮಂದಿಯಲ್ಲಿ ಪಾಸಿಟಿವ್ ರಿಪೋರ್ಟ್ ಬಂದಿರುವುದು ಜನರು ಕಂಗಾಲಾಗುವಂತೆ ಮಾಡಿದೆ. ರಾಜ್ಯಾದ್ಯಂತ ಕರೋನಾ ರಣಕೇಕೆ ಹಾಕುತ್ತಿರುವ ಕಾರಣ ಪತ್ರಕರ್ತರಿಗೂ ಕರೋನಾ ತಪಾಸಣೆ ಅತ್ಯವಶ್ಯಕವಾಗಿ ಮಾಡಬೇಕಾಗಿದೆ ಎಂದು ಸರ್ಕಾರ ನಿರ್ಧಾರ ಮಾಡಿತ್ತು. ಅದರಂತೆ ಬೆಂಗಳೂರಿನಲ್ಲಿ ತಪಾಸಣೆ ನಡೆಸಿದ್ದರಿಂದ ದೃಶ್ಯ ಮಾಧ್ಯಮದ ಓರ್ವ ಕ್ಯಾಮರಾಮನ್ನಲ್ಲಿ ಸೋಂಕು ಇರುವುದು ಪತ್ತೆಯಾಗಿದೆ. ಆತನ ಜೊತೆಗೆ ನೇರ ಸಂಪರ್ಕ ಹೊಂದಿದ್ದ ಸುಮಾರು 30 ಜನರನ್ನು ಕ್ವಾರಂಟೈನ್ ಮಾಡಲಾಗಿದೆ.
ಈ ನಡುವೆ ಜಿಲ್ಲಾ ಕೇಂದ್ರಗಳಲ್ಲೂ ಕರೋನಾ ಸೋಂಕು ತಪಾಸಣೆಗೆ ಜಿಲ್ಲಾಧಿಕಾರಿಗಳು ಸೂಚಿಸಿದ್ದರು. ಅದರಂತೆ ಮಂಡ್ಯದಲ್ಲಿ ಇಂದು ತಪಾಸಣೆ ನಡೆಸಲಾಗ್ತಿತ್ತು. ಇದರಿಂದ ಕುಪಿತಗೊಂಡ ಜೆಡಿಎಸ್ ಪಕ್ಷದ ವಿಧಾನಪರಿಷತ್ ಸದಸ್ಯ ಕೆ ಟಿ ಶ್ರೀಕಂಠೇಗೌಡ ಗೂಂಡಾಗಿರಿ ನಡೆಸಿದ್ದಾರೆ. ಮಗನ ಜೊತೆಗೆ ಸೇರಿಕೊಂಡು ಪತ್ರಕರ್ತರ ಮೇಲೆ ಹಲ್ಲೆ ನಡೆಸಿ ಬಂಧನಕ್ಕೆ ಒಳಗಾಗಿದ್ದಾರೆ.
ಅಷ್ಟಕ್ಕೂ ಹಲ್ಲೆಯ ಅಸಲಿಯತ್ತೇನು?
ಮಂಡ್ಯದ ಅಂಬೇಡ್ಕರ್ ಭವನದಲ್ಲಿ ಕೋವಿಡ್ – 19 ಟೆಸ್ಟ್ ನಡೆಸುತ್ತಿದ್ದಾರೆ. ಅಲ್ಲಿಗೆ ಆಗಮಿಸಿದ ಜೆಡಿಎಸ್ ಶಾಸಕ ಕೆ.ಟಿ ಶ್ರೀಕಂಠೇಗೌಡ, ತನ್ನ ಮನೆ ಬಳಿ ಅಂಬೇಡ್ಕರ್ ಭವನ ಇದೆ ಎನ್ನುವ ಏಕೈಕ ಕಾಣಕ್ಕೆ ತಪಾಸಣೆಗೆ ಅಡ್ಡಿ ಮಾಡಲು ಮುಂದಾದರು. ಆರೋಗ್ಯ ಸಿಬ್ಬಂದಿ ಹಾಗೂ ಪತ್ರಕರ್ತರ ವಿರುದ್ಧ ಸ್ಥಳೀಯ ಜನರನ್ನು ಎತ್ತಿಕಟ್ಟಲು ಮುಂದಾದರು, ಕೂಡಲೇ ಟೆಸ್ಟ್ ನಿಲ್ಲಿಸುವಂತೆ ಆಗ್ರಹ ಮಾಡಿದರು. ಪತ್ರಕರ್ತರ ಜೊತೆ ಜೆಡಿಎಸ್ ಎಂಎಲ್ಸಿ ಗಲಾಟೆಯಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಇದನ್ನು ಅರಿತ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಕೆ.ಟಿ. ಶ್ರೀಕಂಠೇಗೌಡರ ಬೆಂಬಲಿಗರನ್ನು ಚದುರಿಸುವ ಕೆಲಸ ಮಾಡಿದರು. ಸ್ಥಳಕ್ಕೆ ಮಂಡ್ಯ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಭೇಟಿ ನೀಡಿ, ಪರಿಸ್ಥಿತಿ ಅವಲೋಕನ ನಡೆಸಿದರು. ಆ ಬಳಿಕ ಪತ್ರಕರ್ತರು ಹಲ್ಲೆ ನಡೆಸಿದ ವಿಧಾನ ಪರಿಷತ್ ಜೆಡಿಎಸ್ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಹಾಗೂ ಅವರ ಪುತ್ರ ಕೃಷಿಕ್ ಗೌಡನ ವಿರುದ್ಧ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ರು.
ಪತ್ರಕರ್ತರು ಸಲ್ಲಿಸಿದ ದೂರಿನ ಅನ್ವಯ JDS MLC ಶ್ರೀಕಂಠೇಗೌಡ A1, ಪುತ್ರ ಕೃಷಿಕ್ ಗೌಡ A2, ಚಂದ್ರಕಲಾ A3, ಜಗದೀಶ್ A4, ರಾಜು A5 ಮೇಲೆ ದೂರು ದಾಖಲಾಗಿದೆ. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪಾಕೃತಿಕ ವಿಕೋಪ ಪರಿಹಾರ ಕಾಯ್ದೆ ಅಡ್ಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಎಲ್ಲಾ ಆರೋಪಿಗಳನ್ನು ಬಂಧಿಸಿದ್ದಾರೆ. ಆ ಬಳಿಕ ಸ್ಟೇಷನ್ ಬೇಲ್ ನಿರಾಕರಣೆ ಮಾಡಿದ್ರು. MLC ಶ್ರೀಕಂಠೇಗೌಡ ಹಾಗೂ ಆತನ ಪುತ್ರ ಕೃಷಿಕ್ ಗೌಡ ಸೇರಿ ಐವರು ಆರೋಪಿಗಳ ನ್ಯಾಯಾಲಯಕ್ಕೆ ಹಾಜರು ಮಾಡುವ ಠಾಣೆಯಲ್ಲಿ 1 ತಾಸು ವಿಚಾರಣೆ ನಡೆಸಲಾಯ್ತು. ನಂತರ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಆರೋಗ್ಯ ತಪಾಸಣೆ ನಡೆಸಿದ ಬಳಿಕ ನ್ಯಾಯಾಧೀಶರ ಎದುರು ಹಾಜರು ಮಾಡಲಾಯ್ತು.

ಪತ್ರಕರ್ತರ ಮೇಲೆ ಪರಿಷತ್ ಸದಸ್ಯ ಹಾಗೂ ಪುತ್ರನಿಂದ ಹಲ್ಲೆ ಪ್ರಕರಣವನ್ನು ಸಂಸದೆ ಸುಮಲತಾ ಖಂಡಿಸಿದ್ದಾರೆ. ಪತ್ರಕರ್ತರನ್ನು ಕರೋನಾ ವಾರಿಯರ್ಸ್ ಎಂದು ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಕರೋನಾ ವಿರುದ್ದ ಹೋರಾಟದಲ್ಲಿ ಪತ್ರಕರ್ತರೂ ಕೆಲಸ ಮಾಡ್ತಿದ್ದಾರೆ. ಹೀಗಾಗಿ ಅವರಿಗೂ ಪ್ರಧಾನ ಮಂತ್ರಿಯವರೇ ಕೋವಿಡ್ – 19 ತಪಾಸಣೆಗೆ ಸೂಚಿಸಿದ್ದಾರೆ. ಸರ್ಕಾರದ ನಿರ್ದೇಶನದಂತೆ ಜಿಲ್ಲಾಡಳಿತ ತಪಾಸಣೆ ಮುಂದಾಗಿದೆ. ಇಂತಹ ಸಂದರ್ಭದಲ್ಲಿ ಅಡ್ಡಿಪಡಿಸಿದ್ದು ಖಂಡನೀಯ ಎಂದಿದ್ದಾರೆ. ಚಾಮರಾಜನಗರದಲ್ಲಿ ಸಚಿವ ಸುರೇಶ್ ಕುಮಾರ್ ಮಾತನಾಡಿ ಕೋವಿಡ್ – 19 ತಪಾಸಣೆ ಮಾಡುವ ವೇಳೆ ಅಡ್ಡ ಹಾಕೋದು ಸರಿಯಲ್ಲ. ಸಾರ್ವಜನಿಕ ಬದುಕಲ್ಲಿರೋರು ಈ ರೀತಿ ನಡೆದುಕೊಳ್ಳಬಾರದು ಎಂದು ಛಾಟಿ ಬೀಸಿದ್ದಾರೆ.
ಪತ್ರಕರ್ತರ ಮೇಲೆ MLC ಹಾಗೂ ಆತನ ಪುತ್ರ ದಾಳಿ ನಡೆಸಿದವರ ವಿರುದ್ದ ವಿಪತ್ತು ನಿರ್ವಹಣಾ ಸುಗ್ರಿವಾಜ್ಞೆ 2020 ಅಡಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಸುಧಾಕರ ಹೊಸಳ್ಳಿ ಮಂಡ್ಯ ಡಿಸಿಗೆ ಪತ್ರ ಬರೆದಿದ್ದಾರೆ. ರಾಜ್ಯ ಶೈಕ್ಷಣಿಕ ದಿಕ್ಸೂಚಿ ಮತ್ತು ಸಂವಿಧಾನ ಸುಧಾರಣಾ ಸಮಿತಿ ರಾಜ್ಯಾಧ್ಯಕ್ಷ ಆಗಿರುವ ಸುಧಾಕರ ಹೊಸಳ್ಳಿ ಒತ್ತಾಯ ಮಾಡಿದ್ದಾರೆ. ಒಟ್ಟಾರೆ ಹಲ್ಲೆ ಮಾಡಿದ ಆರೋಪಕ್ಕೆ ಸಿಲುಕಿರುವ ಎಂಎಲ್ಸಿ ಕೆ ಟಿ ಶ್ರೀಕಂಠೇಗೌಡ ಸಂಕಷ್ಟದ ಸುಳಿಯಲ್ಲಿ ಸಿಲುಕಿದ್ದಾರೆ.