ಪುಟ್ಟ ಜಿಲ್ಲೆ ಕೊಡಗು ವೀರರ ಶೂರರ ಮತ್ತು ಸಾಹಸಿಗಳ ನಾಡು. ಜಿಲ್ಲೆ ಪುಟ್ಟದಾಗಿದ್ದರೂ ಶೌರ್ಯ ಸಾಹಸಗಳಿಗೆ ದೇಶದಲ್ಲೇ ಹೆಸರುವಾಸಿ ಆಗಿದೆ. ಕೊಡಗಿನ ಯಾವುದೇ ಹಳ್ಳಿಗೆ ಹೋದರೂ ನೀವು ಓರ್ವ ಯೋಧ ಇಲ್ಲವೇ ಆತನ ಕುಟುಂಬವನ್ನು ನೋಡಬಹುದು. ಕೊಡಗಿನಲ್ಲಿ ಈಗ ಅಂದಾಜು 10 ಸಾವಿರ ನಿವೃತ್ತ ಯೋಧರ ಕುಟುಂಬಗಳಿವೆ ಎಂದು ಅಂದಾಜಿಸಲಾಗಿದೆ. ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಯೋಧರ ಪ್ರತಿಮೆಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಟಾಪನೆ ಮಾಡುವುದು ಜಿಲ್ಲೆಯ ಹಿರಿಮೆಗೆ ಒಂದು ಗರಿ. ಪ್ರವಾಸೀ ಜಿಲ್ಲೆ ಕೊಡಗಿಗೆ ನಿತ್ಯ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯೇ 5 ರಿಂದ 8 ಸಾವಿರದಷ್ಟಿದೆ. ಇಷ್ಟೂ ಜನ ಪ್ರವಾಸಿಗರಿಗೆ ಕೊಡಗಿನ ಯೋಧರ ಪರಿಚಯ ಅಗುವುದು ನಿಜಕ್ಕೂ ಹೆಮ್ಮೆ. ಕೊಡಗಿನ ಹೆಮ್ಮೆಯ ಪುತ್ರರಾದ ಫೀಲ್ಡ್ ಮಾರ್ಷಲ್ ಕೆ ಎಂ ಕಾರಿಯಪ್ಪ ಮತ್ತು ಜನರಲ್ ಕೆ ಎಸ್ ತಿಮ್ಮಯ್ಯ ಇಬ್ಬರೂ ಕೊಡಗಿನ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಏರಿಸಿದ್ದಾರೆ. ಆದರೆ ಅಸಂಖ್ಯ ವೀರ ಯೋಧರು ಇನ್ನೂ ಸೇನಾ ಪಡೆಗಳಲ್ಲಿ ಸೇವೆ ಮಾಡುತ್ತಾ ಯುವ ಜನಾಂಗಕ್ಕೆ ಸ್ಪೂರ್ತಿ ಆಗಿದ್ದಾರೆ. ನಮ್ಮನ್ನು ಅಗಲಿದ ಯೋಧರ ಸ್ಮರಣೆ ಯುವ ಜನಾಂಗಕ್ಕೂ ಪ್ರೇರಕ ಶಕ್ತಿ ಆಗುತ್ತಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಐದುವರೆ ದಶಕದ ಹಿಂದೆ(1965) ಭಾರತ-ಪಾಕ್ ನಡುವೆ ನಡೆದ ಯುದ್ಧದಲ್ಲಿ ಶತ್ರು ವಿಮಾನವನ್ನು ಹೊಡೆದರುಳಿಸಿ ಬಲಿದಾನಗೈದ ಕೊಡಗಿನ ವೀರಯೋಧ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಪ್ರತಿಮೆಯನ್ನು ಮಂಜಿನನಗರಿ ಮಡಿಕೇರಿಯ ಸ್ಕ್ವಾ.ಲೀ.ಅಜ್ಜಮಾಡ ದೇವಯ್ಯ ವ್ರತ್ತದಲ್ಲಿ ಪ್ರತಿಷ್ಠಾಪಿಸುವುದರ ಮೂಲಕ ವೀರಯೋಧನ ಕೀರ್ತಿ ಮುಂದಿನ ಜನಾಂಗವೂ ಸ್ಮರಿಸಿಕೊಳ್ಳುವಂತಿದೆ. ಈ ಮೂರ್ತಿ ಪ್ರತಿಷ್ಠಾಪನೆಯು ಕೊಡವ ಮಕ್ಕಡಕೂಟದ ಸಂಸ್ಥಾಪಕ ಬೊಳ್ಳಜಿರಬಿ.ಅಯ್ಯಪ್ಪನವರ ಎಂಟುವರ್ಷಗಳ ಪರಿಶ್ರಮದ ಫಲವಾಗಿದೆ. ಕೊಡಗಿನ ವೀರಸೇನಾ ಪರಂಪರೆಯ ಇತಿಹಾಸದಲ್ಲಿ ದೇಶದ ಎರಡನೆಯ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ಮಹಾವೀರಚಕ್ರ ಪ್ರಶಸ್ತಿಯು ಮರಣ್ಣೋತ್ತರವಾಗಿ ಸ್ಕ್ವಾ.ಲೀ. ಅಜ್ಜಮಾಡ ದೇವಯ್ಯನವರಿಗೆ ಹಾಗು ಪ್ರಸ್ತುತ ಬೆಂಗಳೂರಿನಲ್ಲಿ ತಮ್ಮ ನಿವೃತ್ತ ಜೀವನ ನಡೆಸುತಿರುವ ಲೆಫ್ಟಿನೆಂಟ್ ಕರ್ನಲ್ ಪುಟ್ಟಿಚಂಡ ಎಸ್.ಗಣಪತಿರವರಿಗೆ ಸಿಕ್ಕಿದೆ. ಕೊಡಗಿನ ಕೇಂದ್ರಸ್ಥಾನ ಮಡಿಕೇರಿಗೆ ಮೈಸೂರಿನಿಂದ ಬರುವಾಗ ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪನವರ ಪ್ರತಿಮೆ, ಸ್ವಾತಂತ್ರ ಹೋರಾಟಗಾರ ಗುಡ್ಡೆಮನೆ ಅಪ್ಪಯ್ಯ ಗೌಡರ ಪ್ರತಿಮೆ, ವೀರಸೇನಾನಿ ಜನರಲ್ ತಿಮ್ಮಯ್ಯನವರ ಪ್ರತಿಮೆ, ಹುತಾತ್ಮ ಯೋಧ ಮಂಗೇರಿರನ ಮುತ್ತಣ್ಣ ಪ್ರತಿಮೆಯ ಜೊತೆಗೆ ಮಹಾ ವೀರಚಕ್ರ ಸೇನಾ ಬಿರುದು ಪಡೆದ ಸ್ಕ್ವಾಡ್ರ ನ್ ಲೀಡರ್ ಅಜ್ಜಮಾಡ ದೇವಯ್ಯನವರ ಕಂಚಿನ ಪ್ರತಿಮೆ ಮಡಿಕೇರಿಯ ಹೃದಯ ಭಾಗದಲ್ಲಿ ಅಜರಾಮರಗೊಳ್ಳಲಿದೆ.
ಇದೇ ಸೆಪ್ಟಂಬರ್ 7ರ ಸೋಮವಾರದಂದು ಸ್ಕ್ವಾ.ಲೀ.ಅಜ್ಜಮಾಡ ದೇವಯ್ಯನವರ 55ನೇ ಹುತ್ತಾತ್ಮ ದಿನ. ಸುಮಾರು 15 ರಿಂದ 20 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣವಾದ ಆರು ಮುಕ್ಕಾಲು ಅಡಿಎತ್ತರದ ಕಂಚಿನ ಪ್ರತಿಮೆ ಅನಾವರಣಗೊಳ್ಳಲಿದೆ. ಪೂರ್ವಾಹ್ನ 11 ಗಂಟೆಗೆ ನಿವ್ರತ್ತ ಏರ್ ಮಾರ್ಷಲ್ ಕೆ. ಸಿ. ಕಾರ್ಯಪ್ಪ, ದೇವಯ್ಯನವರು ಪುತ್ತಳಿಯನ್ನು ಉದ್ಗಾಟಿಸಲಿದ್ದು ಸ್ಕ್ವಾ.ಲೀ. ಅಜ್ಜಮಾಡ ದೇವಯ್ಯನವರ ಪತ್ನಿ ಸುಂದರಿ ದೇವಯ್ಯ, ಪುತ್ರಿಯರಾದ ಸ್ಮಿತಾ ಹಾಗು ಪ್ರೀತಾ, ಜಿಲ್ಲೆ ಶಾಸಕರುಗಳಾದ ಕೆ.ಜಿ ಬೋಪಯ್ಯ, ಎಂ.ಪಿ.ಅಪ್ಪಚ್ಚು ರಂಜನ್ , ವಿಧಾನಪರಿಷತ್ ಸದಸ್ಯರಾದ ಶಾಂತೆಯಂಡ ವೀಣಾ ಅಚ್ಚಯ್ಯ, ಎಂ.ಪಿ ಸುನಿಲ್ ಸುಬ್ರಮಣಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಬಿ.ಎ.ಹರೀಶ್, ಅಜ್ಜಮಾಡ ಕುಟುಂಬ ಸಮಿತಿಯ ಅಧ್ಯಕ್ಷ ಅಜ್ಜಮಾಡ ಲವ ಕುಶಾಲಪ್ಪ, ಪ್ರತಿಮೆ ನಿರ್ಮಾಣ ಸಮಿತಿಯ ಅಧ್ಯಕ್ಷ ಅಜ್ಜಮಾಡ ಕಟ್ಟಿಮಂದಯ್ಯ, ಅಜ್ಜಮಾಡ ಚಂಗಪ್ಪ, ಜನರಲ್ ತಿಮ್ಮಯ್ಯ ಫೋರಂನ ಅಧ್ಯಕ್ಷರಾದ ಕರ್ನಲ್ ಕಂಡ್ರತಂಡ ಸುಬ್ಬಯ್ಯ, ಕೊಡಗು ಪ್ರೆಸ್ ಕ್ಲಬ್ಬಿನ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಕೊಡವ ಮಕ್ಕಡ ಕೂಟದ ಸಂಸ್ಥಾಪಕ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ,ಜಿಲ್ಲಾಧಿಕಾರಿಗಳು,ಕೊಡಗು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು, ಅಜ್ಜಮಾಡ ಕುಟುಂಬಸ್ಥರು, ನಿವ್ರತ್ತ ಸೇನಾನಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಕ್ಷಾತ್ರ ಪರಂಪರೆಯ ಇತಿಹಾಸ ಹೊಂದಿರುವ ಕೊಡಗಿನ ಮಣ್ಣಿನಲ್ಲಿ ಭಾರತೀಯ ವಾಯುಸೇನಾ ಪಡೆಯ ಸ್ಕ್ವಾಡ್ರನ್ ಲೀಡರ್ ಹುದ್ದೆಯನ್ನೇರಿ ತನ್ನ ಜೀವದ ಹಂಗನ್ನೂ ತೊರೆದು ಶತ್ರುಗಳೊಂದಿಗೆ ಹೋರಾಡಿ ಕೀರ್ತಿ ಮೆರೆಯುತ್ತಲೇ ವೀರ ಮರಣವನಪ್ಪಿ ಇಂದಿಗೆ 55 ವರ್ಷಗಳೇ ಕಳೆದು ಹೋಗಿವೆ. ಈ ವೀರಸೇನಾನಿಯ ಜೀವನ ಕಥನ ರೋಚಕವಾಗಿದೆ. ಅಂದು 1965 ನೇ ಇಸವಿ ಭಾರತ- ಪಾಕ್ ಯುದ್ಧದ ಸಂದರ್ಭ ವಿಂಗ್ ಕಮಾಂಡರ್ ಆಗಿದ್ದ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ಬಿ. ದೇವಯ್ಯ ರವರಿಗೆ ಪಾಕ್ ಭದ್ರ ಕೋಟೆಯಾಗಿದ್ದ ಸರಗೋಡ ವಾಯುನೆಲೆಯ ಮೇಲೆ ದಾಳಿ ನಡೆಸುವ ಜವಾಬ್ದಾರಿ ವಹಿಸಲಾಗಿತು. ತಮ್ಮ ಪಾಲಿನ ಹೊಣೆಗಾರಿಕೆಯನ್ನು ನಿಭಾಯಿಸುವ ಸಲುವಾಗಿ ಹೊರಟ ದೇವಯ್ಯನವರ ತಂಡಕ್ಕೆ ಶತ್ರುಗಳ ವಾಯುನೆಲೆಯನ್ನು ಧ್ವಂಸಗೊಳಿಸುವ ಮೂಲಕ ಗುರಿಸಾಧಿಸಿ ಹಿಂತಿರುಗಿ ಬರುವ ಎಲ್ಲ ಅವಕಾಶಗಳಿದ್ದರೂ ತಮ್ಮ ತಂಡದ ಇತರೆ ಯುದ್ಧ ವಿಮಾನಗಳ ಮೇಲೆ ದಾಳಿಯಾಗದಿರಲಿ ಎಂದು ಬೆಂಗಾವಲಾಗಿ ಸುರಕ್ಷಿತ ವಾಗಿ ಹಿಂತಿರುಗಲು ಪ್ರಯತ್ನಿಸುವಾಗಲೇ ಧಿಡೀರನೆ ಹಿಂಬಾಲಿಸಿದ ಶತ್ರುವಿಮಾನದೊಂದಿಗೆ ಮತ್ತೆ ಹೋರಾಟ ನಡೆಸಬೇಕಾದ ಪರಿಸ್ಥಿತಿ ಎದುರಾಯಿತು.
ಎದೆಗುಂದದ ದೇವಯ್ಯ ಪ್ರಾಣದ ಹಂಗು ತೊರೆದು ತನ್ನದೇ ವಿಮಾನದ ಹೋರಾಟದಲ್ಲಿ ರಣರಂಗದಲ್ಲಿ ಭೂ ಸೇನಾ ಸೈನಿಕರು ಮುಖಾಮುಖಿ ಹೇಗೆ ಹೋರಾಡುತಾರೋ ಅದೇ ರೀತಿ ವಾಯೂಸೇನೆಯಲ್ಲೂ ಮುಖಾಮುಖಿ ಹೋರಾಡುವ ಅಪಾಯಕಾರಿ ಯುದ್ಧವಾದ ಡಾಗ್ ಫೈಟನ್ನು ಕೆಚ್ಚೆದೆಯಿಂದ ಎದುರಿಸಬೇಕಿತ್ತು. ಯುದ್ಧ ವಿಮಾನಗಳು ಪರಸ್ಪರ ಡೈ ಹೊಡೆಯುತ್ತಾ ಬಹು ಹೊತ್ತಿನವರೆಗೆ ದಾಳಿ ಮುಂದುವರಿಯಿತು. ದೇವಯ್ಯ ತನ್ನ ವಿಮಾನದಿಂದ ಶತ್ರು ವಿಮಾನಕ್ಕೆ ತೀವ್ರ ಹಾನಿಮಾಡಿದರು. ಶತ್ರುಗಳ ಬಲಿಷ್ಠವಾದ ಸೂಪರ್‍ಸಾನಿಕ್ ವಿಮಾನವನ್ನು ಹೊಡೆದು ಉರುಳಿಸುವ ಮೂಲಕ ಭಾರತೀಯ ವಾಯುಪಡೆಯಲ್ಲಿ ಸಾಹಸದ ಒಂದು ದಾಖಲೆ ನಿರ್ಮಿಸಿದರು. ಕಾಳಗದ ಕೊನೆಯಲ್ಲಿ ತನ್ನ ದೇವಯ್ಯನವರ ವಿಮಾನಕ್ಕೂ ದಕ್ಕೆಯಾಯಿತು. ಆ ಸಂದರ್ಭ ತಾನೂ ಕೂಡ ಪ್ಯಾರಚೂಟಿನಲ್ಲಿ ಹಾರುವ ಅವಕಾಶವಿತ್ತು. ಆದರೆ ತಾನಿರುವ ಶತ್ರುವಿನ ನೆಲದಲ್ಲಿ ಇಳಿದರೆ ಸೆರೆಯಾಗಬೇಕಾಗುತ್ತದೆ ಎಂದೋ ಅಥವಾ ಹೊತ್ತಿ ಉರಿಯುತಿದ್ದ ವಿಮಾನದಿಂದ ಹೊರಜಿಗಿಯಲು ಸಾಧ್ಯವಾಗಿಲ್ಲವೋ ತಮ್ಮ ಯುದ್ಧ ವಿಮಾನ ಪತನಗೊಂಡು ಸುಟ್ಟು ಕರಕಲಾದ ಪರಿಣಾಮ ದೇವಯ್ಯ ತಮ್ಮ ದೇಶಕಾಗಿ ಪ್ರಾಣತ್ಯಾಗ ಮಾಡಿ ಅಮರರಾದರು.
1965ರ ಸೆಪ್ಟಂಬರ್ 7 ರಂದು ನಡೆದ ಈ ಘಟನೆಯಲ್ಲಿ ದೇವಯ್ಯ ತನ್ನ ಸೇನಾ ಜೀವನದಲ್ಲಿ ಸಾಹಸ ಮೆರೆದು ತನ್ನ ಪ್ರಾಣವನ್ನು ದೇಶಕ್ಕಾಗಿ ಅರ್ಪಿಸಿದರೂ ಇವರ ಸಾಹಸಗಾಥೆ ಜಗತ್ತಿಗೆ ತಿಳಿಯಲು ಸಾಕಷ್ಟು ವರ್ಷಗಳೇ ಕಳೆದುಹೋಯಿತು. 23 ವರ್ಷಗಳ ನಂತರ ಅವರ ಹೋರಾಟದ ಪರಿಯನ್ನು ಶತ್ರು ದೇಶದ ಪೈಲಟ್ ಒಬ್ಬ ವಿವರಿಸಿದ್ದು, ಬ್ರಿಟೀಷ್ ಪತ್ರಕರ್ತನೊಬ್ಬ ಭಾರತ-ಪಾಕಿಸ್ತಾನ ಯುದ್ಧದ ಕುರಿತು ರಚಿಸಿದ ಕ್ರತಿಯಲ್ಲಿ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯನವರ ಸಾಧನೆ ಹಾಗು ಹೋರಾಟ ಅಪ್ರತಿಮವಾದದೆಂದು ದಾಖಲಾದ ಫಲವೇ ಇಡೀ ಜಗತ್ತಿಗೆ ತಿಳಿಯಿತು.
ಶ್ರೀಮಂಗಲದ ಕುರ್ಚಿ ಗ್ರಾಮದ ಅಜ್ಜಮಾಡ ಬೋಪಯ್ಯ ನೀಲಮ್ಮ ದಂಪತಿಗಳ ಪುತ್ರ ದೇವಯ್ಯ 1954ರ ತನ್ನ 22ರ ಹರೆಯದಲ್ಲಿ ಸೇನೆಗೆ ಸೇರಿ ತಮ್ಮ 11 ವರ್ಷದ ಸೇನಾ ಜೀವನದಲ್ಲಿ ದೇಶ ಸೇವೆಯಲ್ಲಿ ಅಸಾಮಾನ್ಯ ಸಾಹಸ, ಎದೆಗಾರಿಕೆ ತ್ಯಾಗ ಬಲಿದಾನಗಳನ್ನು ಪರಿಗಣಿಸಿ ಭಾರತ ಸರ್ಕಾರ ಮರಣೋತ್ತರವಾಗಿ ದೇವಯ್ಯರವರಿಗೆ 1988ರಲ್ಲಿ ಮಹಾವೀರಚಕ್ರ ಪ್ರಶಸ್ತಿಯನ್ನು ಅಂದಿನ ರಾಷ್ಟ್ರಪತಿ ಆರ್ ವೆಂಕಟರಾಮನ್‍ರವರು ದಿ. ದೇವಯ್ಯರವರ ಪತ್ನಿ ಸುಂದರಿ ದೇವಯ್ಯರವರಿಗೆ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿತು. ಈ ವೀರ ಯೋಧನನ್ನು ಅವರ ಪತ್ನಿ ನೆನೆಸಿಕೊಳ್ಳುವುದು ಹೀಗೆ.
ಅಂದೊಂದು ದಿನ ಪತ್ನಿ ಮಕ್ಕಳೊಂದಿಗೆ ಇದ್ದ ಸಮಯ ವಾಯುಪಡೆಯ ಸಂದೇಶ ರವಾನಿಸುವ ಯೋಧನೊಬ್ಬ ಬಂದು ನೀಡಿದ ಟೆಲಿಗ್ರಾಂನಲ್ಲಿ ಗಡಿಯಲ್ಲಿ ಪಾಕಿಸ್ತಾನ ಸೈನ್ಯವು ಅಟ್ಟಹಾಸ ಮೆರೆಯುತಿದ್ದು ಯುದ್ಧ ಘೋಷಣೆಗೆ ಸಿದ್ಧರಾಗುವ ಬಗ್ಗೆ ತಿಳಿದು ಪತ್ನಿ ಹಾಗು ಪುಟ್ಟ ಕಂದಮ್ಮನಿಗೆ ಧೈರ್ಯತುಂಬಿ ಯುದ್ಧಕ್ಕೆ ಹೊರಟರು. ಪ್ರತಿಯೊಬ್ಬ ಯೋಧನ ಪತ್ನಿಗೂ ಗೊತ್ತು ರಣರಂಗದಿಂದ ಹಿಂದಿರುಗಿದರೆ ವೀರ ಬಂದ ಹೆಮ್ಮೆ. ಇಲ್ಲದಿದ್ದರೆ ಹುತಾತ್ಮ ಪತಿ ಎಂಬ ಪಟ್ಟ. ಅದೇ ರೀತಿ ಕೊಡವರಿಗೆ ಯುದ್ಧ ಎನ್ನುವುದು ಸಾಮಾನ್ಯ. ಗಂಡು ಯುದ್ಧಭೂಮಿಯಲ್ಲಿ ಹೋರಾಡಿ ಸಾಯಬೇಕು ಹೆಣ್ಣು ಮಕ್ಕಳನ್ನು ಹೆತ್ತು ಸಾಯಬೇಕೆನ್ನುವುದು ಕೊಡವರ ರಕ್ತಗತವಾಗಿ ಬಂದ ಗಾದೆಮಾತಿದೆ. ಅನಾಧಿ ಕಾಲದಿಂದಲೂ ಸೈನ್ಯದಲ್ಲಿ ಹೋರಾಡಿದವರಿದ್ದಾರೆ. ವಿವಾಹದ ದಿನದಂದೇ ಯುದ್ಧಕ್ಕೆ ತೆರಳಿ ವೀರಮರಣ ವನ್ನಪ್ಪಿದವರಿದ್ದಾರೆ. ಕೈಕಾಲು ಕಳಕೊಂಡವರು, ಕಣ್ಮರೆಯಾದವರಿದ್ದಾರೆ ಅದರಂತೆ ತಂದೆ, ಸಹೋದರ, ಪತಿ ಮಗನ್ನು ಕಳಕೊಂಡು ಇಡೀ ಬಾಳನ್ನು ದೇಶ ರಕ್ಷಣೆಗಾಗಿ ಮಡುಪಿಟ್ಟವರರಲ್ಲಿ ವೀರಮರಣವನಪ್ಪಿದ ಹತಾತ್ಮಯೋಧನ ಪತ್ನಿ ಎಂಬ ಪಟ್ಟದೊಂದಿಗೆ ಸ್ಕ್ವಾಡ್ರನ್ ಲೀಡರ್. ದಿ. ಅಜ್ಜಮಾಡದೇವಯ್ಯ ಧರ್ಮಪತ್ನಿ ಸುಂದರಿದೇವಯ್ಯ ತಮ್ಮಇಬ್ಬರು ಪುತ್ರಿಯರೊಂದಿಗೆ ದೇಶಕ್ಕಾಗಿ ಪ್ರಾಣತೆತ್ತ ತನ್ನ ಪತಿಯ ನೆನಪಿನೊಂದಿಗೆ ಬದುಕು ಕಳೆಯುತಿದ್ದಾರೆ.